Adi Parva: Chapter 62

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ: ಸಂಭವ ಪರ್ವ

೬೨

ಶಕುಂತಲೋಪಾಖ್ಯಾನ

ದುಃಷಂತನ ರಾಜ್ಯಭಾರ (೧-೧೦).

01062001 ಜನಮೇಜಯ ಉವಾಚ

01062001a ತ್ವತ್ತಃ ಶ್ರುತಮಿದಂ ಬ್ರಹ್ಮನ್ದೇವದಾನವರಕ್ಷಸಾಂ|

01062001c ಅಂಶಾವತರಣಂ ಸಮ್ಯಗ್ಗಂಧರ್ವಾಪ್ಸರಸಾಂ ತಥಾ||

ಜನಮೇಜಯನು ಹೇಳಿದನು: “ಬ್ರಹ್ಮನ್! ನಿನ್ನಿಂದ ಈ ದೇವ-ದಾನವ-ರಾಕ್ಷಸ ಮತ್ತು ಗಂಧರ್ವ-ಅಪ್ಸರೆಯರ ಅಂಶಾವತರಣವನ್ನು ಸಂಪೂರ್ಣ ಕೇಳಿದೆನು.

01062002a ಇಮಂ ತು ಭೂಯ ಇಚ್ಛಾಮಿ ಕುರೂಣಾಂ ವಂಶಮಾದಿತಃ|

01062002c ಕಥ್ಯಮಾನಂ ತ್ವಯಾ ವಿಪ್ರ ವಿಪ್ರರ್ಷಿಗಣಸನ್ನಿಧೌ||

ಈಗ ನಾನು ಕುರು ವಂಶದ ಪ್ರಾರಂಭದ ಕುರಿತು ಕೇಳಬಯಸುತ್ತೇನೆ. ವಿಪ್ರ! ವಿಪ್ರರ್ಷಿಗಣಗಳ ಈ ಸನ್ನಿಧಿಯಲ್ಲಿ ಅದನ್ನು ಕಥಾರೂಪದಲ್ಲಿ ಹೇಳು.”

01062003 ವೈಶಂಪಾಯನ ಉವಾಚ

01062003a ಪೌರವಾಣಾಂ ವಂಶಕರೋ ದುಃಷಂತೋ ನಾಮ ವೀರ್ಯವಾನ್|

01062003c ಪೃಥಿವ್ಯಾಶ್ಚತುರಂತಾಯಾ ಗೋಪ್ತಾ ಭರತಸತ್ತಮ||

ವೈಶಂಪಾಯನನು ಹೇಳಿದನು: “ಭರತಸತ್ತಮ! ನಾಲ್ಕೂ ಕಡೆಗಳಲ್ಲಿ ಸಮುದ್ರವು ಆವರಿಸಿರುವ ಈ ಪೃಥ್ವಿಯನ್ನು ಪಾಲಿಸುತ್ತಿದ್ದ ದುಃಷಂತ ಎಂಬ ಹೆಸರಿನ ವೀರನೇ ಪೌರವರ ವಂಶಕರನು.

01062004a ಚತುರ್ಭಾಗಂ ಭುವಃ ಕೃತ್ಸ್ನಂ ಸ ಭುಂಕ್ತೇ ಮನುಜೇಶ್ವರಃ|

01062004c ಸಮುದ್ರಾವರಣಾಂಶ್ಚಾಪಿ ದೇಶಾನ್ಸ ಸಮಿತಿಂಜಯಃ||

ಆ ಮನುಜೇಶ್ವರನು ಭೋಗಿಸಿದ ದೇಶವು ಸಮುದ್ರದಿಂದ ಆವರಿಸಲ್ಪಟ್ಟ ಭೂಮಿಯ ನಾಲ್ಕೂ ಭಾಗಗಳನ್ನು ಒಳಗೊಂಡಿದ್ದಿತು.

01062005a ಆಮ್ಲೇಚ್ಛಾಟವಿಕಾನ್ಸರ್ವಾನ್ಸ ಭುಂಕ್ತೇ ರಿಪುಮರ್ದನಃ|

01062005c ರತ್ನಾಕರಸಮುದ್ರಾಂತಾಂಶ್ಚಾತುರ್ವರ್ಣ್ಯಜನಾವೃತಾನ್||

ಆ ರಿಪುಮರ್ದನನ ರಾಜ್ಯವು ಮ್ಲೇಚ್ಛರ ರಾಜ್ಯಗಳೆಲ್ಲವನ್ನೂ ಸೇರಿ ರತ್ನಾಕರ ಸಮುದ್ರದ ಅಂತ್ಯದವರೆಗೂ ಕೂಡಿದ್ದು ಚಾತುರ್ವಣ್ಯದವರನ್ನೂ ಒಳಗೊಂಡಿತ್ತು.

01062006a ನ ವರ್ಣಸಂಕರಕರೋ ನಾಕೃಷ್ಯಕರಕೃಜ್ಜನಃ|

01062006c ನ ಪಾಪಕೃತ್ಕಶ್ಚಿದಾಸೀತ್ತಸ್ಮಿನ್ರಾಜನಿ ಶಾಸತಿ||

ಆ ರಾಜನ ಶಾಸನದಲ್ಲಿ ವರ್ಣಸಂಕರವಿರಲಿಲ್ಲ, ಬೇಸಾಯ ಮಾಡಬೇಕಾಗಿರಲಿಲ್ಲ, ಗಣಿಗಳನ್ನು ತೋಡಬೇಕಾಗಿರಲಿಲ್ಲ, ಪಾಪಕೃತ್ಯಗಳನ್ನು ಮಾಡುವವರು ಯಾರೂ ಇರಲಿಲ್ಲ.

01062007a ಧರ್ಮ್ಯಾಂ ರತಿಂ ಸೇವಮಾನಾ ಧರ್ಮಾರ್ಥಾವಭಿಪೇದಿರೇ|

01062007c ತದಾ ನರಾ ನರವ್ಯಾಘ್ರ ತಸ್ಮಿಂಜನಪದೇಶ್ವರೇ||

ನರವ್ಯಾಘ್ರ! ಅವನ ರಾಜ್ಯಭಾರದಲ್ಲಿ ಎಲ್ಲರೂ ಧರ್ಮನಿರತರಾಗಿದ್ದು ಅವರು ಮಾಡುವ ಎಲ್ಲ ಕಾರ್ಯಗಳೂ ಧರ್ಮದ ಸೇವೆಯಲ್ಲಿಯೇ ನಡೆಯುತ್ತಿತ್ತು. 

01062008a ನಾಸೀತ್ಚೋರಭಯಂ ತಾತ ನ ಕ್ಷುಧಾಭಯಮಣ್ವಪಿ|

01062008c ನಾಸೀದ್ವ್ಯಾಧಿಭಯಂ ಚಾಪಿ ತಸ್ಮಿಂಜನಪದೇಶ್ವರೇ||

ಅಯ್ಯಾ! ಅವನ ರಾಜ್ಯಭಾರದಲ್ಲಿ ಯಾವುದೇ ರೀತಿಯ ಚೋರ ಭಯವಾಗಲೀ, ಬರಗಾಲದ ಭಯವಾಗಲೀ, ಅಥವಾ ವ್ಯಾಧಿ ಭಯವಾಗಲೀ ಇರಲಿಲ್ಲ.

01062009a ಸ್ವೈರ್ಧರ್ಮೈರೇಮಿರೇ ವರ್ಣಾ ದೈವೇ ಕರ್ಮಣಿ ನಿಃಸ್ಪೃಹಾಃ|

01062009c ತಮಾಶ್ರಿತ್ಯ ಮಹೀಪಾಲಮಾಸಂಶ್ಚೈವಾಕುತೋಭಯಾಃ||

ಎಲ್ಲ ವರ್ಣದವರೂ ಅವರವರ ಧರ್ಮಗಳಲ್ಲಿ ನಿರತರಾಗಿದ್ದು ಯಾವುದೇ ಫಲವನ್ನೂ ಬಯಸದೇ ದೇವಕಾರ್ಯಗಳಲ್ಲಿ ತೊಡಗಿದ್ದರು. ಮಹೀಪಾಲ! ಅವನಲ್ಲಿ ಆಶ್ರಯ ಹೊಂದಿದ ಪ್ರಜೆಗಳ್ಯಾರಿಗೂ ಯಾವುದೇ ರೀತಿಯ ಭಯವಿರಲಿಲ್ಲ.

01062010a ಕಾಲವರ್ಷೀ ಚ ಪರ್ಜನ್ಯಃ ಸಸ್ಯಾನಿ ಫಲವಂತಿ ಚ|

01062010c ಸರ್ವರತ್ನಸಮೃದ್ಧಾ ಚ ಮಹೀ ವಸುಮತೀ ತದಾ||

ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆ ಸುರಿಸುತ್ತಿದ್ದನು ಮತ್ತು ಸಸ್ಯಗಳು ಫಲಭರಿತವಾಗಿರುತ್ತಿದ್ದವು. ಆ ಕಾಲದಲ್ಲಿ ವಸುಮತಿ ಭೂಮಿಯು ಸರ್ವರತ್ನ ಸಮೃದ್ಧಳಾಗಿದ್ದಳು.

01062011a ಸ ಚಾದ್ಭುತಮಹಾವೀರ್ಯೋ ವಜ್ರಸಂಹನನೋ ಯುವಾ|

01062011c ಉದ್ಯಮ್ಯ ಮಂದರಂ ದೋರ್ಭ್ಯಾಂ ಹರೇತ್ಸವನಕಾನನಂ||

ಆ ಯುವಕನಾದರೋ ಅದ್ಭುತಮಹಾವೀರ್ಯನೂ, ವಜ್ರಕಾಯನೂ ಆಗಿದ್ದು ವನಕಾನನಗಳ ಸಮೇತ ಮಂದರ ಪರ್ವತವನ್ನು ಎತ್ತಿಹಿಡಿಯಬಲ್ಲಂಥ ಭುಜಯುಕ್ತನಾಗಿದ್ದನು.

01062012a ಧನುಷ್ಯಥ ಗದಾಯುದ್ಧೇ ತ್ಸರುಪ್ರಹರಣೇಷು ಚ|

01062012c ನಾಗಪೃಷ್ಠೇಽಶ್ವಪೃಷ್ಠೇ ಚ ಬಭೂವ ಪರಿನಿಷ್ಠಿತಃ||

ಅವನು ಧನುರ್ಯುದ್ಧ, ಗದಾಯುದ್ಧ, ಖಡ್ಗ ಪ್ರಹಾರ, ಆನೆ ಸವಾರಿ ಮತ್ತು ಕುದುರೆ ಸವಾರಿ ಎಲ್ಲದರಲ್ಲಿಯೂ ಪರಿಣಿತನಾಗಿದ್ದನು.

01062013a ಬಲೇ ವಿಷ್ಣುಸಮಶ್ಚಾಸೀತ್ತೇಜಸಾ ಭಾಸ್ಕರೋಪಮಃ|

01062013c ಅಕ್ಷುಬ್ಧತ್ವೇಽರ್ಣವಸಮಃ ಸಹಿಷ್ಣುತ್ವೇ ಧರಾಸಮಃ||

ಅವನು ಬಲದಲ್ಲಿ ವಿಷ್ಣುಸಮಾನನೂ, ತೇಜಸ್ಸಿನಲ್ಲಿ ಭಾಸ್ಕರನಂತೆಯೂ, ಶಾಂತತೆಯಲ್ಲಿ ಸಾಗರ ಸಮನೂ, ಮತ್ತು ಸಹಿಷ್ಣುತೆಯಲ್ಲಿ ಭೂಮಿಯ ಸಮನೂ ಆಗಿದ್ದನು.

01062014a ಸಮ್ಮತಃ ಸ ಮಹೀಪಾಲಃ ಪ್ರಸನ್ನಪುರರಾಷ್ಟ್ರವಾನ್|

01062014c ಭೂಯೋ ಧರ್ಮಪರೈರ್ಭಾವೈರ್ವಿದಿತಂ ಜನಮಾವಸತ್||

ಆ ಸಮ್ಮತ ಮಹೀಪಾಲನು ಪ್ರಸನ್ನತೆಯಿಂದ ತನ್ನ ಪುರರಾಷ್ಟ್ರಗಳನ್ನು ಆಳುತ್ತಿರಲು ಅಲ್ಲಿಯ ಜನರೆಲ್ಲರೂ ಧರ್ಮ ನಿರತರಾಗಿದ್ದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ದ್ವಿಷಷ್ಟಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೆರಡನೆಯ ಅಧ್ಯಾಯವು.

Comments are closed.