Ashvamedhika Parva: Chapter 61

ಅಶ್ವಮೇಧಿಕ ಪರ್ವ

೬೧

ವಸುದೇವ-ಕೃಷ್ಣಾದಿಗಳು ಅಭಿಮನ್ಯುವಿನ ಶ್ರಾದ್ಧವನ್ನು ನಡೆಸಿದುದು (೧-೭). ಪತಿಶೋಕದಿಂದ ಆರ್ತಳಾಗಿ ಊಟವನ್ನೇ ಮಾಡದಿದ್ದ ಉತ್ತರೆಯ ಗರ್ಭವು ಕ್ಷೀಣಿಸುತ್ತಿರುವುದನ್ನು ಅರಿತ ವ್ಯಾಸನು ಕುಂತಿ-ಉತ್ತರೆ ಮತ್ತು ಪಾಂಡವರನ್ನು ಸಂತೈಸಿದುದು (೮-೧೯).

14061001 ವೈಶಂಪಾಯನ ಉವಾಚ

14061001a ಏತಚ್ಚ್ರುತ್ವಾ ತು ಪುತ್ರಸ್ಯ ವಚಃ ಶೂರಾತ್ಮಜಸ್ತದಾ|

14061001c ವಿಹಾಯ ಶೋಕಂ ಧರ್ಮಾತ್ಮಾ ದದೌ ಶ್ರಾದ್ಧಮನುತ್ತಮಮ್||

ವೈಶಂಪಾಯನನು ಹೇಳಿದನು: “ಧರ್ಮಾತ್ಮ ಶೂರಾತ್ಮಜ ವಸುದೇವನು ಮಗ ಕೃಷ್ಣನ ಈ ಮಾತನ್ನು ಕೇಳಿ ಶೋಕವನ್ನು ತೊರೆದು ಅಭಿಮನ್ಯುವಿಗೆ ಅನುತ್ತಮ ಶ್ರಾದ್ಧವನ್ನಿತ್ತನು.

14061002a ತಥೈವ ವಾಸುದೇವೋಽಪಿ ಸ್ವಸ್ರೀಯಸ್ಯ ಮಹಾತ್ಮನಃ|

14061002c ದಯಿತಸ್ಯ ಪಿತುರ್ನಿತ್ಯಮಕರೋದೌರ್ಧ್ವದೇಹಿಕಮ್||

ಹಾಗೆಯೇ ವಾಸುದೇವ ಕೃಷ್ಣನೂ ಕೂಡ ತಂಗಿಯ ಮಗನಾದ ಮತ್ತು ಅವನ ತಂದೆಗೆ ಪ್ರಿಯನಾಗಿದ್ದ ಮಹಾತ್ಮ ಅಭಿಮನ್ಯುವಿನ ಔರ್ಧ್ವದೈಹಿಕ ಕ್ರಿಯೆಗಳನ್ನು ಮಾಡಿದನು.

14061003a ಷಷ್ಟಿಂ ಶತಸಹಸ್ರಾಣಿ ಬ್ರಾಹ್ಮಣಾನಾಂ ಮಹಾಭುಜಃ|

14061003c ವಿಧಿವದ್ಭೋಜಯಾಮಾಸ ಭೋಜ್ಯಂ ಸರ್ವಗುಣಾನ್ವಿತಮ್||

ಆ ಮಹಾಭುಜನು ಅರವತ್ತು ಲಕ್ಷ ಬ್ರಾಹ್ಮಣರಿಗೆ ಸರ್ವಗುಣಾನ್ವಿತ ಭೋಜನವನ್ನು ವಿಧಿವತ್ತಾಗಿ ಭೋಜನಮಾಡಿಸಿದನು.

14061004a ಆಚ್ಚಾದ್ಯ ಚ ಮಹಾಬಾಹುರ್ಧನತೃಷ್ಣಾಮಪಾನುದತ್|

14061004c ಬ್ರಾಹ್ಮಣಾನಾಂ ತದಾ ಕೃಷ್ಣಸ್ತದಭೂದ್ರೋಮಹರ್ಷಣಮ್||

ಆ ಮಹಾಬಾಹುವು ಬ್ರಾಹ್ಮಣರಿಗೆ ವಸ್ತ್ರಗಳನ್ನು ಹೊದ್ದಿಸಿ ಮುಂದೆ ಎಂದೂ ಅವರಿಗೆ ಧನದ ಬಯಕೆಯೇ ಉಂಟಾಗದಂತೆ ಮಾಡಿದನು. ಕೃಷ್ಣನ ಆ ಕಾರ್ಯವು ರೋಮಾಂಚನಕಾರಿಯಾಗಿತ್ತು.

14061005a ಸುವರ್ಣಂ ಚೈವ ಗಾಶ್ಚೈವ ಶಯನಾಚ್ಚಾದನಂ ತಥಾ|

14061005c ದೀಯಮಾನಂ ತದಾ ವಿಪ್ರಾಃ ಪ್ರಭೂತಮಿತಿ ಚಾಬ್ರುವನ್||

ಸುವರ್ಣ, ಗೋವುಗಳು, ಶಯನ-ವಸ್ತ್ರಗಳನ್ನು ನೀಡುತ್ತಿದ್ದಾಗ ವಿಪ್ರರು “ಹೆಚ್ಚಾಗಲಿ!” ಎಂದು ಆಶೀರ್ವದಿಸುತ್ತಿದ್ದರು.

14061006a ವಾಸುದೇವೋಽಥ ದಾಶಾರ್ಹೋ ಬಲದೇವಃ ಸಸಾತ್ಯಕಿಃ|

14061006c ಅಭಿಮನ್ಯೋಸ್ತದಾ ಶ್ರಾದ್ಧಮಕುರ್ವನ್ಸತ್ಯಕಸ್ತದಾ|

14061006e ಅತೀವ ದುಃಖಸಂತಪ್ತಾ ನ ಶಮಂ ಚೋಪಲೇಭಿರೇ||

ಅನಂತರ ದಾಶಾರ್ಹ ವಾಸುದೇವ, ಬಲದೇವ, ಸಾತ್ಯಕಿ ಮತ್ತು ಸತ್ಯಕರೂ ಕೂಡ ಅಭಿಮನ್ಯುವಿನ ಶ್ರಾದ್ಧವನ್ನು ನೆರವೇರಿಸಿದರು. ಅತೀವ ದುಃಖಸಂತಪ್ತರಾದ ಅವರಿಗೆ ಶಾಂತಿಯೇ ಇಲ್ಲದಾಗಿತ್ತು.

14061007a ತಥೈವ ಪಾಂಡವಾ ವೀರಾ ನಗರೇ ನಾಗಸಾಹ್ವಯೇ|

14061007c ನೋಪಗಚ್ಚಂತಿ ವೈ ಶಾಂತಿಮಭಿಮನ್ಯುವಿನಾಕೃತಾಃ||

ಹಾಗೆಯೇ ಹಸ್ತಿನಾಪುರ ನಗರದಲ್ಲಿ ಕೂಡ ವೀರ ಪಾಂಡವರು ಅಭಿಮನ್ಯುವು ಇಲ್ಲದೇ ಶಾಂತಿಯನ್ನು ಪಡೆಯಲಿಲ್ಲ.

14061008a ಸುಬಹೂನಿ ಚ ರಾಜೇಂದ್ರ ದಿವಸಾನಿ ವಿರಾಟಜಾ|

14061008c ನಾಭುಂಕ್ತ ಪತಿಶೋಕಾರ್ತಾ ತದಭೂತ್ಕರುಣಂ ಮಹತ್|

14061008e ಕುಕ್ಷಿಸ್ಥ ಏವ ತಸ್ಯಾಸ್ತು ಸ ಗರ್ಭಃ ಸಂಪ್ರಲೀಯತ||

ರಾಜೇಂದ್ರ! ಪತಿಶೋಕದಿಂದ ಆರ್ತಳಾಗಿದ್ದ ವಿರಾಟನ ಮಗಳು ಉತ್ತರೆಯು ಅನೇಕ ದಿವಸಗಳು ಊಟವನ್ನೇ ಮಾಡಲಿಲ್ಲ. ಅದೊಂದು ಮಹಾ ಕರುಣಾಜನಕ ವಿಷಯವಾಗಿತ್ತು. ಹಾಗೆಯೇ ಅವಳ ಗರ್ಭದಲ್ಲಿದ್ದ ಭ್ರೂಣವೂ ದಿನ-ದಿನಕ್ಕೆ ಕ್ಷೀಣಿಸತೊಡಗಿತು.

14061009a ಆಜಗಾಮ ತತೋ ವ್ಯಾಸೋ ಜ್ಞಾತ್ವಾ ದಿವ್ಯೇನ ಚಕ್ಷುಷಾ|

14061009c ಆಗಮ್ಯ ಚಾಬ್ರವೀದ್ಧೀಮಾನ್ಪೃಥಾಂ ಪೃಥುಲಲೋಚನಾಮ್|

14061009e ಉತ್ತರಾಂ ಚ ಮಹಾತೇಜಾಃ ಶೋಕಃ ಸಂತ್ಯಜ್ಯತಾಮಯಮ್||

ತನ್ನ ದಿವ್ಯದೃಷ್ಟಿಯಿಂದ ಇದನ್ನು ತಿಳಿದ ಧೀಮಂತ ಮಹಾತೇಜಸ್ವೀ ವ್ಯಾಸನು ಆಗಮಿಸಿ ಕುಂತಿ ಮತ್ತು ಪೃಥುಲಲೋಚನೆ ಉತ್ತರೆಗೆ ಶೋಕವನ್ನು ಪರಿತ್ಯಜಿಸುವಂತೆ ಹೇಳಿದನು.

14061010a ಜನಿಷ್ಯತಿ ಮಹಾತೇಜಾಃ ಪುತ್ರಸ್ತವ ಯಶಸ್ವಿನಿ|

14061010c ಪ್ರಭಾವಾದ್ವಾಸುದೇವಸ್ಯ ಮಮ ವ್ಯಾಹರಣಾದಪಿ|

14061010e ಪಾಂಡವಾನಾಮಯಂ ಚಾಂತೇ ಪಾಲಯಿಷ್ಯತಿ ಮೇದಿನೀಮ್||

“ಯಶಸ್ವಿನೀ! ನಿನ್ನಲ್ಲಿ ಮಹಾತೇಜಸ್ವಿಯಾದ ಮಗನು ಹುಟ್ಟುತ್ತಾನೆ. ವಾಸುದೇವನ ಪ್ರಭಾವದಿಂದ ಮತ್ತು ನನ್ನ ಆಶೀರ್ವಾದದಿಂದ ಇವನು ಪಾಂಡವರ ನಂತರ ಮೇದಿನಿಯನ್ನು ಪಾಲಿಸುತ್ತಾನೆ.”

14061011a ಧನಂಜಯಂ ಚ ಸಂಪ್ರೇಕ್ಷ್ಯ ಧರ್ಮರಾಜಸ್ಯ ಪಶ್ಯತಃ|

14061011c ವ್ಯಾಸೋ ವಾಕ್ಯಮುವಾಚೇದಂ ಹರ್ಷಯನ್ನಿವ ಭಾರತ||

ಭಾರತ! ವ್ಯಾಸನು ಧರ್ಮರಾಜನ ಸಮಕ್ಷಮದಲ್ಲಿ ಧನಂಜಯನನ್ನು ನೋಡಿ ಅವನಿಗೆ ಸಂತೋಷವನ್ನುಂಟುಮಾಡುವಂಥಹ ಮಾತುಗಳನ್ನಾಡಿದನು:

14061012a ಪೌತ್ರಸ್ತವ ಮಹಾಬಾಹೋ ಜನಿಷ್ಯತಿ ಮಹಾಮನಾಃ|

14061012c ಪೃಥ್ವೀಂ ಸಾಗರಪರ್ಯಂತಾಂ ಪಾಲಯಿಷ್ಯತಿ ಚೈವ ಹ||

“ಮಹಾಬಾಹೋ! ನಿನಗೆ ಮಹಾಮನಸ್ವಿಯಾದ ಮೊಮ್ಮಗನು ಜನಿಸುತ್ತಾನೆ. ಅವನು ಸಾಗರಪರ್ಯಂತ ಈ ಪೃಥ್ವಿಯನ್ನು ಪಾಲಿಸುತ್ತಾನೆ.

14061013a ತಸ್ಮಾಚ್ಚೋಕಂ ಕುರುಶ್ರೇಷ್ಠ ಜಹಿ ತ್ವಮರಿಕರ್ಶನ|

14061013c ವಿಚಾರ್ಯಮತ್ರ ನ ಹಿ ತೇ ಸತ್ಯಮೇತದ್ ಭವಿಷ್ಯತಿ||

ಅರಿಕರ್ಶನ! ಕುರುಶ್ರೇಷ್ಠ! ಆದುದರಿಂದ ಶೋಕವನ್ನು ತ್ಯಜಿಸು. ಇದು ಸತ್ಯವಾಗುತ್ತದೆ ಎನ್ನುವುದರ ಕುರಿತು ವಿಚಾರಿಸಬೇಡ.

14061014a ಯಚ್ಚಾಪಿ ವೃಷ್ಣಿವೀರೇಣ ಕೃಷ್ಣೇನ ಕುರುನಂದನ|

14061014c ಪುರೋಕ್ತಂ ತತ್ತಥಾ ಭಾವಿ ಮಾ ತೇಽತ್ರಾಸ್ತು ವಿಚಾರಣಾ||

ಕುರುನಂದನ! ವೃಷ್ಣಿವೀರ ಕೃಷ್ಣನು ಹಿಂದೆ ಏನೆಲ್ಲ ಹೇಳಿದ್ದನೋ ಅವೆಲ್ಲವೂ ಹಾಗೆಯೇ ಆಗುತ್ತದೆ. ಅದರಲ್ಲಿ ವಿಚಾರಮಾಡುವಂಥದ್ದೇನೂ ಇಲ್ಲ.

14061015a ವಿಬುಧಾನಾಂ ಗತೋ ಲೋಕಾನಕ್ಷಯಾನಾತ್ಮನಿರ್ಜಿತಾನ್|

14061015c ನ ಸ ಶೋಚ್ಯಸ್ತ್ವಯಾ ತಾತ ನ ಚಾನ್ಯೈಃ ಕುರುಭಿಸ್ತಥಾ||

ಮಗೂ! ತಾವೇ ಗೆದ್ದ ವಿಬುಧರ ಅಕ್ಷಯ ಲೋಕಗಳಿಗೆ ಅಭಿಮನ್ಯು ಮತ್ತು ಅನ್ಯ ಕುರುಗಳು ಹೋಗಿದ್ದಾರೆ. ಆದುದರಿಂದ ನೀನು ಅವರ ಕುರಿತು ಶೋಕಿಸಬಾರದು.”

14061016a ಏವಂ ಪಿತಾಮಹೇನೋಕ್ತೋ ಧರ್ಮಾತ್ಮಾ ಸ ಧನಂಜಯಃ|

14061016c ತ್ಯಕ್ತ್ವಾ ಶೋಕಂ ಮಹಾರಾಜ ಹೃಷ್ಟರೂಪೋಽಭವತ್ತದಾ||

ಮಹಾರಾಜ! ಹೀಗೆ ಪಿತಾಮಹನು ಮಾತನಾಡಲು ಧರ್ಮಾತ್ಮ ಧನಂಜಯನು ಶೋಕವನ್ನು ತೊರೆದು ಹೃಷ್ಟರೂಪನಾದನು.

14061017a ಪಿತಾಪಿ ತವ ಧರ್ಮಜ್ಞ ಗರ್ಭೇ ತಸ್ಮಿನ್ಮಹಾಮತೇ|

14061017c ಅವರ್ಧತ ಯಥಾಕಾಲಶುಕ್ಲಪಕ್ಷೇ ಯಥಾ ಶಶೀ||

ಧರ್ಮಜ್ಞ! ಮಹಾಮತೇ! ಗರ್ಭದಲ್ಲಿದ್ದ ನಿನ್ನ ತಂದೆಯೂ ಕೂಡ ಯಥಾಕಾಲದಲ್ಲಿ ಶುಕ್ಲಪಕ್ಷದ ಚಂದ್ರನಂತೆ ಬೆಳೆದನು.

14061018a ತತಃ ಸಂಚೋದಯಾಮಾಸ ವ್ಯಾಸೋ ಧರ್ಮಾತ್ಮಜಂ ನೃಪಮ್|

14061018c ಅಶ್ವಮೇಧಂ ಪ್ರತಿ ತದಾ ತತಃ ಸೋಽಂತರ್ಹಿತೋಽಭವತ್||

ಆಗ ವ್ಯಾಸನು ನೃಪ ಧರ್ಮಾತ್ಮಜನಿಗೆ ಅಶ್ವಮೇಧದ ಕುರಿತು ಪ್ರೋತ್ಸಾಹಿಸಿ ಅಲ್ಲಿಯೇ ಅಂತರ್ಧಾನನಾದನು.

14061019a ಧರ್ಮರಾಜೋಽಪಿ ಮೇಧಾವೀ ಶ್ರುತ್ವಾ ವ್ಯಾಸಸ್ಯ ತದ್ವಚಃ|

14061019c ವಿತ್ತೋಪನಯನೇ ತಾತ ಚಕಾರ ಗಮನೇ ಮತಿಮ್||

ಮಗೂ! ಮೇಧಾವೀ ಧರ್ಮರಾಜನೂ ಕೂಡ ವ್ಯಾಸನ ಆ ಮಾತುಗಳನ್ನು ಕೇಳಿ ಐಶ್ವರ್ಯವನ್ನು ತರಲು ಹಿಮಾಲಯಕ್ಕೆ ಹೋಗುವ ಕುರಿತು ಮನಸ್ಸುಮಾಡಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವಸುದೇವಸಾಂತ್ವನೇ ಏಕಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ವಸುದೇವಸಾಂತ್ವನ ಎನ್ನುವ ಅರವತ್ತೊಂದನೇ ಅಧ್ಯಾಯವು.

Comments are closed.