Ashvamedhika Parva: Chapter 95

ಅಶ್ವಮೇಧಿಕ ಪರ್ವ

೯೫

ಯಜ್ಞಗಳಲ್ಲಿ ಪರಮನಿಶ್ಚಯವು ಹೇಗಾಗುತ್ತದೆ ಎಂದು ಜನಮೇಜಯನು ಕೇಳಲು ವೈಶಂಪಾಯನನು ಅಗಸ್ತ್ಯನ ಯಜ್ಞವನ್ನು ಉದಾಹರಣೆಯನ್ನಾಗಿ ವರ್ಣಿಸಿದುದು (೧-೩೬).

14095001 ಜನಮೇಜಯ ಉವಾಚ

14095001a ಧರ್ಮಾಗತೇನ ತ್ಯಾಗೇನ ಭಗವನ್ಸರ್ವಮಸ್ತಿ ಚೇತ್|

14095001c ಏತನ್ಮೇ ಸರ್ವಮಾಚಕ್ಷ್ವ ಕುಶಲೋ ಹ್ಯಸಿ ಭಾಷಿತುಮ್||

ಜನಮೇಜಯನು ಹೇಳಿದನು: “ಭಗವನ್! ಧರ್ಮದಿಂದ ಗಳಿಸಿದುದನ್ನು ತ್ಯಾಗಮಾಡುವುದೇ ಸರ್ವವು ಎಂದಾದರೆ ಅದರ ಕುರಿತು ನನಗೆ ಎಲ್ಲವನ್ನೂ ಹೇಳು. ಹೇಳುವುದರಲ್ಲಿ ನೀನು ಕುಶಲನಾಗಿದ್ದೀಯೆ!

14095002a ತತೋಂಚವೃತ್ತೇರ್ಯದ್ವೃತ್ತಂ ಸಕ್ತುದಾನೇ ಫಲಂ ಮಹತ್|

14095002c ಕಥಿತಂ ಮೇ ಮಹದ್ಬ್ರಹ್ಮಂಸ್ತಥ್ಯಮೇತದಸಂಶಯಮ್||

ಬ್ರಹ್ಮನ್! ಉಂಚವೃತ್ತಿಯ ಬ್ರಾಹ್ಮಣನು ಹಿಟ್ಟನ್ನು ದಾನಮಾಡಿ ಎಂಥಹ ಮಹಾಫಲವನ್ನು ಪಡೆದನು ಎಂಬ ವಿಷಯವನ್ನು ನನಗೆ ಹೇಳಿದೆ. ನೀನು ಹೇಳಿದುದರಲ್ಲಿ ಯಾವ ಸಂಶಯವೂ ಇಲ್ಲ.

14095003a ಕಥಂ ಹಿ ಸರ್ವಯಜ್ಞೇಷು ನಿಶ್ಚಯಃ ಪರಮೋ ಭವೇತ್|

14095003c ಏತದರ್ಹಸಿ ಮೇ ವಕ್ತುಂ ನಿಖಿಲೇನ ದ್ವಿಜರ್ಷಭ||

ಆದರೆ ಸರ್ವಯಜ್ಞಗಳಲ್ಲಿಯೂ ಪರಮ ನಿಶ್ಚಯವು ಹೇಗಾಗುತ್ತದೆ? ದ್ವಿಜರ್ಷಭ! ಇದರ ಕುರಿತು ಸಂಪೂರ್ಣವಾಗಿ ನನಗೆ ಹೇಳಬೇಕು.”

14095004 ವೈಶಂಪಾಯನ ಉವಾಚ

14095004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

14095004c ಅಗಸ್ತ್ಯಸ್ಯ ಮಹಾಯಜ್ಞೇ ಪುರಾವೃತ್ತಮರಿಂದಮ||

ವೈಶಂಪಾಯನನು ಹೇಳಿದನು: “ಅರಿಂದಮ! ಇದರ ಕುರಿತಾಗಿ ಹಿಂದೆ ನಡೆದ ಅಗಸ್ತ್ಯನ ಮಹಾಯಜ್ಞದ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

14095005a ಪುರಾಗಸ್ತ್ಯೋ ಮಹಾತೇಜಾ ದೀಕ್ಷಾಂ ದ್ವಾದಶವಾರ್ಷಿಕೀಮ್|

14095005c ಪ್ರವಿವೇಶ ಮಹಾರಾಜ ಸರ್ವಭೂತಹಿತೇ ರತಃ||

ಮಹಾರಾಜ! ಹಿಂದೆ ಸರ್ವಭೂತಹಿತದಲ್ಲಿ ನಿರತನಾಗಿದ್ದ ಮಹಾತೇಜಸ್ವೀ ಅಗಸ್ತ್ಯನು ಹನ್ನೆರಡು ವರ್ಷಗಳ ದೀಕ್ಷೆಯನ್ನು ಪ್ರವೇಶಿಸಿದನು.

14095006a ತತ್ರಾಗ್ನಿಕಲ್ಪಾ ಹೋತಾರ ಆಸನ್ಸತ್ರೇ ಮಹಾತ್ಮನಃ|

14095006c ಮೂಲಾಹಾರಾ ನಿರಾಹಾರಾಃ ಸಾಶ್ಮಕುಟ್ಟಾ ಮರೀಚಿಪಾಃ||

ಆ ಮಹಾತ್ಮನ ಸತ್ರದಲ್ಲಿ ಗೆಡ್ದೆ-ಗೆಣಸುಗಳನ್ನೇ ತಿನ್ನುವ, ನಿರಾಹಾರಿಗಳಾದ, ಕಲ್ಲಿನಿಂದ ಕುಟ್ಟಿ ತಯಾರಿಸಿದ ಆಹಾರವನ್ನು ಸೇವಿಸುವ ಮತ್ತು ಸೂರ್ಯನ ಕಿರಣಗಳನ್ನೇ ಪಾನಮಾಡುವ ಅಗ್ನಿಕಲ್ಪ ಹೋತಾರರಿದ್ದರು.

14095007a ಪರಿಘೃಷ್ಟಿಕಾ ವೈಘಸಿಕಾಃ ಸಂಪ್ರಕ್ಷಾಲಾಸ್ತಥೈವ ಚ|

14095007c ಯತಯೋ ಭಿಕ್ಷವಶ್ಚಾತ್ರ ಬಭೂವುಃ ಪರ್ಯವಸ್ಥಿತಾಃ||

ಅಲ್ಲಿ ಪರಿಘೃಷ್ಟಿಕರೂ[1], ವೈಘಾಸಿಕರೂ[2], ಸಂಪ್ರಕ್ಷಾಲಕರೂ, ಯತಿಗಳೂ, ಭಿಕ್ಷುಗಳೂ ಸೇರಿದ್ದರು.

14095008a ಸರ್ವೇ ಪ್ರತ್ಯಕ್ಷಧರ್ಮಾಣೋ ಜಿತಕ್ರೋಧಾ ಜಿತೇಂದ್ರಿಯಾಃ|

14095008c ದಮೇ ಸ್ಥಿತಾಶ್ಚ ತೇ ಸರ್ವೇ ದಂಭಮೋಹವಿವರ್ಜಿತಾಃ||

ಎಲ್ಲರೂ ಪ್ರತ್ಯಕ್ಷಧರ್ಮವನ್ನು ಪಾಲಿಸುತ್ತ ಜಿತಕ್ರೋಧರೂ ಜಿತೇಂದ್ರಿಯರೂ ಆಗಿದ್ದರು. ಎಲ್ಲರೂ ದಂಭ-ಮೋಹಗಳನ್ನು ತೊರೆದು ದಮದಲ್ಲಿಯೇ ನಿರತರಾಗಿದ್ದರು.

14095009a ವೃತ್ತೇ ಶುದ್ಧೇ ಸ್ಥಿತಾ ನಿತ್ಯಮಿಂದ್ರಿಯೈಶ್ಚಾಪ್ಯವಾಹಿತಾಃ|

14095009c ಉಪಾಸತೇ ಸ್ಮ ತಂ ಯಜ್ಞಂ ಭುಂಜಾನಾಸ್ತೇ ಮಹರ್ಷಯಃ||

ನಿತ್ಯವೂ ಇಂದ್ರಿಯಗಳಿಂದ ಬಾಧೆಗೊಳ್ಳದಿದ್ದ ಅವರು ಶುದ್ಧ ವರ್ತನೆಗಳಲ್ಲಿ ನಿರತರಾಗಿದ್ದರು. ಆ ಯಜ್ಞದಲ್ಲಿ ಉಪಾಸಿಸುತ್ತಿದ್ದ ಆ ಮಹರ್ಷಿಗಳು ಅಲ್ಲಿಯೇ ಭೋಜನಾದಿಗಳನ್ನು ಮಾಡುತ್ತಿದ್ದರು.

14095010a ಯಥಾಶಕ್ತ್ಯಾ ಭಗವತಾ ತದನ್ನಂ ಸಮುಪಾರ್ಜಿತಮ್|

14095010c ತಸ್ಮಿನ್ಸತ್ರೇ ತು ಯತ್ಕಿಂ ಚಿದಯೋಗ್ಯಂ ತತ್ರ ನಾಭವತ್|

14095010e ತಥಾ ಹ್ಯನೇಕೈರ್ಮುನಿಭಿರ್ಮಹಾಂತಃ ಕ್ರತವಃ ಕೃತಾಃ||

ಭಗವಾನ್ ಅಗಸ್ತ್ಯನು ಆಹಾರವನ್ನು ಯಥಾಶಕ್ತಿಯಾಗಿ ಸಂಗ್ರಹಿಸಿದ್ದನು. ಆ ಸತ್ರದಲ್ಲಿ ಯಾವುದೇ ರೀತಿಯ ಅಯೋಗ್ಯ ವಸ್ತುವೆಂಬುದೇ ಇರಲಿಲ್ಲ. ಹಾಗೆ ಅಲ್ಲಿ ಸೇರಿದ್ದ ಅನೇಕ ಮುನಿಗಳು ಮಹಾ ಕ್ರತುಗಳನ್ನು ನಡೆಸಿದರು.

14095011a ಏವಂವಿಧೇಸ್ತ್ವಗಸ್ತ್ಯಸ್ಯ ವರ್ತಮಾನೇ ಮಹಾಧ್ವರೇ|

14095011c ನ ವವರ್ಷ ಸಹಸ್ರಾಕ್ಷಸ್ತದಾ ಭರತಸತ್ತಮ||

ಭರತಸತ್ತಮ! ಈ ವಿಧದಲ್ಲಿ ಅಗಸ್ತ್ಯನ ಮಹಾಧ್ವರವು ನಡೆಯುತ್ತಿರಲು ಸಹಸ್ರಾಕ್ಷನು ಮಳೆಯನ್ನೇ ಸುರಿಸಲಿಲ್ಲ.

14095012a ತತಃ ಕರ್ಮಾಂತರೇ ರಾಜನ್ನಗಸ್ತ್ಯಸ್ಯ ಮಹಾತ್ಮನಃ|

14095012c ಕಥೇಯಮಭಿನಿರ್ವೃತ್ತಾ ಮುನೀನಾಂ ಭಾವಿತಾತ್ಮನಾಮ್||

ರಾಜನ್! ಕರ್ಮಗಳ ಮಧ್ಯದಲ್ಲಿ ವಿಶ್ರಮಿಸುತಿದ್ದ ಆ ಭಾವಿತಾತ್ಮ ಮುನಿಗಳು ಮಹಾತ್ಮ ಅಗಸ್ತ್ಯನ ಕುರಿತು ಹೀಗೆ ಮಾತನಾಡಿಕೊಳ್ಳುತ್ತಿದ್ದರು:

14095013a ಅಗಸ್ತ್ಯೋ ಯಜಮಾನೋಽಸೌ ದದಾತ್ಯನ್ನಂ ವಿಮತ್ಸರಃ|

14095013c ನ ಚ ವರ್ಷತಿ ಪರ್ಜನ್ಯಃ ಕಥಮನ್ನಂ ಭವಿಷ್ಯತಿ||

“ಯಜಮಾನನಾಗಿರುವ ಅಗಸ್ತ್ಯನು ಮಾತ್ಸರ್ಯವಿಲ್ಲದೇ ಅನ್ನವನ್ನು ನೀಡುತ್ತಿದ್ದಾನೆ. ಪರ್ಜನ್ಯನು ಮಳೆಗರೆಯದೇ ಇದ್ದರೆ ಆಹಾರವು ಹೇಗೆ ಬೆಳೆಯುತ್ತದೆ?

14095014a ಸತ್ರಂ ಚೇದಂ ಮಹದ್ವಿಪ್ರಾ ಮುನೇರ್ದ್ವಾದಶವಾರ್ಷಿಕಮ್|

14095014c ನ ವರ್ಷಿಷ್ಯತಿ ದೇವಶ್ಚ ವರ್ಷಾಣ್ಯೇತಾನಿ ದ್ವಾದಶ||

ವಿಪ್ರರೇ! ಮುನಿಯ ಈ ಮಹಾ ಸತ್ರವು ಹನ್ನೆರಡು ವರ್ಷಗಳದ್ದು. ದೇವ ಇಂದ್ರನಾದರೂ ಈ ಹನ್ನೆರಡು ವರ್ಷಗಳೂ ಮಳೆಗರೆಯದೇ ಇರಬಹುದು.

14095015a ಏತದ್ಭವಂತಃ ಸಂಚಿಂತ್ಯ ಮಹರ್ಷೇರಸ್ಯ ಧೀಮತಃ|

14095015c ಅಗಸ್ತ್ಯಸ್ಯಾತಿತಪಸಃ ಕರ್ತುಮರ್ಹಂತ್ಯನುಗ್ರಹಮ್||

ಈ ವಿಷಯದ ಕುರಿತು ಆಲೋಚಿಸಿ ಈ ಮಹರ್ಷಿ ಅತಿತಪಸ್ವಿ ಧೀಮತ ಅಗಸ್ತ್ಯನಿಗೆ ನೀವು ಅನುಗ್ರಹಿಸಬೇಕಾಗಿದೆ.”

14095016a ಇತ್ಯೇವಮುಕ್ತೇ ವಚನೇ ತತೋಽಗಸ್ತ್ಯಃ ಪ್ರತಾಪವಾನ್|

14095016c ಪ್ರೋವಾಚೇದಂ ವಚೋ ವಾಗ್ಮೀ ಪ್ರಸಾದ್ಯ ಶಿರಸಾ ಮುನೀನ್||

ಹೀಗೆ ಅವರು ಹೇಳಲು ಪ್ರತಾಪವಾನ್ ವಾಗ್ಮೀ ಅಗಸ್ತ್ಯನು ಮುನಿಗಳನ್ನು ಶಿರಸಾ ವಂದಿಸಿ ಈ ಮಾತನ್ನಾಡಿದನು:

14095017a ಯದಿ ದ್ವಾದಶವರ್ಷಾಣಿ ನ ವರ್ಷಿಷ್ಯತಿ ವಾಸವಃ|

14095017c ಚಿಂತಾಯಜ್ಞಂ ಕರಿಷ್ಯಾಮಿ ವಿಧಿರೇಷ ಸನಾತನಃ||

“ಒಂದುವೇಳೆ ಈ ಹನ್ನೆರಡು ವರ್ಷಗಳೂ ವಾಸವನು ಮಳೆಗರೆಯದೇ ಇದ್ದರೆ ಚಿಂತಾಯಜ್ಞವನ್ನು ಮಾಡುತ್ತೇನೆ. ಇದೇ ಸನಾತನ ವಿಧಿಯಾಗಿದೆ.

14095018a ಯದಿ ದ್ವಾದಶವರ್ಷಾಣಿ ನ ವರ್ಷಿಷ್ಯತಿ ವಾಸವಃ|

14095018c ವ್ಯಾಯಾಮೇನಾಹರಿಷ್ಯಾಮಿ ಯಜ್ಞಾನನ್ಯಾನತಿವ್ರತಾನ್||

ಒಂದುವೇಳೆ ಈ ಹನ್ನೆರಡು ವರ್ಷಗಳು ವಾಸವನು ಮಳೆಗರೆಯದೇ ಇದ್ದರೆ ವಾಯುವನ್ನೇ ಆಹಾರವನ್ನಾಗಿತ್ತು ಯಜ್ಞವನ್ನು ಮುಂದುವರೆಸುತ್ತೇನೆ.

14095019a ಬೀಜಯಜ್ಞೋ ಮಯಾಯಂ ವೈ ಬಹುವರ್ಷಸಮಾಚಿತಃ|

14095019c ಬೀಜೈಃ ಕೃತೈಃ ಕರಿಷ್ಯೇ ಚ ನಾತ್ರ ವಿಘ್ನೋ ಭವಿಷ್ಯತಿ||

ಅನೇಕ ವರ್ಷಗಳಿಂದ ಸಂಗ್ರಹಿಸಿಟ್ಟಿರುವ ಈ ಬೀಜಗಳಿಂದಲೇ ಯಜ್ಞವನ್ನು ಮಾಡುತ್ತೇನೆ. ಬೀಜಗಳಿಂದ ಮಾಡಿದ ಯಜ್ಞಕ್ಕೆ ಯಾವುದೇ ವಿಘ್ನವುಂಟಾಗುವುದಿಲ್ಲ.

14095020a ನೇದಂ ಶಕ್ಯಂ ವೃಥಾ ಕರ್ತುಂ ಮಮ ಸತ್ರಂ ಕಥಂ ಚನ|

14095020c ವರ್ಷಿಷ್ಯತೀಹ ವಾ ದೇವೋ ನ ವಾ ದೇವೋ ಭವಿಷ್ಯತಿ||

ಆ ದೇವನು ಮಳೆಸುರಿಸಲಿ ಅಥವಾ ಸುರಿಸದೇ ಇರಲಿ, ನನ್ನ ಈ ಸತ್ರವನ್ನು ಮಾತ್ರ ವ್ಯರ್ಥವಾಗಿಸಲು ಸಾಧ್ಯವೇ ಇಲ್ಲ.

14095021a ಅಥ ವಾಭ್ಯರ್ಥನಾಮಿಂದ್ರಃ ಕುರ್ಯಾನ್ನ ತ್ವಿಹ ಕಾಮತಃ|

14095021c ಸ್ವಯಮಿಂದ್ರೋ ಭವಿಷ್ಯಾಮಿ ಜೀವಯಿಷ್ಯಾಮಿ ಚ ಪ್ರಜಾಃ||

ಅಥವಾ ಇಂದ್ರನು ನನ್ನ ಈ ಬಯಕೆಯಂತೆ ಮಾಡದಿದ್ದರೆ ಸ್ವಯಂ ನಾನೇ ಇಂದ್ರನಾಗಿ ಪ್ರಜೆಗಳ ಜೀವವನ್ನು ರಕ್ಷಿಸುತ್ತೇನೆ!

14095022a ಯೋ ಯದಾಹಾರಜಾತಶ್ಚ ಸ ತಥೈವ ಭವಿಷ್ಯತಿ|

14095022c ವಿಶೇಷಂ ಚೈವ ಕರ್ತಾಸ್ಮಿ ಪುನಃ ಪುನರತೀವ ಹಿ||

ಯಾರು ಯಾವ ಆಹಾರದಿಂದ ಹುಟ್ಟಿರುವರೋ ಅವರು ಅದೇ ಆಹಾರವನ್ನು ಅವಲಂಬಿಸಬೇಕಾಗುತ್ತದೆ. ಆದುದರಿಂದ ನಾನು ಪುನಃ ಪುನಃ ವಿಶೇಷ ಆಹಾರವನ್ನು ತಯಾರಿಸುತ್ತೇನೆ.

14095023a ಅದ್ಯೇಹ ಸ್ವರ್ಣಮಭ್ಯೇತು ಯಚ್ಚಾನ್ಯದ್ವಸು ದುರ್ಲಭಮ್|

14095023c ತ್ರಿಷು ಲೋಕೇಷು ಯಚ್ಚಾಸ್ತಿ ತದಿಹಾಗಚ್ಚತಾಂ ಸ್ವಯಮ್||

ಮೂರು ಲೋಕಗಳಲ್ಲಿ ಏನೆಲ್ಲ ಸುವರ್ಣವಿದೆಯೋ ಮತ್ತು ಅನ್ಯ ದುರ್ಲಭ ವಸ್ತುಗಳಿವೆಯೋ ಅವೆಲ್ಲವೂ ಇಂದು ತಾವಾಗಿಯೇ ಇಲ್ಲಿಗೆ ಬರಲಿ!

14095024a ದಿವ್ಯಾಶ್ಚಾಪ್ಸರಸಾಂ ಸಂಘಾಃ ಸಗಂಧರ್ವಾಃ ಸಕಿನ್ನರಾಃ|

14095024c ವಿಶ್ವಾವಸುಶ್ಚ ಯೇ ಚಾನ್ಯೇ ತೇಽಪ್ಯುಪಾಸಂತು ವಃ ಸದಾ||

ಗಂಧರ್ವ ಕಿನ್ನರರೊಡನೆ ದಿವ್ಯ ಅಪ್ಸರೆಯರ ಸಂಘಗಳೂ, ವಿಶ್ವಾವಸುವೂ ಮತ್ತು ಅನ್ಯರೂ ಸದಾ ನಮ್ಮನ್ನು ಉಪಾಸಿಸಲಿ.

14095025a ಉತ್ತರೇಭ್ಯಃ ಕುರುಭ್ಯಶ್ಚ ಯತ್ಕಿಂ ಚಿದ್ವಸು ವಿದ್ಯತೇ|

14095025c ಸರ್ವಂ ತದಿಹ ಯಜ್ಞೇ ಮೇ ಸ್ವಯಮೇವೋಪತಿಷ್ಠತು|

14095025e ಸ್ವರ್ಗಂ ಸ್ವರ್ಗಸದಶ್ಚೈವ ಧರ್ಮಶ್ಚ ಸ್ವಯಮೇವ ತು||

ಉತ್ತರ ಕುರುಗಳಲ್ಲಿ ಯಾವ ಐಶ್ವರ್ಯವಿರುವುದೋ ಅವೆಲ್ಲವೂ ಸ್ವಯಂ ತಾವಾಗಿಯೇ ನನ್ನ ಈ ಯಜ್ಞಕ್ಕೆ ಬರಲಿ! ಸ್ವರ್ಗ, ಸ್ವರ್ಗದಲ್ಲಿರುವ ಸದಸ್ಯರು ಮತ್ತು ಧರ್ಮ ಇವರು ಸ್ವಯಂ ತಾವಾಗಿಯೇ ಇಲ್ಲಿಗೆ ಬರಲಿ!”

14095026a ಇತ್ಯುಕ್ತೇ ಸರ್ವಮೇವೈತದಭವತ್ತಸ್ಯ ಧೀಮತಃ|

14095026c ತತಸ್ತೇ ಮುನಯೋ ದೃಷ್ಟ್ವಾ ಮುನೇಸ್ತಸ್ಯ ತಪೋಬಲಮ್|

14095026e ವಿಸ್ಮಿತಾ ವಚನಂ ಪ್ರಾಹುರಿದಂ ಸರ್ವೇ ಮಹಾರ್ಥವತ್||

ಆ ಧೀಮಂತನು ಹೀಗೆ ಹೇಳುತ್ತಲೇ ಸರ್ವವೂ ಹಾಗೆಯೇ ಆಯಿತು. ಮುನಿಯ ತಪೋಬಲವನ್ನು ನೋಡಿ ವಿಸ್ಮಿತರಾಗಿ ಆ ಎಲ್ಲ ಮುನಿಗಳೂ ಮಹಾ ಅರ್ಥವತ್ತಾದ ಈ ಮಾತನ್ನಾಡಿದರು:

14095027a ಪ್ರೀತಾಃ ಸ್ಮ ತವ ವಾಕ್ಯೇನ ನ ತ್ವಿಚ್ಚಾಮಸ್ತಪೋವ್ಯಯಮ್|

14095027c ಸ್ವೈರೇವ ಯಜ್ಞೈಸ್ತುಷ್ಟಾಃ ಸ್ಮೋ ನ್ಯಾಯೇನೇಚ್ಚಾಮಹೇ ವಯಮ್||

“ನಿನ್ನ ಮಾತಿನಿಂದ ನಾವು ಸುಪ್ರೀತರಾಗಿದ್ದೇವೆ. ಆದರೆ ನಿನ್ನ ತಪಸ್ಸನ್ನು ವ್ಯರ್ಥಗೊಳಿಸಲು ಬಯಸುವುದಿಲ್ಲ. ನಿನ್ನ ಈ ಯಜ್ಞಗಳಿಂದಲೇ ನಾವು ಸಂತುಷ್ಟರಾಗಿದ್ದೇವೆ. ನ್ಯಾಯದಿಂದ ಸಂಪಾದಿಸಿದ ಅನ್ನವನ್ನೇ ಸೇವಿಸಲು ಬಯಸುತ್ತೇವೆ.

14095028a ಯಜ್ಞಾನ್ದೀಕ್ಷಾಸ್ತಥಾ ಹೋಮಾನ್ಯಚ್ಚಾನ್ಯಮೃಗಯಾಮಹೇ|

14095028c ತನ್ನೋಽಸ್ತು ಸ್ವಕೃತೈರ್ಯಜ್ಞೈರ್ನಾನ್ಯತೋ ಮೃಗಯಾಮಹೇ||

ಯಜ್ಞ, ದೀಕ್ಷೆ, ಹೋಮ ಮತ್ತು ನಾವು ಅಪೇಕ್ಷಿಸಿದ ಎಲ್ಲವೂ ಇಲ್ಲಿ ದೊರಕುತ್ತಿದೆ. ಸ್ವಕೃತ ಯಜ್ಞದಿಂದಲ್ಲದೇ ಬೇರೆ ಯಾವುದನ್ನೂ ನಾವು ಬಯಸುವುದಿಲ್ಲ.

14095029a ನ್ಯಾಯೇನೋಪಾರ್ಜಿತಾಹಾರಾಃ ಸ್ವಕರ್ಮನಿರತಾ ವಯಮ್|

14095029c ವೇದಾಂಶ್ಚ ಬ್ರಹ್ಮಚರ್ಯೇಣ ನ್ಯಾಯತಃ ಪ್ರಾರ್ಥಯಾಮಹೇ||

ನ್ಯಾಯದಿಂದ ಪಡೆದ ಆಹಾರವನ್ನೇ ಸೇವಿಸಿ ಸ್ವಕರ್ಮಗಳಲ್ಲಿ ನಾವು ನಿರತರಾಗಿರುತ್ತೇವೆ. ಬ್ರಹ್ಮಚರ್ಯವನ್ನಾಚರಿಸಿ ನ್ಯಾಯರೀತಿಯಲ್ಲಿ ನಾವು ವೇದಾಧ್ಯಯನ ಮಾಡಿದೆವು.

14095030a ನ್ಯಾಯೇನೋತ್ತರಕಾಲಂ ಚ ಗೃಹೇಭ್ಯೋ ನಿಃಸೃತಾ ವಯಮ್|

14095030c ಧರ್ಮದೃಷ್ಟೈರ್ವಿಧಿದ್ವಾರೈಸ್ತಪಸ್ತಪ್ಸ್ಯಾಮಹೇ ವಯಮ್||

ನಂತರ ನ್ಯಾಯರೀತಿಯಲ್ಲಿ ನಾವು ಗೃಹಸ್ಥಾಶ್ರಮವನ್ನೂ ಪಾಲಿಸಿದೆವು. ಈಗ ಧರ್ಮದೃಷ್ಟವಾದ ವಿಧಿವತ್ತಾದ ತಪಸ್ಸನ್ನು ನಾವು ತಪಿಸುತ್ತಿದ್ದೇವೆ.

14095031a ಭವತಃ ಸಮ್ಯಗೇಷಾ ಹಿ ಬುದ್ಧಿರ್ಹಿಂಸಾವಿವರ್ಜಿತಾ|

14095031c ಏತಾಮಹಿಂಸಾಂ ಯಜ್ಞೇಷು ಬ್ರೂಯಾಸ್ತ್ವಂ ಸತತಂ ಪ್ರಭೋ||

ಪ್ರಭೋ! ಹಿಂಸಾವರ್ಜಿತವಾದ ನಿನ್ನ ಈ ಬುದ್ಧಿಯು ನಮಗೆ ಬಹಳ ಪ್ರಿಯವಾಗಿದೆ. ಯಜ್ಞಗಳಲ್ಲಿ ಈ ಅಹಿಂಸೆಯನ್ನೇ ನೀನು ಸತತವಾಗಿ ಪ್ರತಿಪಾದಿಸುವೆ.

14095032a ಪ್ರೀತಾಸ್ತತೋ ಭವಿಷ್ಯಾಮೋ ವಯಂ ದ್ವಿಜವರೋತ್ತಮ|

14095032c ವಿಸರ್ಜಿತಾಃ ಸಮಾಪ್ತೌ ಚ ಸತ್ರಾದಸ್ಮಾದ್ವ್ರಜಾಮಹೇ||

ದ್ವಿಜವರೋತ್ತಮ! ಇದರಿಂದ ನಮಗೆ ಹೆಚ್ಚಿನ ಸಂತೋಷವುಂಟಾಗುತ್ತದೆ. ಯಜ್ಞವು ಸಮಾಪ್ತವಾದ ನಂತರ ನಿನ್ನಿಂದ ಬೀಳ್ಕೊಂಡು ನಾವು ಹೊರಡುತ್ತೇವೆ.””

14095033 ವೈಶಂಪಾಯನ ಉವಾಚ

14095033a ತಥಾ ಕಥಯತಾಮೇವ ದೇವರಾಜಃ ಪುರಂದರಃ|

14095033c ವವರ್ಷ ಸುಮಹಾತೇಜಾ ದೃಷ್ಟ್ವಾ ತಸ್ಯ ತಪೋಬಲಮ್||

ವೈಶಂಪಾಯನನು ಹೇಳಿದನು: “ಅವರು ಹಾಗೆ ಹೇಳುತ್ತಿರಲು ಮಹಾತೇಜಸ್ವೀ ಪುರಂದರ ದೇವರಾಜನು ಅಗಸ್ತ್ಯನ ತಪೋಬಲವನ್ನು ನೋಡಿ ಮಳೆಯನ್ನು ಸುರಿಸಿದನು.

14095034a ಅಸಮಾಪ್ತೌ ಚ ಯಜ್ಞಸ್ಯ ತಸ್ಯಾಮಿತಪರಾಕ್ರಮಃ|

14095034c ನಿಕಾಮವರ್ಷೀ ದೇವೇಂದ್ರೋ ಬಭೂವ ಜನಮೇಜಯ||

ಜನಮೇಜಯ! ಅಮಿತಪರಾಕ್ರಮಿ ದೇವೇಂದ್ರನು ಆ ಯಜ್ಞವು ಸಮಾಪ್ತಿಯಾಗುವ ವರೆಗೂ ಕೇಳಿದಷ್ಟು ಮಳೆಯನ್ನು ಸುರಿಸುತ್ತಿದ್ದನು.

14095035a ಪ್ರಸಾದಯಾಮಾಸ ಚ ತಮಗಸ್ತ್ಯಂ ತ್ರಿದಶೇಶ್ವರಃ|

14095035c ಸ್ವಯಮಭ್ಯೇತ್ಯ ರಾಜರ್ಷೇ ಪುರಸ್ಕೃತ್ಯ ಬೃಹಸ್ಪತಿಮ್||

ರಾಜರ್ಷೇ! ಸ್ವಯಂ ತ್ರಿದಶೇಶ್ವರನು ಬೃಹಸ್ಪತಿಯನ್ನು ಮುಂದೆಮಾಡಿಕೊಂಡು ಅಲ್ಲಿಗೆ ಆಗಮಿಸಿ ಅಗಸ್ತ್ಯನನ್ನು ಪ್ರಸನ್ನಗೊಳಿಸಿದನು.

14095036a ತತೋ ಯಜ್ಞಸಮಾಪ್ತೌ ತಾನ್ ವಿಸಸರ್ಜ ಮಹಾಮುನೀನ್|

14095036c ಅಗಸ್ತ್ಯಃ ಪರಮಪ್ರೀತಃ ಪೂಜಯಿತ್ವಾ ಯಥಾವಿಧಿ||

ಆ ಯಜ್ಞವು ಸಮಾಪ್ತವಾಗಲು ಪರಮಪ್ರೀತನಾದ ಅಗಸ್ತ್ಯನು ಆ ಮಹಾಮುನಿಗಳನ್ನು ಯಥಾವಿಧಿಯಾಗಿ ಪೂಜಿಸಿ ಕಳುಹಿಸಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ನಕುಲೋಪಾಖ್ಯಾನೇ ಪಂಚನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ನಕುಲೋಪಾಖ್ಯಾನ ಎನ್ನುವ ತೊಂಭತ್ತೈದನೇ ಅಧ್ಯಾಯವು.

[1] ಇತರರು ಆಹಾರವು ಬೇಕೇ ಎಂದು ಕೇಳಿ ಕೊಟ್ಟದ್ದನ್ನು ಮಾತ್ರ ತಿನ್ನುವವರು.

[2] ಯಜ್ಞಶಿಷ್ಟವಾದ ಅನ್ನವನ್ನು ಮಾತ್ರ ತಿನ್ನುವವರು.

Comments are closed.