|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
೧
ದ್ರೋಣನು ಹತನಾದ ನಂತರ ಕೌರವ ಪ್ರಮುಖ ನೃಪರು ಅಶ್ವತ್ಥಾಮ-ಕೃಪರನ್ನು ಸಮಾಧಾನಗೊಳಿಸಿ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದುದು (೧-೩). ಕರ್ಣ, ದುರ್ಯೋಧನ, ದುಃಶಾಸನ, ಶಕುನಿಯರು ಒಟ್ಟಿಗೇ ದುರ್ಯೋಧನನ ಬಿಡಾರದಲ್ಲಿ ನಿದ್ದೆಯಿಲ್ಲದೇ ರಾತ್ರಿಯನ್ನು ಕಳೆದುದು (೪-೮). ಎರಡು ದಿವಸಗಳು ನಡೆದ ತುಮುಲ ಯುದ್ಧದಲ್ಲಿ ಕರ್ಣನು ಅರ್ಜುನನಿಂದ ಹತನಾದುದು ಮತ್ತು ಸಂಜಯನು ಹಸ್ತಿನಾಪುರಕ್ಕೆ ಹೋಗಿ ಧೃತರಾಷ್ಟ್ರನಿಗೆ ನಡೆದ ಸಂಗತಿಯನ್ನು ವರದಿಮಾಡಿದುದು (೯-೧೭). ಕರ್ಣನು ಹತನಾದ ವಿಷಯವನ್ನು ತಿಳಿದ ಧೃತರಾಷ್ಟ್ರನು ಶೋಕಪಟ್ಟು, ವಿಷಯವನ್ನು ವಿವರವಾಗಿ ಹೇಳುವಂತೆ ಪ್ರಶ್ನಿಸುವುದು (೧೮-೪೯).
08001001 ವೈಶಂಪಾಯನ ಉವಾಚ|
08001001a ತತೋ ದ್ರೋಣೇ ಹತೇ ರಾಜನ್ದುರ್ಯೋಧನಮುಖಾ ನೃಪಾಃ|
08001001c ಭೃಶಮುದ್ವಿಗ್ನಮನಸೋ ದ್ರೋಣಪುತ್ರಮುಪಾಗಮನ್||
ವೈಶಂಪಾಯನನು ಹೇಳಿದನು: “ರಾಜನ್! ದ್ರೋಣನು ಹತನಾಗಲು ದುರ್ಯೋಧನ ಪ್ರಮುಖ ನೃಪರು ತುಂಬಾ ಉದ್ವಿಗ್ನಮನಸ್ಕರಾಗಿ ದ್ರೋಣಪುತ್ರನ ಬಳಿ ಬಂದರು.
08001002a ತೇ ದ್ರೋಣಮುಪಶೋಚಂತಃ ಕಶ್ಮಲಾಭಿಹತೌಜಸಃ|
08001002c ಪರ್ಯುಪಾಸಂತ ಶೋಕಾರ್ತಾಸ್ತತಃ ಶಾರದ್ವತೀಸುತಂ||
ದ್ರೋಣನ ಕುರಿತು ಶೋಕಿಸುತ್ತಿದ್ದ, ದುಃಖದಿಂದ ತೇಜಸ್ಸನ್ನು ಕಳೆದುಕೊಂಡಿದ್ದ, ಶೋಕಾರ್ತರಾದ ಅವರು ಶಾರದ್ವತೀಸುತ ಕೃಪನನ್ನು ಸುತ್ತುವರೆದು ಕುಳಿತುಕೊಂಡರು.
08001003a ಮುಹೂರ್ತಂ ತೇ ಸಮಾಶ್ವಾಸ್ಯ ಹೇತುಭಿಃ ಶಾಸ್ತ್ರಸಮ್ಮಿತೈಃ|
08001003c ರಾತ್ರ್ಯಾಗಮೇ ಮಹೀಪಾಲಾಃ ಸ್ವಾನಿ ವೇಶ್ಮಾನಿ ಭೇಜಿರೇ||
ಸ್ವಲ್ಪಹೊತ್ತು ಅವನನ್ನು ಶಾಸ್ತ್ರಸಮ್ಮತ ಹೇತುವಾದಗಳಿಂದ ಸಮಾಧಾನಪಡಿಸುತ್ತಿದ್ದು, ರಾತ್ರಿಯಾಗಲು ಮಹೀಪಾಲರು ತಮ್ಮ ತಮ್ಮ ಬಿಡಾರಗಳಿಗೆ ತೆರಳಿದರು.
08001004a ವಿಶೇಷತಃ ಸೂತಪುತ್ರೋ ರಾಜಾ ಚೈವ ಸುಯೋಧನಃ|
08001004c ದುಃಶಾಸನೋಽಥ ಶಕುನಿರ್ನ ನಿದ್ರಾಮುಪಲೇಭಿರೇ||
ವಿಶೇಷವಾಗಿ ಸೂತಪುತ್ರ, ರಾಜಾ ಸುಯೋಧನ, ದುಃಶಾಸನ ಮತ್ತು ಶಕುನಿಯರಿಗೆ ನಿದ್ರೆಯೇ ಬರಲಿಲ್ಲ.
08001005a ತೇ ವೇಶ್ಮಸ್ವಪಿ ಕೌರವ್ಯ ಪೃಥ್ವೀಶಾ ನಾಪ್ನುವನ್ಸುಖಂ|
08001005c ಚಿಂತಯಂತಃ ಕ್ಷಯಂ ತೀವ್ರಂ ನಿದ್ರಾಂ ನೈವೋಪಲೇಭಿರೇ||
ಅವರು ಪೃಥ್ವೀಶ ಕೌರವ್ಯನ ಬಿಡಾರದಲ್ಲಿಯೇ ಉಳಿದುಕೊಂಡಿದ್ದರೂ ಸುಖವನ್ನು ಹೊಂದಲಿಲ್ಲ. ತಮಗಾದ ತೀವ್ರ ನಷ್ಟದ ಕುರಿತು ಚಿಂತಿಸುತ್ತಿದ್ದ ಅವರಿಗೆ ನಿದ್ರೆಯೇ ಬರಲಿಲ್ಲ.
08001006a ಸಹಿತಾಸ್ತೇ ನಿಶಾಯಾಂ ತು ದುರ್ಯೋಧನನಿವೇಶನೇ|
08001006c ಅತಿಪ್ರಚಂಡಾದ್ವಿದ್ವೇಷಾತ್ಪಾಂಡವಾನಾಂ ಮಹಾತ್ಮನಾಂ||
ದುರ್ಯೋಧನನ ಬಿಡಾರದಲ್ಲಿ ಅವರು ಒಟ್ಟಿಗೇ ಆ ರಾತ್ರಿ ಮಹಾತ್ಮ ಪಾಂಡವರೊಡನಿರುವ ಅತಿಪ್ರಚಂಡ ದ್ವೇಷದ ಕುರಿತು ಯೋಚಿಸಿದರು.
08001007a ಯತ್ತದ್ದ್ಯೂತಪರಿಕ್ಲಿಷ್ಟಾಂ ಕೃಷ್ಣಾಮಾನಿನ್ಯಿರೇ ಸಭಾಂ|
08001007c ತತ್ಸ್ಮರಂತೋಽನ್ವತಪ್ಯಂತ ಭೃಶಮುದ್ವಿಗ್ನಚೇತಸಃ||
ದ್ಯೂತದ ಸಮಯದಲ್ಲಿ ಕೃಷ್ಣೆಯನ್ನು ಸಭೆಗೆ ಸೆಳೆದು ತಂದುದು ಮತ್ತು ಅವಳಿಗಿತ್ತ ಅತ್ಯಂತ ಘೋರ ಕಷ್ಟಗಳನ್ನು ಸ್ಮರಿಸಿಕೊಂಡು ಉದ್ವಿಗ್ನಮನಸ್ಕರಾಗಿ ತುಂಬಾ ಪರಿತಪಿಸಿದರು.
08001008a ಚಿಂತಯಂತಶ್ಚ ಪಾರ್ಥಾನಾಂ ತಾನ್ಕ್ಲೇಶಾನ್ದ್ಯೂತಕಾರಿತಾನ್|
08001008c ಕೃಚ್ಚ್ರೇಣ ಕ್ಷಣದಾಂ ರಾಜನ್ನಿನ್ಯುರಬ್ದಶತೋಪಮಾಂ||
ರಾಜನ್! ದ್ಯೂತದಿಂದಾಗಿ ಪಾರ್ಥರಿಗಿತ್ತ ಆ ಕ್ಲೇಶಗಳ ಕುರಿತು ಚಿಂತಿಸುತ್ತಿದ್ದ ಅವರು ಆ ರಾತ್ರಿಯ ಕ್ಷಣಗಳನ್ನು ನೂರು ವರ್ಷಗಳನ್ನು ಕಳೆದಂತೆ ಕಳೆದರು.
08001009a ತತಃ ಪ್ರಭಾತೇ ವಿಮಲೇ ಸ್ಥಿತಾ ದಿಷ್ಟಸ್ಯ ಶಾಸನೇ|
08001009c ಚಕ್ರುರಾವಶ್ಯಕಂ ಸರ್ವೇ ವಿಧಿದೃಷ್ಟೇನ ಕರ್ಮಣಾ||
ಅನಂತರ ನಿರ್ಮಲ ಪ್ರಭಾತಕಾಲವು ಪ್ರಾಪ್ತವಾಗಲು ದೈವಸಂಕಲ್ಪಕ್ಕೆ ಅಧೀನರಾಗಿದ್ದ ಆ ಎಲ್ಲ ಕೌರವರೂ ಅವಶ್ಯವಾಗಿ ಮಾಡಲೇಬೇಕಾಗಿದ್ದ ಶೌಚ-ಸ್ನಾನ-ಸಂಧ್ಯಾವಂದನಾದಿ ಕರ್ಮಗಳನ್ನು ಯಥಾವಿಧಿಯಾಗಿ ಪೂರೈಸಿದರು.
08001010a ತೇ ಕೃತ್ವಾವಶ್ಯಕಾರ್ಯಾಣಿ ಸಮಾಶ್ವಸ್ಯ ಚ ಭಾರತ|
08001010c ಯೋಗಮಾಜ್ಞಾಪಯಾಮಾಸುರ್ಯುದ್ಧಾಯ ಚ ವಿನಿರ್ಯಯುಃ||
ಭಾರತ! ಹೀಗೆ ಅವಶ್ಯಕರ್ಮಗಳನ್ನು ಮುಗಿಸಿ ಸಮಾಧಾನಹೊಂದಿದವರಾಗಿ ಯುದ್ಧಕ್ಕೆ ಸಜ್ಜಾಗಿ ಹೊರಡುವಂತೆ ಸೇನೆಗಳಿಗೆ ಆಜ್ಞಾಪಿಸಿದರು.
08001011a ಕರ್ಣಂ ಸೇನಾಪತಿಂ ಕೃತ್ವಾ ಕೃತಕೌತುಕಮಂಗಲಾಃ|
08001011c ವಾಚಯಿತ್ವಾ ದ್ವಿಜಶ್ರೇಷ್ಠಾನ್ದಧಿಪಾತ್ರಘೃತಾಕ್ಷತೈಃ||
08001012a ನಿಷ್ಕೈರ್ಗೋಭಿರ್ಹಿರಣ್ಯೇನ ವಾಸೋಭಿಶ್ಚ ಮಹಾಧನೈಃ|
08001012c ವರ್ಧ್ಯಮಾನಾ ಜಯಾಶೀರ್ಭಿಃ ಸೂತಮಾಗಧಬಂದಿಭಿಃ||
ಸಾಂಪ್ರದಾಯಿಕ ಮಂಗಲಕಾರ್ಯಗಳನ್ನು ಮುಗಿಸಿಕೊಂಡು ಕರ್ಣನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಮೊಸರಿನಪಾತ್ರೆ, ತುಪ್ಪ, ಅಕ್ಷತೆ, ಗೋವು, ಕುದುರೆ, ಕಂಠಾಭರಣ, ಮತ್ತು ಬಹುಮೂಲ್ಯ ವಸ್ತ್ರ ಇವೇ ಮುಂತಾದವುಗಳಿಂದ ಬ್ರಾಹ್ಮಣರನ್ನು ಸತ್ಕರಿಸಿ, ಅವರಿಂದ ಆಶೀರ್ವಚನಗಳನ್ನು ಪಡೆದು, ಸೂತಮಾಗಧರಿಂದ ಪ್ರಶಂಸಿಸಲ್ಪಡುತ್ತಾ ರಣಾಂಗಣವನ್ನು ಸೇರಿದರು.
08001013a ತಥೈವ ಪಾಂಡವಾ ರಾಜನ್ಕೃತಸರ್ವಾಹ್ಣಿಕಕ್ರಿಯಾಃ|
08001013c ಶಿಬಿರಾನ್ನಿರ್ಯಯೂ ರಾಜನ್ಯುದ್ಧಾಯ ಕೃತನಿಶ್ಚಯಾಃ||
ರಾಜನ್! ಹಾಗೆಯೇ ಪಾಂಡವರೂ ಕೂಡ ಸರ್ವ ಆಹ್ನಿಕಕ್ರಿಯೆಗಳನ್ನು ಮಾಡಿ, ಯುದ್ಧಮಾಡಲು ನಿಶ್ಚಯಿಸಿದವರಾಗಿ ಶಿಬಿರಗಳಿಂದ ಹೊರಟರು.
08001014a ತತಃ ಪ್ರವವೃತೇ ಯುದ್ಧಂ ತುಮುಲಂ ರೋಮಹರ್ಷಣಂ|
08001014c ಕುರೂಣಾಂ ಪಾಂಡವಾನಾಂ ಚ ಪರಸ್ಪರವಧೈಷಿಣಾಂ||
ಆಗ ಪರಸ್ಪರರನ್ನು ವಧಿಸಲು ಬಯಸಿದ್ದ ಕುರು ಮತ್ತು ಪಾಂಡವರ ನಡುವೆ ರೋಮಾಂಚಕ ತುಮುಲಯುದ್ಧವು ನಡೆಯಿತು.
08001015a ತಯೋರ್ದ್ವೇ ದಿವಸೇ ಯುದ್ಧಂ ಕುರುಪಾಂಡವಸೇನಯೋಃ|
08001015c ಕರ್ಣೇ ಸೇನಾಪತೌ ರಾಜನ್ನಭೂದದ್ಭುತದರ್ಶನಂ||
ರಾಜನ್! ಕರ್ಣನ ಸೇನಾಪತಿತ್ವದಲ್ಲಿ ಕುರು-ಪಾಂಡವ ಸೇನೆಗಳ ನಡುವೆ ಎರಡು ದಿವಸಗಳ ನೋಡಲು ಅದ್ಭುತವಾಗಿದ್ದ ಯುದ್ಧವು ನಡೆಯಿತು.
08001016a ತತಃ ಶತ್ರುಕ್ಷಯಂ ಕೃತ್ವಾ ಸುಮಹಾಂತಂ ರಣೇ ವೃಷಃ|
08001016c ಪಶ್ಯತಾಂ ಧಾರ್ತರಾಷ್ಟ್ರಾಣಾಂ ಫಲ್ಗುನೇನ ನಿಪಾತಿತಃ||
ರಣದಲ್ಲಿ ಮಹತ್ತರ ಶತ್ರುಕ್ಷಯವನ್ನುಂಟುಮಾಡಿ ವೃಷಸೇನ ಕರ್ಣನು ಧಾರ್ತರಾಷ್ಟ್ರರು ನೋಡುತ್ತಿದ್ದಂತೆಯೇ ಫಲ್ಗುನನಿಂದ ಕೆಳಕ್ಕುರುಳಿಸಲ್ಪಟ್ಟನು.
08001017a ತತಸ್ತತ್ಸಂಜಯಃ ಸರ್ವಂ ಗತ್ವಾ ನಾಗಾಹ್ವಯಂ ಪುರಂ|
08001017c ಆಚಖ್ಯೌ ಧೃತರಾಷ್ಟ್ರಾಯ ಯದ್ವೃತ್ತಂ ಕುರುಜಾಂಗಲೇ||
ಅನಂತರ ಸಂಜಯನು ನಾಗಾಹ್ವಯ ಪುರಕ್ಕೆ ಹೋಗಿ ಧೃತರಾಷ್ಟ್ರನಿಗೆ ಕುರುಜಾಂಗಲದಲ್ಲಿ ನಡೆದ ಎಲ್ಲವನ್ನೂ ಹೇಳಿದನು.”
08001018 ಜನಮೇಜಯ ಉವಾಚ|
08001018a ಆಪಗೇಯಂ ಹತಂ ಶ್ರುತ್ವಾ ದ್ರೋಣಂ ಚ ಸಮರೇ ಪರೈಃ|
08001018c ಯೋ ಜಗಾಮ ಪರಾಮಾರ್ತಿಂ ವೃದ್ಧೋ ರಾಜಾಂಬಿಕಾಸುತಃ||
ಜನಮೇಜಯನು ಹೇಳಿದನು: “ಆಪಗೇಯ ಭೀಷ್ಮ ಮತ್ತು ದ್ರೋಣರು ಸಮರದಲ್ಲಿ ಶತ್ರುಗಳಿಂದ ಹತರಾದರೆನ್ನುವುದನ್ನು ಕೇಳಿದ ರಾಜಾ ಅಂಬಿಕಾಸುತನು ಪರಮ ದುಃಖಿತನಾಗಿದ್ದನು.
08001019a ಸ ಶ್ರುತ್ವಾ ನಿಹತಂ ಕರ್ಣಂ ದುರ್ಯೋಧನಹಿತೈಷಿಣಂ|
08001019c ಕಥಂ ದ್ವಿಜವರ ಪ್ರಾಣಾನಧಾರಯತ ದುಃಖಿತಃ||
ದ್ವಿಜವರ! ಈಗ ದುರ್ಯೋಧನನ ಹಿತೈಷಿಣಿ ಕರ್ಣನು ಹತನಾದುದನ್ನು ಕೇಳಿ ದುಃಖಿತನಾದ ಅವನು ಹೇಗೆ ಪ್ರಾಣಗಳನ್ನು ಉಳಿಸಿಕೊಂಡಿದ್ದನು?
08001020a ಯಸ್ಮಿಂ ಜಯಾಶಾಂ ಪುತ್ರಾಣಾಮಮನ್ಯತ ಸ ಪಾರ್ಥಿವಃ|
08001020c ತಸ್ಮಿನ್ ಹತೇ ಸ ಕೌರವ್ಯಃ ಕಥಂ ಪ್ರಾಣಾನಧಾರಯತ್||
ರಾಜನು ತನ್ನ ಪುತ್ರರ ಜಯದ ಆಸೆಯನ್ನು ಯಾರಮೇಲೆ ಇರಿಸಿದ್ದನೋ ಅವನೇ ಹತನಾದನೆಂದಾಗ ಆ ಕೌರವ್ಯನು ಹೇಗೆ ಪ್ರಾಣಗಳನ್ನುಳಿಸಿಕೊಂಡಿದ್ದನು?
08001021a ದುರ್ಮರಂ ಬತ ಮನ್ಯೇಽಹಂ ನೃಣಾಂ ಕೃಚ್ಚ್ರೇಽಪಿ ವರ್ತತಾಂ|
08001021c ಯತ್ರ ಕರ್ಣಂ ಹತಂ ಶ್ರುತ್ವಾ ನಾತ್ಯಜಚ್ಜೀವಿತಂ ನೃಪಃ||
ಕರ್ಣನು ಹತನಾದುದನ್ನು ಕೇಳಿಯೂ ರಾಜನು ಜೀವವನ್ನು ತೊರೆಯಲಿಲ್ಲವೆಂದರೆ ಅತಿ ದಾರುಣ ಕಷ್ಟದಲ್ಲಿ ಸಿಲುಕಿ ನರಳುತ್ತಿದ್ದರೂ ಮನುಷ್ಯನಿಗೆ ಪ್ರಾಣಪರಿತ್ಯಾಗವು ಅಶಕ್ಯವೆಂದು ನನಗನ್ನಿಸುತ್ತದೆ.
08001022a ತಥಾ ಶಾಂತನವಂ ವೃದ್ಧಂ ಬ್ರಹ್ಮನ್ಬಾಹ್ಲಿಕಮೇವ ಚ|
08001022c ದ್ರೋಣಂ ಚ ಸೋಮದತ್ತಂ ಚ ಭೂರಿಶ್ರವಸಮೇವ ಚ||
08001023a ತಥೈವ ಚಾನ್ಯಾನ್ಸುಹೃದಃ ಪುತ್ರಪೌತ್ರಾಂಶ್ಚ ಪಾತಿತಾನ್|
08001023c ಶ್ರುತ್ವಾ ಯನ್ನಾಜಹಾತ್ಪ್ರಾಣಾಂಸ್ತನ್ಮನ್ಯೇ ದುಷ್ಕರಂ ದ್ವಿಜ||
ಬ್ರಹ್ಮನ್! ದ್ವಿಜ! ಹಾಗೆಯೇ ವೃದ್ಧ ಶಾಂತನವ ಭೀಷ್ಮ, ಬಾಹ್ಲೀಕ, ದ್ರೋಣ, ಸೋಮದತ್ತ, ಭೂರಿಶ್ರವ, ಮತ್ತು ಇನ್ನೂ ಇತರ ಸುಹೃದಯರು, ಪುತ್ರ ಪೌತ್ರರು ಹತರಾದುದನ್ನು ಕೇಳಿಯೂ ಅವನು ಪ್ರಾಣಗಳನ್ನು ತೊರೆಯಲಿಲ್ಲವೆಂದರೆ ತಾನಾಗಿಯೇ ಪ್ರಾಣವನ್ನು ತೊರೆಯುವುದು ದುಷ್ಕರವೆಂದು ನನಗನ್ನಿಸುತ್ತದೆ.
08001024a ಏತನ್ಮೇ ಸರ್ವಮಾಚಕ್ಷ್ವ ವಿಸ್ತರೇಣ ತಪೋಧನ|
08001024c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್[1]||
ತಪೋಧನ! ಇವೆಲ್ಲವನ್ನೂ ನನಗೆ ವಿಸ್ತಾರವಾಗಿ ಹೇಳು. ಪೂರ್ವಜರ ಮಹಾ ಚರಿತ್ರೆಯನ್ನು ಕೇಳಿ ನನಗೆ ಇನ್ನೂ ತೃಪ್ತಿಯೇ ಆಗಿಲ್ಲ!”
08001025 ವೈಶಂಪಾಯನ ಉವಾಚ|
08001025a ಹತೇ ಕರ್ಣೇ ಮಹಾರಾಜ ನಿಶಿ ಗಾವಲ್ಗಣಿಸ್ತದಾ|
08001025c ದೀನೋ ಯಯೌ ನಾಗಪುರಮಶ್ವೈರ್ವಾತಸಮೈರ್ಜವೇ||
ವೈಶಂಪಾಯನನು ಹೇಳಿದನು: “ಮಹಾರಾಜ! ಕರ್ಣನು ಹತನಾಗಲು ಆ ರಾತ್ರಿಯೇ ದೀನ ಗಾವಲ್ಗಣಿಯು ವಾಯುವೇಗ ಸಮಾನ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ನಾಗಪುರಕ್ಕೆ ಹೊರಟನು.
08001026a ಸ ಹಾಸ್ತಿನಪುರಂ ಗತ್ವಾ ಭೃಶಮುದ್ವಿಗ್ನಮಾನಸಃ|
08001026c ಜಗಾಮ ಧೃತರಾಷ್ಟ್ರಸ್ಯ ಕ್ಷಯಂ ಪ್ರಕ್ಷೀಣಬಾಂದವಂ||
ಹಸ್ತಿನಾಪುರಕ್ಕೆ ಹೋಗಿ ತುಂಬಾ ಉದ್ವಿಗ್ನಮಾನಸನಾದ ಅವನು ಬಾಂಧವಶೂನ್ಯ ಧೃತರಾಷ್ಟ್ರನ ಬಳಿ ಹೋದನು.
08001027a ಸ ಸಮುದ್ವೀಕ್ಷ್ಯ ರಾಜಾನಂ ಕಶ್ಮಲಾಭಿಹತೌಜಸಂ|
08001027c ವವಂದೇ ಪ್ರಾಂಜಲಿರ್ಭೂತ್ವಾ ಮೂರ್ಧ್ನಾ ಪಾದೌ ನೃಪಸ್ಯ ಹ||
ಅತ್ಯಂತ ದುಃಖದಿಂದ ಕಳೆಗುಂದಿದ್ದ ರಾಜನನ್ನು ಸ್ವಲ್ಪಹೊತ್ತು ನೋಡಿ ಅವನು ರಾಜನ ಪಾದಗಳಲ್ಲಿ ತಲೆಯನ್ನಿಟ್ಟು ಕೈಮುಗಿದು ವಂದಿಸಿದನು.
08001028a ಸಂಪೂಜ್ಯ ಚ ಯಥಾನ್ಯಾಯಂ ಧೃತರಾಷ್ಟ್ರಂ ಮಹೀಪತಿಂ|
08001028c ಹಾ ಕಷ್ಟಮಿತಿ ಚೋಕ್ತ್ವಾ ಸ ತತೋ ವಚನಮಾದದೇ||
ಯಥಾನ್ಯಾಯವಾಗಿ ಮಹೀಪತಿ ಧೃತರಾಷ್ಟ್ರನನ್ನು ಗೌರವಿಸಿ “ಅಯ್ಯೋ ಕಷ್ಟವೇ!” ಎಂದು ಹೇಳಿ ಅನಂತರ ಈ ಮಾತುಗಳನ್ನಾಡಿದನು:
08001029a ಸಂಜಯೋಽಹಂ ಕ್ಷಿತಿಪತೇ ಕಚ್ಚಿದಾಸ್ತೇ ಸುಖಂ ಭವಾನ್|
08001029c ಸ್ವದೋಷೇಣಾಪದಂ ಪ್ರಾಪ್ಯ ಕಚ್ಚಿನ್ನಾದ್ಯ ವಿಮುಹ್ಯಸಿ||
“ಕ್ಷಿತಿಪತೇ! ನಾನು ಸಂಜಯ! ನೀನು ಸುಖದಿಂದಿರುವೆಯಷ್ಟೇ? ನಿನ್ನದೇ ದೋಷದಿಂದ ಆಪತ್ತನ್ನು ತಂದುಕೊಂಡು ವಿಮೋಹಿತನಾಗಿಲ್ಲ ತಾನೇ?
08001030a ಹಿತಾನ್ಯುಕ್ತಾನಿ ವಿದುರದ್ರೋಣಗಾಂಗೇಯಕೇಶವೈಃ|
08001030c ಅಗೃಹೀತಾನ್ಯನುಸ್ಮೃತ್ಯ ಕಚ್ಚಿನ್ನ ಕುರುಷೇ ವ್ಯಥಾಂ||
ವಿದುರ, ದ್ರೋಣ, ಗಾಂಗೇಯ ಮತ್ತು ಕೇಶವರು ಹೇಳಿದ್ದ ಹಿತ ಮಾತುಗಳನ್ನು ಸ್ವೀಕರಿಸದೇ ಇದ್ದುದನ್ನು ನೆನಪಿಸಿಕೊಂಡು ನೀನು ಈಗ ವ್ಯಥೆಪಡುತ್ತಿಲ್ಲ ತಾನೇ?
08001031a ರಾಮನಾರದಕಣ್ವೈಶ್ಚ ಹಿತಮುಕ್ತಂ ಸಭಾತಲೇ|
08001031c ನಗೃಹೀತಮನುಸ್ಮೃತ್ಯ ಕಚ್ಚಿನ್ನ ಕುರುಷೇ ವ್ಯಥಾಂ||
ಪರಶುರಾಮ, ನಾರದ, ಮತ್ತು ಕಣ್ವರು ಸಭಾಂಗಣದಲ್ಲಿ ಹೇಳಿದ್ದ ಹಿತಮಾತುಗಳನ್ನು ಸ್ವೀಕರಿಸದೇ ಇದ್ದುದನ್ನು ಸ್ಮರಿಸಿಕೊಂಡು ಈಗ ನೀನು ವ್ಯಥೆಪಡುತ್ತಿಲ್ಲ ತಾನೇ?
08001032a ಸುಹೃದಸ್ತ್ವದ್ಧಿತೇ ಯುಕ್ತಾನ್ಭೀಷ್ಮದ್ರೋಣಮುಖಾನ್ಪರೈಃ|
08001032c ನಿಹತಾನ್ಯುಧಿ ಸಂಸ್ಮೃತ್ಯ ಕಚ್ಚಿನ್ನ ಕುರುಷೇ ವ್ಯಥಾಂ||
ನಿನ್ನದೇ ಹಿತವನ್ನು ಬಯಸುತ್ತಿದ್ದ ಸುಹೃದಯ ಭೀಷ್ಮ ಮತ್ತು ದ್ರೋಣಾದಿಗಳು ಶತ್ರುಗಳಿಂದ ಯುದ್ಧದಲ್ಲಿ ಹತರಾದರೆನ್ನುವುದನ್ನು ನೆನಪಿಸಿಕೊಳ್ಳುತ್ತಾ ನೀನು ವ್ಯಥೆಪಡುತ್ತಿಲ್ಲ ತಾನೇ?”
08001033a ತಮೇವಂವಾದಿನಂ ರಾಜಾ ಸೂತಪುತ್ರಂ ಕೃತಾಂಜಲಿಂ|
08001033c ಸುದೀರ್ಘಮಭಿನಿಃಶ್ವಸ್ಯ ದುಃಖಾರ್ತ ಇದಮಬ್ರವೀತ್||
ಅಂಜಲೀ ಬದ್ಧನಾಗಿ ಈ ರೀತಿ ಹೇಳುತ್ತಿದ್ದ ಸೂತಪುತ್ರನಿಗೆ ರಾಜನು ದುಃಖಾರ್ತನಾಗಿ ದೀರ್ಘ ನಿಟ್ಟುಸಿರು ಬಿಡುತ್ತಾ ಹೇಳಿದನು:
08001034a ಗಾಂಗೇಯೇ ನಿಹತೇ ಶೂರೇ ದಿವ್ಯಾಸ್ತ್ರವತಿ ಸಂಜಯ|
08001034c ದ್ರೋಣೇ ಚ ಪರಮೇಷ್ವಾಸೇ ಭೃಶಂ ಮೇ ವ್ಯಥಿತಂ ಮನಃ||
“ಸಂಜಯ! ದಿವ್ಯಾಸ್ತ್ರಗಳನ್ನು ಹೊಂದಿದ್ದ ಶೂರ ಗಾಂಗೇಯ ಮತ್ತು ಪರಮೇಷ್ವಾಸ ದ್ರೋಣರು ಹತರಾಗಲು ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಗಿತ್ತು.
08001035a ಯೋ ರಥಾನಾಂ ಸಹಸ್ರಾಣಿ ದಂಶಿತಾನಾಂ ದಶೈವ ಹಿ|
08001035c ಅಹನ್ಯಹನಿ ತೇಜಸ್ವೀ ನಿಜಘ್ನೇ ವಸುಸಂಭವಃ||
08001036a ಸ ಹತೋ ಯಜ್ಞಸೇನಸ್ಯ ಪುತ್ರೇಣೇಹ ಶಿಖಂಡಿನಾ|
08001036c ಪಾಂಡವೇಯಾಭಿಗುಪ್ತೇನ ಭೃಶಂ ಮೇ ವ್ಯಥಿತಂ ಮನಃ||
ಹತ್ತುದಿನಗಳ ಪರ್ಯಂತವಾಗಿ ಪ್ರತಿದಿನವೂ ಸಹಸ್ರಾರು ಕವಚಧಾರಿ ಮಹಾರಥರನ್ನು ಸಂಹರಿಸಿದ ತೇಜಸ್ವೀ ವಸುಸಂಭವನನ್ನು ಯಜ್ಞಸೇನನ ಮಗ ಶಿಖಂಡಿಯಿಂದ ರಕ್ಷಿಸಲ್ಪಟ್ಟ ಪಾಂಡವೇಯನು ಸಂಹರಿಸಿದನು ಎಂದು ಕೇಳಿ ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಯಿತು.
08001037a ಭಾರ್ಗವಃ ಪ್ರದದೌ ಯಸ್ಮೈ ಪರಮಾಸ್ತ್ರಂ ಮಹಾತ್ಮನೇ|
08001037c ಸಾಕ್ಷಾದ್ರಾಮೇಣ ಯೋ ಬಾಲ್ಯೇ ಧನುರ್ವೇದ ಉಪಾಕೃತಃ||
08001038a ಯಸ್ಯ ಪ್ರಸಾದಾತ್ಕೌಂತೇಯಾ ರಾಜಪುತ್ರಾ ಮಹಾಬಲಾಃ|
08001038c ಮಹಾರಥತ್ವಂ ಸಂಪ್ರಾಪ್ತಾಸ್ತಥಾನ್ಯೇ ವಸುಧಾಧಿಪಾಃ||
08001039a ತಂ ದ್ರೋಣಂ ನಿಹತಂ ಶ್ರುತ್ವಾ ಧೃಷ್ಟದ್ಯುಮ್ನೇನ ಸಂಯುಗೇ|
08001039c ಸತ್ಯಸಂಧಂ ಮಹೇಷ್ವಾಸಂ ಭೃಶಂ ಮೇ ವ್ಯಥಿತಂ ಮನಃ||
ಯಾವ ಮಹಾತ್ಮನಿಗೆ ಭಾರ್ಗವನು ಪರಮಾಸ್ತ್ರವನ್ನು ನೀಡಿದ್ದನೋ, ಯಾರು ಸಾಕ್ಷಾದ್ ಪರಶುರಾಮನಿಂದ ಬಾಲ್ಯದಲ್ಲಿಯೇ ಧನುರ್ವೇದವನ್ನು ಪಡೆದುಕೊಂಡನೋ, ಯಾರ ಪ್ರಸಾದದಿಂದ ಮಹಾಬಲಶಾಲಿ ರಾಜಪುತ್ರ ಕೌಂತೇಯರು ಮತ್ತು ಅನ್ಯ ವಸುಧಾಧಿಪರು ಮಹಾರಥತ್ವವನ್ನು ಹೊಂದಿದರೋ ಆ ಸತ್ಯಸಂಧ ಮಹೇಷ್ವಾಸ ದ್ರೋಣನನ್ನು ಯುದ್ಧದಲ್ಲಿ ಧೃಷ್ಟದ್ಯುಮ್ನನು ಸಂಹರಿಸಿದನು ಎನ್ನುವುದನ್ನು ಕೇಳಿ ನನ್ನ ಮನಸ್ಸಿಗೆ ಬಹಳ ವ್ಯಥೆಯುಂಟಾಯಿತು[2].
08001040a ತ್ರೈಲೋಕ್ಯೇ ಯಸ್ಯ ಶಾಸ್ತ್ರೇಷು ನ ಪುಮಾನ್ವಿದ್ಯತೇ ಸಮಃ|
08001040c ತಂ ದ್ರೋಣಂ ನಿಹತಂ ಶ್ರುತ್ವಾ ಕಿಮಕುರ್ವತ ಮಾಮಕಾಃ||
ಅಸ್ತ್ರವಿದ್ಯೆಯಲ್ಲಿ ಮೂರುಲೋಕಗಳಲ್ಲಿಯೂ ಯಾರ ಸಮಾನ ಯಾವ ಪುರುಷನೂ ಇಲ್ಲವೋ ಅಂತಹ ದ್ರೋಣನು ಹತನಾದುದನ್ನು ಕೇಳಿ ನನ್ನವರು ಏನು ಮಾಡಿದರು?
08001041a ಸಂಶಪ್ತಕಾನಾಂ ಚ ಬಲೇ ಪಾಂಡವೇನ ಮಹಾತ್ಮನಾ|
08001041c ಧನಂಜಯೇನ ವಿಕ್ರಮ್ಯ ಗಮಿತೇ ಯಮಸಾದನಂ||
08001042a ನಾರಾಯಣಾಸ್ತ್ರೇ ನಿಹತೇ ದ್ರೋಣಪುತ್ರಸ್ಯ ಧೀಮತಃ|
08001042c ಹತಶೇಷೇಷ್ವನೀಕೇಷು ಕಿಮಕುರ್ವತ ಮಾಮಕಾಃ||
ಸಂಶಪ್ತಕ ಸೇನೆಯನ್ನು ಮಹಾತ್ಮ ಪಾಂಡವ ಧನಂಜಯನು ವಿಕ್ರಮದಿಂದ ಯಮಸಾದನಕ್ಕೆ ಕಳುಹಿಸಲು, ಧೀಮತ ದ್ರೋಣಪುತ್ರನ ನಾರಾಯಣಾಸ್ತ್ರವೂ ನಾಶಗೊಳ್ಳಲು, ಅಳಿದುಳಿದ ಸೇನೆಗಳೊಂದಿಗೆ ನನ್ನವರು ಏನು ಮಾಡಿದರು?
08001043a ವಿಪ್ರದ್ರುತಾನಹಂ ಮನ್ಯೇ ನಿಮಗ್ನಃ ಶೋಕಸಾಗರೇ|
08001043c ಪ್ಲವಮಾನಾನ್ ಹತೇ ದ್ರೋಣೇ ಸನ್ನನೌಕಾನಿವಾರ್ಣವೇ||
ದ್ರೋಣನು ಹತನಾದ ನಂತರ ನನ್ನವರು ಪಲಾಯನ ಮಾಡಿ ಸಾಗರದ ಮಧ್ಯೆ ನೌಕೆಯನ್ನು ಕಳೆದುಕೊಂಡವರಂತೆ ಶೋಕಸಾಗರದಲ್ಲಿ ಮುಳುಗಿಹೋಗಿರಬಹುದೆಂದು ನಾನು ಭಾವಿಸುತ್ತೇನೆ.
08001044a ದುರ್ಯೋಧನಸ್ಯ ಕರ್ಣಸ್ಯ ಭೋಜಸ್ಯ ಕೃತವರ್ಮಣಃ|
08001044c ಮದ್ರರಾಜಸ್ಯ ಶಲ್ಯಸ್ಯ ದ್ರೌಣೇಶ್ಚೈವ ಕೃಪಸ್ಯ ಚ||
08001045a ಮತ್ಪುತ್ರಶೇಷಸ್ಯ ತಥಾ ತಥಾನ್ಯೇಷಾಂ ಚ ಸಂಜಯ|
08001045c ವಿಪ್ರಕೀರ್ಣೇಷ್ವನೀಕೇಷು ಮುಖವರ್ಣೋಽಭವತ್ಕಥಂ||
ಸಂಜಯ! ಸೇನೆಗಳು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗುತ್ತಿರಲು ದುರ್ಯೋಧನ, ಕರ್ಣ, ಭೋಜ ಕೃತವರ್ಮ, ಮದ್ರರಾಜ ಶಲ್ಯ, ದ್ರೌಣಿ, ಕೃಪ, ಮತ್ತು ನನ್ನ ಉಳಿದ ಪುತ್ರರ ಮತ್ತು ಅನ್ಯರ ಮುಖಕಾಂತಿಯು ಹೇಗಿದ್ದಿತು?
08001046a ಏತತ್ಸರ್ವಂ ಯಥಾ ವೃತ್ತಂ ತತ್ತ್ವಂ ಗಾವಲ್ಗಣೇ ರಣೇ|
08001046c ಆಚಕ್ಷ್ವ ಪಾಂಡವೇಯಾನಾಂ ಮಾಮಕಾನಾಂ ಚ ಸರ್ವಶಃ||
ಗಾವಲ್ಗಣೇ! ರಣದಲ್ಲಿ ಪಾಂಡವರು ಮತ್ತು ನನ್ನವರ ನಡುವೆ ಏನೆಲ್ಲ ನಡೆಯಿತೋ ಅವೆಲ್ಲವನ್ನೂ ನಡೆದಂತೆಯೇ ನನಗೆ ಹೇಳು!”
08001047 ಸಂಜಯ ಉವಾಚ|
08001047a ಪಾಂಡವೇಯೈರ್ಹಿ ಯದ್ವೃತ್ತಂ ಕೌರವೇಯೇಷು ಮಾರಿಷ|
08001047c ತಚ್ಚ್ರುತ್ವಾ ಮಾ ವ್ಯಥಾಂ ಕಾರ್ಷೀದಿಷ್ಟೇ ನ ವ್ಯಥತೇ ಮನಃ||
ಸಂಜಯನು ಹೇಳಿದನು: “ಮಾರಿಷ! ಪಾಂಡವ ಕೌರವರ ನಡುವೆ ಏನು ನಡೆಯಿತೆನ್ನುವುದನ್ನು ಕೇಳಿ ವ್ಯಥೆಪಡಬಾರದು. ಏಕೆಂದರೆ ದೈವದಿಂದಲೇ ದುಃಖವು ಪ್ರಾಪ್ತವಾದಾಗ ತಿಳಿದವನು ವ್ಯಥೆಪಡುವುದಿಲ್ಲ.
08001048a ಯಸ್ಮಾದಭಾವೀ ಭಾವೀ ವಾ ಭವೇದರ್ಥೋ ನರಂ ಪ್ರತಿ|
08001048c ಅಪ್ರಾಪ್ತೌ ತಸ್ಯ ವಾ ಪ್ರಾಪ್ತೌ ನ ಕಶ್ಚಿದ್ವ್ಯಥತೇ ಬುಧಃ||
ಮನುಷ್ಯನಿಗೆ ನಡೆಯಬಾರದ್ದುದು ನಡೆಯಬಹುದು ಅಥವಾ ಒಳ್ಳೆಯದೇ ಆಗಬಹುದು. ಪ್ರಾಪ್ತವಾಗಿದ್ದುದಕ್ಕೆ ಅಥವಾ ಪ್ರಾಪ್ತವಾಗದೇ ಇದ್ದುದಕ್ಕೆ ತಿಳಿದವನು ವ್ಯಥೆಪಡುವುದಿಲ್ಲ.”
08001049 ಧೃತರಾಷ್ಟ್ರ ಉವಾಚ|
08001049a ನ ವ್ಯಥಾ ಶೃಣ್ವತಃ ಕಾ ಚಿದ್ವಿದ್ಯತೇ ಮಮ ಸಂಜಯ|
08001049c ದಿಷ್ಟಂ ಏತತ್ಪುರಾ ಮನ್ಯೇ ಕಥಯಸ್ವ ಯಥೇಚ್ಚಕಂ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಇವೆಲ್ಲವೂ ದೈವೇಚ್ಛೆಯಿಂದ ನಡೆಯುತ್ತಿದೆಯೆಂದು ನನಗೆ ಮೊದಲೇ ತಿಳಿದಿದ್ದುದರಿಂದ ಏನನ್ನು ಕೇಳಿದರೂ ನನ್ನ ಮನಸ್ಸು ವ್ಯಥೆಗೊಳ್ಳುವುದಿಲ್ಲ. ನಿನಗಿಷ್ಟವಾದಂತೆ ಹೇಳುತ್ತಾ ಹೋಗು!”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಧೃತರಾಷ್ಟ್ರಸಂಜಯಸಂವಾದೇ ಪ್ರಥಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಧೃತರಾಷ್ಟ್ರಸಂಜಯಸಂವಾದ ಎನ್ನುವ ಮೊದಲನೇ ಅಧ್ಯಾಯವು.
[1] ಗೋರಖಪುರಸಂಪುಟದಲ್ಲಿ ಇಲ್ಲಿಗೆ ಕರ್ಣಪರ್ವದ ಮೊದಲನೆಯ ಅಧ್ಯಾಯವು ಮುಗಿಯುತ್ತದೆ.
[2] ಯಯೋರ್ಲೋಕೇ ಪುಮಾನಸ್ತ್ರೇ ನ ಸಮೋಽತಿ ಚತುರ್ವಿಧೇ| ತೌ ದ್ರೋಣಭೀಷ್ಮೋ ಶ್ರುತ್ವಾ ತು ಹತೌ ಮೇ ವ್ಯಥಿತಂ ಮನಃ|| (ಗೋರಖಪುರ ಸಂಪುಟ).
Kannada Translation of Karna Parva, by Chapter:
- ಧೃತರಾಷ್ಟ್ರಸಂಜಯಸಂವಾದ
- ಸಂಜಯವಾಕ್ಯ
- ಧೃತರಾಷ್ಟ್ರಶೋಕ
- ಸಂಜಯವಾಕ್ಯ
- ಧೃತರಾಷ್ಟ್ರಪ್ರಶ್ನೆ
- ಕರ್ಣಾಭಿಷೇಕ
- ವ್ಯೂಹನಿರ್ಮಾಣ
- ಕ್ಷೇಮಧೂರ್ತಿವಧ
- ವಿಂದಾನುವಿಂದವಧ
- ಚಿತ್ರವಧ
- ಅಶ್ವತ್ಥಾಮಭೀಮಸೇನಯೋರ್ಯುದ್ಧ
- ಅಶ್ವತ್ಥಾಮಪರಾಜಯ
- ದಂಡವಧ
- ಸಂಕುಲಯುದ್ಧ
- ಪಾಂಡ್ಯವಧ
- ಸಂಕುಲಯುದ್ಧ
- ಕರ್ಣಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಪ್ರಥಮಯುದ್ಧದಿವಸಾವಹಾರ
- ಕರ್ಣದುರ್ಯೋಧನಸಂವಾದ
- ಶಲ್ಯಸಾರಥ್ಯ
- ತ್ರಿಪುರವಧೋಪಾಖ್ಯಾನ
- ಶಲ್ಯಸಾರಥ್ಯಸ್ವೀಕಾರ
- ಕರ್ಣಶಲ್ಯಸಂವಾದ
- ಕರ್ಣಮದ್ರಾಧಿಪಸಂವಾದ
- ಕರ್ಣಶಲ್ಯಸಂವಾದೇ ಹಂಸಕಾಕೀಯೋಪಾಖ್ಯಾನ
- ಕರ್ಣಶಲ್ಯಸಂವಾದ
- ಕರ್ಣಶಲ್ಯಸಂವಾದ
- ಕರ್ಣಶಲ್ಯಸಂವಾದ
- ಸಂಕುಲಯುದ್ಧ
- ಸಂಕುಲಯುದ್ಧ
- ಕರ್ಣಾಪಯಾನ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಪಾರ್ಥಾಪಯಾನ
- ಸಂಕುಲಯುದ್ಧ
- ಅಶ್ವತ್ಥಾಮಪ್ರತಿಜ್ಞೆ
- ದ್ರೌಣ್ಯಪಯಾನ
- ಕೃಷ್ಣಾರ್ಜುನಸಂವಾದ
- ಸಂಕುಲಯುದ್ಧ
- ಧರ್ಮರಾಜಶೋಧನ
- ಯುಧಿಷ್ಠಿರವಾಕ್ಯ
- ಅರ್ಜುನವಾಕ್ಯ
- ಯುಧಿಷ್ಠಿರಕ್ರೋಧವಾಕ್ಯ
- ಯುಧಿಷ್ಠಿರಸಮಾಶ್ವಾಸನ
- ಕರ್ಣಾರ್ಜುನಸಂವಾದ
- ಶ್ರೀಕೃಷ್ಣವಾಕ್ಯ
- ಅರ್ಜುನವಾಕ್ಯ
- ಸಂಕುಲದ್ವಂದ್ವಯುದ್ಧ
- ಭೀಮಸೇನವಿಶೋಕಸಂವಾದ
- ಶಕುನಿಪರಾಜಯ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ದುಃಶಾಸನಭೀಮಸೇನಯುದ್ಧ
- ದುಃಶಾಸನವಧ
- ವೃಷಸೇನವಧ
- ಕರ್ಣಾರ್ಜುನಸಮಾಗಮೇ ದ್ವೈರಥ
- ಅಶ್ವತ್ಥಾಮವಾಕ್ಯ
- ಕರ್ಣಾರ್ಜುನದ್ವೈರಥ
- ಕರ್ಣರಥಚಕ್ರಗ್ರಸನ
- ಕರ್ಣವಧ
- ರಣಭೂಮಿವರ್ಣನ
- ಯುಧಿಷ್ಠಿರಹರ್ಷ