ಆದಿ ಪರ್ವ: ಸಂಭವ ಪರ್ವ
೬೫
ದುಃಷಂತನನ್ನು ಶಕುಂತಲೆಯು ಸ್ವಾಗತಿಸಿ ಸತ್ಕರಿಸಿದುದು (೧-೧೫). ಶಕುಂತಲೆಯು ದುಃಷಂತನಿಗೆ ತನ್ನ ಜನ್ಮವೃತ್ತಾಂತವನ್ನು ಪ್ರಾರಂಭಿಸುವುದು (೧೬-೨೦). ವಿಶ್ವಾಮಿತ್ರನ ತಪಸ್ಸಿಗೆ ಹೆದರಿ ಇಂದ್ರನು ಮೇನಕೆಯ ಸಹಾಯ ಕೋರುವುದು (೨೧-೪೦).
01065001 ವೈಶಂಪಾಯನ ಉವಾಚ
01065001a ತತೋ ಗಚ್ಛನ್ಮಹಾಬಾಹುರೇಕೋಽಮಾತ್ಯಾನ್ವಿಸೃಜ್ಯ ತಾನ್|
01065001c ನಾಪಶ್ಯದಾಶ್ರಮೇ ತಸ್ಮಿಂಸ್ತಮೃಷಿಂ ಸಂಶಿತವ್ರತಂ||
ವೈಶಂಪಾಯನನು ಹೇಳಿದನು: “ಆಶ್ರಮದಲ್ಲಿ ಸಂಶಿತವ್ರತ ಋಷಿಯನ್ನು ಕಾಣದೇ ಆ ಮಹಾಬಾಹುವು ತನ್ನ ಅಮಾತ್ಯರನ್ನೆಲ್ಲ ಹಿಂದೆಯೇ ಬಿಟ್ಟು ಒಬ್ಬನೇ ಹೋದನು.
01065002a ಸೋಽಪಶ್ಯಮಾನಸ್ತಮೃಷಿಂ ಶೂನ್ಯಂ ದೃಷ್ಟ್ವಾ ತಮಾಶ್ರಮಂ|
01065002c ಉವಾಚ ಕ ಇಹೇತ್ಯುಚ್ಚೈರ್ವನಂ ಸನ್ನಾದಯನ್ನಿವ||
ಆ ಋಷಿಯ ಆಶ್ರಮದಲ್ಲಿ ಯಾರನ್ನೂ ಕಾಣದೇ “ಇಲ್ಲಿ ಯಾರಾದರೂ ಇದ್ದೀರಾ?” ಎಂದು ವನದಲ್ಲೆಲ್ಲಾ ಪ್ರತಿಧ್ವನಿಸುವಂತೆ ಜೋರಾಗಿ ಕೂಗಿ ಕೇಳಿದನು.
01065003a ಶ್ರುತ್ವಾಥ ತಸ್ಯ ತಂ ಶಬ್ಧಂ ಕನ್ಯಾ ಶ್ರೀರಿವ ರೂಪಿಣೀ|
01065003c ನಿಶ್ಚಕ್ರಾಮಾಶ್ರಮಾತ್ತಸ್ಮಾತ್ತಾಪಸೀವೇಷಧಾರಿಣೀ||
ಅವನ ಆ ಮಾತುಗಳನ್ನು ಕೇಳಿ ರೂಪದಲ್ಲಿ ಶ್ರೀಯಂತಿರುವ ತಪಸ್ವಿ ವಸ್ತ್ರಧಾರಿಣಿ ಕನ್ಯೆಯೋರ್ವಳು ಆ ಆಶ್ರಮದಿಂದ ಹೊರಬಂದಳು.
01065004a ಸಾ ತಂ ದೃಷ್ಟ್ವೈವ ರಾಜಾನಂ ದುಃಷಂತಮಸಿತೇಕ್ಷಣಾ|
01065004c ಸ್ವಾಗತಂ ತ ಇತಿ ಕ್ಷಿಪ್ರಮುವಾಚ ಪ್ರತಿಪೂಜ್ಯ ಚ||
ತನ್ನ ಕಪ್ಪು ಕಣ್ಣುಗಳಿಂದ ರಾಜ ದುಃಷಂತನನ್ನು ನೋಡಿದಾಕ್ಷಣವೇ ಸ್ವಾಗತವೆಂದು ಹೇಳಿ ಅವನನ್ನು ಪ್ರತಿಪೂಜಿಸಿದಳು.
01065005a ಆಸನೇನಾರ್ಚಯಿತ್ವಾ ಚ ಪಾದ್ಯೇನಾರ್ಘ್ಯೇಣ ಚೈವ ಹಿ|
01065005c ಪಪ್ರಚ್ಛಾನಾಮಯಂ ರಾಜನ್ಕುಶಲಂ ಚ ನರಾಧಿಪಂ||
ಗೌರವಾನ್ವಿತ ಆಸನವನ್ನಿತ್ತು, ಪಾದಗಳಿಗೆ ಅರ್ಘ್ಯವನ್ನಿತ್ತು, ಆ ಅನಾಮಯ ನರಾಧಿಪ ರಾಜನ ಕುಶಲವನ್ನು ಕೇಳಿದಳು.
01065006a ಯಥಾವದರ್ಚಯಿತ್ವಾ ಸಾ ಪೃಷ್ಟ್ವಾ ಚಾನಾಮಯಂ ತದಾ|
01065006c ಉವಾಚ ಸ್ಮಯಮಾನೇವ ಕಿಂ ಕಾರ್ಯಂ ಕ್ರಿಯತಾಮಿತಿ||
ಈ ರೀತಿ ಯಥಾವತ್ತಾಗಿ ಅರ್ಚಿಸಿ ಅವನು ಸುಖಾಸೀನನಾಗಿದ್ದುದನ್ನು ನೋಡಿ “ಯಾವ ಕಾರ್ಯವನ್ನು ಎಸಗಬೇಕು?” ಎಂದು ಕೇಳಿದಳು.
01065007a ತಾಮಬ್ರವೀತ್ತತೋ ರಾಜಾ ಕನ್ಯಾಂ ಮಧುರಭಾಷಿಣೀಂ|
01065007c ದೃಷ್ಟ್ವಾ ಸರ್ವಾನವದ್ಯಾಂಗೀಂ ಯಥಾವತ್ಪ್ರತಿಪೂಜಿತಃ||
ಯಥಾವತ್ತಾಗಿ ಪ್ರತಿಪೂಜಿತ ರಾಜನು ಆ ಸರ್ವಾನವದ್ಯಾಂಗಿ ಮಧುರಭಾಷಿಣಿಯನ್ನು ನೋಡಿ ಹೇಳಿದನು:
01065008a ಆಗತೋಽಹಂ ಮಹಾಭಾಗಮೃಷಿಂ ಕಣ್ವಮುಪಾಸಿತುಂ|
01065008c ಕ್ವ ಗತೋ ಭಗವಾನ್ಭದ್ರೇ ತನ್ಮಮಾಚಕ್ಷ್ವ ಶೋಭನೇ||
“ಮಹಾಭಾಗ ಕಣ್ವ ಋಷಿಯ ಉಪಾಸನೆಗೆಂದು ನಾನು ಬಂದಿದ್ದೇನೆ. ಭದ್ರೆ! ಶೋಭನೆ! ಭಗವಾನರು ಎಲ್ಲಿ ಹೋಗಿದ್ದಾರೆ ಎಂದು ಹೇಳು.”
01065009 ಶಕುಂತಲೋವಾಚ
01065009a ಗತಃ ಪಿತಾ ಮೇ ಭಗವಾನ್ಫಲಾನ್ಯಾಹರ್ತುಮಾಶ್ರಮಾತ್|
01065009c ಮುಹೂರ್ತಂ ಸಂಪ್ರತೀಕ್ಷಸ್ವ ದ್ರಕ್ಷ್ಯಸ್ಯೇನಮಿಹಾಗತಂ||
ಶಕುಂತಲೆಯು ಹೇಳಿದಳು: “ನನ್ನ ತಂದೆ ಭಗವಾನನು ಫಲಗಳನ್ನು ತರಲು ಆಶ್ರಮದಿಂದ ಹೋಗಿದ್ದಾನೆ. ಸ್ವಲ್ಪ ಸಮಯ ಕಾಯಬೇಕು. ಅವನು ಹಿಂದಿರುಗಿದ ಕೂಡಲೇ ಅವನನ್ನು ಕಾಣಬಹುದು.””
01065010 ವೈಶಂಪಾಯನ ಉವಾಚ
01065010a ಅಪಶ್ಯಮಾನಸ್ತಮೃಷಿಂ ತಯಾ ಚೋಕ್ತಸ್ತಥಾ ನೃಪಃ|
01065010c ತಾಂ ಚ ದೃಷ್ಟ್ವಾ ವರಾರೋಹಾಂ ಶ್ರೀಮತೀಂ ಚಾರುಹಾಸಿನೀಂ||
ವೈಶಂಪಾಯನನು ಹೇಳಿದನು: “ಈಗ ಋಷಿಯನ್ನು ನೋಡಲಿಕ್ಕಾಗುವುದಿಲ್ಲವೆಂದು ಹೇಳಿದ ಆ ಚಾರುಹಾಸಿನಿ, ಶ್ರೀಮತಿ ವರಾರೋಹೆಯನ್ನು ನೃಪನು ನೋಡಿದನು.
01065011a ವಿಭ್ರಾಜಮಾನಾಂ ವಪುಷಾ ತಪಸಾ ಚ ದಮೇನ ಚ|
01065011c ರೂಪಯೌವನಸಂಪನ್ನಾಮಿತ್ಯುವಾಚ ಮಹೀಪತಿಃ||
ರೂಪ, ತಪಸ್ಸು ಮತ್ತು ದಮಗಳಿಂದ ವಿಭ್ರಾಜಿಸುತ್ತಿರುವ, ಆ ರೂಪಯೌವನ ಸಂಪನ್ನೆಯನ್ನು ಉದ್ದೇಶಿಸಿ ಮಹೀಪತಿಯು ಹೇಳಿದನು:
01065012a ಕಾಸಿ ಕಸ್ಯಾಸಿ ಸುಶ್ರೋಣಿ ಕಿಮರ್ಥಂ ಚಾಗತಾ ವನಂ|
01065012c ಏವಂರೂಪಗುಣೋಪೇತಾ ಕುತಸ್ತ್ವಮಸಿ ಶೋಭನೇ||
“ಸುಶ್ರೋಣಿ! ನೀನು ಯಾರು ಮತ್ತು ಯಾರ ಮಗಳು? ಈ ವನಕ್ಕೆ ಯಾವ ಕಾರಣಕ್ಕಾಗಿ ಆಗಮಿಸಿರುವೆ? ಶೋಭನೆ! ಈ ರೀತಿ ರೂಪ ಗುಣಯುಕ್ತೆ ನೀನು ಎಲ್ಲಿಂದ ಬಂದಿರುವೆ?
01065013a ದರ್ಶನಾದೇವ ಹಿ ಶುಭೇ ತ್ವಯಾ ಮೇಽಪಹೃತಂ ಮನಃ|
01065013c ಇಚ್ಛಾಮಿ ತ್ವಾಮಹಂ ಜ್ಞಾತುಂ ತನ್ಮಮಾಚಕ್ಷ್ವ ಶೋಭನೇ||
ಶುಭೇ! ಮೊದಲನೆಯ ನೋಟದಲ್ಲಿಯೇ ನೀನು ನನ್ನ ಮನವನ್ನು ಅಪಹರಿಸಿರುವೆ. ನಿನ್ನನ್ನು ತಿಳಿಯಲು ಬಯಸುತ್ತೇನೆ. ಶೋಭನೆ! ಎಲ್ಲವನ್ನೂ ಹೇಳು.”
01065014a ಏವಮುಕ್ತಾ ತದಾ ಕನ್ಯಾ ತೇನ ರಾಜ್ಞಾ ತದಾಶ್ರಮೇ|
01065014c ಉವಾಚ ಹಸತೀ ವಾಕ್ಯಮಿದಂ ಸುಮಧುರಾಕ್ಷರಂ||
ಆ ಅಶ್ರಮದಲ್ಲಿ ಈ ರೀತಿ ರಾಜನು ಕೇಳಲಾಗಿ ಆ ಕನ್ಯೆಯು ಮುಗುಳ್ನಗುತ್ತಾ ಸುಮಧುರಾಕ್ಷರಗಳಲ್ಲಿ ಹೇಳಿದಳು:
01065015a ಕಣ್ವಷ್ಯಾಹಂ ಭಗವತೋ ದುಃಷಂತ ದುಹಿತಾ ಮತಾ|
01065015c ತಪಸ್ವಿನೋ ಧೃತಿಮತೋ ಧರ್ಮಜ್ಞಸ್ಯ ಯಶಸ್ವಿನಃ||
“ದುಃಷಂತ! ನಾನು ತಪಸ್ವಿ, ಧೃತಿಮತಿ, ಧರ್ಮಜ್ಞ ಯಶಸ್ವಿ ಭಗವಾನ್ ಕಣ್ವನ ಮಗಳು.”
01065016 ದುಃಷಂತ ಉವಾಚ
01065016a ಊರ್ಧ್ವರೇತಾ ಮಹಾಭಾಗೋ ಭಗವಾಽಲ್ಲೋಕಪೂಜಿತಃ|
01065016c ಚಲೇದ್ಧಿ ವೃತ್ತಾದ್ಧರ್ಮೋಽಪಿ ನ ಚಲೇತ್ಸಂಶಿತವ್ರತಃ||
ದುಃಷಂತನು ಹೇಳಿದನು: “ಲೋಕಪೂಜಿತ ಮಹಾಭಾಗ ಭಗವಾನರು ಬ್ರಹ್ಮಚಾರಿಗಳು. ಒಮ್ಮೆ ಧರ್ಮವೇ ದಾರಿತಪ್ಪಬಹುದು. ಆದರೆ ಸಂಶಿತವ್ರತರು ಎಂದೂ ತಪ್ಪುವುದಿಲ್ಲ.
01065017a ಕಥಂ ತ್ವಂ ತಸ್ಯ ದುಹಿತಾ ಸಂಭೂತಾ ವರವರ್ಣಿನೀ|
01065017c ಸಂಶಯೋ ಮೇ ಮಹಾನತ್ರ ತಂ ಮೇ ಚೇತ್ತುಮಿಹಾರ್ಹಸಿ||
ವರವರ್ಣಿನೀ! ನೀನು ಹೇಗೆ ಅವರ ಮಗಳಾಗಲಿಕ್ಕೆ ಸಾಧ್ಯ? ನನ್ನ ಮನಸ್ಸಿನಲ್ಲಿರುವ ಈ ಸಂಶಯವನ್ನು ನೀನು ದೂರಮಾಡಬೇಕು.”
01065018 ಶಕುಂತಲೋವಾಚ
01065018a ಯಥಾಯಮಾಗಮೋ ಮಹ್ಯಂ ಯಥಾ ಚೇದಮಭೂತ್ಪುರಾ|
01065018c ಶೃಣು ರಾಜನ್ಯಥಾತತ್ತ್ವಂ ಯಥಾಸ್ಮಿ ದುಹಿತಾ ಮುನೇಃ||
ಶಕುಂತಲೆಯು ಹೇಳಿದಳು: “ನಾನು ಮುನಿಯ ಮಗಳು ಹೇಗೆ ಆದನೆಂದು ನಡೆದುದೆಲ್ಲವನ್ನೂ ನಾನು ಕೇಳಿರುವ ಹಾಗೆ ಹೇಳುತ್ತೇನೆ. ರಾಜನ್! ಸವಿಸ್ತಾರವಾಗಿ ಕೇಳು.
01065019a ಋಷಿಃ ಕಶ್ಚಿದಿಹಾಗಮ್ಯ ಮಮ ಜನ್ಮಾಭ್ಯಚೋದಯತ್|
01065019c ತಸ್ಮೈ ಪ್ರೋವಾಚ ಭಗವಾನ್ಯಥಾ ತಚ್ಛೃಣು ಪಾರ್ಥಿವ||
ಪಾರ್ಥಿವ! ಒಮ್ಮೆ ಋಷಿಯೋರ್ವನು ಬಂದು ನನ್ನ ಜನ್ಮದ ಕುರಿತು ಕೇಳಿದ್ದನು. ಆಗ ನನ್ನ ಕುರಿತು ಅವನಿಗೆ ಭಗವಾನ್ ಋಷಿಯು ಹೇಳಿದ್ದುದನ್ನು ಕೇಳು.
01065020a ತಪ್ಯಮಾನಃ ಕಿಲ ಪುರಾ ವಿಶ್ವಾಮಿತ್ರೋ ಮಹತ್ತಪಃ|
01065020c ಸುಭೃಶಂ ತಾಪಯಾಮಾಸ ಶಕ್ರಂ ಸುರಗಣೇಶ್ವರಂ||
“ಹಿಂದೆ ವಿಶ್ವಾಮಿತ್ರನು ಮಹಾತಪಸ್ಸನ್ನು ತಪಿಸುತ್ತಿದ್ದನು. ಇದು ಸುರಗಣೇಶ್ವರ ಶಕ್ರನನ್ನು ಸುಟ್ಟು ಕಾಡತೊಡಗಿತು.
01065021a ತಪಸಾ ದೀಪ್ತವೀರ್ಯೋಽಯಂ ಸ್ಥಾನಾನ್ಮಾಂ ಚ್ಯಾವಯೇದಿತಿ|
01065021c ಭೀತಃ ಪುರಂದರಸ್ತಸ್ಮಾನ್ಮೇನಕಾಮಿದಮಬ್ರವೀತ್||
“ಈ ದೀಪ್ತವೀರನು ತನ್ನ ತಪಸ್ಸಿನಿಂದ ನನ್ನನ್ನು ನನ್ನ ಸ್ಥಾನದಿಂದ ತೆಗೆದುಹಾಕುವನು!” ಎಂದು ಭೀತನಾದ ಪುರಂದರನು ಮೇನಕೆಯಲ್ಲಿ ಹೇಳಿದನು:
01065022a ಗುಣೈರ್ದಿವ್ಯೈರಪ್ಸರಸಾಂ ಮೇನಕೇ ತ್ವಂ ವಿಶಿಷ್ಯಸೇ|
01065022c ಶ್ರೇಯೋ ಮೇ ಕುರು ಕಲ್ಯಾಣಿ ಯತ್ತ್ವಾಂ ವಕ್ಷ್ಯಾಮಿ ತಚ್ಛೃಣು||
“ಮೇನಕೇ! ಗುಣ ಮತ್ತು ದೇವತ್ವದಲ್ಲಿ ಎಲ್ಲ ಅಪ್ಸರೆಯರೆಯರಲ್ಲಿ ನೀನು ವಿಶೇಷವಾಗಿರುವೆ. ಕಲ್ಯಾಣಿ! ನನಗೊಂದು ಒಳ್ಳೆಯ ಕಾರ್ಯವನ್ನು ಮಾಡಿಕೊಡು. ನಾನು ಹೇಳುವುದನ್ನು ಕೇಳು.
01065023a ಅಸಾವಾದಿತ್ಯಸಂಕಾಶೋ ವಿಶ್ವಾಮಿತ್ರೋ ಮಹಾತಪಾಃ|
01065023c ತಪ್ಯಮಾನಸ್ತಪೋ ಘೋರಂ ಮಮ ಕಂಪಯತೇ ಮನಃ||
ಆದಿತ್ಯಸಂಕಾಶ ಮಹಾತಪಸ್ವಿ ವಿಶ್ವಾಮಿತ್ರನು ತಪಸ್ಸನ್ನು ಮಾಡುತ್ತಿದ್ದಾನೆ. ಆ ಘೋರ ತಪಸ್ಸಿನಿಂದ ನನ್ನ ಮನಸ್ಸು ತತ್ತರಿಸಿದೆ.
01065024a ಮೇನಕೇ ತವ ಭಾರೋಽಯಂ ವಿಶ್ವಾಮಿತ್ರಃ ಸುಮಧ್ಯಮೇ|
01065024c ಸಂಶಿತಾತ್ಮಾ ಸುದುರ್ಧರ್ಷ ಉಗ್ರೇ ತಪಸಿ ವರ್ತತೇ||
01065025a ಸ ಮಾಂ ನ ಚ್ಯಾವಯೇತ್ಸ್ಥಾನಾತ್ತಂ ವೈ ಗತ್ವಾ ಪ್ರಲೋಭಯ|
01065025c ಚರ ತಸ್ಯ ತಪೋವಿಘ್ನಂ ಕುರು ಮೇ ಪ್ರಿಯಮುತ್ತಮಂ||
ಸುಮದ್ಯಮೇ! ಮೇನಕೇ! ನನ್ನ ಈ ಪದದಿಂದ ನನ್ನನ್ನು ತೆಗೆದುಹಾಕಬಲ್ಲ ಉಗ್ರ ತಪಸ್ಸಿನಲ್ಲಿ ನಿರತನಾದ ಸಂಶಿತಾತ್ಮ ವಿಶ್ವಾಮಿತ್ರನಲ್ಲಿಗೆ ಹೋಗಿ ಅವನನ್ನು ಆಕರ್ಷಿಸಿ ಅವನ ತಪೋವಿಘ್ನವನ್ನು ಮಾಡುವುದು ನಿನ್ನ ಹೊಣೆಗಾರಿಕೆ. ಇದೇ ನನಗೆ ಉತ್ತಮ ಸಂತೋಷವನ್ನು ಕೊಡುವಂಥಹುದು.
01065026a ರೂಪಯೌವನಮಾಧುರ್ಯಚೇಷ್ಟಿತಸ್ಮಿತಭಾಷಿತೈಃ|
01065026c ಲೋಭಯಿತ್ವಾ ವರಾರೋಹೇ ತಪಸಃ ಸನ್ನಿವರ್ತಯ||
ವರಾರೋಹೇ! ರೂಪ, ಯೌವನ, ಮಾಧುರ್ಯತೆ, ಚೇಷ್ಟೆ, ಮುಗುಳ್ನಗೆ ಮತ್ತು ಮಾತುಗಳಿಂದ ಅವನಲ್ಲಿ ಲೋಭವನ್ನು ಹುಟ್ಟಿಸಿ ಅವನನ್ನು ತಪಸ್ಸಿನಿಂದ ವಂಚಿಸು.”
01065027 ಮೇನಕೋವಾಚ
01065027a ಮಹಾತೇಜಾಃ ಸ ಭಗವಾನ್ಸದೈವ ಚ ಮಹಾತಪಾಃ|
01065027c ಕೋಪನಶ್ಚ ತಥಾ ಹ್ಯೇನಂ ಜಾನಾತಿ ಭಗವಾನಪಿ||
ಮೇನಕೆಯು ಹೇಳಿದಳು: “ಭಗವನ್! ಆ ಮಹಾತಪಸ್ವಿಯು ಮಹಾತೇಜಸ್ವಿ, ಸದಾ ಕುಪಿತನಾಗಿರುತ್ತಾನೆ. ಇದನ್ನು ನೀನು ಕೂಡ ತಿಳಿದಿದ್ದೀಯೆ.
01065028a ತೇಜಸಸ್ತಪಸಶ್ಚೈವ ಕೋಪಸ್ಯ ಚ ಮಹಾತ್ಮನಃ|
01065028c ತ್ವಮಪ್ಯುದ್ವಿಜಸೇ ಯಸ್ಯ ನೋದ್ವಿಜೇಯಮಹಂ ಕಥಂ||
ಆ ಮಹಾತ್ಮನ ತೇಜಸ್ಸು, ತಪಸ್ಸು ಮತ್ತು ಕೋಪವು ನಿನ್ನನ್ನೂ ಕೂಡ ಉದ್ವಿಗ್ನನನ್ನಾಗಿ ಮಾಡಿದೆ. ನಾನಾದರೂ ಹೇಗೆ ಅವನಿಗೆ ಭಯಪಡದಿರಲಿ?
01065029a ಮಹಾಭಾಗಂ ವಸಿಷ್ಠಂ ಯಃ ಪುತ್ರೈರಿಷ್ಟೈರ್ವ್ಯಯೋಜಯತ್|
01065029c ಕ್ಷತ್ರೇ ಜಾತಶ್ಚ ಯಃ ಪೂರ್ವಮಭವದ್ಬ್ರಾಹ್ಮಣೋ ಬಲಾತ್||
ಮಹಾಭಾಗ ವಸಿಷ್ಠನೂ ಕೂಡ ಇವನಿಂದ ತನ್ನ ಪುತ್ರರನ್ನು ಅಕಾಲದಲ್ಲಿ ಕಳೆದುಕೊಳ್ಳಬೇಕಾಯಿತು. ಕ್ಷತ್ರಿಯನಾಗಿ ಹುಟ್ಟಿದರೂ ತನ್ನ ಬಲದಿಂದ ಬ್ರಾಹ್ಮಣನಾಗಿದ್ದಾನೆ.
01065030a ಶೌಚಾರ್ಥಂ ಯೋ ನದೀಂ ಚಕ್ರೇ ದುರ್ಗಮಾಂ ಬಹುಭಿರ್ಜಲೈಃ|
01065030c ಯಾಂ ತಾಂ ಪುಣ್ಯತಮಾಂ ಲೋಕೇ ಕೌಶಿಕೀತಿ ವಿದುರ್ಜನಾಃ||
ಅವನು ಶೌಚಾರ್ಥವಾಗಿ ತುಂಬಾ ನೀರಿರುವ ಮತ್ತು ಆಳವಾದ ಒಂದು ನದಿಯನ್ನೇ ಸೃಷ್ಟಿಸಿದನು. ಆ ಪುಣ್ಯ ನದಿಯು ಈಗಲೂ ಲೋಕದಲ್ಲಿ ಕೌಶಿಕಿಯೆಂದು ಕರೆಯಲ್ಪಡುತ್ತಿದೆ.
01065031a ಬಭಾರ ಯತ್ರಾಸ್ಯ ಪುರಾ ಕಾಲೇ ದುರ್ಗೇ ಮಹಾತ್ಮನಃ|
01065031c ದಾರಾನ್ಮತಂಗೋ ಧರ್ಮಾತ್ಮಾ ರಾಜರ್ಷಿರ್ವ್ಯಾಧತಾಂ ಗತಃ||
ಹಿಂದಿನ ಕಾಲದಲ್ಲಿ ಆ ದುರ್ಗದಲ್ಲಿ ಮಹಾತ್ಮ ಧರ್ಮಾತ್ಮ ರಾಜರ್ಷಿ ಮತಂಗನು ತನ್ನ ಪತ್ನಿಯೊಡನೆ ವ್ಯಾಧನಾಗಿ ವಾಸಿಸುತ್ತಿದ್ದನು.
01065032a ಅತೀತಕಾಲೇ ದುರ್ಭಿಕ್ಷೇ ಯತ್ರೈತ್ಯ ಪುನರಾಶ್ರಮಂ|
01065032c ಮುನಿಃ ಪಾರೇತಿ ನದ್ಯಾ ವೈ ನಾಮ ಚಕ್ರೇ ತದಾ ಪ್ರಭುಃ||
ದುರ್ಭಿಕ್ಷವು ಮುಗಿದ ನಂತರ ಪುನಃ ಆಶ್ರಮಕ್ಕೆ ಮರಳಿ ಬಂದು ಆ ಮುನಿ ಪ್ರಭುವು ಆ ನದಿಗೆ ಪಾರ ಎಂಬ ಹೆಸರನ್ನಿತ್ತನು.
01065033a ಮತಂಗಂ ಯಾಜಯಾಂ ಚಕ್ರೇ ಯತ್ರ ಪ್ರೀತಮನಾಃ ಸ್ವಯಂ|
01065033c ತ್ವಂ ಚ ಸೋಮಂ ಭಯಾದ್ಯಸ್ಯ ಗತಃ ಪಾತುಂ ಶುರೇಶ್ವರ||
ಸಂತೋಷಗೊಂಡ ಅವನು ಮತಂಗನ ಯಜ್ಞವನ್ನು ನೆರವೇರಿಸಿಕೊಟ್ಟನು. ಸುರೇಶ್ವರ! ಭಯಪಟ್ಟ ನೀನೂ ಕೂಡ ಅಲ್ಲಿಗೆ ಹೋಗಿ ಸೋಮವನ್ನು ಸ್ವೀಕರಿಸಿದೆ.
01065034a ಅತಿ ನಕ್ಷತ್ರವಂಶಾಂಶ್ಚ ಕ್ರುದ್ಧೋ ನಕ್ಷತ್ರಸಂಪದಾ|
01065034c ಪ್ರತಿ ಶ್ರವಣಪೂರ್ವಾಣಿ ನಕ್ಷತ್ರಾಣಿ ಸಸರ್ಜ ಯಃ||
ಕೃದ್ಧನಾದ ಇವನು ಶ್ರವಣ ಮೊದಲಾದ ನಕ್ಷತ್ರಗಳನ್ನು ಸೃಷ್ಟಿಸಿ ಬೇರೆಯೇ ಒಂದು ನಕ್ಷತ್ರ ವಂಶ, ನಕ್ಷತ್ರಮಂಡಲವನ್ನು ರಚಿಸಿದನು.
01065035a ಏತಾನಿ ಯಸ್ಯ ಕರ್ಮಾಣಿ ತಸ್ಯಾಹಂ ಭೃಶಮುದ್ವಿಜೇ|
01065035c ಯಥಾ ಮಾಂ ನ ದಹೇತ್ಕ್ರುದ್ಧಸ್ತಥಾಜ್ಞಾಪಯ ಮಾಂ ವಿಭೋ||
ಇಂಥಹ ಕಾರ್ಯಗಳನ್ನೆಲ್ಲ ಎಸಗಿದ ಅವನ ಬಳಿ ಹೋಗಲು ನನಗೆ ಭಯ, ಉದ್ವಿಗ್ನತೆ ಉಂಟಾಗಿದೆ. ಅವನ ಕೋಪದಿಂದ ಸುಟ್ಟುಹೋಗುವುದನ್ನು ತಡೆಯಬಲ್ಲಂತಹ ಏನಾದರೂ ಉಪಾಯವನ್ನು ಹೇಳು ಪ್ರಭು!
01065036a ತೇಜಸಾ ನಿರ್ದಹೇಲ್ಲೋಕಾನ್ಕಂಪಯೇದ್ಧರಣೀಂ ಪದಾ|
01065036c ಸಂಕ್ಷಿಪೇಚ್ಚ ಮಹಾಮೇರುಂ ತೂರ್ಣಮಾವರ್ತಯೇತ್ತಥಾ||
ಅವನು ತನ್ನ ತೇಜಸ್ಸಿನಿಂದ ಲೋಕಗಳನ್ನು ಸುಡಬಲ್ಲ. ತನ್ನ ಪಾದದಿಂದ ಧರಣಿಯನ್ನು ನಡುಗಿಸಬಲ್ಲ ಮತ್ತು ಮಹಾಮೇರುವನ್ನು ಕಿತ್ತು ಬಹಳಷ್ಟು ದೂರದವರೆಗೆ ಎಸೆಯಬಲ್ಲ.
01065037a ತಾದೃಶಂ ತಪಸಾ ಯುಕ್ತಂ ಪ್ರದೀಪ್ತಮಿವ ಪಾವಕಂ|
01065037c ಕಥಮಸ್ಮದ್ವಿಧಾ ಬಾಲಾ ಜಿತೇಂದ್ರಿಯಮಭಿಸ್ಪೃಶೇತ್||
ಇಂಥಹ ತಪಸ್ಸಿನಿಂದ ಪಾವಕನಂತೆ ಉರಿಯುತ್ತಿರುವ ಆ ಜಿತೇಂದ್ರಿಯನನ್ನು ನನ್ನಂಥಹ ಬಾಲಕಿಯು ಹೇಗೆ ತಾನೆ ಮುಟ್ಟಿಯಾಳು?
01065038a ಹುತಾಶನಮುಖಂ ದೀಪ್ತಂ ಸೂರ್ಯಚಂದ್ರಾಕ್ಷಿತಾರಕಂ|
01065038c ಕಾಲಜಿಹ್ವಂ ಸುರಶ್ರೇಷ್ಠ ಕಥಮಸ್ಮದ್ವಿಧಾ ಸ್ಪೃಶೇತ್||
ಅವನ ಬಾಯಿಯು ಹುತಾಶನನಂತೆ ಉರಿಯುತ್ತದೆ, ಅವನ ಕಣ್ಣುಗಳು ಸೂರ್ಯ-ಚಂದ್ರರಂತೆ, ಮತ್ತು ಅವನ ನಾಲಗೆಯು ಯಮನಂತಿವೆ. ಸುರಶ್ರೇಷ್ಠ! ಅಂಥವನನ್ನು ನಾನು ಹೇಗೆ ಸ್ಪರ್ಷಿಸಲಿ?
01065039a ಯಮಶ್ಚ ಸೋಮಶ್ಚ ಮಹರ್ಷಯಶ್ಚ |
ಸಾಧ್ಯಾ ವಿಶ್ವೇ ವಾಲಖಿಲ್ಯಾಶ್ಚ ಸರ್ವೇ||
01065039c ಏತೇಽಪಿ ಯಸ್ಯೋದ್ವಿಜಂತೇ ಪ್ರಭಾವಾತ್|
ಕಸ್ಮಾತ್ತಸ್ಮಾನ್ಮಾದೃಶೀ ನೋದ್ವಿಜೇತ||
ಯಮನೂ, ಸೋಮನೂ, ಮಹರ್ಷಿಗಳೂ, ಸಾಧ್ಯರೂ, ವಿಶ್ವೇದೇವತೆಗಳೂ, ವಾಲಖಿಲ್ಯರೂ ಸರ್ವರೂ ಅವನ ಪ್ರಭಾವದ ಕುರಿತು ಜಾಗರೂಕರಾಗಿರುತ್ತಾರೆ. ನನ್ನಂತಹ ಹೆಣ್ಣು ಹೇಗೆತಾನೆ ಅವನಿಗೆ ಹೆದರುವುದಿಲ್ಲ?
01065040a ತ್ವಯೈವಮುಕ್ತಾ ಚ ಕಥಂ ಸಮೀಪಂ|
ಋಷೇರ್ನ ಗಚ್ಛೇಯಮಹಂ ಸುರೇಂದ್ರ||
01065040c ರಕ್ಷಾಂ ತು ಮೇ ಚಿಂತಯ ದೇವರಾಜ|
ಯಥಾ ತ್ವದರ್ಥಂ ರಕ್ಷಿತಾಹಂ ಚರೇಯಂ||
ಸುರೇಂದ್ರ! ನೀನು ಹೇಳಿದ ಬಳಿಕ ಅವನ ಬಳಿ ಹೇಗೆ ನಾನು ಹೋಗದೇ ಇರಲಿ? ಆದರೂ ನನ್ನನು ರಕ್ಷಿಸುವ ಕುರಿತು ಏನಾದರೂ ಯೋಚಿಸು. ದೇವರಾಜ! ನಿನಗೋಸ್ಕರ ನಾನು ಹೇಗೆ ಸುರಕ್ಷಿತವಾಗಿ ಅವನ ಬಳಿ ಹೋಗಲಿ?
01065041a ಕಾಮಂ ತು ಮೇ ಮಾರುತಸ್ತತ್ರ ವಾಸಃ|
ಪ್ರಕ್ರೀಡಿತಾಯಾ ವಿವೃಣೋತು ದೇವ||
01065041c ಭವೇಚ್ಚ ಮೇ ಮನ್ಮಥಸ್ತತ್ರ ಕಾರ್ಯೇ|
ಸಹಾಯಭೂತಸ್ತವ ದೇವಪ್ರಸಾದಾತ್||
ದೇವ! ನಾನು ಆಡುತ್ತಿರುವಾಗ ಮಾರುತನೂ ಅಲ್ಲಿ ಇದ್ದು ನನ್ನ ವಸ್ತ್ರವನ್ನು ಹಾರಿಸಲಿ. ಮನ್ಮಥನೂ ಅಲ್ಲಿದ್ದು ನನ್ನ ಈ ಕಾರ್ಯದಲ್ಲಿ ನಿನ್ನ ದೇವಪ್ರಸಾದವೆಂದು ಸಹಾಯವನ್ನು ನೀಡಲಿ.
01065042a ವನಾಚ್ಚ ವಾಯುಃ ಸುರಭಿಃ ಪ್ರವಾಯೇತ್|
ತಸ್ಮಿನ್ಕಾಲೇ ತಮೃಷಿಂ ಲೋಭಯಂತ್ಯಾಃ||
01065042c ತಥೇತ್ಯುಕ್ತ್ವಾ ವಿಹಿತೇ ಚೈವ ತಸ್ಮಿಂನ್|
ತತೋ ಯಯೌ ಸಾಶ್ರಮಂ ಕೌಶಿಕಸ್ಯ||
ನಾನು ಋಷಿಯಲ್ಲಿ ಆಸೆಯನ್ನು ಹುಟ್ಟಿಸುವಾಗ ವಾಯುವು ವನದಿಂದ ಸುರಭಿ ಸುಗಂಧವನ್ನು ಹೊತ್ತು ತರಲಿ.” ಇವೆಲ್ಲವುಗಳ ಏರ್ಪಾಡಾಯಿತೆಂದು ಖಚಿತಪಡಿಸಿಕೊಂಡು ಅವಳು ಕೌಶಿಕನ ಆಶ್ರಮಕ್ಕೆ ಬಂದಳು.””
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಪಂಚಷಷ್ಟಿತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೈದನೆಯ ಅಧ್ಯಾಯವು.