Karna Parva: Chapter 15

ಕರ್ಣ ಪರ್ವ

೧೫

ಅಶ್ವತ್ಥಾಮನಿಂದ ಅದ್ರಿಪತಿ ಪಾಂಡ್ಯನ ವಧೆ (೧-೪೩).

08015001 ಧೃತರಾಷ್ಟ್ರ ಉವಾಚ|

08015001a ಪ್ರೋಕ್ತಸ್ತ್ವಯಾ ಪೂರ್ವಮೇವ ಪ್ರವೀರೋ ಲೋಕವಿಶ್ರುತಃ|

08015001c ನ ತ್ವಸ್ಯ ಕರ್ಮ ಸಂಗ್ರಾಮೇ ತ್ವಯಾ ಸಂಜಯ ಕೀರ್ತಿತಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಇದರ ಮೊದಲೇ ನೀನು ಲೋಕವಿಶ್ರುತ ಪ್ರವೀರ ಪಾಂಡ್ಯನ ಕುರಿತು ಮತ್ತು ಸಂಗ್ರಾಮದಲ್ಲಿ ಅವನ ಕರ್ಮದ ಕುರಿತು ಹೇಳಿದ್ದೀಯೆ.

08015002a ತಸ್ಯ ವಿಸ್ತರತೋ ಬ್ರೂಹಿ ಪ್ರವೀರಸ್ಯಾದ್ಯ ವಿಕ್ರಮಂ|

08015002c ಶಿಕ್ಷಾಂ ಪ್ರಭಾವಂ ವೀರ್ಯಂ ಚ ಪ್ರಮಾಣಂ ದರ್ಪಮೇವ ಚ||

ಆ ಪ್ರವೀರನ ವಿಕ್ರಮ, ಶಿಕ್ಷಣದ ಪ್ರಭಾವ, ವೀರ್ಯ, ಪ್ರಮಾಣ ಮತ್ತು ದರ್ಪಗಳ ಕುರಿತು ವಿಸ್ತಾರವಾಗಿ ಹೇಳು.”

08015003 ಸಂಜಯ ಉವಾಚ|

08015003a ದ್ರೋಣಭೀಷ್ಮಕೃಪದ್ರೌಣಿಕರ್ಣಾರ್ಜುನಜನಾರ್ದನಾನ್|

08015003c ಸಮಾಪ್ತವಿದ್ಯಾನ್ಧನುಷಿ ಶ್ರೇಷ್ಠಾನ್ಯಾನ್ಮನ್ಯಸೇ ಯುಧಿ||

ಸಂಜಯನು ಹೇಳಿದನು: “ದ್ರೋಣ, ಭೀಷ್ಮ, ಕೃಪ, ದ್ರೌಣಿ, ಕರ್ಣ, ಅರ್ಜುನ ಮತ್ತು ಜನಾರ್ದನರನ್ನು ವಿದ್ಯಾಸಂಪೂರ್ಣರೆಂದೂ ಯುದ್ಧದಲ್ಲಿ ಧನುಶ್ರೇಷ್ಠರೆಂದೂ ತಿಳಿಯುತ್ತಾರೆ ತಾನೆ?

08015004a ತುಲ್ಯತಾ ಕರ್ಣಭೀಷ್ಮಾಭ್ಯಾಮಾತ್ಮನೋ ಯೇನ ದೃಶ್ಯತೇ|

08015004c ವಾಸುದೇವಾರ್ಜುನಾಭ್ಯಾಂ ಚ ನ್ಯೂನತಾಂ ನಾತ್ಮನೀಚ್ಚತಿ||

ಆದರೆ ಪಾಂಡ್ಯನು ಕರ್ಣ-ಭೀಷ್ಮರನ್ನು ತನ್ನ ಸಮಾನರೆಂದೂ ವಾಸುದೇವಾರ್ಜುನರು ತನಗಿಂತಲೂ ಕಡಿಮೆಯವರೆಂದೂ ತಿಳಿದುಕೊಂಡಿದ್ದವನು.

08015005a ಸ ಪಾಂಡ್ಯೋ ನೃಪತಿಶ್ರೇಷ್ಠಃ ಸರ್ವಶಸ್ತ್ರಭೃತಾಂ ವರಃ|

08015005c ಕರ್ಣಸ್ಯಾನೀಕಮವಧೀತ್ಪರಿಭೂತ ಇವಾಂತಕಃ||

ಆ ಪಾಂಡ್ಯ ನೃಪತಿಶ್ರೇಷ್ಠ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನು ಅಂತಕನಂತೆ ಕರ್ಣನ ಸೇನೆಯನ್ನು ವಧಿಸಲು ಪ್ರಾರಂಭಿಸಿದನು.

08015006a ತದುದೀರ್ಣರಥಾಶ್ವಂ ಚ ಪತ್ತಿಪ್ರವರಕುಂಜರಂ|

08015006c ಕುಲಾಲಚಕ್ರವದ್ಭ್ರಾಂತಂ ಪಾಂಡ್ಯೇನಾಧಿಷ್ಠಿತಂ ಬಲಂ||

ಕರ್ಣನ ಶ್ರೇಷ್ಠ ರಥ-ಕುದುರೆ-ಪದಾತಿ-ಆನೆಗಳಿಂದ ಕೂಡಿದ ಮಹಾಸೇನೆಯು ಪಾಂಡ್ಯನಿಂದ ಧ್ವಂಸಗೊಳಿಸಲ್ಪಟ್ಟು ಕುಂಬಾರನ ಚಕ್ರದೋಪಾದಿಯಲ್ಲಿ ರಣಾಂಗಣದ ಸುತ್ತಲೂ ಸುತ್ತತೊಡಗಿತು.

08015007a ವ್ಯಶ್ವಸೂತಧ್ವಜರಥಾನ್ವಿಪ್ರವಿದ್ಧಾಯುಧಾನ್ರಿಪೂನ್|

08015007c ಸಂಯಗಸ್ತೈಃ ಶರೈಃ ಪಾಂಡ್ಯೋ ವಾಯುರ್ಮೇಘಾನಿವಾಕ್ಷಿಪತ್||

ಭಿರುಗಾಳಿಯು ಮೇಘಗಳನ್ನು ಚದುರಿಸುವಂತೆ ಪಾಂಡ್ಯನು ಚೆನ್ನಾಗಿ ಪ್ರಯೋಗಿಸಿದ ಬಾಣಗಳಿಂದ ಕುದುರೆಗಳು-ಸೂತರು-ಧ್ವಜಗಳೊಂದಿಗೆ ಶತ್ರುಗಳ ರಥಗಳನ್ನು ಚದುರಿಸಿದನು.

08015008a ದ್ವಿರದಾನ್ಪ್ರಹತಪ್ರೋಥಾನ್ವಿಪತಾಕಧ್ವಜಾಯುಧಾನ್|

08015008c ಸಪಾದರಕ್ಷಾನವಧೀದ್ವಜ್ರೇಣಾರೀನಿವಾರಿಹಾ||

ವಜ್ರಿಯು ಶತ್ರುಗಳನ್ನು ಸದೆಬಡಿಯುವಂತೆ ಅವನು ಗಜಸೇನೆಗಳನ್ನು ಪತಾಕೆಗಳಿಂದಲೂ ಆಯುಧಗಳಿಂದಲೂ ಮತ್ತು ಧ್ವಜಗಳಿಂದಲೂ ವಿಹೀನರನ್ನಾಗಿಸಿ ಧ್ವಂಸಮಾಡಿದನು.

08015009a ಸಶಕ್ತಿಪ್ರಾಸತೂಣೀರಾನಶ್ವಾರೋಹಾನ್ ಹಯಾನಪಿ|

08015009c ಪುಲಿಂದಖಶಬಾಹ್ಲೀಕಾನ್ನಿಷಾದಾಂಧ್ರಕತಂಗಣಾನ್||

08015010a ದಾಕ್ಷಿಣಾತ್ಯಾಂಶ್ಚ ಭೋಜಾಂಶ್ಚ ಕ್ರೂರಾನ್ಸಂಗ್ರಾಮಕರ್ಕಶಾನ್|

08015010c ವಿಶಸ್ತ್ರಕವಚಾನ್ಬಾಣೈಃ ಕೃತ್ವಾ ಪಾಂಡ್ಯೋಽಕರೋದ್ವ್ಯಸೂನ್||

ಶಕ್ತಿ-ಪ್ರಾಸ-ಬತ್ತಳಿಕೆಗಳೊಡನೆ ಅಶ್ವಾರೋಹಿಗಳನ್ನೂ ಕುದುರೆಗಳನ್ನೂ ಹಾಗೆಯೇ ಕ್ರೂರರೂ, ಸಂಗ್ರಾಮ ಕರ್ಕಶರೂ ಆದ ಪುಲಿಂದ-ಖಶ-ಬಾಹ್ಲೀಕ-ನಿಷಾದ-ಆಂಧ್ರ-ಕುಂತಲ-ದಾಕ್ಷಿಣಾತ್ಯ-ಭೋಜರನ್ನು ಬಾಣಗಳಿಂದ ಕವಚವಿಹೀನರನ್ನಾಗಿಸಿ ಪಾಂಡ್ಯನು ಅವರನ್ನು ಪ್ರಾಣರಹಿತರನ್ನಾಗಿಯೂ ಮಾಡಿದನು.

08015011a ಚತುರಂಗಂ ಬಲಂ ಬಾಣೈರ್ನಿಘ್ನಂತಂ ಪಾಂಡ್ಯಮಾಹವೇ|

08015011c ದೃಷ್ಟ್ವಾ ದ್ರೌಣಿರಸಂಭ್ರಾಂತಮಸಂಭ್ರಾಂತತರೋಽಭ್ಯಯಾತ್||

ಆಹವದಲ್ಲಿ ಸ್ವಲ್ಪವೂ ಭ್ರಾಂತಗೊಳ್ಳದೇ ಚತುರಂಗಬಲವನ್ನು ಬಾಣಗಳಿಂದ ಸಂಹರಿಸುತ್ತಿದ್ದ ಪಾಂಡ್ಯನನ್ನು ನೋಡಿ ಅಸಂಭ್ರಾಂತ ದ್ರೌಣಿಯು ಆಕ್ರಮಣಿಸಿದನು.

08015012a ಆಭಾಷ್ಯ ಚೈನಂ ಮಧುರಮಭಿ ನೃತ್ಯನ್ನಭೀತವತ್|

08015012c ಪ್ರಾಹ ಪ್ರಹರತಾಂ ಶ್ರೇಷ್ಠಃ ಸ್ಮಿತಪೂರ್ವಂ ಸಮಾಹ್ವಯನ್||

ಪ್ರಹರಿಗಳಲ್ಲಿ ಶ್ರೇಷ್ಠ ಅಶ್ವತ್ಥಾಮನು ಭಯವಿಲ್ಲದೇ ನರ್ತಿಸುತ್ತಿದ್ದ ಪಾಂಡ್ಯನನ್ನು ಸಂಬೋಧಿಸುತ್ತಾ ತಾನೂ ಸಹ ಅವನ ಪರಾಕ್ರಮವನ್ನು ನೋಡಿ ಭಯಪಟ್ಟಿಲ್ಲವೆಂದು ತೋರಿಸಿಕೊಳ್ಳುತ್ತಾ ಸುಮಧುರ ಮಾತುಗಳಿಂದ ಮಂದಹಾಸಪೂರ್ವಕವಾಗಿ ಯುದ್ಧಕ್ಕೆ ಅಹ್ವಾನಿಸುತ್ತಾ ಹೇಳಿದನು:

08015013a ರಾಜನ್ಕಮಲಪತ್ರಾಕ್ಷ ಪ್ರಧಾನಾಯುಧವಾಹನ|

08015013c ವಜ್ರಸಂಹನನಪ್ರಖ್ಯ ಪ್ರಧಾನಬಲಪೌರುಷ||

08015014a ಮುಷ್ಟಿಶ್ಲಿಷ್ಟಾಯುಧಾಭ್ಯಾಂ ಚ ವ್ಯಾಯತಾಭ್ಯಾಂ ಮಹದ್ಧನುಃ|

08015014c ದೋರ್ಭ್ಯಾಂ ವಿಸ್ಫಾರಯನ್ಭಾಸಿ ಮಹಾಜಲದವದ್ಭೃಶಂ||

“ರಾಜನ್! ಕಮಲಪತ್ರಾಕ್ಷ! ಆಯುಧವಾಹನ ಪ್ರಧಾನನೇ! ವಜ್ರಸಮಾನ ಶರೀರವುಳ್ಳವನೇ! ಸುವಿಖ್ಯಾತ ಬಲಪೌರುಷವುಳ್ಳವನೇ! ಸುದೀರ್ಘವಾಗಿ ಸೆಳೆಯಲ್ಪಟ್ಟ ಮೌರ್ವಿಯುಳ್ಳ ಮಹಾಧನುಸ್ಸನ್ನು ಮುಷ್ಟಿಯಿಂದ ಹಿಡಿದು ಅಗಲವಾಗಿ ಮಾಡಲ್ಪಟ್ಟ ಎರಡು ತೋಳುಗಳಿಂದಲೂ ಟೇಂಕರಿಸುತ್ತಿರುವಾಗ ನೀನು ಗರ್ಜಿಸುವ ಮಹಾಮೇಘದಂತೆ ಪ್ರಕಾಶಿಸುವೆ!

08015015a ಶರವರ್ಷೈರ್ಮಹಾವೇಗೈರಮಿತ್ರಾನಭಿವರ್ಷತಃ|

08015015c ಮದನ್ಯಂ ನಾನುಪಶ್ಯಾಮಿ ಪ್ರತಿವೀರಂ ತವಾಹವೇ||

ಮಹಾವೇಗದ ಶರವರ್ಷಗಳಿಂದ ಶತ್ರುಸೇನೆಯನ್ನು ಮುಚ್ಚಿತ್ತಿರುವ ನಿನ್ನನ್ನು ಎದುರಿಸುವ ಅನ್ಯ ಪ್ರತಿವೀರನನ್ನು ಈ ಯುದ್ಧದಲ್ಲಿ ನಾನು ಕಾಣಲಾರೆ.

08015016a ರಥದ್ವಿರದಪತ್ತ್ಯಶ್ವಾನೇಕಃ ಪ್ರಮಥಸೇ ಬಹೂನ್|

08015016c ಮೃಗಸಂಘಾನಿವಾರಣ್ಯೇ ವಿಭೀರ್ಭೀಮಬಲೋ ಹರಿಃ||

ಅರಣ್ಯದಲ್ಲಿ ಮೃಗಸಂಘಗಳನ್ನು ನಿರ್ಭೀತ ಭೀಮಬಲ ಸಿಂಹದಂತೆ ನೀನು ಅನೇಕ ರಥ-ಗಜ-ಪದಾತಿ-ಅಶ್ವಗಳನ್ನು ಪ್ರಮಥಿಸುತ್ತಿದ್ದೀಯೆ.

08015017a ಮಹತಾ ರಥಘೋಷೇಣ ದಿವಂ ಭೂಮಿಂ ಚ ನಾದಯನ್|

08015017c ವರ್ಷಾಂತೇ ಸಸ್ಯಹಾ ಪೀಥೋ ಭಾಭಿರಾಪೂರಯನ್ನಿವ||

ಮಹಾರಥಘೋಷದಿಂದ ಭೂಮಿ-ಆಕಾಶಗಳನ್ನು ಪ್ರತಿಧ್ವನಿಸುತ್ತಾ ನೀನು ಶರತ್ಕಾಲದಲ್ಲಿ ಗರ್ಜಿಸುವ ಸಸ್ಯನಾಶಕ ಮೇಘದಂತೆ ಪ್ರಕಾಶಿಸುತ್ತಿರುವೆ.

08015018a ಸಂಸ್ಪೃಶಾನಃ ಶರಾಂಸ್ತೀಕ್ಷ್ಣಾಂಸ್ತೂಣಾದಾಶೀವಿಷೋಪಮಾನ್|

08015018c ಮಯೈವೈಕೇನ ಯುಧ್ಯಸ್ವ ತ್ರ್ಯಂಬಕೇಣಾಂದಕೋ ಯಥಾ||

ಸರ್ಪವಿಷೋಪಮ ತೀಕ್ಷ್ಣಶರಗಳನ್ನು ಬಿಡುತ್ತಾ ಅಂಧಕನು ತ್ರ್ಯಂಬಕನೊಡನೆ ಹೇಗೋ ಹಾಗೆ ನನ್ನೊಬ್ಬನೊಡನೆಯೇ ಯುದ್ಧಮಾಡು!”

08015019a ಏವಮುಕ್ತಸ್ತಥೇತ್ಯುಕ್ತ್ವಾ ಪ್ರಹರೇತಿ ಚ ತಾಡಿತಃ|

08015019c ಕರ್ಣಿನಾ ದ್ರೋಣತನಯಂ ವಿವ್ಯಾಧ ಮಲಯಧ್ವಜಃ||

“ಹಾಗೆಯೇ ಆಗಲಿ! ಪ್ರಹರಿಸು!” ಎಂದು ಹೇಳಿ ಮಲಯಧ್ವಜ ಪಾಂಡ್ಯನು ದ್ರೋಣತನಯನನ್ನು ಕರ್ಣಿಗಳಿಂದ ಹೊಡೆದನು.

08015020a ಮರ್ಮಭೇದಿಭಿರತ್ಯುಗ್ರೈರ್ಬಾಣೈರಗ್ನಿಶಿಖೋಪಮೈಃ|

08015020c ಸ್ಮಯನ್ನಭ್ಯಹನದ್ದ್ರೌಣಿಃ ಪಾಂಡ್ಯಮಾಚಾರ್ಯಸತ್ತಮಃ||

ಆಚಾರ್ಯಸತ್ತಮ ದ್ರೌಣಿಯು ನಸುನಗುತ್ತಾ ಮರ್ಮಗಳನ್ನು ಭೇದಿಸುವ ಅಗ್ನಿಶಿಖಗಳಂತಿದ್ದ ಉಗ್ರ ಬಾಣಗಳಿಂದ ಪಾಂಡ್ಯನನ್ನು ಗಾಯಗೊಳಿಸಿದನು.

08015021a ತತೋ ನವಾಪರಾಂಸ್ತೀಕ್ಷ್ಣಾನ್ನಾರಾಚಾನ್ಕಂಕವಾಸಸಃ|

08015021c ಗತ್ಯಾ ದಶಮ್ಯಾ ಸಂಯುಕ್ತಾನಶ್ವತ್ಥಾಮಾ ವ್ಯವಾಸೃಜತ್||

ಅನಂತರ ಅಶ್ವತ್ಥಾಮನು ಅನ್ಯ ಒಂಭತ್ತು ಕಂಕವಾಸಸ ತೀಕ್ಷ್ಣ ನಾರಾಚಗಳನ್ನು ಹತ್ತನೆಯ ಗತಿ[1]ಯನ್ನುಪಯೋಗಿಸಿ ಪ್ರಯೋಗಿಸಿದನು.

08015022a ತೇಷಾಂ ಪಂಚಾಚ್ಚಿನತ್ಪಾಂಡ್ಯಃ ಪಂಚಭಿರ್ನಿಶಿತೈಃ ಶರೈಃ|

08015022c ಚತ್ವಾರೋಽಭ್ಯಾಹನನ್ವಾಹಾನಾಶು ತೇ ವ್ಯಸವೋಽಭವನ್||

ಅವುಗಳನ್ನು ಐದರಿಂದ ತುಂಡರಿಸಿ ಐದು ನಿಶಿತ ಶರಗಳಿಂದ ಪಾಂಡ್ಯನು ಅಶ್ವತ್ಥಾಮನ ನಾಲ್ಕೂ ಕುದುರೆಗಳನ್ನೂ ಹೊಡೆಯಲು ಅವು ಕೂಡಲೇ ಅಸುನೀಗಿದವು.

08015023a ಅಥ ದ್ರೋಣಸುತಸ್ಯೇಷೂಂಸ್ತಾಂಶ್ಚಿತ್ತ್ವಾ ನಿಶಿತೈಃ ಶರೈಃ|

08015023c ಧನುರ್ಜ್ಯಾಂ ವಿತತಾಂ ಪಾಂಡ್ಯಶ್ಚಿಚ್ಚೇದಾದಿತ್ಯವರ್ಚಸಃ||

ಆದಿತ್ಯವರ್ಚಸ ಪಾಂಡ್ಯನು ನಿಶಿತ ಶರಗಳಿಂದ ದ್ರೋಣಸುತನ ಬಾಣಗಳನ್ನು ಕತ್ತರಿಸಿ ಅವನ ಧನುಸ್ಸಿನ ಶಿಂಜನಿಯನ್ನೂ ಕತ್ತರಿಸಿದನು.

08015024a ವಿಜ್ಯಂ ಧನುರಥಾಧಿಜ್ಯಂ ಕೃತ್ವಾ ದ್ರೌಣಿರಮಿತ್ರಹಾ|

08015024c ತತಃ ಶರಸಹಸ್ರಾಣಿ ಪ್ರೇಷಯಾಮಾಸ ಪಾಂಡ್ಯತಃ|

08015024e ಇಷುಸಂಬಾಧಮಾಕಾಶಮಕರೋದ್ದಿಶ ಏವ ಚ||

ಅಮಿತ್ರಹ ದ್ರೌಣಿಯು ಕೂಡಲೇ ಧನುಸ್ಸಿಗೆ ಇನ್ನೊಂದು ಮೌರ್ವಿಯನ್ನು ಬಿಗಿದು ಪಾಂಡ್ಯನ ಮೇಲೆ ಸಹಸ್ರಾರು ಶರಗಳನ್ನು ಪ್ರಯೋಗಿಸಿ, ಆಕಾಶ ಮತ್ತು ದಿಕ್ಕುಗಳನ್ನು ಬಾಣಗಳಿಂದ ದಟ್ಟವಾಗಿ ತುಂಬಿಸಿದನು.

08015025a ತತಸ್ತಾನಸ್ಯತಃ ಸರ್ವಾನ್ದ್ರೌಣೇರ್ಬಾಣಾನ್ಮಹಾತ್ಮನಃ|

08015025c ಜಾನಾನೋಽಪ್ಯಕ್ಷಯಾನ್ಪಾಂಡ್ಯೋಽಶಾತಯತ್ಪುರುಷರ್ಷಭಃ||

ಆಗ ಪುರುಷರ್ಷಭ ಮಹಾತ್ಮ ಪಾಂಡ್ಯನು ದ್ರೌಣಿಯ ಬಾಣಗಳು ಅಕ್ಷಯವಾದುದೆಂದು ತಿಳಿದು ಅವುಗಳೆಲ್ಲವನ್ನೂ ತನ್ನ ಬಾಣಗಳಿಂದ ನಿರಸನಗೊಳಿಸಿದನು.

08015026a ಪ್ರಹಿತಾಂಸ್ತಾನ್ಪ್ರಯತ್ನೇನ ಚಿತ್ತ್ವಾ ದ್ರೌಣೇರಿಷೂನರಿಃ|

08015026c ಚಕ್ರರಕ್ಷೌ ತತಸ್ತಸ್ಯ ಪ್ರಾಣುದನ್ನಿಶಿತೈಃ ಶರೈಃ||

ಹೀಗೆ ಶತ್ರುವು ದ್ರೌಣಿಯು ಪ್ರಯೋಗಿಸಿದ ಬಾಣಗಳೆಲ್ಲವನ್ನೂ ಪ್ರಯತ್ನಪಟ್ಟು ಕತ್ತರಿಸಿ ನಿಶಿತ ಶರಗಳಿಂದ ಅವನ ಚಕ್ರರಕ್ಷಕರನ್ನೂ ಸಂಹರಿಸಿದನು.

08015027a ಅಥಾರೇರ್ಲಾಘವಂ ದೃಷ್ಟ್ವಾ ಮಂಡಲೀಕೃತಕಾರ್ಮುಕಃ|

08015027c ಪ್ರಾಸ್ಯದ್ದ್ರೋಣಸುತೋ ಬಾಣಾನ್ವೃಷ್ಟಿಂ ಪೂಷಾನುಜೋ ಯಥಾ||

ಆಗ ಅವನ ಹಸ್ತಲಾಘವವನ್ನು ನೋಡಿ ದ್ರೋಣಸುತನು ಧನುಸ್ಸನ್ನು ಮಂಡಲಾಕಾರವನ್ನಾಗಿಸಿ ಪೂಷನ ತಮ್ಮ ಪರ್ಜನ್ಯನು ಹೇಗೋ ಹಾಗೆ ಪಾಂಡ್ಯನ ಮೇಲೆ ಬಾಣಗಳ ಮಳೆಗರೆದನು.

08015028a ಅಷ್ಟಾವಷ್ಟಗವಾನ್ಯೂಹುಃ ಶಕಟಾನಿ ಯದಾಯುಧಂ|

08015028c ಅಹ್ನಸ್ತದಷ್ಟಭಾಗೇನ ದ್ರೌಣಿಶ್ಚಿಕ್ಷೇಪ ಮಾರಿಷ||

ಮಾರಿಷ! ದ್ರೌಣಿಯು ಎಂಟು ಎತ್ತುಗಳಿಂದ ಎಳೆಯಲ್ಪಡುವ ಎಂಟು ಬಂಡಿಗಳಲ್ಲಿ ತುಂಬಿ ತರಬಹುದಾದಷ್ಟು ಆಯುಧಗಳನ್ನು ದಿನದ ಎಂಟನೆಯ ಒಂದು ಭಾಗದಷ್ಟು ಕಾಲದಲ್ಲಿ (ಅರ್ಧಯಾಮದಲ್ಲಿ ಅಥವಾ ಒಂದು ಘಂಟೆಯಲ್ಲಿ) ಪಾಂಡ್ಯನ ಮೇಲೆ ಸುರಿಸಿದನು.

08015029a ತಮಂತಕಮಿವ ಕ್ರುದ್ಧಮಂತಕಾಲಾಂತಕೋಪಮಂ|

08015029c ಯೇ ಯೇ ದದೃಶಿರೇ ತತ್ರ ವಿಸಂಜ್ಞಾಃ ಪ್ರಾಯಶೋಽಭವನ್||

ಅಂತಕನಂತೆ ಕ್ರುದ್ಧನಾದ ಅಶ್ವತ್ಥಾಮನು ಕಾಲಾಂತಕನಂತಿದ್ದನು. ಆಗ ಅವನನ್ನು ಅಲ್ಲಿ ಯಾರ್ಯಾರು ನೋಡುತ್ತಿದ್ದರೋ ಅವರೆಲ್ಲರೂ ಪ್ರಾಯಶಃ ಮೂರ್ಛೆಯೇ ಹೋಗುತ್ತಿದ್ದರು!

08015030a ಪರ್ಜನ್ಯ ಇವ ಘರ್ಮಾಂತೇ ವೃಷ್ಟ್ಯಾ ಸಾದ್ರಿದ್ರುಮಾಂ ಮಹೀಂ|

08015030c ಆಚಾರ್ಯಪುತ್ರಸ್ತಾಂ ಸೇನಾಂ ಬಾಣವೃಷ್ಟ್ಯಾಭ್ಯವೀವೃಷತ್||

ವರ್ಷಾಕಾಲದಲ್ಲಿ ಪರ್ಜನ್ಯನು ಪರ್ವತ-ವೃಕ್ಷಗಳ ಸಹಿತ ಭೂಮಿಯನ್ನು ಮಳೆಯಿಂದ ಮುಚ್ಚಿ ಬಿಡುವಂತೆ ಆಚಾರ್ಯ ಪುತ್ರನು ಪಾಂಡ್ಯನ ಸೇನೆಯನ್ನು ಬಾಣಗಳ ವೃಷ್ಟಿಯಿಂದ ಅಭಿಷೇಚಿಸಿದನು.

08015031a ದ್ರೌಣಿಪರ್ಜನ್ಯಮುಕ್ತಾಂ ತಾಂ ಬಾಣವೃಷ್ಟಿಂ ಸುದುಃಸಹಾಂ|

08015031c ವಾಯವ್ಯಾಸ್ತ್ರೇಣ ಸ ಕ್ಷಿಪ್ರಂ ರುದ್ಧ್ವಾ ಪಾಂಡ್ಯಾನಿಲೋಽನದತ್||

ದ್ರೌಣಿಯೆಂಬ ಪರ್ಜನ್ಯನು ಪ್ರಯೋಗಿಸಿದ ಸಹಿಸಲಸಾಧ್ಯ ಆ ಬಾಣವೃಷ್ಟಿಯನ್ನು ಭಿರುಗಾಳಿಯಂತಿದ್ದ ಪಾಂಡ್ಯನು ಬೇಗನೇ ವಾಯುವ್ಯಾಸ್ತ್ರದಿಂದ ನಿರಸನಗೊಳಿಸಿ ಆನಂದದಿಂದ ಸಿಂಹನಾದಗೈದನು.

08015032a ತಸ್ಯ ನಾನದತಃ ಕೇತುಂ ಚಂದನಾಗುರುಭೂಷಿತಂ|

08015032c ಮಲಯಪ್ರತಿಮಂ ದ್ರೌಣಿಶ್ಚಿತ್ತ್ವಾಶ್ವಾಂಶ್ಚತುರೋಽಹನತ್||

ಸಿಂಹನಾದ ಮಾಡುತ್ತಿದ್ದ ಅವನ ಚಂದನ-ಅಗರುಗಳಿಂದ ಭೂಷಿತ ಮಲಯಪರ್ವತದಂತಿದ್ದ ಕೇತುವನ್ನು ದ್ರೌಣಿಯು ಕತ್ತರಿಸಿ ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿದನು.

08015033a ಸೂತಮೇಕೇಷುಣಾ ಹತ್ವಾ ಮಹಾಜಲದನಿಸ್ವನಂ|

08015033c ಧನುಶ್ಚಿತ್ತ್ವಾರ್ಧಚಂದ್ರೇಣ ವ್ಯಧಮತ್ತಿಲಶೋ ರಥಂ||

ಸೂತನನ್ನು ಒಂದು ಬಾಣದಿಂದ ಸಂಹರಿಸಿ, ಅರ್ಧಚಂದ್ರದಿಂದ ಅವನ ಮಹಾಮೋಡದಂತೆ ಗರ್ಜಿಸುತ್ತಿದ್ದ ಧನುಸ್ಸನ್ನು ಕತ್ತರಿಸಿ, ಅವನ ರಥವನ್ನು ಎಳ್ಳುಕಾಳಿನಷ್ಟು ಪುಡಿ ಪುಡಿ ಮಾಡಿದನು.

08015034a ಅಸ್ತ್ರೈರಸ್ತ್ರಾಣಿ ಸಂವಾರ್ಯ ಚಿತ್ತ್ವಾ ಸರ್ವಾಯುಧಾನಿ ಚ|

08015034c ಪ್ರಾಪ್ತಮಪ್ಯಹಿತಂ ದ್ರೌಣಿರ್ನ ಜಘಾನ ರಣೇಪ್ಸಯಾ||

ಅಸ್ತ್ರಗಳಿಂದ ಅಸ್ತ್ರಗಳನ್ನು ತಡೆದು, ಸರ್ವಾಯುಧಗಳನ್ನು ತುಂಡರಿಸಿ ದ್ರೌಣಿಯು ಕೈಗೆ ಸಿಕ್ಕಿದರೂ ಇನ್ನೂ ಯುದ್ಧಮಾಡಲು ಬಯಸಿ ಹಿತವಲ್ಲವೆಂದು ಅವನನ್ನು ಕೊಲ್ಲಲಿಲ್ಲ.

08015035a ಹತೇಶ್ವರೋ ದಂತಿವರಃ ಸುಕಲ್ಪಿತಸ್

         ತ್ವರಾಭಿಸೃಷ್ಟಃ ಪ್ರತಿಶರ್ಮಗೋ ಬಲೀ|

08015035c ತಮಧ್ಯತಿಷ್ಠನ್ಮಲಯೇಶ್ವರೋ ಮಹಾನ್

         ಯಥಾದ್ರಿಶೃಂಗಂ ಹರಿರುನ್ನದಂಸ್ತಥಾ||

ಆಗ ಮಾವುತನನ್ನು ಕಳೆದುಕೊಂಡಿದ್ದ, ಸುಕಲ್ಪಿತವಾಗಿದ್ದ ಶ್ರೇಷ್ಠ ಆನೆಯೊಂದು ಅಲ್ಲಿಗೆ ತ್ವರೆಮಾಡಿ ಬರಲು ಯುದ್ಧನಿಪುಣ ಮಲಯೇಶ್ವರ ಪಾಂಡ್ಯನು ಆ ಮಹಾಗಜವನ್ನು ಸಿಂಹವು ಪರ್ವತಶಿಖರವನ್ನೇರುವಂತೆ ಹತ್ತಿ ಕುಳಿತುಕೊಂಡನು.

08015036a ಸ ತೋಮರಂ ಭಾಸ್ಕರರಶ್ಮಿಸಂನಿಭಂ

         ಬಲಾಸ್ತ್ರಸರ್ಗೋತ್ತಮಯತ್ನಮನ್ಯುಭಿಃ|

08015036c ಸಸರ್ಜ ಶೀಘ್ರಂ ಪ್ರತಿಪೀಡಯನ್ಗಜಂ

         ಗುರೋಃ ಸುತಾಯಾದ್ರಿಪತೀಶ್ವರೋ ನದನ್||

ಆ ಅದ್ರಿಪತೀಶ್ವರನು ಭಾಸ್ಕರರಶ್ಮಿಸನ್ನಿಭ ತೋಮರವನ್ನು ಬಲ, ಅಸ್ತ್ರಪ್ರಹರಣ, ಉತ್ತಮ ಪ್ರಯತ್ನ ಮತ್ತು ಕೋಪಗಳಿಂದ ಪ್ರೇರಿತನಾಗಿ ಶೀಘ್ರವಾಗಿ ಆನೆಯನ್ನು ನಿಯಂತ್ರಿಸುತ್ತಾ ಗುರುಸುತನ ಮೇಲೆ ಎಸೆದು ಜೋರಾಗಿ ಗರ್ಜಿಸಿದನು.

08015037a ಮಣಿಪ್ರತಾನೋತ್ತಮವಜ್ರಹಾಟಕೈರ್

         ಅಲಂಕೃತಂ ಚಾಂಶುಕಮಾಲ್ಯಮೌಕ್ತಿಕೈಃ|

08015037c ಹತೋಽಸ್ಯಸಾವಿತ್ಯಸಕೃನ್ಮುದಾ ನದನ್

         ಪರಾಭಿನದ್ದ್ರೌಣಿವರಾಂಗಭೂಷಣಂ||

ಶ್ರೇಷ್ಠ ಮಣಿಗಳಿಂದಲೂ, ಉತ್ತಮ ವಜ್ರಗಳಿಂದಲೂ, ವಸ್ತ್ರ, ಸುವರ್ಣ, ಮುಕ್ತಗಳಿಂದ ಅಲಂಕೃತಗೊಂಡಿದ್ದ ದ್ರೌಣಿಯ ಕಿರೀಟವನ್ನು ದ್ರೌಣಿಗೆ “ನೀನು ಹತನಾದೆ!” ಎಂದು ಕೂಗಿ ಹೇಳುತ್ತಾ ತೋಮರದಿಂದ ಪ್ರಹರಿಸಿ ಜೋರಾಗಿ ನಕ್ಕನು.

08015038a ತದರ್ಕಚಂದ್ರಗ್ರಹಪಾವಕತ್ವಿಷಂ

         ಭೃಶಾಭಿಘಾತಾತ್ಪತಿತಂ ವಿಚೂರ್ಣಿತಂ|

08015038c ಮಹೇಂದ್ರವಜ್ರಾಭಿಹತಂ ಮಹಾವನಂ

         ಯಥಾದ್ರಿಶೃಂಗಂ ಧರಣೀತಲೇ ತಥಾ||

ಸೂರ್ಯ-ಚಂದ್ರ-ಅಗ್ನಿಗಳ ತೇಜಸ್ಸುಳ್ಳ ಆ ಕಿರೀಟವು ತೋಮರದ ಜೋರಾದ ಹೊಡೆತದಿಂದ ಚೂರು ಚೂರಾಗಿ ಮಹೇಂದ್ರನ ವಜ್ರದ ಆಘಾತಕ್ಕೆ ಒಳಗಾದ ಮಹಾವನ ಸಮೇತ ಪರ್ವತ ಶಿಖರವು ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.

08015039a ತತಃ ಪ್ರಜಜ್ವಾಲ ಪರೇಣ ಮನ್ಯುನಾ

         ಪದಾಹತೋ ನಾಗಪತಿರ್ಯಥಾ ತಥಾ|

08015039c ಸಮಾದಧೇ ಚಾಂತಕದಂಡಸಂನಿಭಾನ್

         ಇಷೂನಮಿತ್ರಾಂತಕರಾಂಶ್ಚತುರ್ದಶ||

ಆಗ ಅಶ್ವತ್ಥಾಮನು ಕಾಲಿನಿಂದ ತುಳಿಯಲ್ಪಟ್ಟ ನಾಗರಾಜನಂತೆ ಅತ್ಯಂತ ಕುಪಿತನಾಗಿ ಪ್ರಜ್ವಲಿಸಿದನು. ಅಂತಕನ ದಂಡಗಳಂತಿದ್ದ ಹದಿನಾಲ್ಕು ಶತ್ರುಗಳ ಅಂತಕ ಬಾಣಗಳನ್ನು ಅವನು ತೆಗೆದುಕೊಂಡನು.

08015040a ದ್ವಿಪಸ್ಯ ಪಾದಾಗ್ರಕರಾನ್ಸ ಪಂಚಭಿರ್

         ನೃಪಸ್ಯ ಬಾಹೂ ಚ ಶಿರೋಽಥ ಚ ತ್ರಿಭಿಃ|

08015040c ಜಘಾನ ಷಡ್ಭಿಃ ಷಡೃತೂತ್ತಮತ್ವಿಷಹ್

         ಸ ಪಾಂಡ್ಯರಾಜಾನುಚರಾನ್ಮಹಾರಥಾನ್||

ಐದು ಬಾಣಗಳಿಂದ ಆ ಆನೆಯ ನಾಲ್ಕು ಕಾಲುಗಳನ್ನೂ ಸೊಂಡಿಲನ್ನೂ ತುಂಡರಿಸಿದನು. ಮೂರರಿಂದ ನೃಪನ ಬಾಹುಗಳನ್ನು ಮತ್ತು ಶಿರಗಳನ್ನು ಕತ್ತರಿಸಿದನು. ಆರರಿಂದ ಪಾಂಡ್ಯರಾಜನ ಅನುಯಾಯೀ ಆರು ಮಹಾರಥರನ್ನೂ ಸಂಹರಿಸಿದನು.

08015041a ಸುದೀರ್ಘವೃತ್ತೌ ವರಚಂದನೋಕ್ಷಿತೌ

         ಸುವರ್ಣಮುಕ್ತಾಮಣಿವಜ್ರಭೂಷಿತೌ|

08015041c ಭುಜೌ ಧರಾಯಾಂ ಪತಿತೌ ನೃಪಸ್ಯ ತೌ

         ವಿವೇಷ್ಟತುಸ್ತಾರ್ಕ್ಷ್ಯಹತಾವಿವೋರಗೌ||

ಸುದೀರ್ಘವೂ, ದುಂಡಾಗಿಯೂ ಇದ್ದ ಶ್ರೇಷ್ಠ ಚಂದನಲೇಪಿತವಾಗಿದ್ದ, ಸುವರ್ಣಮುಕ್ತಾಮಣಿವಜ್ರವಿಭೂಷಿತವಾಗಿದ್ದ ಆ ನೃಪನ ಭುಜಗಳೆರಡೂ ಗರುಡನಿಂದ ಹತಗೊಂಡ ಉರಗಗಳಂತೆ ಧರಣಿಯ ಮೇಲೆ ಬಿದ್ದವು.

08015042a ಶಿರಶ್ಚ ತತ್ಪೂರ್ಣಶಶಿಪ್ರಭಾನನಂ

         ಸರೋಷತಾಮ್ರಾಯತನೇತ್ರಮುನ್ನಸಂ|

08015042c ಕ್ಷಿತೌ ವಿಬಭ್ರಾಜ ಪತತ್ಸಕುಂಡಲಂ

         ವಿಶಾಖಯೋರ್ಮಧ್ಯಗತಃ ಶಶೀ ಯಥಾ||

ಪೂರ್ಣಚಂದ್ರನ ಪ್ರಭೆಯಿದ್ದ, ರೋಷದಿಂದ ಕೆಂಪಾದ ಕಣ್ಣುಗಳಿದ್ದ, ಸುಂದರ ಮೂಗಿದ್ದ ಅವನ ಶಿರಸ್ಸು ಕೂಡ ಕುಂಡಲಗಳೊಂದಿಗೆ ಭೂಮಿಯ ಮೇಲೆ ಬಿದ್ದು ವಿಶಾಖಾನಕ್ಷತ್ರಗಳ ಮಧ್ಯೆಯಿರುವ ಶಶಿಯಂತೆ ಪ್ರಕಾಶಿಸಿತು.

08015043a ಸಮಾಪ್ತವಿದ್ಯಂ ತು ಗುರೋಃ ಸುತಂ ನೃಪಃ

         ಸಮಾಪ್ತಕರ್ಮಾಣಮುಪೇತ್ಯ ತೇ ಸುತಃ|

08015043c ಸುಹೃದ್ವೃತೋಽತ್ಯರ್ಥಮಪೂಜಯನ್ಮುದಾ

         ಜಿತೇ ಬಲೌ ವಿಷ್ಣುಮಿವಾಮರೇಶ್ವರಃ||

ಆಗ ವಿದ್ಯೆಯಿಂದ ಪರಿಪೂರ್ಣನಾಗಿದ್ದ ಮತ್ತು ಮಾಡಬೇಕಾದುದನ್ನು ಮಾಡಿ ಮುಗಿಸಿದ ಗುರುವಿನ ಸುತ ಅಶ್ವತ್ಥಾಮನನ್ನು ಸುಹೃದಯರಿಂದ ಆವೃತನಾಗಿದ್ದ ನೃಪ ದುರ್ಯೋಧನನು ಸಂತೋಷಭರಿತನಾಗಿ ಬಲಿಯನ್ನು ಗೆದ್ದ ವಿಷ್ಣುವನ್ನು ಅಮರೇಶ್ವರನು ಹೇಗೋ ಹಾಗೆ ಪೂಜಿಸಿ ಗೌರವಿಸಿದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಪಾಂಡ್ಯವಧೇ ಪಂಚಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಪಾಂಡ್ಯವಧ ಎನ್ನುವ ಹದಿನೈದನೇ ಅಧ್ಯಾಯವು.

[1] ಗತ್ಯಾ ದಶಮ್ಯಾ ಸಂಯುಕ್ತಾನ್ ಎನ್ನುವುದಕ್ಕೆ ವ್ಯಾಖ್ಯಾನಕಾರರು ಬಾಣದ ಗತಿಗಳಾವುವೆಂಬುದನ್ನು ವಿವರಿಸಿದ್ದಾರೆ: ಉನ್ಮುಖ್ಯಭಿಮುಖೀ ತಿರ್ಯಙ್ಮಂದಾ ಗೋಮೂತ್ರಿಕಾ ಧ್ರುವಾ| ಸ್ಖಲಿತಾ ಯಮಕಾಕ್ರಾಂತಾ ಕೃಷ್ವೇತೀಷುಗತೀರ್ವಿದುಃ|| ಉನ್ಮುಖೀ, ಅಭಿಮುಖೀ, ತಿರ್ಯಕ್, ಮಂದಾ, ಗೋಮೂತ್ರಿಕಾ, ಧ್ರುವಾ, ಸ್ಖಲಿತಾ, ಯಮಕಾಕ್ರಾಂತಾ, ಕ್ರುಷ್ಟಾ ಎಂಬುದಾಗಿ ಒಂಭತ್ತು ವಿಧದ ಬಾಣಗಳ ಗತಿಗಳನ್ನು ಹೇಳುತ್ತಾರೆ. ಇವುಗಳಲ್ಲಿ ಉನ್ಮುಖೀ, ಅಭಿಮುಖೀ ಮತ್ತು ತಿರ್ಯಕ್ ಈ ಮೂರು ಗತಿಗಳು ಅನುಕ್ರಮವಾಗಿ ಶಿರಸ್ಸು, ಹೃದಯ ಮತ್ತು ಪಾರ್ಶ್ವಗಳನ್ನು ಸ್ಪರ್ಷಿಸುತ್ತವೆ. ಮಂದಾಗತಿಯಿಂದ ಬಿಟ್ಟ ಬಾಣವು ಚರ್ಮದ ಮೇಲೆ ಅಲ್ಪ-ಸ್ವಲ್ಪ ಗಾಯಮಾಡುತ್ತದೆ. ಗೋಮೂತ್ರಿಕಾಗತಿಯಿಂದ ಬಿಟ್ಟ ಬಾಣವು ಎಡಕ್ಕೂ ಹೋಗುತ್ತದೆ, ಬಲಕ್ಕೂ ಹೋಗುತ್ತದೆ, ಮತ್ತು ಕವಚವನ್ನೂ ಕತ್ತರಿಸುತ್ತದೆ. ಧ್ರುವಾಗತಿಯಿಂದ ಬಿಟ್ಟ ಬಾಣವು ಲಕ್ಷ್ಯವನ್ನು ತಪ್ಪದೇ ಭೇದಿಸುತ್ತದೆ. ಸ್ಖಲಿತ ಗತಿಯಿಂದ ಬಿಟ್ಟ ಬಾಣವು ಲಕ್ಷ್ಯದ ಮೇಲೆ ಬೀಳದೇ ಬೇರೆಕಡೆ ಬೀಳುತ್ತದೆ. ಈ ಗತಿಯಿಂದ ಯಾರನ್ನೋ ಲಕ್ಷಿಸಿ ಯಾರನ್ನೋ ಪ್ರಹರಿಸಬಹುದು. ಯಮಕಾಕ್ರಾಂತಗತಿಯಿಂದ ಬಿಟ್ಟ ಬಾಣವು ಲಕ್ಷ್ಯವನ್ನು ಹಲವು ಬಾರಿ ಭೇದಿಸಿ ಹೊರಬರುತ್ತದೆ. ಕ್ರುಷ್ಟಾ ಗತಿಯು ಲಕ್ಷ್ಯದ ಒಂದು ಭಾಗವನ್ನು ಕತ್ತರಿಸುತ್ತದೆ. ಹತ್ತನೆಯ ಗತಿಯೆಂದರೆ ಇದೇ ಕ್ರುಷ್ಟಾಗತಿಯಿಂದ ಶತ್ರುವಿನ ಮುಖ್ಯ ಅವಯವವಾದ ಶಿರಸ್ಸನ್ನೇ ಭೇದಿಸಿ ದೂರಕ್ಕೆ ಬೀಳಿಸುವುದು.ಕ್ರುಷ್ಟಾಗತಿಯಿಂದ ಭುಜವೇ ಮೊದಲಾದ ಅವಯವಗಳನ್ನು ಕತ್ತರಿಸಬಹುದು. ಕ್ರುಷ್ಟಾಗತಿಯಿಂದ ಶಿರವನ್ನು ಕತ್ತರಿಸಿದರೆ ಅದು ಹತ್ತನೆಯ ಗತಿಯೆಂದೆನಿಸಿಕೊಳ್ಳುತ್ತದೆ.

Comments are closed.