Adi Parva: Chapter 73

ಆದಿ ಪರ್ವ: ಸಂಭವ ಪರ್ವ

೭೩

ಜಗಳದಲ್ಲಿ ಶರ್ಮಿಷ್ಠೆಯು ದೇವಯಾನಿಯನ್ನು ಬಾವಿಗೆ ಬೀಳಿಸಿದುದು (೧-೧೫). ಯಯಾತಿಯು ದೇವಯಾನಿಯನ್ನು ಬಾವಿಯಿಂದ ಮೇಲೆತ್ತುವುದು (೧೬-೨೦). ದೇವಯಾನಿಯು ತಂದೆಯಲ್ಲಿ ಶರ್ಮಿಷ್ಠೆಯ ತಪ್ಪಿಗೆ ಸಿಶಿಕ್ಷಿಸಲು ಕೇಳಿಕೊಳ್ಳುವುದು (೨೧-೩೫).

01073001 ವೈಶಂಪಾಯನ ಉವಾಚ|

01073001a ಕೃತವಿದ್ಯೇ ಕಚೇ ಪ್ರಾಪ್ತೇ ಹೃಷ್ಟರೂಪಾ ದಿವೌಕಸಃ|

01073001c ಕಚಾದಧೀತ್ಯ ತಾಂ ವಿದ್ಯಾಂ ಕೃತಾರ್ಥಾ ಭರತರ್ಷಭ||

ವೈಶಂಪಾಯನನು ಹೇಳಿದನು: “ಭರತರ್ಷಭ! ವಿದ್ಯೆಯನ್ನು ಕಲಿತು ಬಂದ ಕಚನನ್ನು ಪಡೆದು ದಿವೌಕಸರು ಬಹಳ ಸಂತಸಗೊಂಡರು. ಕಚನಿಂದ ಆ ವಿಧ್ಯೆಯನ್ನು ಪಡೆದು ಕೃತಾರ್ಥರಾದರು.

01073002a ಸರ್ವ ಏವ ಸಮಾಗಮ್ಯ ಶತಕ್ರತುಮಥಾಬ್ರುವನ್|

01073002c ಕಾಲಸ್ತೇ ವಿಕ್ರಮಸ್ಯಾದ್ಯ ಜಹಿ ಶತ್ರೂನ್ಪುರಂದರ||

ಸರ್ವರೂ ಸೇರಿ ಶತಕ್ರತುವಿಗೆ ಹೇಳಿದರು: “ಪುರಂದರ! ಶತ್ರುಗಳನ್ನು ಸಂಹರಿಸಿ ನಿನ್ನ ವಿಕ್ರಮವನ್ನು ಅವರಿಗೆ ತೋರಿಸುವ ಕಾಲ ಬಂದಿದೆ.”

01073003a ಏವಮುಕ್ತಸ್ತು ಸಹಿತೈಸ್ತ್ರಿದಶೈರ್ಮಘವಾಂಸ್ತದಾ|

01073003c ತಥೇತ್ಯುಕ್ತ್ವೋಪಚಕ್ರಾಮ ಸೋಽಪಶ್ಯತ ವನೇ ಸ್ತ್ರಿಯಃ||

“ಹಾಗೆಯೇ ಆಗಲಿ” ಎಂದು ಹೇಳಿದ ಮಘವತನು ತ್ರಿದಶರೆಲ್ಲರನ್ನೂ ಸೇರಿಕೊಂಡು ಹೊರಟನು. ಅವರು ವನದಲ್ಲಿ ಸ್ತ್ರೀಯರನ್ನು ಕಂಡರು.

01073004a ಕ್ರೀಡಂತೀನಾಂ ತು ಕನ್ಯಾನಾಂ ವನೇ ಚೈತ್ರರಥೋಪಮೇ|

01073004c ವಾಯುಭೂತಃ ಸ ವಸ್ತ್ರಾಣಿ ಸರ್ವಾಣ್ಯೇವ ವ್ಯಮಿಶ್ರಯತ್||

ಚೈತ್ರರಥನಂತಿರುವ ವನದಲ್ಲಿ ಕನ್ಯೆಯರು ಜಲಕ್ರೀಡೆಯಾಡುತ್ತಿದ್ದರು. ಆಗ ಅವನು ವಾಯು ರೂಪವನ್ನು ತಾಳಿ ಅವರ ವಸ್ತ್ರಗಳನ್ನೆಲ್ಲಾ ಅದಲು ಬದಲು ಮಾಡಿದನು.

01073005a ತತೋ ಜಲಾತ್ಸಮುತ್ತೀರ್ಯ ಕನ್ಯಾಸ್ತಾಃ ಸಹಿತಾಸ್ತದಾ|

01073005c ವಸ್ತ್ರಾಣಿ ಜಗೃಹುಸ್ತಾನಿ ಯಥಾಸನ್ನಾನ್ಯನೇಕಶಃ||

ಎಲ್ಲರೂ ಒಟ್ಟಿಗೇ ನೀರಿನಿಂದ ಹೊರಬಂದ ಕನ್ಯೆಯರು ಅದಲು ಬದಲಾದ ವಸ್ತ್ರಗಳಲ್ಲಿ ತಮಗೆ ಸಿಕ್ಕ ವಸ್ತ್ರಗಳನ್ನು ಧರಿಸಿಕೊಂಡರು.

01073006a ತತ್ರ ವಾಸೋ ದೇವಯಾನ್ಯಾಃ ಶರ್ಮಿಷ್ಠಾ ಜಗೃಹೇ ತದಾ|

01073006c ವ್ಯತಿಮಿಶ್ರಮಜಾನಂತೀ ದುಹಿತಾ ವೃಷಪರ್ವಣಃ||

ದೇವಯಾನಿಯ ವಸ್ತ್ರವನ್ನು ವೃಷಪರ್ವಣನ ಮಗಳು ಶರ್ಮಿಷ್ಠೆಯು ಅದು ತನ್ನದಲ್ಲ ಎಂದು ತಿಳಿಯದೇ ಧರಿಸಿಕೊಂಡಳು.

01073007a ತತಸ್ತಯೋರ್ಮಿಥಸ್ತತ್ರ ವಿರೋಧಃ ಸಮಜಾಯತ|

01073007c ದೇವಯಾನ್ಯಾಶ್ಚ ರಾಜೇಂದ್ರ ಶರ್ಮಿಷ್ಠಾಯಾಶ್ಚ ತತ್ಕೃತೇ||

ರಾಜೇಂದ್ರ! ಈ ರೀತಿ ದೇವಯಾನಿ ಮತ್ತು ಶರ್ಮಿಷ್ಠೆಯರಲ್ಲಿ ಇದೇ ವಿಷಯದ ಕುರಿತು ಮನಸ್ತಾಪ ಮತ್ತು ತಪ್ಪು ತಿಳುವಳಿಕೆಗಳು ಉಂಟಾದವು.

01073008 ದೇವಯಾನ್ಯುವಾಚ|

01073008a ಕಸ್ಮಾದ್ಗೃಹ್ಣಾಸಿ ಮೇ ವಸ್ತ್ರಂ ಶಿಷ್ಯಾ ಭೂತ್ವಾ ಮಮಾಸುರಿ|

01073008c ಸಮುದಾಚಾರಹೀನಾಯಾ ನ ತೇ ಶ್ರೇಯೋ ಭವಿಷ್ಯತಿ||

ದೇವಯಾನಿಯು ಹೇಳಿದಳು: “ನನ್ನ ಶಿಷ್ಯೆ ಅಸುರಿ ನೀನು ಹೇಗೆ ನನ್ನ ವಸ್ತ್ರವನ್ನು ಧರಿಸಿದ್ದೀಯೆ? ಒಳ್ಳೆಯ ನಡತೆಯನ್ನು ಕಳೆದುಕೊಂಡ ನಿನಗೆ ಎಂದೂ ಶ್ರೇಯಸ್ಸು ಉಂಟಾಗಲಾರದು.”

01073009 ಶರ್ಮಿಷ್ಠೋವಾಚ|

01073009a ಆಸೀನಂ ಚ ಶಯಾನಂ ಚ ಪಿತಾ ತೇ ಪಿತರಂ ಮಮ|

01073009c ಸ್ತೌತಿ ವಂದತಿ ಚಾಭೀಕ್ಷ್ಣಂ ನೀಚೈಃ ಸ್ಥಿತ್ವಾ ವಿನೀತವತ್||

ಶರ್ಮಿಷ್ಠೆಯು ಹೇಳಿದಳು: “ನನ್ನ ತಂದೆಯು ಕುಳಿತಿರಲಿ ಅಥವಾ ಮಲಗಿರಲಿ, ನಿನ್ನ ತಂದೆಯು ಅವನಿಗಿಂಥ ಕೆಳ ಸ್ಥಾನದಲ್ಲಿ ನಿಂತು ವಿನೀತನಾಗಿ ಶ್ಲಾಘನೀಯವಾಗಿ ಸ್ತುತಿಸುತ್ತಾನೆ.

01073010a ಯಾಚತಸ್ತ್ವಂ ಹಿ ದುಹಿತಾ ಸ್ತುವತಃ ಪ್ರತಿಗೃಹ್ಣತಃ|

01073010c ಸುತಾಹಂ ಸ್ತೂಯಮಾನಸ್ಯ ದದತೋಽಪ್ರತಿಗೃಹ್ಣತಃ||

ಸ್ತುತಿಸುವ, ಸ್ವೀಕರಿಸುವ, ಬೇಡುವವನ ಮಗಳು ನೀನು. ನಾನು ಸ್ತುತಿಸಲ್ಪಡುವ, ಕೊಡುವ ಮತ್ತು ಏನನ್ನೂ ಸ್ವೀಕರಿಸದೇ ಇರುವವನ ಮಗಳು.

01073011a ಅನಾಯುಧಾ ಸಾಯುಧಾಯಾ ರಿಕ್ತಾ ಕ್ಷುಭ್ಯಸಿ ಭಿಕ್ಷುಕಿ|

01073011c ಲಪ್ಸ್ಯಸೇ ಪ್ರತಿಯೋದ್ಧಾರಂ ನ ಹಿ ತ್ವಾಂ ಗಣಯಾಂಯಹಂ||

ಭಿಕ್ಷುಕೀ! ಅನಾಯುಧಳಾದ ಮತ್ತು ಯಾರ ಬೆಂಬಲವೂ ಇಲ್ಲದ ನೀನು ನನ್ನ ಮುಂದೆ ಥರಥರಿಸುತ್ತೀಯೆ. ನಿನ್ನ ಸರಿಸಾಟಿಯಾದವಳನ್ನು ಹುಡುಕಿಕೋ. ನಾನು ನಿನ್ನನ್ನು ನನ್ನ ಸರಿಸಾಟಿಯೆಂದು ಪರಿಗಣಿಸುವುದಿಲ್ಲ.””

01073012 ವೈಶಂಪಾಯನ ಉವಾಚ|

01073012a ಸಮುಚ್ಛ್ರಯಂ ದೇವಯಾನೀಂ ಗತಾಂ ಸಕ್ತಾಂ ಚ ವಾಸಸಿ|

01073012c ಶರ್ಮಿಷ್ಠಾ ಪ್ರಾಕ್ಷಿಪತ್ಕೂಪೇ ತತಃ ಸ್ವಪುರಮಾವ್ರಜತ್||

ವೈಶಂಪಾಯನನು ಹೇಳಿದನು: “ಸಿಟ್ಟಿನಿಂದ ದೇವಯಾನಿಯು ತನ್ನ ಬಟ್ಟೆಗಳನ್ನು ಹರಿಯತೊಡಗಿದಳು. ಶರ್ಮಿಷ್ಠೆಯು ಅವಳನ್ನು ಒಂದು ಬಾವಿಯೊಳಗೆ ದೂಡಿ ತನ್ನ ನಗರಕ್ಕೆ ತೆರಳಿದಳು.

01073013a ಹತೇಯಮಿತಿ ವಿಜ್ಞಾಯ ಶರ್ಮಿಷ್ಠಾ ಪಾಪನಿಶ್ಚಯಾ|

01073013c ಅನವೇಕ್ಷ್ಯ ಯಯೌ ವೇಶ್ಮ ಕ್ರೋಧವೇಗಪರಾಯಣಾ||

ಪಾಪನಿಶ್ಚಯೆ ಶರ್ಮಿಷ್ಠೆಯು ಅವಳು ತೀರಿಕೊಂಡಳೆಂದು ಯೋಚಿಸುತ್ತಾ, ಕ್ರೋಧವಶಾತ್ ಬಾವಿಯಲ್ಲಿ ಇಣುಕಿ ನೋಡದೇ ತನ್ನ ಮನೆಗೆ ಹೊರಟು ಹೋದಳು.

01073014a ಅಥ ತಂ ದೇಶಮಭ್ಯಾಗಾದ್ಯಯಾತಿರ್ನಹುಷಾತ್ಮಜಃ|

01073014c ಶ್ರಾಂತಯುಗ್ಯಃ ಶ್ರಾಂತಹಯೋ ಮೃಗಲಿಪ್ಸುಃ ಪಿಪಾಸಿತಃ||

ಇದೇ ಸಮಯದಲ್ಲಿ ನಹುಷಾತ್ಮಜ ಯಯಾತಿಯು ಜಿಂಕೆಯೊಂದನ್ನು ಅರಸುತ್ತಾ ಅಲ್ಲಿಗೆ ಬಂದನು. ಅವನ ಸಾರಥಿಯು ಬಳಲಿದ್ದನು. ಕುದುರೆಗಳು ಬಳಲಿದ್ದವು ಮತ್ತು ಅವನೂ ಕೂಡ ಬಹಳಷ್ಟು ಬಾಯಾರಿದ್ದನು.

01073015a ಸ ನಾಹುಷಃ ಪ್ರೇಕ್ಷಮಾಣ ಉದಪಾನಂ ಗತೋದಕಂ|

01073015c ದದರ್ಶ ಕನ್ಯಾಂ ತಾಂ ತತ್ರ ದೀಪ್ತಾಮಗ್ನಿಶಿಖಾಮಿವ||

ನಾಹುಷನು ಬತ್ತಿಹೋಗಿದ್ದ ಆ ಬಾವಿಯಲ್ಲಿ ಇಣುಕಿದಾಗ ಅಲ್ಲಿ ಆ ಅಗ್ನಿಶಿಖೆಯಂಥಹ ತೇಜೋಮಯ ಕನ್ಯೆಯನ್ನು ನೋಡಿದನು.

01073016a ತಾಮಪೃಚ್ಛತ್ಸ ದೃಷ್ಟ್ವೈವ ಕನ್ಯಾಮಮರವರ್ಣಿನೀಂ|

01073016c ಸಾಂತ್ವಯಿತ್ವಾ ನೃಪಶ್ರೇಷ್ಠಃ ಸಾಮ್ನಾ ಪರಮವಲ್ಗುನಾ||

ಆ ದೇವಕನ್ಯೆಯಂಥ ರೂಪವತಿಯನ್ನು ನೋಡಿದ ನೃಪಶ್ರೇಷ್ಠನು ಸಂತಯಿಸುತ್ತಾ, ಅತ್ಯಂತ ಮೃದು ಮಾತುಗಳಿಂದ ಕೇಳಿದನು:

01073017a ಕಾ ತ್ವಂ ತಾಮ್ರನಖೀ ಶ್ಯಾಮಾ ಸುಮೃಷ್ಟಮಣಿಕುಂಡಲಾ|

01073017c ದೀರ್ಘಂ ಧ್ಯಾಯಸಿ ಚಾತ್ಯರ್ಥಂ ಕಸ್ಮಾಚ್ಶ್ವಸಿಷಿ ಚಾತುರಾ||

“ತಾಮ್ರಬಣ್ಣದ ಉಗುರುಗಳು ಮತ್ತು ಸುಂದರ ಮಣಿಕುಂಡಲಗಳನ್ನು ಹೊಂದಿರುವ ಶ್ಯಾಮ ಸುಂದರಿ ಯಾರು ನೀನು? ಯಾವ ಕಾರಣದಿಂದಾಗಿ ನೀನು ಈ ರೀತಿ ನಿಟ್ಟುಸಿರು ಬಿಡುತ್ತಾ ವ್ಯಾಕುಲಳಾಗಿದ್ದೀಯೆ?

01073018a ಕಥಂ ಚ ಪತಿತಾಸ್ಯಸ್ಮನ್ಕೂಪೇ ವೀರುತ್ತೃಣಾವೃತೇ|

01073018c ದುಹಿತಾ ಚೈವ ಕಸ್ಯ ತ್ವಂ ವದ ಸರ್ವಂ ಸುಮಧ್ಯಮೇ||

ಹುಲ್ಲು ಗಿಡಗಂಟಿಗಳಿಂದ ತುಂಬಿದ ಈ ಬಾವಿಯಲ್ಲಿ ಹೇಗೆ ಬಿದ್ದೆ? ಸುಮಧ್ಯಮೇ! ನೀನು ಯಾರ ಮಗಳು? ಎಲ್ಲವನ್ನೂ ಸವಿಸ್ತಾರವಾಗಿ ಹೇಳು.”

01073019 ದೇವಯಾನ್ಯುವಾಚ|

01073019a ಯೋಽಸೌ ದೇವೈರ್ಹತಾನ್ದೈತ್ಯಾನುತ್ಥಾಪಯತಿ ವಿದ್ಯಯಾ|

01073019c ತಸ್ಯ ಶುಕ್ರಸ್ಯ ಕನ್ಯಾಹಂ ಸ ಮಾಂ ನೂನಂ ನ ಬುಧ್ಯತೇ||

ದೇವಯಾನಿಯು ಹೇಳಿದಳು: “ದೇವತೆಗಳಿಂದ ಹತರಾಗಿ ಬಿದ್ದ ದೈತ್ಯರನ್ನು ತನ್ನ ವಿದ್ಯೆಯಿಂದ ಮೇಲೆಬ್ಬಿಸುವ ಶುಕ್ರನ ಮಗಳು ನಾನು. ಆದರೆ ಅವನಿಗೆ ನಾನು ಈ ಸ್ಥಿತಿಯಲ್ಲಿರುವುದು ತಿಳಿದಿಲ್ಲ.

01073020a ಏಷ ಮೇ ದಕ್ಷಿಣೋ ರಾಜನ್ಪಾಣಿಸ್ತಾಮ್ರನಖಾಂಗುಲಿಃ|

01073020c ಸಮುದ್ಧರ ಗೃಹೀತ್ವಾ ಮಾಂ ಕುಲೀನಸ್ತ್ವಂ ಹಿ ಮೇ ಮತಃ||

ರಾಜನ್! ತಾಮ್ರನಖಾಂಗುಲಿಗಳನ್ನು ಹೊಂದಿದ ಈ ನನ್ನ ಬಲಗೈಯನ್ನು ಹಿಡಿದು ನನ್ನನ್ನು ಮೇಲೆತ್ತು. ನೀನು ಒಳ್ಳೆಯ ಕುಲದವನು ಎಂದು ನನಗೆ ತೋರುತ್ತಿದೆ.

01073021a ಜಾನಾಮಿ ಹಿ ತ್ವಾಂ ಸಂಶಾಂತಂ ವೀರ್ಯವಂತಂ ಯಶಸ್ವಿನಂ|

01073021c ತಸ್ಮಾನ್ಮಾಂ ಪತಿತಾಮಸ್ಮಾತ್ಕೂಪಾದುದ್ಧರ್ತುಮರ್ಹಸಿ||

ನೀನು ಶಾಂತಸ್ವಭಾವದವನೂ, ವೀರವಂತನೂ, ಯಶಸ್ವಿಯೂ ಎಂದು ತಿಳಿಯುತ್ತೇನೆ. ಈ ಬಾವಿಯಲ್ಲಿ ಬಿದ್ದಿರುವ ನನ್ನನ್ನು ನೀನು ಮೇಲೆತ್ತಬೇಕು.””

01073022 ವೈಶಂಪಾಯನ ಉವಾಚ|

01073022a ತಾಮಥ ಬ್ರಾಹ್ಮಣೀಂ ಸ್ತ್ರೀಂ ಚ ವಿಜ್ಞಾಯ ನಹುಷಾತ್ಮಜಃ|

01073022c ಗೃಹೀತ್ವಾ ದಕ್ಷಿಣೇ ಪಾಣಾವುಜ್ಜಹಾರ ತತೋಽವಟಾತ್||

ವೈಶಂಪಾಯನನು ಹೇಳಿದನು: “ಅವಳು ಬ್ರಾಹ್ಮಣ ಸ್ತ್ರೀಯೆಂದು ತಿಳಿದ ನಹುಷಾತ್ಮಜನು ಅವಳ ಬಲಗೈಯನ್ನು ಹಿಡಿದು ಅವಳನ್ನು ಆ ಬಾವಿಯಿಂದ ಮೇಲೆತ್ತಿದನು.

01073023a ಉದ್ಧೃತ್ಯ ಚೈನಾಂ ತರಸಾ ತಸ್ಮಾತ್ಕೂಪಾನ್ನರಾಧಿಪಃ|

01073023c ಆಮಂತ್ರಯಿತ್ವಾ ಸುಶ್ರೋಣೀಂ ಯಯಾತಿಃ ಸ್ವಪುರಂ ಯಯೌ||

ಬೇಗನೆ ಅವಳನ್ನು ಆ ಬಾವಿಯಿಂದ ಮೇಲಕ್ಕೆಳದ ನರಾಧಿಪ ಯಯಾತಿಯು ಆ ಸುಶ್ರೋಣಿಯಿಂದ ಬೀಳ್ಕೊಂಡು ತನ್ನ ನಗರಕ್ಕೆ ತೆರಳಿದನು.

01073024 ದೇವಯಾನ್ಯುವಾಚ|

01073024a ತ್ವರಿತಂ ಘೂರ್ಣಿಕೇ ಗಚ್ಛ ಸರ್ವಮಾಚಕ್ಷ್ವ ಮೇ ಪಿತುಃ|

01073024c ನೇದಾನೀಂ ಹಿ ಪ್ರವೇಕ್ಯಾಮಿ ನಗರಂ ವೃಷಪರ್ವಣಃ||

ದೇವಯಾನಿಯು ಹೇಳಿದಳು: “ಘೂರ್ಣಿಕೇ! ಬೇಗನೆ ಹೋಗಿ ನನ್ನ ತಂದೆಗೆ ನಡೆದುದೆಲ್ಲವನ್ನೂ ವರದಿಮಾಡು. ಇಂದಿನಿಂದ ನಾನು ವೃಷಪರ್ವನ ನಗರವನ್ನು ಪ್ರವೇಶಿಸಲು ನಿರಾಕರಿಸುತ್ತೇನೆ.””

01073025 ವೈಶಂಪಾಯನ ಉವಾಚ

01073025a ಸಾ ತು ವೈ ತ್ವರಿತಂ ಗತ್ವಾ ಘೂರ್ಣಿಕಾಸುರಮಂದಿರಂ|

01073025c ದೃಷ್ಟ್ವಾ ಕಾವ್ಯಮುವಾಚೇದಂ ಸಂಭ್ರಮಾವಿಷ್ಟಚೇತನಾ||

ವೈಶಂಪಾಯನನು ಹೇಳಿದನು: “ಘೂರ್ಣಿಕೆಯು ತ್ವರೆಮಾಡಿ ಅಸುರಮಂದಿರವನ್ನು ಪ್ರವೇಶಿಸಿ, ಅಲ್ಲಿ ಕಾವ್ಯನನ್ನು ಕಂಡು, ದುಗುಡದಿಂದ ಈ ರೀತಿ ಹೇಳಿದಳು:

01073026a ಆಚಕ್ಷೇ ತೇ ಮಹಾಪ್ರಾಜ್ಞ ದೇವಯಾನೀ ವನೇ ಹತಾ|

01073026c ಶರ್ಮಿಷ್ಠಯಾ ಮಹಾಭಾಗ ದುಹಿತ್ರಾ ವೃಷಪರ್ವಣಃ||

“ಮಹಾಪ್ರಾಜ್ನ! ಮಹಾಭಾಗ! ನಾನು ಹೇಳುವುದನ್ನು ಕೇಳು. ವೃಷಪರ್ವನ ಮಗಳು ಶರ್ಮಿಷ್ಠೆಯು ವನದಲ್ಲಿ ದೇವಯಾನಿಯನ್ನು ಹೊಡೆದಳು.”

01073027a ಶ್ರುತ್ವಾ ದುಹಿತರಂ ಕಾವ್ಯಸ್ತತ್ರ ಶರ್ಮಿಷ್ಠಯಾ ಹತಾಂ|

01073027c ತ್ವರಯಾ ನಿರ್ಯಯೌ ದುಃಖಾನ್ಮಾರ್ಗಮಾಣಃ ಸುತಾಂ ವನೇ||

ತನ್ನ ಮಗಳನ್ನು ಶರ್ಮಿಷ್ಠೆಯು ಹೊಡೆದಳು ಎಂದು ಕೇಳಿ ದುಃಖಿತನಾದ ಕಾವ್ಯನು ತಕ್ಷಣವೇ ಮಗಳನ್ನು ಹುಡುಕುತ್ತಾ ವನಕ್ಕೆ ಹೋದನು.

01073028a ದೃಷ್ಟ್ವಾ ದುಹಿತರಂ ಕಾವ್ಯೋ ದೇವಯಾನೀಂ ತತೋ ವನೇ|

01073028c ಬಾಹುಭ್ಯಾಂ ಸಂಪರಿಷ್ವಜ್ಯ ದುಃಖಿತೋ ವಾಕ್ಯಮಬ್ರವೀತ್||

ವನದಲ್ಲಿ ಮಗಳು ದೇವಯಾನಿಯನ್ನು ಕಂಡ ಕಾವ್ಯನು ತನ್ನ ಬಾಹುಗಳಿಂದ ಅವಳನ್ನು ಬಿಗಿದಪ್ಪಿ, ದುಃಖಭರಿತನಾಗಿ ಈ ಮಾತುಗಳನ್ನಾಡಿದನು:

01073029a ಆತ್ಮದೋಷೈರ್ನಿಯಚ್ಛಂತಿ ಸರ್ವೇ ದುಃಖಸುಖೇ ಜನಾಃ|

01073029c ಮನ್ಯೇ ದುಶ್ಚರಿತಂ ತೇಽಸ್ತಿ ಯಸ್ಯೇಯಂ ನಿಷ್ಕೃತಿಃ ಕೃತಾ||

“ತಾವೇ ಮಾಡಿದ ತಪ್ಪುಗಳಿಂದಾಗಿ ಜನರು ಸುಖ-ದುಃಖಗಳೆಲ್ಲವನ್ನೂ ಅನುಭವಿಸುತ್ತಾರೆ. ಈ ಅವಸ್ಥೆಯನ್ನು ಪಡೆದಿರುವ ನೀನೂ ಕೂಡ ಯಾವುದೋ ಪಾಪವನ್ನು ಮಾಡಿರಬೇಕು ಎಂದು ನನಗನ್ನಿಸುತ್ತದೆ.”

01073030 ದೇವಯಾನ್ಯುವಾಚ|

01073030a ನಿಷ್ಕೃತಿರ್ಮೇಽಸ್ತು ವಾ ಮಾಸ್ತು ಶೃಣುಷ್ವಾವಹಿತೋ ಮಮ|

01073030c ಶರ್ಮಿಷ್ಠಯಾ ಯದುಕ್ತಾಸ್ಮಿ ದುಹಿತ್ರಾ ವೃಷಪರ್ವಣಃ|

01073030e ಸತ್ಯಂ ಕಿಲೈತತ್ಸಾ ಪ್ರಾಹ ದೈತ್ಯಾನಾಮಸಿ ಗಾಯನಃ||

ದೇವಯಾನಿಯು ಹೇಳಿದಳು: “ನನ್ನ ತಪ್ಪಿರಬಹುದು ಅಥವಾ ಇಲ್ಲದಿರಬಹುದು. ನಾನು ಹೇಳುವುದನ್ನು ಗಮನವಿಟ್ಟು ಕೇಳು. ವೃಷಪರ್ವನ ಮಗಳು ಶರ್ಮಿಷ್ಠೆಯು ಸತ್ಯವನ್ನೇ ನುಡಿದಿರಬಹುದು. ನೀನು ದೈತ್ಯರ ಹೊಗಳು ಭಟ್ಟನೆಂದು ಅವಳು ಹೇಳಿದಳು.

01073031a ಏವಂ ಹಿ ಮೇ ಕಥಯತಿ ಶರ್ಮಿಷ್ಠಾ ವಾರ್ಷಪರ್ವಣೀ|

01073031c ವಚನಂ ತೀಕ್ಷ್ಣಪರುಷಂ ಕ್ರೋಧರಕ್ತೇಕ್ಷಣಾ ಭೃಶಂ||

ವಾರ್ಷಪರ್ವಣೀ ಶರ್ಮಿಷ್ಠೆಯು ಕಣ್ಣುಗಳನ್ನು ಕೆಂಪುಮಾಡಿ ಕ್ರೋಧದಿಂದ ಈ ರೀತಿ ನೋಯಿಸುವ ತೀಕ್ಷ್ಣ ಮಾತುಗಳನ್ನಾಡಿದಳು.

01073032a ಸ್ತುವತೋ ದುಹಿತಾ ಹಿ ತ್ವಂ ಯಾಚತಃ ಪ್ರತಿಗೃಹ್ಣತಃ|

01073032c ಸುತಾಹಂ ಸ್ತೂಯಮಾನಸ್ಯ ದದತೋಽಪ್ರತಿಗೃಹ್ಣತಃ||

“ಬೇಡುವ ಮತ್ತು ತೆಗೆದುಕೊಳ್ಳುವ ಹೊಗಳು ಭಟ್ಟನ ಮಗಳು ನೀನು. ನಾನಾದರೂ ಹೊಗಳಿಸಿಕೊಳ್ಳುವವನ, ಕೊಡುವವನ ಮತ್ತು ಬೇರೆಯವರಿಂದ ಏನನ್ನೂ ಸ್ವೀಕರಿಸದೇ ಇರುವವನ ಮಗಳು!”

01073033a ಇತಿ ಮಾಮಾಹ ಶರ್ಮಿಷ್ಠಾ ದುಹಿತಾ ವೃಷಪರ್ವಣಃ|

01073033c ಕ್ರೋಧಸಂರಕ್ತನಯನಾ ದರ್ಪಪೂರ್ಣಾ ಪುನಃ ಪುನಃ||

ವೃಷಪರ್ವನ ಮಗಳು ಶರ್ಮಿಷ್ಠೆಯು ಸಿಟ್ಟಿನಿಂದ ಕಣ್ಣನ್ನು ಕೆಂಪುಮಾಡಿಕೊಂಡು ಸೊಕ್ಕಿನಿಂದ ಉಬ್ಬಿ ಮೇಲಿಂದ ಮೇಲೆ ಇದೇ ಮಾತುಗಳನ್ನಾಡಿದಳು.

01073034a ಯದ್ಯಹಂ ಸ್ತುವತಸ್ತಾತ ದುಹಿತಾ ಪ್ರತಿಗೃಹ್ಣತಃ|

01073034c ಪ್ರಸಾದಯಿಷ್ಯೇ ಶರ್ಮಿಷ್ಠಾಮಿತ್ಯುಕ್ತಾ ಹಿ ಸಖೀ ಮಯಾ||

ಒಂದುವೇಳೆ ನಾನು ಹೊಗಳುಭಟ್ಟನ, ಬೇಡುವವನ ಮತ್ತು ತೆಗೆದುಕೊಳ್ಳುವನ ಮಗಳೇ ಆಗಿದ್ದರೆ ನಾನು ಅವಳಿಗಿಷ್ಟವಾದುದನ್ನು ಮಾಡುತ್ತೇನೆಂದು ನನ್ನ ಸಖಿ ಶರ್ಮಿಷ್ಠೆಗೆ ಹೇಳಿದ್ದೇನೆ.”

01073035 ಶುಕ್ರ ಉವಾಚ|

01073035a ಸ್ತುವತೋ ದುಹಿತಾ ನ ತ್ವಂ ಭದ್ರೇ ನ ಪ್ರತಿಗೃಹ್ಣತಃ|

01073035c ಅಸ್ತೋತುಃ ಸ್ತೂಯಮಾನಸ್ಯ ದುಹಿತಾ ದೇವಯಾನ್ಯಸಿ||

ಶುಕ್ರನು ಹೇಳಿದನು: “ಭದ್ರೇ! ದೇವಯಾನಿ! ನೀನು ಹೊಗಳು ಭಟ್ಟನ ಮಗಳಲ್ಲ! ಬೇಡುವವನ ಮತ್ತು ತೆಗೆದುಕೊಳ್ಳುವವನ ಮಗಳೂ ಅಲ್ಲ! ಎಲ್ಲರಿಂದ ಸ್ತುತಿಸಲ್ಪಡುವ ಮತ್ತು ಯಾರ ಸ್ತುತಿಯನ್ನೂ ಮಾಡದವನ ಮಗಳು ನೀನು.

01073036a ವೃಷಪರ್ವೈವ ತದ್ವೇದ ಶಕ್ರೋ ರಾಜಾ ಚ ನಾಹುಷಃ|

01073036c ಅಚಿಂತ್ಯಂ ಬ್ರಹ್ಮ ನಿರ್ದ್ವಂದ್ವಮೈಶ್ವರಂ ಹಿ ಬಲಂ ಮಮ||

ಅಚಿಂತ್ಯನೂ ನಿರ್ದ್ವಂದ್ಯನೂ ಆದ ಈಶ್ವರ ಬ್ರಹ್ಮನೇ ನನ್ನ ಬಲವೆಂದು ವೃಷಪರ್ವನೂ, ಇಂದ್ರನೂ, ಮತ್ತು ರಾಜ ನಹುಷನೂ ಅರಿತುಕೊಂಡಿದ್ದಾರೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ತ್ರಿಸಪ್ತತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತ್ಮೂರನೆಯ ಅಧ್ಯಾಯವು.

Comments are closed.