ಅಶ್ವಮೇಧಿಕ ಪರ್ವ
೨೦
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಉದಾಹರಿಸಿದುದು (೧-೨೭).
14020001 ವಾಸುದೇವ ಉವಾಚ
14020001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
14020001c ದಂಪತ್ಯೋಃ ಪಾರ್ಥ ಸಂವಾದಮಭಯಂ ನಾಮ ನಾಮತಃ||
ವಾಸುದೇವನು ಹೇಳಿದನು: “ಪಾರ್ಥ! ಇದಕ್ಕೆ ಸಂಬಂಧಿಸಿದಂತೆ ದಂಪತಿಗಳ ಸಂವಾದರೂಪವಾದ ಅಭಯ ಎಂಬ ಹೆಸರಿನ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
14020002a ಬ್ರಾಹ್ಮಣೀ ಬ್ರಾಹ್ಮಣಂ ಕಂ ಚಿಜ್ಞಾನವಿಜ್ಞಾನಪಾರಗಮ್|
14020002c ದೃಷ್ಟ್ವಾ ವಿವಿಕ್ತ ಆಸೀನಂ ಭಾರ್ಯಾ ಭರ್ತಾರಮಬ್ರವೀತ್||
ಓರ್ವ ಜ್ಞಾನ-ವಿಜ್ಞಾನಪಾರಂಗತನಾದ ಬ್ರಾಹ್ಮಣನು ಏಕಾಂತದಲ್ಲಿ ಸುಮ್ಮನೇ ಕುಳಿತಿರುವುದನ್ನು ನೋಡಿ ಅವನ ಬ್ರಾಹ್ಮಣೀ ಭಾರ್ಯೆಯು ತನ್ನ ಪತಿಯಲ್ಲಿ ಪ್ರಶ್ನಿಸಿದಳು:
14020003a ಕಂ ನು ಲೋಕಂ ಗಮಿಷ್ಯಾಮಿ ತ್ವಾಮಹಂ ಪತಿಮಾಶ್ರಿತಾ|
14020003c ನ್ಯಸ್ತಕರ್ಮಾಣಮಾಸೀನಂ ಕೀನಾಶಮವಿಚಕ್ಷಣಮ್||
“ಏನನ್ನೂ ಮಾಡದೇ ಸೋಮಾರಿಯಾಗಿ ಕುಳಿತುಕೊಳ್ಳುವ, ಕೃಪಣನೂ ಅವಿದ್ವಾಂಸನೂ ಆದ ನಿನ್ನನ್ನು ಪತಿಯನ್ನಾಗಿ ಆಶ್ರಯಿಸಿರುವ ನಾನು ಯಾವ ಲೋಕಕ್ಕೆ ಹೋಗುತ್ತೇನೆ?
14020004a ಭಾರ್ಯಾಃ ಪತಿಕೃತಾಽಲ್ಲೋಕಾನಾಪ್ನುವಂತೀತಿ ನಃ ಶ್ರುತಮ್|
14020004c ತ್ವಾಮಹಂ ಪತಿಮಾಸಾದ್ಯ ಕಾಂ ಗಮಿಷ್ಯಾಮಿ ವೈ ಗತಿಮ್||
ಪತಿಯು ಗಳಿಸಿದ ಲೋಕಗಳಿಗೆ ಭಾರ್ಯೆಯರು ಹೋಗುತ್ತಾರೆ ಎನ್ನುವುದನ್ನು ನಾವು ಕೇಳಿದ್ದೇವೆ. ನಿನ್ನನ್ನು ಪತಿಯನ್ನಾಗಿ ಪಡೆದ ನಾನು ಯಾವ ಗತಿಯಲ್ಲಿ ಹೋಗುತ್ತೇನೆ?”
14020005a ಏವಮುಕ್ತಃ ಸ ಶಾಂತಾತ್ಮಾ ತಾಮುವಾಚ ಹಸನ್ನಿವ|
14020005c ಸುಭಗೇ ನಾಭ್ಯಸೂಯಾಮಿ ವಾಕ್ಯಸ್ಯಾಸ್ಯ ತವಾನಘೇ||
ಇದನ್ನು ಕೇಳಿದ ಆ ಶಾಂತಾತ್ಮನು ನಸುನಗುತ್ತಾ ಅವಳಿಗೆ ಹೇಳಿದನು: “ಸುಭಗೇ! ಅನಘೇ! ನಿನ್ನ ಈ ಮಾತನ್ನು ನಾನು ತಪ್ಪೆಂದು ಹೇಳುವುದಿಲ್ಲ.
14020006a ಗ್ರಾಹ್ಯಂ ದೃಶ್ಯಂ ಚ ಶ್ರಾವ್ಯಂ ಚ ಯದಿದಂ ಕರ್ಮ ವಿದ್ಯತೇ|
14020006c ಏತದೇವ ವ್ಯವಸ್ಯಂತಿ ಕರ್ಮ ಕರ್ಮೇತಿ ಕರ್ಮಿಣಃ||
ಯಾವುದು ಗ್ರಹಿಕೆಗೆ ಸಿಗುತ್ತದೆಯೋ, ಯಾವುದನ್ನು ನೋಡಬಹುದೋ ಅಥವಾ ಕೇಳಬಹುದೋ ಅದನ್ನು ಕರ್ಮವೆಂದು ತಿಳಿಯುತ್ತಾರೆ. ಕರ್ಮಿಗಳು ಇವೇ ಕರ್ಮಗಳೆಂದು ತಿಳಿದು ಮಾಡುತ್ತಿರುತ್ತಾರೆ.
14020007a ಮೋಹಮೇವ ನಿಯಚ್ಚಂತಿ ಕರ್ಮಣಾ ಜ್ಞಾನವರ್ಜಿತಾಃ|
14020007c ನೈಷ್ಕರ್ಮ್ಯಂ ನ ಚ ಲೋಕೇಽಸ್ಮಿನ್ಮೌರ್ತಮಿತ್ಯುಪಲಭ್ಯತೇ||
ಜ್ಞಾನವನ್ನು ತೊರೆದವರು ಕರ್ಮದ ಮೂಲಕ ಮೋಹವನ್ನೇ ಸಂಗ್ರಹಿಸಿಕೊಳ್ಳುತ್ತಾರೆ. ಈ ಲೋಕದಲ್ಲಿ ಮನುಷ್ಯನಿಗೆ ಮುಹೂರ್ತಕಾಲವಾದರೂ ಕರ್ಮಮಾಡದೇ ಇರಲು ಸಾಧ್ಯವಿಲ್ಲ.
14020008a ಕರ್ಮಣಾ ಮನಸಾ ವಾಚಾ ಶುಭಂ ವಾ ಯದಿ ವಾಶುಭಮ್|
14020008c ಜನ್ಮಾದಿಮೂರ್ತಿಭೇದಾನಾಂ ಕರ್ಮ ಭೂತೇಷು ವರ್ತತೇ||
ಕರ್ಮ, ಮನಸ್ಸು ಮತ್ತು ಮಾತು ಇವುಗಳ ಮೂಲಕವಾಗಿ ನಡೆಯುವ ಶುಭಾಶುಭ ಕರ್ಮಗಳು ಜನ್ಮದಿಂದ ಹಿಡಿದು ಪುನಃ ಜನ್ಮ ಪಡೆಯುವವರೆಗೆ ಜೀವಿಗಳಲ್ಲಿ ನಡೆಯುತ್ತಲೇ ಇರುತ್ತವೆ.
14020009a ರಕ್ಷೋಭಿರ್ವಧ್ಯಮಾನೇಷು ದೃಶ್ಯದ್ರವ್ಯೇಷು ಕರ್ಮಸು|
14020009c ಆತ್ಮಸ್ಥಮಾತ್ಮನಾ ತೇನ ದೃಷ್ಟಮಾಯತನಂ ಮಯಾ||
ಯಜ್ಞಕರ್ಮಗಳಲ್ಲಿ ಕಂಡ ದ್ರವ್ಯಗಳನ್ನು ರಾಕ್ಷಸರು ಧ್ವಂಸಮಾಡುತ್ತಿರುವಾಗ ನಾನು ಆತ್ಮಸ್ಥನಾಗಿದ್ದೆ. ಅಲ್ಲಿ ನಾನು ನನ್ನ ನೆಲೆಯನ್ನು ಕಂಡೆನು.
14020010a ಯತ್ರ ತದ್ಬ್ರಹ್ಮ ನಿರ್ದ್ವಂದ್ವಂ ಯತ್ರ ಸೋಮಃ ಸಹಾಗ್ನಿನಾ|
14020010c ವ್ಯವಾಯಂ ಕುರುತೇ ನಿತ್ಯಂ ಧೀರೋ ಭೂತಾನಿ ಧಾರಯನ್||
ಅಲ್ಲಿ ನಿರ್ದ್ವಂದ್ವನಾದ ಬ್ರಹ್ಮನು ವಿರಾಜಮಾನನಾಗಿದ್ದಾನೆ. ಅಲ್ಲಿ ಸೋಮನು ಅಗ್ನಿಯೊಡನೆ ನಿತ್ಯವೂ ಸೇರಿಕೊಂಡಿರುತ್ತಾನೆ[1]. ಧೀರನಾದ ಜೀವನು ಪಂಚಭೂತಗಳನ್ನು ಧರಿಸಿ ಅವುಗಳ ಮಧ್ಯದಲ್ಲಿ ನೆಲೆಸಿರುತ್ತಾನೆ.
14020011a ಯತ್ರ ಬ್ರಹ್ಮಾದಯೋ ಯುಕ್ತಾಸ್ತದಕ್ಷರಮುಪಾಸತೇ|
14020011c ವಿದ್ವಾಂಸಃ ಸುವ್ರತಾ ಯತ್ರ ಶಾಂತಾತ್ಮಾನೋ ಜಿತೇಂದ್ರಿಯಾಃ||
ಅಲ್ಲಿ ಜಿತೇಂದ್ರಿಯರೂ, ಶಾಂತಾತ್ಮರೂ, ಸುವ್ರತರೂ, ವಿಧ್ವಾಂಸರೂ ಆದ ಬ್ರಹ್ಮಾದಿಗಳು ಯೋಗಯುಕ್ತರಾಗಿ ಆ ಅಕ್ಷರನನ್ನು ಉಪಾಸಿಸುತ್ತಿರುತ್ತಾರೆ.
14020012a ಘ್ರಾಣೇನ ನ ತದಾಘ್ರೇಯಂ ನ ತದಾದ್ಯಂ ಚ ಜಿಹ್ವಯಾ|
14020012c ಸ್ಪರ್ಶೇನ ಚ ನ ತತ್ ಸ್ಪೃಶ್ಯಂ ಮನಸಾ ತ್ವೇವ ಗಮ್ಯತೇ||
ಆ ಅವಿನಾಶೀ ಪರಬ್ರಹ್ಮತತ್ತ್ವವನ್ನು ಮೂಗಿನಿಂದ ಮೂಸಲಾಗುವುದಿಲ್ಲ. ನಾಲಿಗೆಯಿಂದ ರುಚಿಸಲು ಆಗುವುದಿಲ್ಲ. ಚರ್ಮದ ಮೂಲಕ ಮುಟ್ಟಲೂ ಸಾಧ್ಯವಿಲ್ಲ. ಮನಸ್ಸಿನ ಮೂಲಕ ಮಾತ್ರ ಅದರ ಅನುಭವವನ್ನು ಪಡೆದುಕೊಳ್ಳಬಹುದು.
14020013a ಚಕ್ಷುಷಾ ನ ವಿಷಹ್ಯಂ ಚ ಯತ್ಕಿಂ ಚಿಚ್ಚ್ರವಣಾತ್ಪರಮ್|
14020013c ಅಗಂಧಮರಸಸ್ಪರ್ಶಮರೂಪಾಶಬ್ದಮವ್ಯಯಮ್||
ಅದು ಕಣ್ಣುಗಳಿಂದ ನೋಡಬಹುದಾದಂಥ ವಿಷಯವಲ್ಲ. ಅದು ನಮ್ಮ ಕೇಳುವಿಕೆಗೂ ಅತೀತವಾಗಿದೆ. ಅವ್ಯಯವಾದ ಆ ಪರಬ್ರಹ್ಮತತ್ತ್ವಕ್ಕೆ ವಾಸನೆಯಿಲ್ಲ, ಸ್ಪರ್ಶವಿಲ್ಲ, ರೂಪವಿಲ್ಲ ಮತ್ತು ಶಬ್ಧವಿಲ್ಲ.
14020014a ಯತಃ ಪ್ರವರ್ತತೇ ತಂತ್ರಂ ಯತ್ರ ಚ ಪ್ರತಿತಿಷ್ಠತಿ|
14020014c ಪ್ರಾಣೋಽಪಾನಃ ಸಮಾನಶ್ಚ ವ್ಯಾನಶ್ಚೋದಾನ ಏವ ಚ||
14020015a ತತ ಏವ ಪ್ರವರ್ತಂತೇ ತಮೇವ ಪ್ರವಿಶಂತಿ ಚ|
ಅಲ್ಲಿಂದಲೇ ಸೃಷ್ಟಿಯು ವಿಸ್ತಾರವಾಗುತ್ತದೆ ಮತ್ತು ಅಲ್ಲಿಯೇ ಅದು ಉಪಸ್ಥಿತವಾಗಿರುತ್ತದೆ. ಪ್ರಾಣ-ಅಪಾನ-ಸಮಾನ-ವ್ಯಾನ-ಉದಾನಗಳು ಅದರಿಂದಲೇ ಹುಟ್ಟುತ್ತವೆ. ಮತ್ತು ಅದರಲ್ಲಿಯೇ ಲೀನವಾಗುತ್ತವೆ.
14020015c ಸಮಾನವ್ಯಾನಯೋರ್ಮಧ್ಯೇ ಪ್ರಾಣಾಪಾನೌ ವಿಚೇರತುಃ||
14020016a ತಸ್ಮಿನ್ಸುಪ್ತೇ ಪ್ರಲೀಯೇತೇ ಸಮಾನೋ ವ್ಯಾನ ಏವ ಚ|
14020016c ಅಪಾನಪ್ರಾಣಯೋರ್ಮಧ್ಯೇ ಉದಾನೋ ವ್ಯಾಪ್ಯ ತಿಷ್ಠತಿ|
14020016e ತಸ್ಮಾಚ್ಚಯಾನಂ ಪುರುಷಂ ಪ್ರಾಣಾಪಾನೌ ನ ಮುಂಚತಃ||
ಸಮಾನ ಮತ್ತು ವ್ಯಾನಗಳ ಮಧ್ಯೆ ಪ್ರಾಣ-ಅಪಾನಗಳು ಸಂಚರಿಸುತ್ತಿರುತ್ತವೆ. ನಿದ್ರಿಸಿರುವಾಗ ಸಮಾನ-ವ್ಯಾನಗಳು ಪ್ರಾಣದಲ್ಲಿ ಲಯಹೊಂದುತ್ತವೆ. ಅಪಾನ ಮತ್ತು ಪ್ರಾಣಗಳ ಮಧ್ಯೆ ಉದಾನವು ವ್ಯಾಪಿಸಿರುತ್ತದೆ. ಆದುದರಿಂದಲೇ ಮಲಗಿರುವ ಪುರುಷನನ್ನು ಪ್ರಾಣ-ಅಪಾನಗಳು ಬಿಟ್ಟಿರುವುದಿಲ್ಲ.
14020017a ಪ್ರಾಣಾನಾಯಮ್ಯತೇ ಯೇನ ತಮುದಾನಂ ಪ್ರಚಕ್ಷತೇ|
14020017c ತಸ್ಮಾತ್ತಪೋ ವ್ಯವಸ್ಯಂತಿ ತದ್ಭವಂ ಬ್ರಹ್ಮವಾದಿನಃ||
ಪ್ರಾಣಗಳ ಆಧಾರವಾಗಿರುವುದರಿಂದ ಅದನ್ನು ಉದಾನ[2] ಎನ್ನುತ್ತಾರೆ. ಪ್ರಾಣಾದಿಗಳು ಉದಾನದಲ್ಲಿ ಸೇರಿಕೊಳ್ಳುವುದನ್ನೇ ಬ್ರಹ್ಮವಾದಿಗಳು ತಪಸ್ಸೆಂದು ನಿರ್ಣಯಿಸಿರುತ್ತಾರೆ.
14020018a ತೇಷಾಮನ್ಯೋನ್ಯಭಕ್ಷಾಣಾಂ ಸರ್ವೇಷಾಂ ದೇಹಚಾರಿಣಾಮ್|
14020018c ಅಗ್ನಿರ್ವೈಶ್ವಾನರೋ ಮಧ್ಯೇ ಸಪ್ತಧಾ ವಿಹಿತೋಽಂತರಾ||
ಹೀಗೆ ಅನ್ಯೋನ್ಯರಲ್ಲಿ ಲೀನವಾಗುವ ಆ ದೇಹದಲ್ಲಿ ಸಂಚರಿಸುತ್ತಿರುವ ವಾಯುಗಳ ಮಧ್ಯೆ ವೈಶ್ವಾನರ ಅಗ್ನಿಯು ಏಳು ರೂಪಗಳಲ್ಲಿ ನೆಲಸಿರುತ್ತಾನೆ.
14020019a ಘ್ರಾಣಂ ಜಿಹ್ವಾ ಚ ಚಕ್ಷುಶ್ಚ ತ್ವಕ್ಚ ಶ್ರೋತ್ರಂ ಚ ಪಂಚಮಮ್|
14020019c ಮನೋ ಬುದ್ಧಿಶ್ಚ ಸಪ್ತೈತಾ ಜಿಹ್ವಾ ವೈಶ್ವಾನರಾರ್ಚಿಷಃ||
ಮೂಗು, ನಾಲಿಗೆ, ಕಣ್ಣು, ಚರ್ಮ, ಕಿವಿ, ಐದನೆಯದಾಗಿ ಮನಸ್ಸು ಮತ್ತು ಏಳನೆಯದಾಗಿ ಬುದ್ಧಿ ಇವು ವೈಶ್ವಾನರನ ಜ್ವಾಲೆಗಳು.
14020020a ಘ್ರೇಯಂ ಪೇಯಂ ಚ ದೃಶ್ಯಂ ಚ ಸ್ಪೃಶ್ಯಂ ಶ್ರವ್ಯಂ ತಥೈವ ಚ|
14020020c ಮಂತವ್ಯಮಥ ಬೋದ್ಧವ್ಯಂ ತಾಃ ಸಪ್ತ ಸಮಿಧೋ ಮಮ||
ಗಂಧ, ದೃಶ್ಯ, ಮುಟ್ಟಬಹುದಾದವುಗಳು, ಶಬ್ಧ, ಮನನ ಮಾಡಿಕೊಳ್ಳುವಂಥಹುದು ಮತ್ತು ಬುದ್ಧಿಯಿಂದ ತಿಳಿದುಕೊಳ್ಳುವಂಥಹುದು ಈ ವಿಷಯಗಳೇ ನನ್ನ (ವೈಶ್ವಾನರನ) ಸಮಿತ್ತುಗಳು.
14020021a ಘ್ರಾತಾ ಭಕ್ಷಯಿತಾ ದ್ರಷ್ಟಾ ಸ್ಪ್ರಷ್ಟಾ ಶ್ರೋತಾ ಚ ಪಂಚಮಃ|
14020021c ಮಂತಾ ಬೋದ್ಧಾ ಚ ಸಪ್ತೈತೇ ಭವಂತಿ ಪರಮರ್ತ್ವಿಜಃ||
ಆಘ್ರಾಣಿಸುವವನು, ತಿನ್ನುವವನು, ನೋಡುವವನು, ಮುಟ್ಟುವವನು, ಮತ್ತು ಐದನೆಯವನಾಗಿ ಕೇಳುವವನು, ಯೋಚಿಸುವವನು ಮತ್ತು ತಿಳಿದುಕೊಳ್ಳುವವನು - ಈ ಏಳುಮಂದಿ ವೈಶ್ವಾನರನಿಗೆ ಪರಮ ಋತ್ವಿಜರು.
14020022a ಘ್ರೇಯೇ ಪೇಯೇ ಚ ದೃಶ್ಯೇ ಚ ಸ್ಪೃಶ್ಯೇ ಶ್ರವ್ಯೇ ತಥೈವ ಚ|
14020022c ಹವೀಂಷ್ಯಗ್ನಿಷು ಹೋತಾರಃ ಸಪ್ತಧಾ ಸಪ್ತ ಸಪ್ತಸು|
14020022e ಸಮ್ಯಕ್ಪ್ರಕ್ಷಿಪ್ಯ ವಿದ್ವಾಂಸೋ ಜನಯಂತಿ ಸ್ವಯೋನಿಷು||
ಘ್ರೇಯ, ಪೇಯ, ದೃಶ್ಯ, ಸ್ಪೃಶ್ಯ, ಶ್ರವ್ಯ ಮೊದಲಾದ ಏಳು ಸಮ್ತಿತ್ತುಗಳನ್ನು ವೈಶ್ವಾನರನ ಏಳು ಜ್ವಾಲೆಗಳಲ್ಲಿ ಏಳು ವಿದ್ವಾಂಸ ಋತ್ವಿಜರು ಹೋಮಮಾಡಿ ತಮ್ಮ ಯೋನಿಗಳಲ್ಲಿ ಶಬ್ಧಾದಿ ಏಳು ವಿಷಯಗಳನ್ನು ಸೃಷ್ಟಿಸುತ್ತಾರೆ.
14020023a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್|
14020023c ಮನೋ ಬುದ್ಧಿಶ್ಚ ಸಪ್ತೈತೇ ಯೋನಿರಿತ್ಯೇವ ಶಬ್ದಿತಾಃ||
ಪೃಥ್ವಿ, ವಾಯು, ಆಕಾಶ, ನೀರು, ಜ್ಯೋತಿ ಈ ಐದು ಮತ್ತು ಮನಸ್ಸು, ಬುದ್ಧಿಗಳೂ ಸೇರಿ ಏಳನ್ನು ಸಪ್ತಯೋನಿಗಳೆಂದು ಹೇಳುತ್ತಾರೆ.
14020024a ಹವಿರ್ಭೂತಾ ಗುಣಾಃ ಸರ್ವೇ ಪ್ರವಿಶಂತ್ಯಗ್ನಿಜಂ ಮುಖಮ್|
14020024c ಅಂತರ್ವಾಸಮುಷಿತ್ವಾ ಚ ಜಾಯಂತೇ ಸ್ವಾಸು ಯೋನಿಷು|
14020024e ತತ್ರೈವ ಚ ನಿರುಧ್ಯಂತೇ ಪ್ರಲಯೇ ಭೂತಭಾವನೇ||
ಪೃಥ್ವಿಯೇ ಮೊದಲಾದವುಗಳಲ್ಲಿರುವ ಗಂಧಾದಿ ಗುಣಗಳೇ ಹವಿಸ್ಸುಗಳು. ಅವೆಲ್ಲವೂ ವೈಶ್ವಾನರ ಅಗ್ನಿಯಲ್ಲಿ ಹುಟ್ಟಿದ ಬುದ್ಧಿಯನ್ನು ಪ್ರವೇಶಿಸುತ್ತವೆ. ಅವು ಬುದ್ಧಿಯಲ್ಲಿ ವಾಸವಾಗಿದ್ದುಕೊಂಡು ಸಮಯಾನುಸಾರವಾಗಿ ತಮ್ಮ ತಮ್ಮ ಯೋನಿಗಳಲ್ಲಿ ಜನ್ಮತಾಳುತ್ತವೆ. ಪ್ರಲಯಕಾಲದಲ್ಲಿ ಈ ಗುಣಗಳು ಬುದ್ಧಿಯಲ್ಲಿಯೇ ಬಂಧಿಸಲ್ಪಟ್ಟಿರುತ್ತವೆ.
14020025a ತತಃ ಸಂಜಾಯತೇ ಗಂಧಸ್ತತಃ ಸಂಜಾಯತೇ ರಸಃ|
14020025c ತತಃ ಸಂಜಾಯತೇ ರೂಪಂ ತತಃ ಸ್ಪರ್ಶೋಽಭಿಜಾಯತೇ||
14020026a ತತಃ ಸಂಜಾಯತೇ ಶಬ್ದಃ ಸಂಶಯಸ್ತತ್ರ ಜಾಯತೇ|
14020026c ತತಃ ಸಂಜಾಯತೇ ನಿಷ್ಠಾ ಜನ್ಮೈತತ್ ಸಪ್ತಧಾ ವಿದುಃ||
ಅನಂತರ ಗಂಧವು ಹುಟ್ಟುತ್ತದೆ. ಬಳಿಕ ರಸವು ಹುಟ್ಟುತ್ತದೆ. ನಂತರ ರೂಪವು ಹುಟ್ಟುತ್ತದೆ, ನಂತರ ಸ್ಪರ್ಶವು ಹುಟ್ಟುತ್ತದೆ. ನಂತರ ಶಬ್ಧವು ಹುಟ್ಟುತ್ತದೆ. ನಂತರ ಸಂಶಯ-ನಿರ್ಣಯಗಳ ಬುದ್ಧಿಯು ಹುಟ್ಟುತ್ತದೆ. ನಂತರ ನಿಷ್ಠೆಯು[3] ಹುಟ್ಟುತ್ತದೆ. ಹೀಗೆ ಏಳು ಪ್ರಕಾರದ ಹುಟ್ಟುಗಳಾಗುತ್ತವೆಯೆಂದು ವಿಧ್ವಾಂಸರು ತಿಳಿದಿರುತ್ತಾರೆ.
14020027a ಅನೇನೈವ ಪ್ರಕಾರೇಣ ಪ್ರಗೃಹೀತಂ ಪುರಾತನೈಃ|
14020027c ಪೂರ್ಣಾಹುತಿಭಿರಾಪೂರ್ಣಾಸ್ತೇಽಭಿಪೂರ್ಯಂತಿ ತೇಜಸಾ||
ಈ ಪ್ರಕಾರವಾಗಿಯೇ ಪುರಾತನ ಋಷಿಗಳು ಘ್ರಾಣವೇ ಮೊದಲಾದವುಗಳ ಸ್ವರೂಪವನ್ನು ಗ್ರಹಣಮಾಡಿದ್ದಾರೆ. ಜ್ಞಾತಾ-ಜ್ಞಾನ-ಜ್ಞೇಯ ಈ ಮೂರರ ಪೂರ್ಣಾಹುತಿಯಿಂದಲೇ ಸಮಸ್ತಲೋಕಗಳೂ ವ್ಯಾಪ್ತವಾಗಿವೆ. ಈ ತತ್ತ್ವದಿಂದಲೇ ಸಮಸ್ತಲೋಕಗಳೂ ಆತ್ಮಜ್ಯೋತಿಯಿಂದ ತುಂಬಿಹೋಗುತ್ತವೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಹ್ಮಗೀತಾಸು ವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಹ್ಮಗೀತಾ ಎನ್ನುವ ಇಪ್ಪತ್ತನೇ ಅಧ್ಯಾಯವು.
[1] ಸೋಮಃಸಹಾಗ್ನಿನಾ ಎಂಬುದಕ್ಕೆ ವ್ಯಾಖ್ಯಾನಕಾರರು ಸೋಮಃ ಎಂದರೆ ಇಡಾನಾಡಿ ಮತ್ತು ಅಗ್ನಿ ಎಂದರೆ ಪಿಂಗಲ ನಾಡಿ ಎಂದು ಹೇಳಿದ್ದಾರೆ. ಇವುಗಳಿಗೆ ವಾರಣಸೀ ಎಂಬ ಸಂಜ್ಞೆಯಿದೆ. ಈ ನಾಡಿಗಳು ವರಣಾಯಾಂ ಎಂದರೆ ಮೂಗಿನ ಮಧ್ಯದಲ್ಲಿ ನೆಲೆಸಿವೆ. ಭ್ರೋವೋಃ ಘ್ರಾಣಸ್ಯ ಚ ಯಃ ಸಂಧಿಃ ತಸ್ಮಿನ್ ಪ್ರತಿಷ್ಠಿತಃ ಎಂದರೆ ಹುಬ್ಬು ಮತ್ತು ಮೂಗಿನ ಸಂಧಿಯಲ್ಲಿ ಇಡಾ-ಪಿಂಗಳ ನಾಡಿಗಳಿವೆ.
[2] ಉತ್ಕರ್ಷೇಣ ಆನಯತಿ ಚೇಷ್ಟಯತಿ ಪ್ರಾಣಾನಿತಿ ಉದಾನಃ – ವಿಶೇಷವಾಗಿ ಪ್ರಾಣಗಳನ್ನು ಅವುಗಳು ಮಾಡಬೇಕಾದ ಕೆಲಸಗಳಲ್ಲಿ ತೊಡಗಿಸುತ್ತದೆ.
[3] ಮನಸ್ಸು