Adi Parva: Chapter 99

ಆದಿ ಪರ್ವ: ಸಂಭವ ಪರ್ವ

೯೯

ಸತ್ಯವತಿಯು ಭೀಷ್ಮನಿಗೆ ಮದುವೆಗೆ ಮೊದಲು ತನಗೆ ಪರಾಶರ ಮುನಿಯಿಂದ ಹುಟ್ಟಿದ ಮಗನೊಬ್ಬನಿದ್ದಾನೆ ಎಂದು ವಿವರಿಸುತ್ತಾಳೆ (೧-೧೬). ಭೀಷ್ಮನ ಒಪ್ಪಿಗೆಯನ್ನು ಪಡೆದು ಸತ್ಯವತಿಯು ಮಗ ವ್ಯಾಸನನ್ನು ಕರೆಯಿಸಿಕೊಳ್ಳುವುದು (೧೭-೨೨). ತಮ್ಮನ ವಿಧವೆಯರಲ್ಲಿ ಕುಲಸಂತಾನವನ್ನು ಪಡೆಯುವಂತೆ ವ್ಯಾಸನಲ್ಲಿ ಕೇಳಿಕೊಳ್ಳುವುದು (೨೩-೩೫). ಒಂದುವರ್ಷ ತಡೆಯಲು ಹೇಳಿದರೂ ಸತ್ಯವತಿಯು ವ್ಯಾಸನನ್ನು ಒತ್ತಾಯಿಸಿ ನಿಯೋಗಕ್ಕೆ ಒಪ್ಪಿಸುವುದು (೩೬-೪೯).

01099001 ಭೀಷ್ಮ ಉವಾಚ|

01099001a ಪುನರ್ಭರತವಂಶಸ್ಯ ಹೇತುಂ ಸಂತಾನವೃದ್ಧಯೇ|

01099001c ವಕ್ಷ್ಯಾಮಿ ನಿಯತಂ ಮಾತಸ್ತನ್ಮೇ ನಿಗದತಃ ಶೃಣು||

ಭೀಷ್ಮನು ಹೇಳಿದನು: “ಮಾತಾ! ಭರತವಂಶದ ಪುನಃ ಸಂತಾನ ವೃದ್ಧಿಯನ್ನು ಹೇಗೆ ಮುಂದುವರಿಸಿಕೊಂಡು ಹೋಗಬಹುದೆಂದು ಹೇಳುತ್ತೇನೆ. ಕೇಳು.

01099002a ಬ್ರಾಹ್ಮಣೋ ಗುಣವಾನ್ಕಶ್ಚಿದ್ಧನೇನೋಪನಿಮಂತ್ರ್ಯತಾಂ|

01099002c ವಿಚಿತ್ರವೀರ್ಯಕ್ಷೇತ್ರೇಷು ಯಃ ಸಮುತ್ಪಾದಯೇತ್ಪ್ರಜಾಃ||

ಯಾರಾದರೂ ಗುಣವಂತ ಬ್ರಾಹ್ಮಣನಿಗೆ ಧನವನ್ನಿತ್ತು, ವಿಚಿತ್ರವೀರ್ಯನ ಪತ್ನಿಯರಲ್ಲಿ ಮಕ್ಕಳನ್ನು ಪಡೆಯಲು ಕರೆಯಿಸು.””

01099003 ವೈಶಂಪಾಯನ ಉವಾಚ|

01099003a ತತಃ ಸತ್ಯವತೀ ಭೀಷ್ಮಂ ವಾಚಾ ಸಂಸಜ್ಜಮಾನಯಾ|

01099003c ವಿಹಸಂತೀವ ಸವ್ರೀಡಮಿದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಆಗ ಸತ್ಯವತಿಯು ನಾಚಿಕೊಂಡು ಮುಗುಳ್ನಗುತ್ತಾ ನಡುಗುತ್ತಿರುವ ದನಿಯಲ್ಲಿ ಭೀಷ್ಮನಿಗೆ ಹೇಳಿದಳು:

01099004a ಸತ್ಯಮೇತನ್ಮಹಾಬಾಹೋ ಯಥಾ ವದಸಿ ಭಾರತ|

01099004c ವಿಶ್ವಾಸಾತ್ತೇ ಪ್ರವಕ್ಷ್ಯಾಮಿ ಸಂತಾನಾಯ ಕುಲಸ್ಯ ಚ|

01099004e ನ ತೇ ಶಕ್ಯಮನಾಖ್ಯಾತುಮಾಪದ್ಧೀಯಂ ತಥಾವಿಧಾ||

“ಮಹಾಬಾಹು ಭಾರತ! ನೀನು ಸತ್ಯವನ್ನೇ ಹೇಳಿದ್ದೀಯೆ. ನಿನ್ನ ಮೇಲೆ ನನಗೆ ವಿಶ್ವಾಸವಿದೆ. ಕುಲದ ಸಂತಾನಕ್ಕಾಗಿ ನಾನು ಹೇಳುತ್ತೇನೆ. ಈ ಆಪತ್ತಿನ ಸಮಯದಲ್ಲಿ ಈ ವಿಧಿಯನ್ನು ನಿನಗೆ ಹೇಳಲು ನನಗೆ ಯಾವುದೇ ರೀತಿಯ ಶಂಕೆಯೂ ಆಗುತ್ತಿಲ್ಲ.

01099005a ತ್ವಮೇವ ನಃ ಕುಲೇ ಧರ್ಮಸ್ತ್ವಂ ಸತ್ಯಂ ತ್ವಂ ಪರಾ ಗತಿಃ|

01099005c ತಸ್ಮಾನ್ನಿಃಸಂಶಮ್ಯ ವಾಕ್ಯಂ ಮೇ ಕುರುಷ್ವ ಯದನಂತರಂ||

ನೀನೇ ಈ ಕುಲದ ಧರ್ಮ, ಸತ್ಯ ಮತ್ತು ಪರಮ ಗತಿ. ಆದುದರಿಂದ ನನ್ನ ಈ ಮಾತುಗಳನ್ನು ಕೇಳಿದ ನಂತರ ನಿನಗೆ ಸರಿಯೆನಿಸಿದುದನ್ನು ಮಾಡು.

01099006a ಧರ್ಮಯುಕ್ತಸ್ಯ ಧರ್ಮಾತ್ಮನ್ಪಿತುರಾಸೀತ್ತರೀ ಮಮ|

01099006c ಸಾ ಕದಾ ಚಿದಹಂ ತತ್ರ ಗತಾ ಪ್ರಥಮಯೌವನೇ||

ಧರ್ಮಯುಕ್ತ ಧರ್ಮಾತ್ಮ ನನ್ನ ತಂದೆಯು ಒಂದು ದೋಣಿಯನ್ನು ಹೊಂದಿದ್ದನು. ನಾನು ಯೌವನವನ್ನು ಪಡೆದ ಮೊದಲ ದಿನಗಳಲ್ಲಿ ಒಮ್ಮೆ ಅದನ್ನು ನಡೆಸಲು ಹೋಗಿದ್ದೆ.

01099007a ಅಥ ಧರ್ಮಭೃತಾಂ ಶ್ರೇಷ್ಠಃ ಪರಮರ್ಷಿಃ ಪರಾಶರಃ|

01099007c ಆಜಗಾಮ ತರೀಂ ಧೀಮಾಂಸ್ತರಿಷ್ಯನ್ಯಮುನಾಂ ನದೀಂ||

ಆಗ ಧರ್ಮಭೃತರಲ್ಲಿ ಶ್ರೇಷ್ಠ ಪರಮರ್ಷಿ ಧೀಮಾನ್ ಪರಾಶರನು ಯಮುನಾ ನದಿಯನ್ನು ದಾಟಲು ಬಯಸಿ ನನ್ನ ದೋಣಿಯ ಬಳಿ ಬಂದನು.

01099008a ಸ ತಾರ್ಯಮಾಣೋ ಯಮುನಾಂ ಮಾಮುಪೇತ್ಯಾಬ್ರವೀತ್ತದಾ|

01099008c ಸಾಂತ್ವಪೂರ್ವಂ ಮುನಿಶ್ರೇಷ್ಠಃ ಕಾಮಾರ್ತೋ ಮಧುರಂ ಬಹು||

ಯಮುನಾ ನದಿಯನ್ನು ದಾಟಿಸುತ್ತಿರುವಾಗ ಆ ಕಾಮಾರ್ತ ಮುನಿಶ್ರೇಷ್ಠನು ನನ್ನಲ್ಲಿ ಬಂದು ಸಾಂತ್ವನದ ಮಧುರ ಮಾತುಗಳನ್ನಾಡಿದನು.

01099009a ತಮಹಂ ಶಾಪಭೀತಾ ಚ ಪಿತುರ್ಭೀತಾ ಚ ಭಾರತ|

01099009c ವರೈರಸುಲಭೈರುಕ್ತಾ ನ ಪ್ರತ್ಯಾಖ್ಯಾತುಮುತ್ಸಹೇ||

ಭಾರತ! ಅವನ ಶಾಪದ ಭೀತಿಯಿಂದ, ನನ್ನ ತಂದೆಯ ಭೀತಿಯಿಂದ ಮತ್ತು ಸುಲಭವಾಗಿ ದೊರೆಯದಿರುವ ವರಗಳಿಗೋಸ್ಕರ ನಾನು ಅವನನ್ನು ತಿರಸ್ಕರಿಸಲಾರದೇ ಹೋದೆ.

01099010a ಅಭಿಭೂಯ ಸ ಮಾಂ ಬಾಲಾಂ ತೇಜಸಾ ವಶಮಾನಯತ್|

01099010c ತಮಸಾ ಲೋಕಮಾವೃತ್ಯ ನೌಗತಾಮೇವ ಭಾರತ||

ಭಾರತ! ತನ್ನ ತೇಜಸ್ಸಿನಿಂದ ಸುತ್ತಲೂ ಕತ್ತಲೆಯು ಆವರಿಸುವಂತೆ ಮಾಡಿ ಬಾಲಕಿ ನನ್ನನ್ನು ಆ ನೌಕೆಯಲ್ಲಿಯೇ ವಶೀಕರಿಸಿ ತನ್ನವಳನ್ನಾಗಿ ಮಾಡಿಕೊಂಡನು.

01099011a ಮತ್ಸ್ಯಗಂಧೋ ಮಹಾನಾಸೀತ್ಪುರಾ ಮಮ ಜುಗುಪ್ಸಿತಃ|

01099011c ತಮಪಾಸ್ಯ ಶುಭಂ ಗಂಧಮಿಮಂ ಪ್ರಾದಾತ್ಸ ಮೇ ಮುನಿಃ||

ಅದರ ಹಿಂದೆ ನನಗೆ ಜಿಗುಪ್ಸೆಯನ್ನು ತರುತ್ತಿದ್ದ ಅತಿ ತೀಕ್ಷ್ಣ ಮೀನಿನ ವಾಸನೆಯಿತ್ತು. ಅದನ್ನು ಹಿಂತೆಗೆದುಕೊಂಡು ಆ ಮುನಿಯು ನನಗೆ ಈ ಶುಭ ಸುಗಂಧವನ್ನಿತ್ತನು.

01099012a ತತೋ ಮಾಮಾಹ ಸ ಮುನಿರ್ಗರ್ಭಮುತ್ಸೃಜ್ಯ ಮಾಮಕಂ|

01099012c ದ್ವೀಪೇಽಸ್ಯಾ ಏವ ಸರಿತಃ ಕನ್ಯೈವ ತ್ವಂ ಭವಿಷ್ಯಸಿ||

ಅವನ ಮಗುವನ್ನು ನಾನು ನದಿಯ ಮದ್ಯದ ಒಂದು ದ್ವೀಪದಲ್ಲಿ ಹೆತ್ತ ನಂತರವೂ ನಾನು ಕನ್ಯೆಯಾಗಿಯೇ ಉಳಿಯುತ್ತೇನೆ ಎಂದೂ ಆ ಮುನಿಯು ಹೇಳಿದನು.

01099013a ಪಾರಾಶರ್ಯೋ ಮಹಾಯೋಗೀ ಸ ಬಭೂವ ಮಹಾನೃಷಿಃ|

01099013c ಕನ್ಯಾಪುತ್ರೋ ಮಮ ಪುರಾ ದ್ವೈಪಾಯನ ಇತಿ ಸ್ಮೃತಃ||

01099014a ಯೋ ವ್ಯಸ್ಯ ವೇದಾಂಶ್ಚತುರಸ್ತಪಸಾ ಭಗವಾನೃಷಿಃ|

01099014c ಲೋಕೇ ವ್ಯಾಸತ್ವಮಾಪೇದೇ ಕಾರ್ಷ್ಣ್ಯಾತ್ಕೃಷ್ಣತ್ವಮೇವ ಚ||

ಈ ರೀತಿ ಮಹಾಯೋಗಿ ಮಹಾನ್ ಋಷಿ ಪಾರಶರ್ಯನು ನನ್ನ ಕನ್ಯಾಪುತ್ರನಾಗಿ ಹುಟ್ಟಿದನು ಮತ್ತು ದ್ವೈಪಾಯನನೆಂದು ಖ್ಯಾತನಾದನು. ತನ್ನ ತಪಸ್ಸಿನಿಂದ ಆ ಭಗವಾನ್ ಋಷಿಯು ನಾಲ್ಕೂ ವೇದಗಳನ್ನು ವಿಂಗಡಿಸಿದನು. ಇದರಿಂದ ಅವನಿಗೆ ವ್ಯಾಸನೆಂಬ ಹೆಸರು ಬಂದಿತು. ಕಪ್ಪಾದ ಅವನನ್ನು ಕೃಷ್ಣ ಎಂದೂ ಕರೆಯುತ್ತಾರೆ.

01099015a ಸತ್ಯವಾದೀ ಶಮಪರಸ್ತಪಸ್ವೀ ದಗ್ಧಕಿಲ್ಬಿಷಃ|

01099015c ಸ ನಿಯುಕ್ತೋ ಮಯಾ ವ್ಯಕ್ತಂ ತ್ವಯಾ ಚ ಅಮಿತದ್ಯುತೇ|

01099015e ಭ್ರಾತುಃ ಕ್ಷೇತ್ರೇಷು ಕಲ್ಯಾಣಮಪತ್ಯಂ ಜನಯಿಷ್ಯತಿ||

ಸತ್ಯವಾದಿಯೂ, ಶಮಪರ ತಪಸ್ವಿಯೂ, ದಗ್ಧಕಿಲ್ಬಿಷನೂ ಅಮಿತದ್ಯುತಿಯೂ ಆದ ಅವನು, ನಾನು ಮತ್ತು ನೀನು ಕೇಳಿಕೊಂಡರೆ, ನಿನ್ನ ತಮ್ಮನ ಪತ್ನಿಯರಲ್ಲಿ ಕಲ್ಯಾಣವನ್ನು ತರುವ ಮಕ್ಕಳನ್ನು ಪಡೆಯಬಹುದು.

01099016a ಸ ಹಿ ಮಾಮುಕ್ತವಾಂಸ್ತತ್ರ ಸ್ಮರೇಃ ಕೃತ್ಯೇಷು ಮಾಮಿತಿ|

01099016c ತಂ ಸ್ಮರಿಷ್ಯೇ ಮಹಾಬಾಹೋ ಯದಿ ಭೀಷ್ಮ ತ್ವಮಿಚ್ಛಸಿ||

“ಏನಾದರೂ ಆಗಬೇಕೆಂದಿದ್ದಾಗ ನನ್ನನ್ನು ನೆನಪಿಸಿಕೋ. ಬರುತ್ತೇನೆ!” ಎಂದು ಅವನು ಮಾತುಕೊಟ್ಟಿದ್ದಾನೆ. ಮಹಾಬಾಹು ಭೀಷ್ಮ! ನೀನು ಬೇಕೆಂದರೆ ಈಗಲೇ ನಾನು ಅವನನ್ನು ಸ್ಮರಿಸುತ್ತೇನೆ.

01099017a ತವ ಹ್ಯನುಮತೇ ಭೀಷ್ಮ ನಿಯತಂ ಸ ಮಹಾತಪಾಃ|

01099017c ವಿಚಿತ್ರವೀರ್ಯಕ್ಷೇತ್ರೇಷು ಪುತ್ರಾನುತ್ಪಾದಯಿಷ್ಯತಿ||

ಭೀಷ್ಮ! ನಿನ್ನ ಅನುಮತಿಯ ನಂತರವೇ ಆ ಮಹಾತಪಸ್ವಿಯು ವಿಚಿತ್ರವೀರ್ಯನ ಪತ್ನಿಯರಲ್ಲಿ ಪುತ್ರರನ್ನು ಪಡೆಯಬಹುದು.”

01099018a ಮಹರ್ಷೇಃ ಕೀರ್ತನೇ ತಸ್ಯ ಭೀಷ್ಮಃ ಪ್ರಾಂಜಲಿರಬ್ರವೀತ್|

01099018c ಧರ್ಮಮರ್ಥಂ ಚ ಕಾಮಂ ಚ ತ್ರೀನೇತಾನ್ಯೋಽನುಪಶ್ಯತಿ||

01099019a ಅರ್ಥಮರ್ಥಾನುಬಂಧಂ ಚ ಧರ್ಮಂ ಧರ್ಮಾನುಬಂಧನಂ|

01099019c ಕಾಮಂ ಕಾಮಾನುಬಂಧಂ ಚ ವಿಪರೀತಾನ್ ಪೃಥಕ್ ಪೃಥಕ್|

01099019e ಯೋ ವಿಚಿಂತ್ಯ ಧಿಯಾ ಸಮ್ಯಗ್ವ್ಯವಸ್ಯತಿ ಸ ಬುದ್ಧಿಮಾನ್||

ಮಹರ್ಷಿಯ ಕುರಿತು ಹೇಳಿದ್ದುದನ್ನು ಕೇಳಿದ ಭೀಷ್ಮನು ಕೈಮುಗಿದು ಹೇಳಿದನು: “ಧರ್ಮ, ಅರ್ಥ, ಕಾಮ ಈ ಮೂರನ್ನೂ ಯಾರು ನೋಡಿಕೊಳ್ಳುತ್ತಾನೋ, ಅರ್ಥ-ಅರ್ಥಾನುಬಂಧಗಳನ್ನೂ, ಧರ್ಮ-ಧರ್ಮಾನುಬಂಧಗಳನ್ನೂ, ಕಾಮ-ಕಾಮಾನುಬಂಧಗಳನ್ನೂ ಮತ್ತು ಇವುಗಳ ವಿಪರೀತಗಳ ಕುರಿತು ಪುನಃ ಪುನಃ ಬುದ್ಧಿಪೂರ್ವಕವಾಗಿ ಚಿಂತಿಸಿ ಒಳ್ಳೆಯ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾನೋ ಅವನು ಬುದ್ಧಿವಂತನೇ ಸರಿ.

01099020a ತದಿದಂ ಧರ್ಮಯುಕ್ತಂ ಚ ಹಿತಂ ಚೈವ ಕುಲಸ್ಯ ನಃ|

01099020c ಉಕ್ತಂ ಭವತ್ಯಾ ಯತ್ ಶ್ರೇಯಃ ಪರಮಂ ರೋಚತೇ ಮಮ||

ನೀನು ಹೇಳಿದ್ದುದು ಧರ್ಮಯುಕ್ತವೂ ಹೌದು ಮತ್ತು ನಮ್ಮ ಕುಲಕ್ಕೆ ಹಿತಕಾರಿಯೂ ಹೌದು. ಇದು ಶ್ರೇಯಕಾರಕವಾದುದು. ನನಗೆ ಇದು ತುಂಬಾ ಇಷ್ಟವಾಯಿತು.”

01099021a ತತಸ್ತಸ್ಮಿನ್ಪ್ರತಿಜ್ಞಾತೇ ಭೀಷ್ಮೇಣ ಕುರುನಂದನ|

01099021c ಕೃಷ್ಣದ್ವೈಪಾಯನಂ ಕಾಲೀ ಚಿಂತಯಾಮಾಸ ವೈ ಮುನಿಂ||

ಕುರುನಂದನ ಭೀಷ್ಮನ ಒಪ್ಪಿಗೆಯನ್ನು ಪಡೆದ ಆ ಕಪ್ಪುವರ್ಣದವಳು ಮುನಿ ಕೃಷ್ಣದ್ವೈಪಾಯನನನ್ನು ಸ್ಮರಿಸಿದಳು.

01099022a ಸ ವೇದಾನ್ವಿಬ್ರುವನ್ಧೀಮಾನ್ಮಾತುರ್ವಿಜ್ಞಾಯ ಚಿಂತಿತಂ|

01099022c ಪ್ರಾದುರ್ಬಭೂವಾವಿದಿತಃ ಕ್ಷಣೇನ ಕುರುನಂದನ||

ಕುರುನಂದನ! ವೇದಾಧ್ಯಯನಮಾಡುತ್ತಿದ್ದ ಆ ಧೀಮಂತನು ತಾಯಿಯು ಸ್ಮರಿಸುತ್ತಿರುವುದನ್ನು ತಿಳಿದು ಅದೇ ಕ್ಷಣದಲ್ಲಿ ಯಾರಿಗೂ ತಿಳಿಯದ ರೀತಿಯಲ್ಲಿ ಅವಳ ಎದಿರು ಕಾಣಿಸಿಕೊಂಡನು.

01099023a ತಸ್ಮೈ ಪೂಜಾಂ ತದಾ ದತ್ತ್ವಾ ಸುತಾಯ ವಿಧಿಪೂರ್ವಕಂ|

01099023c ಪರಿಷ್ವಜ್ಯ ಚ ಬಾಹುಭ್ಯಾಂ ಪ್ರಸ್ನವೈರಭಿಷಿಚ್ಯ ಚ|

01099023e ಮುಮೋಚ ಬಾಷ್ಪಂ ದಾಶೇಯೀ ಪುತ್ರಂ ದೃಷ್ಟ್ವಾ ಚಿರಸ್ಯ ತಂ||

ಸುತನಿಗೆ ವಿಧಿಪೂರ್ವಕ ಪೂಜೆಯನ್ನಿತ್ತು, ಬಾಹುಗಳಿಂದ ಬಿಗಿದಪ್ಪಿ, ಕಣ್ಣೀರಿನಿಂದ ತೋಯಿಸಿದಳು. ಬಹಳ ಕಾಲದ ನಂತರ ಪುತ್ರನನ್ನು ಕಂಡ ಆ ದಾಶೇಯಿಯು ಕಣ್ಣೀರು ಸುರಿಸಿದಳು.

01099024a ತಾಮದ್ಭಿಃ ಪರಿಷಿಚ್ಯಾರ್ತಾಂ ಮಹರ್ಷಿರಭಿವಾದ್ಯ ಚ|

01099024c ಮಾತರಂ ಪೂರ್ವಜಃ ಪುತ್ರೋ ವ್ಯಾಸೋ ವಚನಮಬ್ರವೀತ್||

ಹಿರಿಯ ಪುತ್ರ ಮಹರ್ಷಿ ವ್ಯಾಸನು ತನ್ನ ಆರ್ತ ತಾಯಿಯನ್ನು ನೀರಿನಿಂದ ಪರಿಶಿಂಚಿಸಿ ನಮಸ್ಕರಿಸಿ, ಈ ಮಾತುಗಳನ್ನಾಡಿದನು:

01099025a ಭವತ್ಯಾ ಯದಭಿಪ್ರೇತಂ ತದಹಂ ಕರ್ತುಮಾಗತಃ|

01099025c ಶಾಧಿ ಮಾಂ ಧರ್ಮತತ್ತ್ವಜ್ಞೇ ಕರವಾಣಿ ಪ್ರಿಯಂ ತವ||

“ನಿನ್ನ ಮನಸ್ಸಿನಲ್ಲಿರುವುದನ್ನು ನಡೆಸಿಕೊಡಲು ಇಲ್ಲಿಗೆ ಬಂದಿದ್ದೇನೆ. ಧರ್ಮತತ್ವಜ್ಞಳಾಗಿದ್ದೀಯೆ. ನಿನಗೆ ಪ್ರಿಯವಾದ ಏನನ್ನು ಮಾಡಬೇಕು. ಅಪ್ಪಣೆ ಕೊಡು.”

01099026a ತಸ್ಮೈ ಪೂಜಾಂ ತತೋಽಕಾರ್ಷೀತ್ಪುರೋಧಾಃ ಪರಮರ್ಷಯೇ|

01099026c ಸ ಚ ತಾಂ ಪ್ರತಿಜಗ್ರಾಹ ವಿಧಿವನ್ಮಂತ್ರಪೂರ್ವಕಂ||

ಕುಲ ಪುರೋಹಿತರು ಆ ಪರಮ ಋಷಿಯನ್ನು ಬರಮಾಡಿಕೊಂಡು ವಿಧಿವತ್ತಾಗಿ ಮಂತ್ರಪೂರಕ ಪೂಜೆ ಸತ್ಕಾರಗಳನ್ನು ಸಲ್ಲಿಸಿದರು.

01099027a ತಮಾಸನಗತಂ ಮಾತಾ ಪೃಷ್ಟ್ವಾ ಕುಶಲಮವ್ಯಯಂ|

01099027c ಸತ್ಯವತ್ಯಭಿವೀಕ್ಷ್ಯೈನಮುವಾಚೇದಮನಂತರಂ||

ಅವನು ಆಸನವನ್ನು ಸ್ವೀಕರಿಸಿದ ನಂತರ ತಾಯಿಯು ಅವನ ಅವ್ಯಯ ಕುಶಲತೆಯ ಕುರಿತು ಪ್ರಶ್ನಿಸಿದಳು. ನಂತರ ಸತ್ಯವತಿಯು ಅವನನ್ನೇ ನೋಡುತ್ತಾ ಹೇಳಿದಳು:

01099028a ಮಾತಾಪಿತ್ರೋಃ ಪ್ರಜಾಯಂತೇ ಪುತ್ರಾಃ ಸಾಧಾರಣಾಃ ಕವೇ|

01099028c ತೇಷಾಂ ಪಿತಾ ಯಥಾ ಸ್ವಾಮೀ ತಥಾ ಮಾತಾ ನ ಸಂಶಯಃ||

“ಕವಿಯೇ! ಪುತ್ರರು ತಂದೆ ಮತ್ತು ತಾಯಿ ಇಬ್ಬರದ್ದೂ ಆಗಿ ಹುಟ್ಟಿರುತ್ತಾರೆ. ಅವರ ಮೇಲೆ ತಂದೆಗೆ ಎಷ್ಟು ಅಧಿಕಾರವಿದೆಯೋ ಅಷ್ಟೇ ತಾಯಿಗೂ ಇದೆ ಎನ್ನುವುದರಲ್ಲಿ ಸಂಶಯವಿಲ್ಲ.

01099029a ವಿಧಾತೃವಿಹಿತಃ ಸ ತ್ವಂ ಯಥಾ ಮೇ ಪ್ರಥಮಃ ಸುತಃ|

01099029c ವಿಚಿತ್ರವೀರ್ಯೋ ಬ್ರಹ್ಮರ್ಷೇ ತಥಾ ಮೇಽವರಜಃ ಸುತಃ||

ಬ್ರಹ್ಮರ್ಷಿ! ನೀನು ಹೇಗೆ ನನ್ನ ವಿಧಾತವಿಹಿತ ಪ್ರಥಮ ಸುತನೋ ಹಾಗೆಯೇ ವಿಚಿತ್ರವೀರ್ಯನು ನನ್ನ ಕೊನೆಯ ಮಗ.

01099030a ಯಥೈವ ಪಿತೃತೋ ಭೀಷ್ಮಸ್ತಥಾ ತ್ವಮಪಿ ಮಾತೃತಃ|

01099030c ಭ್ರಾತಾ ವಿಚಿತ್ರವೀರ್ಯಸ್ಯ ಯಥಾ ವಾ ಪುತ್ರ ಮನ್ಯಸೇ||

ಪುತ್ರ! ನೀನು ಒಪ್ಪಿಕೊಳ್ಳುವೆಯಾದರೆ, ತಂದೆಯ ಕಡೆಯಿಂದ ಅವನಿಗೆ ಭೀಷ್ಮನು ಹೇಗೆ ಅಣ್ಣನಾಗುತ್ತಾನೋ ಹಾಗೆ ನೀನು ಅವನಿಗೆ ತಾಯಿಯ ಕಡೆಯಿಂದ ಅಣ್ಣನಾಗುತ್ತೀಯೆ.

01099031a ಅಯಂ ಶಾಂತನವಃ ಸತ್ಯಂ ಪಾಲಯನ್ಸತ್ಯವಿಕ್ರಮಃ|

01099031c ಬುದ್ಧಿಂ ನ ಕುರುತೇಽಪತ್ಯೇ ತಥಾ ರಾಜ್ಯಾನುಶಾಸನೇ||

ಸತ್ಯವಿಕ್ರಮ ಈ ಶಾಂತನುವು ಸತ್ಯವನ್ನು ಪರಿಪಾಲಿಸಿ ರಾಜ್ಯಾನುಶಾಸನಕ್ಕಾಗಿ ಮಕ್ಕಳನ್ನು ಪಡೆಯುವ ಮನಸ್ಸನ್ನು ಮಾಡುತ್ತಿಲ್ಲ.

01099032a ಸ ತ್ವಂ ವ್ಯಪೇಕ್ಷಯಾ ಭ್ರಾತುಃ ಸಂತಾನಾಯ ಕುಲಸ್ಯ ಚ|

01099032c ಭೀಷ್ಮಸ್ಯ ಚಾಸ್ಯ ವಚನಾನ್ನಿಯೋಗಾಚ್ಚ ಮಮಾನಘ||

01099033a ಅನುಕ್ರೋಶಾಚ್ಚ ಭೂತಾನಾಂ ಸರ್ವೇಷಾಂ ರಕ್ಷಣಾಯ ಚ|

01099033c ಆನೃಶಂಸ್ಯೇನ ಯದ್ಬ್ರೂಯಾಂ ತತ್ ಶ್ರುತ್ವಾ ಕರ್ತುಮರ್ಹಸಿ||

ಅನಘ! ಈಗ ನೀನು ನಿನ್ನ ತಮ್ಮನ ಮೇಲಿನ ಗೌರವದಿಂದ, ಕುಲಸಂತಾನಕ್ಕಾಗಿ, ನನ್ನ ಮತ್ತು ಭೀಷ್ಮನ ವಚನ ನಿಯೋಗದಂತೆ, ಜೀವಿಗಳ ಮೇಲಿನ ಅನುಕಂಪದಿಂದ, ಸರ್ವರ ರಕ್ಷಣೆಗೋಸ್ಕರ, ಯಾವುದೇ ರೀತಿಯ ಬೇಸರವಿಲ್ಲದೆ ನಾನು ಹೇಳುವುದನ್ನು ಮಾಡಬೇಕು.

01099034a ಯವೀಯಸಸ್ತವ ಭ್ರಾತುರ್ಭಾರ್ಯೇ ಸುರಸುತೋಪಮೇ|

01099034c ರೂಪಯೌವನಸಂಪನ್ನೇ ಪುತ್ರಕಾಮೇ ಚ ಧರ್ಮತಃ||

ನಿನ್ನ ತಮ್ಮನ ಸುರಸುತೆಯರಂತಿರುವ ರೂಪಯೌವನಸಂಪನ್ನ ಭಾರ್ಯೆಯರು ಧರ್ಮಪೂರ್ವಕವಾಗಿ ಪುತ್ರರನ್ನು ಪಡೆಯಲು ಬಯಸುತ್ತಿದ್ದಾರೆ.

01099035a ತಯೋರುತ್ಪಾದಯಾಪತ್ಯಂ ಸಮರ್ಥೋ ಹ್ಯಸಿ ಪುತ್ರಕ|

01099035c ಅನುರೂಪಂ ಕುಲಸ್ಯಾಸ್ಯ ಸಂತತ್ಯಾಃ ಪ್ರಸವಸ್ಯ ಚ||

ಪುತ್ರಕ! ಅವರಲ್ಲಿ ನೀನು ಈ ಕುಲಕ್ಕೆ ಅನುರೂಪರಾದ ಈ ಸಂತತಿಯನ್ನು ಮುಂದುವರೆಸಿಕೊಂಡು ಹೋಗಬಲ್ಲ ಮಕ್ಕಳನ್ನು ಪಡೆ. ಇದಕ್ಕೆ ನೀನು ಸಮರ್ಥನಾಗಿದ್ದೀಯೆ.”

01099036 ವ್ಯಾಸ ಉವಾಚ|

01099036a ವೇತ್ಥ ಧರ್ಮಂ ಸತ್ಯವತಿ ಪರಂ ಚಾಪರಮೇವ ಚ|

01099036c ಯಥಾ ಚ ತವ ಧರ್ಮಜ್ಞೇ ಧರ್ಮೇ ಪ್ರಣಿಹಿತಾ ಮತಿಃ||

01099037a ತಸ್ಮಾದಹಂ ತ್ವನ್ನಿಯೋಗಾದ್ಧರ್ಮಮುದ್ದಿಶ್ಯ ಕಾರಣಂ|

01099037c ಈಪ್ಸಿತಂ ತೇ ಕರಿಷ್ಯಾಮಿ ದೃಷ್ಟಂ ಹ್ಯೇತತ್ಪುರಾತನಂ||

ವ್ಯಾಸನು ಹೇಳಿದನು: “ಸತ್ಯವತಿ! ನೀನು ಪರ ಮತ್ತು ಅಪರ ಧರ್ಮಗಳೆರಡನ್ನೂ ತಿಳಿದಿರುವೆ. ಧರ್ಮಜ್ಞಳಾದ ನಿನ್ನ ಮನಸ್ಸು ಸದಾ ಧರ್ಮದಲ್ಲಿಯೇ ನಿರತವಾಗಿದೆ. ಆದುದರಿಂದ ನಿನ್ನ ನಿಯೋಗದಂತೆ, ಧರ್ಮವನ್ನು ಗೌರವಿಸುವ ಕಾರಣದಿಂದ, ನಿನ್ನ ಇಷ್ಟದಂತೆ ಮಾಡುತ್ತೇನೆ. ಇದು ಒಂದು ಪುರಾತನ ಪದ್ಧತಿಯಾಗಿದೆ.

01099038a ಭ್ರಾತುಃ ಪುತ್ರಾನ್ಪ್ರದಾಸ್ಯಾಮಿ ಮಿತ್ರಾವರುಣಯೋಃ ಸಮಾನ್|

01099038c ವ್ರತಂ ಚರೇತಾಂ ತೇ ದೇವ್ಯೌ ನಿರ್ದಿಷ್ಟಮಿಹ ಯನ್ಮಯಾ||

01099039a ಸಂವತ್ಸರಂ ಯಥಾನ್ಯಾಯಂ ತತಃ ಶುದ್ಧೇ ಭವಿಷ್ಯತಃ|

01099039c ನ ಹಿ ಮಾಮವ್ರತೋಪೇತಾ ಉಪೇಯಾತ್ಕಾ ಚಿದಂಗನಾ||

ನನ್ನ ತಮ್ಮನಿಗೆ ಮಿತ್ರ-ವರುಣರ ಸಮಾನ ಪುತ್ರರನ್ನು ನೀಡುತ್ತೇನೆ. ಆ ದೇವಿಯರೀರ್ವರೂ ಒಂದು ಸಂವತ್ಸರ ಪರ್ಯಂತ ನಾನು ಹೇಳಿದ ನಿರ್ದಿಷ್ಟ ವ್ರತವನ್ನು ಪಾಲಿಸಿ ಶುದ್ಧರಾಗಬೇಕು. ಯಾಕೆಂದರೆ ಆ ವ್ರತವನ್ನು ಮಾಡದ ಯಾವ ಸ್ತ್ರೀಗೂ ನನ್ನೊಡನೆ ಕೂಡಲಿಕ್ಕಾಗದು.”

01099040 ಸತ್ಯವತ್ಯುವಾಚ|

01099040a ಯಥಾ ಸದ್ಯಃ ಪ್ರಪದ್ಯೇತ ದೇವೀ ಗರ್ಭಂ ತಥಾ ಕುರು|

01099040c ಅರಾಜಕೇಷು ರಾಷ್ಟ್ರೇಷು ನಾಸ್ತಿ ವೃಷ್ಟಿರ್ನ ದೇವತಾಃ||

ಸತ್ಯವತಿಯು ಹೇಳಿದಳು: “ಈಗ ಸದ್ಯದಲ್ಲಿಯೇ ದೇವಿಯು ಗರ್ಭವತಿಯಾಗುವ ಹಾಗೆ ಮಾಡು. ಯಾಕೆಂದರೆ, ರಾಜನಿಲ್ಲದ ರಾಷ್ಟ್ರದಲ್ಲಿ ಮಳೆಯೂ ದೇವತೆಗಳೂ ಬರುವುದಿಲ್ಲ.

01099041a ಕಥಮರಾಜಕಂ ರಾಷ್ಟ್ರಂ ಶಕ್ಯಂ ಧಾರಯಿತುಂ ಪ್ರಭೋ|

01099041c ತಸ್ಮಾದ್ಗರ್ಭಂ ಸಮಾಧತ್ಸ್ವ ಭೀಷ್ಮಸ್ತಂ ವರ್ಧಯಿಷ್ಯತಿ||

ಪ್ರಭು! ರಾಜನಿಲ್ಲದ ರಾಷ್ಟ್ರವನ್ನು ಹೇಗೆ ತಾನೇ ಕಾಪಾಡಿಕೊಂಡು ಬರಲು ಸಾದ್ಯ? ಆದುದರಿಂದ ಗರ್ಭವನ್ನು ನೀಡು. ಅದರ ಬೆಳವಣಿಗೆಯನ್ನು ಭೀಷ್ಮನು ನೋಡಿಕೊಳ್ಳುತ್ತಾನೆ.”

01099042 ವ್ಯಾಸ ಉವಾಚ|

01099042a ಯದಿ ಪುತ್ರಃ ಪ್ರದಾತವ್ಯೋ ಮಯಾ ಕ್ಷಿಪ್ರಮಕಾಲಿಕಂ|

01099042c ವಿರೂಪತಾಂ ಮೇ ಸಹತಾಮೇತದಸ್ಯಾಃ ಪರಂ ವ್ರತಂ||

ವ್ಯಾಸನು ಹೇಳಿದನು: “ತಕ್ಷಣವೇ ಕಾಲಬರುವ ಮೊದಲೇ ಪುತ್ರರನ್ನು ನೀಡಬೇಕಾದರೆ ನನ್ನ ವಿರೂಪವನ್ನು ಸಹಿಸುವುದೇ ಅವಳಿಗೆ ಒಂದು ಪರಮ ವ್ರತ.

01099043a ಯದಿ ಮೇ ಸಹತೇ ಗಂಧಂ ರೂಪಂ ವೇಷಂ ತಥಾ ವಪುಃ|

01099043c ಅದ್ಯೈವ ಗರ್ಭಂ ಕೌಸಲ್ಯಾ ವಿಶಿಷ್ಟಂ ಪ್ರತಿಪದ್ಯತಾಂ||

ಒಂದುವೇಳೆ ಅವಳು ನನ್ನ ಈ ವಾಸನೆ, ರೂಪ, ವೇಷ, ಮತ್ತು ದೇಹವನ್ನು ಸಹಿಸುತ್ತಾಳಾದರೆ, ಕೌಸಲ್ಯೆಗೆ ಇಂದೇ ವಿಶಿಷ್ಠ ಗರ್ಭವನ್ನು ನೀಡುತ್ತೇನೆ.””

01099044 ವೈಶಂಪಾಯನ ಉವಾಚ|

01099044a ಸಮಾಗಮನಮಾಕಾಂಕ್ಷನ್ನಿತಿ ಸೋಽಂತರ್ಹಿತೋ ಮುನಿಃ|

01099044c ತತೋಽಭಿಗಮ್ಯ ಸಾ ದೇವೀ ಸ್ನುಷಾಂ ರಹಸಿ ಸಂಗತಾಂ|

01099044e ಧರ್ಮ್ಯಮರ್ಥಸಮಾಯುಕ್ತಮುವಾಚ ವಚನಂ ಹಿತಂ||

ವೈಶಂಪಾಯನನು ಹೇಳಿದನು: “ಸಮಾಗಮಕ್ಕೆ ಕಾಯುತ್ತಿರಲಿ” ಎಂದು ಹೇಳಿ ಆ ಮುನಿಯು ಅಂತರ್ಗತನಾದನು. ನಂತರ ಆ ದೇವಿಯು ತನ್ನ ಸೊಸೆಯನ್ನು ಗೌಪ್ಯವಾಗಿ ಭೆಟ್ಟಿಯಾಗಿ ಧರ್ಮಾರ್ಥಸಮಾಯುಕ್ತ ಈ ಹಿತನುಡಿಗಳನ್ನಾಡಿದಳು:

01099045a ಕೌಸಲ್ಯೇ ಧರ್ಮತಂತ್ರಂ ಯದ್ಬ್ರವೀಮಿ ತ್ವಾಂ ನಿಬೋಧ ಮೇ|

01099045c ಭರತಾನಾಂ ಸಮುಚ್ಛೇದೋ ವ್ಯಕ್ತಂ ಮದ್ಭಾಗ್ಯಸಂಕ್ಷಯಾತ್||

“ಕೌಸಲ್ಯಾ! ನಾನು ಹೇಳುವ ಈ ಧರ್ಮತಂತ್ರವನ್ನು ಕೇಳು. ಭರತ ಕುಲವು ನಿಂತುಹೋಗಿರುವುದು ನನ್ನ ದುರ್ಭಾಗ್ಯ.

01099046a ವ್ಯಥಿತಾಂ ಮಾಂ ಚ ಸಂಪ್ರೇಕ್ಷ್ಯ ಪಿತೃವಂಶಂ ಚ ಪೀಡಿತಂ|

01099046c ಭೀಷ್ಮೋ ಬುದ್ಧಿಮದಾನ್ಮೇಽತ್ರ ಧರ್ಮಸ್ಯ ಚ ವಿವೃದ್ಧಯೇ||

ಭೀಷ್ಮನು ನನ್ನ ಈ ವ್ಯಥೆಯನ್ನು ಮತ್ತು ಅವನ ಪಿತೃವಂಶದ ಪೀಡನೆಯನ್ನು ಗಮನಿಸಿ, ಧರ್ಮವನ್ನು ವೃದ್ಧಿಸುವ ಬುದ್ಧಿವಂತ ಮಾರ್ಗವನ್ನು ತೋರಿಸಿದ್ದಾನೆ.

01099047a ಸಾ ಚ ಬುದ್ಧಿಸ್ತವಾಧೀನಾ ಪುತ್ರಿ ಜ್ಞಾತಂ ಮಯೇತಿ ಹ|

01099047c ನಷ್ಟಂ ಚ ಭಾರತಂ ವಂಶಂ ಪುನರೇವ ಸಮುದ್ಧರ||

ಪುತ್ರಿ! ಆದರೆ ಇದು ನಿನ್ನ ಮನಸ್ಸನ್ನು ಅವಲಂಬಿಸಿದೆ ಎಂದು ನನಗೆ ತಿಳಿದಿದೆ. ನಷ್ಟವಾಗುತ್ತಿರುವ ಭರತ ವಂಶವನ್ನು ಪುನಃ ಉದ್ಧರಿಸು.

01099048a ಪುತ್ರಂ ಜನಯ ಸುಶ್ರೋಣಿ ದೇವರಾಜಸಮಪ್ರಭಂ|

01099048c ಸ ಹಿ ರಾಜ್ಯಧುರಂ ಗುರ್ವೀಮುದ್ವಕ್ಷ್ಯತಿ ಕುಲಸ್ಯ ನಃ||

ಸುಶ್ರೋಣಿ! ದೇವರಾಜಸಮಪ್ರಭ ಪುತ್ರನಿಗೆ ಜನ್ಮನೀಡು. ಅವನೇ ಈ ಕುಲ ಮತ್ತು ರಾಜ್ಯಭಾರಗಳೆರಡರ ಭಾರವನ್ನೂ ಹೊರುತ್ತಾನೆ.”

01099049a ಸಾ ಧರ್ಮತೋಽನುನೀಯೈನಾಂ ಕಥಂ ಚಿದ್ಧರ್ಮಚಾರಿಣೀಂ|

01099049c ಭೋಜಯಾಮಾಸ ವಿಪ್ರಾಂಶ್ಚ ದೇವರ್ಷೀನತಿಥೀಂಸ್ತಥಾ||

ಆ ಧರ್ಮಚಾರಿಣಿಯನ್ನು ಹೇಗಾದರೂ ಮಾಡಿ ಧರ್ಮದೆಡೆಗೆ ಕೊಂಡೊಯ್ಯುವುದರಲ್ಲಿ ಯಶಸ್ವಿಯಾದ ಅವಳು ವಿಪ್ರರಿಗೂ ದೇವರ್ಷಿಗಳಿಗೂ ಅತಿಥಿಗಳಿಗೂ ಭೋಜನವನ್ನು ನೀಡಿದಳು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಸತ್ಯವಾತ್ಯುಪದೇಶೇ ನವನವತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಸತ್ಯವತೀ ಉಪದೇಶ ವಿಷಯಕ ತೊಂಭತ್ತೊಂಭತ್ತನೆಯ ಅಧ್ಯಾಯವು.

Comments are closed.