ಕರ್ಣ ಪರ್ವ
೩೪
ಕರ್ಣ-ಭೀಮಸೇನರ ಯುದ್ಧ; ಕರ್ಣನ ಪರಾಜಯ (೧-೪೨).
08034001 ಸಂಜಯ ಉವಾಚ|
08034001a ತಾನಭಿದ್ರವತೋ ದೃಷ್ಟ್ವಾ ಪಾಂಡವಾಂಸ್ತಾವಕಂ ಬಲಂ|
08034001c ಕ್ರೋಶತಸ್ತವ ಪುತ್ರಸ್ಯ ನ ಸ್ಮ ರಾಜನ್ನ್ಯವರ್ತತ||
ಸಂಜಯನು ಹೇಳಿದನು: “ರಾಜನ್! ಪಾಂಡವರು ಓಡಿಸಿಕೊಂಡು ಹೋಗುತ್ತಿದ್ದ ನಿನ್ನವರು ನಿನ್ನ ಮಗನು ಎಷ್ಟೇ ಕೂಗಿಕೊಂಡರೂ ಹಿಂದಿರುಗಲಿಲ್ಲ.
08034002a ತತಃ ಪಕ್ಷಾತ್ಪ್ರಪಕ್ಷಾಚ್ಚ ಪ್ರಪಕ್ಷೈಶ್ಚಾಪಿ ದಕ್ಷಿಣಾತ್|
08034002c ಉದಸ್ತಶಸ್ತ್ರಾಃ ಕುರವೋ ಭೀಮಮಭ್ಯದ್ರವನ್ರಣೇ||
ಆಗ ಪಕ್ಷ-ಪ್ರಪಕ್ಷಗಳಲ್ಲಿದ್ದ ಕುರುಗಳು ಸಶಸ್ತ್ರರಾಗಿ ರಣದಲ್ಲಿ ಭೀಮನನ್ನು ಆಕ್ರಮಣಿಸಿದರು.
08034003a ಕರ್ಣೋಽಪಿ ದೃಷ್ಟ್ವಾ ದ್ರವತೋ ಧಾರ್ತರಾಷ್ಟ್ರಾನ್ಪರಾಙ್ಮುಖಾನ್|
08034003c ಹಂಸವರ್ಣಾನ್ ಹಯಾಗ್ರ್ಯಾಂಸ್ತಾನ್ ಪ್ರೈಷೀದ್ಯತ್ರ ವೃಕೋದರಂ||
ಧಾರ್ತರಾಷ್ಟ್ರರು ಪರಾಙ್ಮುಖರಾಗಿ ಓಡುತ್ತಿರುವುದನ್ನು ನೋಡಿ ಕರ್ಣನೂ ಕೂಡ ಹಂಸವರ್ಣದ ಕುದುರೆಗಳಿಗೆ ವೃಕೋದರನಿದ್ದಲ್ಲಿಗೆ ಹೋಗುವಂತೆ ಹೇಳಿದನು.
08034004a ತೇ ಪ್ರೇಷಿತಾ ಮಹಾರಾಜ ಶಲ್ಯೇನಾಹವಶೋಭಿನಾ|
08034004c ಭೀಮಸೇನರಥಂ ಪ್ರಾಪ್ಯ ಸಮಸಜ್ಜಂತ ವಾಜಿನಃ||
ಮಹಾರಾಜ! ಆಹವಶೋಭೀ ಶಲ್ಯನಿಂದ ಪ್ರಚೋದಿತಗೊಂಡ ಆ ಕುದುರೆಗಳು ಭೀಮಸೇನನ ರಥವನ್ನು ತಲುಪಿ ಅವನ ಕುದುರೆಗಳೊಂದಿಗೆ ಮಿಳಿತವಾದವು.
08034005a ದೃಷ್ಟ್ವಾ ಕರ್ಣಂ ಸಮಾಯಾಂತಂ ಭೀಮಃ ಕ್ರೋಧಸಮನ್ವಿತಃ|
08034005c ಮತಿಂ ದಧ್ರೇ ವಿನಾಶಾಯ ಕರ್ಣಸ್ಯ ಭರತರ್ಷಭ||
ಭರತರ್ಷಭ! ತನ್ನ ಬಳಿ ಬರುತ್ತಿದ್ದ ಕರ್ಣನನ್ನು ನೋಡಿ ಕ್ರೋಧಸಮನ್ವಿತ ಭೀಮನು ಕರ್ಣನ ವಿನಾಶಗೊಳಿಸಬೇಕೆಂದೇ ನಿರ್ಧರಿಸಿದನು.
08034006a ಸೋಽಬ್ರವೀತ್ಸಾತ್ಯಕಿಂ ವೀರಂ ಧೃಷ್ಟದ್ಯುಮ್ನಂ ಚ ಪಾರ್ಷತಂ|
08034006c ಏನಂ ರಕ್ಷತ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಂ|
08034006e ಸಂಶಯಾನ್ಮಹತೋ ಮುಕ್ತಂ ಕಥಂ ಚಿತ್ಪ್ರೇಕ್ಷತೋ ಮಮ||
ಅವನು ವೀರ ಸಾತ್ಯಕಿಗೂ ಪಾರ್ಷತ ಧೃಷ್ಟದ್ಯುಮ್ನನಿಗೂ ಹೇಳಿದನು: “ನನ್ನ ಕಣ್ಣೆದುರಿಗೇ ಮಹಾಸಂಕಟದಿಂದ ಮುಕ್ತನಾದಂತೆ ತೋರುತ್ತಿರುವ ಧರ್ಮಾತ್ಮ ರಾಜಾ ಯುಧಿಷ್ಠಿರನನ್ನು ರಕ್ಷಿಸಿ.
08034007a ಅಗ್ರತೋ ಮೇ ಕೃತೋ ರಾಜಾ ಚಿನ್ನಸರ್ವಪರಿಚ್ಚದಃ|
08034007c ದುರ್ಯೋಧನಸ್ಯ ಪ್ರೀತ್ಯರ್ಥಂ ರಾಧೇಯೇನ ದುರಾತ್ಮನಾ||
ನನ್ನ ಎದುರಿಗೇ ದುರಾತ್ಮ ಕರ್ಣನು ದುರ್ಯೋಧನನ ಪ್ರೀತ್ಯರ್ಥವಾಗಿ ರಾಜ ಯುಧಿಷ್ಠಿರನನ್ನು ಸಕಲವಿಧಧ ಯುದ್ಧ ಸಾಮಗ್ರಿಗಳಿಂದ ವಿಹೀನನ್ನಾಗಿ ಮಾಡಿದ್ದಾನೆ!
08034008a ಅಂತಮದ್ಯ ಕರಿಷ್ಯಾಮಿ ತಸ್ಯ ದುಃಖಸ್ಯ ಪಾರ್ಷತ|
08034008c ಹಂತಾ ವಾಸ್ಮಿ ರಣೇ ಕರ್ಣಂ ಸ ವಾ ಮಾಂ ನಿಹನಿಷ್ಯತಿ|
08034008e ಸಂಗ್ರಾಮೇಣ ಸುಘೋರೇಣ ಸತ್ಯಮೇತದ್ಬ್ರವೀಮಿ ವಃ||
ಪಾರ್ಷತ! ಇಂದು ಯುಧಿಷ್ಠಿರನ ದುಃಖವನ್ನು ಅಂತ್ಯಗೊಳಿಸುತ್ತೇನೆ. ಘೋರ ಸಂಗ್ರಾಮ ರಣದಲ್ಲಿ ಕರ್ಣನನ್ನು ನಾನು ಕೊಲ್ಲುತ್ತೇನೆ ಅಥವಾ ಅವನು ನನ್ನನ್ನು ಸಂಹರಿಸುತ್ತಾನೆ. ಸತ್ಯವನ್ನೇ ನಾನು ಹೇಳುತ್ತಿದ್ದೇನೆ!
08034009a ರಾಜಾನಮದ್ಯ ಭವತಾಂ ನ್ಯಾಸಭೂತಂ ದದಾಮಿ ವೈ|
08034009c ಅಸ್ಯ ಸಂರಕ್ಷಣೇ ಸರ್ವೇ ಯತಧ್ವಂ ವಿಗತಜ್ವರಾಃ||
ಇಂದು ರಾಜನನ್ನು ನಿಮ್ಮಲ್ಲಿ ನ್ಯಾಸಭೂತವಾಗಿ ಇಡುತ್ತಿದ್ದೇನೆ. ನೀವು ವಿಗತಜ್ವರರಾಗಿ ಇವನ ಸಂರಕ್ಷಣೆಗೆ ಸರ್ವ ಪ್ರಯತ್ನವನ್ನೂ ಮಾಡಿರಿ!”
08034010a ಏವಮುಕ್ತ್ವಾ ಮಹಾಬಾಹುಃ ಪ್ರಾಯಾಮಾಧಿರಥಿಂ ಪ್ರತಿ|
08034010c ಸಿಂಹನಾದೇನ ಮಹತಾ ಸರ್ವಾಃ ಸಂನಾದಯನ್ದಿಶಃ||
ಹೀಗೆ ಹೇಳಿ ಆ ಮಹಾಬಾಹುವು ಮಹಾ ಸಿಂಹನಾದದಿಂದ ದಿಕ್ಕುಗಳೆಲ್ಲವನ್ನೂ ಮೊಳಗಿಸಿ ಆಧಿರಥಿ ಕರ್ಣನ ಬಳಿಸಾರಿದನು.
08034011a ದೃಷ್ಟ್ವಾ ತ್ವರಿತಮಾಯಾಂತಂ ಭೀಮಂ ಯುದ್ಧಾಭಿನಂದಿನಂ|
08034011c ಸೂತಪುತ್ರಮಥೋವಾಚ ಮದ್ರಾಣಾಮೀಶ್ವರೋ ವಿಭುಃ||
ಯುದ್ಧಾಭಿನಂದಿನಿ ಭೀಮನು ತ್ವರೆಮಾಡಿ ಬರುತ್ತಿರುವುದನ್ನು ನೋಡಿ ವಿಭೂ ಮದ್ರರಾಜನು ಸೂತಪುತ್ರನಿಗೆ ಹೀಗೆಂದನು:
08034012a ಪಶ್ಯ ಕರ್ಣ ಮಹಾಬಾಹುಂ ಕ್ರುದ್ಧಂ ಪಾಂಡವನಂದನಂ|
08034012c ದೀರ್ಘಕಾಲಾರ್ಜಿತಂ ಕ್ರೋಧಂ ಮೋಕ್ತುಕಾಮಂ ತ್ವಯಿ ಧ್ರುವಂ||
“ಕರ್ಣ! ದೀರ್ಘಕಾಲದಿಂದಲೂ ಕೂಡಿಟ್ಟುಕೊಂಡಿರುವ ಕ್ರೋಧವನ್ನು ನಿನ್ನ ಮೇಲೆ ಸುರಿಸಲು ನಿಶ್ಚಯಿಸಿರುವ ಕ್ರುದ್ಧ ಮಹಾಬಾಹು ಪಾಂಡವನಂದನನ್ನು ನೋಡು!
08034013a ಈದೃಶಂ ನಾಸ್ಯ ರೂಪಂ ಮೇ ದೃಷ್ಟಪೂರ್ವಂ ಕದಾ ಚನ|
08034013c ಅಭಿಮನ್ಯೌ ಹತೇ ಕರ್ಣ ರಾಕ್ಷಸೇ ವಾ ಘಟೋತ್ಕಚೇ||
ಕರ್ಣ! ಹಿಂದೆಂದೂ - ಅಭಿಮನ್ಯು ಅಥವಾ ರಾಕ್ಷಸ ಘಟೋತ್ಕಚರು ಹತರಾದಾಗಲೂ - ಇವನ ಇಂತಹ ರೂಪವನ್ನು ನಾನು ಕಂಡಿರಲಿಲ್ಲ!
08034014a ತ್ರೈಲೋಕ್ಯಸ್ಯ ಸಮಸ್ತಸ್ಯ ಶಕ್ತಃ ಕ್ರುದ್ಧೋ ನಿವಾರಣೇ|
08034014c ಬಿಭರ್ತಿ ಯಾದೃಶಂ ರೂಪಂ ಕಾಲಾಗ್ನಿಸದೃಶಂ ಶುಭಂ||
ಕ್ರುದ್ಧನಾಗಿ ಕಾಲಾಗ್ನಿ ಸದೃಶ ಶುಭ ರೂಪವನ್ನು ತಾಳಿರುವ ಇವನು ತ್ರೈಲೋಕ್ಯದ ಸರ್ವವನ್ನೂ ನಿವಾರಿಸಲು ಶಕ್ತನಾಗಿದ್ದಾನೆ.”
08034015a ಇತಿ ಬ್ರುವತಿ ರಾಧೇಯಂ ಮದ್ರಾಣಾಮೀಶ್ವರೇ ನೃಪ|
08034015c ಅಭ್ಯವರ್ತತ ವೈ ಕರ್ಣಂ ಕ್ರೋಧದೀಪ್ತೋ ವೃಕೋದರಃ||
ನೃಪ! ಮದ್ರರಾಜನು ರಾಧೇಯನಿಗೆ ಹೀಗೆ ಹೇಳುತ್ತಿರಲು ಕ್ರೋಧದೀಪ್ತ ಕರ್ಣನು ವೃಕೋದರನನ್ನು ಎದುರಿಸಿದನು.
08034016a ತಥಾಗತಂ ತು ಸಂಪ್ರೇಕ್ಷ್ಯ ಭೀಮಂ ಯುದ್ಧಾಭಿನಂದಿನಂ|
08034016c ಅಬ್ರವೀದ್ವಚನಂ ಶಲ್ಯಂ ರಾಧೇಯಃ ಪ್ರಹಸನ್ನಿವ||
ಅಲ್ಲಿದ್ದ ಯುದ್ಧಾಭಿನಂದನ ಭೀಮನನ್ನು ನೋಡಿ ರಾಧೇಯನು ನಗುತ್ತಿರುವನೋ ಎನ್ನುವಂತೆ ಶಲ್ಯನಿಗೆ ಇಂತೆಂದನು:
08034017a ಯದುಕ್ತಂ ವಚನಂ ಮೇಽದ್ಯ ತ್ವಯಾ ಮದ್ರಜನೇಶ್ವರ|
08034017c ಭೀಮಸೇನಂ ಪ್ರತಿ ವಿಭೋ ತತ್ಸತ್ಯಂ ನಾತ್ರ ಸಂಶಯಃ||
“ವಿಭೋ! ಮದ್ರಜನೇಶ್ವರ! ಇಂದು ಭೀಮಸೇನನ ಕುರಿತು ನೀನು ನನಗೆ ಹೇಳುತ್ತಿರುವುದು ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ.
08034018a ಏಷ ಶೂರಶ್ಚ ವೀರಶ್ಚ ಕ್ರೋಧನಶ್ಚ ವೃಕೋದರಃ|
08034018c ನಿರಪೇಕ್ಷಃ ಶರೀರೇ ಚ ಪ್ರಾಣತಶ್ಚ ಬಲಾಧಿಕಃ||
ವೃಕೋದರನು ಶೂರ, ವೀರ, ಕೋಪಿಷ್ಟ. ಶರೀರ ಮತ್ತು ಪ್ರಾಣಗಳ ಭಯವನ್ನು ತೊರೆದವನು ಮತ್ತು ಬಲದಲ್ಲಿ ಅತ್ಯಧಿಕನು.
08034019a ಅಜ್ಞಾತವಾಸಂ ವಸತಾ ವಿರಾಟನಗರೇ ತದಾ|
08034019c ದ್ರೌಪದ್ಯಾಃ ಪ್ರಿಯಕಾಮೇನ ಕೇವಲಂ ಬಾಹುಸಂಶ್ರಯಾತ್|
08034019e ಗೂಢಭಾವಂ ಸಮಾಶ್ರಿತ್ಯ ಕೀಚಕಃ ಸಗಣೋ ಹತಃ||
ಅಂದು ವಿರಾಟನಗರದಲ್ಲಿ ಅಜ್ಞಾತವಾಸದಲ್ಲಿರುವಾಗ ದ್ರೌಪದಿಯ ಹಿತವನ್ನು ಬಯಸಿ ಇವನು ಕೇವಲ ಬಾಹುಗಳನ್ನು ಬಳಸಿ ಗೂಢಭಾವವನ್ನು ಬಳಸಿ ಗಣಗಳೊಂದಿಗೆ ಕೀಚಕನನ್ನು ಸಂಹರಿಸಿದ್ದನು.
08034020a ಸೋಽದ್ಯ ಸಂಗ್ರಾಮಶಿರಸಿ ಸಂನದ್ಧಃ ಕ್ರೋಧಮೂರ್ಚ್ಛಿತಃ|
08034020c ಕಿಂಕರೋದ್ಯತದಂಡೇನ ಮೃತ್ಯುನಾಪಿ ವ್ರಜೇದ್ರಣಂ||
ಅವನು ಇಂದು ಕ್ರೋಧಮೂರ್ಛಿತನಾಗಿ ಸನ್ನದ್ಧನಾಗಿ ಸಂಗ್ರಾಮದ ಶಿರೋಭಾಗದಲ್ಲಿ ಬಂದಿದ್ದಾನೆ. ಆದರೆ ರಣದಲ್ಲಿ ದಂಡವನ್ನು ಎತ್ತಿಹಿಡಿದಿರುವ ಮೃತ್ಯುವಿನೊಂದಿಗೆ ಇವನು ಹೋರಾಡಬಲ್ಲನೇ?
08034021a ಚಿರಕಾಲಾಭಿಲಷಿತೋ ಮಮಾಯಂ ತು ಮನೋರಥಃ|
08034021c ಅರ್ಜುನಂ ಸಮರೇ ಹನ್ಯಾಂ ಮಾಂ ವಾ ಹನ್ಯಾದ್ಧನಂಜಯಃ|
08034021e ಸ ಮೇ ಕದಾ ಚಿದದ್ಯೈವ ಭವೇದ್ಭೀಮಸಮಾಗಮಾತ್||
ಸಮರದಲ್ಲಿ ಅರ್ನುನನನ್ನು ನಾನು ಅಥವಾ ಧನಂಜಯನು ನನ್ನನ್ನು ಸಂಹರಿಸಬೇಕೆಂದು ಬಹುಕಾಲದಿಂದ ನನ್ನ ಅಭಿಲಾಷೆಯೂ ಮನೋರಥವೂ ಆಗಿತ್ತು. ಬಹುಷಃ ಅದಕ್ಕಾಗಿಯೇ ಭೀಮನೊಡನೆ ನನ್ನ ಸಮಾಗಮವಾಗುತ್ತಿದೆ.
08034022a ನಿಹತೇ ಭೀಮಸೇನೇ ತು ಯದಿ ವಾ ವಿರಥೀಕೃತೇ|
08034022c ಅಭಿಯಾಸ್ಯತಿ ಮಾಂ ಪಾರ್ಥಸ್ತನ್ಮೇ ಸಾಧು ಭವಿಷ್ಯತಿ|
08034022e ಅತ್ರ ಯನ್ಮನ್ಯಸೇ ಪ್ರಾಪ್ತಂ ತಚ್ಛೀಘ್ರಂ ಸಂಪ್ರಧಾರಯ|
ಭೀಮಸೇನನನ್ನು ಸಂಹರಿಸಿದರೆ ಅಥವಾ ವಿರಥನನ್ನಾಗಿ ಮಾಡಿದರೆ ಪಾರ್ಥನು ನನ್ನೊಡನೆ ಯುದ್ಧಮಾಡಲು ಬಂದೇಬರುತ್ತಾನೆ. ಆಗ ಒಳ್ಳೆಯದೇ ಆಗುತ್ತದೆ. ಇದರ ಕುರಿತು ನಿನ್ನ ಅಭಿಪ್ರಾಯವೇನೆಂದು ಬೇಗನೇ ನನಗೆ ಹೇಳು!”
08034023a ಏತಚ್ಛೃತ್ವಾ ತು ವಚನಂ ರಾಧೇಯಸ್ಯ ಮಹಾತ್ಮನಃ|
08034023c ಉವಾಚ ವಚನಂ ಶಲ್ಯಃ ಸೂತಪುತ್ರಂ ತಥಾಗತಂ||
ಮಹಾತ್ಮ ರಾಧೇಯನ ಆ ಮಾತನ್ನು ಕೇಳಿ ಶಲ್ಯನು ಕಾಲೋಚಿತವಾಗಿ ಸೂತಪುತ್ರನಿಗೆ ಹೀಗೆಂದನು:
08034024a ಅಭಿಯಾಸಿ ಮಹಾಬಾಹೋ ಭೀಮಸೇನಂ ಮಹಾಬಲಂ|
08034024c ನಿರಸ್ಯ ಭೀಮಸೇನಂ ತು ತತಃ ಪ್ರಾಪ್ಸ್ಯಸಿ ಫಲ್ಗುನಂ||
“ಮಾಹಾಬಾಹೋ! ಮೊದಲು ಮಹಾಬಲ ಭೀಮಸೇನನನ್ನು ಎದುರಿಸು. ಭೀಮಸೇನನನ್ನು ಸೋಲಿಸಿದರೆ ಅರ್ಜುನನು ನಿನಗೆ ದೊರೆಯುತ್ತಾನೆ.
08034025a ಯಸ್ತೇ ಕಾಮೋಽಭಿಲಷಿತಶ್ಚಿರಾತ್ಪ್ರಭೃತಿ ಹೃದ್ಗತಃ|
08034025c ಸ ವೈ ಸಂಪತ್ಸ್ಯತೇ ಕರ್ಣ ಸತ್ಯಮೇತದ್ಬ್ರವೀಮಿ ತೇ||
ಕರ್ಣ! ಬಹಳಕಾಲದಿಂದ ಹೃದ್ಗತವಾಗಿದ್ದ ನಿನ್ನ ಅಭೀಷ್ಟವು ಪೂರೈಸುತ್ತದೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ!”
08034026a ಏವಮುಕ್ತೇ ತತಃ ಕರ್ಣಃ ಶಲ್ಯಂ ಪುನರಭಾಷತ|
08034026c ಹಂತಾಹಮರ್ಜುನಂ ಸಂಖ್ಯೇ ಮಾಂ ವಾ ಹಂತಾ ಧನಂಜಯಃ|
08034026e ಯುದ್ಧೇ ಮನಃ ಸಮಾಧಾಯ ಯಾಹಿ ಯಾಹೀತ್ಯಚೋದಯತ್||
ಇದನ್ನು ಕೇಳಿ ಕರ್ಣನು ಪುನಃ ಶಲ್ಯನಿಗೆ ಹೇಳಿದನು: “ಯುದ್ಧದಲ್ಲಿ ನಾನು ಅರ್ಜುನನನ್ನು ಸಂಹರಿಸುತ್ತೇನೆ ಅಥವಾ ಧನಂಜಯನು ನನ್ನನ್ನು ಸಂಹರಿಸುತ್ತಾನೆ. ಯುದ್ಧದಲ್ಲಿ ಮನಸ್ಸನ್ನಿಟ್ಟು ರಥವನ್ನು ಮುಂದೊಯ್ಯಿ!”
08034027a ತತಃ ಪ್ರಾಯಾದ್ರಥೇನಾಶು ಶಲ್ಯಸ್ತತ್ರ ವಿಶಾಂ ಪತೇ|
08034027c ಯತ್ರ ಭೀಮೋ ಮಹೇಷ್ವಾಸೋ ವ್ಯದ್ರಾವಯತ ವಾಹಿನೀಂ||
ವಿಶಾಂಪತೇ! ಆಗ ಶಲ್ಯನು ಮಹೇಷ್ವಾಸ ಭೀಮನು ಎಲ್ಲಿ ಸೇನೆಗಳನ್ನು ಓಡಿಸುತ್ತಿದ್ದನೋ ಅಲ್ಲಿಗೆ ರಥವನ್ನು ಕೊಂಡೊಯ್ದನು.
08034028a ತತಸ್ತೂರ್ಯನಿನಾದಶ್ಚ ಭೇರೀಣಾಂ ಚ ಮಹಾಸ್ವನಃ|
08034028c ಉದತಿಷ್ಠತ ರಾಜೇಂದ್ರ ಕರ್ಣಭೀಮಸಮಾಗಮೇ||
ರಾಜೇಂದ್ರ! ಆಗ ಕರ್ಣ-ಭೀಮರ ಸಮಾಗಮ ಸಮಯದಲ್ಲಿ ತೂರ್ಯ-ಭೇರಿಗಳ ಮಹಾನಿನಾದವುಂಟಾಯಿತು.
08034029a ಭೀಮಸೇನೋಽಥ ಸಂಕ್ರುದ್ಧಸ್ತವ ಸೈನ್ಯಂ ದುರಾಸದಂ|
08034029c ನಾರಾಚೈರ್ವಿಮಲೈಸ್ತೀಕ್ಷ್ಣೈರ್ದಿಶಃ ಪ್ರಾದ್ರಾವಯದ್ಬಲೀ||
ಬಲಶಾಲೀ ಭೀಮಸೇನನು ಸಂಕ್ರುದ್ಧನಾಗಿ ದುರಾಸದವಾಗಿದ್ದ ನಿನ್ನ ಸೇನೆಯನ್ನು ವಿಮಲ ತೀಕ್ಷ್ಣ ನಾರಾಚಗಳಿಂದ ಪಲಾಯನಗೊಳಿಸಿದನು.
08034030a ಸ ಸನ್ನಿಪಾತಸ್ತುಮುಲೋ ಭೀಮರೂಪೋ ವಿಶಾಂ ಪತೇ|
08034030c ಆಸೀದ್ರೌದ್ರೋ ಮಹಾರಾಜ ಕರ್ಣಪಾಂಡವಯೋರ್ಮೃಧೇ|
08034030e ತತೋ ಮುಹೂರ್ತಾದ್ರಾಜೇಂದ್ರ ಪಾಂಡವಃ ಕರ್ಣಮಾದ್ರವತ್||
ವಿಶಾಂಪತೇ! ಮಹಾರಾಜ! ರಾಜೇಂದ್ರ! ಕರ್ಣ-ಪಾಂಡವರ ನಡುವೆ ರೌದ್ರ ಭೀಮರೂಪ ತುಮುಲ ಯುದ್ಧವು ನಡೆಯಿತು. ಆಗ ಸ್ವಲ್ಪಹೊತ್ತಿನಲ್ಲಿಯೇ ಪಾಂಡವನು ಕರ್ಣನ ಮೇಲೆ ಎರಗಿದನು.
08034031a ತಮಾಪತಂತಂ ಸಂಪ್ರೇಕ್ಷ್ಯ ಕರ್ಣೋ ವೈಕರ್ತನೋ ವೃಷಃ|
08034031c ಆಜಘಾನೋರಸಿ ಕ್ರುದ್ಧೋ ನಾರಾಚೇನ ಸ್ತನಾಂತರೇ|
08034031e ಪುನಶ್ಚೈನಮಮೇಯಾತ್ಮಾ ಶರವರ್ಷೈರವಾಕಿರತ್||
ತನ್ನ ಮೇಲೆ ಆಕ್ರಮಣಿಸುತ್ತಿದ್ದ ಅವನನ್ನು ನೋಡಿ ವೃಷ ವೈಕರ್ತನನು ಕ್ರುದ್ಧನಾಗಿ ಅವನ ಸ್ತನಾಂತರದಲ್ಲಿ ಪ್ರಹರಿಸಿದನು. ಪುನಃ ಆ ಅಮೇಯಾತ್ಮನು ಶರವರ್ಷಗಳಿಂದ ಭೀಮಸೇನನನ್ನು ಮುಚ್ಚಿಬಿಟ್ಟನು.
08034032a ಸ ವಿದ್ಧಃ ಸೂತಪುತ್ರೇಣ ಚಾದಯಾಮಾಸ ಪತ್ರಿಭಿಃ|
08034032c ವಿವ್ಯಾಧ ನಿಶಿತೈಃ ಕರ್ಣ ನವಭಿರ್ನತಪರ್ವಭಿಃ||
ಹೀಗೆ ಪ್ರಹರಿಸಿದ ಸೂತಪುತ್ರನನ್ನು ಭೀಮನು ಪತ್ರಿಗಳಿಂದ ಮುಸುಕಿದನು. ಪುನಃ ಕರ್ಣನನ್ನು ಎಂಭತ್ತು ನಿಶಿತ ನತಪರ್ವ ಬಾಣಗಳಿಂದ ಹೊಡೆದನು.
08034033a ತಸ್ಯ ಕರ್ಣೋ ಧನುರ್ಮಧ್ಯೇ ದ್ವಿಧಾ ಚಿಚ್ಚೇದ ಪತ್ರಿಣಾ|
08034033c ಅಥ ತಂ ಚಿನ್ನಧನ್ವಾನಮಭ್ಯವಿಧ್ಯತ್ಸ್ತನಾಂತರೇ|
08034033e ನಾರಾಚೇನ ಸುತೀಕ್ಷ್ಣೇನ ಸರ್ವಾವರಣಭೇದಿನಾ||
ಕರ್ಣನು ಪತ್ರಿಯಿಂದ ಅವನ ಧನುಸ್ಸನ್ನು ನಡುವಿನಲ್ಲಿಯೇ ತುಂಡರಿಸಿದನು. ಕೂಡಲೇ ಸರ್ವಾವರಣಭೇದೀ ತೀಕ್ಷ್ಣ ನಾರಾಚದಿಂದ ಧನುಸ್ಸು ತುಂಡಾಗಿದ್ದ ಭೀಮನ ವಕ್ಷಸ್ಥಳಕ್ಕೆ ಹೊಡೆದನು.
08034034a ಸೋಽನ್ಯತ್ಕಾರ್ಮುಕಮಾದಾಯ ಸೂತಪುತ್ರಂ ವೃಕೋದರಃ|
08034034c ರಾಜನ್ಮರ್ಮಸು ಮರ್ಮಜ್ಞೋ ವಿದ್ಧ್ವಾ ಸುನಿಶಿತೈಃ ಶರೈಃ|
08034034e ನನಾದ ಬಲವನ್ನಾದಂ ಕಂಪಯನ್ನಿವ ರೋದಸೀ||
ರಾಜನ್! ಅನಂತರ ಮರ್ಮಜ್ಞ ವೃಕೋದರನು ಅನ್ಯ ಧನುಸ್ಸನ್ನು ಎತ್ತಿಕೊಂಡು ನಿಶಿತ ಶರಗಳಿಂದ ಸೂತಪುತ್ರನ ಮರ್ಮಗಳನ್ನು ಪ್ರಹರಿಸಿ ಭೂಮ್ಯಾಕಾಶಗಳನ್ನು ನಡುಗಿಸುವಂತೆ ಬಲವತ್ತಾಗಿ ಗರ್ಜಿಸಿದನು.
08034035a ತಂ ಕರ್ಣಃ ಪಂಚವಿಂಶತ್ಯಾ ನಾರಾಚಾನಾಂ ಸಮಾರ್ದಯತ್|
08034035c ಮದೋತ್ಕಟಂ ವನೇ ದೃಪ್ತಮುಲ್ಕಾಭಿರಿವ ಕುಂಜರಂ||
ವನದಲ್ಲಿ ಮದೋತ್ಕಟ ಆನೆಯನ್ನು ಪಂಜುಗಳಿಂದ ಆಕ್ರಮಣಿಸುವಂತೆ ಕರ್ಣನು ಭೀಮಸೇನನನ್ನು ಇಪ್ಪತ್ತೈದು ನಾರಾಚಗಳಿಂದ ಪ್ರಹರಿಸಿದನು.
08034036a ತತಃ ಸಾಯಕಭಿನ್ನಾಂಗಃ ಪಾಂಡವಃ ಕ್ರೋಧಮೂರ್ಚ್ಚಿತಃ|
08034036c ಸಂರಂಭಾಮರ್ಷತಾಮ್ರಾಕ್ಷಃ ಸೂತಪುತ್ರವಧೇಚ್ಚಯಾ||
08034037a ಸ ಕಾರ್ಮುಕೇ ಮಹಾವೇಗಂ ಭಾರಸಾಧನಮುತ್ತಮಂ|
08034037c ಗಿರೀಣಾಮಪಿ ಭೇತ್ತಾರಂ ಸಾಯಕಂ ಸಮಯೋಜಯತ್||
ಸಾಯಕಗಳಿಂದ ಗಾಯಗೊಂಡ ಪಾಂಡವನು ಕ್ರೋಧಮೂರ್ಛಿತನಾಗಿ, ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು, ಸೂತಪುತ್ರನನ್ನು ವಧಿಸಲು ಬಯಸಿ. ಆ ಮಹಾವೇಗಶಾಲೀ, ಭಾರವನ್ನು ಹೊರಬಲ್ಲ ಉತ್ತಮ ಧನುಸ್ಸಿಗೆ ಗಿರಿಗಳನ್ನು ಕೂಡ ಭೇದಿಸಬಲ್ಲ ಸಾಯಕವನ್ನು ಹೂಡಿದನು.
08034038a ವಿಕೃಷ್ಯ ಬಲವಚ್ಚಾಪಮಾ ಕರ್ಣಾದತಿಮಾರುತಿಃ|
08034038c ತಂ ಮುಮೋಚ ಮಹೇಷ್ವಾಸಃ ಕ್ರುದ್ಧಃ ಕರ್ಣಜಿಘಾಂಸಯಾ||
ಬಲವನ್ನುಪಯೋಗಿಸಿ ಧನುಸ್ಸನ್ನು ಆಕರ್ಣಾಂತವಾಗಿ ಎಳೆದು ಕ್ರುದ್ಧ ಮಹೇಷ್ವಾಸ ಮಾರುತಿಯು ಕರ್ಣನನ್ನು ವಧಿಸಲು ಬಯಸಿ ಆ ಬಾಣವನ್ನು ಪ್ರಯೋಗಿಸಿದನು.
08034039a ಸ ವಿಸೃಷ್ಟೋ ಬಲವತಾ ಬಾಣೋ ವಜ್ರಾಶನಿಸ್ವನಃ|
08034039c ಅದಾರಯದ್ರಣೇ ಕರ್ಣಂ ವಜ್ರವೇಗ ಇವಾಚಲಂ||
ರಣದಲ್ಲಿ ಬಲಿಷ್ಟನಿಂದ ಪ್ರಯೋಗಿಸಲ್ಪಟ್ಟ ಆ ಬಾಣವು ಸಿಡಿಲಿನಂತೆ ಶಬ್ಧಮಾಡುತ್ತಾ ವಜ್ರವು ವೇಗವಾಗಿ ಪರ್ವತವನ್ನು ಹೇಗೋ ಹಾಗೆ ಕರ್ಣನನ್ನು ಸೀಳಿತು.
08034040a ಸ ಭೀಮಸೇನಾಭಿಹತೋ ಸೂತಪುತ್ರಃ ಕುರೂದ್ವಹ|
08034040c ನಿಷಸಾದ ರಥೋಪಸ್ಥೇ ವಿಸಂಜ್ಞಃ ಪೃತನಾಪತಿಃ||
ಕುರೂದ್ವಹ! ಭೀಮಸೇನನಿಂದ ಪ್ರಹೃತನಾದ ಸೂತಪುತ್ರ ಪೃತನಾಪತಿಯು ಮೂರ್ಛೆಹೋಗಿ ರಥದಲ್ಲಿಯೇ ಒರಗಿದನು.
08034041a ತತೋ ಮದ್ರಾಧಿಪೋ ದೃಷ್ಟ್ವಾ ವಿಸಂಜ್ಞಂ ಸೂತನಂದನಂ|
08034041c ಅಪೋವಾಹ ರಥೇನಾಜೌ ಕರ್ಣಮಾಹವಶೋಭಿನಂ||
ಆಗ ಮದ್ರಾಧಿಪನು ವಿಸಂಜ್ಞ ಸೂತನಂದನನನ್ನು ನೋಡಿ ಆಹವಶೋಭೀ ಕರ್ಣನ ರಥವನ್ನು ಅಲ್ಲಿಂದ ದೂರ ಕೊಂಡೊಯ್ದನು.
08034042a ತತಃ ಪರಾಜಿತೇ ಕರ್ಣೇ ಧಾರ್ತರಾಷ್ಟ್ರೀಂ ಮಹಾಚಮೂಂ|
08034042c ವ್ಯದ್ರಾವಯದ್ಭೀಮಸೇನೋ ಯಥೇಂದ್ರೋ ದಾನವೀಂ ಚಮೂಂ||
ಕರ್ಣನು ಪರಾಜಿತನಾಗಲು ಭೀಮಸೇನನು ಇಂದ್ರನು ದಾನವೀ ಸೇನೆಯನ್ನು ಹೇಗೋ ಹಾಗೆ ಧಾರ್ತರಾಷ್ಟ್ರರ ಮಹಾಸೇನೆಯನ್ನು ಪಲಾಯನಗೊಳಿಸಿದನು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಾಪಯಾನೇ ಚತುಸ್ತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಾಪಯಾನ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.