Adi Parva: Chapter 67

ಆದಿ ಪರ್ವ: ಸಂಭವ ಪರ್ವ

೬೭

ದುಃಷಂತನು ಶಕುಂತಲೆಯನ್ನು ವಿವಾಹವಾಗಲು ಕೇಳಿಕೊಳ್ಳುವುದು (೧-೧೫). ಅವಳ ಮಗನೇ ತನ್ನ ವಾರಸುದಾರನಾಗುತ್ತಾನೆಂದು ಭರವಸೆಯನ್ನು ನೀಡಿ ದುಃಷಂತನು ಶಕುಂತಲೆಯನ್ನು ಕೂಡಿ ಹೊರಟುಹೋದುದು (೧೬-೨೦). ಕಣ್ವನು ಹಿಂದಿರುಗಿದಾಗ ಶಕುಂತಲೆಯನ್ನು ಸಂತವಿಸಿ ವರವನ್ನಿತ್ತಿದುದು (೨೧-೩೦).

01067001 ದುಃಷಂತ ಉವಾಚ

01067001a ಸುವ್ಯಕ್ತಂ ರಾಜಪುತ್ರೀ ತ್ವಂ ಯಥಾ ಕಲ್ಯಾಣಿ ಭಾಷಸೇ|

01067001c ಭಾರ್ಯಾ ಮೇ ಭವ ಸುಶ್ರೋಣಿ ಬ್ರೂಹಿ ಕಿಂ ಕರವಾಣಿ ತೇ||

ದುಃಷಂತನು ಹೇಳಿದನು: “ರಾಜಪುತ್ರೀ! ಕಲ್ಯಾಣೀ! ನೀನು ಹೇಳಿದುದೆಲ್ಲವೂ ಸಂಯುಕ್ತವಾಗಿದೆ. ಸುಶ್ರೋಣಿ! ನನ್ನ ಭಾರ್ಯೆಯಾಗು. ನಿನಗಾಗಿ ನಾನು ಏನು ಮಾಡಲಿ ಹೇಳು.

01067002a ಸುವರ್ಣಮಾಲಾ ವಾಸಾಂಸಿ ಕುಂಡಲೇ ಪರಿಹಾಟಕೇ|

01067002c ನಾನಾಪತ್ತನಜೇ ಶುಭ್ರೇ ಮಣಿರತ್ನೇ ಚ ಶೋಭನೇ||

01067003a ಆಹರಾಮಿ ತವಾದ್ಯಾಹಂ ನಿಷ್ಕಾದೀನ್ಯಜಿನಾನಿ ಚ|

01067003c ಸರ್ವಂ ರಾಜ್ಯಂ ತವಾದ್ಯಾಸ್ತು ಭಾರ್ಯಾ ಮೇ ಭವ ಶೋಭನೇ||

ಶೋಭನೇ! ನಿನಗೋಸ್ಕರ ನಾನು ಇಂದೇ ಸುವರ್ಣಮಾಲೆ, ವಸ್ತ್ರಗಳು, ಕುಂಡಲಗಳು, ನಾನಾ ರೀತಿಯ ಮುತ್ತು, ವಜ್ರ, ಶುಭ್ರ ಮಣಿ ರತ್ನಗಳು, ಇನ್ನೂ ಮುಂತಾದ ವಸ್ತುಗಳನ್ನು ತರಿಸುತ್ತೇನೆ. ನನ್ನ ಸರ್ವ ರಾಜ್ಯವನ್ನೂ ನಿನಗಾಗಿ ಇಡುತ್ತೇನೆ. ಶೋಭನೇ! ನನ್ನ ಭಾರ್ಯೆಯಾಗು.

01067004a ಗಾಂಧರ್ವೇಣ ಚ ಮಾಂ ಭೀರು ವಿವಾಹೇನೈಹಿ ಸುಂದರಿ|

01067004c ವಿವಾಹಾನಾಂ ಹಿ ರಂಭೋರು ಗಾಂಧರ್ವಃ ಶ್ರೇಷ್ಠ ಉಚ್ಯತೇ||

ಭೀರು! ಸುಂದರಿ! ರಂಭೋರು! ಗಾಂಧರ್ವ ವಿವಾಹ ಮಾಡಿಕೊಳ್ಳೋಣ. ಏಕೆಂದರೆ ವಿವಾಹಗಳಲ್ಲೆಲ್ಲ ಗಾಂಧರ್ವ ವಿವಾಹವು ಶ್ರೇಷ್ಠವೆಂದು ಹೇಳುತ್ತಾರೆ.”

01067005 ಶಕುಂತಲೋವಾಚ

01067005a ಫಲಾಹಾರೋ ಗತೋ ರಾಜನ್ಪಿತಾ ಮೇ ಇತ ಆಶ್ರಮಾತ್|

01067005c ತಂ ಮುಹೂರ್ತಂ ಪ್ರತೀಕ್ಷಸ್ವ ಸ ಮಾಂ ತುಭ್ಯಂ ಪ್ರದಾಸ್ಯತಿ||

ಶಕುಂತಲೆಯು ಹೇಳಿದಳು: “ರಾಜನ್! ಈಗ ನನ್ನ ಪಿತನು ಫಲಾಹಾರಕ್ಕೆಂದು ಹೋಗಿದ್ದಾನೆ. ಸ್ವಲ್ಪ ಸಮಯ ಪ್ರತೀಕ್ಷಿಸು. ಅವನೇ ನನ್ನನ್ನು ನಿನಗೆ ಒಪ್ಪಿಸುತ್ತಾನೆ.”

01067006 ದುಃಷಂತ ಉವಾಚ

01067006a ಇಚ್ಛಾಮಿ ತ್ವಾಂ ವರಾರೋಹೇ ಭಜಮಾನಾಮನಿಂದಿತೇ|

01067006c ತ್ವದರ್ಥಂ ಮಾಂ ಸ್ಥಿತಂ ವಿದ್ಧಿ ತ್ವದ್ಗತಂ ಹಿ ಮನೋ ಮಮ||

ದುಃಷಂತನು ಹೇಳಿದನು: “ವರಾರೋಹೆ! ಅನಿಂದಿತೆ! ನೀನೇ ನನ್ನನ್ನು ಸ್ವೀಕರಿಸಬೇಕೆಂಬುದು ನನ್ನ ಇಚ್ಛೆ. ನಾನು ನಿನಗಾಗಿಯೇ ಇದ್ದೇನೆ ಮತ್ತು ನನ್ನ ಮನಸ್ಸು ನಿನ್ನಲ್ಲಿಯೇ ಇದೆ ಎನ್ನುವುದನ್ನು ತಿಳಿ.

01067007a ಆತ್ಮನೋ ಬಂಧುರಾತ್ಮೈವ ಗತಿರಾತ್ಮೈವ ಚಾತ್ಮನಃ|

01067007c ಆತ್ಮನೈವಾತ್ಮನೋ ದಾನಂ ಕರ್ತುಮರ್ಹಸಿ ಧರ್ಮತಃ||

ತನಗೆ ತಾನೇ ಬಂಧು ಮತ್ತು ತನ್ನನ್ನು ತಾನೇ ಅನುಸರಿಸಬೇಕು. ಆದುದರಿಂದ ಧರ್ಮದ ಪ್ರಕಾರ ತನ್ನನ್ನು ತಾನೇ ದಾನವಾಗಿ ಕೊಟ್ಟುಕೊಳ್ಳಬೇಕು.

01067008a ಅಷ್ಟಾವೇವ ಸಮಾಸೇನ ವಿವಾಹಾ ಧರ್ಮತಃ ಸ್ಮೃತಾಃ|

01067008c ಬ್ರಾಹ್ಮೋ ದೈವಸ್ತಥೈವಾರ್ಷಃ ಪ್ರಾಜಾಪತ್ಯಸ್ತಥಾಸುರಃ||

01067009a ಗಾಂಧರ್ವೋ ರಾಕ್ಷಸಶ್ಚೈವ ಪೈಶಾಚಶ್ಚಾಷ್ಟಮಃ ಸ್ಮೃತಃ|

01067009c ತೇಷಾಂ ಧರ್ಮಾನ್ಯಥಾಪೂರ್ವಂ ಮನುಃ ಸ್ವಾಯಂಭುವೋಽಬ್ರವೀತ್||

ಧರ್ಮಸ್ಮೃತಿಗಳು ವಿವಾಹಗಳನ್ನು ಎಂಟು ಪ್ರಕಾರಗಳಲ್ಲಿ ವಿಂಗಡಿಸಿವೆ. ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಅಸುರ, ಗಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ಎಂಟು ಬಗೆಯವೆಂದು ಹೇಳುತ್ತಾರೆ. ಪೂರ್ವದಲ್ಲಿ ಯಾವ ಪ್ರಕಾರವು ಯಾರಿಗೆ ಧರ್ಮಸಮ್ಮತವಾದದ್ದು ಎಂದು ಸ್ವಯಂಭುವು ಮನುವಿಗೆ ಹೇಳಿದ್ದಾನೆ.

01067010a ಪ್ರಶಸ್ತಾಂಶ್ಚತುರಃ ಪೂರ್ವಾನ್ಬ್ರಾಹ್ಮಣಸ್ಯೋಪಧಾರಯ|

01067010c ಷಡಾನುಪೂರ್ವ್ಯಾ ಕ್ಷತ್ರಸ್ಯ ವಿದ್ಧಿ ಧರ್ಮ್ಯಾನನಿಂದಿತೇ||

ಅನಿಂದಿತೇ! ಮೊದಲನೆಯ ನಾಲ್ಕು ಪ್ರಕಾರಗಳು ಬ್ರಾಹ್ಮಣರಿಗೆ ಸರಿಯಾದದ್ದು. ಮತ್ತು ಮೊದಲನೆಯ ಆರು ಪ್ರಕಾರಗಳು ಕ್ಷತ್ರಿಯರಿಗೆ ಧರ್ಮಯುತವಾದದ್ದು ಎಂದು ತಿಳಿ.

01067011a ರಾಜ್ಞಾಂ ತು ರಾಕ್ಷಸೋಽಪ್ಯುಕ್ತೋ ವಿಟ್ಶೂದ್ರೇಷ್ವಾಸುರಃ ಸ್ಮೃತಃ|

01067011c ಪಂಚಾನಾಂ ತು ತ್ರಯೋ ಧರ್ಮ್ಯಾ ದ್ವಾವಧರ್ಮ್ಯೌ ಸ್ಮೃತಾವಿಹ||

ರಾಜರಿಗೆ ರಾಕ್ಷಸ ಪದ್ಧತಿಯ ವಿವಾಹವೂ ಕೂಡ ಸರಿಯೆನಿಸಲ್ಪಟ್ಟಿದೆ. ಅಸುರ ಪದ್ಧತಿಯು ವೈಶ್ಯ ಮತ್ತು ಶೂದ್ರರಿಗೆಂದು ಹೇಳಲ್ಪಟ್ಟಿದೆ. ಮೊದಲನೆಯ ಐದು ಪ್ರಕಾರಗಳಲ್ಲಿ, ಮೂರು ಧರ್ಮಪ್ರಕಾರವಾದದ್ದು ಮತ್ತು ಎರಡು ಅಧರ್ಮವೆಂದು ಹೇಳುತ್ತಾರೆ.

01067012a ಪೈಶಾಚಶ್ಚಾಸುರಶ್ಚೈವ ನ ಕರ್ತವ್ಯೌ ಕಥಂ ಚನ|

01067012c ಅನೇನ ವಿಧಿನಾ ಕಾರ್ಯೋ ಧರ್ಮಸ್ಯೈಷಾ ಗತಿಃ ಸ್ಮೃತಾ||

ಪೈಶಾಚ ಮತ್ತು ಅಸುರ ಪ್ರಕಾರಗಳಂತೆ ಎಂದೂ ವಿವಾಹವಾಗಬಾರದು. ಧರ್ಮಸ್ಮೃತಿಗಳಲ್ಲಿ ಹೇಳಿರುವಂತಹ ಇವುಗಳೆಲ್ಲವೂ ಪರಿಪಾಲಿಸಬೇಕಾದಂಥವುಗಳು.

01067013a ಗಾಂಧರ್ವರಾಕ್ಷಸೌ ಕ್ಷತ್ರೇ ಧರ್ಮ್ಯೌ ತೌ ಮಾ ವಿಶಂಕಿಥಾಃ|

01067013c ಪೃಥಗ್ವಾ ಯದಿ ವಾ ಮಿಶ್ರೌ ಕರ್ತವ್ಯೌ ನಾತ್ರ ಸಂಶಯಃ||

ಗಾಂಧರ್ವ ಮತ್ತು ರಾಕ್ಷಸ ವಿವಾಹಗಳು ಕ್ಷತ್ರಿಯರಿಗೆ ಧಾರ್ಮಿಕವಾದವುಗಳು. ನೀನು ಶಂಕಿಸಬೇಡ. ಈ ಎರಡರಲ್ಲಿ ಒಂದು ಅಥವಾ ಮಿಶ್ರಣವು ಸರಿ ಎನ್ನುವುದರಲ್ಲಿ ಸಂಶಯವಿಲ್ಲ.

01067014a ಸಾ ತ್ವಂ ಮಮ ಸಕಾಮಸ್ಯ ಸಕಾಮಾ ವರವರ್ಣಿನಿ|

01067014c ಗಾಂಧರ್ವೇಣ ವಿವಾಹೇನ ಭಾರ್ಯಾ ಭವಿತುಮರ್ಹಸಿ||

ವರವರ್ಣಿನೀ! ನಾನು ಕಾಮದಿಂದ ತುಂಬಿದ್ದೇನೆ, ನೀನೂ ಕೂಡ ಕಾಮದಿಂದಿದ್ದೀಯೆ. ಆದ್ದರಿಂದ ನೀನು ಗಾಂಧರ್ವ ವಿವಾಹದ ಪ್ರಕಾರ ನನ್ನ ಭಾರ್ಯೆಯಾಗಬೇಕು.”

01067015 ಶಕುಂತಲೋವಾಚ

01067015a ಯದಿ ಧರ್ಮಪಥಸ್ತ್ವೇಷ ಯದಿ ಚಾತ್ಮಾ ಪ್ರಭುರ್ಮಮ|

01067015c ಪ್ರದಾನೇ ಪೌರವಶ್ರೇಷ್ಠ ಶೃಣು ಮೇ ಸಮಯಂ ಪ್ರಭೋ||

ಶಕುಂತಲೆಯು ಹೇಳಿದಳು: “ಪೌರವಶ್ರೇಷ್ಠ! ಇವೆಲ್ಲವೂ ಧರ್ಮಪಥದಲ್ಲಿಯೇ ಇದ್ದುದಾದರೆ ಮತ್ತು ನಾನೇ ನನ್ನ ಪ್ರಭು, ಮತ್ತು ನನ್ನನ್ನು ನಾನೇ ಕೊಡಬಲ್ಲೆ ಎನ್ನುವುದಾದರೆ, ನನ್ನ ಈ ನಿಯಮಗಳನ್ನು ಕೇಳು.

01067016a ಸತ್ಯಂ ಮೇ ಪ್ರತಿಜಾನೀಹಿ ಯತ್ತ್ವಾಂ ವಕ್ಷ್ಯಾಮ್ಯಹಂ ರಹಃ|

01067016c ಮಮ ಜಾಯೇತ ಯಃ ಪುತ್ರಃ ಸ ಭವೇತ್ತ್ವದನಂತರಂ||

01067017a ಯುವರಾಜೋ ಮಹಾರಾಜ ಸತ್ಯಮೇತದ್ಬ್ರವೀಹಿ ಮೇ|

01067017c ಯದ್ಯೇತದೇವಂ ದುಃಷಂತ ಅಸ್ತು ಮೇ ಸಂಗಮಸ್ತ್ವಯಾ||

ಮಹಾರಾಜ! ಬೇರೆ ಯಾರೂ ಇಲ್ಲದ, ನಾವಿಬ್ಬರೇ ಇರುವ ಈ ಏಕಾಂತದಲ್ಲಿ ನನಗೆ ಒಂದು ಸತ್ಯ ವಚನವನ್ನು ನೀಡು. ನನ್ನಲ್ಲಿ ಹುಟ್ಟಿದ ಪುತ್ರನು ನಿನ್ನ ನಂತರದಲ್ಲಿ ಯುವರಾಜನಾಗಬೇಕು. ನಾನು ಸತ್ಯವನ್ನು ಹೇಳುತ್ತಿದ್ದೇನೆ. ದುಃಷಂತ! ಇದು ಹೀಗೆಯೇ ಆಗುವುದಾದರೆ ನನ್ನ ನಿನ್ನ ಸಂಗಮವಾಗಲಿ.””

01067018 ವೈಶಂಪಾಯನ ಉವಾಚ

01067018a ಏವಮಸ್ತ್ವಿತಿ ತಾಂ ರಾಜಾ ಪ್ರತ್ಯುವಾಚಾವಿಚಾರಯನ್|

01067018c ಅಪಿ ಚ ತ್ವಾಂ ನಯಿಷ್ಯಾಮಿ ನಗರಂ ಸ್ವಂ ಶುಚಿಸ್ಮಿತೇ|

01067018e ಯಥಾ ತ್ವಮರ್ಹಾ ಸುಶ್ರೋಣಿ ಸತ್ಯಮೇತದ್ಬ್ರವೀಮಿ ತೇ||

ವೈಶಂಪಾಯನನು ಹೇಳಿದನು: “ರಾಜನು ಒಂದು ಸ್ವಲ್ಪವೂ ವಿಚಾರಿಸದೆ “ಹಾಗೆಯೇ ಆಗಲಿ” ಎಂದನು. “ಶುಚಿಸ್ಮಿತೇ! ನಿನ್ನನ್ನು ನನ್ನ ನಗರಕ್ಕೆ ಕರೆದೊಯ್ಯುತ್ತೇನೆ. ಸುಶ್ರೋಣಿ! ಸತ್ಯವನ್ನು ಹೇಳಬೇಕೆಂದರೆ ನೀನು ಇವೆಲ್ಲವುಗಳಿಗೂ ಅರ್ಹೆ.”

01067019a ಏವಮುಕ್ತ್ವಾ ಸ ರಾಜರ್ಷಿಸ್ತಾಮನಿಂದಿತಗಾಮಿನೀಂ|

01067019c ಜಗ್ರಾಹ ವಿಧಿವತ್ಪಾಣಾವುವಾಸ ಚ ತಯಾ ಸಹ||

ಹೀಗೆ ಹೇಳಿ ಆ ರಾಜರ್ಷಿಯು ಅನಿಂದಿತಗಾಮಿನಿಯನ್ನು ವಿಧಿವತ್ತಾಗಿ ಪಾಣಿಗ್ರಹಣ ಮಾಡಿ, ಅವಳನ್ನು ಕೂಡಿದನು.

01067020a ವಿಶ್ವಾಸ್ಯ ಚೈನಾಂ ಸ ಪ್ರಾಯಾದಬ್ರವೀಚ್ಚ ಪುನಃ ಪುನಃ|

01067020c ಪ್ರೇಷಯಿಷ್ಯೇ ತವಾರ್ಥಾಯ ವಾಹಿನೀಂ ಚತುರಂಗಿಣೀಂ|

01067020e ತಯಾ ತ್ವಾಮಾನಯಿಷ್ಯಾಮಿ ನಿವಾಸಂ ಸ್ವಂ ಶುಚಿಸ್ಮಿತೇ||

“ಶುಚಿಸ್ಮಿತೇ! ನಿನಗೋಸ್ಕರ ಚತುರಂಗ ಸೇನೆಯನ್ನು ಕಳುಹಿಸಿ ನಿನ್ನನ್ನು ನನ್ನ ನಿವಾಸಕ್ಕೆ ಕರೆಯಿಸಿಕೊಳ್ಳುತ್ತೇನೆ” ಎಂದು ಪುನಃ ಪುನಃ ಆಶ್ವಾಸನೆಗಳನ್ನಿತ್ತು ಅವನು ತನ್ನ ನಗರಿಗೆ ಹಿಂದಿರುಗಿದನು.

01067021a ಇತಿ ತಸ್ಯಾಃ ಪ್ರತಿಶ್ರುತ್ಯ ಸ ನೃಪೋ ಜನಮೇಜಯ|

01067021c ಮನಸಾ ಚಿಂತಯನ್ಪ್ರಾಯಾತ್ಕಾಶ್ಯಪಂ ಪ್ರತಿ ಪಾರ್ಥಿವಃ||

ಜನಮೇಜಯ! ಈ ರೀತಿ ಅವಳಿಗೆ ಭರವಸೆಯನ್ನಿತ್ತು ಆ ನೃಪನು ಹೊರಟುಹೋದನು. ಹೋಗುತ್ತಿರುವಾಗ ಆ ಪಾರ್ಥಿವನು ಮನಸ್ಸಿನಲ್ಲಿಯೇ ಕಾಶ್ಯಪನ ಕುರಿತು ಯೋಚಿಸಿದನು.

01067022a ಭಗವಾಂಸ್ತಪಸಾ ಯುಕ್ತಃ ಶ್ರುತ್ವಾ ಕಿಂ ನು ಕರಿಷ್ಯತಿ|

01067022c ಏವಂ ಸಂಚಿಂತಯನ್ನೇವ ಪ್ರವಿವೇಶ ಸ್ವಕಂ ಪುರಂ||

“ಆ ತಪಸ್ವಿ ಭಗವಾನನು ಇದನ್ನೆಲ್ಲ ಕೇಳಿ ಏನು ಮಾಡುತ್ತಾನೋ” ಎಂದು ಚಿಂತಿಸುತ್ತಾ ಅವನು ತನ್ನ ಪುರವನ್ನು ಸೇರಿದನು.

01067023a ಮುಹೂರ್ತಯಾತೇ ತಸ್ಮಿಂಸ್ತು ಕಣ್ವೋಽಪ್ಯಾಶ್ರಮಮಾಗಮತ್|

01067023c ಶಕುಂತಲಾ ಚ ಪಿತರಂ ಹ್ರಿಯಾ ನೋಪಜಗಾಮ ತಂ||

ಅವನು ಹೊರಟುಹೋದ ಸ್ವಲ್ಪ ಸಮಯದಲ್ಲಿಯೇ ಕಣ್ವನು ಆಶ್ರಮಕ್ಕೆ ಹಿಂದಿರುಗಿದನು. ಆದರೆ ಶಕುಂತಲೆಯು ನಾಚಿಕೊಂಡು ಅವನನ್ನು ಸ್ವಾಗತಿಸಲು ಹೊರಬರಲಿಲ್ಲ.

01067024a ವಿಜ್ಞಾಯಾಥ ಚ ತಾಂ ಕಣ್ವೋ ದಿವ್ಯಜ್ಞಾನೋ ಮಹಾತಪಾಃ|

01067024c ಉವಾಚ ಭಗವಾನ್ಪ್ರೀತಃ ಪಶ್ಯನ್ದಿವ್ಯೇನ ಚಕ್ಷುಷಾ||

ಮಹಾತಪಸ್ವಿ ಕಣ್ವನಾದರೂ ತನ್ನ ದಿವ್ಯಜ್ಞಾನದಿಂದ ಎಲ್ಲವನ್ನೂ ತಿಳಿದುಕೊಂಡನು. ತನ್ನ ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ಕಂಡುಕೊಂಡ ಭಗವಾನನು ಸಂತೋಷಗೊಂಡು ಹೇಳಿದನು:

01067025a ತ್ವಯಾದ್ಯ ರಾಜಾನ್ವಯಯಾ ಮಾಮನಾದೃತ್ಯ ಯತ್ಕೃತಃ|

01067025c ಪುಂಸಾ ಸಹ ಸಮಾಯೋಗೋ ನ ಸ ಧರ್ಮೋಪಘಾತಕಃ||

“ಇಂದು ನೀನು ಗೌಪ್ಯವಾಗಿ ನಾನು ಬರುವುದನ್ನು ಕಾಯದೇ ರಾಜನೊಂದಿಗೆ ಸಮಾಗಮ ಮಾಡಿದ ಕಾರ್ಯವು ಒಳ್ಳೆಯದೇ ಆಗಿದೆ. ಇದರಿಂದ ನೀನು ಧರ್ಮಘಾತಕಿಯಾಗಲಿಲ್ಲ.

01067026a ಕ್ಷತ್ರಿಯಸ್ಯ ಹಿ ಗಾಂಧರ್ವೋ ವಿವಾಹಃ ಶ್ರೇಷ್ಠ ಉಚ್ಯತೇ|

01067026c ಸಕಾಮಾಯಾಃ ಸಕಾಮೇನ ನಿರ್ಮಂತ್ರೋ ರಹಸಿ ಸ್ಮೃತಃ||

ಸಕಾಮಿಗಳು ಸಕಾಮದಿಂದ ಮಂತ್ರಗಳಿಲ್ಲದೆಯೇ ರಹಸ್ಯದಲ್ಲಿ ಗಾಂಧರ್ವ ವಿವಾಹವನ್ನು ಮಾಡಿಕೊಳ್ಳುವುದು ಕ್ಷತ್ರಿಯರಿಗೆ ಶ್ರೇಷ್ಠವೆಂದೇ ಹೇಳುತ್ತಾರೆ.

01067027a ಧರ್ಮಾತ್ಮಾ ಚ ಮಹಾತ್ಮಾ ಚ ದುಃಷಂತಃ ಪುರುಷೋತ್ತಮಃ|

01067027c ಅಭ್ಯಗಚ್ಛಃ ಪತಿಂ ಯಂ ತ್ವಂ ಭಜಮಾನಂ ಶಕುಂತಲೇ||

ಶಕುಂತಲೆ! ನಿನ್ನ ಪತಿಯೆಂದು ಸ್ವೀಕರಿಸಿದ ಆ ಪುರುಷೋತ್ತಮ ದುಃಷಂತನು ಧರ್ಮಾತ್ಮನೂ ಮಹಾತ್ಮನೂ ಆಗಿದ್ದಾನೆ.

01067028a ಮಹಾತ್ಮಾ ಜನಿತಾ ಲೋಕೇ ಪುತ್ರಸ್ತವ ಮಹಾಬಲಃ|

01067028c ಯ ಇಮಾಂ ಸಾಗರಾಪಾಂಗಾಂ ಕೃತ್ಸ್ನಾಂ ಭೋಕ್ಷ್ಯತಿ ಮೇದಿನೀಂ||

ನಿನ್ನಲ್ಲಿ ಜನಿಸುವ ಪುತ್ರನು ಲೋಕದಲ್ಲಿ ಮಹಾತ್ಮನೂ ಮಹಾಬಲಶಾಲಿಯೂ ಆಗುತ್ತಾನೆ. ಅವನು ಸಾಗರದಿಂದ ಆವರಿಸಲ್ಪಟ್ಟ ಈ ಎಲ್ಲ ಮೇದಿನಿಯನ್ನೂ ಭೋಗಿಸುತ್ತಾನೆ.

01067029a ಪರಂ ಚಾಭಿಪ್ರಯಾತಸ್ಯ ಚಕ್ರಂ ತಸ್ಯ ಮಹಾತ್ಮನಃ|

01067029c ಭವಿಷ್ಯತ್ಯಪ್ರತಿಹತಂ ಸತತಂ ಚಕ್ರವರ್ತಿನಃ||

ಆ ಮಹಾತ್ಮನು ತನ್ನ ವೈರಿಗಳ ವಿರುದ್ಧ ಹೊರಟಾಗ ಯಾರಿಗೂ ಅವನನ್ನು ಸೋಲಿಸಲಿಕ್ಕಾಗುವುದಿಲ್ಲ, ಮತ್ತು ಅವನು ಚಕ್ರವರ್ತಿಯೆಂದು ಎನಿಸಿಕೊಳ್ಳುತ್ತಾನೆ.”

01067030a ತತಃ ಪ್ರಕ್ಷಾಲ್ಯ ಪಾದೌ ಸಾ ವಿಶ್ರಾಂತಂ ಮುನಿಮಬ್ರವೀತ್|

01067030c ವಿನಿಧಾಯ ತತೋ ಭಾರಂ ಸನ್ನಿಧಾಯ ಫಲಾನಿ ಚ||

ಆಗ ಅವಳು ಅವನು ಹೊತ್ತಿದ್ದ ಫಲ ಭಾರವನ್ನು ಕೆಳಗಿಳಿಸಿ ಅವುಗಳನ್ನು ಸರಿಯಾದ ಜಾಗದಲ್ಲಿ ಇರಿಸಿ, ಅವನ ಪಾದಗಳನ್ನು ತೊಳೆದಳು. ಮುನಿಯು ವಿಶ್ರಾಂತಿ ಹೊಂದಿದ ನಂತರ ಹೇಳಿದಳು:

01067031a ಮಯಾ ಪತಿರ್ವೃತೋ ಯೋಽಸೌ ದುಃಷಂತಃ ಪುರುಷೋತ್ತಮಃ|

01067031c ತಸ್ಮೈ ಸಸಚಿವಾಯ ತ್ವಂ ಪ್ರಸಾದಂ ಕರ್ತುಮರ್ಹಸಿ||

“ನಾನು ಪತಿಯನ್ನಾಗಿ ಸ್ವೀಕರಿಸಿದ ಆ ಪುರುಷೋತ್ತಮ ದುಃಷಂತನಿಗೆ ನೀನು ಅನುಗ್ರಹಿಸಬೇಕು.”

01067032 ಕಣ್ವ ಉವಾಚ

01067032a ಪ್ರಸನ್ನ ಏವ ತಸ್ಯಾಹಂ ತ್ವತ್ಕೃತೇ ವರವರ್ಣಿನಿ|

01067032c ಗೃಹಾಣ ಚ ವರಂ ಮತ್ತಸ್ತತ್ಕೃತೇ ಯದಭೀಪ್ಸಿತಂ||

ಕಣ್ವನು ಹೇಳಿದನು: “ವರವರ್ಣಿನಿ! ನಿನಗೋಸ್ಕರ ಅವನಿಗೆ ನಾನು ಅನುಗ್ರಹಿಸುತ್ತೇನೆ. ನನ್ನಿಂದ ಬೇಕಾದ ನಿನಗಿಷ್ಟ ವರವೊಂದನ್ನು ಕೇಳು.””

01067033 ವೈಶಂಪಾಯನ ಉವಾಚ

01067033a ತತೋ ಧರ್ಮಿಷ್ಠತಾಂ ವವ್ರೇ ರಾಜ್ಯಾಚ್ಚಾಸ್ಖಲನಂ ತಥಾ|

01067033c ಶಕುಂತಲಾ ಪೌರವಾಣಾಂ ದುಃಷಂತಹಿತಕಾಮ್ಯಯಾ||

ವೈಶಂಪಾಯನನು ಹೇಳಿದನು: “ಆಗ ದುಃಷಂತನಿಗೆ ಹಿತವನ್ನೇ ಬಯಸುತ್ತಿದ್ದ ಶಕುಂತಲೆಯು “ಪೌರವರು ಸದಾ ಧರ್ಮಿಷ್ಠರಾಗಿರಲಿ ಮತ್ತು ಅವರಿಗೆ ಎಂದೂ ರಾಜ್ಯಚ್ಯುತಿಯಾಗದಿರಲಿ” ಎಂದು ಕೇಳಿಕೊಂಡಳು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಸಪ್ತಷಷ್ಟಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೇಳನೆಯ ಅಧ್ಯಾಯವು.

Comments are closed.