ಅಶ್ವಮೇಧಿಕ ಪರ್ವ
೭೨
ಅರ್ಜುನನು ಯಾಗಾಶ್ವವನ್ನು ಅನುಸರಿಸಿ ಹೋದುದು (೧-೧೮). ಅಶ್ವವು ಪೃಥ್ವಿಯಲ್ಲಿ ಸಂಚರಿಸಿದುದು (೧೯-೨೭).
14072001 ವೈಶಂಪಾಯನ ಉವಾಚ
14072001a ದೀಕ್ಷಾಕಾಲೇ ತು ಸಂಪ್ರಾಪ್ತೇ ತತಸ್ತೇ ಸುಮಹರ್ತ್ವಿಜಃ|
14072001c ವಿಧಿವದ್ದೀಕ್ಷಯಾಮಾಸುರಶ್ವಮೇಧಾಯ ಪಾರ್ಥಿವಮ್||
ವೈಶಂಪಾಯನನು ಹೇಳಿದನು: “ದೀಕ್ಷಾಕಾಲವು ಬಂದೊದಗಿದಾಗ ಆ ಮಹಾ ಋತ್ವಿಜರು ಪಾರ್ಥಿವನಿಗೆ ವಿಧಿವತ್ತಾಗಿ ಅಶ್ವಮೇಧದ ದೀಕ್ಷೆಯನ್ನು ನೀಡಿದರು.
14072002a ಕೃತ್ವಾ ಸ ಪಶುಬಂಧಾಂಶ್ಚ ದೀಕ್ಷಿತಃ ಪಾಂಡುನಂದನಃ|
14072002c ಧರ್ಮರಾಜೋ ಮಹಾತೇಜಾಃ ಸಹರ್ತ್ವಿಗ್ಭಿರ್ವ್ಯರೋಚತ||
ಪಶುಬಂಧಗಳನ್ನೂ ಮಾಡಿ ದೀಕ್ಷಿತ ಪಾಂಡುನಂದನ ಮಹಾತೇಜಸ್ವಿ ಧರ್ಮರಾಜನು ಋತ್ವಿಗರೊಂದಿಗೆ ಶೋಭಿಸಿದನು.
14072003a ಹಯಶ್ಚ ಹಯಮೇಧಾರ್ಥಂ ಸ್ವಯಂ ಸ ಬ್ರಹ್ಮವಾದಿನಾ|
14072003c ಉತ್ಸೃಷ್ಟಃ ಶಾಸ್ತ್ರವಿಧಿನಾ ವ್ಯಾಸೇನಾಮಿತತೇಜಸಾ||
ಅಶ್ವಮೇಧದ ಕುದುರೆಯನ್ನು ಸ್ವಯಂ ಬ್ರಹ್ಮವಾದೀ ಅಮಿತತೇಜಸ್ವೀ ವ್ಯಾಸನೇ ಶಾಸ್ತ್ರವಿಧಿಗಳಂತೆ ಬಿಟ್ಟನು.
14072004a ಸ ರಾಜಾ ಧರ್ಮಜೋ ರಾಜನ್ದೀಕ್ಷಿತೋ ವಿಬಭೌ ತದಾ|
14072004c ಹೇಮಮಾಲೀ ರುಕ್ಮಕಂಠಃ ಪ್ರದೀಪ್ತ ಇವ ಪಾವಕಃ||
ಆಗ ದೀಕ್ಷಿತನಾಗಿದ್ದ ರಾಜಾ ಧರ್ಮರಾಜನು ಚಿನ್ನದ ಹಾರಗಳನ್ನು ಧರಿಸಿ, ಸುವರ್ಣಕಂಠನಾಗಿ ಪ್ರಜ್ವಲಿಸುತ್ತಿರುವ ಅಗ್ನಿಯಂತೆಯೇ ಕಾಣುತ್ತಿದ್ದನು.
14072005a ಕೃಷ್ಣಾಜಿನೀ ದಂಡಪಾಣಿಃ ಕ್ಷೌಮವಾಸಾಃ ಸ ಧರ್ಮಜಃ|
14072005c ವಿಬಭೌ ದ್ಯುತಿಮಾನ್ಭೂಯಃ ಪ್ರಜಾಪತಿರಿವಾಧ್ವರೇ||
ರೇಷ್ಮೆಯ ವಸ್ತ್ರವನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ದಂಡಪಾಣಿಯಾಗಿದ್ದ ದ್ಯುತಿಮಾನ್ ಧರ್ಮಜನು ಆಗ ಅಧ್ವರದಲ್ಲಿದ್ದ ಪ್ರಜಾಪತಿಯಂತೆಯೇ ಶೋಭಿಸಿದನು.
14072006a ತಥೈವಾಸ್ಯರ್ತ್ವಿಜಃ ಸರ್ವೇ ತುಲ್ಯವೇಷಾ ವಿಶಾಂ ಪತೇ|
14072006c ಬಭೂವುರರ್ಜುನಶ್ಚೈವ ಪ್ರದೀಪ್ತ ಇವ ಪಾವಕಃ||
ವಿಶಾಂಪತೇ! ಅದೇ ವೇಷಧಾರಣೆ ಮಾಡಿದ್ದ ಋತ್ವಿಜರೆಲ್ಲರೂ ಮತ್ತು ಅರ್ಜುನನೂ ಕೂಡ ಪ್ರಜ್ವಲಿಸುತ್ತಿರುವ ಅಗ್ನಿಯಂತೆ ಶೋಭಿಸುತ್ತಿದ್ದರು.
14072007a ಶ್ವೇತಾಶ್ವಃ ಕೃಷ್ಣಸಾರಂ ತಂ ಸಸಾರಾಶ್ವಂ ಧನಂಜಯಃ|
14072007c ವಿಧಿವತ್ಪೃಥಿವೀಪಾಲ ಧರ್ಮರಾಜಸ್ಯ ಶಾಸನಾತ್||
ಪೃಥ್ವಿಪಾಲ! ಧರ್ಮರಾಜನ ಶಾಸನದಂತೆ ಶ್ವೇತಾಶ್ವ ಧನಂಜಯನು ಕೃಷ್ಣವರ್ಣದ ಆ ಯಜ್ಞಾಶ್ವವನ್ನು ವಿಧಿವತ್ತಾಗಿ ಅನುಸರಿಸಿ ಹೋದನು.
14072008a ವಿಕ್ಷಿಪನ್ಗಾಂಡಿವಂ ರಾಜನ್ಬದ್ಧಗೋಧಾಂಗುಲಿತ್ರವಾನ್|
14072008c ತಮಶ್ವಂ ಪೃಥಿವೀಪಾಲ ಮುದಾ ಯುಕ್ತಃ ಸಸಾರ ಹ||
ರಾಜನ್! ಗೋಧಾಂಗುಲಿಗಳನ್ನು ಕಟ್ಟಿಕೊಂಡು ಅವನು ಗಾಂಡೀವವನ್ನು ಟೇಂಕರಿಸುತ್ತಾ ಸಂತೋಷದಿಂದ ಆ ಅಶ್ವವನ್ನು ಹಿಂಬಾಲಿಸಿ ಹೋದನು.
14072009a ಆಕುಮಾರಂ ತದಾ ರಾಜನ್ನಾಗಮತ್ತತ್ಪುರಂ ವಿಭೋ|
14072009c ದ್ರಷ್ಟುಕಾಮಂ ಕುರುಶ್ರೇಷ್ಠಂ ಪ್ರಯಾಸ್ಯಂತಂ ಧನಂಜಯಮ್||
ರಾಜನ್! ವಿಭೋ! ಕುಮಾರರಿಂದ ಹಿಡಿದು ಎಲ್ಲರೂ ಪ್ರಯಾಣಕ್ಕೆ ಹೊರಟಿದ್ದ ಆ ಕುರುಶ್ರೇಷ್ಠ ಧನಂಜಯನನ್ನು ನೋಡಲು ಪುರಕ್ಕೆ ಆಗಮಿಸಿದ್ದರು.
14072010a ತೇಷಾಮನ್ಯೋನ್ಯಸಂಮರ್ದಾದೂಷ್ಮೇವ ಸಮಜಾಯತ|
14072010c ದಿದೃಕ್ಷೂಣಾಂ ಹಯಂ ತಂ ಚ ತಂ ಚೈವ ಹಯಸಾರಿಣಮ್||
ಕುರೆಯನ್ನೂ ಮತ್ತು ಕುದುರೆಯನ್ನು ಅನುಸರಿಸಿಹೋಗುತ್ತಿದ್ದವರನ್ನೂ ನೋಡಲು ಬಂದ ಅವರ ಅನ್ಯೋನ್ಯ ನುಗ್ಗಾಟದಿಂದ ಎಲ್ಲರ ಮುಖಗಳಲ್ಲಿಯೂ ಬೆವರು ಸುರಿದು ಸೆಖೆಯುಂಟಾಯಿತು.
14072011a ತತಃ ಶಬ್ದೋ ಮಹಾರಾಜ ದಶಾಶಾಃ ಪ್ರತಿಪೂರಯನ್|
14072011c ಬಭೂವ ಪ್ರೇಕ್ಷತಾಂ ನೃಣಾಂ ಕುಂತೀಪುತ್ರಂ ಧನಂಜಯಮ್||
ಮಹಾರಾಜ! ಆಗ ಕುಂತೀಪುತ್ರ ಧನಂಜಯನನ್ನು ನೋಡಲು ಬಂದಿದ್ದ ಜನರ ಕೂಗು ಹತ್ತು ದಿಕ್ಕುಗಳನ್ನೂ ತುಂಬಿತು.
14072012a ಏಷ ಗಚ್ಚತಿ ಕೌಂತೇಯಸ್ತುರಗಶ್ಚೈವ ದೀಪ್ತಿಮಾನ್|
14072012c ಯಮನ್ವೇತಿ ಮಹಾಬಾಹುಃ ಸಂಸ್ಪೃಶನ್ಧನುರುತ್ತಮಮ್||
“ಇಗೋ! ದೀಪ್ತಿಮಾನ್ ಮಹಾಬಾಹು ಕೌಂತೇಯನು ಉತ್ತಮ ಧನುಸ್ಸನ್ನು ಸೆಳೆಯುತ್ತಾ ತುರಗವನ್ನು ಹಿಂಬಾಲಿಸಿ ಹೋಗುತ್ತಿದ್ದಾನೆ!”
14072013a ಏವಂ ಶುಶ್ರಾವ ವದತಾಂ ಗಿರೋ ಜಿಷ್ಣುರುದಾರಧೀಃ|
14072013c ಸ್ವಸ್ತಿ ತೇಽಸ್ತು ವ್ರಜಾರಿಷ್ಟಂ ಪುನಶ್ಚೈಹೀತಿ ಭಾರತ||
ಉದಾರಬುದ್ಧಿ ಜಿಷ್ಣುವಿಗೆ “ಭಾರತ! ನಿನಗೆ ಮಂಗಳವಾಗಲಿ! ನಿನ್ನ ಪ್ರಯಾಣವು ಸುಖಕರವಾಗಲಿ! ಕ್ಷೇಮದಿಂದ ಹಿಂದಿರುಗಿ ಬಾ!” ಎಂದು ಕೂಗಿ ಹೇಳುತ್ತಿದ್ದುದು ಕೇಳಿಬರುತ್ತಿತ್ತು.
14072014a ಅಥಾಪರೇ ಮನುಷ್ಯೇಂದ್ರ ಪುರುಷಾ ವಾಕ್ಯಮಬ್ರುವನ್|
14072014c ನೈನಂ ಪಶ್ಯಾಮ ಸಂಮರ್ದೇ ಧನುರೇತತ್ಪ್ರದೃಶ್ಯತೇ||
14072015a ಏತದ್ಧಿ ಭೀಮನಿರ್ಹ್ರಾದಂ ವಿಶ್ರುತಂ ಗಾಂಡಿವಂ ಧನುಃ|
14072015c ಸ್ವಸ್ತಿ ಗಚ್ಚತ್ವರಿಷ್ಟಂ ವೈ ಪಂಥಾನಮಕುತೋಭಯಮ್|
14072015e ನಿವೃತ್ತಮೇನಂ ದ್ರಕ್ಷ್ಯಾಮಃ ಪುನರೇವಂ ಚ ತೇಽಬ್ರುವನ್||
ಮನುಷ್ಯೇಂದ್ರ! ಇನ್ನು ಇತರ ಜನರು “ಈ ಜನಜಂಗುಳಿಯಲ್ಲಿ ಅರ್ಜುನನಾಗಲೀ ಅವನ ಧನುಸ್ಸಾಗಲೀ ಕಾಣುತ್ತಿಲ್ಲ! ಭಯಂಕರ ಶಬ್ಧಮಾಡುವ ವಿಶೃತ ಗಾಂಡೀವ ಧನುಸ್ಸೇ ಇದು! ಅವನಿಗೆ ಮಂಗಳವಾಗಲಿ! ಅವನ ಪ್ರಯಾಣವು ನಿರ್ಭಯವಾಗಿರಲಿ! ಕ್ಷೇಮದಿಂದ ಇವನು ಹಿಂದಿರುಗುವುದು ನಿಶ್ಚಯ! ಆಗ ಅವನನ್ನು ಪುನಃ ನೋಡುತ್ತೇವೆ!” ಎಂದು ಅಂದುಕೊಂಡರು.
14072016a ಏವಮಾದ್ಯಾ ಮನುಷ್ಯಾಣಾಂ ಸ್ತ್ರೀಣಾಂ ಚ ಭರತರ್ಷಭ|
14072016c ಶುಶ್ರಾವ ಮಧುರಾ ವಾಚಃ ಪುನಃ ಪುನರುದೀರಿತಾಃ||
ಭರತರ್ಷಭ! ಈ ರೀತಿಯ ಪುರುಷ-ಸ್ತ್ರೀಯರ ಮಧುರ ಮಾತುಗಳನ್ನು ಪುನಃ ಪುನಃ ಅರ್ಜುನನು ಕೇಳಿಸಿಕೊಂಡನು.
14072017a ಯಾಜ್ಞವಲ್ಕ್ಯಸ್ಯ ಶಿಷ್ಯಶ್ಚ ಕುಶಲೋ ಯಜ್ಞಕರ್ಮಣಿ|
14072017c ಪ್ರಾಯಾತ್ಪಾರ್ಥೇನ ಸಹಿತಃ ಶಾಂತ್ಯರ್ಥಂ ವೇದಪಾರಗಃ||
ಯಜ್ಞಕರ್ಮಗಳಲ್ಲಿ ಕುಶಲನಾದ ಯಾಜ್ಞವಲ್ಕ್ಯನ ವೇದಪಾರಗ ಶಿಷ್ಯನೋರ್ವನು ಶಾಂತಿಗಾಗಿ ಪಾರ್ಥನ ಜೊತೆ ಹೊರಟನು.
14072018a ಬ್ರಾಹ್ಮಣಾಶ್ಚ ಮಹೀಪಾಲ ಬಹವೋ ವೇದಪಾರಗಾಃ|
14072018c ಅನುಜಗ್ಮುರ್ಮಹಾತ್ಮಾನಂ ಕ್ಷತ್ರಿಯಾಶ್ಚ ವಿಶೋಽಪಿ ಚ||
ಮಹೀಪಾಲ! ಅನೇಕ ವೇದಪಾರಗ ಬ್ರಾಹ್ಮಣರೂ ಕ್ಷತ್ರಿಯರೂ ಮತ್ತು ವೈಶ್ಯರೂ ಆ ಮಹಾತ್ಮನನ್ನು ಹಿಂಬಾಲಿಸಿ ಹೋದರು.
14072019a ಪಾಂಡವೈಃ ಪೃಥಿವೀಮಶ್ವೋ ನಿರ್ಜಿತಾಮಸ್ತ್ರತೇಜಸಾ|
14072019c ಚಚಾರ ಸ ಮಹಾರಾಜ ಯಥಾದೇಶಂ ಸ ಸತ್ತಮ||
ಮಹಾರಾಜ! ಸತ್ತಮ! ಅಸ್ತ್ರತೇಜಸ್ವೀ ಪಾಂಡವರು ಜಯಿಸಿದ್ದ ದೇಶಗಳಿಗೆ ಹೋಗುತ್ತಾ ಆ ಕುದುರೆಯು ಪೃಥ್ವಿಯಲ್ಲಿ ಸಂಚರಿಸತೊಡಗಿತು.
14072020a ತತ್ರ ಯುದ್ಧಾನಿ ವೃತ್ತಾನಿ ಯಾನ್ಯಾಸನ್ಪಾಂಡವಸ್ಯ ಹ|
14072020c ತಾನಿ ವಕ್ಷ್ಯಾಮಿ ತೇ ವೀರ ವಿಚಿತ್ರಾಣಿ ಮಹಾಂತಿ ಚ||
ವೀರ! ಅಲ್ಲಿ ಪಾಂಡವನು ಯಾರೊಡನೆ ಯುದ್ಧಮಾಡಬೇಕಾಯಿತು ಮತ್ತು ಆ ವಿಚಿತ್ರ ಯುದ್ಧಗಳ ಮಹತ್ವಗಳೇನು ಎನ್ನುವುದನ್ನು ನಿನಗೆ ಹೇಳುತ್ತೇನೆ.
14072021a ಸ ಹಯಃ ಪೃಥಿವೀಂ ರಾಜನ್ಪ್ರದಕ್ಷಿಣಮರಿಂದಮ|
14072021c ಸಸಾರೋತ್ತರತಃ ಪೂರ್ವಂ ತನ್ನಿಬೋಧ ಮಹೀಪತೇ||
14072022a ಅವಮೃದ್ನನ್ಸ ರಾಷ್ಟ್ರಾಣಿ ಪಾರ್ಥಿವಾನಾಂ ಹಯೋತ್ತಮಃ|
14072022c ಶನೈಸ್ತದಾ ಪರಿಯಯೌ ಶ್ವೇತಾಶ್ವಶ್ಚ ಮಹಾರಥಃ||
ರಾಜನ್! ಅರಿಂದಮ! ಮಹೀಪತೇ! ಆ ಕುದುರೆಯು ಪ್ರದಕ್ಷಿಣಾಕಾರವಾಗಿ ಭೂಮಿಯನ್ನು ಸಂಚರಿಸಿತು. ಮೊದಲು ಅದು ಉತ್ತರದ ಕಡೆ ಹೋಯಿತು. ಆ ಉತ್ತಮ ಹಯವು ಅನೇಕ ಪಾರ್ಥಿವರ ರಾಷ್ಟ್ರಗಳಲ್ಲಿ ಪದವಿನ್ಯಾಸ ಮಾಡಿ ಮೆಲ್ಲನೆ ಪೂರ್ವಕ್ಕೆ ತಿರುಗಿತು. ಮಹಾರಥ ಶ್ವೇತಾಶ್ವನು ಅದನ್ನು ಹಿಂಬಾಲಿಸಿಯೇ ಹೋಗುತ್ತಿದ್ದನು.
14072023a ತತ್ರ ಸಂಕಲನಾ ನಾಸ್ತಿ ರಾಜ್ಞಾಮಯುತಶಸ್ತದಾ|
14072023c ಯೇಽಯುಧ್ಯಂತ ಮಹಾರಾಜ ಕ್ಷತ್ರಿಯಾ ಹತಬಾಂಧವಾಃ||
ಮಹಾರಾಜ! ಅಲ್ಲಿ ಬಾಂಧವರನ್ನು ಕಳೆದುಕೊಂಡಿದ್ದ ಸಾವಿರಾರು ಕ್ಷತ್ರಿಯ ರಾಜರು ಯುದ್ಧಮಾಡಿದರು. ಅವರ ಲೆಕ್ಕವೇ ಇಲ್ಲ.
14072024a ಕಿರಾತಾ ವಿಕೃತಾ ರಾಜನ್ಬಹವೋಽಸಿಧನುರ್ಧರಾಃ|
14072024c ಮ್ಲೇಚ್ಚಾಶ್ಚಾನ್ಯೇ ಬಹುವಿಧಾಃ ಪೂರ್ವಂ ವಿನಿಕೃತಾ ರಣೇ||
ರಾಜನ್! ಹಿಂದೆ ಪಾಂಡವರಿಂದ ರಣದಲ್ಲಿ ಪರಾಜಿತಗೊಂಡಿದ್ದ ಖಡ್ಗ-ಧನುರ್ಧರರಾದ ಅನೇಕ ಕಿರಾತರು, ಯವನರು ಮತ್ತು ಬಹುವಿಧದ ಅನ್ಯ ಮ್ಲೇಚ್ಚರು ಯುದ್ಧಮಾಡಿದರು.
14072025a ಆರ್ಯಾಶ್ಚ ಪೃಥಿವೀಪಾಲಾಃ ಪ್ರಹೃಷ್ಟನರವಾಹನಾಃ|
14072025c ಸಮೀಯುಃ ಪಾಂಡುಪುತ್ರೇಣ ಬಹವೋ ಯುದ್ಧದುರ್ಮದಾಃ||
ಸೈನಿಕ-ವಾಹನಗಳಿಂದ ಹೃಷ್ಟ-ಪುಷ್ಟರಾಗಿದ್ದ ಅನೇಕ ಯುದ್ಧದುರ್ಮದ ಆರ್ಯ ಪೃಥಿವೀಪಾಲರು ಕೂಡ ಪಾಂಡುಪುತ್ರನನ್ನು ಎದುರಿಸಿದರು.
14072026a ಏವಂ ಯುದ್ಧಾನಿ ವೃತ್ತಾನಿ ತತ್ರ ತತ್ರ ಮಹೀಪತೇ|
14072026c ಅರ್ಜುನಸ್ಯ ಮಹೀಪಾಲೈರ್ನಾನಾದೇಶನಿವಾಸಿಭಿಃ||
ಮಹೀಪತೇ! ಹೀಗೆ ಅಲ್ಲಲ್ಲಿ ನಾನಾ ದೇಶನಿವಾಸೀ ಮಹೀಪಾಲರು ಮತ್ತು ಅರ್ಜುನರ ನಡುವೆ ಯುದ್ಧಗಳು ನಡೆದವು.
14072027a ಯಾನಿ ತೂಭಯತೋ ರಾಜನ್ಪ್ರತಪ್ತಾನಿ ಮಹಾಂತಿ ಚ|
14072027c ತಾನಿ ಯುದ್ಧಾನಿ ವಕ್ಷ್ಯಾಮಿ ಕೌಂತೇಯಸ್ಯ ತವಾನಘ||
ರಾಜನ್! ಅನಘ! ಯಾವ ಯುದ್ಧಗಳು ಎರಡೂ ಪಕ್ಷಗಳಿಗೆ ಕಷ್ಟಕರವಾಗಿದ್ದವೋ ಮತ್ತು ಮಹತ್ವದ್ದಾಗಿದ್ದವೋ ಅವುಗಳ ಕುರಿತು ನಾನು ನಿನಗೆ ಹೇಳುತ್ತೇನೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ದ್ವಿಸಪ್ತತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣ ಎನ್ನುವ ಎಪ್ಪತ್ತೆರಡನೇ ಅಧ್ಯಾಯವು.