ಅಶ್ವಮೇಧಿಕ ಪರ್ವ
೪೬
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೫೫).
14046001 ಬ್ರಹ್ಮೋವಾಚ
14046001a ಏವಮೇತೇನ ಮಾರ್ಗೇಣ ಪೂರ್ವೋಕ್ತೇನ ಯಥಾವಿಧಿ|
14046001c ಅಧೀತವಾನ್ಯಥಾಶಕ್ತಿ ತಥೈವ ಬ್ರಹ್ಮಚರ್ಯವಾನ್||
ಬ್ರಹ್ಮನು ಹೇಳಿದನು: “ಹಿಂದೆ ಹೇಳಿದ ಈ ಮಾರ್ಗಗಳಿಂದ ಯಥಾವಿಧಿಯಾಗಿ ಯಥಾಶಕ್ತಿಯಾಗಿ ಅಧ್ಯಯನ ಮಾಡಬೇಕು, ಬ್ರಹ್ಮಚಾರಿಯಾಗಿರಬೇಕು.
14046002a ಸ್ವಧರ್ಮನಿರತೋ ವಿದ್ವಾನ್ಸರ್ವೇಂದ್ರಿಯಯತೋ ಮುನಿಃ|
14046002c ಗುರೋಃ ಪ್ರಿಯಹಿತೇ ಯುಕ್ತಃ ಸತ್ಯಧರ್ಮಪರಃ ಶುಚಿಃ||
ಸ್ವಧರ್ಮನಿರತನಾದ ವಿದ್ವಾಂಸನು ಸರ್ವೇಂದ್ರಿಯಗಳನ್ನೂ ನಿಯಂತ್ರಿಸಿಕೊಂಡು ಗುರುವಿನ ಪ್ರಿಯ-ಹಿತಗಳಲ್ಲಿ ನಿರತನಾಗಿ ಸತ್ಯಧರ್ಮಪರಾಯಣನಾಗಿ ಶುಚಿಯಾಗಿ ಮುನಿಯಾಗಿರಬೇಕು.
14046003a ಗುರುಣಾ ಸಮನುಜ್ಞಾತೋ ಭುಂಜೀತಾನ್ನಮಕುತ್ಸಯನ್|
14046003c ಹವಿಷ್ಯಭೈಕ್ಷ್ಯಭುಕ್ಚಾಪಿ ಸ್ಥಾನಾಸನವಿಹಾರವಾನ್||
ಗುರುವಿನ ಆಜ್ಞೆಯನ್ನು ಪಡೆದು ಊಟಮಾಡಬೇಕು. ಊಟಮಾಡುವ ಆಹಾರವನ್ನು ನಿಂದಿಸಬಾರದು. ದೊರಕಿರುವ ಭಿಕ್ಷಾನ್ನ, ಸ್ಥಾನ, ಆಸನ, ವಿಹಾರಗಳನ್ನು ಹವಿಸ್ಸೆಂದು ಸೇವಿಸಬೇಕು.
14046004a ದ್ವಿಕಾಲಮಗ್ನಿಂ ಜುಹ್ವಾನಃ ಶುಚಿರ್ಭೂತ್ವಾ ಸಮಾಹಿತಃ|
14046004c ಧಾರಯೀತ ಸದಾ ದಂಡಂ ಬೈಲ್ವಂ ಪಾಲಾಶಮೇವ ವಾ||
ಶುಚಿಯಾಗಿ ಏಕಾಗ್ರಚಿತ್ತನಾಗಿ ಎರಡು ಕಾಲಗಳಲ್ಲಿ (ಬೆಳಿಗ್ಗೆ ಮತ್ತು ಸಾಯಂಕಾಲ) ಅಗ್ನಿಕಾರ್ಯಗಳನ್ನು ಮಾಡಬೇಕು. ಮುತ್ತುಗ ಅಥವಾ ಬಿಲ್ವದಂಡವನ್ನು ಸದಾ ಧರಿಸಿರಬೇಕು.
14046005a ಕ್ಷೌಮಂ ಕಾರ್ಪಾಸಿಕಂ ವಾಪಿ ಮೃಗಾಜಿನಮಥಾಪಿ ವಾ|
14046005c ಸರ್ವಂ ಕಾಷಾಯರಕ್ತಂ ಸ್ಯಾದ್ವಾಸೋ ವಾಪಿ ದ್ವಿಜಸ್ಯ ಹ||
ರೇಷ್ಮೆ, ಹತ್ತಿ, ಅಥವಾ ಮೃಗಾಜಿನವನ್ನು ಧರಿಸಬೇಕು. ಅಥವಾ ದ್ವಿಜನು ಸಂಪೂರ್ಣ ಕಾಷಾಯವಸ್ತ್ರವನ್ನೂ ಧರಿಸಬಹುದು.
14046006a ಮೇಖಲಾ ಚ ಭವೇನ್ಮೌಂಜೀ ಜಟೀ ನಿತ್ಯೋದಕಸ್ತಥಾ|
14046006c ಯಜ್ಞೋಪವೀತೀ ಸ್ವಾಧ್ಯಾಯೀ ಅಲುಪ್ತನಿಯತವ್ರತಃ||
ಮುಂಜಹುಲ್ಲಿನ ಉಡಿದಾರವನ್ನು ತೊಟ್ಟಿರಬೇಕು. ಜಟೆಯನ್ನು ಧರಿಸಬೇಕು. ನಿತ್ಯವೂ ಸ್ನಾನಮಾಡಬೇಕು. ಸರ್ವದಾ ಯಜ್ಞೋಪವೀತಿಯಾಗಿರಬೇಕು. ಸ್ವಾಧ್ಯಾಯನಿರತನಾಗಿರಬೇಕು. ಅಲುಪ್ತನಾಗಿ ನಿಯತವ್ರತನಾಗಿರಬೇಕು.
14046007a ಪೂತಾಭಿಶ್ಚ ತಥೈವಾದ್ಭಿಃ ಸದಾ ದೈವತತರ್ಪಣಮ್|
14046007c ಭಾವೇನ ನಿಯತಃ ಕುರ್ವನ್ಬ್ರಹ್ಮಚಾರೀ ಪ್ರಶಸ್ಯತೇ||
ಪವಿತ್ರನಾಗಿದ್ದುಕೊಂಡು ಪವಿತ್ರ ನೀರಿನಿಂದ ಭಾವಯುಕ್ತನೂ ನಿಯತಾತ್ಮನೂ ಆಗಿ ದೇವತೆಗಳಿಗೆ ತರ್ಪಣೆಯನ್ನೀಡುವ ಬ್ರಹ್ಮಚಾರಿಯನ್ನು ಪ್ರಶಂಸಿಸುತ್ತಾರೆ.
14046008a ಏವಂ ಯುಕ್ತೋ ಜಯೇತ್ಸ್ವರ್ಗಮೂರ್ಧ್ವರೇತಾಃ ಸಮಾಹಿತಃ|
14046008c ನ ಸಂಸರತಿ ಜಾತೀಷು ಪರಮಂ ಸ್ಥಾನಮಾಶ್ರಿತಃ||
ಹೀಗೆ ಊರ್ಧ್ವರೇತಸನಾಗಿ ಸಮಾಹಿತನಾಗಿರುವವನು ಸ್ವರ್ಗವನ್ನು ಜಯಿಸಬಲ್ಲನು. ಆ ಪರಮ ಸ್ಥಾನವನ್ನು ಆಶ್ರಯಿಸಿದ ಅವನು ಪುನಃ ಈ ಸಂಸಾರದಲ್ಲಿ ಹುಟ್ಟುವುದಿಲ್ಲ.
14046009a ಸಂಸ್ಕೃತಃ ಸರ್ವಸಂಸ್ಕಾರೈಸ್ತಥೈವ ಬ್ರಹ್ಮಚರ್ಯವಾನ್|
14046009c ಗ್ರಾಮಾನ್ನಿಷ್ಕ್ರಮ್ಯ ಚಾರಣ್ಯಂ ಮುನಿಃ ಪ್ರವ್ರಜಿತೋ ವಸೇತ್||
ಸರ್ವ ಸಂಸ್ಕಾರಗಳಿಂದ ಸಂಸ್ಕೃತನಾಗಿ ಬ್ರಹ್ಮಚರ್ಯದಲ್ಲಿದ್ದುಕೊಂಡು ವಾನಪ್ರಸ್ಥನು ಪರಿವ್ರಾಜಕನಾಗಿ ಗ್ರಾಮದಿಂದ ಹೊರಟು ಅರಣ್ಯದಲ್ಲಿ ವಾಸಿಸಬೇಕು.
14046010a ಚರ್ಮವಲ್ಕಲಸಂವೀತಃ ಸ್ವಯಂ ಪ್ರಾತರುಪಸ್ಪೃಶೇತ್|
14046010c ಅರಣ್ಯಗೋಚರೋ ನಿತ್ಯಂ ನ ಗ್ರಾಮಂ ಪ್ರವಿಶೇತ್ ಪುನಃ||
ಮೃಗಚರ್ಮ ಅಥವಾ ವಲ್ಕಲವನ್ನು ಧರಿಸಿ ಪ್ರಾತಃ ಮತ್ತು ಸಂಧ್ಯಾಕಾಲಗಳಲ್ಲಿ ಸ್ನಾನಮಾಡಬೇಕು. ನಿತ್ಯವೂ ಅರಣ್ಯದಲ್ಲಿಯೇ ಇದ್ದುಕೊಂಡು ಪುನಃ ಗ್ರಾಮವನ್ನು ಪ್ರವೇಶಿಸಬಾರದು.
14046011a ಅರ್ಚಯನ್ನತಿಥೀನ್ಕಾಲೇ ದದ್ಯಾಚ್ಚಾಪಿ ಪ್ರತಿಶ್ರಯಮ್|
14046011c ಫಲಪತ್ರಾವರೈರ್ಮೂಲೈಃ ಶ್ಯಾಮಾಕೇನ ಚ ವರ್ತಯನ್||
ಅತಿಥಿಗಳನ್ನು ಅರ್ಚಿಸುತ್ತಾ ಕಾಲಕಾಲಕ್ಕೆ ಸಾಧ್ಯವಾದಷ್ಟು ದಾನವನ್ನೂ ಮಾಡಬೇಕು. ಫಲ-ಪತ್ರ-ಮೂಲಗಳನ್ನು ಮತ್ತು ಶ್ಯಾಮಧಾನ್ಯವನ್ನು ಸೇವಿಸುತ್ತಿರಬೇಕು.
14046012a ಪ್ರವೃತ್ತಮುದಕಂ ವಾಯುಂ ಸರ್ವಂ ವಾನೇಯಮಾ ತೃಣಾತ್|
14046012c ಪ್ರಾಶ್ನೀಯಾದಾನುಪೂರ್ವ್ಯೇಣ ಯಥಾದೀಕ್ಷಮತಂದ್ರಿತಃ||
ಹರಿಯುವ ನೀರು ಮತ್ತು ಬೀಸುವ ಗಾಳಿಯನ್ನೇ ಸೇವಿಸಬೇಕು. ಹುಲ್ಲಿನಿಂದ ಹಿಡಿದು ಎಲ್ಲವನ್ನೂ ವನದಲ್ಲಿರುವವನ್ನೇ ಉಪಯೋಗಿಸಬೇಕು. ಆಲಸಿಕೆಯಿಲ್ಲದೇ ದೀಕ್ಷಾನುಸಾರವಾಗಿ ಅರಣ್ಯದಲ್ಲಿರುವವನ್ನೇ ತಿನ್ನಬೇಕು.
14046013a ಆಮೂಲಫಲಭಿಕ್ಷಾಭಿರರ್ಚೇದತಿಥಿಮಾಗತಮ್|
14046013c ಯದ್ಭಕ್ಷಃ ಸ್ಯಾತ್ತತೋ ದದ್ಯಾದ್ಭಿಕ್ಷಾಂ ನಿತ್ಯಮತಂದ್ರಿತಃ||
ಆಗಮಿಸಿದ ಅತಿಥಿಯನ್ನು ಮೂಲ-ಫಲ-ಭಿಕ್ಷಗಳಿಂದ ಅರ್ಚಿಸಬೇಕು. ಆಲಸಿಕೆಯಿಲ್ಲದೇ ಯಾವ ಆಹಾರವು ತನಗಿದೆಯೋ ಅದನ್ನೇ ಭಿಕ್ಷವಾಗಿ ಅವನಿಗೆ ಕೊಡಬೇಕು.
14046014a ದೇವತಾತಿಥಿಪೂರ್ವಂ ಚ ಸದಾ ಭುಂಜೀತ ವಾಗ್ಯತಃ|
14046014c ಅಸ್ಕಂದಿತಮನಾಶ್ಚೈವ ಲಘ್ವಾಶೀ ದೇವತಾಶ್ರಯಃ||[1]
ಸದಾ ದೇವತೆಗಳು ಮತ್ತು ಅತಿಥಿಗಳಿಗೆ ಮೊದಲು ನೀಡಿ ನಂತರವೇ ಮೌನಿಯಾಗಿ ಊಟಮಾಡಬೇಕು. ಯಾರೊಡನೆಯೂ ಸ್ಪರ್ಧಾಭಾವವಿಲ್ಲದೇ ಅಲ್ಪಾಹಾರಿಯಾಗಿ ದೇವತೆಗಳನ್ನೇ ಆಶ್ರಯಿಸಿಕೊಂಡಿರಬೇಕು.
14046015a ದಾಂತೋ ಮೈತ್ರಃ ಕ್ಷಮಾಯುಕ್ತಃ ಕೇಶಶ್ಮಶ್ರು ಚ ಧಾರಯನ್|
14046015c ಜುಹ್ವನ್ಸ್ವಾಧ್ಯಾಯಶೀಲಶ್ಚ ಸತ್ಯಧರ್ಮಪರಾಯಣಃ||
ಇಂದ್ರಿಯಗಳನ್ನು ನಿಗ್ರಹಿಸಿ ಎಲ್ಲರೊಡನೆಯೂ ಮೈತ್ರಭಾವದಿಂದಿದ್ದುಕೊಂಡು ಕ್ಷಮಾಶೀಲನಾಗಿರಬೇಕು. ಗಡ್ಡ-ಮೀಸೆಗಳನ್ನೂ ತಲೆಗೂದಲನ್ನೂ ಬಿಟ್ಟುಕೊಂಡಿರಬೇಕು. ಅಗ್ನಿಹೋತ್ರವನ್ನು ಮಾಡುತ್ತಾ ಸ್ವಾಧ್ಯಾಯಶೀಲನಾಗಿಯೂ, ಸತ್ಯ-ಧರ್ಮ ಪರಾಯಣನಾಗಿಯೂ ಇರಬೇಕು.
14046016a ತ್ಯಕ್ತದೇಹಃ ಸದಾ ದಕ್ಷೋ ವನನಿತ್ಯಃ ಸಮಾಹಿತಃ|
14046016c ಏವಂ ಯುಕ್ತೋ ಜಯೇತ್ಸ್ವರ್ಗಂ ವಾನಪ್ರಸ್ಥೋ ಜಿತೇಂದ್ರಿಯಃ||
ದೇಹದ ಮೋಹವನ್ನು ತೊರೆದು ಸದಾ ದಕ್ಷನಾಗಿ ನಿತ್ಯವೂ ವನದಲ್ಲಿ ಏಕಾಗ್ರಚಿತ್ತನಾಗಿರಬೇಕು. ಹೀಗಿರುವ ಜಿತೇಂದ್ರಿಯ ವಾನಪ್ರಸ್ಥನು ಸ್ವರ್ಗವನ್ನು ಜಯಿಸುತ್ತಾನೆ.
14046017a ಗೃಹಸ್ಥೋ ಬ್ರಹ್ಮಚಾರೀ ಚ ವಾನಪ್ರಸ್ಥೋಽಥ ವಾ ಪುನಃ|
14046017c ಯ ಇಚ್ಚೇನ್ಮೋಕ್ಷಮಾಸ್ಥಾತುಮುತ್ತಮಾಂ ವೃತ್ತಿಮಾಶ್ರಯೇತ್||
ಅನಂತರ ಮೋಕ್ಷವನ್ನು ಬಯಸುವ ಬ್ರಹ್ಮಚಾರಿಯಾಗಲೀ, ಗೃಹಸ್ಥನಾಗಲೀ ಅಥವಾ ವಾನಪ್ರಸ್ಥನಾಗಲೀ ಉತ್ತಮವಾದ ಸಂನ್ಯಾಸವೃತ್ತಿಯನ್ನು ಆಚರಿಸಬೇಕು.
14046018a ಅಭಯಂ ಸರ್ವಭೂತೇಭ್ಯೋ ದತ್ತ್ವಾ ನೈಷ್ಕರ್ಮ್ಯಮಾಚರೇತ್|
14046018c ಸರ್ವಭೂತಹಿತೋ ಮೈತ್ರಃ ಸರ್ವೇಂದ್ರಿಯಯತೋ ಮುನಿಃ||
ಸರ್ವಭೂತಗಳಿಗೂ ಅಭಯವನ್ನಿತ್ತು ನಿಷ್ಕರ್ಮವನ್ನು ಆಚರಿಸಬೇಕು. ಸರ್ವಭೂತಹಿತನಾಗಿ ಮುನಿಯು ಸರ್ವಭೂತಗಳೊಂದಿಗೆ ಮೈತ್ರಭಾವವನ್ನಿಟ್ಟುಕೊಂಡು ಸರ್ವ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡಿರಬೇಕು.
14046019a ಅಯಾಚಿತಮಸಂಕ್ಲೃಪ್ತಮುಪಪನ್ನಂ ಯದೃಚ್ಚಯಾ|
14046019c ಜೋಷಯೇತ ಸದಾ ಭೋಜ್ಯಂ ಗ್ರಾಸಮಾಗತಮಸ್ಪೃಹಃ||
ಯಾಚನೆಯನ್ನೂ ಸಂಕಲ್ಪವನ್ನೂ ಮಾಡದೇ ದೈವೇಚ್ಛೆಯಿಂದ ದೊರಕಿದುದರಲ್ಲಿ ತೃಪ್ತಿಪಡಬೇಕು. ಅಪ್ರಾರ್ಥಿತವಾಗಿ ಲಬ್ಧವಾಗುವ ಅನ್ನವನ್ನು ಮಾತ್ರವೇ ಸ್ವೀಕರಿಸಬೇಕು. ಅದಕ್ಕೆ ಆಸೆಪಡಬಾರದು.
14046020a ಯಾತ್ರಾಮಾತ್ರಂ ಚ ಭುಂಜೀತ ಕೇವಲಂ ಪ್ರಾಣಯಾತ್ರಿಕಮ್|
14046020c ಧರ್ಮಲಬ್ಧಂ ತಥಾಶ್ನೀಯಾನ್ನ ಕಾಮಮನುವರ್ತಯೇತ್||
ಪ್ರಾಣಯಾತ್ರೆಗೆ ಮಾತ್ರ ಮತ್ತು ಕೇವಲ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ಆಹಾರಸೇವನೆ ಮಾಡಬೇಕು. ಧರ್ಮದಿಂದ ದೊರಕಿದುದನ್ನು ಮಾತ್ರ ಸೇವಿಸಬೇಕು. ಮನಸ್ಸಿನ ಕಾಮನೆಯನ್ನು ಅನುಸರಿಸಿ ತಿನ್ನಬಾರದು.
14046021a ಗ್ರಾಸಾದಾಚ್ಚಾದನಾಚ್ಚಾನ್ಯನ್ನ ಗೃಹ್ಣೀಯಾತ್ಕಥಂ ಚನ|
14046021c ಯಾವದಾಹಾರಯೇತ್ತಾವತ್ಪ್ರತಿಗೃಹ್ಣೀತ ನಾನ್ಯಥಾ||
ಪ್ರಾಣಧಾರಣೆಗೆ ಬೇಕಾದಷ್ಟು ಅನ್ನ ಮತ್ತು ಶರೀರವನ್ನು ಮುಚ್ಚಿಕೊಳ್ಳಲು ಬೇಕಾಗುವಷ್ಟು ಬಟ್ಟೆ ಇವೆರಡನ್ನು ಬಿಟ್ಟು ಬೇರೆ ಯಾವುದನ್ನೂ ಸಂನ್ಯಾಸಿಯಾದವನು ಪ್ರತಿಗ್ರಹಿಸಬಾರದು. ಭಿಕ್ಷೆಯನ್ನು ಕೂಡ ಹೊಟ್ಟೆಗೆ ಎಷ್ಟು ಬೇಕಾಗುವುದೋ ಅಷ್ಟನ್ನು ಮಾತ್ರವೇ ಪಡೆದುಕೊಳ್ಳಬೇಕು. ಬೇಕಾಗಿರುವುದಕ್ಕಿಂತಲೂ ಅಧಿಕ ಅನ್ನವನ್ನು ಸ್ವೀಕರಿಸಬಾರದು.
14046022a ಪರೇಭ್ಯೋ ನ ಪ್ರತಿಗ್ರಾಹ್ಯಂ ನ ಚ ದೇಯಂ ಕದಾ ಚನ|
14046022c ದೈನ್ಯಭಾವಾಚ್ಚ ಭೂತಾನಾಂ ಸಂವಿಭಜ್ಯ ಸದಾ ಬುಧಃ||
ಬೇರೆಯವರಿಗಾಗಿ ಭಿಕ್ಷೆಯನ್ನು ಸ್ವೀಕರಿಸಬಾರದು. ಬೇರೆಯವರಿಗೆ ಎಂದೂ ಕೊಡಬಾರದು ಕೂಡ. ತಿಳಿದವನು ಪ್ರಾಣಿಗಳ ಮೇಲಿನ ದೈನ್ಯಭಾವದಿಂದ ತನಗೆ ದೊರಕಿದುದನ್ನು ಯಾವಾಗಲೂ ಹಂಚಿಕೊಡಲೂ ಬಾರದು.
14046023a ನಾದದೀತ ಪರಸ್ವಾನಿ ನ ಗೃಹ್ಣೀಯಾದಯಾಚಿತಮ್|
14046023c ನ ಕಿಂ ಚಿದ್ವಿಷಯಂ ಭುಕ್ತ್ವಾ ಸ್ಪೃಹಯೇತ್ತಸ್ಯ ವೈ ಪುನಃ||
ಇನ್ನೊಬ್ಬರದ್ದನ್ನು ತೆಗೆದುಕೊಳ್ಳಬಾರದು. ಯಾಚಿಸದೇ ದೊರಕಿದ ವಸ್ತುವನ್ನು ಪರಿಗ್ರಹಿಸಬಾರದು. ಯಾವುದನ್ನಾದರೂ ಭೋಗಿಸಿದ ನಂತರ ಪುನಃ ಅದಕ್ಕಾಗಿಯೇ ಆಸೆಪಡಬಾರದು.
14046024a ಮೃದಮಾಪಸ್ತಥಾಶ್ಮಾನಂ ಪತ್ರಪುಷ್ಪಫಲಾನಿ ಚ|
14046024c ಅಸಂವೃತಾನಿ ಗೃಹ್ಣೀಯಾತ್ಪ್ರವೃತ್ತಾನೀಹ ಕಾರ್ಯವಾನ್||
ಮಣ್ಣು, ನೀರು, ಅನ್ನ, ಪತ್ರ, ಪುಷ್ಪ ಮತ್ತು ಫಲಗಳು ಬೇರೆಯವರಿಗೆ ಸೇರಿರದಿದ್ದರೆ ಕಾರ್ಯಶೀಲ ಸಂನ್ಯಾಸಿಯು ಅವುಗಳನ್ನು ಉಪಯೋಗಿಸಿಕೊಳ್ಳಬಹುದು.
14046025a ನ ಶಿಲ್ಪಜೀವಿಕಾಂ ಜೀವೇದ್ದ್ವಿರನ್ನಂ ನೋತ ಕಾಮಯೇತ್|
14046025c ನ ದ್ವೇಷ್ಟಾ ನೋಪದೇಷ್ಟಾ ಚ ಭವೇತ ನಿರುಪಸ್ಕೃತಃ|
14046025e ಶ್ರದ್ಧಾಪೂತಾನಿ ಭುಂಜೀತ ನಿಮಿತ್ತಾನಿ ವಿವರ್ಜಯೇತ್||
ಸಂನ್ಯಾಸಿಯಾದವನು ಶಿಲ್ಪಕಾರಿಯಾಗಿ ಜೀವಿಸಬಾರದು. ಯಾರೊಡನೆಯೂ ದ್ವೇಷಕಟ್ಟಿಕೊಳ್ಳಬಾರದು. ಯಾರಿಗೂ ಉಪದೇಶಿಸಬಾರದು. ಯಾವುದನ್ನೂ ಸಂಗ್ರಹಿಸಿಟ್ಟುಕೊಳ್ಳಬಾರದು. ಯಾವುದರಿಂದಲೂ ಅಲಂಕಾರ ಮಾಡಿಕೊಳ್ಳಬಾರದು.
14046026a ಮುಧಾವೃತ್ತಿರಸಕ್ತಶ್ಚ ಸರ್ವಭೂತೈರಸಂವಿದಮ್|
14046026c ಕೃತ್ವಾ ವಹ್ನಿಂ ಚರೇದ್ಭೈಕ್ಷ್ಯಂ ವಿಧೂಮೇ ಭುಕ್ತವಜ್ಜನೇ||
ಎಲ್ಲರೊಡನೆಯೂ ಸಂತೋಷದಿಂದ ವರ್ತಿಸಬೇಕು. ಆದರೆ ಎಲ್ಲರೊಡನೆಯೂ ಅಸಕ್ತನಾಗಿರಬೇಕು. ಸರ್ವಭೂತಗಳೊಡನೆಯೂ ಹೆಚ್ಚು ಪರಿಚಿತನಾಗಿರಬಾರದು. ಅಗ್ನಿಕಾರ್ಯಗಳನ್ನು ಪೂರೈಸಿ ಅಡುಗೆಮನೆಯ ಹೊಗೆಯು ನಿಂತುಹೋದ ನಂತರ ಮತ್ತು ಜನರು ಊಟಮಾಡಿದ ನಂತರ ಭಿಕ್ಷಕ್ಕೆ ಹೊರಡಬೇಕು.
14046027a ವೃತ್ತೇ ಶರಾವಸಂಪಾತೇ ಭೈಕ್ಷ್ಯಂ ಲಿಪ್ಸೇತ ಮೋಕ್ಷವಿತ್|
14046027c ಲಾಭೇ ನ ಚ ಪ್ರಹೃಷ್ಯೇತ ನಾಲಾಭೇ ವಿಮನಾ ಭವೇತ್||
ಗೃಹಸ್ಥನ ಮನೆಯ ಪಾತ್ರೆಗಳನ್ನು ತೊಳೆದಿಟ್ಟನಂತರ ಮೋಕ್ಷವನ್ನು ಬಯಸುವವನು ಭಿಕ್ಷಕ್ಕೆ ಹೊರಡಬೇಕು. ಭಿಕ್ಷೆಯು ಸಿಕ್ಕಿದರೆ ಹರ್ಷಗೊಳ್ಳಬಾರದು. ಸಿಗದಿದ್ದರೆ ವಿಷಾದಿಸಕೂಡದು.
14046028a ಮಾತ್ರಾಶೀ ಕಾಲಮಾಕಾಂಕ್ಷಂಶ್ಚರೇದ್ಭೈಕ್ಷ್ಯಂ ಸಮಾಹಿತಃ|
14046028c ಲಾಭಂ ಸಾಧಾರಣಂ ನೇಚ್ಚೇನ್ನ ಭುಂಜೀತಾಭಿಪೂಜಿತಃ|
14046028e ಅಭಿಪೂಜಿತಲಾಭಾದ್ಧಿ ವಿಜುಗುಪ್ಸೇತ ಭಿಕ್ಷುಕಃ||
ದೇಹವನ್ನು ಉಳಿಸಿಕೊಳ್ಳಲು ಮಾತ್ರ ಭಿಕ್ಷೆಯನ್ನು ಬೇಡಬೇಕು. ಉಚಿತ ಸಮಯದ ವರೆಗೆ ಮಾತ್ರವೇ ಭಿಕ್ಷಾಟನೆ ಮಾಡಬೇಕು. ಏಕಾಗ್ರಚಿತ್ತನಾಗಿರಬೇಕು. ಇತರ ಸಂನ್ಯಾಸಿಗಳ ಭಿಕ್ಷವನ್ನು ತಾನು ಉಪಯೋಗಿಸಿಕೊಳ್ಳಬಾರದು. ಮನೆಗೆ ಕರೆದು ಗೌರವಿಸಿ ನೀಡುವ ಭೋಜನದ ಕುರಿತು ಜಿಗುಪ್ಸೆತಾಳಬೇಕು. ಮಾನ, ಮರ್ಯಾದೆ, ಗೌರವ ಇತ್ಯಾದಿ ವಿಷಯಗಳಲ್ಲಿ ಭಿಕ್ಷುಕನಾದವನು ಜಿಗುಪ್ಸೆ ತಾಳಬೇಕು.
14046029a ಶುಕ್ತಾನ್ಯಮ್ಲಾನಿ ತಿಕ್ತಾನಿ ಕಷಾಯಕಟುಕಾನಿ ಚ|
14046029c ನಾಸ್ವಾದಯೀತ ಭುಂಜಾನೋ ರಸಾಂಶ್ಚ ಮಧುರಾಂಸ್ತಥಾ|
14046029e ಯಾತ್ರಾಮಾತ್ರಂ ಚ ಭುಂಜೀತ ಕೇವಲಂ ಪ್ರಾಣಯಾತ್ರಿಕಮ್||
ಹೆಚ್ಚು ಗಟ್ಟಿಯಾಗಿರುವ, ಹೆಚ್ಚು ಹುಳಿಯಾಗಿರುವ, ಹೆಚ್ಚು ಕಹಿಯಾಗಿರುವ, ತುಂಬಾ ಒಗಟಾಗಿರುವ, ಹೆಚ್ಚು ಖಾರವಾಗಿರುವ ಅಥವಾ ಹೆಚ್ಚು ಸಿಹಿಯಾಗಿರುವ ಪದಾರ್ಥವನ್ನು ಸಂನ್ಯಾಸಿಯು ತಿನ್ನಬಾರದು. ದೇಹಯಾತ್ರೆಯನ್ನು ಪೂರೈಸಲು ಮತ್ತು ಪ್ರಾಣವನ್ನು ಧಾರಣೆಮಾಡಿಕೊಂಡಿರಲು ಮಾತ್ರ ಅವನು ಆಹಾರವನ್ನು ಸೇವಿಸಬೇಕು.
14046030a ಅಸಂರೋಧೇನ ಭೂತಾನಾಂ ವೃತ್ತಿಂ ಲಿಪ್ಸೇತ ಮೋಕ್ಷವಿತ್|
14046030c ನ ಚಾನ್ಯಮನುಭಿಕ್ಷೇತ ಭಿಕ್ಷಮಾಣಃ ಕಥಂ ಚನ||
ಮೋಕ್ಷವನ್ನು ತಿಳಿದುಕೊಂಡಿರುವ ಸಂನ್ಯಾಸಿಯು ಇತರ ಜೀವಿಗಳಿಗೆ ಬಾಧೆಯುಂಟಾಗದಂತೆ ಜೀವನವನ್ನು ನಿರ್ವಹಿಸಬೇಕು. ಭಿಕ್ಷೆಬೇಡುವಾಗ ಭಿಕ್ಷಾನ್ನವನ್ನು ಬಿಟ್ಟು ಬೇರೆ ಯಾವುದೇ ಭಿಕ್ಷೆಯನ್ನೂ ಸ್ವೀಕರಿಸಬಾರದು.
14046031a ನ ಸಂನಿಕಾಶಯೇದ್ಧರ್ಮಂ ವಿವಿಕ್ತೇ ವಿರಜಾಶ್ಚರೇತ್|
14046031c ಶೂನ್ಯಾಗಾರಮರಣ್ಯಂ ವಾ ವೃಕ್ಷಮೂಲಂ ನದೀಂ ತಥಾ|
14046031e ಪ್ರತಿಶ್ರಯಾರ್ಥಂ ಸೇವೇತ ಪಾರ್ವತೀಂ ವಾ ಪುನರ್ಗುಹಾಮ್||
ಸಂನ್ಯಾಸಿಯು ತನ್ನ ಧರ್ಮವನ್ನು ಪ್ರದರ್ಶಿಸಬಾರದು. ರಜೋಗುಣರಹಿತನಾಗಿ ಏಕಾಂತದಲ್ಲಿ ವಾಸಿಸಬೇಕು. ಜನರಿಲ್ಲದ ಗೃಹ, ಅರಣ್ಯ, ಮರದ ಬುಡ, ನದೀತೀರ, ಅಥವಾ ಪರ್ವತದ ಗುಹೆಯಲ್ಲಿ ರಾತ್ರಿಯನ್ನು ಕಳೆಯಬೇಕು.
14046032a ಗ್ರಾಮೈಕರಾತ್ರಿಕೋ ಗ್ರೀಷ್ಮೇ ವರ್ಷಾಸ್ವೇಕತ್ರ ವಾ ವಸೇತ್|
14046032c ಅಧ್ವಾ ಸೂರ್ಯೇಣ ನಿರ್ದಿಷ್ಟಃ ಕೀಟವಚ್ಚ ಚರೇನ್ಮಹೀಮ್||
ಗ್ರೀಷ್ಮಋತುವಿನಲ್ಲಿ ಒಂದು ಗ್ರಾಮದಲ್ಲಿ ಒಂದುರಾತ್ರಿಗಿಂತ ಹೆಚ್ಚು ಉಳಿದುಕೊಳ್ಳಬಾರದು. ವರ್ಷಋತುವಿನಲ್ಲಿ ಒಂದೇಕಡೆ ವಾಸಿಸಬಹುದು. ಆಕಾಶದಲ್ಲಿ ಸೂರ್ಯನಿರುವವರೆಗೂ ಸಂಚರಿಸುತ್ತಿರಬೇಕು. ಹುಳದಂತೆ ನಿಧಾನವಾಗಿ ಹೆಜ್ಜೆಗಳನ್ನಿಡುತ್ತಾ ಭೂಮಿಯಲ್ಲಿ ಸಂಚರಿಸಬೇಕು.
14046033a ದಯಾರ್ಥಂ ಚೈವ ಭೂತಾನಾಂ ಸಮೀಕ್ಷ್ಯ ಪೃಥಿವೀಂ ಚರೇತ್|
14046033c ಸಂಚಯಾಂಶ್ಚ ನ ಕುರ್ವೀತ ಸ್ನೇಹವಾಸಂ ಚ ವರ್ಜಯೇತ್||
ಇತರ ಜೀವಿಗಳ ಮೇಲಿನ ದಯೆಯಿಂದಾಗಿ ನೆಲವನ್ನು ನೋಡುತ್ತಾ ನಡೆಯಬೇಕು. ಸಂಚರಿಸುವಾಗ ಏನನ್ನೂ ಸಂಗ್ರಹಿಸಬಾರದು. ಸ್ಥಳದ ಮೇಲಿನ ಸ್ನೇಹವನ್ನು ಬಿಟ್ಟುಬಿಡಬೇಕು.
14046034a ಪೂತೇನ ಚಾಂಭಸಾ ನಿತ್ಯಂ ಕಾರ್ಯಂ ಕುರ್ವೀತ ಮೋಕ್ಷವಿತ್|
14046034c ಉಪಸ್ಪೃಶೇದುದ್ಧೃತಾಭಿರದ್ಭಿಶ್ಚ ಪುರುಷಃ ಸದಾ||
ಮೋಕ್ಷವಿದು ಸಂನ್ಯಾಸಿಯು ಪವಿತ್ರ ನೀರಿನಿಂದಲೇ ನಿತ್ಯಕಾರ್ಯಗಳನ್ನು ಮಾಡಬೇಕು. ಬಾವಿಯ ಅಥವಾ ನದಿಯ ನೀರನ್ನೇ ಆ ಪುರುಷನು ಸದಾ ಬಳಸಬೇಕು.
14046035a ಅಹಿಂಸಾ ಬ್ರಹ್ಮಚರ್ಯಂ ಚ ಸತ್ಯಮಾರ್ಜವಮೇವ ಚ|
14046035c ಅಕ್ರೋಧಶ್ಚಾನಸೂಯಾ ಚ ದಮೋ ನಿತ್ಯಮಪೈಶುನಮ್||
14046036a ಅಷ್ಟಾಸ್ವೇತೇಷು ಯುಕ್ತಃ ಸ್ಯಾದ್ವ್ರತೇಷು ನಿಯತೇಂದ್ರಿಯಃ|
14046036c ಅಪಾಪಮಶಠಂ ವೃತ್ತಮಜಿಹ್ಮಂ ನಿತ್ಯಮಾಚರೇತ್||
ಅಹಿಂಸೆ, ಬ್ರಹ್ಮಚರ್ಯ, ಸತ್ಯ, ಸರಳತೆ, ಅಕ್ರೋಧ, ಅನಸೂಯ, ದಮ, ನಿತ್ಯವೂ ಚಾಡಿಹೇಳದಿರುವುದು ಈ ಎಂಟು ವ್ರತಗಳಲ್ಲಿ ನಿರತನಾಗಿರಬೇಕು. ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು. ನಿತ್ಯವೂ ಪಾಪರಹಿತವಾದ, ಮೋಸವಿಲ್ಲದ, ಕುಟಿಲತೆಯಿಲ್ಲದ ನಡತೆಯಲ್ಲಿರಬೇಕು.
14046037a ಆಶೀರ್ಯುಕ್ತಾನಿ ಕರ್ಮಾಣಿ ಹಿಂಸಾಯುಕ್ತಾನಿ ಯಾನಿ ಚ|
14046037c ಲೋಕಸಂಗ್ರಹಧರ್ಮಂ ಚ ನೈವ ಕುರ್ಯಾನ್ನ ಕಾರಯೇತ್||
ಕಾಮ್ಯಕರ್ಮಗಳನ್ನೂ, ಹಿಂಸಾಯುಕ್ತ ಕರ್ಮಗಳನ್ನೂ, ಮತ್ತು ಲೋಕಸಂಗ್ರಹ ಕರ್ಮಗಳನ್ನೂ ಮಾಡಬಾರದು ಮತ್ತು ಬೇರೆಯವರಿಂದ ಮಾಡಿಸಲೂ ಕೂಡದು.
14046038a ಸರ್ವಭಾವಾನತಿಕ್ರಮ್ಯ ಲಘುಮಾತ್ರಃ ಪರಿವ್ರಜೇತ್|
14046038c ಸಮಃ ಸರ್ವೇಷು ಭೂತೇಷು ಸ್ಥಾವರೇಷು ಚರೇಷು ಚ||
ಸರ್ವಭಾವಗಳನ್ನೂ ಮೀರಿ ಹಗುರಾಗಿದ್ದುಕೊಂಡು ಸಂಚರಿಸುತ್ತಿರಬೇಕು. ಇರುವ ಸ್ಥಾವರ-ಚರ ಎಲ್ಲರೊಡನೆ ಸಮನಾಗಿರಬೇಕು.
14046039a ಪರಂ ನೋದ್ವೇಜಯೇತ್ಕಂ ಚಿನ್ನ ಚ ಕಸ್ಯ ಚಿದುದ್ವಿಜೇತ್|
14046039c ವಿಶ್ವಾಸ್ಯಃ ಸರ್ವಭೂತಾನಾಮಗ್ರ್ಯೋ ಮೋಕ್ಷವಿದುಚ್ಯತೇ||
ಇತರರನ್ನು ಉದ್ವೇಗಗೊಳಿಸಬಾರದು. ತಾನೂ ಕೂಡ ಎಂದೂ ಉದ್ವೇಗಕ್ಕೊಳಗಾಗಬಾರದು. ಸರ್ವಭೂತಗಳ ವಿಶ್ವಾಸಕ್ಕೂ ಪಾತ್ರನಾಗಿರಬೇಕು. ಅಂಥವನನ್ನು ಮೋಕ್ಷವಿದು ಎಂದು ಹೇಳುತ್ತಾರೆ.
14046040a ಅನಾಗತಂ ಚ ನ ಧ್ಯಾಯೇನ್ನಾತೀತಮನುಚಿಂತಯೇತ್|
14046040c ವರ್ತಮಾನಮುಪೇಕ್ಷೇತ ಕಾಲಾಕಾಂಕ್ಷೀ ಸಮಾಹಿತಃ||
ಮುಂದಾಗುವುದರ ಕುರಿತು ಯೋಚಿಸಬಾರದು. ಹಿಂದೆ ಆಗಿಹೋದುದರ ಕುರಿತು ಚಿಂತಿಸಬಾರದು. ವರ್ತಮಾನದಲ್ಲಿ ನಡೆಯುವುದನ್ನು ಉಪೇಕ್ಷಿಸಬೇಕು. ಏಕಾಗ್ರಚಿತ್ತನಾಗಿ ಆತ್ಮಸಾಕ್ಷಾತ್ಕಾರದ ಕಾಲವನ್ನು ಪ್ರತೀಕ್ಷಿಸುತ್ತಿರಬೇಕು.
14046041a ನ ಚಕ್ಷುಷಾ ನ ಮನಸಾ ನ ವಾಚಾ ದೂಷಯೇತ್ಕ್ವ ಚಿತ್|
14046041c ನ ಪ್ರತ್ಯಕ್ಷಂ ಪರೋಕ್ಷಂ ವಾ ಕಿಂ ಚಿದ್ದುಷ್ಟಂ ಸಮಾಚರೇತ್||
ನೋಟದಲ್ಲಿಯಾಗಲೀ, ಮನಸ್ಸಿನಲ್ಲಿಯಾಗಲೀ ಅಥವಾ ಮಾತಿನಲ್ಲಿಯಾಗಲೀ ಎಂದೂ ಯಾರನ್ನೂ ದೂಷಿಸಬಾರದು. ಪ್ರತ್ಯಕ್ಷವಾಗಲೀ ಪರೋಕ್ಷದಲ್ಲಿಯಾಗಲೀ ದುಷ್ಟವಾದುದ್ಯಾವುದನ್ನೂ ಆಚರಿಸಬಾರದು.
14046042a ಇಂದ್ರಿಯಾಣ್ಯುಪಸಂಹೃತ್ಯ ಕೂರ್ಮೋಽಂಗಾನೀವ ಸರ್ವಶಃ|
14046042c ಕ್ಷೀಣೇಂದ್ರಿಯಮನೋಬುದ್ಧಿರ್ನಿರೀಕ್ಷೇತ ನಿರಿಂದ್ರಿಯಃ||
ಆಮೆಯು ಎಲ್ಲಕಡೆಗಳಿಂದ ತನ್ನ ಅಂಗಗಳನ್ನು ಒಳಕ್ಕೆ ಎಳೆದುಕೊಳ್ಳುವಂತೆ ಸಂನ್ಯಾಸಿಯು ಇಂದ್ರಿಯಗಳನ್ನು ಒಳಕ್ಕೆಳೆದುಕೊಂಡು ಇಂದ್ರಿಯ, ಮನಸ್ಸು ಮತ್ತು ಬುದ್ಧಿಗಳನ್ನು ಕ್ಷೀಣಗೊಳಿಸುವುದರಲ್ಲಿ ತೊಡಗಿರಬೇಕು.
14046043a ನಿರ್ದ್ವಂದ್ವೋ ನಿರ್ನಮಸ್ಕಾರೋ ನಿಃಸ್ವಾಹಾಕಾರ ಏವ ಚ|
14046043c ನಿರ್ಮಮೋ ನಿರಹಂಕಾರೋ ನಿರ್ಯೋಗಕ್ಷೇಮ ಏವ ಚ||
14046044a ನಿರಾಶೀಃ ಸರ್ವಭೂತೇಷು ನಿರಾಸಂಗೋ ನಿರಾಶ್ರಯಃ|
14046044c ಸರ್ವಜ್ಞಃ ಸರ್ವತೋ ಮುಕ್ತೋ ಮುಚ್ಯತೇ ನಾತ್ರ ಸಂಶಯಃ||
ದ್ವಂದ್ವಗಳಲ್ಲಿಲ್ಲದವನು, ನಮಸ್ಕಾರಗಳಿಲ್ಲದವನು, ಸ್ವಾಹಾಕಾರಗಳಿಲ್ಲದವನು, ಮಮಕಾರ-ಅಹಂಕಾರಗಳಿಲ್ಲದವನು, ಯೋಗ-ಕ್ಷೇಮಗಳಿಲ್ಲದವನು, ಆಸೆಗಳಿಲ್ಲದವನು, ಸರ್ವಭೂತಗಳಲ್ಲಿ ನಿಃಸ್ಸಂಗನೂ ನಿರಾಶ್ರಯನೂ ಆಗಿರುವ ಸರ್ವಜ್ಞನು ಎಲ್ಲಕಡೆಗಳಿಂದಲೂ ಮುಕ್ತನಾದವನು ಎಂದು ಕರೆಯಲ್ಪಡುವನು ಎನ್ನುವುದರಲ್ಲಿ ಸಂಶಯವೇ ಇಲ್ಲ.
14046045a ಅಪಾಣಿಪಾದಪೃಷ್ಠಂ ತಮಶಿರಸ್ಕಮನೂದರಮ್|
14046045c ಪ್ರಹೀಣಗುಣಕರ್ಮಾಣಂ ಕೇವಲಂ ವಿಮಲಂ ಸ್ಥಿರಮ್||
14046046a ಅಗಂಧರಸಮಸ್ಪರ್ಶಮರೂಪಾಶಬ್ದಮೇವ ಚ|
14046046c ಅತ್ವಗಸ್ಥ್ಯಥ ವಾಮಜ್ಜಮಮಾಂಸಮಪಿ ಚೈವ ಹ||
14046047a ನಿಶ್ಚಿಂತಮವ್ಯಯಂ ನಿತ್ಯಂ ಹೃದಿಸ್ಥಮಪಿ ನಿತ್ಯದಾ|
14046047c ಸರ್ವಭೂತಸ್ಥಮಾತ್ಮಾನಂ ಯೇ ಪಶ್ಯಂತಿ ನ ತೇ ಮೃತಾಃ||
ಕೈ-ಕಾಲು-ಬೆನ್ನುಗಳಿಲ್ಲದೇ, ಶಿರಸ್ಸು-ಹೊಟ್ಟೆಗಳಿಲ್ಲದೇ, ಗುಣಕರ್ಮಗಳಿಲ್ಲದೇ, ಕೇವಲ ನಿರ್ಮಲನೂ ಸ್ಥಿರನೂ ಆಗಿರುವ, ಗಂಧ-ರಸ-ಸ್ಪರ್ಶ-ರೂಪ-ಶಬ್ಧಗಳಿಲ್ಲದಿರುವ, ಚರ್ಮ-ಮೂಳೆಗಳಿಲ್ಲದ, ಮಜ್ಜೆ-ಮಾಂಸಗಳಿಲ್ಲದ, ನಿಶ್ಚಿಂತ್ಯನೂ ಅವ್ಯಯನೂ ನಿತ್ಯನೂ, ನಿತ್ಯವೂ ಹೃದಯದಲ್ಲಿ ಸ್ಥಿತನಾಗಿರುವ ಸರ್ವಭೂತಸ್ಥ ಆತ್ಮನನ್ನು ಯಾರು ಕಾಣುವರೋ ಅವರಿಗೆ ಮೃತ್ಯುವೆನ್ನುವುದಿಲ್ಲ.
14046048a ನ ತತ್ರ ಕ್ರಮತೇ ಬುದ್ಧಿರ್ನೇಂದ್ರಿಯಾಣಿ ನ ದೇವತಾಃ|
14046048c ವೇದಾ ಯಜ್ಞಾಶ್ಚ ಲೋಕಾಶ್ಚ ನ ತಪೋ ನ ಪರಾಕ್ರಮಃ|
14046048e ಯತ್ರ ಜ್ಞಾನವತಾಂ ಪ್ರಾಪ್ತಿರಲಿಂಗಗ್ರಹಣಾ ಸ್ಮೃತಾ||
ಜ್ಞಾನವಂತರಿಗೆ ಪ್ರಾಪ್ತಗೊಳ್ಳುವ ಆತ್ಮನು ಚಿಹ್ನೆಗಳಿಲ್ಲದವನು ಎಂದು ಹೇಳುತ್ತಾರೆ. ಅಲ್ಲಿ ಬುದ್ಧಿ-ಇಂದ್ರಿಯಗಳು, ದೇವತೆಗಳು, ವೇದಗಳು, ಯಜ್ಞಗಳು, ಲೋಕಗಳು, ತಪಸ್ಸು ಮತ್ತು ಪರಾಕ್ರಮಗಳು ನಡೆಯುವುದಿಲ್ಲ.
14046049a ತಸ್ಮಾದಲಿಂಗೋ ಧರ್ಮಜ್ಞೋ ಧರ್ಮವ್ರತಮನುವ್ರತಃ|
14046049c ಗೂಢಧರ್ಮಾಶ್ರಿತೋ ವಿದ್ವಾನಜ್ಞಾತಚರಿತಂ ಚರೇತ್||
ಆದುದರಿಂದ ಆತ್ಮಧರ್ಮವ್ರತ ಧರ್ಮಜ್ಞನಿಗೆ ಯಾವುದೇ ರೀತಿಯ ಬಾಹ್ಯ ಗುರುತುಗಳಿರುವುದಿಲ್ಲ. ಗೂಢನಾಗಿಯೇ ಧರ್ಮವನ್ನು ಆಶ್ರಯಿಸಿ ವಿದ್ವಾನನು ಅಜ್ಞಾತಚರಿತವನ್ನು ಆಚರಿಸಬೇಕು.
14046050a ಅಮೂಢೋ ಮೂಢರೂಪೇಣ ಚರೇದ್ಧರ್ಮಮದೂಷಯನ್|
14046050c ಯಥೈನಮವಮನ್ಯೇರನ್ಪರೇ ಸತತಮೇವ ಹಿ||
ಅಮೂಢನಾಗಿದ್ದರೂ, ಧರ್ಮವನ್ನು ದೂಷಿಸದೇ, ಮೂಢರೂಪದಲ್ಲಿ ನಡೆದುಕೊಳ್ಳಬೇಕು. ಇತರರು ಅವಮಾನಿಸಿದರೂ ಸತತವಾಗಿ ಧರ್ಮಪರನಾಗಿರಬೇಕು.
14046051a ತಥಾವೃತ್ತಶ್ಚರೇದ್ಧರ್ಮಂ ಸತಾಂ ವರ್ತ್ಮಾವಿದೂಷಯನ್|
14046051c ಯೋ ಹ್ಯೇವಂ ವೃತ್ತಸಂಪನ್ನಃ ಸ ಮುನಿಃ ಶ್ರೇಷ್ಠ ಉಚ್ಯತೇ||
ಸತ್ಪುರುಷರ ಧರ್ಮವನ್ನು ದೂಷಿಸದೇ ಅವರ ಧರ್ಮವನ್ನೇ ಆಚರಿಸಬೇಕು. ಇಂತಹ ಆಚಾರಸಂಪನ್ನನನ್ನು ಶ್ರೇಷ್ಠಮುನಿಯೆಂದು ಕರೆಯುತ್ತಾರೆ.
14046052a ಇಂದ್ರಿಯಾಣೀಂದ್ರಿಯಾರ್ಥಾಂಶ್ಚ ಮಹಾಭೂತಾನಿ ಪಂಚ ಚ|
14046052c ಮನೋಬುದ್ಧಿರಥಾತ್ಮಾನಮವ್ಯಕ್ತಂ ಪುರುಷಂ ತಥಾ||
14046053a ಸರ್ವಮೇತತ್ಪ್ರಸಂಖ್ಯಾಯ ಸಮ್ಯಕ್ಸಂತ್ಯಜ್ಯ ನಿರ್ಮಲಃ|
14046053c ತತಃ ಸ್ವರ್ಗಮವಾಪ್ನೋತಿ ವಿಮುಕ್ತಃ ಸರ್ವಬಂಧನೈಃ||
ಇಂದ್ರಿಗಳು, ಅವುಗಳಿಗೆ ಸಂಬಂಧಿಸಿದ ವಿಷಯಗಳು, ಐದು ಮಹಾಭೂತಗಳು, ಮನಸ್ಸು, ಬುದ್ಧಿ, ಅತ್ಮ, ಅವ್ಯಕ್ತ ಮತ್ತು ಪುರುಷ ಈ ಎಲ್ಲದರ ಕುರಿತು ವಿಚಾರಮಾಡಿ ಚೆನ್ನಾಗಿ ತಿಳಿದುಕೊಂಡು ನಿರ್ಮಲ ಮನಸ್ಸಿನಿಂದ ತೊರೆದವನು ಸರ್ವಬಂಧನಗಳಿಂದ ವಿಮುಕ್ತನಾಗಿ ಸ್ವರ್ಗವನ್ನು ಪಡೆಯುತ್ತಾನೆ.
14046054a ಏತದೇವಾಂತವೇಲಾಯಾಂ ಪರಿಸಂಖ್ಯಾಯ ತತ್ತ್ವವಿತ್|
14046054c ಧ್ಯಾಯೇದೇಕಾಂತಮಾಸ್ಥಾಯ ಮುಚ್ಯತೇಽಥ ನಿರಾಶ್ರಯಃ||
14046055a ನಿರ್ಮುಕ್ತಃ ಸರ್ವಸಂಗೇಭ್ಯೋ ವಾಯುರಾಕಾಶಗೋ ಯಥಾ|
14046055c ಕ್ಷೀಣಕೋಶೋ ನಿರಾತಂಕಃ ಪ್ರಾಪ್ನೋತಿ ಪರಮಂ ಪದಮ್||
ಇದನ್ನು ತಿಳಿದು ಕಡೆಗಾಲದಲ್ಲಿ ಏಕಾಂತದಲ್ಲಿದ್ದುಕೊಂಡು ಧ್ಯಾನಮಾಡುವವನು ಆಕಾಶದಲ್ಲಿ ಸಂಚರಿಸುವ ವಾಯುವಿನಂತೆ ಎಲ್ಲ ವಿಧದ ಆಸಕ್ತಿಗಳಿಂದಲೂ ಮುಕ್ತನಾಗಿ ಪಂಚಕೋಶಗಳಿಂದ ರಹಿತನಾಗಿ, ನಿರಾತಂಕನಾಗಿ ಮತ್ತು ನಿರಾಶ್ರಯನಾಗಿ ಪರಮ ಪದವನ್ನು ಹೊಂದುತ್ತಾನೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಷಟ್ಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತಾರನೇ ಅಧ್ಯಾಯವು.
[1] ಅಸ್ಪರ್ಧಿತಮನಾಶ್ಚೈವ ಲಘ್ವಾಶೀ ದೇವತಾಶ್ರಯಃ| ಎಂಬ ಪಾಠಾಂತರವಿದೆ.