ಆದಿ ಪರ್ವ: ಸಂಭವ ಪರ್ವ
೧೦೨
ರಾಜಪುತ್ರರ ಜನನದಿಂದ ಕುರುರಾಜ್ಯವು ಸಮೃದ್ಧಿಯ ಪಥದಲ್ಲಿ ಹೋಗುವುದು (೧-೨೨). ಪಾಂಡುವಿಗೆ ರಾಜ್ಯಪ್ರಾಪ್ತಿ (೨೩).
01102001 ವೈಶಂಪಾಯನ ಉವಾಚ|
01102001a ತೇಷು ತ್ರಿಷು ಕುಮಾರೇಷು ಜಾತೇಷು ಕುರುಜಾಂಗಲಂ|
01102001c ಕುರವೋಽಥ ಕುರುಕ್ಷೇತ್ರಂ ತ್ರಯಮೇತದವರ್ಧತ||
ವೈಶಂಪಾಯನನು ಹೇಳಿದನು: “ಆ ಮೂವರು ಕುಮಾರರ ಜನ್ಮದಿಂದ ಕುರುಜಂಗಲ, ಕುರುಕ್ಷೇತ್ರ, ಮತ್ತು ಕುರುವಂಶ ಇವು ಮೂರೂ ಅಭಿವೃದ್ಧಿ ಹೊಂದಿದವು.
01102002a ಊರ್ಧ್ವಸಸ್ಯಾಭವದ್ಭೂಮಿಃ ಸಸ್ಯಾನಿ ಫಲವಂತಿ ಚ|
01102002c ಯಥರ್ತುವರ್ಷೀ ಪರ್ಜನ್ಯೋ ಬಹುಪುಷ್ಪಫಲಾ ದ್ರುಮಾಃ||
01102003a ವಾಹನಾನಿ ಪ್ರಹೃಷ್ಟಾನಿ ಮುದಿತಾ ಮೃಗಪಕ್ಷಿಣಃ|
01102003c ಗಂಧವಂತಿ ಚ ಮಾಲ್ಯಾನಿ ರಸವಂತಿ ಫಲಾನಿ ಚ||
ಬೆಳೆಗಳು ಎತ್ತರವಾಗಿ ಬೆಳೆದವು. ಭೂಮಿಯು ಸಸ್ಯ-ಫಲಗಳಿಂದ ಭರಿತವಾಯಿತು. ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆಸುರಿಸಿದನು. ವೃಕ್ಷಗಳು ಪುಷ್ಪ-ಫಲಗಳಿಂದ ತುಂಬಿಕೊಂಡವು. ಮೃಗಪಕ್ಷಿಗಳೂ ವಾಹನಗಳೂ ಮುದಿತರಾಗಿ ಸಂತಸಗೊಂಡವು. ಮಾಲೆಗಳು ಸುಗಂಧವನ್ನು ಸೂಸುತ್ತಿದ್ದವು. ಫಲಗಳು ರಸಭರಿತವಾಗಿದ್ದವು.
01102004a ವಣಿಗ್ಭಿಶ್ಚಾವಕೀರ್ಯಂತ ನಗರಾಣ್ಯಥ ಶಿಲ್ಪಿಭಿಃ|
01102004c ಶೂರಾಶ್ಚ ಕೃತವಿದ್ಯಾಶ್ಚ ಸಂತಶ್ಚ ಸುಖಿನೋಽಭವನ್||
ನಗರಗಳು ವರ್ತಕ-ಶಿಲ್ಪಿಗಳಿಂದ ತುಂಬಿತ್ತು. ಜನರು ಶೂರರೂ, ವಿದ್ಯಾವಂತರೂ, ಸಂತರೂ ಮತ್ತು ಸುಖಿಗಳೂ ಆಗಿದ್ದರು.
01102005a ನಾಭವನ್ದಸ್ಯವಃ ಕೇ ಚಿನ್ನಾಧರ್ಮರುಚಯೋ ಜನಾಃ|
01102005c ಪ್ರದೇಶೇಷ್ವಪಿ ರಾಷ್ಟ್ರಾಣಾಂ ಕೃತಂ ಯುಗಮವರ್ತತ||
ದಸ್ಯುಗಳೇ ಇರಲಿಲ್ಲ. ಅಪರಾಧ ಅಧರ್ಮಗಳಲ್ಲಿ ಅಭಿರುಚಿಯಿದ್ದ ಜನರೇ ಇರಲಿಲ್ಲ. ರಾಷ್ಟ್ರದ ಎಲ್ಲ ಪ್ರದೇಶಗಳೂ ಕೃತಯುಗವೋ ಎಂಬಂತೆ ತೋರುತ್ತಿದ್ದವು.
01102006a ದಾನಕ್ರಿಯಾಧರ್ಮಶೀಲಾ ಯಜ್ಞವ್ರತಪರಾಯಣಾಃ|
01102006c ಅನ್ಯೋನ್ಯಪ್ರೀತಿಸಂಯುಕ್ತಾ ವ್ಯವರ್ಧಂತ ಪ್ರಜಾಸ್ತದಾ||
ದಾನಕ್ರಿಯೆ ಮತ್ತು ಧರ್ಮಶೀಲ, ಯಜ್ಞವ್ರತಪರಾಯಣ, ಅನ್ಯೋನ್ಯ ಪ್ರೀತಿಸಂಯುಕ್ತ ಪ್ರಜೆಗಳು ವೃದ್ಧಿಸಿದರು.
01102007a ಮಾನಕ್ರೋಧವಿಹೀನಾಶ್ಚ ಜನಾ ಲೋಭವಿವರ್ಜಿತಾಃ|
01102007c ಅನ್ಯೋನ್ಯಮಭ್ಯವರ್ಧಂತ ಧರ್ಮೋತ್ತರಮವರ್ತತ||
ಮಾನ-ಕ್ರೋಧ ವಿಹೀನ, ಲೋಭವಿವರ್ಜಿತ ಜನರು ಅನ್ಯೋನ್ಯರ ವಿಕಾಸವನ್ನು ಬಯಸುತ್ತಿದ್ದರು. ಧರ್ಮವು ಅತ್ಯುತ್ತಮ ಸ್ಥಾನವನ್ನು ಪಡೆದಿತ್ತು.
01102008a ತನ್ಮಹೋದಧಿವತ್ಪೂರ್ಣಂ ನಗರಂ ವೈ ವ್ಯರೋಚತ|
01102008c ದ್ವಾರತೋರಣನಿರ್ಯೂಹೈರ್ಯುಕ್ತಮಭ್ರಚಯೋಪಮೈಃ|
01102008e ಪ್ರಾಸಾದಶತಸಂಬಾಧಂ ಮಹೇಂದ್ರಪುರಸನ್ನಿಭಂ||
ತುಂಬಿಹೋಗಿದ್ಡ ನಗರವು ಮಹಾ ಸಾಗರದಂತೆ ತೋರುತ್ತಿತ್ತು. ದ್ವಾರ, ತೋರಣ, ಮೋಡಗಳನ್ನು ಮುಟ್ಟುತ್ತಿವೆಯೋ ಎಂದು ತೋರುವ ನೂರಾರು ಮಹಡಿಗಳ ಎತ್ತರ ಕಟ್ಟಡಗಳಿಂದ ಅದು ಮಹೇಂದ್ರಪುರವನ್ನು ಹೋಲುತ್ತಿತ್ತು.
01102009a ನದೀಷು ವನಖಂಡೇಷು ವಾಪೀಪಲ್ವಲಸಾನುಷು|
01102009c ಕಾನನೇಷು ಚ ರಮ್ಯೇಷು ವಿಜಹ್ರುರ್ಮುದಿತಾ ಜನಾಃ||
ನದಿಗಳಲ್ಲಿ, ವನಖಂಡಗಳಲ್ಲಿ, ಕೊಳ-ಸರೋವರಗಳಲ್ಲಿ, ಗಿರಿಶಿಖರಗಳ ಮೇಲೆ, ಮತ್ತು ರಮ್ಯ ಕಾನನಗಳಲ್ಲಿ ಜನರು ಮುದಿತರಾಗಿ ವಿಹರಿಸುತ್ತಿದ್ದರು.
01102010a ಉತ್ತರೈಃ ಕುರುಭಿಃ ಸಾರ್ಧಂ ದಕ್ಷಿಣಾಃ ಕುರವಸ್ತದಾ|
01102010c ವಿಸ್ಪರ್ಧಮಾನಾ ವ್ಯಚರಂಸ್ತಥಾ ಸಿದ್ಧರ್ಷಿಚಾರಣೈಃ|
01102010e ನಾಭವತ್ಕೃಪಣಃ ಕಶ್ಚಿನ್ನಾಭವನ್ವಿಧವಾಃ ಸ್ತ್ರಿಯಃ||
ಆಗಿನ ಕಾಲದಲ್ಲಿ ದಕ್ಷಿಣ ಕುರುಗಳು ಉತ್ತರ ಕುರುಗಳೊಂದಿಗೆ ಸ್ಪರ್ಧಿಸುತ್ತಿರುವರೋ ಎನ್ನುವಂತೆ ಸಿದ್ಧ, ಋಷಿ, ಚಾರಣರೊಂದಿಗೆ ವ್ಯವಹರಿಸುತ್ತಿದ್ದರು. ಯಾರೂ ಬಡವರಿರಲಿಲ್ಲ, ಯಾವ ಸ್ತ್ರೀಯೂ ವಿಧವೆಯಾಗಿರಲಿಲ್ಲ.
01102011a ತಸ್ಮಿಂಜನಪದೇ ರಮ್ಯೇ ಬಹವಃ ಕುರುಭಿಃ ಕೃತಾಃ|
01102011c ಕೂಪಾರಾಮಸಭಾವಾಪ್ಯೋ ಬ್ರಾಹ್ಮಣಾವಸಥಾಸ್ತಥಾ|
01102011e ಭೀಷ್ಮೇಣ ಶಾಸ್ತ್ರತೋ ರಾಜನ್ಸರ್ವತಃ ಪರಿರಕ್ಷಿತೇ||
01102012a ಬಭೂವ ರಮಣೀಯಶ್ಚ ಚೈತ್ಯಯೂಪಶತಾಂಕಿತಃ|
01102012c ಸ ದೇಶಃ ಪರರಾಷ್ಟ್ರಾಣಿ ಪ್ರತಿಗೃಹ್ಯಾಭಿವರ್ಧಿತಃ|
01102012e ಭೀಷ್ಮೇಣ ವಿಹಿತಂ ರಾಷ್ಟ್ರೇ ಧರ್ಮಚಕ್ರಮವರ್ತತ||
ರಮ್ಯ ಗ್ರಾಮೀಣಪ್ರದೇಶಗಳಲ್ಲಿ ಕುರುಗಳು ಬಹಳಷ್ಟು ಬಾವಿಗಳನ್ನು, ಸಭೆಗಳನ್ನು, ಕೆರೆಗಳನ್ನು, ಬ್ರಾಹ್ಮಣರಿಗೆ ಮನೆಗಳನ್ನೂ ಕಟ್ಟಿಸಿದರು. ರಾಜನ್! ಭೀಷ್ಮನಿಂದ ಆಳಲ್ಪಟ್ಟ ಆ ರಾಜ್ಯವು ಎಲ್ಲೆಡೆಯಿಂದ ಸುರಕ್ಷಿತವಾಗಿತ್ತು. ರಮಣೀಯ ಚೈತ್ಯ ಯೂಪಗಳಿಂದ ಕೂಡಿದ್ದ ಆ ದೇಶವು ಪರರಾಷ್ಟ್ರಗಳನ್ನೂ ಸೇರಿಸಿಕೊಳ್ಳುತ್ತಾ ಬೆಳೆಯುತ್ತಿತ್ತು. ಭೀಷ್ಮನಿಂದ ಆಳಲ್ಪಟ್ಟ ಆ ರಾಷ್ಟ್ರವು ಧರ್ಮಚಕ್ರದ ಮೇಲೆಯೇ ನಡೆಯುತ್ತಿತ್ತು.
01102013a ಕ್ರಿಯಮಾಣೇಷು ಕೃತ್ಯೇಷು ಕುಮಾರಾಣಾಂ ಮಹಾತ್ಮನಾಂ|
01102013c ಪೌರಜಾನಪದಾಃ ಸರ್ವೇ ಬಭೂವುಃ ಸತತೋತ್ಸವಾಃ||
ಮಹಾತ್ಮ ಕುಮಾರರು ತಮ್ಮ ತಮ್ಮ ಕೃತ್ಯದಲ್ಲಿ ತೊಡಗಿರುವಾಗ ನಗರ ಮತ್ತು ಗ್ರಾಮೀಣ ಜನರೆಲ್ಲರೂ ಸದಾ ಉತ್ಸವವನ್ನಾಚರಿಸುತ್ತಿದ್ದರು.
01102014a ಗೃಹೇಷು ಕುರುಮುಖ್ಯಾನಾಂ ಪೌರಾಣಾಂ ಚ ನರಾಧಿಪ|
01102014c ದೀಯತಾಂ ಭುಜ್ಯತಾಂ ಚೇತಿ ವಾಚೋಽಶ್ರೂಯಂತ ಸರ್ವಶಃ||
ನರಾಧಿಪ! ಕುರುಮುಖ್ಯರ ಮತ್ತು ಪೌರರ ಮನೆಗಳಲ್ಲಿ ಕೊಡೋಣ, ಭೋಜನವನ್ನು ನೀಡೋಣ ಎಂಬ ಮಾತುಗಳು ಎಲ್ಲೆಡೆಯೂ ಎಲ್ಲರಿಂದಲೂ ಕೇಳಿಬರುತ್ತಿದ್ದವು.
01102015a ಧೃತರಾಷ್ಟ್ರಶ್ಚ ಪಾಂಡುಶ್ಚ ವಿದುರಶ್ಚ ಮಹಾಮತಿಃ|
01102015c ಜನ್ಮಪ್ರಭೃತಿ ಭೀಷ್ಮೇಣ ಪುತ್ರವತ್ಪರಿಪಾಲಿತಾಃ||
ಧೃತರಾಷ್ಟ್ರ, ಪಾಂಡು ಮತ್ತು ಮಹಾಮತಿ ವಿದುರರನ್ನು ಹುಟ್ಟಿದಾಗಿನಿಂದ ಭೀಷ್ಮನು ತನ್ನದೇ ಮಕ್ಕಳಂತೆ ಪರಿಪಾಲಿಸಿದನು.
01102016a ಸಂಸ್ಕಾರೈಃ ಸಂಸ್ಕೃತಾಸ್ತೇ ತು ವ್ರತಾಧ್ಯಯನಸಂಯುತಾಃ|
01102016c ಶ್ರಮವ್ಯಾಯಾಮಕುಶಲಾಃ ಸಮಪದ್ಯಂತ ಯೌವನಂ||
ಸಂಸ್ಕಾರಗಳಿಂದ ಸಂಸ್ಕೃತ, ವ್ರತಾಧ್ಯಯನ ಸಂಯುತ, ಮತ್ತು ಶ್ರಮ ವ್ಯಾಯಾಮ ಕುಶಲರಾದ ಅವರು ಯೌವನವನ್ನು ಪ್ರವೇಶಿಸಿದರು.
01102017a ಧನುರ್ವೇದೇಽಶ್ವಪೃಷ್ಠೇ ಚ ಗದಾಯುದ್ಧೇಽಸಿಚರ್ಮಣಿ|
01102017c ತಥೈವ ಗಜಶಿಕ್ಷಾಯಾಂ ನೀತಿಶಾಸ್ತ್ರೇ ಚ ಪಾರಗಾಃ||
ಧನುರ್ವೇದ, ಕುದುರೆ ಸವಾರಿ, ಗದಾಯುದ್ಧ, ಖಡ್ಗ ಯುದ್ಧ, ರಾಜಶಿಕ್ಷಣ ಮತ್ತು ನೀತಿ ಶಾಸ್ತ್ರಗಳಲ್ಲಿ ಪಾರಂಗತರಾದರು.
01102018a ಇತಿಹಾಸಪುರಾಣೇಷು ನಾನಾಶಿಕ್ಷಾಸು ಚಾಭಿಭೋ|
01102018c ವೇದವೇದಾಂಗತತ್ತ್ವಜ್ಞಾಃ ಸರ್ವತ್ರ ಕೃತನಿಶ್ರಮಾಃ||
ಇತಿಹಾಸ ಪುರಾಣಗಳು, ನಾನಾ ಶಿಕ್ಷಣಗಳು, ವೇದವೇದಾಂಗ ತತ್ವಜ್ಞಾನ ಎಲ್ಲವನ್ನೂ ಶ್ರಮಿಸಿ ಕಲಿತುಕೊಂಡರು.
01102019a ಪಾಂಡುರ್ಧನುಷಿ ವಿಕ್ರಾಂತೋ ನರೇಭ್ಯೋಽಭ್ಯಧಿಕೋಽಭವತ್|
01102019c ಅತ್ಯನ್ಯಾನ್ಬಲವಾನಾಸೀದ್ಧೃತರಾಷ್ಟ್ರೋ ಮಹೀಪತಿಃ||
01102020a ತ್ರಿಷು ಲೋಕೇಷು ನ ತ್ವಾಸೀತ್ಕಶ್ಚಿದ್ವಿದುರಸಮ್ಮಿತಃ|
01102020c ಧರ್ಮನಿತ್ಯಸ್ತತೋ ರಾಜನ್ಧರ್ಮೇ ಚ ಪರಮಂ ಗತಃ||
ವಿಕ್ರಾಂತ ಪಾಂಡುವು ಧನುರ್ವಿದ್ಯೆಯಲ್ಲಿ ಎಲ್ಲರನ್ನೂ ಮೀರಿಸಿದನು. ಮಹೀಪತಿ ಧೃತರಾಷ್ಟ್ರನು ಬೇರೆ ಎಲ್ಲರಿಗಿಂತ ಬಲಶಾಲಿಯಾಗಿದ್ದನು. ಧರ್ಮನಿತ್ಯತೆ, ರಾಜಧರ್ಮ, ಮತ್ತು ಪರಮ ಗತಿಯಲ್ಲಿ ವಿದುರನ ಸರಿಸಮಾನರಾದವರು ಮೂರೂ ಲೋಕಗಳಲ್ಲಿ ಯಾರೂ ಇರಲಿಲ್ಲ.
01102021a ಪ್ರನಷ್ಟಂ ಶಂತನೋರ್ವಂಶಂ ಸಮೀಕ್ಷ್ಯ ಪುನರುದ್ಧೃತಂ|
01102021c ತತೋ ನಿರ್ವಚನಂ ಲೋಕೇ ಸರ್ವರಾಷ್ಟ್ರೇಷ್ವವರ್ತತ||
ನಷ್ಟವಾಗುತ್ತಿದ್ದ ಶಂತನುವಿನ ವಂಶವು ಪುನರುತ್ಥಾನವಾದದ್ದನ್ನು ನೋಡಿದ ಸರ್ವರಾಷ್ಟ್ರಗಳ ಜನರಲ್ಲಿ ಒಂದು ಮಾತು ಕೇಳಿಬರುತ್ತಿತ್ತು.
01102022a ವೀರಸೂನಾಂ ಕಾಶಿಸುತೇ ದೇಶಾನಾಂ ಕುರುಜಾಂಗಲಂ|
01102022c ಸರ್ವಧರ್ಮವಿದಾಂ ಭೀಷ್ಮಃ ಪುರಾಣಾಂ ಗಜಸಾಹ್ವಯಂ||
“ಕಾಶಿಸುತೆಯರ ಮಕ್ಕಳೇ ವೀರರು! ದೇಶಗಳಲ್ಲಿಯೇ ಕುರುಜಂಗಲ! ಸರ್ವಧರ್ಮವಿದರಲ್ಲಿ ಭೀಷ್ಮ ಮತ್ತು ನಗರಗಳಲ್ಲಿ ಗಜಸಾಹ್ವಯ!”
01102023a ಧೃತರಾಷ್ಟ್ರಸ್ತ್ವಚಕ್ಷುಷ್ಟ್ವಾದ್ರಾಜ್ಯಂ ನ ಪ್ರತ್ಯಪದ್ಯತ|
01102023c ಕರಣತ್ವಾಚ್ಚ ವಿದುರಃ ಪಾಂಡುರಾಸೀನ್ಮಹೀಪತಿಃ||
ತನ್ನ ಕುರುಡತ್ವದಿಂದಾಗಿ ಧೃತರಾಷ್ಟ್ರನು, ಮತ್ತು ಜಾತಿಸಂಕರದಿಂದ ಜನಿಸಿದ ವಿದುರನು ರಾಜ್ಯವನ್ನು ಪಡೆಯಲಿಲ್ಲ. ಪಾಂಡುವು ಮಹೀಪತಿಯಾದನು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುರಾಜ್ಯಾಭಿಷೇಕೇ ದ್ವಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುರಾಜ್ಯಾಭೀಷೇಕ ಎನ್ನುವ ನೂರಾಎರಡನೆಯ ಅಧ್ಯಾಯವು.