ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೬
ದುಃಖಿತನಾದ ಯುಧಿಷ್ಠಿರನು ಧೃತರಾಷ್ಟ್ರನಿಗೆ ಸರ್ವವನ್ನೂ ಸಮರ್ಪಿಸಿ ತಾನೇ ವನಕ್ಕೆ ಹೋಗುವನೆಂದು ಹೇಳಿದುದು (೧-೧೫). ಮೂರ್ಛಿತನಾದ ಧೃತರಾಷ್ಟ್ರನನ್ನು ಯುಧಿಷ್ಠಿರನು ಮೈಸವರಿ ಎಚ್ಚರಿಸಿದುದು (೧೬-೨೮).
15006001 ಯುಧಿಷ್ಠಿರ ಉವಾಚ|
15006001a ನ ಮಾಂ ಪ್ರೀಣಯತೇ ರಾಜ್ಯಂ ತ್ವಯ್ಯೇವಂ ದುಃಖಿತೇ ನೃಪ|
15006001c ಧಿಗ್ಮಾಮಸ್ತು ಸುದುರ್ಬುದ್ಧಿಂ ರಾಜ್ಯಸಕ್ತಂ ಪ್ರಮಾದಿನಮ್||
ಯುಧಿಷ್ಠಿರನು ಹೇಳಿದನು: “ನೃಪ! ನೀನು ಹೀಗೆ ದುಃಖದಿಂದಿರುವಾಗ ನನಗೆ ಈ ರಾಜ್ಯದಲ್ಲಿ ಯಾವ ಸಂತೋಷವೂ ಇಲ್ಲ. ಅತ್ಯಂತ ದುರ್ಬುದ್ಧಿಯಾದ, ರಾಜ್ಯಾಸಕ್ತಿಯಿಂದ ಪ್ರಮತ್ತನಾಗಿರುವ ನನಗೆ ಧಿಕ್ಕಾರ!
15006002a ಯೋಽಹಂ ಭವಂತಂ ದುಃಖಾರ್ತಮುಪವಾಸಕೃಶಂ ನೃಪ|
15006002c ಯತಾಹಾರಂ ಕ್ಷಿತಿಶಯಂ ನಾವಿಂದಂ ಭ್ರಾತೃಭಿಃ ಸಹ||
ನೃಪ! ನೀನು ದುಃಖಾರ್ತನಾಗಿರುವುದಾಗಲೀ, ಉಪವಾಸದಿಂದ ಕೃಶನಾಗಿರುವುದಾಗಲೀ, ಅಲ್ಪಾಹಾರವನ್ನು ಸೇವಿಸಿ ನೆಲದ ಮೇಲೆ ಮಲಗಿಕೊಳ್ಳುತ್ತಿರುವುದಾಗಲೀ ಸಹೋದರರೊಂದಿಗೆ ನನಗೆ ತಿಳಿದೇ ಇರಲಿಲ್ಲ!
15006003a ಅಹೋಽಸ್ಮಿ ವಂಚಿತೋ ಮೂಢೋ ಭವತಾ ಗೂಢಬುದ್ಧಿನಾ|
15006003c ವಿಶ್ವಾಸಯಿತ್ವಾ ಪೂರ್ವಂ ಮಾಂ ಯದಿದಂ ದುಃಖಮಶ್ನುಥಾಃ||
ಗೂಢಬುದ್ಧಿಯ ನಿನ್ನಿಂದ ಮೂಢನಾದ ನಾನು ವಂಚಿತನಾಗಿದ್ದೇನೆ. ಮೊದಲು ನನ್ನಲ್ಲಿ ವಿಶ್ವಾಸವನ್ನು ಹುಟ್ಟಿಸಿ ಇಂದು ನನಗೆ ಈ ದುಃಖವನ್ನು ನೀಡಿದ್ದೀಯೆ!
15006004a ಕಿಂ ಮೇ ರಾಜ್ಯೇನ ಭೋಗೈರ್ವಾ ಕಿಂ ಯಜ್ಞೈಃ ಕಿಂ ಸುಖೇನ ವಾ|
15006004c ಯಸ್ಯ ಮೇ ತ್ವಂ ಮಹೀಪಾಲ ದುಃಖಾನ್ಯೇತಾನ್ಯವಾಪ್ತವಾನ್||
ಮಹೀಪಾಲ! ನೀನೇ ಈ ರೀತಿಯ ದುಃಖವನ್ನು ಅನುಭವಿಸುತ್ತಿರುವಾಗ ನನಗೆ ಈ ರಾಜ್ಯಭೋಗದಿಂದ ಅಥವಾ ಯಜ್ಞಗಳಿಂದ ಯಾವ ಸುಖವಿದೆ?
15006005a ಪೀಡಿತಂ ಚಾಪಿ ಜಾನಾಮಿ ರಾಜ್ಯಮಾತ್ಮಾನಮೇವ ಚ|
15006005c ಅನೇನ ವಚಸಾ ತುಭ್ಯಂ ದುಃಖಿತಸ್ಯ ಜನೇಶ್ವರ||
ಜನೇಶ್ವರ! ದುಃಖಿತನಾಗಿರುವ ನಿನ್ನ ಈ ಮಾತಿನಿಂದ ನನ್ನ ರಾಜ್ಯವೇ ಪೀಡಿತವಾಗಿದೆಯೆಂದು ಭಾವಿಸುತ್ತೇನೆ.
15006006a ಭವಾನ್ಪಿತಾ ಭವಾನ್ಮಾತಾ ಭವಾನ್ನಃ ಪರಮೋ ಗುರುಃ|
15006006c ಭವತಾ ವಿಪ್ರಹೀಣಾ ಹಿ ಕ್ವ ನು ತಿಷ್ಠಾಮಹೇ ವಯಮ್||
ನೀನೇ ನನ್ನ ಪಿತ. ನೀನೇ ನಮ್ಮ ಮಾತೆ ಮತ್ತು ಪರಮ ಗುರು. ನಿನ್ನನ್ನು ಅಗಲಿದ ನಾವು ಎಲ್ಲಿ ತಾನೇ ನಿಲ್ಲೋಣ?
15006007a ಔರಸೋ ಭವತಃ ಪುತ್ರೋ ಯುಯುತ್ಸುರ್ನೃಪಸತ್ತಮ|
15006007c ಅಸ್ತು ರಾಜಾ ಮಹಾರಾಜ ಯಂ ಚಾನ್ಯಂ ಮನ್ಯತೇ ಭವಾನ್||
ನೃಪಸತ್ತಮ! ಮಹಾರಾಜ! ನಿನ್ನ ಔರಸ ಪುತ್ರ ಯುಯುತ್ಸುವಾಗಲೀ ಅಥವಾ ನೀನು ಅಭಿಪ್ರಾಯಪಟ್ಟ ಬೇರೆ ಯಾರಾದರೂ ರಾಜನಾಗಲಿ!
15006008a ಅಹಂ ವನಂ ಗಮಿಷ್ಯಾಮಿ ಭವಾನ್ರಾಜ್ಯಂ ಪ್ರಶಾಸ್ತ್ವಿದಮ್|
15006008c ನ ಮಾಮಯಶಸಾ ದಗ್ಧಂ ಭೂಯಸ್ತ್ವಂ ದಗ್ಧುಮರ್ಹಸಿ||
ನಾನು ವನಕ್ಕೆ ಹೋಗುತ್ತೇನೆ. ಈ ರಾಜ್ಯವನ್ನು ನೀನೇ ಆಳು. ಅಯಶಸ್ಸಿನಿಂದ ಸುಟ್ಟುಹೋಗಿರುವ ನನ್ನನ್ನು ಇನ್ನೂ ಸುಡುವುದು ಸರಿಯಲ್ಲ!
15006009a ನಾಹಂ ರಾಜಾ ಭವಾನ್ರಾಜಾ ಭವತಾ ಪರವಾನಹಮ್|
15006009c ಕಥಂ ಗುರುಂ ತ್ವಾಂ ಧರ್ಮಜ್ಞಮನುಜ್ಞಾತುಮಿಹೋತ್ಸಹೇ||
ನಾನು ರಾಜನಲ್ಲ! ನೀನೇ ರಾಜ! ನಾನು ನಿನ್ನ ಆಜ್ಞಾಧಾರಕನಾಗಿದ್ದೇನೆ. ಧರ್ಮಜ್ಞನೂ ಗುರುವೂ ಆದ ನಿನಗೆ ಕಾಡಿಗೆ ಹೋಗಲು ನಾನು ಹೇಗೆ ತಾನೇ ಅನುಮತಿನೀಡಲಿ?
15006010a ನ ಮನ್ಯುರ್ಹೃದಿ ನಃ ಕಶ್ಚಿದ್ದುರ್ಯೋಧನಕೃತೇಽನಘ|
15006010c ಭವಿತವ್ಯಂ ತಥಾ ತದ್ಧಿ ವಯಂ ತೇ ಚೈವ ಮೋಹಿತಾಃ||
ಅನಘ! ದುರ್ಯೋಧನನ ಕೃತ್ಯಗಳಿಂದಾಗಿ ನಮ್ಮ ಹೃದಯದಲ್ಲಿ ಸ್ವಲ್ಪವೂ ಕೋಪವಿಲ್ಲ. ಅದು ಆಗಾಬೇಕಾದ್ದಿತು ಎಂದು ತಿಳಿದುಕೊಂಡಿದ್ದೇವೆ. ಆಗ ನಾವೂ ಕೂಡ ಮೋಹಿತರಾಗಿದ್ದೆವು.
15006011a ವಯಂ ಹಿ ಪುತ್ರಾ ಭವತೋ ಯಥಾ ದುರ್ಯೋಧನಾದಯಃ|
15006011c ಗಾಂಧಾರೀ ಚೈವ ಕುಂತೀ ಚ ನಿರ್ವಿಶೇಷೇ ಮತೇ ಮಮ||
ದುರ್ಯೋಧನಾದಿಗಳು ಹೇಗೋ ಹಾಗೆ ನಾವೂ ಕೂಡ ನಿನ್ನ ಪುತ್ರರೇ ಆಗಿದ್ದೇವೆ. ಗಾಂಧಾರೀ ಮತ್ತು ಕುಂತಿಯರಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂದು ನನಗನ್ನಿಸುತ್ತಿದೆ.
15006012a ಸ ಮಾಂ ತ್ವಂ ಯದಿ ರಾಜೇಂದ್ರ ಪರಿತ್ಯಜ್ಯ ಗಮಿಷ್ಯಸಿ|
15006012c ಪೃಷ್ಠತಸ್ತ್ವಾನುಯಾಸ್ಯಾಮಿ ಸತ್ಯೇನಾತ್ಮಾನಮಾಲಭೇ||
ರಾಜೇಂದ್ರ! ಒಂದು ವೇಳೆ ನೀನು ನನ್ನನ್ನು ಪರಿತ್ಯಜಿಸಿ ಹೋದರೆ ನಾನೂ ಕೂಡ ನಿನ್ನ ಹಿಂದೆಯೇ ಬರುವೆನು. ನನ್ನನ್ನು ಮುಟ್ಟಿಕೊಂಡು ಈ ಸತ್ಯವನ್ನಾಡುತ್ತಿದ್ದೇನೆ!
15006013a ಇಯಂ ಹಿ ವಸುಸಂಪೂರ್ಣಾ ಮಹೀ ಸಾಗರಮೇಖಲಾ|
15006013c ಭವತಾ ವಿಪ್ರಹೀಣಸ್ಯ ನ ಮೇ ಪ್ರೀತಿಕರೀ ಭವೇತ್||
ನಿನ್ನನ್ನು ಅಗಲಿದ ನನಗೆ ಸಾಗರವನ್ನೇ ಮೇಖಲೆಯನ್ನಾಗಿ ಹೊಂದಿರುವ ಈ ಸಂಪದ್ಭರಿತ ಭೂಮಿಯೂ ನನಗೆ ಪ್ರೀತಿಯನ್ನುಂಟುಮಾಡಲಾರದು!
15006014a ಭವದೀಯಮಿದಂ ಸರ್ವಂ ಶಿರಸಾ ತ್ವಾಂ ಪ್ರಸಾದಯೇ|
15006014c ತ್ವದಧೀನಾಃ ಸ್ಮ ರಾಜೇಂದ್ರ ವ್ಯೇತು ತೇ ಮಾನಸೋ ಜ್ವರಃ||
ರಾಜೇಂದ್ರ! ಶಿರಸಾ ನಿನಗೆ ವಂದಿಸಿ ಹೇಳುತ್ತಿದ್ದೇನೆ. ಈ ಎಲ್ಲವೂ ನಿನ್ನದೇ. ನಾವೆಲ್ಲರೂ ನಿನ್ನ ಅಧೀನರಾಗಿದ್ದೇವೆ. ನಿನ್ನ ಮಾನಸಿಕ ಜ್ವರವು ದೂರವಾಗಲಿ!
15006015a ಭವಿತವ್ಯಮನುಪ್ರಾಪ್ತಂ ಮನ್ಯೇ ತ್ವಾಂ ತಜ್ಜನಾಧಿಪ|
15006015c ದಿಷ್ಟ್ಯಾ ಶುಶ್ರೂಷಮಾಣಸ್ತ್ವಾಂ ಮೋಕ್ಷ್ಯಾಮಿ ಮನಸೋ ಜ್ವರಮ್||
ಜನಾಧಿಪ! ನೀನು ಪಡೆಯಬೇಕಾಗಿರುವುದನ್ನು ಪಡೆದಿರುವೆಯೆಂದು ನಾನು ಭಾವಿಸುತ್ತೇನೆ. ಅದೃಷ್ಟದಿಂದ ಪುನಃ ನಿನ್ನ ಶುಶ್ರೂಷೆಯನ್ನು ಮಾಡುವ ಅವಕಾಶವು ಸಿಕ್ಕಿದರೆ ನಿನ್ನ ಈ ಮಾನಸಿಕ ಜ್ವರವನ್ನು ಹೋಗಲಾಡಿಸುತ್ತೇನೆ!”
15006016 ಧೃತರಾಷ್ಟ್ರ ಉವಾಚ|
15006016a ತಾಪಸ್ಯೇ ಮೇ ಮನಸ್ತಾತ ವರ್ತತೇ ಕುರುನಂದನ|
15006016c ಉಚಿತಂ ಹಿ ಕುಲೇಽಸ್ಮಾಕಮರಣ್ಯಗಮನಂ ಪ್ರಭೋ||
ಧೃತರಾಷ್ಟ್ರನು ಹೇಳಿದನು: “ಕುರುನಂದನ! ಪ್ರಭೋ! ಮಗೂ! ನನ್ನ ಮನಸ್ಸು ತಪಸ್ಸಿನಲ್ಲಿಯೇ ಮಗ್ನವಾಗಿದೆ. ನಾವು ಅರಣ್ಯಕ್ಕೆ ಹೋಗುವುದು ಈ ಕುಲದ ಸಂಪ್ರದಾಯವೂ ಮತ್ತು ಉಚಿತವೂ ಆಗಿದೆ.
15006017a ಚಿರಮಸ್ಮ್ಯುಷಿತಃ ಪುತ್ರ ಚಿರಂ ಶುಶ್ರೂಷಿತಸ್ತ್ವಯಾ|
15006017c ವೃದ್ಧಂ ಮಾಮಭ್ಯನುಜ್ಞಾತುಂ ತ್ವಮರ್ಹಸಿ ಜನಾಧಿಪ||
ಪುತ್ರ! ಜನಾಧಿಪ! ಬಹಳ ಕಾಲದಿಂದ ಇಲ್ಲಿಯೇ ವಾಸವಾಗಿದ್ದೇವೆ. ಬಹಳ ಕಾಲದಿಂದ ನೀನು ನಮ್ಮ ಶುಶ್ರೂಷೆಯನ್ನೂ ಮಾಡಿದ್ದೀಯೆ. ವೃದ್ಧನಾದ ನನಗೆ ನೀನು ಅಪ್ಪಣೆಯನ್ನು ನೀಡಬೇಕು!””
15006018 ವೈಶಂಪಾಯನ ಉವಾಚ|
15006018a ಇತ್ಯುಕ್ತ್ವಾ ಧರ್ಮರಾಜಾನಂ ವೇಪಮಾನಃ ಕೃತಾಂಜಲಿಮ್|
15006018c ಉವಾಚ ವಚನಂ ರಾಜಾ ಧೃತರಾಷ್ಟ್ರೋಽಂಬಿಕಾಸುತಃ||
15006019a ಸಂಜಯಂ ಚ ಮಹಾಮಾತ್ರಂ ಕೃಪಂ ಚಾಪಿ ಮಹಾರಥಮ್|
15006019c ಅನುನೇತುಮಿಹೇಚ್ಚಾಮಿ ಭವದ್ಭಿಃ ಪೃಥಿವೀಪತಿಮ್||
ವೈಶಂಪಾಯನನು ಹೇಳಿದನು: “ಕೈಮುಗಿದು ನಡುಗುತ್ತಿದ್ದ ಧರ್ಮರಾಜನಿಗೆ ಹೀಗೆ ಹೇಳಿ ಅಂಬಿಕಾಸುತ ರಾಜನು ಮಹಾಮಾತ್ರ ಸಂಜಯ ಮತ್ತು ಮಹಾರಥ ಕೃಪನಿಗೆ ಈ ಮಾತನ್ನಾಡಿದನು: “ನೀವಾದರೂ ಈ ಪೃಥಿವೀಪತಿಯನ್ನು ಸಮಾಧಾನಗೊಳಿಸಿರೆಂದು ಇಚ್ಛಿಸುತ್ತೇನೆ.
15006020a ಗ್ಲಾಯತೇ ಮೇ ಮನೋ ಹೀದಂ ಮುಖಂ ಚ ಪರಿಶುಷ್ಯತಿ|
15006020c ವಯಸಾ ಚ ಪ್ರಕೃಷ್ಟೇನ ವಾಗ್ವ್ಯಾಯಾಮೇನ ಚೈವ ಹಿ||
ನನ್ನ ವೃದ್ಧಾಪ್ಯದ ಕಾರಣದಿಂದಲೂ ಮಾತನಾಡಿದ ಆಯಾಸದಿಂದಲೂ ನನ್ನ ಮನಸ್ಸು ದುರ್ಬಲವಾಗುತ್ತಿದೆ. ಬಾಯಿಯು ಒಣಗಿಹೋಗುತ್ತಿದೆ.”
15006021a ಇತ್ಯುಕ್ತ್ವಾ ಸ ತು ಧರ್ಮಾತ್ಮಾ ವೃದ್ಧೋ ರಾಜಾ ಕುರೂದ್ವಹಃ|
15006021c ಗಾಂಧಾರೀಂ ಶಿಶ್ರಿಯೇ ಧೀಮಾನ್ಸಹಸೈವ ಗತಾಸುವತ್||
ಹೀಗೆ ಹೇಳಿ ಧರ್ಮಾತ್ಮ ವೃದ್ಧ ರಾಜಾ ಧೀಮಾನ್ ಕುರೂದ್ವಹನು ಒಮ್ಮೆಲೇ ಪ್ರಾಣಬಿಟ್ಟವನಂತೆ ಗಾಂಧಾರಿಯನ್ನೊರಗಿ ಕುಳಿತುಕೊಂಡನು.
15006022a ತಂ ತು ದೃಷ್ಟ್ವಾ ತಥಾಸೀನಂ ನಿಶ್ಚೇಷ್ಟಂ ಕುರುಪಾರ್ಥಿವಮ್|
15006022c ಆರ್ತಿಂ ರಾಜಾ ಯಯೌ ತೂರ್ಣಂ ಕೌಂತೇಯಃ ಪರವೀರಹಾ||
ಹಾಗೆ ನಿಶ್ಚೇಷ್ಟನಾಗಿ ಕುಳಿತುಕೊಂಡ ಕುರುಪಾರ್ಥಿವನನ್ನು ನೋಡಿ ಪರವೀರಹ ಕೌಂತೇಯನಿಗೆ ಅತೀವ ಸಂಕಟವುಂಟಾಯಿತು.
15006023 ಯುಧಿಷ್ಠಿರ ಉವಾಚ|
15006023a ಯಸ್ಯ ನಾಗಸಹಸ್ರೇಣ ದಶಸಂಖ್ಯೇನ ವೈ ಬಲಮ್|
15006023c ಸೋಽಯಂ ನಾರೀಮುಪಾಶ್ರಿತ್ಯ ಶೇತೇ ರಾಜಾ ಗತಾಸುವತ್||
ಯುಧಿಷ್ಠಿರನು ಹೇಳಿದನು: “ಒಂದು ಲಕ್ಷ ಆನೆಗಳ ಬಲವಿರುವ ಈ ರಾಜನು ನಾರಿಯೋರ್ವಳನ್ನು ಆಶ್ರಯಿಸಿ ಮರಣಹೊಂದಿದವನಂತೆ ಕುಳಿತುಕೊಂಡಿದ್ದಾನಲ್ಲ!
15006024a ಆಯಸೀ ಪ್ರತಿಮಾ ಯೇನ ಭೀಮಸೇನಸ್ಯ ವೈ ಪುರಾ|
15006024c ಚೂರ್ಣೀಕೃತಾ ಬಲವತಾ ಸ ಬಲಾರ್ಥೀ ಶ್ರಿತಃ ಸ್ತ್ರಿಯಮ್||
ಹಿಂದೆ ಭೀಮಸೇನನ ಉಕ್ಕಿನ ಪ್ರತಿಮೆಯನ್ನು ತನ್ನ ಬಲದಿಂದ ಚೂರು ಚೂರುಮಾಡಿದ್ದ ಇವನೇ ಇಂದು ಬಲಾರ್ಥಿಯಾಗಿ ಸ್ತ್ರೀಯನ್ನು ಆಶ್ರಯಿಸಿದ್ದಾನಲ್ಲಾ!
15006025a ಧಿಗಸ್ತು ಮಾಮಧರ್ಮಜ್ಞಂ ಧಿಗ್ಬುದ್ಧಿಂ ಧಿಕ್ಚ ಮೇ ಶ್ರುತಮ್|
15006025c ಯತ್ಕೃತೇ ಪೃಥಿವೀಪಾಲಃ ಶೇತೇಽಯಮತಥೋಚಿತಃ||
ಇಂತಹ ಅವಸ್ಥೆಗೆ ಯೋಗ್ಯನಲ್ಲದ ಪೃಥಿವೀಪಾಲನು ಈ ರೀತಿ ಮಲಗಿರುವಂತೆ ಮಾಡಿರುವ ಅಧರ್ಮಜ್ಞನಾದ ನನಗೆ ಧಿಕ್ಕಾರ! ನನ್ನ ಬುದ್ಧಿಗೆ ಧಿಕ್ಕಾರ! ನನ್ನ ಶಾಸ್ತ್ರಜ್ಞಾನಕ್ಕೆ ಧಿಕ್ಕಾರ!
15006026a ಅಹಮಪ್ಯುಪವತ್ಸ್ಯಾಮಿ ಯಥೈವಾಯಂ ಗುರುರ್ಮಮ|
15006026c ಯದಿ ರಾಜಾ ನ ಭುಂಕ್ತೇಽಯಂ ಗಾಂಧಾರೀ ಚ ಯಶಸ್ವಿನೀ||
ಗುರುವಾದ ಈ ರಾಜನೂ ಮತ್ತು ಯಶಸ್ವಿನೀ ಗಾಂಧಾರಿಯೂ ಆಹಾರವನ್ನು ಸೇವಿಸದೇ ಇದ್ದರೆ ನಾನೂ ಕೂಡ ಅವರಂತೆಯೇ ಉಪವಾಸದಿಂದಿರುತ್ತೇನೆ!””
15006027 ವೈಶಂಪಾಯನ ಉವಾಚ|
15006027a ತತೋಽಸ್ಯ ಪಾಣಿನಾ ರಾಜಾ ಜಲಶೀತೇನ ಪಾಂಡವಃ|
15006027c ಉರೋ ಮುಖಂ ಚ ಶನಕೈಃ ಪರ್ಯಮಾರ್ಜತ ಧರ್ಮವಿತ್||
ವೈಶಂಪಾಯನನು ಹೇಳಿದನು: “ಆಗ ಧರ್ಮವಿದು ಪಾಂಡವ ರಾಜನು ತಣ್ಣೀರಿನಿಂದ ತನ್ನ ಕೈಯನ್ನು ಒದ್ದೆಮಾಡಿಕೊಂಡು ಮೆಲ್ಲನೇ ಧೃತರಾಷ್ಟ್ರನ ಎದೆಯನ್ನೂ ಮುಖವನ್ನೂ ಸವರಿದನು.
15006028a ತೇನ ರತ್ನೌಷಧಿಮತಾ ಪುಣ್ಯೇನ ಚ ಸುಗಂಧಿನಾ|
15006028c ಪಾಣಿಸ್ಪರ್ಶೇನ ರಾಜ್ಞಸ್ತು ರಾಜಾ ಸಂಜ್ಞಾಮವಾಪ ಹ||
ರತ್ನೌಷಧಿಗಳಿಂದ ಸಂಪನ್ನನ್ನಾಗಿದ್ದ ರಾಜಾ ಯುಧಿಷ್ಠಿರನು ಪವಿತ್ರ ಸುಗಂಧಯುಕ್ತ ಕೈಯಿಂದ ಮುಟ್ಟಿದೊಡನೆಯೇ ರಾಜ ಧೃತರಾಷ್ಟ್ರನು ಎಚ್ಚರಗೊಂಡನು.
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ವೇದೇ ಷಷ್ಟೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ವೇದ ಎನ್ನುವ ಆರನೇ ಅಧ್ಯಾಯವು.