ಆದಿ ಪರ್ವ: ಸಂಭವ ಪರ್ವ
೧೦೧
ಧರ್ಮನಿಗೆ ಅಣಿಮಾಂಡವ್ಯನ ಶಾಪ
ಜನಮೇಜಯನು ಕೇಳಲು ವೈಶಂಪಾಯನನು ಅಣಿಮಾಂಡವ್ಯನು ಧರ್ಮನನ್ನು ಶೂದ್ರಯೋನಿಯಲ್ಲಿ ಜನಿಸುವಂತೆ ಶಪಿಸಿದ ಅಣಿಮಾಂಡವ್ಯೋಪಾಖ್ಯಾನವನ್ನು ಹೇಳಿದುದು (೧-೨೮).
01101001 ಜನಮೇಜಯ ಉವಾಚ|
01101001a ಕಿಂ ಕೃತಂ ಕರ್ಮ ಧರ್ಮೇಣ ಯೇನ ಶಾಪಮುಪೇಯಿವಾನ್|
01101001c ಕಸ್ಯ ಶಾಪಾಚ್ಚ ಬ್ರಹ್ಮರ್ಷೇ ಶೂದ್ರಯೋನಾವಜಾಯತ||
ಜನಮೇಜಯನು ಹೇಳಿದನು: “ಈ ಶಾಪವನ್ನು ಪಡೆಯಲು ಧರ್ಮನಿಂದ ಯಾವ ಕರ್ಮವು ನಡೆದುಹೋಯಿತು? ಬ್ರಹ್ಮರ್ಷಿ! ಯಾರ ಶಾಪದಿಂದ ಅವನು ಶೂದ್ರಯೋನಿಯಲ್ಲಿ ಜನಿಸಬೇಕಾಯಿತು?”
01101002 ವೈಶಂಪಾಯನ ಉವಾಚ|
01101002a ಬಭೂವ ಬ್ರಾಹ್ಮಣಃ ಕಶ್ಚಿನ್ಮಾಂಡವ್ಯ ಇತಿ ವಿಶ್ರುತಃ|
01101002c ಧೃತಿಮಾನ್ಸರ್ವಧರ್ಮಜ್ಞಃ ಸತ್ಯೇ ತಪಸಿ ಚ ಸ್ಥಿತಃ||
ವೈಶಂಪಾಯನನು ಹೇಳಿದನು: “ಒಮ್ಮೆ ಮಾಂಡವ್ಯ ಎಂಬ ವಿಶೃತ ಬ್ರಾಹ್ಮಣನಿದ್ದನು. ಆ ಧೃತಿವಂತ ಸರ್ವಧರ್ಮಜ್ಞನು ಸತ್ಯ ಮತ್ತು ತಪಸ್ಸಿನಲ್ಲಿ ನಿರತನಾಗಿದ್ದನು.
01101003a ಸ ಆಶ್ರಮಪದದ್ವಾರಿ ವೃಕ್ಷಮೂಲೇ ಮಹಾತಪಾಃ|
01101003c ಊರ್ಧ್ವಬಾಹುರ್ಮಹಾಯೋಗೀ ತಸ್ಥೌ ಮೌನವ್ರತಾನ್ವಿತಃ||
ಆ ಮಹಾತಪಸ್ವಿ ಮಹಾಯೋಗಿಯು ತನ್ನ ಆಶ್ರಮದ ಬಳಿಯ ಒಂದು ವೃಕ್ಷದ ಕೆಳಗೆ ಬಾಹುಗಳನ್ನು ಮೇಲೆತ್ತಿ ನಿಂತು ಮೌನವ್ರತ ತಾಳಿ ತಪಸ್ಸನ್ನು ಮಾಡುತ್ತಿದ್ದನು.
01101004a ತಸ್ಯ ಕಾಲೇನ ಮಹತಾ ತಸ್ಮಿಂಸ್ತಪಸಿ ತಿಷ್ಠತಃ|
01101004c ತಮಾಶ್ರಮಪದಂ ಪ್ರಾಪ್ತಾ ದಸ್ಯವೋ ಲೋಪ್ತ್ರಹಾರಿಣಃ|
01101004e ಅನುಸಾರ್ಯಮಾಣಾ ಬಹುಭೀ ರಕ್ಷಿಭಿರ್ಭರತರ್ಷಭ||
ಅವನು ಬಹಳ ಕಾಲದಿಂದ ಹಾಗೆ ತಪಸ್ಸಿನಲ್ಲಿ ನಿರತನಾಗಿದ್ದನು. ಭರತರ್ಷಭ! ಒಮ್ಮೆ ಬೆನ್ನಟ್ಟಿ ಬರುತ್ತಿದ್ದ ಬಹಳ ಸೈನಿಕರಿಂದ ಪಲಾಯನಮಾಡುತ್ತಿದ್ದ ದಸ್ಯುಗಳು ತಾವು ಕದ್ದಿದ್ದ ಸಂಪತ್ತನ್ನು ಹೊತ್ತುಕೊಂಡು ಆ ಆಶ್ರಮವನ್ನು ತಲುಪಿದರು.
01101005a ತೇ ತಸ್ಯಾವಸಥೇ ಲೋಪ್ತ್ರಂ ನಿದಧುಃ ಕುರುಸತ್ತಮ|
01101005c ನಿಧಾಯ ಚ ಭಯಾಲ್ಲೀನಾಸ್ತತ್ರೈವಾನ್ವಾಗತೇ ಬಲೇ||
ಕುರುಸತ್ತಮ! ಅವರು ಆ ದ್ರವ್ಯಗಳನ್ನು ಅವನ ಮನೆಯಲ್ಲಿಯೇ ಹುಗಿದಿಟ್ಟು ಸೇನೆಯ ಭಯದಿಂದ ಅಲ್ಲಿಯೇ ಅಡಗಿಕೊಂಡರು.
01101006a ತೇಷು ಲೀನೇಷ್ವಥೋ ಶೀಘ್ರಂ ತತಸ್ತದ್ರಕ್ಷಿಣಾಂ ಬಲಂ|
01101006c ಆಜಗಾಮ ತತೋಽಪಶ್ಯಂಸ್ತಂ ಋಷಿಂ ತಸ್ಕರಾನುಗಾಃ||
ಅವರು ಹೊರಟು ಹೋದ ತಕ್ಷಣವೇ ಕಳ್ಳರನ್ನು ಓಡಿಸಿಕೊಂಡು ಬಂದ ಸೈನಿಕರ ಬಲವು ಅಲ್ಲಿಗೆ ಬಂದು ಋಷಿಯನ್ನು ನೋಡಿತು.
01101007a ತಮಪೃಚ್ಛಂಸ್ತತೋ ರಾಜಂಸ್ತಥಾವೃತ್ತಂ ತಪೋಧನಂ|
01101007c ಕತರೇಣ ಪಥಾ ಯಾತಾ ದಸ್ಯವೋ ದ್ವಿಜಸತ್ತಮ|
01101007e ತೇನ ಗಚ್ಛಾಮಹೇ ಬ್ರಹ್ಮನ್ಪಥಾ ಶೀಘ್ರತರಂ ವಯಂ||
ರಾಜನ್! ಅದೇ ರೀತಿ ನಿಂತಿದ್ದ ಆ ತಪೋಧನನ್ನು ಅವರು ಪ್ರಶ್ನಿಸಿದರು: “ದ್ವಿಜಸತ್ತಮ! ದಸ್ಯುಗಳು ಯಾವ ಕಡೆ ಹೋದರು? ಬ್ರಹ್ಮನ್! ನಾವೂ ಕೂಡ ಅವರು ಹೋದ ಕಡೆ ಬೇಗ ಹೋಗುತ್ತೇವೆ.”
01101008a ತಥಾ ತು ರಕ್ಷಿಣಾಂ ತೇಷಾಂ ಬ್ರುವತಾಂ ಸ ತಪೋಧನಃ|
01101008c ನ ಕಿಂ ಚಿದ್ವಚನಂ ರಾಜನ್ನವದತ್ಸಾಧ್ವಸಾಧು ವಾ||
ರಾಜನ್! ಆ ತಪೋಧನನು ಕಾವಲುಗಾರರೊಂದಿಗೆ ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಏನನ್ನೂ ಮಾತನಾಡಲಿಲ್ಲ.
01101009a ತತಸ್ತೇ ರಾಜಪುರುಷಾ ವಿಚಿನ್ವಾನಾಸ್ತದಾಶ್ರಮಂ|
01101009c ದದೃಶುಸ್ತತ್ರ ಸಂಲೀನಾಂಸ್ತಾಂಶ್ಚೋರಾನ್ದ್ರವ್ಯಮೇವ ಚ||
ಆಗ ಆ ರಾಜಪುರುಷರು ಅವನ ಆಶ್ರಮವನ್ನೆಲ್ಲಾ ಹುಡುಕಾಡಿ ಅಲ್ಲಿ ಅಡಗಿದ್ದ ಕಳ್ಳರನ್ನೂ ಮತ್ತು ಅವರು ಅಡಗಿಸಿಟ್ಟಿದ್ದ ದ್ರವ್ಯವನ್ನೂ ಕಂಡರು.
01101010a ತತಃ ಶಂಕಾ ಸಮಭವದ್ರಕ್ಷಿಣಾಂ ತಂ ಮುನಿಂ ಪ್ರತಿ|
01101010c ಸಮ್ಯಮ್ಯೈನಂ ತತೋ ರಾಜ್ಞೇ ದಸ್ಯೂಂಶ್ಚೈವ ನ್ಯವೇದಯನ್||
ಆಗ ಕಾವಲುಗಾರರಿಗೆ ಆ ಮುನಿಯ ಕುರಿತು ಅನುಮಾನವುಂಟಾಯಿತು. ಅವನನ್ನೂ ದಸ್ಯುಗಳನ್ನೂ ಹಿಡಿದು ರಾಜನಲ್ಲಿಗೆ ಕರೆತಂದರು.
01101011a ತಂ ರಾಜಾ ಸಹ ತೈಶ್ಚೋರೈರನ್ವಶಾದ್ವಧ್ಯತಾಮಿತಿ|
01101011c ಸ ವಧ್ಯಘಾತೈರಜ್ಞಾತಃ ಶೂಲೇ ಪ್ರೋತೋ ಮಹಾತಪಾಃ||
ರಾಜನು ಕಳ್ಳರೊಡನೆ ಅವನಿಗೂ “ಇವರನ್ನು ಕೊಲ್ಲಿರಿ!””ಎಂದು ತೀರ್ಮಾನವಿತ್ತನು. ಮುಗ್ಧ ಕೊಲೆಗಾರರು ಆ ಮಹಾತಪಸ್ವಿಯನ್ನು ಶೂಲಕ್ಕೇರಿಸಿದರು.
01101012a ತತಸ್ತೇ ಶೂಲಮಾರೋಪ್ಯ ತಂ ಮುನಿಂ ರಕ್ಷಿಣಸ್ತದಾ|
01101012c ಪ್ರತಿಜಗ್ಮುರ್ಮಹೀಪಾಲಂ ಧನಾನ್ಯಾದಾಯ ತಾನ್ಯಥ||
ಆ ಮುನಿಯನ್ನು ಶೂಲಕ್ಕೇರಿಸಿ ಕಾವಲುಗಾರರು ಕದ್ದಿದ್ದ ಧನವನ್ನು ರಾಜನಿಗೆ ತಂದೊಪ್ಪಿಸಿದರು.
01101013a ಶೂಲಸ್ಥಃ ಸ ತು ಧರ್ಮಾತ್ಮಾ ಕಾಲೇನ ಮಹತಾ ತತಃ|
01101013c ನಿರಾಹಾರೋಽಪಿ ವಿಪ್ರರ್ಷಿರ್ಮರಣಂ ನಾಭ್ಯುಪಾಗಮತ್|
01101013e ಧಾರಯಾಮಾಸ ಚ ಪ್ರಾಣಾನೃಷೀಂಶ್ಚ ಸಮುಪಾನಯತ್||
ಆ ಧರ್ಮಾತ್ಮ ವಿಪ್ರರ್ಷಿಯು ನಿರಾಹಾರಿಯಾಗಿ ಆ ಶೂಲದ ಮೇಲೆ ಬಹಳ ಕಾಲದವರೆಗೆ ಇದ್ದರೂ ಸಾಯಲಿಲ್ಲ. ತನ್ನ ಪ್ರಾಣವನ್ನು ಹಿಡಿದುಕೊಂಡೇ ಇದ್ದ ಅವನು ಇತರ ಋಷಿಗಳನ್ನು ಕರೆಯಿಸಿಕೊಂಡನು.
01101014a ಶೂಲಾಗ್ರೇ ತಪ್ಯಮಾನೇನ ತಪಸ್ತೇನ ಮಹಾತ್ಮನಾ|
01101014c ಸಂತಾಪಂ ಪರಮಂ ಜಗ್ಮುರ್ಮುನಯೋಽಥ ಪರಂತಪ||
ಪರಂತಪ! ಶೂಲದ ಮೇಲೆಯೇ ತಪಸ್ಸನ್ನು ಮಾಡುತ್ತಿದ್ದ ಆ ಮಹಾತ್ಮನನ್ನು ನೋಡಿದ ಅವರು ಪರಮ ಸಂತಪ್ತರಾಗಿ ಹಿಂದಿರುಗಿದರು.
01101015a ತೇ ರಾತ್ರೌ ಶಕುನಾ ಭೂತ್ವಾ ಸಂನ್ಯವರ್ತಂತ ಸರ್ವತಃ|
01101015c ದರ್ಶಯಂತೋ ಯಥಾಶಕ್ತಿ ತಮಪೃಚ್ಛನ್ದ್ವಿಜೋತ್ತಮಂ|
01101015e ಶ್ರೋತುಮಿಚ್ಛಾಮಹೇ ಬ್ರಹ್ಮನ್ಕಿಂ ಪಾಪಂ ಕೃತವಾನಸಿ||
ಅವರೆಲ್ಲರೂ ರಾತ್ರಿ ಬಾವಲಿಗಳಾಗಿ ಎಲ್ಲ ಕಡೆಗಳಿಂದಲೂ ಬಂದು ಯಥಾಶಕ್ತಿ ತಮ್ಮ ಬಲವನ್ನು ತೋರಿಸಿ ಆ ದ್ವಿಜೋತ್ತಮನನ್ನು ಪ್ರಶ್ನಿಸಿದರು: “ಬ್ರಾಹ್ಮಣ! ನೀನು ಯಾವ ಪಾಪವನ್ನು ಮಾಡಿದ್ದೀಯೆ ಎಂದು ಕೇಳ ಬಯಸುತ್ತೇವೆ.”
01101016a ತತಃ ಸ ಮುನಿಶಾರ್ದೂಲಸ್ತಾನುವಾಚ ತಪೋಧನಾನ್|
01101016c ದೋಷತಃ ಕಂ ಗಮಿಷ್ಯಾಮಿ ನ ಹಿ ಮೇಽನ್ಯೋಽಪರಾಧ್ಯತಿ||
ಆಗ ಆ ಮುನಿಶಾರ್ದೂಲನು ತಪೋಧನರಿಗೆ ಹೇಳಿದನು: “ನಾನು ಯಾರನ್ನು ದೋಷಿತರೆಂದು ಹೇಳಲಿ? ಇದು ನನ್ನದೇ ಅಪರಾಧ.”
01101017a ರಾಜಾ ಚ ತಂ ಋಷಿಂ ಶ್ರುತ್ವಾ ನಿಷ್ಕ್ರಮ್ಯ ಸಹ ಮಂತ್ರಿಭಿಃ|
01101017c ಪ್ರಸಾದಯಾಮಾಸ ತದಾ ಶೂಲಸ್ಥಂ ಋಷಿಸತ್ತಮಂ||
ಅವನು ಋಷಿಯೆಂದು ಕೇಳಿದ ರಾಜನು ಮಂತ್ರಿಗಳನ್ನೊಡಗೂಡಿ ಶೂಲದ ಮೇಲಿದ್ದ ಆ ಋಷಿಸತ್ತಮನ ಬಳಿ ಬಂದನು.
01101018a ಯನ್ಮಯಾಪಕೃತಂ ಮೋಹಾದಜ್ಞಾನಾದೃಷಿಸತ್ತಮ|
01101018c ಪ್ರಸಾದಯೇ ತ್ವಾಂ ತತ್ರಾಹಂ ನ ಮೇ ತ್ವಂ ಕ್ರೋದ್ಧುಮರ್ಹಸಿ||
“ಋಷಿಸತ್ತಮ! ನನ್ನ ಅಜ್ಞಾನ ಮತ್ತು ಮೋಹದಿಂದ ಈ ಅಪಕೃತವು ನಡೆದುಹೋಯಿತು. ನನ್ನ ಮೇಲೆ ಸಿಟ್ಟಾಗಬೇಡ. ನನ್ನನ್ನು ಅನುಗ್ರಹಿಸು.”
01101019a ಏವಮುಕ್ತಸ್ತತೋ ರಾಜ್ಞಾ ಪ್ರಸಾದಮಕರೋನ್ಮುನಿಃ|
01101019c ಕೃತಪ್ರಸಾದೋ ರಾಜಾ ತಂ ತತಃ ಸಮವತಾರಯತ್||
ರಾಜನು ಹೀಗೆ ಹೇಳಿದಾಗ ಮುನಿಯು ಶಾಂತನಾದನು. ಅನುಗ್ರಹಿತ ರಾಜನು ಅವನನ್ನು ಕೆಳಕ್ಕಿಳಿಸಿದನು.
01101020a ಅವತಾರ್ಯ ಚ ಶೂಲಾಗ್ರಾತ್ತಚ್ಶೂಲಂ ನಿಶ್ಚಕರ್ಷ ಹ|
01101020c ಅಶಕ್ನುವಂಶ್ಚ ನಿಷ್ಕ್ರಷ್ಟುಂ ಶೂಲಂ ಮೂಲೇ ಸ ಚಿಚ್ಛಿದೇ||
ಅವನನ್ನು ಶೂಲದ ಮೇಲಿನಿಂದ ಕೆಳಗಿಳಿಸಿ ಅವನಿಂದ ಆ ಶೂಲವನ್ನು ಕೀಳಲು ಪ್ರಯತ್ನಿಸಿದಾಗ ಅದು ಬರಲೇ ಇಲ್ಲ. ಆಗ ಆ ಶೂಲವನ್ನು ಬುಡದಲ್ಲಿಯೇ ಕತ್ತರಿಸಿದನು.
01101021a ಸ ತಥಾಂತರ್ಗತೇನೈವ ಶೂಲೇನ ವ್ಯಚರನ್ಮುನಿಃ|
01101021c ಸ ತೇನ ತಪಸಾ ಲೋಕಾನ್ವಿಜಿಗ್ಯೇ ದುರ್ಲಭಾನ್ಪರೈಃ|
01101021e ಅಣೀಮಾಂಡವ್ಯ ಇತಿ ಚ ತತೋ ಲೋಕೇಷು ಕಥ್ಯತೇ||
ಹೀಗೆ ಆ ಮುನಿಯು ತನ್ನ ಒಳಗೆ ಶೂಲವನ್ನು ಇಟ್ಟುಕೊಂಡೇ ಓಡಾಡುತ್ತಿದ್ದನು. ಮತ್ತು ತನ್ನ ತಪಸ್ಸಿನ ಮೂಲಕ ದುರ್ಲಭ ಪರ ಲೋಕವನ್ನು ಜಯಿಸಿದನು. ಅವನನ್ನು ಅಣೀಮಾಂಡವ್ಯನೆಂದು ಲೋಕಗಳಲ್ಲಿ ಕರೆಯುತ್ತಾರೆ.
01101022a ಸ ಗತ್ವಾ ಸದನಂ ವಿಪ್ರೋ ಧರ್ಮಸ್ಯ ಪರಮಾರ್ಥವಿತ್|
01101022c ಆಸನಸ್ಥಂ ತತೋ ಧರ್ಮಂ ದೃಷ್ಟ್ವೋಪಾಲಭತ ಪ್ರಭುಃ||
ಆ ಪರಮಾರ್ಥವಿದುಷಿ ವಿಪ್ರನು ಧರ್ಮಸದನವನ್ನು ಸೇರಿ ಆಸನಸ್ಥ ಪ್ರಭು ಧರ್ಮನನ್ನು ಕಂಡು ಪ್ರಶ್ನಿಸಿದನು:
01101023a ಕಿಂ ನು ತದ್ದುಷ್ಕೃತಂ ಕರ್ಮ ಮಯಾ ಕೃತಮಜಾನತಾ|
01101023c ಯಸ್ಯೇಯಂ ಫಲನಿರ್ವೃತ್ತಿರೀದೃಶ್ಯಾಸಾದಿತಾ ಮಯಾ|
01101023e ಶೀಘ್ರಮಾಚಕ್ಷ್ವ ಮೇ ತತ್ತ್ವಂ ಪಶ್ಯ ಮೇ ತಪಸೋ ಬಲಂ||
“ನನಗೆ ತಿಳಿಯದ ಯಾವ ದುಷ್ಕೃತ್ಯವನ್ನು ನಾನು ಮಾಡಿದ್ದೆನೆಂದು ನನಗೆ ಅಂಥಹ ಫಲವನ್ನು ಅನುಭವಿಸಬೇಕಾಯಿತು? ಶೀಘ್ರದಲ್ಲಿಯೇ ಇದಕ್ಕೆ ಉತ್ತರವನ್ನು ನೀಡಿ ನನ್ನ ತಪೋಬಲವನ್ನು ನೋಡು.”
01101024 ಧರ್ಮ ಉವಾಚ|
01101024a ಪತಂಗಕಾನಾಂ ಪುಚ್ಛೇಷು ತ್ವಯೇಷೀಕಾ ಪ್ರವೇಶಿತಾ|
01101024c ಕರ್ಮಣಸ್ತಸ್ಯ ತೇ ಪ್ರಾಪ್ತಂ ಫಲಮೇತತ್ತಪೋಧನ||
ಧರ್ಮನು ಹೇಳಿದನು: “ತಪೋಧನ! ನೀನು ಚಿಟ್ಟೆಗಳ ಬಾಲಗಳಿಗೆ ಹುಲ್ಲಿನ ಕಡ್ಡಿಗಳನ್ನು ಸುಚ್ಚಿದ್ದೆ. ಆ ಕರ್ಮಕ್ಕೆ ಈ ಫಲವು ಪ್ರಾಪ್ತಿಯಾಗಿದೆ.”
01101025a ಅಲ್ಪೇಽಪರಾಧೇ ವಿಪುಲೋ ಮಮ ದಂಡಸ್ತ್ವಯಾ ಕೃತಃ|
01101025c ಶೂದ್ರಯೋನಾವತೋ ಧರ್ಮ ಮಾನುಷಃ ಸಂಭವಿಷ್ಯಸಿ||
“ಧರ್ಮ! ಆ ಅಲ್ಪ ಅಪರಾಧಕ್ಕೆ ಇಷ್ಟೊಂದು ವಿಪುಲ ದಂಡವನ್ನಿತ್ತಿದ್ದೀಯೆ. ಆದುದರಿಂದ ನೀನು ಶೂದ್ರಯೋನಿಯಲ್ಲಿ ಮನುಷ್ಯನಾಗಿ ಜನಿಸುತ್ತೀಯೆ.
01101026a ಮರ್ಯಾದಾಂ ಸ್ಥಾಪಯಾಂಯದ್ಯ ಲೋಕೇ ಧರ್ಮಫಲೋದಯಾಂ|
01101026c ಆ ಚತುರ್ದಶಮಾದ್ವರ್ಷಾನ್ನ ಭವಿಷ್ಯತಿ ಪಾತಕಂ|
01101026e ಪರೇಣ ಕುರ್ವತಾಮೇವಂ ದೋಷ ಏವ ಭವಿಷ್ಯತಿ||
ಇಂದು ನಾನು ಧರ್ಮಫಲಗಳ ಕುರಿತು ಒಂದು ನಿಯಮವನ್ನು ಹಾಕುತ್ತೇನೆ. ಹದಿನಾಲ್ಕು ವರ್ಷಗಳ ಪರ್ಯಂತ ಮಾಡಿದುದು ಪಾತಕವೆನಿಸುವುದಿಲ್ಲ. ಆದರೆ ಅದರ ನಂತರ ಮಾಡಿದುದೆಲ್ಲವೂ ದೋಷವೆಂದು ಪರಿಗಣಿಸಲ್ಪಡುತ್ತದೆ.””
01101027 ವೈಶಂಪಾಯನ ಉವಾಚ|
01101027a ಏತೇನ ತ್ವಪರಾಧೇನ ಶಾಪಾತ್ತಸ್ಯ ಮಹಾತ್ಮನಃ|
01101027c ಧರ್ಮೋ ವಿದುರರೂಪೇಣ ಶೂದ್ರಯೋನಾವಜಾಯತ||
ವೈಶಂಪಾಯನನು ಹೇಳಿದನು: “ಈ ಅಪರಾಧಕ್ಕಾಗಿ ಮಹಾತ್ಮನಿಂದ ಶಪಿತ ಧರ್ಮನು ವಿದುರನ ರೂಪದಲ್ಲಿ ಶೂದ್ರಯೋನಿಯಲ್ಲಿ ಜನಿಸಿದನು.
01101028a ಧರ್ಮೇ ಚಾರ್ಥೇ ಚ ಕುಶಲೋ ಲೋಭಕ್ರೋಧವಿವರ್ಜಿತಃ|
01101028c ದೀರ್ಘದರ್ಶೀ ಶಮಪರಃ ಕುರೂಣಾಂ ಚ ಹಿತೇ ರತಃ||
ಅವನು ಧರ್ಮಾರ್ಥಗಳಲ್ಲಿ ಕುಶಲನಾಗಿದ್ದು ಲೋಭಕ್ರೋಧಗಳಿಂದ ವಿವರ್ಜಿತನಾಗಿದ್ದನು. ದೀರ್ಘದರ್ಶಿಯೂ, ಶಮಪರನೂ ಆದ ಅವನು ಕುರುಗಳ ಹಿತದಲ್ಲಿಯೇ ನಿರತನಾಗಿದ್ದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಅಣಿಮಾಂಡವ್ಯೋಪಾಖ್ಯಾನೇ ಏಕಾಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಅಣಿಮಾಂಡವ್ಯೋಪಾಖ್ಯಾನ ಎನ್ನುವ ನೂರಾಒಂದನೆಯ ಅಧ್ಯಾಯವು.