Ashvamedhika Parva: Chapter 58

ಅಶ್ವಮೇಧಿಕ ಪರ್ವ

೫೮

ದ್ವಾರವತಿಯಲ್ಲಿ ರೈವತಕ ಉತ್ಸವದ ವರ್ಣನೆ (೧-೧೪). ನೇರವಾಗಿ ಅಲ್ಲಿಗೆ ಬಂದ ಕೃಷ್ಣನು ತಂದೆ ವಸುದೇವನನ್ನು ಸಂದರ್ಶಿಸಿದುದು (೧೫-೨೦).

14058001 ಜನಮೇಜಯ ಉವಾಚ

14058001a ಉತ್ತಂಕಾಯ ವರಂ ದತ್ತ್ವಾ ಗೋವಿಂದೋ ದ್ವಿಜಸತ್ತಮ|

14058001c ಅತ ಊರ್ಧ್ವಂ ಮಹಾಬಾಹುಃ ಕಿಂ ಚಕಾರ ಮಹಾಯಶಾಃ||

ಜನಮೇಜಯನು ಹೇಳಿದನು: “ದ್ವಿಜಸತ್ತಮ! ಉತ್ತಂಕನಿಗೆ ವರವನ್ನಿತ್ತ ನಂತರ ಮಹಾಬಾಹು ಮಹಾಯಶಸ್ವಿ ಗೋವಿಂದನು ಏನು ಮಾಡಿದನು?”

14058002 ವೈಶಂಪಾಯನ ಉವಾಚ

14058002a ದತ್ತ್ವಾ ವರಮುತ್ತಂಕಾಯ ಪ್ರಾಯಾತ್ಸಾತ್ಯಕಿನಾ ಸಹ|

14058002c ದ್ವಾರಕಾಮೇವ ಗೋವಿಂದಃ ಶೀಘ್ರವೇಗೈರ್ಮಹಾಹಯೈಃ||

ವೈಶಂಪಾಯನನು ಹೇಳಿದನು: “ಉತ್ತಂಕನಿಗೆ ವರವನ್ನಿತ್ತು ಸಾತ್ಯಕಿಯೊಡನೆ ಮಹಾಹಯಗಳ ಶೀಘ್ರ ವೇಗದೊಂದಿಗೆ ಗೋವಿಂದನು ದ್ವಾರಕೆಗೆ ಹೋದನು.

14058003a ಸರಾಂಸಿ ಚ ನದೀಶ್ಚೈವ ವನಾನಿ ವಿವಿಧಾನಿ ಚ|

14058003c ಅತಿಕ್ರಮ್ಯ ಸಸಾದಾಥ ರಮ್ಯಾಂ ದ್ವಾರವತೀಂ ಪುರೀಮ್||

ವಿವಿಧ ಸರೋವರಗಳನ್ನೂ, ನದಿಗಳನ್ನೂ ಮತ್ತು ವನಗಳನ್ನೂ ದಾಟಿ ಅವನು ರಮ್ಯ ದ್ವಾರವತೀ ಪುರವನ್ನು ತಲುಪಿದನು.

14058004a ವರ್ತಮಾನೇ ಮಹಾರಾಜ ಮಹೇ ರೈವತಕಸ್ಯ ಚ|

14058004c ಉಪಾಯಾತ್ಪುಂಡರೀಕಾಕ್ಷೋ ಯುಯುಧಾನಾನುಗಸ್ತದಾ||

ಮಹಾರಾಜ! ರೈವತಕ ಗಿರಿಯಲ್ಲಿ ನಡೆಯುತ್ತಿದ್ದ ಮಹಾ ಉತ್ಸವಕ್ಕೆ ಪುಂಡರೀಕಾಕ್ಷನು ಯುಯುಧಾನ ಸಾತ್ಯಕಿಯೊಡನೆ ನೇರವಾಗಿ ಹೋದನು.

14058005a ಅಲಂಕೃತಸ್ತು ಸ ಗಿರಿರ್ನಾನಾರೂಪವಿಚಿತ್ರಿತೈಃ|

14058005c ಬಭೌ ರುಕ್ಮಮಯೈಃ ಕಾಶೈಃ ಸರ್ವತಃ ಪುರುಷರ್ಷಭ||

ಪುರುಷರ್ಷಭ! ಆ ಗಿರಿಯಾದರೋ ನಾನಾ ರೂಪ-ಬಣ್ಣಗಳಿಂದ, ಸುವರ್ಣದಿಂದ ಮಾಡಿದ್ದ ಡೇರೆಗಳಿಂದ ಎಲ್ಲೆಲ್ಲೂ ಅಲಂಕೃತವಾಗಿತ್ತು.

14058006a ಕಾಂಚನಸ್ರಗ್ಭಿರಗ್ರ್ಯಾಭಿಃ ಸುಮನೋಭಿಸ್ತಥೈವ ಚ|

14058006c ವಾಸೋಭಿಶ್ಚ ಮಹಾಶೈಲಃ ಕಲ್ಪವೃಕ್ಷೈಶ್ಚ ಸರ್ವಶಃ||

ಶ್ರೇಷ್ಠವೂ ಸುಮನೋಹರವೂ ಆದ ಸುವರ್ಣ ಹಾರಗಳಿಂದಲೂ, ವಸ್ತ್ರಗಳಿಂದಲೂ ಆ ಮಹಾಶೈಲವು ಅಲಂಕೃತಗೊಂಡಿತ್ತು. ಸುತ್ತಲೂ ಕಲ್ಪವೃಕ್ಷಗಳಿದ್ದವು.

14058007a ದೀಪವೃಕ್ಷೈಶ್ಚ ಸೌವರ್ಣೈರಭೀಕ್ಷ್ಣಮುಪಶೋಭಿತಃ|

14058007c ಗುಹಾನಿರ್ಝರದೇಶೇಷು ದಿವಾಭೂತೋ ಬಭೂವ ಹ||

ಸುವರ್ಣಮಯ ದೀಪವೃಕ್ಷಗಳಿಂದ ಆ ಪರ್ವತದ ಗುಹೆ-ಚಿಲುಮೆಗಳ ಪ್ರದೇಶಗಳಲ್ಲಿ ಸದಾ ಹಗಲಾಗಿರುವಂತೆಯೇ ಕಾಣುತ್ತಿತ್ತು.

14058008a ಪತಾಕಾಭಿರ್ವಿಚಿತ್ರಾಭಿಃ ಸಘಂಟಾಭಿಃ ಸಮಂತತಃ|

14058008c ಪುಂಭಿಃ ಸ್ತ್ರೀಭಿಶ್ಚ ಸಂಘುಷ್ಟಃ ಪ್ರಗೀತ ಇವ ಚಾಭವತ್|

14058008e ಅತೀವ ಪ್ರೇಕ್ಷಣೀಯೋಽಭೂನ್ಮೇರುರ್ಮುನಿಗಣೈರಿವ||

ಸುತ್ತಲೂ ಹಾರಾಡುತ್ತಿದ್ದ ಘಂಟೆಗಳಿಂದ ಕೂಡಿದ ಪತಾಕೆಗಳಿಂದಲೂ ಮತ್ತು ಸ್ತ್ರೀ-ಪುರುಷರ ಗುಂಪುಮಾತುಗಳಿಂದಲೂ ಸಂಗೀತಮಯವಾಗಿದ್ದ ಆ ಪರ್ವತವು ಮುನಿಗಣಗಳಿಂದ ಕಂಗೊಳಿಸುವ ಮೇರು ಪರ್ವತದಂತೆ ಪ್ರೇಕ್ಷಣೀಯವಾಗಿತ್ತು.

14058009a ಮತ್ತಾನಾಂ ಹೃಷ್ಟರೂಪಾಣಾಂ ಸ್ತ್ರೀಣಾಂ ಪುಂಸಾಂ ಚ ಭಾರತ|

14058009c ಗಾಯತಾಂ ಪರ್ವತೇಂದ್ರಸ್ಯ ದಿವಸ್ಪೃಗಿವ ನಿಸ್ವನಃ||

ಭಾರತ! ಆ ಪರ್ವತೇಂದ್ರನ ಮೇಲೆ ಸಂತಸದಿಂದ ಮತ್ತೇರಿದ ಸ್ತ್ರೀ-ಪುರುಷರ ಗಾಯನಗಳು ಆಕಾಶವನ್ನು ತಟ್ಟುತ್ತಿರುವವೋ ಎಂಬಂತೆ ಕೇಳಿಬರುತ್ತಿತ್ತು.

14058010a ಪ್ರಮತ್ತಮತ್ತಸಂಮತ್ತಕ್ಷ್ವೇಡಿತೋತ್ಕೃಷ್ಟಸಂಕುಲಾ|

14058010c ತಥಾ ಕಿಲಕಿಲಾಶಬ್ದೈರ್ಭೂರಭೂತ್ಸುಮನೋಹರಾ||

ಪ್ರಮತ್ತ, ಮತ್ತ ಮತ್ತು ಸಮ್ಮತ್ತ ಗುಂಪುಗಳ ಕಿಲ-ಕಿಲ ಶಬ್ಧಗಳಿಂದ ಆ ಪರ್ವತವು ಸುಮನೋಹರವಾಗಿತ್ತು.

14058011a ವಿಪಣಾಪಣವಾನ್ರಮ್ಯೋ ಭಕ್ಷ್ಯಭೋಜ್ಯವಿಹಾರವಾನ್|

14058011c ವಸ್ತ್ರಮಾಲ್ಯೋತ್ಕರಯುತೋ ವೀಣಾವೇಣುಮೃದಂಗವಾನ್||

ಅದು ಅಂಗಡಿ-ಮಾರುಕಟ್ಟೆಗಳಿಂದಲೂ, ರಮ್ಯವಾದ ಭಕ್ಷ-ಭೋಜ್ಯ ವಿಹಾರಗಳಿಂದಲೂ, ವಸ್ತ್ರ-ಮಾಲೆಗಳ ರಾಶಿಗಳಿಂದಲೂ, ವೇಣು-ಮೃದಂಗ ವಾದಿಗಳಿಂದಲೂ ತುಂಬಿಹೋಗಿತ್ತು.

14058012a ಸುರಾಮೈರೇಯಮಿಶ್ರೇಣ ಭಕ್ಷ್ಯಭೋಜ್ಯೇನ ಚೈವ ಹ|

14058012c ದೀನಾಂಧಕೃಪಣಾದಿಭ್ಯೋ ದೀಯಮಾನೇನ ಚಾನಿಶಮ್|

14058012e ಬಭೌ ಪರಮಕಲ್ಯಾಣೋ ಮಹಸ್ತಸ್ಯ ಮಹಾಗಿರೇಃ||

ಸುರಾ-ಮೈರೇಯ ಮಿಶ್ರಿತ ಭಕ್ಷ್ಯ-ಭೋಜ್ಯಗಳನ್ನು ದೀನ-ಅಂಧ-ಕೃಪಣರಿಗೆ ನಿರಂತರವಾಗಿ ನೀಡುತ್ತಿದ್ದ ಆ ಮಹಾಗಿರಿಯ ಮಹೋತ್ಸವು ಪರಮಕಲ್ಯಾಣಯುಕ್ತವಾಗಿತ್ತು.

14058013a ಪುಣ್ಯಾವಸಥವಾನ್ವೀರ ಪುಣ್ಯಕೃದ್ಭಿರ್ನಿಷೇವಿತಃ|

14058013c ವಿಹಾರೋ ವೃಷ್ಣಿವೀರಾಣಾಂ ಮಹೇ ರೈವತಕಸ್ಯ ಹ|

14058013e ಸ ನಗೋ ವೇಶ್ಮಸಂಕೀರ್ಣೋ ದೇವಲೋಕ ಇವಾಬಭೌ||

ವೀರ! ಅಲ್ಲಿ ಪುಣ್ಯಕರ್ಮಿಗಳು ವಾಸಿಸಲು ಪುಣ್ಯ ಶಿಬಿರಗಳಿದ್ದವು. ಆ ರೈವತಕದ ಮಹೋತ್ಸವದಲ್ಲಿ ವೃಷ್ಣಿವೀರರ ವಿಹಾರಕ್ಕಾಗಿ ನಿರ್ಮಿಸಿದ್ದ ಆ ಭವನ-ಸಂಕೀರ್ಣಗಳಿಂದ ಅದು ದೇವಲೋಕದಂತೆಯೇ ಕಂಗೊಳಿಸುತ್ತಿತ್ತು.

14058014a ತದಾ ಚ ಕೃಷ್ಣಸಾಂನಿಧ್ಯಮಾಸಾದ್ಯ ಭರತರ್ಷಭ|

14058014c ಶಕ್ರಸದ್ಮಪ್ರತೀಕಾಶೋ ಬಭೂವ ಸ ಹಿ ಶೈಲರಾಟ್||

ಭರತರ್ಷಭ! ಆಗ ಕೃಷ್ಣನ ಸಾನ್ನಿಧ್ಯವನ್ನು ಪಡೆದ ಆ ಶೈಲರಾಜನು ಇಂದ್ರನ ಅರಮನೆಯಂತೆಯೇ ಕಂಗೊಳಿಸಿದನು.

14058015a ತತಃ ಸಂಪೂಜ್ಯಮಾನಃ ಸ ವಿವೇಶ ಭವನಂ ಶುಭಮ್|

14058015c ಗೋವಿಂದಃ ಸಾತ್ಯಕಿಶ್ಚೈವ ಜಗಾಮ ಭವನಂ ಸ್ವಕಮ್||

ಆಗ ಪೂಜಿಸಲ್ಪಟ್ಟು ಗೋವಿಂದನು ಶುಭ ಭವನವನ್ನು ಪ್ರವೇಶಿಸಿದನು. ಸಾತ್ಯಕಿಯೂ ಕೂಡ ತನ್ನ ಭವನವನ್ನು ಪ್ರವೇಶಿಸಿದನು.

14058016a ವಿವೇಶ ಚ ಸ ಹೃಷ್ಟಾತ್ಮಾ ಚಿರಕಾಲಪ್ರವಾಸಕಃ|

14058016c ಕೃತ್ವಾ ನಸುಕರಂ ಕರ್ಮ ದಾನವೇಷ್ವಿವ ವಾಸವಃ||

ದಾನವರನ್ನು ಸಂಹರಿಸಿದ ಇಂದ್ರನಂತೆ ದುಷ್ಕರ ಕರ್ಮವನ್ನು ಮಾಡಿ ದೀರ್ಘ ಪ್ರವಾಸದ ನಂತರ ಹಿಂದಿರುಗಿದ ಕೃಷ್ಣನು ಹೃಷ್ಟಾತ್ಮನಾಗಿ ತನ್ನ ಭವನವನ್ನು ಪ್ರವೇಶಿಸಿದನು.

14058017a ಉಪಯಾತಂ ತು ವಾರ್ಷ್ಣೇಯಂ ಭೋಜವೃಷ್ಣ್ಯಂಧಕಾಸ್ತದಾ|

14058017c ಅಭ್ಯಗಚ್ಚನ್ಮಹಾತ್ಮಾನಂ ದೇವಾ ಇವ ಶತಕ್ರತುಮ್||

ದೇವತೆಗಳು ಶತಕ್ರತು ಇಂದ್ರನನ್ನು ಹೇಗೋ ಹಾಗೆ ಭೋಜ-ವೃಷ್ಣಿ-ಅಂಧಕರು ಮುಂದೆಹೋಗಿ ಮಹಾತ್ಮ ವಾರ್ಷ್ಣೇಯನನ್ನು ಸ್ವಾಗತಿಸಿದರು.

14058018a ಸ ತಾನಭ್ಯರ್ಚ್ಯ ಮೇಧಾವೀ ಪೃಷ್ಟ್ವಾ ಚ ಕುಶಲಂ ತದಾ|

14058018c ಅಭ್ಯವಾದಯತ ಪ್ರೀತಃ ಪಿತರಂ ಮಾತರಂ ತಥಾ||

ಅವರನ್ನೂ ಗೌರವಿಸಿ, ಅವರ ಕುಶಲಗಳನ್ನು ಕೇಳಿ ಮೇಧಾವೀ ಕೃಷ್ಣನು ಪ್ರೀತನಾಗಿ ತನ್ನ ತಂದೆ-ತಾಯಂದಿರನ್ನು ಅಭಿವಾದಿಸಿದನು.

14058019a ತಾಭ್ಯಾಂ ಚ ಸಂಪರಿಷ್ವಕ್ತಃ ಸಾಂತ್ವಿತಶ್ಚ ಮಹಾಭುಜಃ|

14058019c ಉಪೋಪವಿಷ್ಟಸ್ತೈಃ ಸರ್ವೈರ್ವೃಷ್ಣಿಭಿಃ ಪರಿವಾರಿತಃ||

ಅವರಿಬ್ಬರೂ ಅವನನ್ನು ತಬ್ಬಿಕೊಂಡು ಸಂತೈಸಿದರು. ಅವರೊಂದಿಗೆ ಕುಳಿತುಕೊಂಡ ಮಹಾಭುಜ ಕೃಷ್ಣನ ಸುತ್ತಲೂ ಸರ್ವ ವೃರ್ಷ್ಣಿಗಳೂ ಕುಳಿತುಕೊಂಡರು.

14058020a ಸ ವಿಶ್ರಾಂತೋ ಮಹಾತೇಜಾಃ ಕೃತಪಾದಾವಸೇಚನಃ|

14058020c ಕಥಯಾಮಾಸ ತಂ ಕೃಷ್ಣಃ ಪೃಷ್ಟಃ ಪಿತ್ರಾ ಮಹಾಹವಮ್||

ಕೈಕಾಲುಗಳನ್ನು ತೊಳೆದುಕೊಂಡು ವಿಶ್ರಾಂತಿಪಡೆದ ಕೃಷ್ಣನು ತಂದೆಯ ಪ್ರಶ್ನೆಗೆ ಮಹಾಯುದ್ಧದ ಕುರಿತು ಹೇಳತೊಡಗಿದನು.

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣಸ್ಯದ್ವಾರಕಾಪ್ರವೇಶೇ ಅಷ್ಟಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣಸ್ಯದ್ವಾರಕಾಪ್ರವೇಶ ಎನ್ನುವ ಐವತ್ತೆಂಟನೇ ಅಧ್ಯಾಯವು.

Comments are closed.