ಕರ್ಣ ಪರ್ವ
೯
ವಿಂದಾನುವಿಂದರ ವಧೆ
ದ್ವಂದ್ವ ಯುದ್ಧಗಳ ವರ್ಣನೆ (೧-೧೦). ಸಾತ್ಯಕಿ ಮತ್ತು ಕೇಕಯ ರಾಜಕುಮಾರರಾದ ವಿಂದಾನುವಿಂದರ ನಡುವೆ ಯುದ್ಧ; ಸಾತ್ಯಕಿಯಿಂದ ವಿಂದಾನುವಿಂದರ ವಧೆ (೧೧-೩೫).
08009001 ಸಂಜಯ ಉವಾಚ|
08009001a ತತಃ ಕರ್ಣೋ ಮಹೇಷ್ವಾಸಃ ಪಾಂಡವಾನಾಮನೀಕಿನೀಂ|
08009001c ಜಘಾನ ಸಮರೇ ಶೂರಃ ಶರೈಃ ಸನ್ನತಪರ್ವಭಿಃ||
ಸಂಜಯನು ಹೇಳಿದನು: “ಅನಂತರ ಶೂರ ಮಹೇಷ್ವಾಸ ಕರ್ಣನು ಸನ್ನತಪರ್ವ ಶರಗಳಿಂದ ಸಮರದಲ್ಲಿ ಪಾಂಡವರ ಸೇನೆಯನ್ನು ಸಂಹರಿಸಿದನು.
08009002a ತಥೈವ ಪಾಂಡವಾ ರಾಜಂಸ್ತವ ಪುತ್ರಸ್ಯ ವಾಹಿನೀಂ|
08009002c ಕರ್ಣಸ್ಯ ಪ್ರಮುಖೇ ಕ್ರುದ್ಧಾ ವಿನಿಜಘ್ನುರ್ಮಹಾರಥಾಃ||
ರಾಜನ್! ಹಾಗೆಯೇ ಮಹಾರಥ ಪಾಂಡವರು ಕೂಡ ಕ್ರುದ್ಧರಾಗಿ ಕರ್ಣನ ಎದಿರೇ ನಿನ್ನ ಮಗನ ಸೇನೆಯನ್ನು ಸಂಹರಿಸಿದರು.
08009003a ಕರ್ಣೋ ರಾಜನ್ಮಹಾಬಾಹುರ್ನ್ಯವಧೀತ್ಪಾಂಡವೀಂ ಚಮೂಂ|
08009003c ನಾರಾಚೈರರ್ಕರಶ್ಮ್ಯಾಭೈಃ ಕರ್ಮಾರಪರಿಮಾರ್ಜಿತೈಃ||
ರಾಜನ್! ಮಹಾಬಾಹು ಕರ್ಣನು ಸೂರ್ಯನ ರಶ್ಮಿಗಳಂತೆ ತೀಕ್ಷ್ಣವಾಗಿದ್ದ, ಕಮ್ಮಾರನಲ್ಲಿ ತಯಾರಿಸಿದ್ದ ನಾರಾಚಗಳಿಂದ ಪಾಂಡವೀ ಸೇನೆಯನ್ನು ಹೊಡೆದನು.
08009004a ತತ್ರ ಭಾರತ ಕರ್ಣೇನ ನಾರಾಚೈಸ್ತಾಡಿತಾ ಗಜಾಃ|
08009004c ನೇದುಃ ಸೇದುಶ್ಚ ಮಂಲುಶ್ಚ ಬಭ್ರಮುಶ್ಚ ದಿಶೋ ದಶ||
ಭಾರತ! ಅಲ್ಲಿ ಕರ್ಣನ ನಾರಾಚಗಳಿಂದ ಹೊಡೆಯಲ್ಪಟ್ಟ ಆನೆಗಳು ಅರಚುತ್ತಿದ್ದವು, ನಿಟ್ಟುಸಿರು ಬಿಡುತ್ತಿದ್ದವು, ನರಳುತ್ತಿದ್ದವು ಮತ್ತು ಹತ್ತೂ ದಿಕ್ಕುಗಳಲ್ಲಿ ಓಡಿ ಹೋಗುತ್ತಿದ್ದವು.
08009005a ವಧ್ಯಮಾನೇ ಬಲೇ ತಸ್ಮಿನ್ಸೂತಪುತ್ರೇಣ ಮಾರಿಷ|
08009005c ನಕುಲೋಽಭ್ಯದ್ರವತ್ತೂರ್ಣಂ ಸೂತಪುತ್ರಂ ಮಹಾರಣೇ||
ಮಾರಿಷ! ಸೂತಪುತ್ರನು ಆ ಸೇನೆಯನ್ನು ಹಾಗೆ ವಧಿಸುತ್ತಿರಲು ಮಹಾರಣದಲ್ಲಿ ನಕುಲನು ಕೂಡಲೇ ಸೂತಪುತ್ರನನ್ನು ಆಕ್ರಮಣಿಸಿದನು.
08009006a ಭೀಮಸೇನಸ್ತಥಾ ದ್ರೌಣಿಂ ಕುರ್ವಾಣಂ ಕರ್ಮ ದುಷ್ಕರಂ|
08009006c ವಿಂದಾನುವಿಂದೌ ಕೈಕೇಯೌ ಸಾತ್ಯಕಿಃ ಸಮವಾರಯತ್||
ಹಾಗೆಯೇ ಭೀಮಸೇನನು ದುಷ್ಕರ ಕರ್ಮಗಳನ್ನೆಸಗುತ್ತಿದ್ದ ದ್ರೌಣಿಯನ್ನು ಮತ್ತು ಸಾತ್ಯಕಿಯು ಕೇಕಯ ವಿಂದಾನುವಿಂದರನ್ನು ಎದುರಿಸಿದರು.
08009007a ಶ್ರುತಕರ್ಮಾಣಮಾಯಾಂತಂ ಚಿತ್ರಸೇನೋ ಮಹೀಪತಿಃ|
08009007c ಪ್ರತಿವಿಂದ್ಯಂ ತಥಾ ಚಿತ್ರಶ್ಚಿತ್ರಕೇತನಕಾರ್ಮುಕಃ||
08009008a ದುರ್ಯೋಧನಸ್ತು ರಾಜಾನಂ ಧರ್ಮಪುತ್ರಂ ಯುಧಿಷ್ಠಿರಂ|
08009008c ಸಂಶಪ್ತಕಗಣಾನ್ಕ್ರುದ್ಧೋ ಅಭ್ಯಧಾವದ್ಧನಂಜಯಃ||
ಮುಂದುವರೆದು ಬರುತ್ತಿದ್ದ ಶ್ರುತಕರ್ಮನನ್ನು ಮಹೀಪತಿ ಚಿತ್ರಸೇನ, ವಿಚಿತ್ರ ಕೇತನ ಮತ್ತು ಧನುಸ್ಸುಗಳುಳ್ಳ ಚಿತ್ರನು ಪ್ರತಿವಿಂದ್ಯನನ್ನು, ದುರ್ಯೋಧನನು ಧರ್ಮಪುತ್ರ ರಾಜಾ ಯುಧಿಷ್ಠಿರನನ್ನು, ಮತ್ತು ಕ್ರುದ್ಧ ಧನಂಜಯನು ಸಂಶಪ್ತಕಗಣಗಳನ್ನು ಎದುರಿಸಿ ಯುದ್ಧಮಾಡಿದರು.
08009009a ಧೃಷ್ಟದ್ಯುಮ್ನಃ ಕೃಪಂ ಚಾಥ ತಸ್ಮಿನ್ವೀರವರಕ್ಷಯೇ|
08009009c ಶಿಖಂಡೀ ಕೃತವರ್ಮಾಣಂ ಸಮಾಸಾದಯದಚ್ಯುತಂ||
ಆ ವೀರವರಕ್ಷಯ ಯುದ್ಧದಲ್ಲಿ ಧೃಷ್ಟದ್ಯುಮ್ನನು ಕೃಪನನ್ನು ಮತ್ತು ಅಚ್ಯುತ ಕೃತವರ್ಮನನ್ನು ಶಿಖಂಡಿಯು ಎದುರಿಸಿದರು.
08009010a ಶ್ರುತಕೀರ್ತಿಸ್ತಥಾ ಶಲ್ಯಂ ಮಾದ್ರೀಪುತ್ರಃ ಸುತಂ ತವ|
08009010c ದುಃಶಾಸನಂ ಮಹಾರಾಜ ಸಹದೇವಃ ಪ್ರತಾಪವಾನ್||
ಮಹಾರಾಜ! ಹಾಗೆಯೇ ಶ್ರುತಕೀರ್ತಿಯು ಶಲ್ಯನನ್ನು, ಮತ್ತು ಪ್ರತಾಪವಾನ್ ಮಾದ್ರೀಪುತ್ರ ಸಹದೇವನು ನಿನ್ನ ಮಗ ದುಃಶಾಸನನನ್ನು ಎದುರಿಸಿ ಯುದ್ಧಮಾಡಿದರು.
08009011a ಕೇಕಯೌ ಸಾತ್ಯಕಿಂ ಯುದ್ಧೇ ಶರವರ್ಷೇಣ ಭಾಸ್ವತಾ|
08009011c ಸಾತ್ಯಕಿಃ ಕೇಕಯೌ ಚೈವ ಚಾದಯಾಮಾಸ ಭಾರತ||
ಭಾರತ! ಕೇಕಯರಿಬ್ಬರೂ ಯುದ್ಧದಲ್ಲಿ ಕಾಂತಿಯುಳ್ಳ ಶರವರ್ಷಗಳಿಂದ ಸಾತ್ಯಕಿಯನ್ನೂ ಸಾತ್ಯಕಿಯು ಕೇಕಯರನ್ನೂ ಮುಚ್ಚಿಬಿಟ್ಟರು.
08009012a ತಾವೇನಂ ಭ್ರಾತರೌ ವೀರಂ ಜಘ್ನತುರ್ಹೃದಯೇ ಭೃಶಂ|
08009012c ವಿಷಾಣಾಭ್ಯಾಂ ಯಥಾ ನಾಗೌ ಪ್ರತಿನಾಗಂ ಮಹಾಹವೇ||
ಮಹಾಹವದಲ್ಲಿ ಎರಡು ಆನೆಗಳು ಎದುರಾಳೀ ಆನೆಯನ್ನು ತಮ್ಮ ದಂತಗಳಿಂದ ಇರಿಯುವಂತೆ ಆ ಇಬ್ಬರು ಸಹೋದರರೂ ವೀರ ಸಾತ್ಯಕಿಯ ಹೃದಯಕ್ಕೆ ಅತ್ಯಂತ ಗಾಢವಾಗಿ ಪ್ರಹರಿಸಿದರು.
08009013a ಶರಸಂಭಿನ್ನವರ್ಮಾಣೌ ತಾವುಭೌ ಭ್ರಾತರೌ ರಣೇ|
08009013c ಸಾತ್ಯಕಿಂ ಸತ್ಯಕರ್ಮಾಣಂ ರಾಜನ್ವಿವ್ಯಧತುಃ ಶರೈಃ||
ರಾಜನ್! ಶರಗಳಿಂದ ಅವರ ಕವಚಗಳು ಸೀಳಿಹೋಗಲು ಆ ಇಬ್ಬರು ಸಹೋದರರೂ ರಣದಲ್ಲಿ ಸತ್ಯಕರ್ಮಿ ಸಾತ್ಯಕಿಯನ್ನು ಶರಗಳಿಂದ ಪ್ರಹರಿಸಿದರು.
08009014a ತೌ ಸಾತ್ಯಕಿರ್ಮಹಾರಾಜ ಪ್ರಹಸನ್ಸರ್ವತೋದಿಶಂ|
08009014c ಚಾದಯಂ ಶರವರ್ಷೇಣ ವಾರಯಾಮಾಸ ಭಾರತ||
ಮಹಾರಾಜ! ಭಾರತ! ಸಾತ್ಯಕಿಯಾದರೋ ಜೋರಾಗಿ ನಗುತ್ತಾ ಸರ್ವದಿಕ್ಕುಗಳನ್ನೂ ಶರವರ್ಷಗಳಿಂದ ಮುಸುಕಿ ಅವರಿಬ್ಬರನ್ನೂ ತಡೆದನು.
08009015a ವಾರ್ಯಮಾಣೌ ತತಸ್ತೌ ತು ಶೈನೇಯಶರವೃಷ್ಟಿಭಿಃ|
08009015c ಶೈನೇಯಸ್ಯ ರಥಂ ತೂರ್ಣಂ ಚಾದಯಾಮಾಸತುಃ ಶರೈಃ||
ಶೈನೇಯನ ಶರವೃಷ್ಟಿಗಳಿಂದ ತಡೆಯಲ್ಪಟ್ಟ ಅವರಿಬ್ಬರೂ ಕೂಡಲೇ ಶೈನೇಯನ ರಥವನ್ನು ಶರಗಳಿಂದ ಮುಚ್ಚಿಬಿಟ್ಟರು.
08009016a ತಯೋಸ್ತು ಧನುಷೀ ಚಿತ್ರೇ ಚಿತ್ತ್ವಾ ಶೌರಿರ್ಮಹಾಹವೇ|
08009016c ಅಥ ತೌ ಸಾಯಕೈಸ್ತೀಕ್ಷ್ಣೈಶ್ಚಾದಯಾಮಾಸ ದುಃಸಹೈಃ||
ಮಹಾಹವದಲ್ಲಿ ಶೌರಿಯು ಅವರಿಬ್ಬರ ಚಿತ್ರಿತ ಧನುಸ್ಸುಗಳನ್ನು ಕತ್ತರಿಸಿ ತೀಕ್ಷ್ಣ ದುಃಸಹ ಸಾಯಕಗಳಿಂದ ಅವರಿಬ್ಬರನ್ನೂ ಮುಚ್ಚಿಬಿಟ್ಟನು.
08009017a ಅಥಾನ್ಯೇ ಧನುಷೀ ಮೃಷ್ಟೇ ಪ್ರಗೃಹ್ಯ ಚ ಮಹಾಶರಾನ್|
08009017c ಸಾತ್ಯಕಿಂ ಪೂರಯಂತೌ ತೌ ಚೇರತುರ್ಲಘು ಸುಷ್ಠು ಚ||
ಅವರು ಬೇರೆಯೇ ಧನುಸ್ಸುಗಳನ್ನು ಹಿಡಿದು ಮಹಾಶರಗಳಿಂದ ಸಾತ್ಯಕಿಯನ್ನು ಅಚ್ಛಾದಿಸುತ್ತಾ ರಣರಂಗದ ಸುತ್ತ ಶೀಘ್ರವಾಗಿ ಸುಂದರವಾಗಿ ಸಂಚರಿಸುತ್ತಿದ್ದರು.
08009018a ತಾಭ್ಯಾಂ ಮುಕ್ತಾ ಮಹಾಬಾಣಾಃ ಕಂಕಬರ್ಹಿಣವಾಸಸಃ|
08009018c ದ್ಯೋತಯಂತೋ ದಿಶಃ ಸರ್ವಾಃ ಸಂಪೇತುಃ ಸ್ವರ್ಣಭೂಷಣಾಃ||
ಅವರಿಂದ ಪ್ರಯೋಗಿಸಲ್ಪಟ್ಟ ರಣಹದ್ದಿನ ಮತ್ತು ನವಿಲಿನ ಗರಿಗಳಿಂದ ಶೋಭಿತ ಸ್ವರ್ಣಭೂಷಣ ಮಹಾಬಾಣಗಳು ಎಲ್ಲದಿಕ್ಕುಗಳನ್ನೂ ಪ್ರಕಾಶಿಸುತ್ತಾ ಬೀಳುತ್ತಿದ್ದವು.
08009019a ಬಾಣಾಂದಕಾರಮಭವತ್ತಯೋ ರಾಜನ್ಮಹಾಹವೇ|
08009019c ಅನ್ಯೋನ್ಯಸ್ಯ ಧನುಶ್ಚೈವ ಚಿಚ್ಚಿದುಸ್ತೇ ಮಹಾರಥಾಃ||
ರಾಜನ್! ಆ ಮಹಾಯುದ್ಧದಲ್ಲಿ ಬಾಣಗಳಿಂದ ಅಂಧಕಾರವು ಕವಿಯಲು ಆ ಮಹಾರಥರು ಅನ್ಯೋನ್ಯರ ಧನುಸ್ಸುಗಳನ್ನು ಕತ್ತರಿಸಿದರು.
08009020a ತತಃ ಕ್ರುದ್ಧೋ ಮಹಾರಾಜ ಸಾತ್ವತೋ ಯುದ್ಧದುರ್ಮದಃ|
08009020c ಧನುರನ್ಯತ್ಸಮಾದಾಯ ಸಜ್ಯಂ ಕೃತ್ವಾ ಚ ಸಂಯುಗೇ|
08009020e ಕ್ಷುರಪ್ರೇಣ ಸುತೀಕ್ಷ್ಣೇನ ಅನುವಿಂದಶಿರೋಽಹರತ್||
ಮಹಾರಾಜ! ಆಗ ಕ್ರುದ್ಧನಾದ ಯುದ್ಧದುರ್ಮದ ಸಾತ್ವತನು ಅನ್ಯ ಧನುಸ್ಸನ್ನು ಎತ್ತಿಕೊಂಡು ಸಜ್ಜುಗೊಳಿಸಿ ಯುದ್ಧದಲ್ಲಿ ತೀಕ್ಷ್ಣ ಕ್ಷುರಪ್ರದಿಂದ ಅನುವಿಂದನ ಶಿರವನ್ನು ಅಪಹರಿಸಿದನು.
08009021a ತಚ್ಚಿರೋ ನ್ಯಪತದ್ಭೂಮೌ ಕುಂಡಲೋತ್ಪೀಡಿತಂ ಮಹತ್|
08009021c ಶಂಬರಸ್ಯ ಶಿರೋ ಯದ್ವನ್ನಿಹತಸ್ಯ ಮಹಾರಣೇ|
08009021e ಶೋಷಯನ್ಕೇಕಯಾನ್ಸರ್ವಾಂ ಜಗಾಮಾಶು ವಸುಂಧರಾಂ||
ಅತ್ಯಂತ ಪೀಡಿತಗೊಂಡ ಕುಂಡಲಯುಕ್ತ ಆ ಶಿರವು ನಿಹಿತ ಶಂಬರನ ಶಿರದಂತೆ ಮಹಾರಣದಲ್ಲಿ ನೆಲದಮೇಲೆ ಬಿದ್ದು ಕೇಕಯರೆಲ್ಲರನ್ನೂ ಶೋಕಿಸಿತು. ಆ ಬಾಣವು ಭೂಮಿಯನ್ನು ಹೊಕ್ಕಿತು.
08009022a ತಂ ದೃಷ್ಟ್ವಾ ನಿಹತಂ ಶೂರಂ ಭ್ರಾತಾ ತಸ್ಯ ಮಹಾರಥಃ|
08009022c ಸಜ್ಯಂ ಅನ್ಯದ್ಧನುಃ ಕೃತ್ವಾ ಶೈನೇಯಂ ಪ್ರತ್ಯವಾರಯತ್||
ಶೂರ ಸಹೋದರನು ಹತನಾದುದನ್ನು ನೋಡಿ ಮಹಾರಥ ವಿಂದನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಶೈನೇಯನನ್ನು ಪ್ರತಿಯಾಗಿ ಹೊಡೆದನು.
08009023a ಸ ಶಕ್ತ್ಯಾ ಸಾತ್ಯಕಿಂ ವಿದ್ಧ್ವಾ ಸ್ವರ್ಣಪುಂಖೈಃ ಶಿಲಾಶಿತೈಃ|
08009023c ನನಾದ ಬಲವನ್ನಾದಂ ತಿಷ್ಠ ತಿಷ್ಠೇತಿ ಚಾಬ್ರವೀತ್||
ಸ್ವರ್ಣಪುಂಖಗಳ ಶಿಲಾಶಿತ ಶಕ್ತಿಯಿಂದ ಸಾತ್ಯಕಿಯನ್ನು ಹೊಡೆದು ಅವನು ಜೋರಾಗಿ ಗರ್ಜಿಸಿ ನಿಲ್ಲು ನಿಲ್ಲೆಂದು ಹೇಳಿದನು.
08009024a ಸ ಸಾತ್ಯಕಿಂ ಪುನಃ ಕ್ರುದ್ಧಃ ಕೇಕಯಾನಾಂ ಮಹಾರಥಃ|
08009024c ಶರೈರಗ್ನಿಶಿಖಾಕಾರೈರ್ಬಾಹ್ವೋರುರಸಿ ಚಾರ್ದಯತ್||
ಆ ಕ್ರುದ್ಧ ಕೇಕಯ ಮಹಾರಥನು ಪುನಃ ಸಾತ್ಯಕಿಯನ್ನು ಅಗ್ನಿಶಿಖೆಗಳ ಆಕಾರದ ಬಾಣಗಳಿಂದ ಅವನ ಎದೆಗೆ ಗುರಿಯಿಟ್ಟು ಹೊಡೆದನು.
08009025a ಸ ಶರೈಃ ಕ್ಷತಸರ್ವಾಂಗಃ ಸಾತ್ವತಃ ಸತ್ತ್ವಕೋವಿದಃ|
08009025c ರರಾಜ ಸಮರೇ ರಾಜನ್ಸಪತ್ರ ಇವ ಕಿಂಶುಕಃ||
ರಾಜನ್! ಶರಗಳಿಂದ ಸರ್ವಾಂಗಗಳಲ್ಲಿ ಗಾಯಗೊಂಡ ಸತ್ತ್ವಕೋವಿದ ಸಾತ್ವತನು ಸಮರದಲ್ಲಿ ಹೂಬಿಟ್ಟ[1] ಕಿಂಶುಕವೃಕ್ಷದಂತೆ ರಾರಾಜಿಸಿದನು.
08009026a ಸಾತ್ಯಕಿಃ ಸಮರೇ ವಿದ್ಧಃ ಕೇಕಯೇನ ಮಹಾತ್ಮನಾ|
08009026c ಕೇಕಯಂ ಪಂಚವಿಂಶತ್ಯಾ ವಿವ್ಯಾಧ ಪ್ರಹಸನ್ನಿವ||
ಸಮರದಲ್ಲಿ ಕೇಕಯ ಮಹಾತ್ಮನಿಂದ ಪ್ರಹರಿಸಲ್ಪಟ್ಟ ಸಾತ್ಯಕಿಯು ಕೇಕಯನನ್ನು ನಸುನಗುತ್ತಾ ಇಪ್ಪತ್ತೈದು ಶರಗಳಿಂದ ಹೊಡೆದನು.
08009027a ಶತಚಂದ್ರಚಿತೇ ಗೃಹ್ಯ ಚರ್ಮಣೀ ಸುಭುಜೌ ತು ತೌ|
08009027c ವ್ಯರೋಚೇತಾಂ ಮಹಾರಂಗೇ ನಿಸ್ತ್ರಿಂಶವರಧಾರಿಣೌ|
08009027e ಯಥಾ ದೇವಾಸುರೇ ಯುದ್ಧೇ ಜಂಭಶಕ್ರೌ ಮಹಾಬಲೌ||
ಉತ್ತಮ ಭುಜಗಳುಳ್ಳ ಅವರಿಬ್ಬರೂ ಶತಚಂದ್ರಚಿತ್ರಿತ ಗುರಾಣಿಗಳನ್ನು ಹಿಡಿದು ಖಡ್ಗಯುದ್ಧಕ್ಕೆ ಅಣಿಯಾಗಿ ಮಹಾರಣದಲ್ಲಿ ದೇವಾಸುರಯುದ್ಧದಲ್ಲಿ ಮಹಾಬಲ ಜಂಭಾಸುರ-ಶಕ್ರರಂತೆ ವಿರಾಜಿಸಿದರು.
08009028a ಮಂಡಲಾನಿ ತತಸ್ತೌ ಚ ವಿಚರಂತೌ ಮಹಾರಣೇ|
08009028c ಅನ್ಯೋನ್ಯಮಸಿಭಿಸ್ತೂರ್ಣಂ ಸಮಾಜಘ್ನತುರಾಹವೇ||
ಮಹಾರಣದಲ್ಲಿ ಅವರಿಬ್ಬರೂ ಮಂಡಲಾಕಾರಗಳಲ್ಲಿ ತಿರುಗುತ್ತಿದ್ದು ಅನ್ಯೋನ್ಯರನ್ನು ಕೂಡಲೇ ಖಡ್ಗದಿಂದ ಸಂಹರಿಸಲು ಪ್ರಯತ್ನಿಸಿದರು.
08009029a ಕೇಕಯಸ್ಯ ತತಶ್ಚರ್ಮ ದ್ವಿಧಾ ಚಿಚ್ಚೇದ ಸಾತ್ವತಃ|
08009029c ಸಾತ್ಯಕೇಶ್ಚ ತಥೈವಾಸೌ ಚರ್ಮ ಚಿಚ್ಚೇದ ಪಾರ್ಥಿವಃ||
ಆಗ ಸಾತ್ವತನು ಕೇಕಯನ ಗುರಾಣಿಯನ್ನು ಎರಡಾಗಿ ಕತ್ತರಿಸಿದನು. ಪಾರ್ಥಿವನೂ ಕೂಡ ಸಾತ್ಯಕಿಯ ಗುರಾಣಿಯನ್ನು ಕತ್ತರಿಸಿದನು.
08009030a ಚರ್ಮ ಚ್ಚಿತ್ತ್ವಾ ತು ಕೈಕೇಯಸ್ತಾರಾಗಣಶತೈರ್ವೃತಂ|
08009030c ಚಚಾರ ಮಂಡಲಾನ್ಯೇವ ಗತಪ್ರತ್ಯಾಗತಾನಿ ಚ||
ನೂರಾರು ತಾರಾಗಣಗಳಿಂದ ಆವೃತಗೊಂಡಿದ್ದ ಆ ಗುರಾಣಿಯನ್ನು ತುಂಡರಿಸಿ ಕೇಕಯನು ಗತ-ಪ್ರತ್ಯಾಗತವೇ ಮೊದಲಾದ ಮಂಡಲಗಳಲ್ಲಿ ಸಂಚರಿಸತೊಡಗಿದನು.
08009031a ತಂ ಚರಂತಂ ಮಹಾರಂಗೇ ನಿಸ್ತ್ರಿಂಶವರಧಾರಿಣಂ|
08009031c ಅಪಹಸ್ತೇನ ಚಿಚ್ಚೇದ ಶೈನೇಯಸ್ತ್ವರಯಾನ್ವಿತಃ||
ಮಹಾರಣದಲ್ಲಿ ಶ್ರೇಷ್ಠಖಡ್ಗವನ್ನು ಧರಿಸಿ ಸಂಚರಿಸುತ್ತಿದ್ದ ಅವನನ್ನು ಶೈನೇಯನು ತ್ವರೆಮಾಡಿ ಬಲಗೈಯಿಂದ ತುಂಡರಿಸಿದನು.
08009032a ಸವರ್ಮಾ ಕೇಕಯೋ ರಾಜನ್ದ್ವಿಧಾ ಚಿನ್ನೋ ಮಹಾಹವೇ|
08009032c ನಿಪಪಾತ ಮಹೇಷ್ವಾಸೋ ವಜ್ರನುನ್ನ ಇವಾಚಲಃ||
ರಾಜನ್! ಮಹಾಹವದಲ್ಲಿ ಕವಚದೊಂದಿಗೆ ಎರಡಾಗಿ ತುಂಡರಿಸಲ್ಪಟ್ಟ ಮಹೇಷ್ವಾಸ ಕೇಕಯನು ವಜ್ರದಿಂದ ಪುಡಿಮಾಡಲ್ವಟ್ಟ ಪರ್ವತದಂತೆ ಬಿದ್ದನು.
08009033a ತಂ ನಿಹತ್ಯ ರಣೇ ಶೂರಃ ಶೈನೇಯೋ ರಥಸತ್ತಮಃ|
08009033c ಯುಧಾಮನ್ಯೋ ರಥಂ ತೂರ್ಣಮಾರುರೋಹ ಪರಂತಪಃ||
ಅವನನ್ನು ರಣದಲ್ಲಿ ಸಂಹರಿಸಿ ರಥಸತ್ತಮ ಶೂರ ಶೈನೇಯ ಪರಂತಪ ಯುಧಾಮನ್ಯುವು ಬೇಗನೇ ರಥವನ್ನೇರಿದನು.
08009034a ತತೋಽನ್ಯಂ ರಥಮಾಸ್ಥಾಯ ವಿಧಿವತ್ಕಲ್ಪಿತಂ ಪುನಃ|
08009034c ಕೇಕಯಾನಾಂ ಮಹತ್ಸೈನ್ಯಂ ವ್ಯಧಮತ್ಸಾತ್ಯಕಿಃ ಶರೈಃ||
ವಿಧಿವತ್ತಾಗಿ ಕಲ್ಪಿಸಿದ್ದ ಆ ಅನ್ಯ ರಥವನ್ನೇರಿ ಸಾತ್ಯಕಿಯು ಶರಗಳಿಂದ ಕೇಕಯರ ಮಹಾ ಸೇನೆಯನ್ನು ವಧಿಸಿದನು.
08009035a ಸಾ ವಧ್ಯಮಾನಾ ಸಮರೇ ಕೇಕಯಸ್ಯ ಮಹಾಚಮೂಃ|
08009035c ತಮುತ್ಸೃಜ್ಯ ರಥಂ ಶತ್ರುಂ ಪ್ರದುದ್ರಾವ ದಿಶೋ ದಶ||
ಸಮರದಲ್ಲಿ ವಧಿಸಲ್ಪಡುತ್ತಿರುವ ಕೇಕಯರ ಮಹಾಸೇನೆಯು ಶತ್ರುರಥವನ್ನು ಬಿಟ್ಟು ಹತ್ತು ದಿಕ್ಕುಗಳಲ್ಲಿ ಓಡಿಹೋಯಿತು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ವಿಂದಾನುವಿಂದವಧೇ ನವಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ವಿಂದಾನುವಿಂದವಧ ಎನ್ನುವ ಒಂಭತ್ತನೇ ಅಧ್ಯಾಯವು.
[1] “ಸಪತ್ರ” ಎನ್ನುವ ಶಬ್ಧವನ್ನು ಇಲ್ಲಿ “ಎಲೆಗಳಿದ್ದ” ಎನ್ನುವುದಕ್ಕೆ ಬದಲಾಗಿ “ಹೂಬಿಟ್ಟ” ಎಂದು ಅನುವಾದಿಸಲಾಗಿದೆ. ಕಿಂಶುಕ ವೃಕ್ಷದ ಹೂವೇ ಅದರ ಎಲೆಗಳಾದುದರಿಂದ ರಕ್ತದಿಂದ ತೋಯ್ದುಹೋಗಿದ್ದ ಮಹಾಯೋಧನನ್ನು ಕಿಂಶುಕ ವೃಕ್ಷಕ್ಕೆ “ಸಪತ್ರ” ಎಂದೂ ಮತ್ತು “ಸಪುಷ್ಪ” ಎಂದೂ ಸೂಚಿಸಲಾಗಿದೆ.