Adi Parva: Chapter 81

ಆದಿ ಪರ್ವ: ಸಂಭವ ಪರ್ವ

೮೧

ಯಯಾತಿಯು ಸ್ವರ್ಗದಿಂದ ಬಿದ್ದುದನ್ನು ಹೇಳಲು ಜನಮೇಜಯನು ಉತ್ತರ ಯಯಾತಿ ಚರಿತೆಯನ್ನು ವಿಸ್ತಾರವಾಗಿ ಹೇಳುವಂತೆ ವೈಶಂಪಾಯನನಲ್ಲಿ ಕೇಳಿಕೊಳ್ಳುವುದು (೧-೯). ಯಯಾತಿಯು ವಾನಪ್ರಸ್ಥದಲ್ಲಿ ಹಲವಾರು ಕಠಿಣ ವ್ರತ ತಪಸ್ಸುಗಳನ್ನು ಕೈಗೊಂಡು ತನ್ನ ಪುಣ್ಯದಿಂದ ಸ್ವರ್ಗವನ್ನೇರಿದುದು (೧೦-೧೬).

01081001 ವೈಶಂಪಾಯನ ಉವಾಚ|

01081001a ಏವಂ ಸ ನಾಹುಷೋ ರಾಜಾ ಯಯಾತಿಃ ಪುತ್ರಮೀಪ್ಸಿತಂ|

01081001c ರಾಜ್ಯೇಽಭಿಷಿಚ್ಯ ಮುದಿತೋ ವಾನಪ್ರಸ್ಥೋಽಭವನ್ಮುನಿಃ||

ವೈಶಂಪಾಯನನು ಹೇಳಿದನು: “ಈ ರೀತಿ ನಾಹುಷ ರಾಜ ಯಯಾತಿಯು ಪ್ರಿಯಪುತ್ರನಿಗೆ ರಾಜ್ಯಾಭಿಷೇಕ ಮಾಡಿ ಸಂತೋಷದಿಂದ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಮುನಿಯಾದನು.

01081002a ಉಷಿತ್ವಾ ಚ ವನೇ ವಾಸಂ ಬ್ರಾಹ್ಮಣೈಃ ಸಹ ಸಂಶ್ರಿತಃ|

01081002c ಫಲಮೂಲಾಶನೋ ದಾಂತೋ ಯಥಾ ಸ್ವರ್ಗಮಿತೋ ಗತಃ||

ತನ್ನೊಡನೆ ಬಂದಿದ್ದ ಬ್ರಾಹ್ಮಣರೊಂದಿಗೆ ವನದಲ್ಲಿ ವಾಸಿಸಿ, ಫಲಮೂಲಗಳನ್ನು ತಿನ್ನುತ್ತಾ ಸಂಶ್ರಿತನಾಗಿ ಸ್ವರ್ಗವನ್ನು ಸೇರಿದನು.

01081003a ಸ ಗತಃ ಸುರವಾಸಂ ತಂ ನಿವಸನ್ಮುದಿತಃ ಸುಖಂ|

01081003c ಕಾಲಸ್ಯ ನಾತಿಮಹತಃ ಪುನಃ ಶಕ್ರೇಣ ಪಾತಿತಃ||

ಅವನು ಸ್ವರ್ಗದಲ್ಲಿ ಸುಖ ಸಂತೋಷಗಳಿಂದ ವಾಸಿಸಿದನು. ಆದರೆ ಇನ್ನೂ ಹೆಚ್ಚು ಸಮಯ ಕಳೆಯುವುದರೊಳಗೇ ಶಕ್ರನಿಂದ ಪುನಃ ಕೆಳಗುರುಳಿಸಲ್ಪಟ್ಟನು.

01081004a ನಿಪತನ್ಪ್ರಚ್ಯುತಃ ಸ್ವರ್ಗಾದಪ್ರಾಪ್ತೋ ಮೇದಿನೀತಲಂ|

01081004c ಸ್ಥಿತ ಆಸೀದಂತರಿಕ್ಷೇ ಸ ತದೇತಿ ಶ್ರುತಂ ಮಯಾ||

ಅವನು ಸ್ವರ್ಗವನ್ನು ಬಿಟ್ಟು ಕೆಳಗೆ ಬಿದ್ದು ಮೇದಿನಿತಲವು ಸಿಕ್ಕದೇ ಅಂತರಿಕ್ಷದಲ್ಲಿಯೇ ನಿಂತುಬಿಟ್ಟ ಎಂದು ಕೇಳಿದ್ದೇನೆ.

01081005a ತತ ಏವ ಪುನಶ್ಚಾಪಿ ಗತಃ ಸ್ವರ್ಗಮಿತಿ ಶ್ರುತಿಃ|

01081005c ರಾಜ್ಞಾ ವಸುಮತಾ ಸಾರ್ಧಮಷ್ಟಕೇನ ಚ ವೀರ್ಯವಾನ್|

01081005e ಪ್ರತರ್ದನೇನ ಶಿಬಿನಾ ಸಮೇತ್ಯ ಕಿಲ ಸಂಸದಿ||

ನಂತರ ಪುನಃ ಆ ವೀರ್ಯವಂತನು ವಸುಮತಿ, ಅಷ್ಟಕ, ಶಿಬಿ ಮತ್ತು ಪ್ರತರ್ದನ[1] ಮೊದಲಾದ ರಾಜರ ಸಂಘದಿಂದ ಅವರ ಜೊತೆಗೇ ಸ್ವರ್ಗವನ್ನು ಸೇರಿದನು ಎಂದೂ ಕೇಳಿದ್ದೇನೆ.”

01081006 ಜನಮೇಜಯ ಉವಾಚ|

01081006a ಕರ್ಮಣಾ ಕೇನ ಸ ದಿವಂ ಪುನಃ ಪ್ರಾಪ್ತೋ ಮಹೀಪತಿಃ|

01081006c ಸರ್ವಮೇತದಶೇಷೇಣ ಶ್ರೋತುಮಿಚ್ಛಾಮಿ ತತ್ತ್ವತಃ|

01081006e ಕಥ್ಯಮಾನಂ ತ್ವಯಾ ವಿಪ್ರ ವಿಪ್ರರ್ಷಿಗಣಸನ್ನಿಧೌ||

ಜನಮೇಜಯನು ಹೇಳಿದನು: “ಆ ಮಹೀಪತಿಯು ಯಾವ ಕರ್ಮಗಳಿಂದ ಪುನಃ ಸ್ವರ್ಗವನ್ನು ಪಡೆದನು? ವಿಪ್ರ! ಅವೆಲ್ಲವನ್ನೂ ಸಂಪೂರ್ಣವಾಗಿ ಈ ವಿಪ್ರರ್ಷಿಗಣಸನ್ನಿಧಿಯಲ್ಲಿ ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.

01081007a ದೇವರಾಜಸಮೋ ಹ್ಯಾಸೀದ್ಯಯಾತಿಃ ಪೃಥಿವೀಪತಿಃ|

01081007c ವರ್ಧನಃ ಕುರುವಂಶಸ್ಯ ವಿಭಾವಸುಸಮದ್ಯುತಿಃ||

ಪೃಥಿವೀಪತಿ ಯಯಾತಿಯು ದೇವರಾಜಸಮನಾಗಿದ್ದನು ಮತ್ತು ದ್ಯುತಿಯಲ್ಲಿ ವಿಭಾವಸುವಂತೆ ಕುರುವಂಶವನ್ನು ವರ್ಧಿಸಿದನು.

01081008a ತಸ್ಯ ವಿಸ್ತೀರ್ಣಯಶಸಃ ಸತ್ಯಕೀರ್ತೇರ್ಮಹಾತ್ಮನಃ|

01081008c ಚರಿತಂ ಶ್ರೋತುಮಿಚ್ಛಾಮಿ ದಿವಿ ಚೇಹ ಚ ಸರ್ವಶಃ||

ಆ ವಿಸ್ತೀರ್ಣಯಶಸ್ವಿ ಸತ್ಯಕೀರ್ತಿ ಮಹಾತ್ಮನ ಇಲ್ಲಿಯ ಮತ್ತು ದಿವಿಯಲ್ಲಿಯ ಚರಿತವೆಲ್ಲವನ್ನೂ ಕೇಳಲು ಬಯಸುತ್ತೇನೆ.”

01081009 ವೈಶಂಪಾಯನ ಉವಾಚ|

01081009a ಹಂತ ತೇ ಕಥಯಿಷ್ಯಾಮಿ ಯಯಾತೇರುತ್ತರಾಂ ಕಥಾಂ|

01081009c ದಿವಿ ಚೇಹ ಚ ಪುಣ್ಯಾರ್ಥಾಂ ಸರ್ವಪಾಪಪ್ರಣಾಶಿನೀಂ||

ವೈಶಂಪಾಯನನು ಹೇಳಿದನು: “ಹಾಗಿದ್ದರೆ ನಿನಗೆ ಇಲ್ಲಿಯೂ ಮತ್ತು ದಿವಿಯಲ್ಲಿಯೂ ಪುಣ್ಯವನ್ನು ನೀಡುವ, ಸರ್ವಪಾಪವನ್ನೂ ನಾಶಪಡಿಸಬಲ್ಲ ಯಯಾತಿಯ ಉತ್ತರ ಕಥೆಯನ್ನು ಹೇಳುತ್ತೇನೆ.

01081010a ಯಯಾತಿರ್ನಾಹುಷೋ ರಾಜಾ ಪೂರುಂ ಪುತ್ರಂ ಕನೀಯಸಂ|

01081010c ರಾಜ್ಯೇಽಭಿಷಿಚ್ಯ ಮುದಿತಃ ಪ್ರವವ್ರಾಜ ವನಂ ತದಾ||

01081011a ಅಂತೇಷು ಸ ವಿನಿಕ್ಷಿಪ್ಯ ಪುತ್ರಾನ್ಯದುಪುರೋಗಮಾನ್|

ನಾಹುಷ ರಾಜಾ ಯಯಾತಿಯು ತನ್ನ ಕಿರಿಯ ಮಗ ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡಿ ಸಂತೋಷಗೊಂಡು ವನಕ್ಕೆ ತೆರಳಿದನು. ಯದುವೇ ಮೊದಲಾದ ಮಕ್ಕಳನ್ನು ಗಡಿಯಿಂದ ಹೊರಹಾಕಿದ್ದನು.

01081011c ಫಲಮೂಲಾಶನೋ ರಾಜಾ ವನೇ ಸನ್ನ್ಯವಸಚ್ಚಿರಂ||

01081012a ಸಂಶಿತಾತ್ಮಾ ಜಿತಕ್ರೋಧಸ್ತರ್ಪಯನ್ಪಿತೃದೇವತಾಃ|

01081012c ಅಗ್ನೀಂಶ್ಚ ವಿಧಿವಜುಹ್ವವನ್ವಾನಪ್ರಸ್ಥವಿಧಾನತಃ||

ವನದಲ್ಲಿ ರಾಜನು ವಾನಪ್ರಸ್ಥವಿಧಾನದಂತೆ ಫಲಮೂಲಗಳನ್ನು ಸೇವಿಸುತ್ತಾ, ಸಂಶಿತಾತ್ಮನಾಗಿ, ಜಿತಕ್ರೋಧನಾಗಿ, ಪಿತೃ-ದೇವತೆಗಳನ್ನು ತೃಪ್ತಿಗೊಳಿಸುತ್ತಾ, ವಿಧಿವತ್ತಾಗಿ ಅಗ್ನಿಯಲ್ಲಿ ಹೋಮಮಾಡುತ್ತಾ ಬಹಳ ಸಮಯ ವಾಸಿಸಿದನು.

01081013a ಅತಿಥೀನ್ಪೂಜಯಾಮಾಸ ವನ್ಯೇನ ಹವಿಷಾ ವಿಭುಃ|

01081013c ಶಿಲೋಂಚವೃತ್ತಿಮಾಸ್ಥಾಯ ಶೇಷಾನ್ನಕೃತಭೋಜನಃ||

ವನ್ಯ ವಸ್ತುಗಳಿಂದ ವಿಭುವು ಅತಿಥಿಗಳನ್ನು ಪೂಜಿಸಿದನು. ಭಿಕ್ಷುಕನ ವೃತ್ತಿಯನ್ನು ಅನುಸರಿಸಿ ಇತರರ ಭೋಜನದಿಂದ ಉಳಿದ ಆಹಾರವನ್ನು ಸೇವಿಸುತ್ತಿದ್ದನು.

01081014a ಪೂರ್ಣಂ ವರ್ಷಸಹಸ್ರಂ ಸ ಏವಂವೃತ್ತಿರಭೂನ್ನೃಪಃ|

01081014c ಅಬ್ಭಕ್ಷಃ ಶರದಸ್ತ್ರಿಂಶದಾಸೀನ್ನಿಯತವಾಙ್ಮನಾಃ||

ಈ ವೃತ್ತಿಯನ್ನನುಸರಿಸಿ ನೃಪನು ಒಂದು ಸಾವಿರ ವರ್ಷಗಳನ್ನು ಪೂರ್ಣಗೊಳಿಸಿದನು. ಮೂರು ಶರದಗಳನ್ನು ಮಾತು ಮತ್ತು ಮನಸ್ಸುಗಳನ್ನು ನಿಯಂತ್ರಣದಲಿಟ್ಟುಕೊಂಡು ಕೇವಲ ನೀರನ್ನು ಸೇವಿಸಿ ವಾಸಿಸಿದನು.

01081015a ತತಶ್ಚ ವಾಯುಭಕ್ಷೋಽಭೂತ್ಸಂವತ್ಸರಮತಂದ್ರಿತಃ|

01081015c ಪಂಚಾಗ್ನಿಮಧ್ಯೇ ಚ ತಪಸ್ತೇಪೇ ಸಂವತ್ಸರಂ ನೃಪಃ||

ಆಯಾಸಗೊಳ್ಳದೇ ಅವನು ಒಂದು ವರ್ಷ ಕೇವಲ ವಾಯುಸೇವನೆಯಿಂದ ಜೀವಿಸಿದನು. ಇನ್ನೊಂದು ವರ್ಷ ಆ ನೃಪನು ಪಂಚಾಗ್ನಿಗಳ ಮಧ್ಯೆ ತಪಸ್ಸನ್ನು ತಪಿಸಿದನು.

01081016a ಏಕಪಾದಸ್ಥಿತಶ್ಚಾಸೀತ್ಷಣ್ಮಾಸಾನನಿಲಾಶನಃ|

01081016c ಪುಣ್ಯಕೀರ್ತಿಸ್ತತಃ ಸ್ವರ್ಗಂ ಜಗಾಮಾವೃತ್ಯ ರೋದಸೀ||

ಆರು ತಿಂಗಳು ಅವನು ವಾಯುವನ್ನು ಸೇವಿಸುತ್ತಾ ಒಂದೇ ಕಾಲಮೇಲೆ ನಿಂತಿದ್ದನು. ಹೀಗೆ ಭೂಮಿ ಸ್ವರ್ಗಗಳನ್ನು ತನ್ನ ಪುಣ್ಯಕೀರ್ತಿಯಿಂದ ತುಂಬಿಸಿ ಅವನು ಸ್ವರ್ಗವನ್ನೇರಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಏಕಾಶೀತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತೊಂದನೆಯ ಅಧ್ಯಾಯವು.

[1] ಈ ನಾಲ್ವರು ರಾಜರು ಯಯಾತಿಯ ಮಗಳು ಮಾಧವಿಯ ಮಕ್ಕಳು. ಇವರ ಹುಟ್ಟಿನ ಕುರಿತು ಉದ್ಯೋಗಪರ್ವದ ಭಗವದ್ಯಾನಪರ್ವದ ಗಾಲವ ಚರಿತೆ (ಉದ್ಯೋಗಪರ್ವ, ಅಧ್ಯಾಯ ೧೦೪-೧೨೧) ಯಲ್ಲಿ ಬರುತ್ತದೆ.

Comments are closed.