ಅಶ್ವಮೇಧಿಕ ಪರ್ವ
೩೬
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೩೬).
14036001 ಬ್ರಹ್ಮೋವಾಚ
14036001a ತದವ್ಯಕ್ತಮನುದ್ರಿಕ್ತಂ ಸರ್ವವ್ಯಾಪಿ ಧ್ರುವಂ ಸ್ಥಿರಮ್|
14036001c ನವದ್ವಾರಂ ಪುರಂ ವಿದ್ಯಾತ್ತ್ರಿಗುಣಂ ಪಂಚಧಾತುಕಮ್||
14036002a ಏಕಾದಶಪರಿಕ್ಷೇಪಂ ಮನೋ ವ್ಯಾಕರಣಾತ್ಮಕಮ್|
14036002c ಬುದ್ಧಿಸ್ವಾಮಿಕಮಿತ್ಯೇತತ್ಪರಮೇಕಾದಶಂ ಭವೇತ್||
ಬ್ರಹ್ಮನು ಹೇಳಿದನು: “ಸತ್ತ್ವ-ರಜ-ತಮೋಗುಣಗಳ ಸಮಾವಸ್ಥೆಯಲ್ಲಿರುವುದೇ ಅವ್ಯಕ್ತ-ಪ್ರಕೃತಿ. ಅದು ಸರ್ವ ವ್ಯಾಪಿ, ನಿಶ್ಚಿತವಾದುದು ಮತ್ತು ಸ್ಥಿರವಾದುದು. ತ್ರಿಗುಣಗಳಲ್ಲಿ ವಿಷಮತೆಯುಂಟಾದಾಗ ಪಂಚಧಾತುಗಳ ಉತ್ಪತ್ತಿಯಾಗಿ, ನವದ್ವಾರಗಳುಳ್ಳ ಪುರ (ಶರೀರ) ವು ನಿರ್ಮಿತಗೊಳ್ಳುತ್ತದೆ. ಆ ಪುರದಲ್ಲಿರುವ ಆತ್ಮನನ್ನು ವಿಷಯಗಳ ಕಡೆ ಪ್ರೇರೇಪಿಸುವ ಮನಸ್ಸನ್ನೂ ಸೇರಿ ಹನ್ನೊಂದು ಇಂದ್ರಿಯಗಳಿವೆ. ಬುದ್ಧಿಯೇ ಇವುಗಳಿಗೆ ಸ್ವಾಮಿ. ಹನ್ನೊಂದು ಇಂದ್ರಿಯಗಳಲ್ಲಿ ಮನಸ್ಸೇ ಹೆಚ್ಚಿನದು.
14036003a ತ್ರೀಣಿ ಸ್ರೋತಾಂಸಿ ಯಾನ್ಯಸ್ಮಿನ್ನಾಪ್ಯಾಯಂತೇ ಪುನಃ ಪುನಃ|
14036003c ಪ್ರಣಾಡ್ಯಸ್ತಿಸ್ರ ಏವೈತಾಃ ಪ್ರವರ್ತಂತೇ ಗುಣಾತ್ಮಿಕಾಃ||
ಈ ಮನಸ್ಸಿನಲ್ಲಿ ಮೂರು ಗುಣಾತ್ಮಕ ಚಿಲುಮೆಗಳು ಪುನಃ ಪುನಃ ತುಂಬಿ ಹರಿಯುತ್ತಿರುತ್ತವೆ.
14036004a ತಮೋ ರಜಸ್ತಥಾ ಸತ್ತ್ವಂ ಗುಣಾನೇತಾನ್ಪ್ರಚಕ್ಷತೇ|
14036004c ಅನ್ಯೋನ್ಯಮಿಥುನಾಃ ಸರ್ವೇ ತಥಾನ್ಯೋನ್ಯಾನುಜೀವಿನಃ||
ಈ ಗುಣಗಳು ತಮ, ರಜಸ್ ಮತ್ತು ಸತ್ತ್ವಗಳೆಂದು ಹೇಳುತ್ತಾರೆ. ಇವೆಲ್ಲವೂ ಅನ್ಯೋನ್ಯರನ್ನು ಸೇರಿಕೊಂಡೇ ಇರುತ್ತವೆ ಮತ್ತು ಅನ್ಯೋನ್ಯರನ್ನು ಅವಲಂಬಿಸಿರುತ್ತವೆ.
14036005a ಅನ್ಯೋನ್ಯಾಪಾಶ್ರಯಾಶ್ಚೈವ ತಥಾನ್ಯೋನ್ಯಾನುವರ್ತಿನಃ|
14036005c ಅನ್ಯೋನ್ಯವ್ಯತಿಷಕ್ತಾಶ್ಚ ತ್ರಿಗುಣಾಃ ಪಂಚ ಧಾತವಃ||
ಇವುಗಳು ಅನ್ಯೋನ್ಯರನ್ನು ಆಶ್ರಯಿಸಿರುತ್ತವೆ. ಅನ್ಯೋನ್ಯರನ್ನು ಅನುಸರಿಸುತ್ತಿರುತ್ತವೆ. ಅನ್ಯೋನ್ಯರೊಡನೆ ಸೇರಿ ಹೋಗುತ್ತವೆ. ಪಂಚಧಾತುಗಳೂ ತ್ರಿಗುಣಾತ್ಮಕವಾಗಿವೆ.
14036006a ತಮಸೋ ಮಿಥುನಂ ಸತ್ತ್ವಂ ಸತ್ತ್ವಸ್ಯ ಮಿಥುನಂ ರಜಃ|
14036006c ರಜಸಶ್ಚಾಪಿ ಸತ್ತ್ವಂ ಸ್ಯಾತ್ಸತ್ತ್ವಸ್ಯ ಮಿಥುನಂ ತಮಃ||
ತಮಸ್ಸಿಗೆ ಸತ್ತ್ವವು ಜೊತೆಯಾಗಿರುತ್ತದೆ. ಸತ್ತ್ವಕ್ಕೆ ರಜಸ್ಸು ಜೊತೆಯಾಗಿರುತ್ತದೆ. ರಜಸ್ಸಿಗೆ ಸತ್ತ್ವವು ಜೊತೆಯಾಗಿರುತ್ತದೆ. ಸತ್ತ್ವಕ್ಕೆ ತಮಸ್ಸು ಜೊತೆಯಾಗಿರುತ್ತದೆ.
14036007a ನಿಯಮ್ಯತೇ ತಮೋ ಯತ್ರ ರಜಸ್ತತ್ರ ಪ್ರವರ್ತತೇ|
14036007c ನಿಯಮ್ಯತೇ ರಜೋ ಯತ್ರ ಸತ್ತ್ವಂ ತತ್ರ ಪ್ರವರ್ತತೇ||
ತಮೋಗುಣಕ್ಕೆ ತಡೆಯುಂಟಾದರೆ ಅಲ್ಲಿ ರಜೋಗುಣವು ಹುಟ್ಟಿಕೊಳ್ಳುತ್ತದೆ. ರಜೋಗುಣಕ್ಕೆ ತಡೆಯುಂಟಾದರೆ ಅಲ್ಲಿ ಸತ್ತ್ವವು ಹುಟ್ಟಿಕೊಳ್ಳುತ್ತದೆ.
14036008a ನೈಶಾತ್ಮಕಂ ತಮೋ ವಿದ್ಯಾತ್ತ್ರಿಗುಣಂ ಮೋಹಸಂಜ್ಞಿತಮ್|
14036008c ಅಧರ್ಮಲಕ್ಷಣಂ ಚೈವ ನಿಯತಂ ಪಾಪಕರ್ಮಸು||
ತಮೋಗುಣವು ಅಂಧಕಾರಸ್ವರೂಪವನ್ನು ಹೊಂದಿದೆ. ತ್ರಿಗುಣಾತ್ಮಿಕವಾದ ಇದನ್ನು ಮೋಹವೆಂದೂ ಕರೆಯುತ್ತಾರೆ. ಇದು ಅಧರ್ಮದ ಲಕ್ಷಣ. ಪಾಪಕರ್ಮಿಗಳಲ್ಲಿ ಇದು ಅವಶ್ಯವಾಗಿ ಇರುತ್ತದೆ.
14036009a ಪ್ರವೃತ್ತ್ಯಾತ್ಮಕಮೇವಾಹೂ ರಜಃ ಪರ್ಯಾಯಕಾರಕಮ್|
14036009c ಪ್ರವೃತ್ತಂ ಸರ್ವಭೂತೇಷು ದೃಶ್ಯತೋತ್ಪತ್ತಿಲಕ್ಷಣಮ್||
ರಜೋಗುಣವು ಪ್ರವೃತ್ತ್ಯಾತ್ಮಕ ಎನ್ನುತ್ತಾರೆ. ಇದು ಪರಿವರ್ತನೆಯ ಕಾರಕ. ಸರ್ವಭೂತಗಳಲ್ಲಿಯೂ ಇದು ಪ್ರವೃತ್ತವಾಗಿದೆ. ಉತ್ಪತ್ತಿಲಕ್ಷಣವಾಗಿ ತೋರುತ್ತದೆ.
14036010a ಪ್ರಕಾಶಂ ಸರ್ವಭೂತೇಷು ಲಾಘವಂ ಶ್ರದ್ದಧಾನತಾ|
14036010c ಸಾತ್ತ್ವಿಕಂ ರೂಪಮೇವಂ ತು ಲಾಘವಂ ಸಾಧುಸಂಮಿತಮ್||
ಸರ್ವಭೂತಗಳಲ್ಲಿರುವ ಪ್ರಕಾಶವೇ ಸಾತ್ವಿಕ. ಇದು ನಿರಾಡಂಬರ (ಸರಳತೆ) ಮತ್ತು ಶ್ರದ್ಧಾಯುಕ್ತವಾದುದು. ಸಾತ್ತ್ವಿಕ ರೂಪವಾದ ನಿರಾಡಂಬರವನ್ನೇ ಸಾಧುಗಳು ಪ್ರಶಂಸಿಸುತ್ತಾರೆ.
14036011a ಏತೇಷಾಂ ಗುಣತತ್ತ್ವಂ ಹಿ ವಕ್ಷ್ಯತೇ ಹೇತ್ವಹೇತುಭಿಃ|
14036011c ಸಮಾಸವ್ಯಾಸಯುಕ್ತಾನಿ ತತ್ತ್ವತಸ್ತಾನಿ ವಿತ್ತ ಮೇ||
ನಾನು ಈಗ ಈ ಗುಣತತ್ತ್ವಗಳ ಕುರಿತು ಸಂಕ್ಷೇಪವಾಗಿಯೂ ವಿಸ್ತಾರವಾಗಿಯೂ ಹೇಳುತ್ತೇನೆ ಕೇಳಿ.
14036012a ಸಂಮೋಹೋಽಜ್ಞಾನಮತ್ಯಾಗಃ ಕರ್ಮಣಾಮವಿನಿರ್ಣಯಃ|
14036012c ಸ್ವಪ್ನಃ ಸ್ತಂಭೋ ಭಯಂ ಲೋಭಃ ಶೋಕಃ ಸುಕೃತದೂಷಣಮ್||
14036013a ಅಸ್ಮೃತಿಶ್ಚಾವಿಪಾಕಶ್ಚ ನಾಸ್ತಿಕ್ಯಂ ಭಿನ್ನವೃತ್ತಿತಾ|
14036013c ನಿರ್ವಿಶೇಷತ್ವಮಂಧತ್ವಂ ಜಘನ್ಯಗುಣವೃತ್ತಿತಾ||
14036014a ಅಕೃತೇ ಕೃತಮಾನಿತ್ವಮಜ್ಞಾನೇ ಜ್ಞಾನಮಾನಿತಾ|
14036014c ಅಮೈತ್ರೀ ವಿಕೃತೋ ಭಾವೋ ಅಶ್ರದ್ಧಾ ಮೂಢಭಾವನಾ||
14036015a ಅನಾರ್ಜವಮಸಂಜ್ಞತ್ವಂ ಕರ್ಮ ಪಾಪಮಚೇತನಾ|
14036015c ಗುರುತ್ವಂ ಸನ್ನಭಾವತ್ವಮಸಿತತ್ವಮವಾಗ್ಗತಿಃ||
14036016a ಸರ್ವ ಏತೇ ಗುಣಾ ವಿಪ್ರಾಸ್ತಾಮಸಾಃ ಸಂಪ್ರಕೀರ್ತಿತಾಃ|
14036016c ಯೇ ಚಾನ್ಯೇ ನಿಯತಾ ಭಾವಾ ಲೋಕೇಽಸ್ಮಿನ್ಮೋಹಸಂಜ್ಞಿತಾಃ||
ಸಂಮೋಹ, ಅಜ್ಞಾನ, ಅತ್ಯಾಗ, ಕರ್ಮಗಳ ಕುರಿತು ಸದಾ ಅನಿಶ್ಚಿತನಾಗಿರುವುದು, ಸ್ವಪ್ನ, ಗರ್ವ, ಭಯ, ಲೋಭ, ಶೋಕ, ಉತ್ತಮ ಕಾರ್ಯಗಳನ್ನು ದೂಷಿಸುವುದು, ಸ್ಮರಣೆಯಿಲ್ಲದಿರುವುದು, ಕಾರ್ಯದ ಪರಿಣಾಮಗಳ ಕುರಿತು ಯೋಚಿಸದೇ ಇರುವುದು, ನಾಸ್ತಿಕತೆ, ದುಶ್ಚಾರಿತ್ಯ್ರ, ಒಳ್ಳೆಯದು-ಕೆಟ್ಟದ್ದನ್ನು ಗುರುತಿಸದೇ ಇರುವುದು, ಇಂದ್ರಿಯಗಳ ಶೈಥಿಲ್ಯ, ಕರ್ಮವನ್ನು ಮಾಡದಿದ್ದರೂ ತಾನೇ ಅದನ್ನು ಮಾಡಿದೆನೆಂಬ ದುರಭಿಮಾನವನ್ನು ಹೊಂದುವುದು, ಅಜ್ಞಾನಿಯಾಗಿದ್ದರೂ ಜ್ಞಾನಿಯೆಂದು ಭಾವಿಸಿಕೊಳ್ಳುವದು, ಅಮೈತ್ರಿ, ಮಾಡಬೇಕಾದ ಕೆಲಸವನ್ನು ಮಾಡಲು ಮನಸ್ಸಿಲ್ಲದಿರುವುದು, ಮಾಡುವುದನ್ನು ಅಶ್ರದ್ಧೆಯಿಂದ ಮಾಡುವುದು, ಮೂಢಭಾವನೆ, ಕುಟಿಲತೆ, ಬುದ್ಧಿಗೆಟ್ಟು ನಡೆದುಕೊಳ್ಳುವುದು, ಪಾಪಕರ್ಮಗಳನ್ನೇ ಮಾಡುವುದು, ಮೈ-ಮನಸ್ಸುಗಳು ಭಾರವಾಗಿರುವುದು, ಸದ್ಭಾವವಿಲ್ಲದಿರುವುದು, ಇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳದೇ ಇರುವುದು, ನೀಚಕರ್ಮಗಳಲ್ಲಿಯೇ ಆಸಕ್ತನಾಗಿರುವುದು – ಇವೆಲ್ಲಕ್ಕೂ ತಮೋಗುಣವು ಕಾರಣವೆಂದು ಹೇಳುತ್ತಾರೆ. ಇವಲ್ಲದೇ ಇನ್ನೂ ಯಾವ ಯಾವ ಭಾವಗಳು ಮೋಹಕಗಳೆಂದು ಗುರುತಿಸಲ್ಪಡುತ್ತವೆಯೋ ಅವೆಲ್ಲವೂ ತಾಮಸಿಕ ಗುಣಗಳೇ.
14036017a ತತ್ರ ತತ್ರ ನಿಯಮ್ಯಂತೇ ಸರ್ವೇ ತೇ ತಾಮಸಾ ಗುಣಾಃ|
14036017c ಪರಿವಾದಕಥಾ ನಿತ್ಯಂ ದೇವಬ್ರಾಹ್ಮಣವೈದಿಕಾಃ||
ನಿತ್ಯವೂ ದೇವ-ಬ್ರಾಹ್ಮಣ-ವೇದಗಳನ್ನು ನಿಂದಿಸುವುದು ಮತ್ತು ತಡೆಯುವುದು ಎಲ್ಲವೂ ತಾಮಸ ಗುಣಗಳೇ.
14036018a ಅತ್ಯಾಗಶ್ಚಾಭಿಮಾನಶ್ಚ ಮೋಹೋ ಮನ್ಯುಸ್ತಥಾಕ್ಷಮಾ|
14036018c ಮತ್ಸರಶ್ಚೈವ ಭೂತೇಷು ತಾಮಸಂ ವೃತ್ತಮಿಷ್ಯತೇ||
ದಾನಮಾಡದಿರುವುದು, ಅಭಿಮಾನಿಯಾಗಿರುವುದು, ಮೋಹ, ಕೋಪ, ಅಸಹನೆ, ಇತರರೊಡನೆ ಮತ್ಸರ ಇವು ತಾಮಸಿಕ ವರ್ತನೆಗಳು.
14036019a ವೃಥಾರಂಭಾಶ್ಚ ಯೇ ಕೇ ಚಿದ್ವೃಥಾದಾನಾನಿ ಯಾನಿ ಚ|
14036019c ವೃಥಾಭಕ್ಷಣಮಿತ್ಯೇತತ್ತಾಮಸಂ ವೃತ್ತಮಿಷ್ಯತೇ||
ವೃಥಾ ಕಾರ್ಯಗಳನ್ನು ಆರಂಭಿಸುವುದು, ಯಾವುದನ್ನಾದರೂ ವೃಥಾ ದಾನಮಾಡುವುದು, ಸುಮ್ಮನೇ ತಿನ್ನುವುದು, ಇವು ತಾಮಸ ವೃತ್ತಿಗಳು.
14036020a ಅತಿವಾದೋಽತಿತಿಕ್ಷಾ ಚ ಮಾತ್ಸರ್ಯಮತಿಮಾನಿತಾ|
14036020c ಅಶ್ರದ್ದಧಾನತಾ ಚೈವ ತಾಮಸಂ ವೃತ್ತಮಿಷ್ಯತೇ||
ಅತಿಯಾಗಿ ಮಾತನಾಡುವುದು, ಕ್ಷಮೆತೋರದಿರುವುದು, ಮಾತ್ಸರ್ಯ, ಅತಿಯಾಗಿ ಅಭಿಮಾನಪಡುವುದು, ಅಶ್ರದ್ಧೆ ಇವು ತಾಮಸ ವೃತ್ತಿಗಳು.
14036021a ಏವಂವಿಧಾಸ್ತು ಯೇ ಕೇ ಚಿಲ್ಲೋಕೇಽಸ್ಮಿನ್ಪಾಪಕರ್ಮಿಣಃ|
14036021c ಮನುಷ್ಯಾ ಭಿನ್ನಮರ್ಯಾದಾಃ ಸರ್ವೇ ತೇ ತಾಮಸಾ ಜನಾಃ||
ಹೀಗೆ ಈ ಲೋಕದಲ್ಲಿ ಮರ್ಯಾದೆಯನ್ನು ಮೀರಿರುವ ಪಾಪಕರ್ಮಿ ಮನುಷ್ಯರೆಲ್ಲರೂ ತಾಮಸ ಜನರು.
14036022a ತೇಷಾಂ ಯೋನಿಂ ಪ್ರವಕ್ಷ್ಯಾಮಿ ನಿಯತಾಂ ಪಾಪಕರ್ಮಣಾಮ್|
14036022c ಅವಾಘ್ನಿರಯಭಾವಾಯ ತಿರ್ಯಘ್ನಿರಯಗಾಮಿನಃ||
ಅಂತಹ ಪಾಪಕರ್ಮಿಗಳು ಯಾವ ಯೋನಿಯಲ್ಲಿ ಹುಟ್ಟುತ್ತಾರೆ ಎಂದು ನಿಗದಿತವಾಗಿರುವುದನ್ನು ಹೇಳುತ್ತೇನೆ. ಇವರು ಅತ್ಯಂತ ನೀಚ ನರಕದಲ್ಲಿ ಬೀಳುತ್ತಾರೆ ಮತ್ತು ಕೆಲವರು ತಿರ್ಯಗ್ಯೋನಿಗಳಲ್ಲಿ ಹುಟ್ಟುತ್ತಾರೆ.
14036023a ಸ್ಥಾವರಾಣಿ ಚ ಭೂತಾನಿ ಪಶವೋ ವಾಹನಾನಿ ಚ|
14036023c ಕ್ರವ್ಯಾದಾ ದಂದಶೂಕಾಶ್ಚ ಕೃಮಿಕೀಟವಿಹಂಗಮಾಃ||
14036024a ಅಂಡಜಾ ಜಂತವೋ ಯೇ ಚ ಸರ್ವೇ ಚಾಪಿ ಚತುಷ್ಪದಾಃ|
14036024c ಉನ್ಮತ್ತಾ ಬಧಿರಾ ಮೂಕಾ ಯೇ ಚಾನ್ಯೇ ಪಾಪರೋಗಿಣಃ||
14036025a ಮಗ್ನಾಸ್ತಮಸಿ ದುರ್ವೃತ್ತಾಃ ಸ್ವಕರ್ಮಕೃತಲಕ್ಷಣಾಃ|
14036025c ಅವಾಕ್ಸ್ರೋತಸ ಇತ್ಯೇತೇ ಮಗ್ನಾಸ್ತಮಸಿ ತಾಮಸಾಃ||
ವೃಕ್ಷ-ಪರ್ವತಾದಿ ಸ್ಥಾವರಗಳು, ಪಶುಗಳು, ಆನೆ-ಕುದುರೆ ಮೊದಲಾದ ವಾಹನಗಳು, ಮಾಂಸಹಾರೀ ಜಂತುಗಳು, ಸರ್ಪಗಳು, ಕ್ರಿಮಿ-ಕೀಟಗಳು, ಪಕ್ಷಿಗಳು, ಮೊಟ್ಟೆಯಲ್ಲಿ ಜನಿಸುವ ಜಂತುಗಳು, ಮತ್ತು ಎಲ್ಲ ನಾಲ್ಕು ಕಾಲಿನ ಪ್ರಾಣಿಗಳು, ಹುಚ್ಚರು, ಕಿವುಡರು, ಮೂಕರು ಮತ್ತು ಅನ್ಯ ಪಾಪರೋಗಿಗಳು ಇವರೆಲ್ಲರೂ ತಮೋಗುಣದಲ್ಲಿಯೇ ಮುಳುಗಿರುತ್ತಾರೆ. ತಮ್ಮ ತಮ್ಮ ಕರ್ಮಗಳಿಗನುಸಾರವಾಗಿ ದುರ್ಲಕ್ಷಣಗಳನ್ನು ಹೊಂದಿರುವ ಇವರು ತಮಸ್ಸಿನಲ್ಲಿಯೇ ಮಗ್ನರಾಗಿರುವುದರಿಂದ ಇವರನ್ನು ಅವಾಕ್ಸ್ರೋತಸರು ಎಂದು ಕರೆಯುತ್ತಾರೆ.
14036026a ತೇಷಾಮುತ್ಕರ್ಷಮುದ್ರೇಕಂ ವಕ್ಷ್ಯಾಮ್ಯಹಮತಃ ಪರಮ್|
14036026c ಯಥಾ ತೇ ಸುಕೃತಾಽಲ್ಲೋಕಾಽಲ್ಲಭಂತೇ ಪುಣ್ಯಕರ್ಮಿಣಃ||
ಇನ್ನು ಮುಂದೆ ಅಂಥವರು ಹೇಗೆ ಉತ್ಕರ್ಷವನ್ನು ಮತ್ತು ಸಮೃದ್ಧಿಯನ್ನು ಹೊಂದಬಲ್ಲರು ಮತ್ತು ಅವರಿಗೆ ಹೇಗೆ ಪುಣ್ಯಕರ್ಮಗಳಿಂದ ಸುಕೃತರ ಲೋಕಗಳು ದೊರೆಯಬಲ್ಲದು ಎನ್ನುವುದನ್ನು ಹೇಳುತ್ತೇನೆ.
14036027a ಅನ್ಯಥಾ ಪ್ರತಿಪನ್ನಾಸ್ತು ವಿವೃದ್ಧಾ ಯೇ ಚ ಕರ್ಮಸು|
14036027c ಸ್ವಕರ್ಮನಿರತಾನಾಂ ಚ ಬ್ರಾಹ್ಮಣಾನಾಂ ಶುಭೈಷಿಣಾಮ್||
14036028a ಸಂಸ್ಕಾರೇಣೋರ್ಧ್ವಮಾಯಾಂತಿ ಯತಮಾನಾಃ ಸಲೋಕತಾಮ್|
14036028c ಸ್ವರ್ಗಂ ಗಚ್ಚಂತಿ ದೇವಾನಾಮಿತ್ಯೇಷಾ ವೈದಿಕೀ ಶ್ರುತಿಃ||
ತಿರ್ಯಕ್-ಸ್ಥಾವರ ಯೋನಿಗಳನ್ನು ಪಡೆದ ಜೀವಿಗಳು ಸ್ವಕರ್ಮನಿರತರಾದ ಬ್ರಾಹ್ಮಣರ ಕರ್ಮಗಳ ಸಲುವಾಗಿ ಬಳಸಲ್ಪಟ್ಟರೆ ಉತ್ತಮ ಸಂಸ್ಕಾರವನ್ನು ಪಡೆದು ಊರ್ಧ್ವಲೋಕಗಳಿಗೆ ಹೋಗುತ್ತವೆ. ಅಲ್ಲಿ ಸತತ ಪ್ರಯತ್ನಿಸುತ್ತಾ ಕಡೆಗೆ ಸ್ವರ್ಗದಲ್ಲಿ ದೇವತೆಗಳ ಸಾಮ್ಯವನ್ನೇ ಹೊಂದುತ್ತವೆ ಎಂದು ವೇದವಾಕ್ಯವಿದೆ.
14036029a ಅನ್ಯಥಾ ಪ್ರತಿಪನ್ನಾಸ್ತು ವಿವೃದ್ಧಾಃ ಸ್ವೇಷು ಕರ್ಮಸು|
14036029c ಪುನರಾವೃತ್ತಿಧರ್ಮಾಣಸ್ತೇ ಭವಂತೀಹ ಮಾನುಷಾಃ||
ಅನಂತರ ಕರ್ಮಾನುಸಾರವಾಗಿ ತಮ್ಮ ತಮ್ಮ ಕರ್ಮಗಳ ಪ್ರಜ್ಞೆಯನ್ನು ಪಡೆದು ಪುನರಾವೃತ್ತಿಧರ್ಮವುಳ್ಳ ಮನುಷ್ಯರಾಗಿ ಪುನಃ ಈ ಲೋಕದಲ್ಲಿ ಹುಟ್ಟುತ್ತಾರೆ.
14036030a ಪಾಪಯೋನಿಂ ಸಮಾಪನ್ನಾಶ್ಚಂಡಾಲಾ ಮೂಕಚೂಚುಕಾಃ|
14036030c ವರ್ಣಾನ್ಪರ್ಯಾಯಶಶ್ಚಾಪಿ ಪ್ರಾಪ್ನುವಂತ್ಯುತ್ತರೋತ್ತರಮ್||
ಅವರವರ ಕರ್ಮಾನುಸಾರವಾಗಿ ಕೆಲವರು ಚಾಂಡಾಲರೂ, ಮೂಕರೂ, ಅಥವಾ ತೊದಲರೂ ಆಗಿ ಪಾಪಯೋನಿಗಳನ್ನು ಹೊಂದುತ್ತಾರೆ. ಅಂಥವರೂ ಕೂಡ ಪುನಃ ಅವರ ಕರ್ಮಾನುಸಾರವಾಗಿ ಉತ್ತರೋತ್ತರದಲ್ಲಿ ಉಚ್ಚ ವರ್ಣಗಳಲ್ಲಿ ಜನಿಸುತ್ತಾರೆ.
14036031a ಶೂದ್ರಯೋನಿಮತಿಕ್ರಮ್ಯ ಯೇ ಚಾನ್ಯೇ ತಾಮಸಾ ಗುಣಾಃ|
14036031c ಸ್ರೋತೋಮಧ್ಯೇ ಸಮಾಗಮ್ಯ ವರ್ತಂತೇ ತಾಮಸೇ ಗುಣೇ||
ತಾಮಸ ಗುಣದವರು ಶೂದ್ರಯೋನಿಯನ್ನು ಅತಿಕ್ರಮಿಸಿ ಅನ್ಯ ವರ್ಣಗಳಲ್ಲಿ ಹುಟ್ಟಿದರೂ, ಅದರ ಪ್ರವಾಹದಲ್ಲಿಯೇ ಬಿದ್ದು, ತಾಮಸಗುಣದಲ್ಲಿಯೇ ವ್ಯವಹರಿಸುತ್ತಾರೆ.
14036032a ಅಭಿಷಂಗಸ್ತು ಕಾಮೇಷು ಮಹಾಮೋಹ ಇತಿ ಸ್ಮೃತಃ|
14036032c ಋಷಯೋ ಮುನಯೋ ದೇವಾ ಮುಹ್ಯಂತ್ಯತ್ರ ಸುಖೇಪ್ಸವಃ||
ಕಾಮೋಪಭೋಗಗಳಲ್ಲಿನ ಆಸಕ್ತಿಯು ಮಹಾಮೋಹವೆನಿಸಿಕೊಳ್ಳುತ್ತದೆ. ಸುಖವನ್ನು ಬಯಸುವ ಋಷಿ-ಮುನಿಗಳೂ ಮತ್ತು ದೇವತೆಗಳೂ ಈ ಮೋಹದಲ್ಲಿ ಸಿಲುಕಿ ಮೂಢರಾಗುತ್ತಾರೆ.
14036033a ತಮೋ ಮೋಹೋ ಮಹಾಮೋಹಸ್ತಾಮಿಸ್ರಃ ಕ್ರೋಧಸಂಜ್ಞಿತಃ|
14036033c ಮರಣಂ ತ್ವಂಧತಾಮಿಸ್ರಂ ತಾಮಿಸ್ರಂ ಕ್ರೋಧ ಉಚ್ಯತೇ||
ತಮಸ್ಸು (ಅವಿದ್ಯೆ), ಮೋಹ (ಅಹಂಕಾರ), ಮಹಾಮೋಹ (ಲೈಂಗಿಕ ಸುಖ) ತಾಮಿಸ್ರ (ಕ್ರೋಧ) ಮತ್ತು ಅಂಧತಾಮಿಸ್ರ (ಮರಣ) ಈ ಐದು ತಾಮಸೀ ಪ್ರಕೃತಿಗಳೆಂದು ಹೇಳುತ್ತಾರೆ.
14036034a ಭಾವತೋ ಗುಣತಶ್ಚೈವ ಯೋನಿತಶ್ಚೈವ ತತ್ತ್ವತಃ|
14036034c ಸರ್ವಮೇತತ್ತಮೋ ವಿಪ್ರಾಃ ಕೀರ್ತಿತಂ ವೋ ಯಥಾವಿಧಿ||
ವಿಪ್ರರೇ! ತಮೋಗುಣದ ಭಾವ, ಗುಣ, ಯೋನಿ ಮತ್ತು ತತ್ತ್ವ ಇವುಗಳೆಲ್ಲವನ್ನೂ ಯಥಾವಿಧಿಯಾಗಿ ವರ್ಣಿಸಿದ್ದೇನೆ.
14036035a ಕೋ ನ್ವೇತದ್ಬುಧ್ಯತೇ ಸಾಧು ಕೋ ನ್ವೇತತ್ಸಾಧು ಪಶ್ಯತಿ|
14036035c ಅತತ್ತ್ವೇ ತತ್ತ್ವದರ್ಶೀ ಯಸ್ತಮಸಸ್ತತ್ತ್ವಲಕ್ಷಣಮ್||
ಇದು ಒಳ್ಳೆಯದೆಂದು ಯಾರು ತಾನೇ ತಿಳಿದುಕೊಳ್ಳುತ್ತಾರೆ? ಮತ್ತು ಇದರಲ್ಲಿ ಒಳ್ಳೆಯದನ್ನು ಯಾರು ತಾನೇ ಕಾಣುತ್ತಾರೆ? ಅತತ್ತ್ವದಲ್ಲಿ ತತ್ತ್ವವನ್ನು ಕಾಣುವುದೇ ತಮೋಗುಣದ ಮುಖ್ಯ ಲಕ್ಷಣವಾಗಿದೆ.
14036036a ತಮೋಗುಣಾ ವೋ ಬಹುಧಾ ಪ್ರಕೀರ್ತಿತಾ
ಯಥಾವದುಕ್ತಂ ಚ ತಮಃ ಪರಾವರಮ್|
14036036c ನರೋ ಹಿ ಯೋ ವೇದ ಗುಣಾನಿಮಾನ್ ಸದಾ
ಸ ತಾಮಸೈಃ ಸರ್ವಗುಣೈಃ ಪ್ರಮುಚ್ಯತೇ||
ತಮೋಗುಣದ ಅನೇಕ ಪ್ರಕಾರಗಳನ್ನು ಹೇಳಿದ್ದೇನೆ. ಅದರಿಂದ ಪ್ರಾಪ್ತವಾಗುವ ಯೋನಿಗಳ ಕುರಿತೂ ಯಥಾವತ್ತಾಗಿ ಹೇಳಿದ್ದೇನೆ. ತಮಸ್ಸಿನ ಈ ಗುಣಗಳನ್ನು ಸದಾ ತಿಳಿದುಕೊಂಡಿರುವ ನರನು ಸಕಲ ವಿಧವಾದ ತಾಮಸ ಗುಣಗಳಿಂದ ಬಿಡುಗಡೆಹೊಂದುತ್ತಾನೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಷಟ್ತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಮೂವತ್ತಾರನೇ ಅಧ್ಯಾಯವು.