Ashvamedhika Parva: Chapter 65

ಅಶ್ವಮೇಧಿಕ ಪರ್ವ

೬೫

ಪಾಂಡವರು ಮರುತ್ತನಿಧಿಯನ್ನು ತರಲು ಹೋದಾಗ ಕೃಷ್ಣನು ವೃಷ್ಣಿಗಳೊಂದಿಗೆ ಹಸ್ತಿನಾಪುರಕ್ಕೆ ಆಗಮಿಸಿದುದು (೧-೭). ಉತ್ತರೆಯಲ್ಲಿ ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಪರಿಕ್ಷಿತನು ಮೃತನಾಗಿಯೇ ಹುಟ್ಟಿದುದು; ಕೃಷ್ಣನಲ್ಲಿ ಕುಂತಿಯು ತನ್ನ ಶೋಕವನ್ನು ಹೇಳಿಕೊಳ್ಳುವುದು (೮-೨೯).

14065001 ವೈಶಂಪಾಯನ ಉವಾಚ

14065001a ಏತಸ್ಮಿನ್ನೇವ ಕಾಲೇ ತು ವಾಸುದೇವೋಽಪಿ ವೀರ್ಯವಾನ್|

14065001c ಉಪಾಯಾದ್ವೃಷ್ಣಿಭಿಃ ಸಾರ್ಧಂ ಪುರಂ ವಾರಣಸಾಹ್ವಯಮ್||

ವೈಶಂಪಾಯನನು ಹೇಳಿದನು: “ಅದೇ ಸಮಯದಲ್ಲಿ ವೀರ್ಯವಾನ್ ವಾಸುದೇವನೂ ಕೂಡ ವೃಷ್ಣಿಗಳೊಂದಿಗೆ ವಾರಣಸಾಹ್ವಯ ಪುರಿಗೆ ಆಗಮಿಸಿದನು.

14065002a ಸಮಯಂ ವಾಜಿಮೇಧಸ್ಯ ವಿದಿತ್ವಾ ಪುರುಷರ್ಷಭಃ|

14065002c ಯಥೋಕ್ತೋ ಧರ್ಮಪುತ್ರೇಣ ವ್ರಜನ್ಸ ಸ್ವಪುರೀಂ ಪ್ರತಿ||

ಧರ್ಮಪುತ್ರನು ಯಾವ ಸಮಯದಲ್ಲಿ ಅಶ್ವಮೇಧವು ನಡೆಯುತ್ತದೆ ಎಂದು ಹೇಳಿದ್ದನೋ ಅದನ್ನು ತಿಳಿದುಕೊಂಡೇ ಪುರುಷರ್ಷಭ ಕೃಷ್ಣನು ತನ್ನ ಪುರಿ ದ್ವಾರಕೆಗೆ ತೆರಳಿದ್ದನು.

14065003a ರೌಕ್ಮಿಣೇಯೇನ ಸಹಿತೋ ಯುಯುಧಾನೇನ ಚೈವ ಹ|

14065003c ಚಾರುದೇಷ್ಣೇನ ಸಾಂಬೇನ ಗದೇನ ಕೃತವರ್ಮಣಾ||

14065004a ಸಾರಣೇನ ಚ ವೀರೇಣ ನಿಶಠೇನೋಲ್ಮುಕೇನ ಚ|

14065004c ಬಲದೇವಂ ಪುರಸ್ಕೃತ್ಯ ಸುಭದ್ರಾಸಹಿತಸ್ತದಾ||

ಈಗ ಅವನು ರುಕ್ಮಿಣಿಯ ಮಗ ಪ್ರದ್ಯುಮ್ನ, ಯುಯುಧಾನ ಸಾತ್ಯಕಿ, ಚಾರುದೇಷ್ಣ, ಸಾಂಬ, ಗದ, ಕೃತವರ್ಮ, ಸಾರಣ, ವೀರ ನಿಶಠ ಮತ್ತು ಉಲ್ಮುಕರೊಡನೆ ಬಲದೇವನನ್ನು ಮುಂದೆಮಾಡಿಕೊಂಡು ಸುಭದ್ರೆಯ ಸಹಿತ ಆಗಮಿಸಿದನು.

14065005a ದ್ರೌಪದೀಮುತ್ತರಾಂ ಚೈವ ಪೃಥಾಂ ಚಾಪ್ಯವಲೋಕಕಃ|

14065005c ಸಮಾಶ್ವಾಸಯಿತುಂ ಚಾಪಿ ಕ್ಷತ್ರಿಯಾ ನಿಹತೇಶ್ವರಾಃ||

ದ್ರೌಪದೀ, ಉತ್ತರಾ, ಹಾಗೂ ಪೃಥಾ ಕುಂತಿಯನ್ನು ನೋಡಲೋಸುಗ ಮತ್ತು ಪತಿಗಳನ್ನು ಕಳೆದುಕೊಂಡ ಕ್ಷತ್ರಿಯ ಸ್ತ್ರೀಯರನ್ನು ಸಮಾಧಾನಗೊಳಿಸಲು ಅವನು ಆಗಮಿಸಿದನು.

14065006a ತಾನಾಗತಾನ್ಸಮೀಕ್ಷ್ಯೈವ ಧೃತರಾಷ್ಟ್ರೋ ಮಹೀಪತಿಃ|

14065006c ಪ್ರತ್ಯಗೃಹ್ಣಾದ್ಯಥಾನ್ಯಾಯಂ ವಿದುರಶ್ಚ ಮಹಾಮನಾಃ||

ಅವರು ಆಗಮಿಸಿದುದನ್ನು ನೋಡುತ್ತಲೇ ಮಹೀಪತಿ ಧೃತರಾಷ್ಟ್ರ ಮತ್ತು ಮಹಾಮನಸ್ವಿ ವಿದುರರು ಅವರನ್ನು ಯಥಾನ್ಯಾಯವಾಗಿ ಸ್ವಾಗತಿಸಿದರು.

14065007a ತತ್ರೈವ ನ್ಯವಸತ್ಕೃಷ್ಣಃ ಸ್ವರ್ಚಿತಃ ಪುರುಷರ್ಷಭಃ|

14065007c ವಿದುರೇಣ ಮಹಾತೇಜಾಸ್ತಥೈವ ಚ ಯುಯುತ್ಸುನಾ||

ವಿದುರ ಮತ್ತು ಯುಯುತ್ಸುವುನಿಂದ ಸತ್ಕೃತನಾದ ಪುರುಷರ್ಷಭ ಮಹಾತೇಜಸ್ವಿ ಕೃಷ್ಣನು ಅಲ್ಲಿಯೇ ಸ್ವಲ್ಪ ಸಮಯ ಉಳಿದುಕೊಂಡಿದ್ದನು.

14065008a ವಸತ್ಸು ವೃಷ್ಣಿವೀರೇಷು ತತ್ರಾಥ ಜನಮೇಜಯ|

14065008c ಜಜ್ಞೇ ತವ ಪಿತಾ ರಾಜನ್ಪರಿಕ್ಷಿತ್ಪರವೀರಹಾ||

ರಾಜನ್! ಜನಮೇಜಯ! ಆ ವೃಷ್ಣಿವೀರರು ಅಲ್ಲಿ ಉಳಿದುಕೊಂಡಿರುವಾಗಲೇ ನಿನ್ನ ತಂದೆ ಪರವೀರಹ ಪರಿಕ್ಷಿತನು ಹುಟ್ಟಿದನು.

14065009a ಸ ತು ರಾಜಾ ಮಹಾರಾಜ ಬ್ರಹ್ಮಾಸ್ತ್ರೇಣಾಭಿಪೀಡಿತಃ|

14065009c ಶವೋ ಬಭೂವ ನಿಶ್ಚೇಷ್ಟೋ ಹರ್ಷಶೋಕವಿವರ್ಧನಃ||

ಮಹಾರಾಜಾ! ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಆ ರಾಜನು ಶವದಂತೆ ನಿಶ್ಚೇಷ್ಟನಾಗಿ ಹುಟ್ಟಿ, ಎಲ್ಲರ ಹರ್ಷ-ಶೋಕಗಳನ್ನು ಹೆಚ್ಚಿಸಿದನು.

14065010a ಹೃಷ್ಟಾನಾಂ ಸಿಂಹನಾದೇನ ಜನಾನಾಂ ತತ್ರ ನಿಸ್ವನಃ|

14065010c ಆವಿಶ್ಯ ಪ್ರದಿಶಃ ಸರ್ವಾಃ ಪುನರೇವ ವ್ಯುಪಾರಮತ್||

ಅವನ ಜನನದಿಂದ ಹರ್ಷಗೊಂಡ ಜನರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತು. ಮರುಕ್ಷಣದಲ್ಲಿಯೇ ಪುನಃ ಅದು ಶಾಂತವಾಗಿಬಿಟ್ಟಿತು.

14065011a ತತಃ ಸೋಽತಿತ್ವರಃ ಕೃಷ್ಣೋ ವಿವೇಶಾಂತಃಪುರಂ ತದಾ|

14065011c ಯುಯುಧಾನದ್ವಿತೀಯೋ ವೈ ವ್ಯಥಿತೇಂದ್ರಿಯಮಾನಸಃ||

ಆಗ ಅತಿ ಅವಸರದಿಂದ ಇಂದ್ರಿಯ-ಮನಸ್ಸುಗಳಲ್ಲಿ ವ್ಯಥಿತನಾಗಿದ್ದ ಕೃಷ್ಣನು ಸಾತ್ಯಕಿಯೊಡನೆ ಅಂತಃಪುರವನ್ನು ಪ್ರವೇಶಿಸಿದನು.

14065012a ತತಸ್ತ್ವರಿತಮಾಯಾಂತೀಂ ದದರ್ಶ ಸ್ವಾಂ ಪಿತೃಷ್ವಸಾಮ್|

14065012c ಕ್ರೋಶಂತೀಮಭಿಧಾವೇತಿ ವಾಸುದೇವಂ ಪುನಃ ಪುನಃ||

ಅವಸರದಲ್ಲಿ ಬರುತ್ತಿದ್ದ ಕೃಷ್ಣನನ್ನು ನೋಡಿ ಅವನ ಸೋದರತ್ತೆ ಕುಂತಿಯು ವಾಸುದೇವನಿಗೆ “ಓಡಿ ಹೋಗು!” ಎಂದು ಪುನಃ ಪುನಃ ಕೂಗಿಕೊಳ್ಳುತ್ತಿದ್ದಳು.

14065013a ಪೃಷ್ಠತೋ ದ್ರೌಪದೀಂ ಚೈವ ಸುಭದ್ರಾಂ ಚ ಯಶಸ್ವಿನೀಮ್|

14065013c ಸವಿಕ್ರೋಶಂ ಸಕರುಣಂ ಬಾಂಧವಾನಾಂ ಸ್ತ್ರಿಯೋ ನೃಪ||

ನೃಪ! ಅವಳ ಹಿಂದೆ ದ್ರೌಪದಿ, ಯಶಸ್ವಿನೀ ಸುಭದ್ರೆ ಮತ್ತು ಬಾಂಧವ ಸ್ತ್ರೀಯರು ಕರುಣಾಜನಕವಾಗಿ ರೋದಿಸುತ್ತಿದ್ದರು.

14065014a ತತಃ ಕೃಷ್ಣಂ ಸಮಾಸಾದ್ಯ ಕುಂತೀ ರಾಜಸುತಾ ತದಾ|

14065014c ಪ್ರೋವಾಚ ರಾಜಶಾರ್ದೂಲ ಬಾಷ್ಪಗದ್ಗದಯಾ ಗಿರಾ||

ರಾಜಶಾರ್ದೂಲ! ಆಗ ರಾಜಸುತೆ ಕುಂತಿಯು ಕೃಷ್ಣನ ಬಳಿಸಾರಿ ಕಣ್ಣೀರುಸುರಿಸುತ್ತಾ ಗದ್ಗದ ಧ್ವನಿಯಲ್ಲಿ ಹೇಳಿದಳು:

14065015a ವಾಸುದೇವ ಮಹಾಬಾಹೋ ಸುಪ್ರಜಾ ದೇವಕೀ ತ್ವಯಾ|

14065015c ತ್ವಂ ನೋ ಗತಿಃ ಪ್ರತಿಷ್ಠಾ ಚ ತ್ವದಾಯತ್ತಮಿದಂ ಕುಲಮ್||

“ವಾಸುದೇವ! ಮಹಾಬಾಹೋ! ನಿನ್ನಿಂದಾಗಿ ದೇವಕಿಯು ಉತ್ತಮ ಪುತ್ರವತಿಯೆನಿಸಿಕೊಂಡಳು! ನೀನೇ ನಮಗೆ ಗತಿ, ಆಧಾರಭೂತ. ಈ ಕುಲದ ರಕ್ಷಣೆಯೂ ನಿನ್ನ ಅಧೀನದಲ್ಲಿದೆ.

14065016a ಯದುಪ್ರವೀರ ಯೋಽಯಂ ತೇ ಸ್ವಸ್ರೀಯಸ್ಯಾತ್ಮಜಃ ಪ್ರಭೋ|

14065016c ಅಶ್ವತ್ಥಾಮ್ನಾ ಹತೋ ಜಾತಸ್ತಮುಜ್ಜೀವಯ ಕೇಶವ||

ಯದುಪ್ರವೀರ! ಪ್ರಭೋ! ಕೇಶವ! ನಿನ್ನ ಸೋದರಳಿಯನ ಮಗನಾದ ಇವನು ಅಶ್ವತ್ಥಾಮನಿಂದ ಹತನಾಗಿ ಹುಟ್ಟಿದ್ದಾನೆ. ಇವನನ್ನು ಬದುಕಿಸು!

14065017a ತ್ವಯಾ ಹ್ಯೇತತ್ ಪ್ರತಿಜ್ಞಾತಮೈಷೀಕೇ ಯದುನಂದನ|

14065017c ಅಹಂ ಸಂಜೀವಯಿಷ್ಯಾಮಿ ಮೃತಂ ಜಾತಮಿತಿ ಪ್ರಭೋ||

ಯದುನಂದನ! ಪ್ರಭೋ! ಅಶ್ವತ್ಥಾಮನು ಐಷೀಕವನ್ನು ಬ್ರಹ್ಮಾಸ್ತ್ರವನ್ನಾಗಿ ಅಭಿಮಂತ್ರಿಸಿ ಪ್ರಯೋಗಿಸಿದಾಗ “ಸತ್ತು ಹುಟ್ಟಿದವನನ್ನು ನಾನು ಬದುಕಿಸುತ್ತೇನೆ” ಎಂದು ನೀನು ಪ್ರತಿಜ್ಞೆಯನ್ನು ಮಾಡಿದ್ದೆ.

14065018a ಸೋಽಯಂ ಜಾತೋ ಮೃತಸ್ತಾತ ಪಶ್ಯೈನಂ ಪುರುಷರ್ಷಭ|

14065018c ಉತ್ತರಾಂ ಚ ಸುಭದ್ರಾಂ ಚ ದ್ರೌಪದೀಂ ಮಾಂ ಚ ಮಾಧವ||

14065019a ಧರ್ಮಪುತ್ರಂ ಚ ಭೀಮಂ ಚ ಫಲ್ಗುನಂ ನಕುಲಂ ತಥಾ|

14065019c ಸಹದೇವಂ ಚ ದುರ್ಧರ್ಷ ಸರ್ವಾನ್ನಸ್ತ್ರಾತುಮರ್ಹಸಿ||

ಪುರುಷರ್ಷಭ! ಹಾಗೆಯೇ ಇವನು ಮೃತನಾಗಿಯೇ ಹುಟ್ಟಿದ್ದಾನೆ ನೋಡು! ಮಾಧವ! ದುರ್ಧರ್ಷ! ಉತ್ತರೆ, ಸುಭದ್ರೆ, ದ್ರೌಪದೀ, ನಾನು, ಧರ್ಮಪುತ್ರ, ಭೀಮ, ಫಲ್ಗುನ, ನಕುಲ ಮತ್ತು ಸಹದೇವರನ್ನು ನೋಡು! ನಮ್ಮೆಲ್ಲರನ್ನು ನೀನು ಈ ದುಃಖದಿಂದ ಪಾರುಮಾಡಬೇಕು!

14065020a ಅಸ್ಮಿನ್ಪ್ರಾಣಾಃ ಸಮಾಯತ್ತಾಃ ಪಾಂಡವಾನಾಂ ಮಮೈವ ಚ|

14065020c ಪಾಂಡೋಶ್ಚ ಪಿಂಡೋ ದಾಶಾರ್ಹ ತಥೈವ ಶ್ವಶುರಸ್ಯ ಮೇ||

ದಾಶಾರ್ಹ! ಪಾಂಡವರ ಮತ್ತು ನನ್ನ ಪ್ರಾಣಗಳೂ ಹಾಗೆಯೇ ಪಾಂಡು ಮತ್ತು ನನ್ನ ಮಾವನವರ ಪಿಂಡಗಳೂ ಇವನನ್ನೇ ಅವಲಂಬಿಸಿವೆ.

14065021a ಅಭಿಮನ್ಯೋಶ್ಚ ಭದ್ರಂ ತೇ ಪ್ರಿಯಸ್ಯ ಸದೃಶಸ್ಯ ಚ|

14065021c ಪ್ರಿಯಮುತ್ಪಾದಯಾದ್ಯ ತ್ವಂ ಪ್ರೇತಸ್ಯಾಪಿ ಜನಾರ್ದನ||

ಜನಾರ್ದನ! ನಿನಗೆ ಮಂಗಳವಾಗಲಿ! ಇಂದು ನಿನ್ನ ಪ್ರಿಯನಾಗಿದ್ದ, ನಿನ್ನಂತೆಯೇ ಇದ್ದ, ಮತ್ತು ಮೃತನಾಗಿರುವ ಅಭಿಮನ್ಯುವಿನ ಸಂತೋಷವನ್ನು ಹೆಚ್ಚಿಸು!

14065022a ಉತ್ತರಾ ಹಿ ಪ್ರಿಯೋಕ್ತಂ ವೈ ಕಥಯತ್ಯರಿಸೂದನ|

14065022c ಅಭಿಮನ್ಯೋರ್ವಚಃ ಕೃಷ್ಣ ಪ್ರಿಯತ್ವಾತ್ತೇ ನ ಸಂಶಯಃ||

ಅರಿಸೂದನ! ಕೃಷ್ಣ! ನಿಸ್ಸಂಶಯವಾಗಿಯೂ ನಿನಗೆ ಪ್ರಿಯನಾದ ಅಭಿಮನ್ಯುವು ಪ್ರೀತಿಯಿಂದ ಹೇಳುತ್ತಿದ್ದ ಮಾತುಗಳನ್ನು ಉತ್ತರೆಯು ನನ್ನೊಡನೆ ಹೇಳಿಕೊಳ್ಳುತ್ತಿದ್ದಳು.

14065023a ಅಬ್ರವೀತ್ಕಿಲ ದಾಶಾರ್ಹ ವೈರಾಟೀಮಾರ್ಜುನಿಃ ಪುರಾ|

14065023c ಮಾತುಲಸ್ಯ ಕುಲಂ ಭದ್ರೇ ತವ ಪುತ್ರೋ ಗಮಿಷ್ಯತಿ||

14065024a ಗತ್ವಾ ವೃಷ್ಣ್ಯಂಧಕಕುಲಂ ಧನುರ್ವೇದಂ ಗ್ರಹೀಷ್ಯತಿ|

14065024c ಅಸ್ತ್ರಾಣಿ ಚ ವಿಚಿತ್ರಾಣಿ ನೀತಿಶಾಸ್ತ್ರಂ ಚ ಕೇವಲಮ್||

ದಾಶಾರ್ಹ! ಹಿಂದೆ ಅರ್ಜುನನ ಮಗನು ವೈರಾಟೀ ಉತ್ತರೆಯಲ್ಲಿ ಇದನ್ನೇ ಹೇಳುತ್ತಿದ್ದನಲ್ಲವೇ? “ಭದ್ರೇ! ನಿನ್ನ ಮಗನು ನನ್ನ ಸೋದರಮಾವನ ಮನೆಗೆ ಹೋಗುತ್ತಾನೆ. ವೃಷ್ಣಿ-ಅಂಧಕರ ಕುಲಕ್ಕೆ ಹೋಗಿ ಅವನು ಧನುರ್ವೇದ, ವಿಚಿತ್ರ ಅಸ್ತ್ರಗಳು ಮತ್ತು ಸಮಗ್ರ ನೀತಿಶಾಸ್ತ್ರವನ್ನು ಪಡೆದುಕೊಳ್ಳುತ್ತಾನೆ!”

14065025a ಇತ್ಯೇತತ್ಪ್ರಣಯಾತ್ತಾತ ಸೌಭದ್ರಃ ಪರವೀರಹಾ|

14065025c ಕಥಯಾಮಾಸ ದುರ್ಧರ್ಷಸ್ತಥಾ ಚೈತನ್ನ ಸಂಶಯಃ||

ಪರವೀರಹ ದುರ್ಧರ್ಷ ಸೌಭದ್ರನು ಪ್ರಣಯದಿಂದ ಹೀಗೆ ಹೇಳುತ್ತಿದ್ದನು ಎನ್ನುವುದರಲ್ಲಿ ಸಂಶಯವೇ ಇಲ್ಲ.

14065026a ತಾಸ್ತ್ವಾಂ ವಯಂ ಪ್ರಣಮ್ಯೇಹ ಯಾಚಾಮೋ ಮಧುಸೂದನ|

14065026c ಕುಲಸ್ಯಾಸ್ಯ ಹಿತಾರ್ಥಂ ತ್ವಂ ಕುರು ಕಲ್ಯಾಣಮುತ್ತಮಮ್||

ಮಧುಸೂದನ! ನಾವೆಲ್ಲರೂ ನಿನ್ನ ಪಾದಗಳಿಗೆ ನಮಿಸಿ ಯಾಚಿಸಿಕೊಳ್ಳುತ್ತೇವೆ. ಈ ಕುಲದ ಹಿತಕ್ಕಾಗಿ ಉತ್ತಮ ಕಲ್ಯಾಣವನ್ನು ಮಾಡು!”

14065027a ಏವಮುಕ್ತ್ವಾ ತು ವಾರ್ಷ್ಣೇಯಂ ಪೃಥಾ ಪೃಥುಲಲೋಚನಾ|

14065027c ಉಚ್ಚ್ರಿತ್ಯ ಬಾಹೂ ದುಃಖಾರ್ತಾ ತಾಶ್ಚಾನ್ಯಾಃ ಪ್ರಾಪತನ್ಭುವಿ||

ವಾರ್ಷ್ಣೇಯನಿಗೆ ಹೀಗೆ ಹೇಳಿ ವಿಶಾಲನೇತ್ರೆ ಪೃಥಾಳು ದುಃಖಾರ್ತಳಾಗಿ ತನ್ನ ಬಾಹುಗಳನ್ನು ಮೇಲೆತ್ತಿಕೊಂಡು ದೊಪ್ಪನೆ ನೆಲದ ಮೇಲೆ ಬಿದ್ದುಬಿಟ್ಟಳು. ಆಗ ಅನ್ಯ ಸ್ತ್ರೀಯರೂ ನೆಲದ ಮೇಲೆ ಬಿದ್ದರು.

14065028a ಅಬ್ರುವಂಶ್ಚ ಮಹಾರಾಜ ಸರ್ವಾಃ ಸಾಸ್ರಾವಿಲೇಕ್ಷಣಾಃ|

14065028c ಸ್ವಸ್ರೀಯೋ ವಾಸುದೇವಸ್ಯ ಮೃತೋ ಜಾತ ಇತಿ ಪ್ರಭೋ||

ಪ್ರಭೋ! ಮಹಾರಾಜ! ಕಣ್ಣೀರಿಡುತ್ತಿದ್ದ ಎಲ್ಲರೂ “ಅಯ್ಯೋ! ವಾಸುದೇವನ ಅಳಿಯನ ಮಗನು ಮೃತನಾಗಿ ಹುಟ್ಟಿದನಲ್ಲಾ!” ಎಂದು ಕೂಗಿಕೊಂಡರು.

14065029a ಏವಮುಕ್ತೇ ತತಃ ಕುಂತೀಂ ಪ್ರತ್ಯಗೃಹ್ಣಾಜ್ಜನಾರ್ದನಃ|

14065029c ಭೂಮೌ ನಿಪತಿತಾಂ ಚೈನಾಂ ಸಾಂತ್ವಯಾಮಾಸ ಭಾರತ||

ಭಾರತ! ಅವರೆಲ್ಲರನ್ನೂ ಕೇಳಿದ ಜನಾರ್ದನನು ಆಗ ನೆಲದ ಮೇಲೆ ಬಿದ್ದಿದ್ದ ಕುಂತಿಯನ್ನು ಹಿಡಿದು ಮೇಲೆಬ್ಬಿಸಿ ಸಂತೈಸತೊಡಗಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಪರಿಕ್ಷಿಜ್ಜನ್ಮಕಥನೇ ಪಂಚಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಪರಿಕ್ಷಿಜ್ಜನ್ಮಕಥನ ಎನ್ನುವ ಅರವತ್ತೈದನೇ ಅಧ್ಯಾಯವು.

Comments are closed.