Karna Parva: Chapter 11

ಕರ್ಣ ಪರ್ವ

೧೧

ಅಶ್ವತ್ಥಾಮ-ಭೀಮಸೇನರ ಯುದ್ಧ

ಅಶ್ವತ್ಥಾಮ-ಭೀಮಸೇನರ ನಡುವೆ ಘೋರ ಯುದ್ಧ (೧-೨೬). ಸಿದ್ಧರಿಂದ ಆ ಯುದ್ಧದ ಪ್ರಶಂಸೆ (೨೭-೩೨). ಪರಸ್ಪರರ ಆಘಾತದಿಂದ ಇಬ್ಬರೂ ತಮ್ಮ ತಮ್ಮ ರಥಗಳಲ್ಲಿ ಕುಸಿದು ಬಿದ್ದುದು (೩೩-೪೧).

08011001 ಸಂಜಯ ಉವಾಚ|

08011001a ಭೀಮಸೇನಂ ತತೋ ದ್ರೌಣೀ ರಾಜನ್ವಿವ್ಯಾಧ ಪತ್ರಿಣಾ|

08011001c ತ್ವರಯಾ ಪರಯಾ ಯುಕ್ತೋ ದರ್ಶಯನ್ನಸ್ತ್ರಲಾಘವಂ||

ಸಂಜಯನು ಹೇಳಿದನು: “ರಾಜನ್! ಆಗ ದ್ರೌಣಿಯು ತ್ವರೆಮಾಡಿ ಪರಮ ಯುಕ್ತಿಯಿಂದ ಅಸ್ತ್ರಲಾಘವವನ್ನು ಪ್ರಧರ್ಶಿಸುತ್ತಾ ಭೀಮಸೇನನನ್ನು ಪತ್ರಿಗಳಿಂದ ಪ್ರಹರಿಸಿದನು.

08011002a ಅಥೈನಂ ಪುನರಾಜಘ್ನೇ ನವತ್ಯಾ ನಿಶಿತೈಃ ಶರೈಃ|

08011002c ಸರ್ವಮರ್ಮಾಣಿ ಸಂಪ್ರೇಕ್ಷ್ಯ ಮರ್ಮಜ್ಞೋ ಲಘುಹಸ್ತವತ್||

ಕೂಡಲೇ ಪುನಃ ತೊಂಭತ್ತು ನಿಶಿತ ಶರಗಳಿಂದ ಆ ಮರ್ಮಘ್ನ ಲಘುಹಸ್ತನು ಭೀಮಸೇನನನ ಸರ್ವಮರ್ಮಗಳಿಗೆ ಗುರಿಯಿಟ್ಟು ಹೊಡೆದನು.

08011003a ಭೀಮಸೇನಃ ಸಮಾಕೀರ್ಣೋ ದ್ರೌಣಿನಾ ನಿಶಿತೈಃ ಶರೈಃ|

08011003c ರರಾಜ ಸಮರೇ ರಾಜನ್ರಶ್ಮಿವಾನಿವ ಭಾಸ್ಕರಃ||

ರಾಜನ್! ದ್ರೌಣಿಯ ನಿಶಿತ ಶರಗಳಿಂದ ಸಮಾಕೀರ್ಣನಾದ ಭೀಮಸೇನನು ಸಮರದಲ್ಲಿ ಕಿರಣಗಳುಳ್ಳ ಭಾಸ್ಕರನಂತೆ ರಾರಾಜಿಸಿದನು.

08011004a ತತಃ ಶರಸಹಸ್ರೇಣ ಸುಪ್ರಯುಕ್ತೇನ ಪಾಂಡವಃ|

08011004c ದ್ರೋಣಪುತ್ರಮವಚ್ಚಾದ್ಯ ಸಿಂಹನಾದಮಮುಂಚತ||

ಆಗ ಚೆನ್ನಾಗಿ ಪ್ರಹರಿಸಿದ ಸಹಸ್ರ ಶರಗಳಿಂದ ಪಾಂಡವನು ದ್ರೋಣಪುತ್ರನನ್ನು ಮುಚ್ಚಿ ಸಿಂಹನಾದಗೈದನು.

08011005a ಶರೈಃ ಶರಾಂಸ್ತತೋ ದ್ರೌಣಿಃ ಸಂವಾರ್ಯ ಯುಧಿ ಪಾಂಡವಂ|

08011005c ಲಲಾಟೇಽಭ್ಯಹನದ್ರಾಜನ್ನಾರಾಚೇನ ಸ್ಮಯನ್ನಿವ||

ರಾಜನ್! ಯುದ್ಧದಲ್ಲಿ ಶರಗಳಿಂದ ಶರಗಳನ್ನು ನಾಶಗೊಳಿಸಿ ದ್ರೌಣಿಯು ನಗುತ್ತಿರುವನೋ ಎನ್ನುವಂತೆ ನಾರಾಚಗಳಿಂದ ಪಾಂಡವನ ಹಣೆಗೆ ಹೊಡೆದನು.

08011006a ಲಲಾಟಸ್ಥಂ ತತೋ ಬಾಣಂ ಧಾರಯಾಮಾಸ ಪಾಂಡವಃ|

08011006c ಯಥಾ ಶೃಂಗಂ ವನೇ ದೃಪ್ತಃ ಖಡ್ಗೋ ಧಾರಯತೇ ನೃಪ||

ನೃಪ! ವನದಲ್ಲಿ ಮದಿಸಿದ ಖಡ್ಗಮೃಗವು ಕೋಡನ್ನು ಹೊತ್ತಿರುವಂತೆ ಆ ಬಾಣವು ಪಾಂಡವನ ಹಣೆಯನ್ನು ಹೊಕ್ಕಿ ನಿಂತಿತು.

08011007a ತತೋ ದ್ರೌಣಿಂ ರಣೇ ಭೀಮೋ ಯತಮಾನಂ ಪರಾಕ್ರಮೀ|

08011007c ತ್ರಿಭಿರ್ವಿವ್ಯಾಧ ನಾರಾಚೈರ್ಲಲಾಟೇ ವಿಸ್ಮಯನ್ನಿವ||

ಆಗ ಪ್ರಯತ್ನಿಸುತ್ತಿದ್ದ ಪರಾಕ್ರಮೀ ಭೀಮನು ರಣದಲ್ಲಿ ನಸುನಗುತ್ತಿರುವವನಂತೆ ದ್ರೌಣಿಯ ಲಲಾಟಕ್ಕೆ ಮೂರು ನಾರಾಚಗಳಿಂದ ಹೊಡೆದನು.

08011008a ಲಲಾಟಸ್ಥೈಸ್ತತೋ ಬಾಣೈರ್ಬ್ರಾಹ್ಮಣಃ ಸ ವ್ಯರೋಚತ|

08011008c ಪ್ರಾವೃಷೀವ ಯಥಾ ಸಿಕ್ತಸ್ತ್ರಿಶೃಂಗಃ ಪರ್ವತೋತ್ತಮಃ||

ಹಣೆಗೆ ಚುಚ್ಚಿಕೊಂಡಿದ್ದ ಬಾಣಗಳಿಂದ ಆ ಬ್ರಾಹ್ಮಣನು ವರ್ಷಾಕಾಲದಲ್ಲಿ ಮಳೆಯಿಂದ ತೋಯ್ದ ಮೂರು ಶಿಖರಗಳುಳ್ಳ ಉತ್ತಮ ಪರ್ವತದಂತೆಯೇ ವಿರಾಜಿಸಿದನು.

08011009a ತತಃ ಶರಶತೈರ್ದ್ರೌಣಿಮರ್ದಯಾಮಾಸ ಪಾಂಡವಃ|

08011009c ನ ಚೈನಂ ಕಂಪಯಾಮಾಸ ಮಾತರಿಶ್ವೇವ ಪರ್ವತಂ||

ಆಗ ನೂರು ಶರಗಳಿಂದ ಪಾಂಡವನು ದ್ರೌಣಿಯನ್ನು ಪೀಡಿಸಿದನು. ಆದರೆ ಭಿರುಗಾಳಿಯು ಪರ್ವತವನ್ನು ಅಳ್ಳಾಡಿಸಲು ಸಾಧ್ಯವಾಗದಂತೆ ಅವನನ್ನು ಕಂಪಿಸಲು ಶಕ್ತನಾಗಲಿಲ್ಲ.

08011010a ತಥೈವ ಪಾಂಡವಂ ಯುದ್ಧೇ ದ್ರೌಣಿಃ ಶರಶತೈಃ ಶಿತೈಃ|

08011010c ನಾಕಂಪಯತ ಸಂಹೃಷ್ಟೋ ವಾರ್ಯೋಘ ಇವ ಪರ್ವತಂ||

ಹಾಗೆಯೇ ಸಂಹೃಷ್ಟ ದ್ರೌಣಿಯು ಯುದ್ಧದಲ್ಲಿ ಪಾಂಡವನನ್ನು ನೂರು ಶರಗಳಿಂದ ಹೊಡೆದರೂ ಮಹಾಜಲಪ್ರವಾಹವು ಪರ್ವತವನ್ನು ಕದಲಿಸಲಾಗದಂತೆ ಅವನನ್ನು ಕದಲಿಸಲಾಗಲಿಲ್ಲ.

08011011a ತಾವನ್ಯೋನ್ಯಂ ಶರೈರ್ಘೋರೈಶ್ಚಾದಯಾನೌ ಮಹಾರಥೌ|

08011011c ರಥಚರ್ಯಾಗತೌ ಶೂರೌ ಶುಶುಭಾತೇ ರಣೋತ್ಕಟೌ||

ರಥದಲ್ಲಿ ಸಂಚರಿಸುತ್ತಿದ್ದ ಅವರಿಬ್ಬರು ಮಹಾರಥ ಶೂರ ರಣೋತ್ಕಟರು ಅನ್ಯೋನ್ಯರನ್ನು ಘೋರ ಶರಸಂಘಗಳಿಂದ ಮುಚ್ಚುತ್ತಾ ಶೋಭಿಸಿದರು.

08011012a ಆದಿತ್ಯಾವಿವ ಸಂದೀಪ್ತೌ ಲೋಕಕ್ಷಯಕರಾವುಭೌ|

08011012c ಸ್ವರಶ್ಮಿಭಿರಿವಾನ್ಯೋನ್ಯಂ ತಾಪಯಂತೌ ಶರೋತ್ತಮೈಃ||

ಆದಿತ್ಯರಂತೆ ಬೆಳಗುತ್ತಿದ್ದ ಆ ಇಬ್ಬರು ಲೋಕಕ್ಷಯಕಾರಕರೂ ತಮ್ಮದೇ ರಶ್ಮಿಗಳಂತಿದ್ದ ಉತ್ತಮ ಶರಗಳಿಂದ ಅನ್ಯೋನ್ಯರನ್ನು ತಾಪಗೊಳಿಸುತ್ತಿದ್ದರು.

08011013a ಕೃತಪ್ರತಿಕೃತೇ ಯತ್ನಂ ಕುರ್ವಾಣೌ ಚ ಮಹಾರಣೇ|

08011013c ಕೃತಪ್ರತಿಕೃತೇ ಯತ್ನಂ ಚಕ್ರಾತೇ ತಾವಭೀತವತ್||

ಮಾಡಿದುದಕ್ಕೆ ಪ್ರತೀಕಾರ ಮಾಡುವುದರಲ್ಲಿ ಪ್ರಯತ್ನಿಸುತ್ತಿದ್ದ ಅವರಿಬ್ಬರೂ ಅಭೀತರಾಗಿ ಮಹಾರಣದಲ್ಲಿ ಪ್ರತೀಕಾರಮಾಡುತ್ತಿದ್ದರು.

08011014a ವ್ಯಾಘ್ರಾವಿವ ಚ ಸಂಗ್ರಾಮೇ ಚೇರತುಸ್ತೌ ಮಹಾರಥೌ|

08011014c ಶರದಂಷ್ಟ್ರೌ ದುರಾಧರ್ಷೌ ಚಾಪವ್ಯಾತ್ತೌ ಭಯಾನಕೌ||

ವ್ಯಾಘ್ರಗಳಂತೆ ಸಂಗ್ರಾಮದಲ್ಲಿ ಸಂಚರಿಸುತ್ತಿದ್ದ ಆ ಇಬ್ಬರು ಮಹಾರಥ ದುರಾಧರ್ಷರು ಶರಗಳೇ ಕೋರೆದಾಡೆಗಳಂತೆಯೂ ಧನುಸ್ಸೇ ಮುಖಗಳಂತಿದ್ದು ಭಯಾನಕರಾಗಿ ಕಾಣುತ್ತಿದ್ದರು.

08011015a ಅಭೂತಾಂ ತಾವದೃಶ್ಯೌ ಚ ಶರಜಾಲೈಃ ಸಮಂತತಃ|

08011015c ಮೇಘಜಾಲೈರಿವ ಚ್ಛನ್ನೌ ಗಗನೇ ಚಂದ್ರಭಾಸ್ಕರೌ||

ಗಗನದಲ್ಲಿ ಮೇಘಜಾಲಗಳಿಂದ ಮುಚ್ಚಿಹೋದ ಚಂದ್ರ-ಭಾಸ್ಕರರಂತೆ ಅವರಿಬ್ಬರೂ ಎಲ್ಲಕಡೆ ಶರಜಾಲಗಳಿಂದ ಮುಚ್ಚಿ ಇತರರಿಗೆ ಅದೃಶ್ಯರಾಗಿದ್ದರು.

08011016a ಪ್ರಕಾಶೌ ಚ ಮುಹೂರ್ತೇನ ತತ್ರೈವಾಸ್ತಾಮರಿಂದಮೌ|

08011016c ವಿಮುಕ್ತೌ ಮೇಘಜಾಲೇನ ಶಶಿಸೂರ್ಯೌ ಯಥಾ ದಿವಿ||

ಕ್ಷಣಮಾತ್ರದಲ್ಲಿ ಆ ಅರಿಂದಮರು ಮೇಘಜಾಲಗಳಿಂದ ವಿಮುಕ್ತರಾಗಿ ದಿವಿಯಲ್ಲಿರುವ ಶಶಿ-ಸೂರ್ಯರಂತೆ ಪುನಃ ಪ್ರಕಾಶಿಸುತ್ತಿದ್ದರು.

08011017a ಅಪಸವ್ಯಂ ತತಶ್ಚಕ್ರೇ ದ್ರೌಣಿಸ್ತತ್ರ ವೃಕೋದರಂ|

08011017c ಕಿರಂ ಶರಶತೈರುಗ್ರೈರ್ಧಾರಾಭಿರಿವ ಪರ್ವತಂ||

ಆಗ ಅಲ್ಲಿ ದ್ರೌಣಿಯು ವೃಕೋದರನನ್ನು ಬಲಭಾಗಕ್ಕೆ ಮಾಡಿಕೊಂಡು ಮಳೆಯ ಧಾರೆಯು ಪರ್ವತವನ್ನು ಹೇಗೋ ಹಾಗೆ ನೂರು ಉಗ್ರ ಬಾಣಗಳಿಂದ ಮುಚ್ಚಿಬಿಟ್ಟನು.

08011018a ನ ತು ತನ್ಮಮೃಷೇ ಭೀಮಃ ಶತ್ರೋರ್ವಿಜಯಲಕ್ಷಣಂ|

08011018c ಪ್ರತಿಚಕ್ರೇ ಚ ತಂ ರಾಜನ್ಪಾಂಡವೋಽಪ್ಯಪಸವ್ಯತಃ||

ಶತ್ರುವಿನ ಆ ವಿಜಯಲಕ್ಷಣವನ್ನು ಭೀಮನು ಸಹಿಸಿಕೊಳ್ಳಲಿಲ್ಲ. ರಾಜನ್! ಪಾಂಡವನೂ ಕೂಡ ತಿರುಗಿ ಅವನನ್ನು ಬಲಭಾಗಕ್ಕೆ ಮಾಡಿಕೊಂಡನು.

08011019a ಮಂಡಲಾನಾಂ ವಿಭಾಗೇಷು ಗತಪ್ರತ್ಯಾಗತೇಷು ಚ|

08011019c ಬಭೂವ ತುಮುಲಂ ಯುದ್ಧಂ ತಯೋಸ್ತತ್ರ ಮಹಾಮೃಧೇ||

ಮಹಾಮೃಧದಲ್ಲಿ ಮಂಡಲಗಳನ್ನು ವಿಭಾಗಿಸಿಕೊಂಡು ಗತ-ಪ್ರತ್ಯಾಗತರಾಗಿ ಅವರಿಬ್ಬರ ನಡುವೆ ತುಮುಲ ಯುದ್ಧವು ನಡೆಯಿತು.

08011020a ಚರಿತ್ವಾ ವಿವಿಧಾನ್ಮಾರ್ಗಾನ್ಮಂಡಲಂ ಸ್ಥಾನಮೇವ ಚ|

08011020c ಶರೈಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಮಭಿಜಘ್ನತುಃ||

ಮಂಡಲ-ಸ್ಥಾನ ಮೊದಲಾದ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಅವರಿಬ್ಬರೂ ಪೂರ್ಣವಾಗಿ ಸೆಳೆದುಬಿಟ್ಟ ಶರಗಳಿಂದ ಅನ್ಯೋನ್ಯರನ್ನು ಪ್ರಹರಿಸಿದರು.

08011021a ಅನ್ಯೋನ್ಯಸ್ಯ ವಧೇ ಯತ್ನಂ ಚಕ್ರತುಸ್ತೌ ಮಹಾರಥೌ|

08011021c ಈಷತುರ್ವಿರಥಂ ಚೈವ ಕರ್ತುಮನ್ಯೋನ್ಯಮಾಹವೇ||

ಆಹವದಲ್ಲಿ ಆ ಇಬ್ಬರು ಮಹಾರಥರೂ ಅನ್ಯೋನ್ಯರನ್ನು ವಧಿಸಲು ಪ್ರಯತ್ನಿಸಿದರು ಮತ್ತು ಅನ್ಯೋನ್ಯರನ್ನು ವಿರಥರನ್ನಾಗಿ ಮಾಡಲು ಪ್ರಯತ್ನಿಸಿದರು.

08011022a ತತೋ ದ್ರೌಣಿರ್ಮಹಾಸ್ತ್ರಾಣಿ ಪ್ರಾದುಶ್ಚಕ್ರೇ ಮಹಾರಥಃ|

08011022c ತಾನ್ಯಸ್ತ್ರೈರೇವ ಸಮರೇ ಪ್ರತಿಜಘ್ನೇಽಸ್ಯ ಪಾಂಡವಃ||

ಆಗ ಸಮರದಲ್ಲಿ ಮಹಾರಥ ದ್ರೌಣಿಯು ಮಹಾಸ್ತ್ರಗಳನ್ನು ಪ್ರಯೋಗಿಸತೊಡಗಿದನು. ಪಾಂಡವನು ಅವುಗಳನ್ನು ಅಸ್ತ್ರಗಳಿಂದಲೇ ನಾಶಗೊಳಿಸಿದನು.

08011023a ತತೋ ಘೋರಂ ಮಹಾರಾಜ ಅಸ್ತ್ರಯುದ್ಧಮವರ್ತತ|

08011023c ಗ್ರಹಯುದ್ಧಂ ಯಥಾ ಘೋರಂ ಪ್ರಜಾಸಂಹರಣೇ ಅಭೂತ್||

ಮಹಾರಾಜ! ಆಗ ಪ್ರಜಾಸಂಹರಣದಲ್ಲಿ ನಡೆಯುವ ಘೋರ ಗ್ರಹಯುದ್ಧದಂತೆ ಘೋರ ಅಸ್ತ್ರಯುದ್ಧವು ನಡೆಯಿತು.

08011024a ತೇ ಬಾಣಾಃ ಸಮಸಜ್ಜಂತ ಕ್ಷಿಪ್ತಾಸ್ತಾಭ್ಯಾಂ ತು ಭಾರತ|

08011024c ದ್ಯೋತಯಂತೋ ದಿಶಃ ಸರ್ವಾಸ್ತಚ್ಚ ಸೈನ್ಯಂ ಸಮಂತತಃ||

ಭಾರತ! ಅವರು ಪ್ರಯೋಗಿಸುತ್ತಿದ್ದ ಬಾಣಗಳು ದಿಕ್ಕುಗಳನ್ನು ಬೆಳಗಿಸುತ್ತಾ ಸೈನ್ಯಗಳ ಸುತ್ತಲೂ ಬೀಳುತ್ತಿದ್ದವು.

08011025a ಬಾಣಸಂಘಾವೃತಂ ಘೋರಮಾಕಾಶಂ ಸಮಪದ್ಯತ|

08011025c ಉಲ್ಕಾಪಾತಕೃತಂ ಯದ್ವತ್ಪ್ರಜಾನಾಂ ಸಂಕ್ಷಯೇ ನೃಪ||

ನೃಪ! ಪ್ರಜಾಸಂಕ್ಷಯದಲ್ಲಿ ಉಲ್ಕಾಪಾತಗಳಾಗುವಂತೆ ಅವರ ಬಾಣಸಂಘಗಳಿಂದ ಆವೃತ ಆಕಾಶವು ಘೋರವಾಗಿ ಕಂಡಿತು.

08011026a ಬಾಣಾಭಿಘಾತಾತ್ಸಂಜಜ್ಞೇ ತತ್ರ ಭಾರತ ಪಾವಕಃ|

08011026c ಸವಿಸ್ಫುಲಿಂಗೋ ದೀಪ್ತಾರ್ಚಿಃ ಸೋಽದಹದ್ವಾಹಿನೀದ್ವಯಂ||

ಭಾರತ! ಅಲ್ಲಿ ಬಾಣಗಳ ಆಘಾತದಿಂದ ಬೆಂಕಿಯು ಹುಟ್ಟಿಕೊಂಡು ಕಿಡಿ-ಜ್ವಾಲೆಗಳಿಂದ ಕೂಡಿದ ಅದು ಎರಡೂ ಸೇನೆಗಳನ್ನು ಸುಡತೊಡಗಿತು.

08011027a ತತ್ರ ಸಿದ್ಧಾ ಮಹಾರಾಜ ಸಂಪತಂತೋಽಬ್ರುವನ್ವಚಃ|

08011027c ಅತಿ ಯುದ್ಧಾನಿ ಸರ್ವಾಣಿ ಯುದ್ಧಂ ಏತತ್ತತೋಽಧಿಕಂ||

ಮಹಾರಾಜ! ಅಲ್ಲಿ ಸಿದ್ಧರು ಈ ಮಾತುಗಳನ್ನು ಆಡತೊಡಗಿದರು: “ಎಲ್ಲ ಯುದ್ಧಗಳಲ್ಲಿ ಈ ಯುದ್ಧವು ಅಧಿಕವಾಗಿದೆ.

08011028a ಸರ್ವಯುದ್ಧಾನಿ ಚೈತಸ್ಯ ಕಲಾಂ ನಾರ್ಹಂತಿ ಷೋಡಶೀಂ|

08011028c ನೈತಾದೃಶಂ ಪುನರ್ಯುದ್ಧಂ ನ ಭೂತಂ ನ ಭವಿಷ್ಯತಿ||

ಎಲ್ಲ ಯುದ್ಧಗಳೂ ಇದರ ಹದಿನಾರನೆಯ ಒಂದು ಭಾಗಕ್ಕೂ ಸಾಟಿಯಾಗಲಾರವು. ಇಂತಹ ಯುದ್ಧವು ಪುನಃ ನಡೆಯಲಾರದು ಮತ್ತು ಈ ಹಿಂದೆ ನಡೆದಿರಲಿಲ್ಲ!

08011029a ಅಹೋ ಜ್ಞಾನೇನ ಸಂಯುಕ್ತಾವುಭೌ ಚೋಗ್ರಪರಾಕ್ರಮೌ|

08011029c ಅಹೋ ಭೀಮೇ ಬಲಂ ಭೀಮಂ ಏತಯೋಶ್ಚ ಕೃತಾಸ್ತ್ರತಾ||

ಆಹಾ! ಇಬ್ಬರು ಉಗ್ರಪರಾಕ್ರಮಿಗಳೂ ಸಂಪೂರ್ಣವಾಗಿ ತಿಳಿದುಕೊಂಡಿದ್ದಾರೆ. ಆಹಾ! ಭೀಮನು ಭಯಂಕರ ಬಲವುಳ್ಳವನು. ಇನ್ನೊಬ್ಬನು ಅಸ್ತ್ರಗಳಲ್ಲಿ ಪಳಗಿದವನು.

08011030a ಅಹೋ ವೀರ್ಯಸ್ಯ ಸಾರತ್ವಮಹೋ ಸೌಷ್ಠವಮೇತಯೋಃ|

08011030c ಸ್ಥಿತಾವೇತೌ ಹಿ ಸಮರೇ ಕಾಲಾಂತಕಯಮೋಪಮೌ||

ಆಹಾ! ಇವರಲ್ಲಿ ವೀರ್ಯದ ಸಾರತ್ವಗಳಿವೆ. ಆಹಾ! ಇಬ್ಬರಲ್ಲೂ ಶರೀರಸೌಷ್ಟವವಿದೆ. ಸಮರದಲ್ಲಿ ಇಬ್ಬರೂ ಕಾಲಾಂತಕಯಮರಂತೆ ನಿಂತಿದ್ದಾರೆ!

08011031a ರುದ್ರೌ ದ್ವಾವಿವ ಸಂಭೂತೌ ಯಥಾ ದ್ವಾವಿವ ಭಾಸ್ಕರೌ|

08011031c ಯಮೌ ವಾ ಪುರುಷವ್ಯಾಘ್ರೌ ಘೋರರೂಪಾವಿಮೌ ರಣೇ||

ರಣದಲ್ಲಿ ಈ ಪುರುಷವ್ಯಾಘ್ರರಿಬ್ಬರೂ ಇಬ್ಬರು ರುದ್ರರಂತೆಯೂ, ಇಬ್ಬರು ಭಾಸ್ಕರರಂತೆಯೂ ಅಥವಾ ಇಬ್ಬರು ಯಮರಂತೆಯೂ ಘೋರರಾಗಿ ಕಾಣುತ್ತಿದ್ದಾರೆ!”

08011032a ಶ್ರೂಯಂತೇ ಸ್ಮ ತದಾ ವಾಚಃ ಸಿದ್ಧಾನಾಂ ವೈ ಮುಹುರ್ಮುಹುಃ|

08011032c ಸಿಂಹನಾದಶ್ಚ ಸಂಜಜ್ಞೇ ಸಮೇತಾನಾಂ ದಿವೌಕಸಾಂ|

08011032e ಅದ್ಭುತಂ ಚಾಪ್ಯಚಿಂತ್ಯಂ ಚ ದೃಷ್ಟ್ವಾ ಕರ್ಮ ತಯೋರ್ಮೃಧೇ||

ಹೀಗೆ ಮಾತನಾಡಿಕೊಳ್ಳುತ್ತಿದ್ದ ಸಿದ್ಧರ ಮಾತುಗಳು ಪುನಃ ಪುನಃ ಕೇಳಿಬರುತ್ತಿತ್ತು. ಯುದ್ಧದಲ್ಲಿ ಅವರಿಬ್ಬರ ಅದ್ಭುತ ಅಚಿಂತ್ಯ ಕರ್ಮಗಳನ್ನು ನೋಡಿ ಸೇರಿದ್ದ ದಿವೌಕಸರ ಸಿಂಹನಾದಗಳೂ ಕೇಳಿಬರುತ್ತಿದ್ದವು.

08011033a ತೌ ಶೂರೌ ಸಮರೇ ರಾಜನ್ಪರಸ್ಪರಕೃತಾಗಸೌ|

08011033c ಪರಸ್ಪರಮುದೈಕ್ಷೇತಾಂ ಕ್ರೋಧಾದುದ್ವೃತ್ಯ ಚಕ್ಷುಷೀ||

ರಾಜನ್! ಸಮರದಲ್ಲಿ ಪರಸ್ಪರಾಪರಾಧಿಗಳಾಗಿದ್ದ ಆ ಇಬ್ಬರು ಶೂರರೂ ಕ್ರೋಧದಿಂದ ಕಣ್ಣುಗಳನ್ನು ಮೇಲೆತ್ತಿ ಪರಸ್ಪರರನ್ನು ದುರುಗುಟ್ಟಿ ನೋಡುತ್ತಿದ್ದರು.

08011034a ಕ್ರೋಧರಕ್ತೇಕ್ಷಣೌ ತೌ ತು ಕ್ರೋಧಾತ್ಪ್ರಸ್ಫುರಿತಾಧರೌ|

08011034c ಕ್ರೋಧಾತ್ಸಂದಷ್ಟದಶನೌ ಸಂದಷ್ಟದಶನಚ್ಚದೌ||

ಕ್ರೋಧದಿಂದ ಕಣ್ಣುಗಳು ಕೆಂಪಾಗಿದ್ದವು ಮತ್ತು ಕ್ರೋಧದಿಂದ ಅವರ ತುಟಿಗಳು ಅದುರುತ್ತಿದ್ದವು. ಕ್ರೋಧದಿಂದ ಕಟಕಟನೆ ಹಲ್ಲುಕಡಿಯುತ್ತಿದ್ದರು ಮತ್ತು ಅವುಡುಗಳನ್ನು ಕಚ್ಚುತ್ತಿದ್ದರು.

08011035a ಅನ್ಯೋನ್ಯಂ ಚಾದಯಂತೌ ಸ್ಮ ಶರವೃಷ್ಟ್ಯಾ ಮಹಾರಥೌ|

08011035c ಶರಾಂಬುಧಾರೌ ಸಮರೇ ಶಸ್ತ್ರವಿದ್ಯುತ್ಪ್ರಕಾಶಿನೌ||

ಇಬ್ಬರು ಮಹಾರಥರೂ ಶರವೃಷ್ಟಿಯಿಂದ ಅನ್ಯೋನ್ಯರನ್ನು ಮುಚ್ಚುತ್ತಿದ್ದರು. ಸಮರದಲ್ಲಿ ಶರಗಳ ಮಳೆಸುರಿಸಿ ಶಸ್ತ್ರಗಳಿಂದ ಮಿಂಚುಗಳನ್ನು ಪ್ರಕಟಿಸುತ್ತಿದ್ದರು.

08011036a ತಾವನ್ಯೋನ್ಯಂ ಧ್ವಜೌ ವಿದ್ಧ್ವಾ ಸಾರಥೀ ಚ ಮಹಾರಥೌ|

08011036c ಅನ್ಯೋನ್ಯಸ್ಯ ಹಯಾನ್ವಿದ್ಧ್ವಾ ಬಿಭಿದಾತೇ ಪರಸ್ಪರಂ||

ಆ ಮಹಾರಥರಿಬ್ಬರೂ ಅನ್ಯೋನ್ಯರ ಧ್ವಜಗಳನ್ನು ಮತ್ತು ಸಾರಥಿಯರನ್ನು ಹೊಡೆದು ಅನ್ಯೋನ್ಯರ ಕುದುರೆಗಳನ್ನು ಹೊಡೆದು ಪರಸ್ಪರರನ್ನು ಪ್ರಹರಿಸಿದರು.

08011037a ತತಃ ಕ್ರುದ್ಧೌ ಮಹಾರಾಜ ಬಾಣೌ ಗೃಹ್ಯ ಮಹಾಹವೇ|

08011037c ಉಭೌ ಚಿಕ್ಷಿಪತುಸ್ತೂರ್ಣಮನ್ಯೋನ್ಯಸ್ಯ ವಧೈಷಿಣೌ||

ಮಹಾರಾಜ! ಆಗ ಕ್ರುದ್ಧರಾದ ಮತ್ತು ಅನ್ಯೋನ್ಯರನ್ನು ವಧಿಸಲಿಚ್ಛಿಸುತ್ತಿದ್ದ ಅವರಿಬ್ಬರೂ ಮಹಾಹವದಲ್ಲಿ ಬಾಣಗಳನ್ನು ಹಿಡಿದು ಕೂಡಲೇ ಅನ್ಯೋನ್ಯರಮೇಲೆ ಎಸೆದರು.

08011038a ತೌ ಸಾಯಕೌ ಮಹಾರಾಜ ದ್ಯೋತಮಾನೌ ಚಮೂಮುಖೇ|

08011038c ಆಜಘ್ನಾತೇ ಸಮಾಸಾದ್ಯ ವಜ್ರವೇಗೌ ದುರಾಸದೌ||

ಮಹಾರಾಜ! ವಜ್ರವೇಗದ ದುರಾಸದ ಆ ಎರಡು ಸಾಯಕಗಳೂ ಉರಿಯುತ್ತಾ ಅವರಿಬ್ಬರನ್ನೂ ಪ್ರಹರಿಸಿತು.

08011039a ತೌ ಪರಸ್ಪರವೇಗಾಚ್ಚ ಶರಾಭ್ಯಾಂ ಚ ಭೃಶಾಹತೌ|

08011039c ನಿಪೇತತುರ್ಮಹಾವೀರೌ ಸ್ವರಥೋಪಸ್ಥಯೋಸ್ತದಾ||

ಪರಸ್ಪರರ ಆ ಶರಗಳ ವೇಗದಿಂದ ತುಂಬಾ ಗಾಯಗೊಂಡ ಇಬ್ಬರು ಮಹಾವೀರರೂ ತಮ್ಮ ರಥಗಳಲ್ಲಿಯೇ ಕುಸಿದು ಬಿದ್ದರು.

08011040a ತತಸ್ತು ಸಾರಥಿರ್ಜ್ಞಾತ್ವಾ ದ್ರೋಣಪುತ್ರಮಚೇತನಂ|

08011040c ಅಪೋವಾಹ ರಣಾದ್ರಾಜನ್ಸರ್ವಕ್ಷತ್ರಸ್ಯ ಪಶ್ಯತಃ||

ರಾಜನ್! ದ್ರೋಣಪುತ್ರನು ಅಚೇತನನಾದುದನ್ನು ತಿಳಿದ ಅವನ ಸಾರಥಿಯು ಅವನನ್ನು ಸರ್ವಕ್ಷತ್ರಿಯರೂ ನೋಡುತ್ತಿದ್ದಂತೆ ರಣದಿಂದ ಆಚೆ ಕೊಂಡೊಯ್ದನು.

08011041a ತಥೈವ ಪಾಂಡವಂ ರಾಜನ್ವಿಹ್ವಲಂತಂ ಮುಹುರ್ಮುಹುಃ|

08011041c ಅಪೋವಾಹ ರಥೇನಾಜೌ ಸಾರಥಿಃ ಶತ್ರುತಾಪನಂ||

ಹಾಗೆಯೇ ಪುನಃ ಪುನಃ ವಿಹ್ವಲಿಸುತ್ತಿದ್ದ ಶತ್ರುತಾಪನ ಪಾಂಡವನನ್ನು ಕೂಡ ಅವನ ಸಾರಥಿಯು ರಥದಿಂದ ಆಚೆ ಕೊಂಡೊಯ್ದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಅಶ್ವತ್ಥಾಮಭೀಮಸೇನಯೋರ್ಯುದ್ಧೇ ಏಕಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅಶ್ವತ್ಥಾಮಭೀಮಸೇನಯೋರ್ಯುದ್ಧ ಎನ್ನುವ ಹನ್ನೊಂದನೇ ಅಧ್ಯಾಯವು.

Comments are closed.