ಕರ್ಣ ಪರ್ವ
೨೫
ಶಲ್ಯನು ಕರ್ಣನ ಸಾರಥ್ಯವನ್ನು ಸ್ವೀಕರಿಸಿದುದು
“ಹಿತವನ್ನು ಬಯಸಿ ನಾನು ಕರ್ಣನಿಗೆ ಹೇಳುವ ಪ್ರಿಯ ಮತ್ತು ಅಪ್ರಿಯ ಮಾತುಗಳೆಲ್ಲವನ್ನೂ ನೀನು, ಕರ್ಣ ಮತ್ತು ಎಲ್ಲರೂ ಕ್ಷಮಿಸಬೇಕು!” ಎಂದು ಹೇಳಿ ಶಲ್ಯನು ಕರ್ಣನ ಸಾರಥಿಯಾಗಲು ಒಪ್ಪಿಕೊಂಡಿದುದು (೧-೬). ಕರ್ಣನಲ್ಲಿ ಶಲ್ಯನು ತನ್ನ ಕುಶಲತೆಯ ಬಗ್ಗೆ ಹೇಳಿಕೊಳ್ಳುವುದು (೭-೧೧).
08025001 ದುರ್ಯೋಧನ ಉವಾಚ|
08025001a ಏವಂ ಸ ಭಗವಾನ್ದೇವಃ ಸರ್ವಲೋಕಪಿತಾಮಹಃ|
08025001c ಸಾರಥ್ಯಮಕರೋತ್ತತ್ರ ಯತ್ರ ರುದ್ರೋಽಭವದ್ರಥೀ||
ದುರ್ಯೋಧನನು ಹೇಳಿದನು: “ಹೀಗೆ ರುದ್ರನು ರಥಿಯಾಗಿರುವಾಗ ಸರ್ವಲೋಕಪಿತಾಮಹ ದೇವ ಭಗವಾನ್ ಬ್ರಹ್ಮನು ಸಾರಥ್ಯವನ್ನು ಮಾಡಿದನು.
08025002a ರಥಿನಾಭ್ಯಧಿಕೋ ವೀರಃ ಕರ್ತವ್ಯೋ ರಥಸಾರಥಿಃ|
08025002c ತಸ್ಮಾತ್ತ್ವಂ ಪುರುಷವ್ಯಾಘ್ರ ನಿಯಚ್ಚ ತುರಗಾನ್ಯುಧಿ||
ರಥಿಗಿಂತಲೂ ಅಧಿಕ ವೀರನು ರಥಸಾರಥಿಯಾಗುವುದು ಕರ್ತವ್ಯ. ಆದುದರಿಂದ ಪುರುಷವ್ಯಾಘ್ರ! ನೀನು ಯುದ್ಧದಲ್ಲಿ ತುರಗಗಳನ್ನು ನಿಯಂತ್ರಿಸು!””
08025003 ಸಂಜಯ ಉವಾಚ|
08025003a ತತಃ ಶಲ್ಯಃ ಪರಿಷ್ವಜ್ಯ ಸುತಂ ತೇ ವಾಕ್ಯಮಬ್ರವೀತ್|
08025003c ದುರ್ಯೋಧನಮಮಿತ್ರಘ್ನಃ ಪ್ರೀತೋ ಮದ್ರಾಧಿಪಸ್ತದಾ||
ಸಂಜಯನು ಹೇಳಿದನು: “ಆಗ ಅಮಿತ್ರಘ್ನ ಮದ್ರಾಧಿಪ ಶಲ್ಯನು ಪ್ರೀತನಾಗಿ ನಿನ್ನ ಮಗ ದುರ್ಯೋಧನನನ್ನು ಬಿಗಿದಪ್ಪಿ ಹೀಗೆ ಹೇಳಿದನು:
08025004a ಏವಂ ಚೇನ್ಮನ್ಯಸೇ ರಾಜನ್ಗಾಂಧಾರೇ ಪ್ರಿಯದರ್ಶನ|
08025004c ತಸ್ಮಾತ್ತೇ ಯತ್ಪ್ರಿಯಂ ಕಿಂ ಚಿತ್ತತ್ಸರ್ವಂ ಕರವಾಣ್ಯಹಂ||
“ಪ್ರಿಯದರ್ಶನ! ಗಾಂಧಾರೇ! ರಾಜನ್! ನೀನು ಏನನ್ನು ಬಯಸುತ್ತೀಯೋ ಮತ್ತು ನಿನಗೆ ಪ್ರಿಯವಾದುದು ಏನಿದೆಯೋ ಅವೆಲ್ಲವನ್ನೂ ನಾನು ಮಾಡುತ್ತೇನೆ.
08025005a ಯತ್ರಾಸ್ಮಿ ಭರತಶ್ರೇಷ್ಠ ಯೋಗ್ಯಃ ಕರ್ಮಣಿ ಕರ್ಹಿ ಚಿತ್|
08025005c ತತ್ರ ಸರ್ವಾತ್ಮನಾ ಯುಕ್ತೋ ವಕ್ಷ್ಯೇ ಕಾರ್ಯಧುರಂ ತವ||
ಭರತಶ್ರೇಷ್ಠ! ನಾನು ಎಲ್ಲಿ ಯಾವ ಕಾರ್ಯಕ್ಕೆ ಯೋಗ್ಯನಾಗಿರುವೆನೋ ಆ ಕಾರ್ಯವನ್ನೇ ನೀನು ನನಗೆ ಯೋಜಿಸಿದ ನಂತರ ಆದನ್ನು ನಾನು ಸಂಪೂರ್ಣಮನಸ್ಸಿನಿಂದ ಮಾಡುತ್ತೇನೆಂದು ಮಾತುಕೊಡುತ್ತೇನೆ.
08025006a ಯತ್ತು ಕರ್ಣಮಹಂ ಬ್ರೂಯಾಂ ಹಿತಕಾಮಃ ಪ್ರಿಯಾಪ್ರಿಯಂ|
08025006c ಮಮ ತತ್ಕ್ಷಮತಾಂ ಸರ್ವಂ ಭವಾನ್ಕರ್ಣಶ್ಚ ಸರ್ವಶಃ||
ಹಿತವನ್ನು ಬಯಸಿ ನಾನು ಕರ್ಣನಿಗೆ ಹೇಳುವ ಪ್ರಿಯ ಮತ್ತು ಅಪ್ರಿಯ ಮಾತುಗಳನ್ನು ಎಲ್ಲವನ್ನೂ ನೀನು, ಕರ್ಣ ಮತ್ತು ಎಲ್ಲರೂ ಕ್ಷಮಿಸಬೇಕು!”
08025007 ಕರ್ಣ ಉವಾಚ|
08025007a ಈಶಾನಸ್ಯ ಯಥಾ ಬ್ರಹ್ಮಾ ಯಥಾ ಪಾರ್ಥಸ್ಯ ಕೇಶವಃ|
08025007c ತಥಾ ನಿತ್ಯಂ ಹಿತೇ ಯುಕ್ತೋ ಮದ್ರರಾಜ ಭಜಸ್ವ ನಃ||
ಕರ್ಣನು ಹೇಳಿದನು: “ಮದ್ರರಾಜ! ಈಶಾನನಿಗೆ ಬ್ರಹ್ಮನು ಹೇಗೋ ಮತ್ತು ಪಾರ್ಥನಿಗೆ ಕೇಶವನು ಹೇಗೋ ಹಾಗೆ ನೀನು ನಿತ್ಯವೂ ನನ್ನ ಹಿತದಲ್ಲಿ ಯುಕ್ತನಾಗಿ ಸಂತೋಷಗೊಳಿಸು!”
08025008 ಶಲ್ಯ ಉವಾಚ|
08025008a ಆತ್ಮನಿಂದಾತ್ಮಪೂಜಾ ಚ ಪರನಿಂದಾ ಪರಸ್ತವಃ|
08025008c ಅನಾಚರಿತಮಾರ್ಯಾಣಾಂ ವೃತ್ತಮೇತಚ್ಚತುರ್ವಿಧಂ||
ಶಲ್ಯನು ಹೇಳಿದನು: “ತನ್ನನ್ನು ತಾನೇ ನಿಂದಿಸಿಕೊಳ್ಳುವುದು, ತನ್ನನ್ನು ತಾನೇ ಹೊಗಳಿಕೊಳ್ಳುವುದು, ಇತರರನ್ನು ನಿಂದಿಸುವುದು ಮತ್ತು ಇತರರನ್ನು ಹೊಗಳುವುದು ಇವು ನಾಲ್ಕು ಆರ್ಯರು ಆಚರಿಸಬಾರದಂತಹ ವ್ಯವಹಾರಗಳು.
08025009a ಯತ್ತು ವಿದ್ವನ್ಪ್ರವಕ್ಷ್ಯಾಮಿ ಪ್ರತ್ಯಯಾರ್ಥಮಹಂ ತವ|
08025009c ಆತ್ಮನಃ ಸ್ತವಸಂಯುಕ್ತಂ ತನ್ನಿಬೋಧ ಯಥಾತಥಂ||
ಇದನ್ನು ತಿಳಿದಿದ್ದರೂ, ನಿನಗೆ ವಿಶ್ವಾಸವುಂಟಾಗಲೆಂಬ ಕಾರಣದಿಂದ, ಸ್ವಪ್ರಶಂಸಾರೂಪವಾದ ಮಾತುಗಳನ್ನು ಹೇಳುತ್ತೇನೆ. ಕೇಳು.
08025010a ಅಹಂ ಶಕ್ರಸ್ಯ ಸಾರಥ್ಯೇ ಯೋಗ್ಯೋ ಮಾತಲಿವತ್ಪ್ರಭೋ|
08025010c ಅಪ್ರಮಾದಪ್ರಯೋಗಾಚ್ಚ ಜ್ಞಾನವಿದ್ಯಾಚಿಕಿತ್ಸಿತೈಃ||
ಪ್ರಭೋ! ಪ್ರಮಾದಗೊಳ್ಳದಿರುವುದು, ಅಶ್ವಸಂಚಾಲಜ್ಞಾನ, ವಿದ್ಯೆ ಮತ್ತು ಚಿಕಿತ್ಸೆ ಇವುಗಳಲ್ಲಿ ಶಕ್ರನ ಸಾರಥಿ ಮಾತಲಿಯಷ್ಟೇ ನಾನು ಯೋಗ್ಯ ಸಾರಥಿಯು.
08025011a ತತಃ ಪಾರ್ಥೇನ ಸಂಗ್ರಾಮೇ ಯುಧ್ಯಮಾನಸ್ಯ ತೇಽನಘ|
08025011c ವಾಹಯಿಷ್ಯಾಮಿ ತುರಗಾನ್ವಿಜ್ವರೋ ಭವ ಸೂತಜ||
ಅನಘ! ಸೂತಜ! ಸಂಗ್ರಾಮದಲ್ಲಿ ಪಾರ್ಥನೊಡನೆ ನೀನು ಯುದ್ಧಮಾಡುವಾಗ ನಿನ್ನ ಕುದುರೆಗಳನ್ನು ನಾನು ನಡೆಸುತ್ತೇನೆ. ನಿನ್ನ ಆತಂಕವನ್ನು ದೂರಮಾಡು!”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಶಲ್ಯಸಾರಥ್ಯಸ್ವೀಕಾರೇ ಪಂಚವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಶಲ್ಯಸಾರಥ್ಯಸ್ವೀಕಾರ ಎನ್ನುವ ಇಪ್ಪತ್ತೈದನೇ ಅಧ್ಯಾಯವು.