ಆದಿ ಪರ್ವ: ಸಂಭವ ಪರ್ವ
೮೦
ಸಾವಿರ ವರ್ಷಗಳ ನಂತರ ಯಯಾತಿಯು ಯೌವನವನ್ನು ಮಗ ಪೂರುವಿಗೆ ಹಿಂದಿರುಗಿಸಿ ರಾಜ್ಯವನ್ನು ಕೊಡಲು ನಿಶ್ಚಯಿಸುವುದು (೧-೧೨). ಪೌರರು ರಾಜನನ್ನು ಪ್ರಶ್ನಿಸಲು ಯಯಾತಿಯ ಉತ್ತರ (೧೨-೨೩). ಪೂರುವಿಗೆ ಪಟ್ಟಾಭಿಷೇಕ ಮಾಡಿ ಯಯಾತಿಯು ವನಕ್ಕೆ ತೆರಳಿದುದು (೨೪-೨೭).
01080001 ವೈಶಂಪಾಯನ ಉವಾಚ|
01080001a ಪೌರವೇಣಾಥ ವಯಸಾ ಯಯಾತಿರ್ನಹುಷಾತ್ಮಜಃ|
01080001c ಪ್ರೀತಿಯುಕ್ತೋ ನೃಪಶ್ರೇಷ್ಠಶ್ಚಚಾರ ವಿಷಯಾನ್ಪ್ರಿಯಾನ್||
01080002a ಯಥಾಕಾಮಂ ಯಥೋತ್ಸಾಹಂ ಯಥಾಕಾಲಂ ಯಥಾಸುಖಂ|
01080002c ಧರ್ಮಾವಿರುದ್ಧಾನ್ರಾಜೇಂದ್ರೋ ಯಥಾರ್ಹತಿ ಸ ಏವ ಹಿ||
ವೈಶಂಪಾಯನನು ಹೇಳಿದನು: “ರಾಜೇಂದ್ರ! ನೃಪಶ್ರೇಷ್ಠ ನಹುಷಾತ್ಮಜ ಯಯಾತಿಯು ಪೌರವನ ಯೌವನದ ಮೂಲಕ ತನಗೆ ಇಷ್ಟವಾದಂತೆ, ಉತ್ಸಾಹವಿದ್ದಷ್ಟು, ಸಮಯವಿದ್ದಷ್ಟೂ, ಸುಖವೆನಿಸುವಷ್ಟು, ಧರ್ಮಕ್ಕೆ ವಿರುದ್ಧವಾಗದ ರೀತಿಯಲ್ಲಿ, ಅವನಿಗೆ ತಕ್ಕುದಾದ ರೀತಿಯಲ್ಲಿ, ಕಾಮನಿರತನಾಗಿ ವಿಷಯ ಸುಖವನ್ನು ಅನುಭವಿಸಿದನು.
01080003a ದೇವಾನತರ್ಪಯದ್ಯಜ್ಞೈಃ ಶ್ರಾದ್ಧೈಸ್ತದ್ವತ್ಪಿತೄನಪಿ|
01080003c ದೀನಾನನುಗ್ರಹೈರಿಷ್ಟೈಃ ಕಾಮೈಶ್ಚ ದ್ವಿಜಸತ್ತಮಾನ್||
01080004a ಅತಿಥೀನನ್ನಪಾನೈಶ್ಚ ವಿಶಶ್ಚ ಪರಿಪಾಲನೈಃ|
01080004c ಆನೃಶಂಸ್ಯೇನ ಶೂದ್ರಾಂಶ್ಚ ದಸ್ಯೂನ್ಸನ್ನಿಗ್ರಹೇಣ ಚ||
ದೇವತೆಗಳನ್ನು ಯಜ್ಞಗಳಿಂದಲೂ, ಪಿತೃಗಳನ್ನು ಶ್ರಾದ್ಧಗಳಿಂದಲೂ, ದೀನರನ್ನು ಅವರಿಗಿಷ್ಟವಾದುದನ್ನು ನೀಡುವುದರಿಂದಲೂ, ದ್ವಿಜಸತ್ತಮರನ್ನು ಉಡುಗೊರೆಗಳಿಂದಲೂ, ಅತಿಥಿಗಳನ್ನು ಅನ್ನ-ಪಾನೀಯಗಳಿಂದಲೂ, ಪ್ರಜೆಗಳನ್ನು ಪರಿಪಾಲನೆಯಿಂದಲೂ, ಶೂದ್ರರನ್ನು ಅನುಕಂಪದಿಂದಲೂ, ದಸ್ಯುಗಳನ್ನು ನಿಗ್ರಹದಿಂದಲೂ ತೃಪ್ತಿಪಡಿಸಿದನು.
01080005a ಧರ್ಮೇಣ ಚ ಪ್ರಜಾಃ ಸರ್ವಾ ಯಥಾವದನುರಂಜಯನ್|
01080005c ಯಯಾತಿಃ ಪಾಲಯಾಮಾಸ ಸಾಕ್ಷಾದಿಂದ್ರ ಇವಾಪರಃ||
ಸಾಕ್ಷಾತ್ ಇನ್ನೊಬ್ಬ ಇಂದ್ರನೋ ಎಂಬಂತೆ ಯಯಾತಿಯು ಸರ್ವ ಪ್ರಜೆಗಳನ್ನೂ ಧರ್ಮದಿಂದ ಅನುರಂಜಿಸುತ್ತಾ ಪಾಲಿಸಿದನು.
01080006a ಸ ರಾಜಾ ಸಿಂಹವಿಕ್ರಾಂತೋ ಯುವಾ ವಿಷಯಗೋಚರಃ|
01080006c ಅವಿರೋಧೇನ ಧರ್ಮಸ್ಯ ಚಚಾರ ಸುಖಮುತ್ತಮಂ||
ಆ ಸಿಂಹವಿಕ್ರಾಂತ ಯುವರಾಜನು ವಿಷಯಗೋಚರನಾಗಿದ್ದು ಧರ್ಮಕ್ಕೆ ವಿರೋಧಬಾರದಂತೆ ಉತ್ತಮ ಸುಖವನ್ನು ಹೊಂದಿದನು.
01080007a ಸ ಸಂಪ್ರಾಪ್ಯ ಶುಭಾನ್ಕಾಮಾಂಸ್ತೃಪ್ತಃ ಖಿನ್ನಶ್ಚ ಪಾರ್ಥಿವಃ|
01080007c ಕಾಲಂ ವರ್ಷಸಹಸ್ರಾಂತಂ ಸಸ್ಮಾರ ಮನುಜಾಧಿಪಃ||
ಎಲ್ಲ ಕಾಮಸುಖಗಳನ್ನೂ ಹೊಂದಿ ತೃಪ್ತನಾದ ಪಾರ್ಥಿವ ಮನುಜಾಧಿಪನು ಒಂದು ಸಾವಿರ ವರ್ಷಗಳ ಅವಧಿಯು ಮುಗಿದಿದ್ದುದನ್ನು ನೆನಪಿಸಿಕೊಂಡು ಖಿನ್ನನಾದನು.
01080008a ಪರಿಸಂಖ್ಯಾಯ ಕಾಲಜ್ಞಃ ಕಲಾಃ ಕಾಷ್ಠಾಶ್ಚ ವೀರ್ಯವಾನ್|
01080008c ಪೂರ್ಣಂ ಮತ್ವಾ ತತಃ ಕಾಲಂ ಪೂರುಂ ಪುತ್ರಮುವಾಚ ಹ||
ದಿನಗಳು ಮತ್ತು ಘಂಟೆಗಳನ್ನು ಲೆಕ್ಕಹಾಕುತ್ತಾ ಬಂದಿದ್ದ ಆ ಕಾಲಜ್ಞ ವೀರನು ತನ್ನ ಸಮಯವು ಮುಗಿಯಿತೆಂದು ತಿಳಿದು ಪುತ್ರ ಪೂರುವನ್ನು ಕರೆದು ಹೇಳಿದನು:
01080009a ಯಥಾಕಾಮಂ ಯಥೋತ್ಸಾಹಂ ಯಥಾಕಾಲಮರಿಂದಮ|
01080009c ಸೇವಿತಾ ವಿಷಯಾಃ ಪುತ್ರ ಯೌವನೇನ ಮಯಾ ತವ||
“ಅರಿಂದಮ! ನಿನ್ನ ಈ ಯೌವನದಿಂದ ನಾನು ಯಥೇಚ್ಛವಾಗಿ, ಉತ್ಸಾಹವಿದ್ದಷ್ಟು, ಸಮಯ ಸಿಕ್ಕಿದಷ್ಟು, ವಿಷಯ ಸುಖವನ್ನು ಸೇವಿಸಿದೆ.
01080010a ಪೂರೋ ಪ್ರೀತೋಽಸ್ಮಿ ಭದ್ರಂ ತೇ ಗೃಹಾಣೇದಂ ಸ್ವಯೌವನಂ|
01080010c ರಾಜ್ಯಂ ಚೈವ ಗೃಹಾಣೇದಂ ತ್ವಂ ಹಿ ಮೇ ಪ್ರಿಯಕೃತ್ಸುತಃ||
ಪೂರು! ನಿನಗೆ ಮಂಗಳವಾಗಲಿ. ನಾನು ನಿನ್ನಿಂದ ಬಹಳ ಸಂತೋಷಗೊಂಡಿದ್ದೇನೆ. ನಿನ್ನ ಯೌವನವನ್ನು ಹಿಂತೆಗೆದುಕೋ. ನನಗೆ ಪ್ರಿಯವಾದುದನ್ನೆಸಗಿದ ಮಗನಾದ ನೀನು ಈ ರಾಜ್ಯವನ್ನೂ ತೆಗೆದುಕೋ.”
01080011 ವೈಶಂಪಾಯನ ಉವಾಚ|
01080011a ಪ್ರತಿಪೇದೇ ಜರಾಂ ರಾಜಾ ಯಯಾತಿರ್ನಾಹುಷಸ್ತದಾ|
01080011c ಯೌವನಂ ಪ್ರತಿಪೇದೇ ಚ ಪೂರುಃ ಸ್ವಂ ಪುನರಾತ್ಮನಃ||
ವೈಶಂಪಾಯನನು ಹೇಳಿದನು: “ನಾಹುಷ ಯಯಾತಿ ರಾಜನು ವೃದ್ಧಾಪ್ಯವನ್ನು ಹಿಂತೆಗೆದುಕೊಂಡನು ಮತ್ತು ಪೂರುವು ತನ್ನ ಯೌವನವನ್ನು ಪುನಃ ಹಿಂತೆಗೆದುಕೊಂಡನು.
01080012a ಅಭಿಷೇಕ್ತುಕಾಮಂ ನೃಪತಿಂ ಪೂರುಂ ಪುತ್ರಂ ಕನೀಯಸಂ|
01080012c ಬ್ರಾಹ್ಮಣಪ್ರಮುಖಾ ವರ್ಣಾ ಇದಂ ವಚನಮಬ್ರುವನ್||
ನೃಪತಿಯು ತನ್ನ ಕಿರಿಯ ಮಗ ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡಲು ಬಯಸಿದನು. ಆದರೆ, ಬ್ರಾಹ್ಮಣರ ನಾಯಕತ್ವದಲ್ಲಿ ನಾಲ್ಕೂ ವರ್ಣದವರು ಬಂದು ಈ ಮಾತುಗಳನ್ನು ಹೇಳಿದರು:
01080013a ಕಥಂ ಶುಕ್ರಸ್ಯ ನಪ್ತಾರಂ ದೇವಯಾನ್ಯಾಃ ಸುತಂ ಪ್ರಭೋ|
01080013c ಜ್ಯೇಷ್ಠಂ ಯದುಮತಿಕ್ರಮ್ಯ ರಾಜ್ಯಂ ಪೂರೋಃ ಪ್ರದಾಸ್ಯಸಿ||
“ಪ್ರಭೋ! ಶುಕ್ರನ ಮೊಮ್ಮಗನೂ ದೇವಯಾನಿಯ ಮಗನೂ ನಿನ್ನ ಜ್ಯೇಷ್ಠ ಪುತ್ರನೂ ಆದ ಯದುವನ್ನು ಬಿಟ್ಟು ಪೂರುವಿಗೆ ಏಕೆ ರಾಜ್ಯವನ್ನು ಕೊಡುತ್ತಿರುವೆ?
01080014a ಯದುರ್ಜ್ಯೇಷ್ಠಸ್ತವ ಸುತೋ ಜಾತಸ್ತಮನು ತುರ್ವಸುಃ|
01080014c ಶರ್ಮಿಷ್ಠಾಯಾಃ ಸುತೋ ದ್ರುಹ್ಯುಸ್ತತೋಽನುಃ ಪೂರುರೇವ ಚ||
ಯದುವು ನಿನ್ನ ಜ್ಯೇಷ್ಠ ಪುತ್ರ. ನಂತರ ಹುಟ್ಟಿದವನು ತುರ್ವಸು. ಶರ್ಮಿಷ್ಠೆಯ ಮಕ್ಕಳಲ್ಲಿ ದ್ರುಹು, ನಂತರ ಅನು ಮತ್ತು ಕೊನೆಯವನು ಪೂರು.
01080015a ಕಥಂ ಜ್ಯೇಷ್ಠಾನತಿಕ್ರಮ್ಯ ಕನೀಯಾನ್ರಾಜ್ಯಮರ್ಹತಿ|
01080015c ಏತತ್ಸಂಬೋಧಯಾಮಸ್ತ್ವಾಂ ಧರ್ಮಂ ತ್ವಮನುಪಾಲಯ||
ಹಿರಿಯವನನ್ನು ಅತಿಕ್ರಮಿಸಿ ಕಿರಿಯವನು ಹೇಗೆ ರಾಜ್ಯಕ್ಕೆ ಹಕ್ಕುದಾರನಾಗುತ್ತಾನೆ? ಇದನ್ನು ನೀನು ಸಂಬೋಧಿಸಬೇಕು. ಧರ್ಮವನ್ನು ಅನುಸರಿಸಬೇಕು.”
01080016 ಯಯಾತಿರುವಾಚ|
01080016a ಬ್ರಾಹ್ಮಣಪ್ರಮುಖಾ ವರ್ಣಾಃ ಸರ್ವೇ ಶೃಣ್ವಂತು ಮೇ ವಚಃ|
01080016c ಜ್ಯೇಷ್ಠಂ ಪ್ರತಿ ಯಥಾ ರಾಜ್ಯಂ ನ ದೇಯಂ ಮೇ ಕಥಂ ಚನ||
ಯಯಾತಿಯು ಹೇಳಿದನು: “ಬ್ರಾಹ್ಮಣರನ್ನು ಮುಂದಿಟ್ಟುಕೊಂಡು ಬಂದ ಸರ್ವ ವರ್ಣದವರೇ! ನಾನು ಏಕೆ ಜ್ಯೇಷ್ಠ ಪುತ್ರನಿಗೆ ರಾಜ್ಯವನ್ನು ಕೊಡುವುದಿಲ್ಲ ಎನ್ನುವುದಕ್ಕೆ ನನ್ನ ಮಾತುಗಳನ್ನು ಕೇಳಿ.
01080017a ಮಮ ಜ್ಯೇಷ್ಠೇನ ಯದುನಾ ನಿಯೋಗೋ ನಾನುಪಾಲಿತಃ|
01080017c ಪ್ರತಿಕೂಲಃ ಪಿತುರ್ಯಶ್ಚ ನ ಸ ಪುತ್ರಃ ಸತಾಂ ಮತಃ||
ನನ್ನ ಜ್ಯೇಷ್ಠ ಪುತ್ರ ಯದುವು ನನ್ನ ನಿಯೋಗವನ್ನು ಪರಿಪಾಲಿಸಲಿಲ್ಲ. ತಂದೆಯ ಪ್ರತಿಕೂಲನಾದವನನ್ನು ಪುತ್ರನೆಂದು ಸಂತರು ಪರಿಗಣಿಸುವುದಿಲ್ಲ.
01080018a ಮಾತಾಪಿತ್ರೋರ್ವಚನಕೃದ್ಧಿತಃ ಪಥ್ಯಶ್ಚ ಯಃ ಸುತಃ|
01080018c ಸ ಪುತ್ರಃ ಪುತ್ರವದ್ಯಶ್ಚ ವರ್ತತೇ ಪಿತೃಮಾತೃಷು||
ತಂದೆ ತಾಯಿಗಳ ಮಾತಿನಂತೆ ಯಾರು ನಡೆಯುತ್ತಾನೋ ಅವನೇ ಮಗನೆನಿಸಿಕೊಳ್ಳುತ್ತಾನೆ. ತಂದೆ ತಾಯಿಯರ ಒಳಿತು ಯಾರ ಹೃದಯದಲ್ಲಿರುತ್ತದೆಯೋ ಅವನೇ ಪುತ್ರನೆನಿಸಿಕೊಳ್ಳುತ್ತಾನೆ.
01080019a ಯದುನಾಹಮವಜ್ಞಾತಸ್ತಥಾ ತುರ್ವಸುನಾಪಿ ಚ|
01080019c ದ್ರುಹ್ಯುನಾ ಚಾನುನಾ ಚೈವ ಮಯ್ಯವಜ್ಞಾ ಕೃತಾ ಭೃಶಂ||
ಯದುವು ನನ್ನನ್ನು ಕಡೆಗಣಿಸಿದನು. ಹಾಗೆಯೇ ತುರ್ವಸು, ದ್ರುಹ್ಯು, ಮತ್ತು ಅನು ಎಲ್ಲರೂ ನನ್ನ ಕುರಿತು ಅತೀವ ತಿರಸ್ಕಾರವನ್ನು ತೋರಿಸಿದರು.
01080020a ಪೂರುಣಾ ಮೇ ಕೃತಂ ವಾಕ್ಯಂ ಮಾನಿತಶ್ಚ ವಿಶೇಷತಃ|
01080020c ಕನೀಯಾನ್ಮಮ ದಾಯಾದೋ ಜರಾ ಯೇನ ಧೃತಾ ಮಮ|
01080020e ಮಮ ಕಾಮಃ ಸ ಚ ಕೃತಃ ಪೂರುಣಾ ಪುತ್ರರೂಪಿಣಾ||
ನನ್ನ ಮಾತನ್ನು ಪರಿಪಾಲಿಸಿದ ಪೂರುವು ಕಿರಿಯವನಾಗಿದ್ದರೂ ನನ್ನ ವಿಶೇಷಗೌರವವನ್ನು ಹೊಂದಿದ್ದಾನೆ. ಆ ನನ್ನ ಮಗ ಪೂರುವು ನನ್ನ ವೃದ್ಧಾಪ್ಯವನ್ನು ಧರಿಸಿ ನಿಜವಾದ ಪುತ್ರನಂತೆ ನನ್ನ ಆಸೆಯನ್ನು ನೆರವೇರಿಸಿಕೊಟ್ಟನು.
01080021a ಶುಕ್ರೇಣ ಚ ವರೋ ದತ್ತಃ ಕಾವ್ಯೇನೋಶನಸಾ ಸ್ವಯಂ|
01080021c ಪುತ್ರೋ ಯಸ್ತ್ವಾನುವರ್ತೇತ ಸ ರಾಜಾ ಪೃಥಿವೀಪತಿಃ|
01080021e ಭವತೋಽನುನಯಾಂಯೇವಂ ಪೂರೂ ರಾಜ್ಯೇಽಭಿಷಿಚ್ಯತಾಂ||
ಇದೂ ಅಲ್ಲದೇ ಸ್ವಯಂ ಕಾವ್ಯ ಉಸನಸ ಶುಕ್ರನೇ ಇತ್ತ ವರದಂತೆ ನನಗೆ ವಿಧೇಯನಾದ ಮಗನು ರಾಜ ಪೃಥ್ವೀಪತಿಯಾಗುತ್ತಾನೆ. ಆದುದರಿಂದ ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡುತ್ತಿದ್ದೇನೆ.”
01080022 ಪ್ರಕೃತಯ ಊಚುಃ|
01080022a ಯಃ ಪುತ್ರೋ ಗುಣಸಂಪನ್ನೋ ಮಾತಾಪಿತ್ರೋರ್ಹಿತಃ ಸದಾ|
01080022c ಸರ್ವಮರ್ಹತಿ ಕಲ್ಯಾಣಂ ಕನೀಯಾನಪಿ ಸ ಪ್ರಭೋ||
ಪ್ರಜೆಗಳು ಹೇಳಿದರು: “ಪ್ರಭೋ! ಯಾವ ಮಗನು ಗುಣಸಂಪನ್ನನಾಗಿದ್ದು ತಂದೆ ತಾಯಿಗಳ ಹಿತವನ್ನು ಸದಾ ಯೋಚಿಸುತ್ತಿರುತ್ತಾನೋ ಅವನು ಕಿರಿಯವನಾಗಿದ್ದರೂ ಒಳ್ಳೆಯದೆಲ್ಲವುದಕ್ಕೂ ಅರ್ಹನಾಗುತ್ತಾನೆ.
01080023a ಅರ್ಹಃ ಪೂರುರಿದಂ ರಾಜ್ಯಂ ಯಃ ಸುತಃ ಪ್ರಿಯಕೃತ್ತವ|
01080023c ವರದಾನೇನ ಶುಕ್ರಸ್ಯ ನ ಶಕ್ಯಂ ವಕ್ತುಮುತ್ತರಂ||
ನಿನಗೆ ಪ್ರಿಯವಾದುದನ್ನು ಮಾಡಿದ ಸುತ ಪೂರುವು ಈ ರಾಜ್ಯಕ್ಕೆ ಅರ್ಹನಾಗಿದ್ದಾನೆ. ಶುಕ್ರನಿಂದಲೂ ಈ ರೀತಿಯ ವರದಾನವಾಗಿದೆಯೆಂದರೆ ಇನ್ನು ಮುಂದೆ ಹೇಳುವುದಕ್ಕೇ ಸಾಧ್ಯವಿಲ್ಲ.””
01080024 ವೈಶಂಪಾಯನ ಉವಾಚ|
01080024a ಪೌರಜಾನಪದೈಸ್ತುಷ್ಟೈರಿತ್ಯುಕ್ತೋ ನಾಹುಷಸ್ತದಾ|
01080024c ಅಭ್ಯಷಿಂಚತ್ತತಃ ಪೂರುಂ ರಾಜ್ಯೇ ಸ್ವೇ ಸುತಮಾತ್ಮಜಂ||
ವೈಶಂಪಾಯನನು ಹೇಳಿದನು: “ಪೌರಜನ ಪದಜನರು ಈ ರೀತಿ ಹೇಳಿದ ನಂತರ ನಾಹುಷನು ತನ್ನ ಸುತ ಪೂರುವಿಗೆ ಸ್ವಯಂ ಅಭೀಷೇಕವನ್ನು ಮಾಡಿದನು.
01080025a ದತ್ತ್ವಾ ಚ ಪೂರವೇ ರಾಜ್ಯಂ ವನವಾಸಾಯ ದೀಕ್ಷಿತಃ|
01080025c ಪುರಾತ್ಸ ನಿರ್ಯಯೌ ರಾಜಾ ಬ್ರಾಹ್ಮಣೈಸ್ತಾಪಸೈಃ ಸಹ||
ರಾಜ್ಯವನ್ನು ಪೂರುವಿಗಿತ್ತು, ವನವಾಸ ದೀಕ್ಷೆಯನ್ನು ಕೈಗೊಂಡು, ಬ್ರಾಹ್ಮಣ- ತಾಪಸರನ್ನೊಡಗೂಡಿ ಪುರದಿಂದ ಹೊರ ಹೊರಟನು.
01080026a ಯದೋಸ್ತು ಯಾದವಾ ಜಾತಾಸ್ತುರ್ವಸೋರ್ಯವನಾಃ ಸುತಾಃ|
01080026c ದ್ರುಹ್ಯೋರಪಿ ಸುತಾ ಭೋಜಾ ಅನೋಸ್ತು ಮ್ಲೇಚ್ಛಜಾತಯಃ||
ಯದುವಿನಿಂದ ಯಾದವರು ಹುಟ್ಟಿದರು. ತುರ್ವಾಸುವಿನ ಮಕ್ಕಳು ಯವನರು. ದ್ರುಹ್ಯುವಿನ ಮಕ್ಕಳು ಭೋಜರು. ಮತ್ತು ಅನುವಿನ ಮಕ್ಕಳು ಮ್ಲೇಚ್ಛರು.
01080027a ಪೂರೋಸ್ತು ಪೌರವೋ ವಂಶೋ ಯತ್ರ ಜಾತೋಽಸಿ ಪಾರ್ಥಿವ|
01080027c ಇದಂ ವರ್ಷಸಹಸ್ರಾಯ ರಾಜ್ಯಂ ಕಾರಯಿತುಂ ವಶೀ||
ಪಾರ್ಥಿವ! ಪೂರುವಿನ ವಂಶದಲ್ಲಿ ಹುಟ್ಟಿದ ಪೌರವರು ಸಹಸ್ರಾರು ವರ್ಷಗಳು ಈ ರಾಜ್ಯವನ್ನು ಆಳಿದರು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಅಶೀತಿತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತನೆಯ ಅಧ್ಯಾಯವು.