ಅಶ್ವಮೇಧಿಕ ಪರ್ವ
೨೮
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೨೮).
14028001 ಬ್ರಾಹ್ಮಣ ಉವಾಚ
14028001a ಗಂಧಾನ್ನ ಜಿಘ್ರಾಮಿ ರಸಾನ್ನ ವೇದ್ಮಿ
ರೂಪಂ ನ ಪಶ್ಯಾಮಿ ನ ಚ ಸ್ಪೃಶಾಮಿ|
14028001c ನ ಚಾಪಿ ಶಬ್ದಾನ್ವಿವಿಧಾನ್ಶೃಣೋಮಿ
ನ ಚಾಪಿ ಸಂಕಲ್ಪಮುಪೈಮಿ ಕಿಂ ಚಿತ್||
ಬ್ರಾಹ್ಮಣನು ಹೇಳಿದನು: “ನಾನು ಗಂಧವನ್ನು ಮೂಸುತ್ತಿಲ್ಲ. ರಸವನ್ನು ರುಚಿಸುತ್ತಿಲ್ಲ. ರೂಪವನ್ನು ನೋಡುತ್ತಿಲ್ಲ. ಮುಟ್ಟುತ್ತಿಲ್ಲ. ವಿವಿಧ ಶಬ್ಧಗಳನ್ನೂ ಕೇಳುತ್ತಿಲ್ಲ. ನಾನು ಯಾವುದೇ ಸಂಕಲ್ಪವನ್ನೂ ಯೋಚಿಸುತ್ತಿಲ್ಲ!
14028002a ಅರ್ಥಾನಿಷ್ಟಾನ್ಕಾಮಯತೇ ಸ್ವಭಾವಃ
ಸರ್ವಾನ್ದ್ವೇಷ್ಯಾನ್ಪ್ರದ್ವಿಷತೇ ಸ್ವಭಾವಃ|
14028002c ಕಾಮದ್ವೇಷಾವುದ್ಭವತಃ ಸ್ವಭಾವಾತ್
ಪ್ರಾಣಾಪಾನೌ ಜಂತುದೇಹಾನ್ನಿವೇಶ್ಯ||
ಸ್ವಭಾವವು ಅಭೀಷ್ಟವಾದವುಗಳನ್ನು ಬಯಸುತ್ತದೆ. ಸ್ವಭಾವವೇ ದ್ವೇಷಿಸುವ ಎಲ್ಲವನ್ನೂ ದ್ವೇಷಿಸುತ್ತದೆ. ಪ್ರಾಣ-ಅಪಾನಗಳು ಜಂತುವಿನ ದೇಹವನ್ನು ಪ್ರವೇಶಿಸಿ ಸ್ವಭಾವದಿಂದಲೇ ಕಾಮ-ದ್ವೇಷಗಳನ್ನುಂಟುಮಾಡುತ್ತವೆ.
14028003a ತೇಭ್ಯಶ್ಚಾನ್ಯಾಂಸ್ತೇಷ್ವನಿತ್ಯಾಂಶ್ಚ ಭಾವಾನ್
ಭೂತಾತ್ಮಾನಂ ಲಕ್ಷಯೇಯಂ ಶರೀರೇ|
14028003c ತಸ್ಮಿಂಸ್ತಿಷ್ಠನ್ನಾಸ್ಮಿ ಶಕ್ಯಃ ಕಥಂ ಚಿತ್
ಕಾಮಕ್ರೋಧಾಭ್ಯಾಂ ಜರಯಾ ಮೃತ್ಯುನಾ ಚ||
ಅವುಗಳನ್ನು ಮತ್ತು ಅನ್ಯ ಅನಿತ್ಯ ಭಾವಗಳನ್ನು ಹಾಗೂ ಭೂತಾತ್ಮನನ್ನು ಈ ಶರೀರದಲ್ಲಿ ಕಾಣುತ್ತೇನೆ. ಆ ಭೂತಾತ್ಮನಲ್ಲಿ ಮನಸ್ಸನ್ನು ಸ್ಥಾಪಿಸಿದ ನನ್ನನ್ನು ಕಾಮ-ಕ್ರೋಧಗಳಾಗಲೀ ಜರಾ-ಮೃತ್ಯುಗಳಾಗಲೀ ಎಂದೂ ಮುಟ್ಟುವುದಿಲ್ಲ.
14028004a ಅಕಾಮಯಾನಸ್ಯ ಚ ಸರ್ವಕಾಮಾನ್
ಅವಿದ್ವಿಷಾಣಸ್ಯ ಚ ಸರ್ವದೋಷಾನ್|
14028004c ನ ಮೇ ಸ್ವಭಾವೇಷು ಭವಂತಿ ಲೇಪಾಸ್
ತೋಯಸ್ಯ ಬಿಂದೋರಿವ ಪುಷ್ಕರೇಷು||
ಯಾವುದೇ ಕಾಮನಾ ವಸ್ತುವನ್ನು ಕಾಮಿಸದ ಮತ್ತು ಯಾವುದೇ ದ್ವೇಷವಸ್ತುವನ್ನು ದ್ವೇಷಿಸದ ನನ್ನ ಆ ಸ್ವಭಾವಗಳಲ್ಲಿ ಕಮಲದ ಎಲೆಗೆ ನೀರಿನ ಬಿಂದುಗಳು ಅಂಟಿಕೊಳ್ಳದಂತೆ ಯಾವ ದೋಷಗಳೂ ಅಂಟಿಕೊಳ್ಳುವುದಿಲ್ಲ.
14028005a ನಿತ್ಯಸ್ಯ ಚೈತಸ್ಯ ಭವಂತಿ ನಿತ್ಯಾ
ನಿರೀಕ್ಷಮಾಣಸ್ಯ ಬಹೂನ್ಸ್ವಭಾವಾನ್|
14028005c ನ ಸಜ್ಜತೇ ಕರ್ಮಸು ಭೋಗಜಾಲಂ
ದಿವೀವ ಸೂರ್ಯಸ್ಯ ಮಯೂಖಜಾಲಮ್||
ಇಂದ್ರಿಯಗಳ ಅನೇಕ ಸ್ವಭಾವಗಳನ್ನು ನಿತ್ಯವೂ ನಿರೀಕ್ಷಿಸುತ್ತಿರುವ ಆ ನಿತ್ಯ ಪರಮಾತ್ಮನಿಗೆ ಇಂದ್ರಿಯ ಸಂಬಂಧ ಭೋಗಗಳೆಲ್ಲವೂ ಅನಿತ್ಯವಾಗಿಯೇ ಕಾಣಿಸುತ್ತವೆ. ಅಂತಹ ಪರಮಾತ್ಮನನ್ನು ಅನುಭವಕ್ಕೆ ತಂದುಕೊಂಡವನಿಗೆ ಕರ್ಮಗಳಲ್ಲಿನ ಭೋಗಸಮೂಹಗಳು ಆಕಾಶದಲ್ಲಿನ ಕಿರಣ ಸಮೂಹಗಳು ಸೂರ್ಯನನ್ನು ಹೇಗೆ ಅಂಟಿಕೊಂಡಿರುವುದಿಲ್ಲವೋ ಹಾಗೆ ಅಂಟಿಕೊಂಡಿರುವುದಿಲ್ಲ.
14028006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
14028006c ಅಧ್ವರ್ಯುಯತಿಸಂವಾದಂ ತಂ ನಿಬೋಧ ಯಶಸ್ವಿನಿ||
ಯಶಸ್ವಿನೀ! ಈ ವಿಷಯದಲ್ಲಿ ಪುರಾತನ ಇತಿಹಾಸವಾಗಿರುವ ಅಧ್ವರ್ಯು ಮತ್ತು ಯತಿಯರ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.
14028007a ಪ್ರೋಕ್ಷ್ಯಮಾಣಂ ಪಶುಂ ದೃಷ್ಟ್ವಾ ಯಜ್ಞಕರ್ಮಣ್ಯಥಾಬ್ರವೀತ್|
14028007c ಯತಿರಧ್ವರ್ಯುಮಾಸೀನೋ ಹಿಂಸೇಯಮಿತಿ ಕುತ್ಸಯನ್||
ಯಜ್ಞಕರ್ಮದಲ್ಲಿ ಪಶುವಿಗೆ ಪ್ರೋಕ್ಷಣೆಮಾಡುತ್ತಿರುವುದನ್ನು ನೋಡಿ ಅಲ್ಲಿಯೇ ಕುಳಿತಿದ್ದ ಯತಿಯೋರ್ವನು “ಇದು ಹಿಂಸೆ!” ಎಂದು ಅಧ್ವರ್ಯುವನ್ನು ಧಿಕ್ಕರಿಸಿದನು.
14028008a ತಮಧ್ವರ್ಯುಃ ಪ್ರತ್ಯುವಾಚ ನಾಯಂ ಚಾಗೋ ವಿನಶ್ಯತಿ|
14028008c ಶ್ರೇಯಸಾ ಯೋಕ್ಷ್ಯತೇ ಜಂತುರ್ಯದಿ ಶ್ರುತಿರಿಯಂ ತಥಾ||
ಅದಕ್ಕೆ ಅಧ್ವರ್ಯುವು ಉತ್ತರಿಸಿದನು: “ಈ ಆಡು ನಾಶವಾಗುವುದಿಲ್ಲ. ವೇದವಾಕ್ಯವು ಸತ್ಯವೆಂದಾದರೆ ಈ ಪ್ರಾಣಿಯು ಶ್ರೇಯಸ್ಸನ್ನು ಹೊಂದುತ್ತದೆ.
14028009a ಯೋ ಹ್ಯಸ್ಯ ಪಾರ್ಥಿವೋ ಭಾಗಃ ಪೃಥಿವೀಂ ಸ ಗಮಿಷ್ಯತಿ|
14028009c ಯದಸ್ಯ ವಾರಿಜಂ ಕಿಂ ಚಿದಪಸ್ತತ್ಪ್ರತಿಪದ್ಯತೇ||
ಇದರ ಪಾರ್ಥಿವ ಭಾಗವು ಪೃಥ್ವಿಯನ್ನು ಸೇರುತ್ತದೆ. ಇದರಲ್ಲಿರುವ ನೀರಿನ ಅಂಶವು ಆಪದಲ್ಲಿ ಸೇರಿಹೋಗುತ್ತದೆ.
14028010a ಸೂರ್ಯಂ ಚಕ್ಷುರ್ದಿಶಃ ಶ್ರೋತ್ರೇ ಪ್ರಾಣೋಽಸ್ಯ ದಿವಮೇವ ಚ|
14028010c ಆಗಮೇ ವರ್ತಮಾನಸ್ಯ ನ ಮೇ ದೋಷೋಽಸ್ತಿ ಕಶ್ಚನ||
ಇದರ ಕಣ್ಣುಗಳು ಸೂರ್ಯನನ್ನೂ, ಕಿವಿಗಳು ದಿಕ್ಕುಗಳನ್ನೂ, ಪ್ರಾಣವು ದಿವವನ್ನೂ ಸೇರುತ್ತವೆ. ಆಗಮ ಶಾಸ್ತ್ರಗಳ ಪ್ರಕಾರ ನಡೆದುಕೊಳ್ಳುತ್ತಿರುವ ನನಗೆ ಯಾವ ದೋಷವೂ ಅಂಟಿಕೊಳ್ಳುವುದಿಲ್ಲ.”
14028011 ಯತಿರುವಾಚ
14028011a ಪ್ರಾಣೈರ್ವಿಯೋಗೇ ಚಾಗಸ್ಯ ಯದಿ ಶ್ರೇಯಃ ಪ್ರಪಶ್ಯಸಿ|
14028011c ಚಾಗಾರ್ಥೇ ವರ್ತತೇ ಯಜ್ಞೋ ಭವತಃ ಕಿಂ ಪ್ರಯೋಜನಮ್||
ಯತಿಯು ಹೇಳಿದನು: “ಈ ಆಡಿನ ಪ್ರಾಣವನ್ನು ತೆಗೆಯುವುದರಿಂದ ಅದಕ್ಕೆ ಶ್ರೇಯಸ್ಸುಂಟಾಗುತ್ತದೆಯೆಂದಾದರೆ ಆಡಿಗಾಗಿ ನಡೆಸುತ್ತಿರುವ ಈ ಯಜ್ಞದಿಂದ ನಿನಗೇನು ಪ್ರಯೋಜನ?
14028012a ಅನು ತ್ವಾ ಮನ್ಯತಾಂ ಮಾತಾ ಪಿತಾ ಭ್ರಾತಾ ಸಖಾಪಿ ಚ|
14028012c ಮಂತ್ರಯಸ್ವೈನಮುನ್ನೀಯ ಪರವಂತಂ ವಿಶೇಷತಃ||
ವಿಶೇಷವಾಗಿ ಪರಾಧೀನವಾಗಿರುವ ಈ ಆಡಿನ ತಾಯಿ, ತಂದೆ, ಸಹೋದರರು ಮತ್ತು ಸ್ನೇಹಿತರೊಡನೆ ವಿಚಾರಿಸಿ ಅವರ ಅನುಮತಿಯನ್ನು ಪಡೆಯಬೇಕಾಗಿತ್ತು[1].
14028013a ಯ ಏವಮನುಮನ್ಯೇರಂಸ್ತಾನ್ಭವಾನ್ಪ್ರಷ್ಟುಮರ್ಹತಿ|
14028013c ತೇಷಾಮನುಮತಂ ಶ್ರುತ್ವಾ ಶಕ್ಯಾ ಕರ್ತುಂ ವಿಚಾರಣಾ||
ಇದಕ್ಕೆ ಅನುಮತಿಯನ್ನು ಕೊಡಬೇಕಾದವರನ್ನು ನೀನು ಕೇಳಬೇಕಾಗಿತ್ತು. ಅವರ ಅನುಮತಿಯನ್ನು ಕೇಳಿದ ನಂತರವೇ ಇದನ್ನು ಹನನಮಾಡುವ ಕುರಿತು ವಿಚಾರಿಸಲು ಶಕ್ಯವಿದೆ.
14028014a ಪ್ರಾಣಾ ಅಪ್ಯಸ್ಯ ಚಾಗಸ್ಯ ಪ್ರಾಪಿತಾಸ್ತೇ ಸ್ವಯೋನಿಷು|
14028014c ಶರೀರಂ ಕೇವಲಂ ಶಿಷ್ಟಂ ನಿಶ್ಚೇಷ್ಟಮಿತಿ ಮೇ ಮತಿಃ||
ಮೇಲಾಗಿ ಈ ಆಡಿನ ಪ್ರಾಣ, ಆಪ ಮೊದಲಾದ ಇಂದ್ರಿಯಗಳನ್ನು ಅವುಗಳ ಉಗಮಸ್ಥಾನಗಳಲ್ಲಿ ಮೊದಲೇ ಲೀನಗೊಳಿಸಿಬಿಟ್ಟಿರುವೆಯಾದುದರಿಂದ[2], ಕೇವಲ ಇದರ ನಿಶ್ಚೇಷ್ಟ ಶರೀರವು ಉಳಿದುಕೊಂಡಿದೆಯೆಂದು ನನ್ನ ಅಭಿಪ್ರಾಯವಾಗಿದೆ.
14028015a ಇಂಧನಸ್ಯ ತು ತುಲ್ಯೇನ ಶರೀರೇಣ ವಿಚೇತಸಾ|
14028015c ಹಿಂಸಾ ನಿರ್ವೇಷ್ಟುಕಾಮಾನಾಮಿಂಧನಂ ಪಶುಸಂಜ್ಞಿತಮ್||
ಚೇತನವನ್ನು ಕಳೆದುಕೊಂಡ ಶರೀರವು ಇಂಧನಕ್ಕೆ ಸಮಾನವು. ಹಿಂಸೆಯನ್ನು ಮಾಡಲು ಬಯಸುವವರು ಪಶುರೂಪದ ಇಂಧನವನ್ನು ಬಳಸುತ್ತಾರೆ!
14028016a ಅಹಿಂಸಾ ಸರ್ವಧರ್ಮಾಣಾಮಿತಿ ವೃದ್ಧಾನುಶಾಸನಮ್|
14028016c ಯದಹಿಂಸ್ರಂ ಭವೇತ್ಕರ್ಮ ತತ್ಕಾರ್ಯಮಿತಿ ವಿದ್ಮಹೇ||
ಎಲ್ಲಧರ್ಮಗಳಲ್ಲಿ ಅಹಿಂಸಾಧರ್ಮವೇ ಶ್ರೇಷ್ಠವೆಂದು ವೃದ್ಧರ ಅನುಶಾಸನವಾಗಿದೆ. ಯಾವ ಕರ್ಮದಲ್ಲಿ ಹಿಂಸೆಯಿಲ್ಲವೋ ಆ ಕಾರ್ಯವೇ ಮಾಡಲು ಯೋಗ್ಯವೆಂದು ತಿಳಿದಿದ್ದೇವೆ.
14028017a ಅಹಿಂಸೇತಿ ಪ್ರತಿಜ್ಞೇಯಂ ಯದಿ ವಕ್ಷ್ಯಾಮ್ಯತಃ ಪರಮ್|
14028017c ಶಕ್ಯಂ ಬಹುವಿಧಂ ವಕ್ತುಂ ಭವತಃ ಕಾರ್ಯದೂಷಣಮ್||
ಇದಕ್ಕೂ ಹೆಚ್ಚು ಹೇಳುವುದಾದರೆ ಅಹಿಂಸೆಯನ್ನು ಪಾಲಿಸುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಿಸಬೇಕು. ನಿನ್ನ ಈ ಕಾರ್ಯವನ್ನು ಇನ್ನೂ ಬಹುವಿಧದಲ್ಲಿ ದೂಷಿಸಲು ಶಕ್ಯವಿದೆ.
14028018a ಅಹಿಂಸಾ ಸರ್ವಭೂತಾನಾಂ ನಿತ್ಯಮಸ್ಮಾಸು ರೋಚತೇ|
14028018c ಪ್ರತ್ಯಕ್ಷತಃ ಸಾಧಯಾಮೋ ನ ಪರೋಕ್ಷಮುಪಾಸ್ಮಹೇ||
ಸರ್ವಭೂತಗಳಿಗೂ ಹಿಂಸೆಮಾಡದೇ ಇರುವುದು ನಮಗೆ ನಿತ್ಯವೂ ಪ್ರಿಯವಾಗಿದೆ. ಇದನ್ನು ಪರೋಕ್ಷವಾಗಿ ಉಪಾಸನೆ ಮಾಡದೇ ಪ್ರತ್ಯಕ್ಷವಾಗಿಯೇ ಸಾಧಿಸೋಣ!”
14028019 ಅಧ್ವರ್ಯುರುವಾಚ
14028019a ಭೂಮೇರ್ಗಂಧಗುಣಾನ್ಭುಂಕ್ಷೇ ಪಿಬಸ್ಯಾಪೋಮಯಾನ್ರಸಾನ್|
14028019c ಜ್ಯೋತಿಷಾಂ ಪಶ್ಯಸೇ ರೂಪಂ ಸ್ಪೃಶಸ್ಯನಿಲಜಾನ್ ಗುಣಾನ್||
ಅಧ್ವರ್ಯುವು ಹೇಳಿದನು: “ನೀನು ಭೂಮಿಯ ಗಂಧವನ್ನು ಆಘ್ರಾಣಿಸುವೆ. ಆಪದಲ್ಲಿರುವ ರಸವನ್ನು ಕುಡಿಯುತ್ತೀಯೆ. ತೇಜೋಗುಣವಾದ ರೂಪವನ್ನು ಕಾಣುತ್ತೀಯೆ. ಮತ್ತು ವಾಯುಗುಣದ ಸ್ಪರ್ಷವನ್ನು ಅನುಭವಿಸುತ್ತೀಯೆ.
14028020a ಶೃಣೋಷ್ಯಾಕಾಶಜಂ ಶಬ್ದಂ ಮನಸಾ ಮನ್ಯಸೇ ಮತಿಮ್|
14028020c ಸರ್ವಾಣ್ಯೇತಾನಿ ಭೂತಾನಿ ಪ್ರಾಣಾ ಇತಿ ಚ ಮನ್ಯಸೇ||
ಆಕಾಶದಲ್ಲಿ ಹುಟ್ಟುವ ಶಬ್ಧವನ್ನು ಕೇಳುತ್ತೀಯೆ. ಮನಸ್ಸಿನಿಂದ ಬುದ್ಧಿಯನ್ನು ಬಳಸುವೆ. ಆದರೆ ಈ ಎಲ್ಲ ಭೂತಗಳಿಗೂ ಪ್ರಾಣಗಳಿವೆಯೆಂದು ಭಾವಿಸುತ್ತೀಯೆ.
14028021a ಪ್ರಾಣಾದಾನೇ ಚ ನಿತ್ಯೋಽಸಿ ಹಿಂಸಾಯಾಂ ವರ್ತತೇ ಭವಾನ್|
14028021c ನಾಸ್ತಿ ಚೇಷ್ಟಾ ವಿನಾ ಹಿಂಸಾಂ ಕಿಂ ವಾ ತ್ವಂ ಮನ್ಯಸೇ ದ್ವಿಜ||
ಹೀಗೆ ನಿತ್ಯವೂ ನೀನು ಪ್ರಾಣವನ್ನು ಹೀರುತ್ತಿರುತ್ತೀಯೆ ಮತ್ತು ಹಿಂಸಾಪೂರ್ವಕವಾಗಿ ವರ್ತಿಸುತ್ತಿರುತ್ತೀಯೆ. ದ್ವಿಜ! ಹಿಂಸೆಯಿಲ್ಲದೇ ಯಾವ ಕಾರ್ಯವೂ ನಡೆಯುವುದಿಲ್ಲ ಎಂದು ನನಗನ್ನಿಸುತ್ತದೆ.”
14028022 ಯತಿರುವಾಚ
14028022a ಅಕ್ಷರಂ ಚ ಕ್ಷರಂ ಚೈವ ದ್ವೈಧೀಭಾವೋಽಯಮಾತ್ಮನಃ|
14028022c ಅಕ್ಷರಂ ತತ್ರ ಸದ್ಭಾವಃ ಸ್ವಭಾವಃ ಕ್ಷರ ಉಚ್ಯತೇ||
ಯತಿಯು ಹೇಳಿದನು: “ಈ ಆತ್ಮನಿಗೆ ಅಕ್ಷರ ಮತ್ತು ಕ್ಷರ ಎಂಬ ಎರಡು ಭಾವಗಳಿವೆ. ಇದರಲ್ಲಿ ಸದ್ಭಾವ (ಇರುವಿಕೆಯ ಭಾವ) ವನ್ನು ಅಕ್ಷರ ಮತ್ತು ಸ್ವಭಾವ (ಜೀವಿಯ ಸ್ವಭಾವ) ವನ್ನು ಕ್ಷರ ಎಂದು ಹೇಳುತ್ತಾರೆ.
14028023a ಪ್ರಾಣೋ ಜಿಹ್ವಾ ಮನಃ ಸತ್ತ್ವಂ ಸ್ವಭಾವೋ ರಜಸಾ ಸಹ|
14028023c ಭಾವೈರೇತೈರ್ವಿಮುಕ್ತಸ್ಯ ನಿರ್ದ್ವಂದ್ವಸ್ಯ ನಿರಾಶಿಷಃ||
ಪ್ರಾಣ, ಜಿಹ್ವ, ಮನಸ್ಸು, ಸತ್ತ್ವ, ಮತ್ತು ರಜಸ್ಸುಗಳು ಒಟ್ಟಿಗೆ ಸ್ವಭಾವಗಳೆನಿಸಿಕೊಳ್ಳುತ್ತವೆ. ಈ ಭಾವಗಳಿಂದ ವಿಮುಕ್ತನಾದವನು ನಿರ್ದ್ವಂದ್ವನೂ ಆಶೆಗಳಿಲ್ಲದವನ್ನೂ ಆಗಿರುವನು.
14028024a ಸಮಸ್ಯ ಸರ್ವಭೂತೇಷು ನಿರ್ಮಮಸ್ಯ ಜಿತಾತ್ಮನಃ|
14028024c ಸಮಂತಾತ್ಪರಿಮುಕ್ತಸ್ಯ ನ ಭಯಂ ವಿದ್ಯತೇ ಕ್ವ ಚಿತ್||
ಆ ಜಿತಾತ್ಮನು ಸರ್ವಭೂತಗಳಲ್ಲಿಯೂ ಸಮನಾಗಿ ವರ್ತಿಸುವನು. ಮಮಕಾರವನ್ನಿಟ್ಟುಕೊಂಡಿರುವುದಿಲ್ಲ. ಎಲ್ಲರೀತಿಯಲ್ಲಿಯೂ ಪರಿಮುಕ್ತನಾದ ಅವನಿಗೆ ಯಾವುದೇ ಭಯವಿರುವುದಿಲ್ಲ.”
14028025 ಅಧ್ವರ್ಯುರುವಾಚ
14028025a ಸದ್ಭಿರೇವೇಹ ಸಂವಾಸಃ ಕಾರ್ಯೋ ಮತಿಮತಾಂ ವರ|
14028025c ಭವತೋ ಹಿ ಮತಂ ಶ್ರುತ್ವಾ ಪ್ರತಿಭಾತಿ ಮತಿರ್ಮಮ||
ಅಧ್ವರ್ಯುವು ಹೇಳಿದನು: “ಮತಿವಂತರಲ್ಲಿ ಶ್ರೇಷ್ಠನೇ! ನಿನ್ನ ಈ ಅಭಿಪ್ರಾಯವನ್ನು ಕೇಳಿ ಉತ್ತಮ ಪುರುಷರ ಸಹವಾಸವನ್ನು ಮಾಡಬೇಕು ಎಂದು ನನ್ನ ಬುದ್ಧಿಗೆ ಹೊಳೆಯುತ್ತಿದೆ.
14028026a ಭಗವನ್ಭಗವದ್ಬುದ್ಧ್ಯಾ ಪ್ರತಿಬುದ್ಧೋ ಬ್ರವೀಮ್ಯಹಮ್|
14028026c ಮತಂ ಮಂತುಂ ಕ್ರತುಂ ಕರ್ತುಂ ನಾಪರಾಧೋಽಸ್ತಿ ಮೇ ದ್ವಿಜ||
ಭಗವನ್! ದ್ವಿಜ! ನಿನ್ನ ಬುದ್ಧಿಯಿಂದ ನಾನು ಇನ್ನೂ ಹೆಚ್ಚು ತಿಳಿದುಕೊಂಡವನಾಗಿದ್ದೇನೆ ಎಂದು ಹೇಳಬಲ್ಲೆ. ವೇದೋಕ್ತವಾದ ಕ್ರತುವನ್ನು ಮಾಡಿಸುತ್ತಿರುವ ನಾನು ಯಾವ ಅಪರಾಧವನ್ನೂ ಎಸಗುತ್ತಿಲ್ಲ!””
14028027 ಬ್ರಾಹ್ಮಣ ಉವಾಚ
14028027a ಉಪಪತ್ತ್ಯಾ ಯತಿಸ್ತೂಷ್ಣೀಂ ವರ್ತಮಾನಸ್ತತಃ ಪರಮ್|
14028027c ಅಧ್ವರ್ಯುರಪಿ ನಿರ್ಮೋಹಃ ಪ್ರಚಚಾರ ಮಹಾಮಖೇ||
ಬ್ರಾಹ್ಮಣನು ಹೇಳಿದನು: “ಇದನ್ನು ಕೇಳಿ ಯತಿಯು ಸುಮ್ಮನಾದನು. ಅಧ್ವರ್ಯುವೂ ಕೂಡ ಆ ಮಹಾಯಜ್ಞವನ್ನು ಮುಂದುವರಿಸಿದನು.
14028028a ಏವಮೇತಾದೃಶಂ ಮೋಕ್ಷಂ ಸುಸೂಕ್ಷ್ಮಂ ಬ್ರಾಹ್ಮಣಾ ವಿದುಃ|
14028028c ವಿದಿತ್ವಾ ಚಾನುತಿಷ್ಠಂತಿ ಕ್ಷೇತ್ರಜ್ಞೇನಾನುದರ್ಶಿನಾ||
ಹೀಗೆ ಮೋಕ್ಷವು ಅತ್ಯಂತ ಸೂಕ್ಷ್ಮ ಸ್ವರೂಪವುಳ್ಳದ್ದು ಎಂದು ಬ್ರಾಹ್ಮಣರು ತಿಳಿದಿರುತ್ತಾರೆ. ಇದನ್ನು ತಿಳಿದೇ ಅವರು ಕ್ಷೇತ್ರಜ್ಞನು ತೋರಿಸಿಕೊಟ್ಟಂತೆ ನಡೆದುಕೊಳ್ಳುತ್ತಾರೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಅಷ್ಟಾವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.
[1] ಅನ್ವೇನಂ ಮಾತಾಮನುಮನ್ಯತಾಮನುಪಿತಾಽನುಭ್ರಾತಸಗರ್ಭೋಽನುಸಖಾ ಸಯೂಥ್ಯಃ – ಅರ್ಥಾತ್ – ಪಶುವೇ! ಈ ಕಾರ್ಯಕ್ಕೆ ನಿನ್ನ ತಾಯಿ-ತಂದೆ-ಅಣ್ಣತಮ್ಮಂದಿರು-ಸ್ನೇಹಿತರು-ಸಂಗಡಿಗರು ಎಲ್ಲರೂ ಅನುಮತಿಸಲಿ! ಎಂಬ ಮಂತ್ರವರ್ಣವಿದೆ.
[2] ಸೂರ್ಯಂ ತೇ ಚಕ್ಷುರ್ಗಮಯತಾದ್ವಾತಂ ಪ್ರಾಣಮನ್ವವಸೃಜತಾತ್ ಎಂಬ ಮಂತ್ರವಿದೆ.