ಅಶ್ವಮೇಧಿಕ ಪರ್ವ
೬೦
ರಣದಲ್ಲಿ ತನ್ನ ಮಗನ ವಧೆಯಾದುದನ್ನು ಕೃಷ್ಣನು ಬಿಟ್ಟಿರುವುದನ್ನು ನೋಡಿದ ಸುಭದ್ರೆಯು ಅಭಿಮನ್ಯುವಿನ ವಧೆಯ ಕುರಿತು ಹೇಳಬೇಕೆಂದು ಕೇಳಲು, ಶೋಕಪೀಡಿತನಾದ ವಸುದೇವನೂ ಅದರ ಕುರಿತು ಕೃಷ್ಣನಲ್ಲಿ ಕೇಳಿದುದು (೧-೧೪). ಆಗ ಕೃಷ್ಣನು ವಸುದೇವನಿಗೆ ಅಭಿಮನ್ಯುವಿನ ವಧೆಯ ಕುರಿತು ಮತ್ತು ಕುಂತಿಯು ಸುಭದ್ರೆ-ಉತ್ತರೆಯರನ್ನು ಸಂತವಿಸಿದುದನ್ನು ಹೇಳಿದುದು (೧೫-೪೧).
14060001 ವೈಶಂಪಾಯನ ಉವಾಚ
14060001a ಕಥಯನ್ನೇವ ತು ತದಾ ವಾಸುದೇವಃ ಪ್ರತಾಪವಾನ್|
14060001c ಮಹಾಭಾರತಯುದ್ಧಂ ತತ್ಕಥಾಂತೇ ಪಿತುರಗ್ರತಃ||
14060002a ಅಭಿಮನ್ಯೋರ್ವಧಂ ವೀರಃ ಸೋಽತ್ಯಕ್ರಾಮತ ಭಾರತ|
14060002c ಅಪ್ರಿಯಂ ವಸುದೇವಸ್ಯ ಮಾ ಭೂದಿತಿ ಮಹಾಮನಾಃ||
14060003a ಮಾ ದೌಹಿತ್ರವಧಂ ಶ್ರುತ್ವಾ ವಸುದೇವೋ ಮಹಾತ್ಯಯಮ್|
14060003c ದುಃಖಶೋಕಾಭಿಸಂತಪ್ತೋ ಭವೇದಿತಿ ಮಹಾಮತಿಃ||
ವೈಶಂಪಾಯನನು ಹೇಳಿದನು: “ಭಾರತ! ತಂದೆಗೆ ಮಹಾಭಾರತಯುದ್ಧದ ಕಥೆಯನ್ನು ಹೇಳುತ್ತಿರುವಾಗ ಪ್ರತಾಪವಾನ್ ವಾಸುದೇವ ಕೃಷ್ಣನು ವೀರ ಅಭಿಮನ್ಯುವಿನ ವಧೆಯನ್ನು ಬಿಟ್ಟು ಹೇಳಿದ್ದನು. ಅಪ್ರಿಯವಾದುದನ್ನು ವಸುದೇವನಿಗೆ ಹೇಳಬಾರದು ಮತ್ತು ಮೊಮ್ಮಗನ ವಧೆಯ ಕುರಿತು ಕೇಳಿ ವಸುದೇವನು ಮಹಾ ದುಃಖ-ಶೋಕಗಳಿಂದ ಸಂತಪ್ತನಾಗುತ್ತಾನೆಂದು ಆ ಮಹಾಮನಸ್ವಿ ಮಹಾಮತಿಯು ಹೀಗೆ ಮಾಡಿದ್ದನು.
14060004a ಸುಭದ್ರಾ ತು ತಮುತ್ಕ್ರಾಂತಮಾತ್ಮಜಸ್ಯ ವಧಂ ರಣೇ|
14060004c ಆಚಕ್ಷ್ವ ಕೃಷ್ಣ ಸೌಭದ್ರವಧಮಿತ್ಯಪತದ್ಭುವಿ||
ರಣದಲ್ಲಿ ತನ್ನ ಮಗನ ವಧೆಯಾದುದನ್ನು ಕೃಷ್ಣನು ಬಿಟ್ಟಿರುವುದನ್ನು ನೋಡಿದ ಸುಭದ್ರೆಯು “ಕೃಷ್ಣ! ಸೌಭದ್ರನ ವಧೆಯಕುರಿತು ಹೇಳು!” ಎಂದು ಹೇಳುತ್ತಿದ್ದಂತೆಯೇ ಮೂರ್ಛಿತಳಾಗಿ ನೆಲದ ಮೇಲೆ ಬಿದ್ದಳು.
14060005a ತಾಮಪಶ್ಯನ್ನಿಪತಿತಾಂ ವಸುದೇವಃ ಕ್ಷಿತೌ ತದಾ|
14060005c ದೃಷ್ಟ್ವೈವ ಚ ಪಪಾತೋರ್ವ್ಯಾಂ ಸೋಽಪಿ ದುಃಖೇನ ಮೂರ್ಚಿತಃ||
ಅವಳು ಭೂಮಿಯ ಮೇಲೆ ಬಿದ್ದುದನ್ನು ನೋಡಿದ ವಸುದೇವನೂ ಕೂಡ ದುಃಖದಿಂದ ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದನು.
14060006a ತತಃ ಸ ದೌಹಿತ್ರವಧಾದ್ದುಃಖಶೋಕಸಮನ್ವಿತಃ|
14060006c ವಸುದೇವೋ ಮಹಾರಾಜ ಕೃಷ್ಣಂ ವಾಕ್ಯಮಥಾಬ್ರವೀತ್||
ಮಹಾರಾಜ! ಆಗ ಮೊಮ್ಮಗನ ವಧೆಯ ಕುರಿತು ಕೇಳಿ ದುಃಖಶೋಕಸಮನ್ವಿತನಾದ ವಸುದೇವನು ಕೃಷ್ಣನಿಗೆ ಇಂತೆಂದನು:
14060007a ನನು ತ್ವಂ ಪುಂಡರೀಕಾಕ್ಷ ಸತ್ಯವಾಗ್ಭುವಿ ವಿಶ್ರುತಃ|
14060007c ಯದ್ದೌಹಿತ್ರವಧಂ ಮೇಽದ್ಯ ನ ಖ್ಯಾಪಯಸಿ ಶತ್ರುಹನ್||
“ಪುಂಡರೀಕಾಕ್ಷ! ನೀನು ಸತ್ಯವಾದಿಯೆಂದು ಭುವಿಯಲ್ಲಿ ವಿಶ್ರುತನಾಗಿರುವೆ ತಾನೇ? ಶತ್ರುಹನ್! ಆದರೂ ಇಂದು ನೀನು ಮೊಮ್ಮಗನ ವಧೆಯಕುರಿತು ನನಗೆ ಹೇಳಲಿಲ್ಲವಲ್ಲ?
14060008a ತದ್ಭಾಗಿನೇಯನಿಧನಂ ತತ್ತ್ವೇನಾಚಕ್ಷ್ವ ಮೇ ವಿಭೋ|
14060008c ಸದೃಶಾಕ್ಷಸ್ತವ ಕಥಂ ಶತ್ರುಭಿರ್ನಿಹತೋ ರಣೇ||
ವಿಭೋ! ನಿನ್ನ ಸೋದರಳಿಯನ ಮರಣದ ಕುರಿತು ನಡೆದಂತೆ ನನಗೆ ಹೇಳು. ನಿನ್ನಂಥಹುದೇ ಕಣ್ಣುಗಳಿದ್ದ ಅವನನ್ನು ಶತ್ರುಗಳು ಹೇಗೆ ರಣದಲ್ಲಿ ಸಂಹರಿಸಿದರು?
14060009a ದುರ್ಮರಂ ಬತ ವಾರ್ಷ್ಣೇಯ ಕಾಲೇಽಪ್ರಾಪ್ತೇ ನೃಭಿಃ ಸದಾ|
14060009c ಯತ್ರ ಮೇ ಹೃದಯಂ ದುಃಖಾಚ್ಚತಧಾ ನ ವಿದೀರ್ಯತೇ||
ವಾರ್ಷ್ಣೇಯ! ಕಾಲಪ್ರಾಪ್ತವಾಗದೇ ಮರಣಹೊಂದುವುದು ನರರಿಗೆ ಬಹಳ ಕಷ್ಟವಾದುದು. ದುಃಖದಿಂದ ನನ್ನ ಹೃದಯವು ನೂರು ಚೂರುಗಳಾಗಿ ಒಡೆಯುತ್ತಿಲ್ಲವಲ್ಲ!
14060010a ಕಿಮಬ್ರವೀತ್ತ್ವಾ ಸಂಗ್ರಾಮೇ ಸುಭದ್ರಾಂ ಮಾತರಂ ಪ್ರತಿ|
14060010c ಮಾಂ ಚಾಪಿ ಪುಂಡರೀಕಾಕ್ಷ ಚಪಲಾಕ್ಷಃ ಪ್ರಿಯೋ ಮಮ||
ಪುಂಡರೀಕಾಕ್ಷ! ನನಗೆ ಪ್ರಿಯನಾಗಿದ್ದ ಆ ಚಪಲಾಕ್ಷನು ಸಂಗ್ರಾಮದಲ್ಲಿ ನಿನಗೆ ಏನು ಹೇಳಿದನು? ತಾಯಿ ಸುಭದ್ರೆ ಮತ್ತು ನನ್ನ ಕುರಿತು ಏನಾದರೂ ಹೇಳಿದನೇ?
14060011a ಆಹವಂ ಪೃಷ್ಠತಃ ಕೃತ್ವಾ ಕಚ್ಚಿನ್ನ ನಿಹತಃ ಪರೈಃ|
14060011c ಕಚ್ಚಿನ್ಮುಖಂ ನ ಗೋವಿಂದ ತೇನಾಜೌ ವಿಕೃತಂ ಕೃತಮ್||
ಯುದ್ಧಕ್ಕೆ ಬೆನ್ನುಹಾಕಿ ಹೋಗುತ್ತಿರುವಾಗ ಶತ್ರುಗಳು ಅವನನ್ನು ಸಂಹರಿಸಲಿಲ್ಲ ತಾನೇ? ಗೋವಿಂದ! ಆಗ ಅವನ ಮುಖವು ಭಯದಿಂದ ವಿಕಾರಗೊಳ್ಳಲಿಲ್ಲ ತಾನೇ?
14060012a ಸ ಹಿ ಕೃಷ್ಣ ಮಹಾತೇಜಾಃ ಶ್ಲಾಘನ್ನಿವ ಮಮಾಗ್ರತಃ|
14060012c ಬಾಲಭಾವೇನ ವಿಜಯಮಾತ್ಮನೋಽಕಥಯತ್ಪ್ರಭುಃ||
ಕೃಷ್ಣ! ಆ ಮಹಾತೇಜಸ್ವೀ ಪ್ರಭುವು ಹುಡುಗತನದಿಂದ ನನ್ನ ಎದಿರು ತನ್ನ ವಿಜಯಗಳನ್ನು ತಾನೇ ಹೊಗಳಿಕೊಳ್ಳುತ್ತಿದ್ದನು.
14060013a ಕಚ್ಚಿನ್ನ ವಿಕೃತೋ ಬಾಲೋ ದ್ರೋಣಕರ್ಣಕೃಪಾದಿಭಿಃ|
14060013c ಧರಣ್ಯಾಂ ನಿಹತಃ ಶೇತೇ ತನ್ಮಮಾಚಕ್ಷ್ವ ಕೇಶವ||
ಕೇಶವ! ಆ ಬಾಲಕನು ದ್ರೋಣ-ಕರ್ಣ-ಕೃಪಾದಿಗಳ ವಂಚನೆಯಿಂದ ಹತನಾಗಿ ಧರಣಿಯ ಮೇಲೆ ಮಲಗಲಿಲ್ಲ ತಾನೇ? ಅದರ ಕುರಿತು ನನಗೆ ಹೇಳು!
14060014a ಸ ಹಿ ದ್ರೋಣಂ ಚ ಭೀಷ್ಮಂ ಚ ಕರ್ಣಂ ಚ ರಥಿನಾಂ ವರಮ್|
14060014c ಸ್ಪರ್ಧತೇ ಸ್ಮ ರಣೇ ನಿತ್ಯಂ ದುಹಿತುಃ ಪುತ್ರಕೋ ಮಮ||
ನನ್ನ ಆ ಮೊಮ್ಮಗನು ನಿತ್ಯವೂ ರಣದಲ್ಲಿ ದ್ರೋಣ, ಭೀಷ್ಮ, ರಥಿಗಳಲ್ಲಿ ಶ್ರೇಷ್ಠ ಕರ್ಣ ಇವರೊಡನೆ ಸ್ಪರ್ಧಿಸುತ್ತಲೇ ಇದ್ದನು.”
14060015a ಏವಂವಿಧಂ ಬಹು ತದಾ ವಿಲಪಂತಂ ಸುದುಃಖಿತಮ್|
14060015c ಪಿತರಂ ದುಃಖಿತತರೋ ಗೋವಿಂದೋ ವಾಕ್ಯಮಬ್ರವೀತ್||
ಹೀಗೆ ಅತ್ಯಂತ ದುಃಖಿತನಾಗಿ ವಿಲಪಿಸುತ್ತಿದ್ದ ತಂದೆಗೆ ಇನ್ನೂ ಹೆಚ್ಚು ದುಃಖದಲ್ಲಿದ್ದ ಗೋವಿಂದನು ಈ ಮಾತುಗಳನ್ನಾಡಿದನು:
14060016a ನ ತೇನ ವಿಕೃತಂ ವಕ್ತ್ರಂ ಕೃತಂ ಸಂಗ್ರಾಮಮೂರ್ಧನಿ|
14060016c ನ ಪೃಷ್ಠತಃ ಕೃತಶ್ಚಾಪಿ ಸಂಗ್ರಾಮಸ್ತೇನ ದುಸ್ತರಃ||
“ಸಂಗ್ರಾಮದ ಎದಿರು ಯುದ್ಧಮಾಡುತ್ತಿದ್ದ ಅಭಿಮನ್ಯುವು ಯಾವಾಗಲೂ ತನ್ನ ಮುಖವನ್ನು ಭಯದಿಂದ ವಿಕಾರಗೊಳಿಸಲಿಲ್ಲ. ದುಸ್ತರ ಸಂಗ್ರಾಮದಿಂದ ಅವನು ಎಂದೂ ಬೆನ್ನುಹಾಕಲಿಲ್ಲ.
14060017a ನಿಹತ್ಯ ಪೃಥಿವೀಪಾಲಾನ್ಸಹಸ್ರಶತಸಂಘಶಃ|
14060017c ಖೇದಿತೋ ದ್ರೋಣಕರ್ಣಾಭ್ಯಾಂ ದೌಃಶಾಸನಿವಶಂ ಗತಃ||
ಅವನು ಲಕ್ಷಗಟ್ಟಲೆ ಪೃಥ್ವೀಪಾಲರನ್ನು ಸಂಹರಿಸಿ, ದ್ರೋಣ-ಕರ್ಣರಿಂದ ದುಃಖಿತನಾಗಿ ಅಂತ್ಯದಲ್ಲಿ ದುಃಶಾಸನನ ಮಗನಿಂದ ಹತನಾದನು.
14060018a ಏಕೋ ಹ್ಯೇಕೇನ ಸತತಂ ಯುಧ್ಯಮಾನೋ ಯದಿ ಪ್ರಭೋ|
14060018c ನ ಸ ಶಕ್ಯೇತ ಸಂಗ್ರಾಮೇ ನಿಹಂತುಮಪಿ ವಜ್ರಿಣಾ||
ಪ್ರಭೋ! ಒಬ್ಬನು ಓರ್ವ ಇನ್ನೊಬ್ಬನೊಡನೆಯೇ ಯುದ್ಧಮಾಡುತ್ತಿದ್ದರೆ ಸಂಗ್ರಾಮದಲ್ಲಿ ಅವನನ್ನು ವಜ್ರಿ ಇಂದ್ರನಿಗೂ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ.
14060019a ಸಮಾಹೂತೇ ತು ಸಂಗ್ರಾಮೇ ಪಾರ್ಥೇ ಸಂಶಪ್ತಕೈಸ್ತದಾ|
14060019c ಪರ್ಯವಾರ್ಯತ ಸಂಕ್ರುದ್ಧೈಃ ಸ ದ್ರೋಣಾದಿಭಿರಾಹವೇ||
ಸಂಶಪ್ತಕರು ಪಾರ್ಥನನ್ನು ಸಂಗ್ರಾಮಕ್ಕೆ ಆಹ್ವಾನಿಸಿದ್ದಾಗ ಸಂಕ್ರುದ್ಧ ದ್ರೋಣಾದಿಗಳು ಯುದ್ಧದಲ್ಲಿ ಅಭಿಮನ್ಯುವನ್ನು ಸುತ್ತುವರೆದಿದ್ದರು.
14060020a ತತಃ ಶತ್ರುಕ್ಷಯಂ ಕೃತ್ವಾ ಸುಮಹಾಂತಂ ರಣೇ ಪಿತುಃ|
14060020c ದೌಹಿತ್ರಸ್ತವ ವಾರ್ಷ್ಣೇಯ ದೌಃಶಾಸನಿವಶಂ ಗತಃ||
ತಂದೇ! ಆಗ ರಣದಲ್ಲಿ ಮಹಾಶತ್ರುಕ್ಷಯವನ್ನುಂಟುಮಾಡಿ ನಿನ್ನ ಮಗಳ ಮಗ ವಾರ್ಷ್ಣೇಯನು ದುಃಶಾಸನನ ಮಗನಿಂದ ಹತನಾದನು.
14060021a ನೂನಂ ಚ ಸ ಗತಃ ಸ್ವರ್ಗಂ ಜಹಿ ಶೋಕಂ ಮಹಾಮತೇ|
14060021c ನ ಹಿ ವ್ಯಸನಮಾಸಾದ್ಯ ಸೀದಂತೇ ಸನ್ನರಾಃ ಕ್ವ ಚಿತ್||
ಮಹಾಮತೇ! ಅವನು ನಿಶ್ಚಯವಾಗಿಯೂ ಸ್ವರ್ಗಕ್ಕೇ ಹೋಗಿರಬೇಕು. ಶೋಕವನ್ನು ತೊರೆ! ಉತ್ತಮ ಪುರುಷರು ಎಂದೂ ವ್ಯಸನ ಹೊಂದಿ ಕುಸಿಯುವುದಿಲ್ಲ!
14060022a ದ್ರೋಣಕರ್ಣಪ್ರಭೃತಯೋ ಯೇನ ಪ್ರತಿಸಮಾಸಿತಾಃ|
14060022c ರಣೇ ಮಹೇಂದ್ರಪ್ರತಿಮಾಃ ಸ ಕಥಂ ನಾಪ್ನುಯಾದ್ದಿವಮ್||
ರಣದಲ್ಲಿ ಮಹೇಂದ್ರನಂತಿದ್ದ ದ್ರೋಣ-ಕರ್ಣಾದಿಗಳು ಯಾರನ್ನು ಎದುರಿಸಿ ಯುದ್ಧಮಾಡಿದರೋ ಅವನು ಹೇಗೆ ತಾನೇ ಸ್ವರ್ಗವನ್ನು ಪಡೆದಿರಲಿಕ್ಕಿಲ್ಲ?
14060023a ಸ ಶೋಕಂ ಜಹಿ ದುರ್ಧರ್ಷ ಮಾ ಚ ಮನ್ಯುವಶಂ ಗಮಃ|
14060023c ಶಸ್ತ್ರಪೂತಾಂ ಹಿ ಸ ಗತಿಂ ಗತಃ ಪರಪುರಂಜಯಃ||
ದುರ್ಧರ್ಷ! ಶೋಕವನ್ನು ಬಿಡು! ಕೋಪಕ್ಕೆ ವಶನಾಗಬೇಡ! ಆ ಪರಪುರಂಜಯ ಅಭಿಮನ್ಯುವು ಶಸ್ತ್ರಗಳಿಂದ ಪವಿತ್ರರಾದವರು ಹೋಗುವ ಮಾರ್ಗದಲ್ಲಿಯೇ ಹೋಗಿದ್ದಾನೆ.
14060024a ತಸ್ಮಿಂಸ್ತು ನಿಹತೇ ವೀರೇ ಸುಭದ್ರೇಯಂ ಸ್ವಸಾ ಮಮ|
14060024c ದುಃಖಾರ್ತಾಥೋ ಪೃಥಾಂ ಪ್ರಾಪ್ಯ ಕುರರೀವ ನನಾದ ಹ||
ಆ ವೀರ ಸುಭದ್ರೇಯನು ಹತನಾಗಲು ದುಃಖಾರ್ತಳಾದ ನನ್ನ ತಂಗಿ ಸುಭದ್ರೆಯು ಪೃಥಾ ಕುಂತಿಯ ಬಳಿಸಾರಿ ಕುರರಿಯಂತೆ ರೋದಿಸಿದ್ದಳು.
14060025a ದ್ರೌಪದೀಂ ಚ ಸಮಾಸಾದ್ಯ ಪರ್ಯಪೃಚ್ಚತ ದುಃಖಿತಾ|
14060025c ಆರ್ಯೇ ಕ್ವ ದಾರಕಾಃ ಸರ್ವೇ ದ್ರಷ್ಟುಮಿಚ್ಚಾಮಿ ತಾನಹಮ್||
ದ್ರೌಪದಿಯನ್ನೂ ಸಂಧಿಸಿ ದುಃಖಿತಳಾದ ಅವಳು “ಆರ್ಯೇ! ಎಲ್ಲ ಮಕ್ಕಳೂ ಎಲ್ಲಿದ್ದಾರೆ? ಅವರನ್ನು ನೋಡ ಬಯಸುತ್ತೇನೆ!” ಎಂದು ಕೇಳಿದ್ದಳು.
14060026a ಅಸ್ಯಾಸ್ತು ವಚನಂ ಶ್ರುತ್ವಾ ಸರ್ವಾಸ್ತಾಃ ಕುರುಯೋಷಿತಃ|
14060026c ಭುಜಾಭ್ಯಾಂ ಪರಿಗೃಹ್ಯೈನಾಂ ಚುಕ್ರುಶುಃ ಪರಮಾರ್ತವತ್||
ಅವಳ ಮಾತನ್ನು ಕೇಳಿ ಆ ಎಲ್ಲ ಕುರುಸ್ತ್ರೀಯರೂ ಅವಳ ಭುಜಗಳನ್ನು ಹಿಡಿದು ಪರಮ ಆರ್ತರಾಗಿ ಅಳುತ್ತಿದ್ದರು.
14060027a ಉತ್ತರಾಂ ಚಾಬ್ರವೀದ್ಭದ್ರಾ ಭದ್ರೇ ಭರ್ತಾ ಕ್ವ ತೇ ಗತಃ|
14060027c ಕ್ಷಿಪ್ರಮಾಗಮನಂ ಮಹ್ಯಂ ತಸ್ಮೈ ತ್ವಂ ವೇದಯಸ್ವ ಹ||
ಸುಭದ್ರೆಯು ಉತ್ತರೆಯನ್ನು ಕುರಿತು ಹೀಗೆ ಹೇಳಿದ್ದಳು: “ಭದ್ರೇ! ನಿನ್ನ ಪತಿಯು ಎಲ್ಲಿಗೆ ಹೋಗಿರುವನು? ಅವನ ಆಗಮನವನ್ನು ಬೇಗನೇ ನನಗೆ ಬಂದು ಹೇಳಬೇಕು!
14060028a ನನು ನಾಮ ಸ ವೈರಾಟಿ ಶ್ರುತ್ವಾ ಮಮ ಗಿರಂ ಪುರಾ|
14060028c ಭವನಾನ್ನಿಷ್ಪತತ್ಯಾಶು ಕಸ್ಮಾನ್ನಾಭ್ಯೇತಿ ತೇ ಪತಿಃ||
ವೈರಾಟೀ! ಹಿಂದೆ ನನ್ನ ಧ್ವನಿಯನು ಕೇಳುತ್ತಲೇ ತನ್ನ ಭವನದಿಂದ ಹೊರಬರುತ್ತಿದ್ದ ನಿನ್ನ ಪತಿಯು ಇಂದೇಕೆ ಹೊರಬರುತ್ತಿಲ್ಲ?
14060029a ಅಭಿಮನ್ಯೋ ಕುಶಲಿನೋ ಮಾತುಲಾಸ್ತೇ ಮಹಾರಥಾಃ|
14060029c ಕುಶಲಂ ಚಾಬ್ರುವನ್ಸರ್ವೇ ತ್ವಾಂ ಯುಯುತ್ಸುಮಿಹಾಗತಮ್||
ಅಭಿಮನ್ಯೋ! ಮಹಾರಥರಾದ ನಿನ್ನ ಸೋದರ ಮಾವಂದಿರು ಕುಶಲರಾಗಿದ್ದಾರೆ. ಅವರು ಯುದ್ಧಕ್ಕೆಂದು ಆಗಮಿಸಿರುವ ನಿನ್ನ ಕುಶಲವನ್ನು ಕೇಳುತ್ತಿದ್ದಾರೆ.
14060030a ಆಚಕ್ಷ್ವ ಮೇಽದ್ಯ ಸಂಗ್ರಾಮಂ ಯಥಾಪೂರ್ವಮರಿಂದಮ|
14060030c ಕಸ್ಮಾದೇವ ವಿಲಪತೀಂ ನಾದ್ಯೇಹ ಪ್ರತಿಭಾಷಸೇ||
ಅರಿಂದಮ! ಹಿಂದಿನಂತೆ ಇಂದೂ ಕೂಡ ಸಂಗ್ರಾಮದ ಕುರಿತು ವರದಿಮಾಡು. ವಿಲಪಿಸುತ್ತಿರುವ ನನಗೇಕೆ ಇಂದು ನೀನು ಉತ್ತರಿಸುತ್ತಿಲ್ಲ?”
14060031a ಏವಮಾದಿ ತು ವಾರ್ಷ್ಣೇಯ್ಯಾಸ್ತದಸ್ಯಾಃ ಪರಿದೇವಿತಮ್|
14060031c ಶ್ರುತ್ವಾ ಪೃಥಾ ಸುದುಃಖಾರ್ತಾ ಶನೈರ್ವಾಕ್ಯಮಥಾಬ್ರವೀತ್||
ಇದೇ ಮುಂತಾಗಿ ವಿಲಪಿಸುತ್ತಿದ್ದ ವಾರ್ಷ್ಣೇಯಿಯನ್ನು ಕೇಳಿ ದುಃಖಾರ್ತಳಾಗಿದ್ದ ಪೃಥೆಯು ಅವಳಿಗೆ ಮೆಲ್ಲನೇ ಈ ಮಾತುಗಳನ್ನಾಡಿದ್ದಳು:
14060032a ಸುಭದ್ರೇ ವಾಸುದೇವೇನ ತಥಾ ಸಾತ್ಯಕಿನಾ ರಣೇ|
14060032c ಪಿತ್ರಾ ಚ ಪಾಲಿತೋ ಬಾಲಃ ಸ ಹತಃ ಕಾಲಧರ್ಮಣಾ||
“ಸುಭದ್ರೇ! ರಣದಲ್ಲಿ ವಾಸುದೇವ, ಸಾತ್ಯಕಿ ಮತ್ತು ತಂದೆ ಅರ್ಜುನರಿಂದ ಪಾಲಿತನಾಗಿದ್ದ ಈ ಬಾಲಕನು ಕಾಲಧರ್ಮಾನುಸಾರವಾಗಿ ಹತನಾಗಿದ್ದಾನೆ.
14060033a ಈದೃಶೋ ಮರ್ತ್ಯಧರ್ಮೋಽಯಂ ಮಾ ಶುಚೋ ಯದುನಂದಿನಿ|
14060033c ಪುತ್ರೋ ಹಿ ತವ ದುರ್ಧರ್ಷಃ ಸಂಪ್ರಾಪ್ತಃ ಪರಮಾಂ ಗತಿಮ್||
ಯದುನಂದಿನಿ! ಮನುಷ್ಯಧರ್ಮವೇ ಈ ರೀತಿಯಿರುವಾಗ ಅದಕ್ಕೆ ನೀನು ಶೋಕಿಸಬೇಡ! ದುರ್ಧರ್ಷನಾಗಿದ್ದ ನಿನ್ನ ಪುತ್ರನು ಪರಮ ಗತಿಯನ್ನೇ ಪಡೆದಿದ್ದಾನೆ.
14060034a ಕುಲೇ ಮಹತಿ ಜಾತಾಸಿ ಕ್ಷತ್ರಿಯಾಣಾಂ ಮಹಾತ್ಮನಾಮ್|
14060034c ಮಾ ಶುಚಶ್ಚಪಲಾಕ್ಷಂ ತ್ವಂ ಪುಂಡರೀಕನಿಭೇಕ್ಷಣೇ||
ಮಹಾತ್ಮ ಕ್ಷತ್ರಿಯರ ಮಹಾಕುಲದಲ್ಲಿ ಜನಿಸಿರುವೆ. ಕಮಲದ ದಳದಂಥಹ ಕಣ್ಣುಗಳುಳ್ಳ ನೀನು ಆ ಚಪಲಾಕ್ಷನ ಕುರಿತು ಶೋಕಿಸಬೇಡ!
14060035a ಉತ್ತರಾಂ ತ್ವಮವೇಕ್ಷಸ್ವ ಗರ್ಭಿಣೀಂ ಮಾ ಶುಚಃ ಶುಭೇ|
14060035c ಪುತ್ರಮೇಷಾ ಹಿ ತಸ್ಯಾಶು ಜನಯಿಷ್ಯತಿ ಭಾಮಿನೀ||
ಶುಭೇ! ಗರ್ಭಿಣಿಯಾಗಿರುವ ಉತ್ತರೆಯನ್ನಾದರೂ ನೋಡಿ ಶೋಕಿಸುವುದನ್ನು ನಿಲ್ಲಿಸು! ಭಾಮಿನೀ! ಅವನ ಮಗನಿಗೇ ಇವಳು ಜನ್ಮನೀಡುವವಳಿದ್ದಾಳೆ!”
14060036a ಏವಮಾಶ್ವಾಸಯಿತ್ವೈನಾಂ ಕುಂತೀ ಯದುಕುಲೋದ್ವಹ|
14060036c ವಿಹಾಯ ಶೋಕಂ ದುರ್ಧರ್ಷಂ ಶ್ರಾದ್ಧಮಸ್ಯ ಹ್ಯಕಲ್ಪಯತ್||
ಯದುಕುಲೋದ್ವಹ! ಕುಂತಿಯು ಹೀಗೆ ಸುಭದ್ರೆಯನ್ನು ಸಂತೈಸಿ ಸಹಿಸಲಸಾಧ್ಯ ಶೋಕವನ್ನು ತೊರೆದು ಅವನ ಶ್ರಾದ್ಧಕ್ಕೆ ಸಿದ್ಧತೆಗಳನ್ನು ಮಾಡಿದ್ದಳು.
14060037a ಸಮನುಜ್ಞಾಪ್ಯ ಧರ್ಮಜ್ಞಾ ರಾಜಾನಂ ಭೀಮಮೇವ ಚ|
14060037c ಯಮೌ ಯಮೋಪಮೌ ಚೈವ ದದೌ ದಾನಾನ್ಯನೇಕಶಃ||
ಅವಳು ಧರ್ಮಜ್ಞ ರಾಜ, ಭೀಮಸೇನ ಮತ್ತು ಯಮೋಪಮರಾದ ಯಮಳರ ಒಪ್ಪಿಗೆಯಂತೆ ಅನೇಕ ದಾನಗಳನ್ನು ನೀಡಿದಳು.
14060038a ತತಃ ಪ್ರದಾಯ ಬಹ್ವೀರ್ಗಾ ಬ್ರಾಹ್ಮಣೇಭ್ಯೋ ಯದೂದ್ವಹ|
14060038c ಸಮಹೃಷ್ಯತ ವಾರ್ಷ್ಣೇಯೀ ವೈರಾಟೀಂ ಚಾಬ್ರವೀದಿದಮ್||
ಯದೂದ್ವಹ! ಬ್ರಾಹ್ಮಣರಿಗೆ ಅನೇಕ ಗೋವುಗಳನ್ನು ದಾನವಾಗಿತ್ತು ಸಮಾಧಾನಮಾಡಿಕೊಂಡ ವಾರ್ಷ್ಣೇಯಿ ಕುಂತಿಯು ವೈರಾಟೀ ಉತ್ತರೆಗೆ ಹೇಳಿದಳು:
14060039a ವೈರಾಟಿ ನೇಹ ಸಂತಾಪಸ್ತ್ವಯಾ ಕಾರ್ಯೋ ಯಶಸ್ವಿನಿ|
14060039c ಭರ್ತಾರಂ ಪ್ರತಿ ಸುಶ್ರೋಣಿ ಗರ್ಭಸ್ಥಂ ರಕ್ಷ ಮೇ ಶಿಶುಮ್||
“ವೈರಾಟೀ! ಯಶಸ್ವಿನೀ! ಸುಶ್ರೋಣೀ! ಪತಿಯ ಕುರಿತು ಸಂತಾಪಪಡುವ ಕಾರ್ಯ ನಿನ್ನದಲ್ಲ! ನೀನು ಗರ್ಭದಲ್ಲಿರುವ ಶಿಶುವನ್ನು ರಕ್ಷಿಸಿಕೊಳ್ಳಬೇಕು!”
14060040a ಏವಮುಕ್ತ್ವಾ ತತಃ ಕುಂತೀ ವಿರರಾಮ ಮಹಾದ್ಯುತೇ|
14060040c ತಾಮನುಜ್ಞಾಪ್ಯ ಚೈವೇಮಾಂ ಸುಭದ್ರಾಂ ಸಮುಪಾನಯಮ್||
ಮಹಾದ್ಯುತೇ! ಹೀಗೆ ಹೇಳಿ ಕುಂತಿಯು ಸುಮ್ಮನಾದಳು. ಆಗ ನಾನು ಅವಳ ಅನುಮತಿಯನ್ನು ಪಡೆದು ಸುಭದ್ರೆಯನ್ನು ಇಲ್ಲಿಗೆ ಕರೆದುಕೊಂಡು ಬಂದೆನು.
14060041a ಏವಂ ಸ ನಿಧನಂ ಪ್ರಾಪ್ತೋ ದೌಹಿತ್ರಸ್ತವ ಮಾಧವ|
14060041c ಸಂತಾಪಂ ಜಹಿ ದುರ್ಧರ್ಷ ಮಾ ಚ ಶೋಕೇ ಮನಃ ಕೃಥಾಃ||
ಮಾಧವ! ಹೀಗೆ ನಿನ್ನ ಮಗಳ ಮಗನು ನಿಧನಹೊಂದಿದನು. ದುರ್ಧರ್ಷ! ಸಂತಾಪವನ್ನು ತೊರೆ ಮತ್ತು ನಿನ್ನ ಮನಸ್ಸನ್ನು ಶೋಕಕ್ಕೊಳಗಾಗಿಸಬೇಡ!””
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವಸುದೇವಸಾಂತ್ವನೇ ಷಷ್ಟಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ವಸುದೇವಸಾಂತ್ವನ ಎನ್ನುವ ಅರವತ್ತನೇ ಅಧ್ಯಾಯವು.