Adi Parva: Chapter 95

ಆದಿ ಪರ್ವ: ಸಂಭವ ಪರ್ವ

೯೫

ಚಿತ್ರಾಂಗದ

ಶಂತನು-ಸತ್ಯವತಿಯರಲ್ಲಿ ಚಿತ್ರಾಂಗದ-ವಿಚಿತ್ರವೀರ್ಯರ ಜನನ, ಶಂತನವಿನ ಮರಣ, ಚಿತ್ರಾಂಗದನ ಪಟ್ಟಾಭಿಷೇಕ (೧-೫). ತನ್ನದೇ ಹೆಸರಿನ ಗಂಧರ್ವನೊಡನೆ ಹೋರಾಡಿ ಚಿತ್ರಾಂಗದನ ಅಕಾಲ ಮರಣ (೬-೧೦). ಬಾಲಕ ವಿಚಿತ್ರವೀರ್ಯನಿಗೆ ಪಟ್ಟ (೧೧-೧೪).

01095001 ವೈಶಂಪಾಯನ ಉವಾಚ|

01095001a ತತೋ ವಿವಾಹೇ ನಿರ್ವೃತ್ತೇ ಸ ರಾಜಾ ಶಂತನುರ್ನೃಪಃ|

01095001c ತಾಂ ಕನ್ಯಾಂ ರೂಪಸಂಪನ್ನಾಂ ಸ್ವಗೃಹೇ ಸಂನ್ಯವೇಶಯತ್||

ವೈಶಂಪಾಯನನು ಹೇಳಿದನು: “ವಿವಾಹಕಾರ್ಯಗಳು ಮುಗಿದ ನಂತರ ನೃಪ ಶಂತನು ರಾಜನು ಆ ರೂಪಸಂಪನ್ನ ಕನ್ಯೆಯೊಂದಿಗೆ ಕೂಡಿ ತನ್ನ ಮನೆಯಲ್ಲಿ ವಾಸಿಸತೊಡಗಿದನು.

01095002a ತತಃ ಶಾಂತನವೋ ಧೀಮಾನ್ಸತ್ಯವತ್ಯಾಮಜಾಯತ|

01095002c ವೀರಶ್ಚಿತ್ರಾಂಗದೋ ನಾಮ ವೀರ್ಯೇಣ ಮನುಜಾನತಿ||

ಶಂತನುವಿಗೆ ಸತ್ಯವತಿಯು ವೀರತೆಯಲ್ಲಿ ಮನುಷ್ಯರೆಲ್ಲರನ್ನೂ ಮೀರಿದ ಚಿತ್ರಾಂಗದ ಎನ್ನುವ ಧೀಮಂತ ವೀರ ಪುತ್ರನಿಗೆ ಜನ್ಮವಿತ್ತಳು.

01095003a ಅಥಾಪರಂ ಮಹೇಷ್ವಾಸಂ ಸತ್ಯವತ್ಯಾಂ ಪುನಃ ಪ್ರಭುಃ|

01095003c ವಿಚಿತ್ರವೀರ್ಯಂ ರಾಜಾನಂ ಜನಯಾಮಾಸ ವೀರ್ಯವಾನ್||

ನಂತರ ಪುನಃ ಆ ಮಹೇಷ್ವಾಸ ಪ್ರಭುವು ಸತ್ಯವತಿಯಲ್ಲಿ ವಿಚಿತ್ರವೀರ್ಯನೆನ್ನುವ ವೀರ್ಯವಂತ ರಾಜಪುತ್ರನನ್ನು ಪಡೆದನು.

01095004a ಅಪ್ರಾಪ್ತವತಿ ತಸ್ಮಿಂಶ್ಚ ಯೌವನಂ ಭರತರ್ಷಭ|

01095004c ಸ ರಾಜಾ ಶಂತನುರ್ಧೀಮಾನ್ಕಾಲಧರ್ಮಮುಪೇಯಿವಾನ್||

ಭರತರ್ಷಭ! ಅವರು ಯೌವನವನ್ನು ಹೊಂದುವುದರೊಳಗೇ ಆ ಧೀಮಾನ್ ರಾಜ ಶಂತನುವು ಕಾಲಧರ್ಮಕ್ಕೊಳಗಾದನು.

01095005a ಸ್ವರ್ಗತೇ ಶಂತನೌ ಭೀಷ್ಮಶ್ಚಿತ್ರಾಂಗದಮರಿಂದಮಂ|

01095005c ಸ್ಥಾಪಯಾಮಾಸ ವೈ ರಾಜ್ಯೇ ಸತ್ಯವತ್ಯಾ ಮತೇ ಸ್ಥಿತಃ||

ಶಂತನುವು ಸ್ವರ್ಗವಾಸಿಯಾದ ನಂತರ ಭೀಷ್ಮನು, ಸತ್ಯವತಿಯ ಇಚ್ಛೆಯಂತೆ, ಅರಿಂದಮ ಚಿತ್ರಾಂಗದನನ್ನು ರಾಜಸಿಂಹಾಸನದಲ್ಲಿ ಕೂರಿಸಿದನು.

01095006a ಸ ತು ಚಿತ್ರಾಂಗದಃ ಶೌರ್ಯಾತ್ಸರ್ವಾಂಶ್ಚಿಕ್ಷೇಪ ಪಾರ್ಥಿವಾನ್|

01095006c ಮನುಷ್ಯಂ ನ ಹಿ ಮೇನೇ ಸ ಕಂ ಚಿತ್ಸದೃಶಮಾತ್ಮನಃ||

ಚಿತ್ರಾಂಗದನಾದರೂ ತನ್ನ ಶೌರ್ಯದಿಂದ ಪೃಥ್ವಿಯ ಸರ್ವ ಪಾರ್ಥಿವರನ್ನೂ ಮನುಷ್ಯರಲ್ಲಿ ತನ್ನ ಸದೃಶ ಯಾರೂ ಇಲ್ಲವೇನೋ ಎನ್ನುವಂತೆ ಗೆದ್ದನು.

01095007a ತಂ ಕ್ಷಿಪಂತಂ ಸುರಾಂಶ್ಚೈವ ಮನುಷ್ಯಾನಸುರಾಂಸ್ತಥಾ|

01095007c ಗಂಧರ್ವರಾಜೋ ಬಲವಾಂಸ್ತುಲ್ಯನಾಮಾಭ್ಯಯಾತ್ತದಾ|

01095007e ತೇನಾಸ್ಯ ಸುಮಹದ್ಯುದ್ಧಂ ಕುರುಕ್ಷೇತ್ರೇ ಬಭೂವ ಹ||

01095008a ತಯೋರ್ಬಲವತೋಸ್ತತ್ರ ಗಂಧರ್ವಕುರುಮುಖ್ಯಯೋಃ|

01095008c ನದ್ಯಾಸ್ತೀರೇ ಹಿರಣ್ವತ್ಯಾಃ ಸಮಾಸ್ತಿಸ್ರೋಽಭವದ್ರಣಃ||

ಈ ರೀತಿ ಅವನು ಎಲ್ಲ ಸುರರು, ಮನುಷ್ಯರು, ಅಸುರರೆಲ್ಲರನ್ನೂ ಗೆದ್ದಾಗ, ಅದೇ ಹೆಸರನ್ನು ಪಡೆದಿದ್ದ, ಬಲವಂತ ಗಂಧರ್ವರಾಜನು ಅವನನ್ನು ಎದುರಿಸಿದನು. ಅವರೀರ್ವರ ಮಧ್ಯೆ ಕುರುಕ್ಷೇತ್ರದಲ್ಲಿ ಮಹಾ ಯುದ್ಧವೇ ನಡೆಯಿತು. ಆ ಬಲವಂತ ಗಂಧರ್ವ-ಕುರುಮುಖ್ಯರ ನಡುವೆ ಹಿರಣ್ವತೀ ನದೀತೀರದಲ್ಲಿ ಮೂರು ವರ್ಷಗಳ ಕಾಲ ಯುದ್ಧ ನಡೆಯಿತು.

01095009a ತಸ್ಮಿನ್ವಿಮರ್ದೇ ತುಮುಲೇ ಶಸ್ತ್ರವೃಷ್ಟಿಸಮಾಕುಲೇ|

01095009c ಮಾಯಾಧಿಕೋಽವಧೀದ್ವೀರಂ ಗಂಧರ್ವಃ ಕುರುಸತ್ತಮಂ||

ಒಂದೇ ಸಮನೆ ಶಸ್ತ್ರವೃಷ್ಟಿಯಾಗುತ್ತಿದ್ದ ಆ ಘೋರ ಯುದ್ಧದಲ್ಲಿ ಅಧಿಕ ಮಾಯೆಯ ವೀರ ಗಂಧರ್ವನು ಕುರುಸತ್ತಮನನ್ನು ವಧಿಸಿದನು.

01095010a ಚಿತ್ರಾಂಗದಂ ಕುರುಶ್ರೇಷ್ಠಂ ವಿಚಿತ್ರಶರಕಾರ್ಮುಕಂ|

01095010c ಅಂತಾಯ ಕೃತ್ವಾ ಗಂಧರ್ವೋ ದಿವಮಾಚಕ್ರಮೇ ತತಃ||

ವಿಚಿತ್ರ ಶರಕಾರ್ಮುಕ ಕುರುಶ್ರೇಷ್ಠ ಚಿತ್ರಾಂಗದನನ್ನು ಕೊನೆಗೊಳಿಸಿ ಗಂಧರ್ವನು ದೇವಲೋಕವನ್ನು ಸೇರಿದನು.

01095011a ತಸ್ಮಿನ್ನೃಪತಿಶಾರ್ದೂಲೇ ನಿಹತೇ ಭೂರಿವರ್ಚಸಿ|

01095011c ಭೀಷ್ಮಃ ಶಾಂತನವೋ ರಾಜನ್ಪ್ರೇತಕಾರ್ಯಾಣ್ಯಕಾರಯತ್||

ರಾಜನ್! ಆ ಭೂರಿವರ್ಚಸ ನೃಪತಿಶಾರ್ದೂಲನು ತೀರಿಕೊಂಡ ನಂತರ ಬೀಷ್ಮ ಶಾಂತನವನು ಅವನ ಪ್ರೇತಕಾರ್ಯಗಳನ್ನು ನೆರವೇರಿಸಿದನು.

01095012a ವಿಚಿತ್ರವೀರ್ಯಂ ಚ ತದಾ ಬಾಲಮಪ್ರಾಪ್ತಯೌವನಂ|

01095012c ಕುರುರಾಜ್ಯೇ ಮಹಾಬಾಹುರಭ್ಯಷಿಂಚದನಂತರಂ||

ಆ ಮಹಾಬಾಹುವು ಇನ್ನೂ ಯೌವನವನ್ನು ಪಡೆಯದಿದ್ದ ಬಾಲಕ ವಿಚಿತ್ರವೀರ್ಯನನ್ನು ಕುರುರಾಜನನ್ನಾಗಿ ಅಭಿಷೇಕಿಸಿದನು.

01095013a ವಿಚಿತ್ರವೀರ್ಯಸ್ತು ತದಾ ಭೀಷ್ಮಸ್ಯ ವಚನೇ ಸ್ಥಿತಃ|

01095013c ಅನ್ವಶಾಸನ್ಮಹಾರಾಜ ಪಿತೃಪೈತಾಮಹಂ ಪದಂ||

ಮಹಾರಾಜ! ವಿಚಿತ್ರವೀರ್ಯನಾದರೂ ಭೀಷ್ಮನ ವಚನವನ್ನು ಪರಿಪಾಲಿಸುತ್ತಾ ತನ್ನ ಪಿತ-ಪಿತಾಮಹರ ರಾಜ್ಯವನ್ನು ಆಳಿದನು.

01095014a ಸ ಧರ್ಮಶಾಸ್ತ್ರಕುಶಲೋ ಭೀಷ್ಮಂ ಶಾಂತನವಂ ನೃಪಃ|

01095014c ಪೂಜಯಾಮಾಸ ಧರ್ಮೇಣ ಸ ಚೈನಂ ಪ್ರತ್ಯಪಾಲಯತ್||

ಆ ಧರ್ಮಶಾಸ್ತ್ರಕುಶಲ ನೃಪನು ಭೀಷ್ಮ ಶಾಂತನವನನ್ನು ಪೂಜಿಸುತ್ತಾ ಧರ್ಮದಿಂದ ರಾಜ್ಯವಾಳಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಚಿತ್ರಾಂಗದೋಪಾಖ್ಯಾನೇ ಪಂಚನವತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಚಿಂತ್ರಾಂಗದೋಪಾಖ್ಯಾನ ವಿಷಯಕ ತೊಂಭತ್ತೈದನೆಯ ಅಧ್ಯಾಯವು.

Comments are closed.