Ashvamedhika Parva: Chapter 83

ಅಶ್ವಮೇಧಿಕ ಪರ್ವ

೮೩

ಜರಾಸಂಧನ ಮಗ ಮೇಘಸಂಧಿಯು ಕುದುರೆಯನ್ನು ಕಟ್ಟಿ ಅರ್ಜುನನೊಂದಿಗೆ ಯುದ್ಧಮಾಡಿದುದು (೧-೨೨). ಪರಾಜಿತನಾದ ಮಾಗಧನನ್ನು ಅರ್ಜುನನು ಯಜ್ಞಕ್ಕೆ ಆಹ್ವಾನಿಸಿ, ಕುದುರೆಯನ್ನನ್ನುಸರಿಸಿ ಮುಂದುವರೆದುದು (೨೩-೩೦).

14083001 ವೈಶಂಪಾಯನ ಉವಾಚ

14083001a ಸ ತು ವಾಜೀ ಸಮುದ್ರಾಂತಾಂ ಪರ್ಯೇತ್ಯ ಪೃಥಿವೀಮಿಮಾಮ್|

14083001c ನಿವೃತ್ತೋಽಭಿಮುಖೋ ರಾಜನ್ಯೇನ ನಾಗಾಹ್ವಯಂ ಪುರಮ್||

ವೈಶಂಪಾಯನನು ಹೇಳಿದನು: “ರಾಜನ್! ಆ ಕುದುರೆಯಾದರೋ ಸಮುದ್ರಪರ್ಯಂತವಾಗಿ ಇಡೀ ಭೂಮಿಯನ್ನು ಸಂಚರಿಸಿ, ಹಿಂದಿರುಗಿ ಹಸ್ತಿನಾಪುರಕ್ಕೆ ಅಭಿಮುಖವಾಗಿ ಹೊರಟಿತು.

14083002a ಅನುಗಚ್ಚಂಶ್ಚ ತೇಜಸ್ವೀ ನಿವೃತ್ತೋಽಥ ಕಿರೀಟಭೃತ್|

14083002c ಯದೃಚ್ಚಯಾ ಸಮಾಪೇದೇ ಪುರಂ ರಾಜಗೃಹಂ ತದಾ||

ಕಿರೀಟ ಧಾರೀ ತೇಜಸ್ವೀ ಅರ್ಜುನನೂ ಕೂಡ ಅದನ್ನು ಹಿಂಬಾಲಿಸಿಯೇ ಹೋಗುತ್ತಿದ್ದನು. ಆಗ ಅದು ದೈವೇಚ್ಛೆಯಂತೆ ರಾಜಗೃಹ ಪುರವನ್ನು ತಲುಪಿತು.

14083003a ತಮಭ್ಯಾಶಗತಂ ರಾಜಾ ಜರಾಸಂಧಾತ್ಮಜಾತ್ಮಜಃ|

14083003c ಕ್ಷತ್ರಧರ್ಮೇ ಸ್ಥಿತೋ ವೀರಃ ಸಮರಾಯಾಜುಹಾವ ಹ||

ಕ್ಷತ್ರಧರ್ಮನಿರತನಾಗಿದ್ದ ವೀರ ಜರಾಸಂಧನ ಮೊಮ್ಮಗನು[1] ಅದನ್ನು ಕಟ್ಟಿ ಯುದ್ಧಕ್ಕೆ ಆಹ್ವಾನಿಸಿದನು.

14083004a ತತಃ ಪುರಾತ್ಸ ನಿಷ್ಕ್ರಮ್ಯ ರಥೀ ಧನ್ವೀ ಶರೀ ತಲೀ|

14083004c ಮೇಘಸಂಧಿಃ ಪದಾತಿಂ ತಂ ಧನಂಜಯಮುಪಾದ್ರವತ್||

ಅನಂತರ ರಥವನ್ನೇರಿ, ಧನುಸ್ಸು-ಶರಗಳನ್ನೂ ಭತ್ತಳಿಕೆಯನ್ನೂ ಹಿಡಿದು ಮೇಘಸಂಧಿಯು ಪುರದಿಂದ ಹೊರಟು ಪದಾತಿಯಾಗಿದ್ದ ಧನಂಜಯನನ್ನು ಆಕ್ರಮಣಿಸಿದನು.

14083005a ಆಸಾದ್ಯ ಚ ಮಹಾತೇಜಾ ಮೇಘಸಂಧಿರ್ಧನಂಜಯಮ್|

14083005c ಬಾಲಭಾವಾನ್ಮಹಾರಾಜ ಪ್ರೋವಾಚೇದಂ ನ ಕೌಶಲಾತ್||

ಮಹಾರಾಜ! ಮಹಾತೇಜಸ್ವೀ ಮೇಘಸಂಧಿಯು ಧನಂಜಯನ ಬಳಿಸಾರಿ ಕೌಶಲವಿಲ್ಲದ ಬಾಲಭಾವದ ಈ ಮಾತನ್ನಾಡಿದನು:

14083006a ಕಿಮಯಂ ಚಾರ್ಯತೇ ವಾಜೀ ಸ್ತ್ರೀಮಧ್ಯ ಇವ ಭಾರತ|

14083006c ಹಯಮೇನಂ ಹರಿಷ್ಯಾಮಿ ಪ್ರಯತಸ್ವ ವಿಮೋಕ್ಷಣೇ||

“ಭಾರತ! ಇಲ್ಲಿಯ ವರೆಗೆ ಈ ಕುದುರೆಯನ್ನು ಸ್ತ್ರೀಯರ ಮಧ್ಯದಲ್ಲಿ ನಡೆಸಿಕೊಂಡು ಬಂದಿರುವಂತಿದೆ! ಈ ಕುದುರೆಯನ್ನು ನಾನು ಅಪಹರಿಸುತ್ತೇನೆ. ಪ್ರಯತ್ನಪಟ್ಟು ಅದನ್ನು ಬಿಡಿಸಿಕೋ!

14083007a ಅದತ್ತಾನುನಯೋ ಯುದ್ಧೇ ಯದಿ ತ್ವಂ ಪಿತೃಭಿರ್ಮಮ|

14083007c ಕರಿಷ್ಯಾಮಿ ತವಾತಿಥ್ಯಂ ಪ್ರಹರ ಪ್ರಹರಾಮಿ ವಾ||

ನನ್ನ ಪಿತೃಗಳು ಯುದ್ಧದಲ್ಲಿ ನಿನಗೆ ಅನುನಯವಾಗಿ ನಡೆದುಕೊಂಡಿದ್ದಿರಬಹುದು. ನಿನ್ನ ಆತಿಥ್ಯವನ್ನು ನಾನು ಸರಿಯಾಗಿ ಮಾಡುತ್ತೇನೆ. ನನ್ನ ಮೇಲೆ ಪ್ರಹರಿಸು ಅಥವಾ ನಾನು ನಿನ್ನ ಮೇಲೆ ಪ್ರಹರಿಸುತ್ತೇನೆ.”

14083008a ಇತ್ಯುಕ್ತಃ ಪ್ರತ್ಯುವಾಚೈನಂ ಪಾಂಡವಃ ಪ್ರಹಸನ್ನಿವ|

14083008c ವಿಘ್ನಕರ್ತಾ ಮಯಾ ವಾರ್ಯ ಇತಿ ಮೇ ವ್ರತಮಾಹಿತಮ್||

14083009a ಭ್ರಾತ್ರಾ ಜ್ಯೇಷ್ಠೇನ ನೃಪತೇ ತವಾಪಿ ವಿದಿತಂ ಧ್ರುವಮ್|

14083009c ಪ್ರಹರಸ್ವ ಯಥಾಶಕ್ತಿ ನ ಮನ್ಯುರ್ವಿದ್ಯತೇ ಮಮ||

ಇದಕ್ಕೆ ಪ್ರತಿಯಾಗಿ ಪಾಂಡವ ಅರ್ಜುನನು ನಗುತ್ತಿರುವನೋ ಎನ್ನುವಂತೆ ಇಂತೆಂದನು: “ನನ್ನ ಹಿರಿಯಣ್ಣ ನೃಪತಿಯು ಈ ಕುದುರೆಯ ಸಂಚಾರಕ್ಕೆ ವಿಘ್ನವನ್ನುಂಟುಮಾಡುವವರನ್ನು ತಡೆ ಎಂಬ ವ್ರತವನ್ನು ವಹಿಸಿರುವನು. ಇದು ನಿನಗೆ ನಿಶ್ಚಯವಾಗಿಯೂ ತಿಳಿದೇ ಇದೆ. ಯಥಾಶಕ್ತಿಯಾಗಿ ನೀನು ನನ್ನನ್ನು ಪ್ರಹರಿಸು. ನನಗೆ ಕೋಪವಾಗುವುದಿಲ್ಲ!”

14083010a ಇತ್ಯುಕ್ತಃ ಪ್ರಾಹರತ್ಪೂರ್ವಂ ಪಾಂಡವಂ ಮಗಧೇಶ್ವರಃ|

14083010c ಕಿರನ್ಶರಸಹಸ್ರಾಣಿ ವರ್ಷಾಣೀವ ಸಹಸ್ರದೃಕ್||

ಹೀಗೆ ಹೇಳಲು ಮಗಧೇಶ್ವರನು ಮೊದಲು ಪಾಂಡವನ ಮೇಲೆ ಸಹಸ್ರಾಕ್ಷನು ಮಳೆಗರೆಯುವಂತೆ ಸಹಸ್ರ ಶರಗಳ ಮಳೆಯನ್ನು ಸುರಿಸಿದನು.

14083011a ತತೋ ಗಾಂಡೀವಭೃಚ್ಚೂರೋ ಗಾಂಡೀವಪ್ರೇಷಿತೈಃ ಶರೈಃ|

14083011c ಚಕಾರ ಮೋಘಾಂಸ್ತಾನ್ಬಾಣಾನಯತ್ನಾದ್ಭರತರ್ಷಭ||

ಭರತರ್ಷಭ! ಆಗ ಗಾಂಡೀವಧಾರೀ ಶೂರ ಅರ್ಜುನನು ಗಾಂಡೀವದಿಂದ ಬಿಟ್ಟ ಶರಗಳಿಂದ ಸುಲಭವಾಗಿ ಆ ಶರಗಳನ್ನು ನಿರಸನಗೊಳಿಸಿದನು.

14083012a ಸ ಮೋಘಂ ತಸ್ಯ ಬಾಣೌಘಂ ಕೃತ್ವಾ ವಾನರಕೇತನಃ|

14083012c ಶರಾನ್ಮುಮೋಚ ಜ್ವಲಿತಾನ್ದೀಪ್ತಾಸ್ಯಾನಿವ ಪನ್ನಗಾನ್||

14083013a ಧ್ವಜೇ ಪತಾಕಾದಂಡೇಷು ರಥಯಂತ್ರೇ ಹಯೇಷು ಚ|

14083013c ಅನ್ಯೇಷು ಚ ರಥಾಂಗೇಷು ನ ಶರೀರೇ ನ ಸಾರಥೌ||

ಅವನ ಬಾಣಸಂಕೀರ್ಣಗಳನ್ನು ನಿರಸನಗೊಳಿಸಿ ವಾನರಕೇತನನು ಪನ್ನಗಗಳಂತೆ ಪ್ರಜ್ವಲಿಸುವ ಮುಖಗಳುಳ್ಳ ಶರಗಳನ್ನು ಅವನ ಶರೀರ ಮತ್ತು ಸಾರಥಿಗಳನ್ನು ಬಿಟ್ಟು - ಧ್ವಜ, ಪತಾಕದಂಡ, ರಥಯಂತ್ರ, ಅನ್ಯ ರಥಾಂಗಗಳು ಮತ್ತು ಕುದುರೆಗಳ ಮೇಲೆ ಪ್ರಯೋಗಿಸಿದನು.

14083014a ಸಂರಕ್ಷ್ಯಮಾಣಃ ಪಾರ್ಥೇನ ಶರೀರೇ ಫಲ್ಗುನಸ್ಯ ಹ|

14083014c ಮನ್ಯಮಾನಃ ಸ್ವವೀರ್ಯಂ ತನ್ಮಾಗಧಃ ಪ್ರಾಹಿಣೋಚ್ಚರಾನ್||

ಪಾರ್ಥ ಫಲ್ಗುನನು ಅವನ ಶರೀರವನ್ನು ಹಾಗೆ ರಕ್ಷಿಸಲು, ತನ್ನ ವೀರ್ಯವೇ ಇದಕ್ಕೆ ಕಾರಣವೆಂದು ತಿಳಿದ ಮಾಗಧನು ಅವನನ್ನು ಶರಗಳಿಂದ ಪ್ರಹರಿಸಿದನು.

14083015a ತತೋ ಗಾಂಡೀವಭೃಚ್ಚೂರೋ ಮಾಗಧೇನ ಸಮಾಹತಃ|

14083015c ಬಭೌ ವಾಸಂತಿಕ ಇವ ಪಲಾಶಃ ಪುಷ್ಪಿತೋ ಮಹಾನ್||

ಮಾಗಧನಿಂದ ಪ್ರಹರಿಸಲ್ಪಟ್ಟ ಗಾಂಡೀವಧಾರಿ ಶೂರ ಅರ್ಜುನನು ಆಗ ವಸಂತದಲ್ಲಿ ಹೂಬಿಟ್ಟ ದೊಡ್ಡ ಪಲಾಶವೃಕ್ಷದಂತೆ ಶೋಭಿಸಿದನು.

14083016a ಅವಧ್ಯಮಾನಃ ಸೋಽಭ್ಯಘ್ನನ್ಮಾಗಧಃ ಪಾಂಡವರ್ಷಭಮ್|

14083016c ತೇನ ತಸ್ಥೌ ಸ ಕೌರವ್ಯ ಲೋಕವೀರಸ್ಯ ದರ್ಶನೇ||

ವಧಿಸದೇ ಇದ್ದ ಪಾಂಡವರ್ಷಭನನ್ನು ಮಾಗಧನು ಪ್ರಹರಿಸುತ್ತಿದ್ದುದರಿಂದಲೇ ಅವನು ಲೋಕವೀರ ಕೌರವ್ಯನ ಎದಿರು ಅಷ್ಟು ಹೊತ್ತು ಯುದ್ಧಮಾಡಲು ಸಾಧ್ಯವಾಯಿತು.

14083017a ಸವ್ಯಸಾಚೀ ತು ಸಂಕ್ರುದ್ಧೋ ವಿಕೃಷ್ಯ ಬಲವದ್ಧನುಃ|

14083017c ಹಯಾಂಶ್ಚಕಾರ ನಿರ್ದೇಹಾನ್ಸಾರಥೇಶ್ಚ ಶಿರೋಽಹರತ್||

ಸಂಕ್ರುದ್ಧನಾದ ಸವ್ಯಸಾಚಿಯಾದರೋ ಧನುಸ್ಸನ್ನು ಬಲವಾಗಿ ಸೆಳೆದು ಕುದುರೆಗಳನ್ನು ಸಂಹರಿಸಿದನು ಮತ್ತು ಸಾರಥಿಯ ಶಿರವನ್ನು ಅಪಹರಿಸಿದನು.

14083018a ಧನುಶ್ಚಾಸ್ಯ ಮಹಚ್ಚಿತ್ರಂ ಕ್ಷುರೇಣ ಪ್ರಚಕರ್ತ ಹ|

14083018c ಹಸ್ತಾವಾಪಂ ಪತಾಕಾಂ ಚ ಧ್ವಜಂ ಚಾಸ್ಯ ನ್ಯಪಾತಯತ್||

ಕ್ಷುರದಿಂದ ಅವನ ಚಿತ್ರಿತವಾಗಿದ್ದ ಮಹಾ ಧನುಸ್ಸನ್ನೂ ತುಂಡರಿಸಿದನು. ಅವನ ಹಸ್ತಾವಾಪವನ್ನೂ, ಪತಾಕೆ-ಧ್ವಜಗಳನ್ನೂ ಕೆಳಗುರುಳಿಸಿದನು.

14083019a ಸ ರಾಜಾ ವ್ಯಥಿತೋ ವ್ಯಶ್ವೋ ವಿಧನುರ್ಹತಸಾರಥಿಃ|

14083019c ಗದಾಮಾದಾಯ ಕೌಂತೇಯಮಭಿದುದ್ರಾವ ವೇಗವಾನ್||

ಕುದುರೆಗಳನ್ನು, ಧನುಸ್ಸನ್ನೂ ಮತ್ತು ಸಾರಥಿಯನ್ನೂ ಕಳೆದುಕೊಂಡು ವ್ಯಥಿತನಾದ ರಾಜಾ ಮೇಘಸಂಧಿಯು ಗದೆಯನ್ನು ತೆಗೆದುಕೊಂಡು ಅದನ್ನು ವೇಗವಾಗಿ ಕೌಂತೇಯನ ಮೇಲೆ ಪ್ರಹರಿಸಿದನು.

14083020a ತಸ್ಯಾಪತತ ಏವಾಶು ಗದಾಂ ಹೇಮಪರಿಷ್ಕೃತಾಮ್|

14083020c ಶರೈಶ್ಚಕರ್ತ ಬಹುಧಾ ಬಹುಭಿರ್ಗೃಧ್ರವಾಜಿತೈಃ||

ಬೀಳುವುದರೊಳಗೇ ಆ ಹೇಮಪರಿಷ್ಕೃತ ಗದೆಯನ್ನು ಅರ್ಜುನನು ಗೃಧ್ರರೆಕ್ಕೆಗಳುಳ್ಳ ಅನೇಕ ಶರಗಳಿಂದ ಅನೇಕ ಚೂರುಗಳನ್ನಾಗಿ ತುಂಡರಿಸಿದನು.

14083021a ಸಾ ಗದಾ ಶಕಲೀಭೂತಾ ವಿಶೀರ್ಣಮಣಿಬಂಧನಾ|

14083021c ವ್ಯಾಲೀ ನಿರ್ಮುಚ್ಯಮಾನೇವ ಪಪಾತಾಸ್ಯ ಸಹಸ್ರಧಾ||

ಮಣಿಬಂಧನವು ಒಡೆದು ಆ ಗದೆಯು ಸಹಸ್ರ ಚುರುಗಳಾಗಿ ಮುಷ್ಟಿಯಿಂದ ಹೆಣ್ಣುಸರ್ಪವು ನುಸುಳುವಂತೆ ನುಸುಳಿ ಕೆಳಗೆ ಬಿದ್ದಿತು.

14083022a ವಿರಥಂ ತಂ ವಿಧನ್ವಾನಂ ಗದಯಾ ಪರಿವರ್ಜಿತಮ್|

14083022c ನೈಚ್ಚತ್ತಾಡಯಿತುಂ ಧೀಮಾನರ್ಜುನಃ ಸಮರಾಗ್ರಣೀಃ||

ವಿರಥನೂ, ಧನುಸ್ಸು-ಗದೆಗಳಿಂದ ವರ್ಜಿತನೂ ಆಗಿದ್ದ ಅವನನ್ನು ಸಮರಾಗ್ರಣಿ ಧೀಮಾನ್ ಅರ್ಜುನನು ಇನ್ನೂ ಪ್ರಹರಿಸಲು ಇಚ್ಛಿಸಲಿಲ್ಲ.

14083023a ತತ ಏನಂ ವಿಮನಸಂ ಕ್ಷತ್ರಧರ್ಮೇ ಸಮಾಸ್ಥಿತಮ್|

14083023c ಸಾಂತ್ವಪೂರ್ವಮಿದಂ ವಾಕ್ಯಮಬ್ರವೀತ್ಕಪಿಕೇತನಃ||

ಹೀಗೆ ಕ್ಷತ್ರಧರ್ಮದಲ್ಲಿ ನಿರತನಾಗಿದ್ದ ಮತ್ತು ವಿಮನಸ್ಕನಾಗಿದ್ದ ಅವನಿಗೆ ಕಪಿಕೇತನ ಅರ್ಜುನನು ಸಾಂತ್ವಪೂರ್ವಕ ಈ ಮಾತುಗಳನ್ನಾಡಿದನು:

14083024a ಪರ್ಯಾಪ್ತಃ ಕ್ಷತ್ರಧರ್ಮೋಽಯಂ ದರ್ಶಿತಃ ಪುತ್ರ ಗಮ್ಯತಾಮ್|

14083024c ಬಹ್ವೇತತ್ಸಮರೇ ಕರ್ಮ ತವ ಬಾಲಸ್ಯ ಪಾರ್ಥಿವ||

“ಮಗೂ ಪಾರ್ಥಿವ! ನೀನು ಕ್ಷತ್ರಧರ್ಮವನ್ನು ಸಾಕಷ್ಟು ಪ್ರದರ್ಶಿಸಿರುವೆ! ಬಾಲಕನಾದ ನೀನು ಸಮರದಲ್ಲಿ ಅನೇಕ ಕರ್ಮಗಳನ್ನೆಸಗಿರುವೆ! ಹಿಂದಿರುಗು!

14083025a ಯುಧಿಷ್ಠಿರಸ್ಯ ಸಂದೇಶೋ ನ ಹಂತವ್ಯಾ ನೃಪಾ ಇತಿ|

14083025c ತೇನ ಜೀವಸಿ ರಾಜಂಸ್ತ್ವಮಪರಾದ್ಧೋಽಪಿ ಮೇ ರಣೇ||

ರಾಜನ್! ನೃಪರನ್ನು ಸಂಹರಿಸಬಾರದೆಂದು ಯುಧಿಷ್ಠಿರನ ಸಂದೇಶವಾಗಿದೆ. ಆದುದರಿಂದ ರಣದಲ್ಲಿ ನೀನು ಅಪರಾಧವನ್ನೆಸಗಿದ್ದರೂ ಜೀವದಿಂದ ಉಳಿದುಕೊಂಡಿರುವೆ!”

14083026a ಇತಿ ಮತ್ವಾ ಸ ಚಾತ್ಮಾನಂ ಪ್ರತ್ಯಾದಿಷ್ಟಂ ಸ್ಮ ಮಾಗಧಃ|

14083026c ತಥ್ಯಮಿತ್ಯವಗಮ್ಯೈನಂ ಪ್ರಾಂಜಲಿಃ ಪ್ರತ್ಯಪೂಜಯತ್||

ಆಗ ಮಾಗಧನು ತಾನು ಅರ್ಜುನನಿಂದ ನಿರಾಕೃತನಾದನೆಂದು ತಿಳಿದು ಅವನ ಮಾತನ್ನು ಸತ್ಯವೆಂದು ಸ್ವೀಕರಿಸಿ, ಅವನನ್ನು ಅಂಜಲೀಬದ್ಧನಾಗಿ ಪೂಜಿಸಿದನು.

14083027a ತಮರ್ಜುನಃ ಸಮಾಶ್ವಾಸ್ಯ ಪುನರೇವೇದಮಬ್ರವೀತ್|

14083027c ಆಗಂತವ್ಯಂ ಪರಾಂ ಚೈತ್ರೀಮಶ್ವಮೇಧೇ ನೃಪಸ್ಯ ನಃ||

ಅರ್ಜುನನು ಅವನನ್ನು ಸಮಾಧಾನಗೊಳಿಸಿ ಪುನಃ ಇದನ್ನು ಹೇಳಿದನು: “ಬರುವ ಚೈತ್ರದಲ್ಲಿ ನೃಪನ ಅಶ್ವಮೇಧಕ್ಕೆ ನೀನು ಬರಬೇಕು!”

14083028a ಇತ್ಯುಕ್ತಃ ಸ ತಥೇತ್ಯುಕ್ತ್ವಾ ಪೂಜಯಾಮಾಸ ತಂ ಹಯಮ್|

14083028c ಫಲ್ಗುನಂ ಚ ಯುಧಾಂ ಶ್ರೇಷ್ಠಂ ವಿಧಿವತ್ಸಹದೇವಜಃ||

ಇದಕ್ಕೆ ಹಾಗೆಯೇ ಆಗಲಿ ಎಂದು ಹೇಳಿ ಸಹದೇವನ ಮಗ ಮೇಘಸಂಧಿಯು ಆ ಕುದುರೆಯನ್ನು ಮತ್ತು ಯೋಧಶ್ರೇಷ್ಠ ಫಲ್ಗುನನನ್ನು ವಿಧಿವತ್ತಾಗಿ ಪೂಜಿಸಿದನು.

14083029a ತತೋ ಯಥೇಷ್ಟಮಗಮತ್ಪುನರೇವ ಸ ಕೇಸರೀ|

14083029c ತತಃ ಸಮುದ್ರತೀರೇಣ ವಂಗಾನ್ಪುಂಡ್ರಾನ್ಸಕೇರಲಾನ್||

14083030a ತತ್ರ ತತ್ರ ಚ ಭೂರೀಣಿ ಮ್ಲೇಚ್ಚಸೈನ್ಯಾನ್ಯನೇಕಶಃ|

14083030c ವಿಜಿಗ್ಯೇ ಧನುಷಾ ರಾಜನ್ಗಾಂಡೀವೇನ ಧನಂಜಯಃ||

ಅನಂತರ ಆ ಕುದುರೆಯು ಯಥೇಚ್ಛವಾಗಿ ಪುನಃ ಸಂಚರಿಸತೊಡಗಿತು. ಸಮುದ್ರತೀರದಲ್ಲಿಯೇ ಮುಂದೆ ಹೋಗಿ ವಂಗ-ಪುಂಡ್ರ-ಕೇರಳಗಳಿಗೆ ಸಂಚರಿಸಿತು. ರಾಜನ್! ಅಲ್ಲಲ್ಲಿ ಅನೇಕ ಮ್ಲೇಚ್ಛ ಸೇನೆಗಳನ್ನು ಧನಂಜಯನು ತನ್ನ ಗಾಂಡೀವ ಧನುಸ್ಸಿನಿಂದ ಗೆದ್ದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ಮಾಗಧಪರಾಜಯೇ ತ್ರ್ಯಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣೇ ಮಾಗಧಪರಾಜಯ ಎನ್ನುವ ಎಂಭತ್ಮೂರನೇ ಅಧ್ಯಾಯವು.

[1] ಜರಾಸಂಧನ ಮಗ ಸಹದೇವನ ಮಗ ಮೇಘಸಂಧಿ.

Comments are closed.