ಅಶ್ವಮೇಧಿಕ ಪರ್ವ
೧೯
ಕೃಷ್ಣನು ಅರ್ಜುನನಿಗೆ ಕಾಶ್ಯಪ-ಸಿದ್ಧಪುರುಷರ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೬೦).
14019001 ಬ್ರಾಹ್ಮಣ ಉವಾಚ
14019001a ಯಃ ಸ್ಯಾದೇಕಾಯನೇ ಲೀನಸ್ತೂಷ್ಣೀಂ ಕಿಂ ಚಿದಚಿಂತಯನ್|
14019001c ಪೂರ್ವಂ ಪೂರ್ವಂ ಪರಿತ್ಯಜ್ಯ ಸ ನಿರಾರಂಭಕೋ ಭವೇತ್||
ಬ್ರಾಹ್ಮಣನು ಹೇಳಿದನು: “ಯಾರು ಒಂದೊಂದಾಗಿ ಸ್ಥೂಲ-ಸೂಕ್ಷ್ಮ-ಕಾರಣಶರೀರಗಳ ಮೇಲಿನ ಅಭಿಮಾನವನ್ನು ಪರಿತ್ಯಜಿಸಿ, ಯಾವ ಪ್ರಾಪಂಚಿಕ ವಿಷಯದ ಕುರಿತೂ ಚಿಂತಿಸದೇ, ಮೌನೀಭಾವದಲ್ಲಿದ್ದುಕೊಂಡು ಎಲ್ಲವಕ್ಕೂ ಏಕಮಾತ್ರ ಆಶ್ರಯವಾದ ಪರಬ್ರಹ್ಮನಲ್ಲಿ ಮನಸ್ಸನ್ನು ಲೀನಗೊಳಿಸುತ್ತಾನೋ ಅವನು ನಿರಾರಂಭಕನಾಗುತ್ತಾನೆ.
14019002a ಸರ್ವಮಿತ್ರಃ ಸರ್ವಸಹಃ ಸಮರಕ್ತೋ ಜಿತೇಂದ್ರಿಯಃ|
14019002c ವ್ಯಪೇತಭಯಮನ್ಯುಶ್ಚ ಕಾಮಹಾ ಮುಚ್ಯತೇ ನರಃ||
ಯಾರಿಗೆ ಎಲ್ಲರೂ ಮಿತ್ರರೋ, ಯಾರು ಎಲ್ಲವನ್ನೂ ಸಹಿಸಿಕೊಳ್ಳುವನೋ, ಯಾರು ಎಲ್ಲವುಗಳಲ್ಲಿಯೂ ಸಮನಾಗಿ ಆಸಕ್ತನಾಗಿರುವನೋ, ಜಿತೇಂದ್ರಿಯನಾಗಿರುವನೋ, ಮತ್ತು ಭಯ-ಕ್ರೋಧಗಳನ್ನು ತೊರೆದಿರುವನೋ ಆ ನರನು ಕಾಮವನ್ನು ತೊರೆದು ಮುಕ್ತನಾಗುತ್ತಾನೆ.
14019003a ಆತ್ಮವತ್ಸರ್ವಭೂತೇಷು ಯಶ್ಚರೇನ್ನಿಯತಃ ಶುಚಿಃ|
14019003c ಅಮಾನೀ ನಿರಭೀಮಾನಃ ಸರ್ವತೋ ಮುಕ್ತ ಏವ ಸಃ||
ಸರ್ವಭೂತಗಳನ್ನೂ ತನ್ನಂತೆಯೇ ಭಾವಿಸಿಕೊಂಡು ನಡೆದುಕೊಳ್ಳುವ ನಿಯತನೂ ಶುಚಿಯೂ ಅಮಾನಿಯೂ ನಿರಭಿಮಾನಿಯೂ ಆದವನು ಎಲ್ಲದರಿಂದ ಮುಕ್ತನಾದಂತೆಯೇ!
14019004a ಜೀವಿತಂ ಮರಣಂ ಚೋಭೇ ಸುಖದುಃಖೇ ತಥೈವ ಚ|
14019004c ಲಾಭಾಲಾಭೇ ಪ್ರಿಯದ್ವೇಷ್ಯೇ ಯಃ ಸಮಃ ಸ ಚ ಮುಚ್ಯತೇ||
ಜೀವಿತ-ಮರಣಗಳನ್ನೂ, ಸುಖ-ದುಃಖಗಳನ್ನೂ, ಲಾಭಾಲಾಭಗಳನ್ನೂ, ಪ್ರಿಯ-ದ್ವೇಷಿಗಳನ್ನೂ ಸಮನಾಗಿ ಕಾಣುವವನೇ ಮುಕ್ತನು.
14019005a ನ ಕಸ್ಯ ಚಿತ್ ಸ್ಪೃಹಯತೇ ನಾವಜಾನಾತಿ ಕಿಂ ಚನ|
14019005c ನಿರ್ದ್ವಂದ್ವೋ ವೀತರಾಗಾತ್ಮಾ ಸರ್ವತೋ ಮುಕ್ತ ಏವ ಸಃ||
ಬೇರೆಯವರಿಗೆ ಸೇರಿದ್ದ ಏನನ್ನೂ ಬಯಸದ, ಯಾರನ್ನೂ ಅವಹೇಳನಮಾಡದ, ದ್ವಂದ್ವರಹಿತನಾದ, ವೀತರಾಗಾತ್ಮನೇ ಎಲ್ಲದರಿಂದ ಮುಕ್ತನು.
14019006a ಅನಮಿತ್ರೋಽಥ ನಿರ್ಬಂಧುರನಪತ್ಯಶ್ಚ ಯಃ ಕ್ವ ಚಿತ್|
14019006c ತ್ಯಕ್ತಧರ್ಮಾರ್ಥಕಾಮಶ್ಚ ನಿರಾಕಾಂಕ್ಷೀ ಸ ಮುಚ್ಯತೇ||
ಶತ್ರುರಹಿತನಾದ, ಬಂಧು-ಸಂತಾನಗಳಲ್ಲಿ ಮಮತೆಯಿಲ್ಲದ, ಧರ್ಮ-ಅರ್ಥ-ಕಾಮಗಳನ್ನು ತ್ಯಜಿಸಿ ನಿರಾಕಾಂಕ್ಷಿಯಾದವನು ಮುಕ್ತನು.
14019007a ನೈವ ಧರ್ಮೀ ನ ಚಾಧರ್ಮೀ ಪೂರ್ವೋಪಚಿತಹಾ ಚ ಯಃ|
14019007c ಧಾತುಕ್ಷಯಪ್ರಶಾಂತಾತ್ಮಾ ನಿರ್ದ್ವಂದ್ವಃ ಸ ವಿಮುಚ್ಯತೇ||
ಧರ್ಮದಲ್ಲಿಯಾಗಲೀ ಅಧರ್ಮದಲ್ಲಿಯಾಗಲೀ ಆಸಕ್ತಿಯಿಲ್ಲದ, ಪೂರ್ವಸಂಚಿತ ಕರ್ಮಫಲಗಳನ್ನು ಅನುಭವಿಸಿ ಕ್ಷಯಗೊಳಿಸಿಕೊಂಡ, ಪ್ರಶಂತಾತ್ಮ ನಿರ್ದ್ವಂದ್ವನೇ ಮುಕ್ತನು.
14019008a ಅಕರ್ಮಾ ಚಾವಿಕಾಂಕ್ಷಶ್ಚ ಪಶ್ಯನ್ಜಗದಶಾಶ್ವತಮ್|
14019008c ಅಸ್ವಸ್ಥಮವಶಂ ನಿತ್ಯಂ ಜನ್ಮಸಂಸಾರಮೋಹಿತಮ್||
14019009a ವೈರಾಗ್ಯಬುದ್ಧಿಃ ಸತತಂ ತಾಪದೋಷವ್ಯಪೇಕ್ಷಕಃ|
14019009c ಆತ್ಮಬಂಧವಿನಿರ್ಮೋಕ್ಷಂ ಸ ಕರೋತ್ಯಚಿರಾದಿವ||
ಯಾರು ಕರ್ಮದ ಕರ್ತೃವು ತಾನೆಂದು ಭಾವಿಸುವುದಿಲ್ಲವೋ, ಯಾರು ಆಕಾಂಕ್ಷೆಗಳನ್ನಿಟ್ಟುಕೊಂಡಿಲ್ಲವೋ, ಯಾರು ಜಗತ್ತು ಅಶಾಶ್ವತವೆಂದೂ, ಅಸ್ವಸ್ಥವೆಂದೂ, ಅವಶವಾದುದೆಂದೂ, ಜನ್ಮಸಂಸಾರಗಳಲ್ಲಿ ಮೋಹಿತಗೊಂಡಿರುವುದೆಂದೂ ಸದಾ ಕಾಣುತ್ತಿರುತ್ತಾನೋ, ಯಾರು ಸತತವೂ ವೈರಾಗ್ಯಬುದ್ಧಿಯಲ್ಲಿರುವನೋ, ಯಾರು ತನ್ನಲ್ಲಿರುವ ದೋಷಗಳನ್ನು ಕಂಡುಕೊಳ್ಳುವನೋ ಅವನು ಬಹಳ ಬೇಗ ಸಂಸಾರಬಂಧನದಿಂದ ತನ್ನನ್ನು ಬಿಡುಗಡೆಮಾಡಿಕೊಳ್ಳುತ್ತಾನೆ.
14019010a ಅಗಂಧರಸಮಸ್ಪರ್ಶಮಶಬ್ದಮಪರಿಗ್ರಹಮ್|
14019010c ಅರೂಪಮನಭಿಜ್ಞೇಯಂ ದೃಷ್ಟ್ವಾತ್ಮಾನಂ ವಿಮುಚ್ಯತೇ||
ಗಂಧ-ರಸ-ಸ್ಪರ್ಶ-ಶಬ್ಧ-ರೂಪಗಳಿಲ್ಲದ ಮತ್ತು ತಿಳಿಯಲು ಅಸಾಧ್ಯನಾದ ಆತ್ಮನನ್ನು ಕಂಡುಕೊಂಡವನು ವಿಮುಕ್ತನಾಗುತ್ತಾನೆ.
14019011a ಪಂಚಭೂತಗುಣೈರ್ಹೀನಮಮೂರ್ತಿಮದಲೇಪಕಮ್|
14019011c ಅಗುಣಂ ಗುಣಭೋಕ್ತಾರಂ ಯಃ ಪಶ್ಯತಿ ಸ ಮುಚ್ಯತೇ||
ಪಂಚಭೂತಗುಣರಹಿತ, ನಿರಾಕಾರ, ಕಾರಣರಹಿತ, ನಿರ್ಗುಣ ಪರಮಾತ್ಮನು ಮಾಯೆಯ ಸಂಬಂಧದಿಂದ ಗುಣಗಳ ಭೋಕ್ತೃವೆನ್ನುವುದನ್ನು ಕಂಡುಕೊಂಡಿರುವವನು ಮುಕ್ತನಾಗುತ್ತಾನೆ.
14019012a ವಿಹಾಯ ಸರ್ವಸಂಕಲ್ಪಾನ್ಬುದ್ಧ್ಯಾ ಶಾರೀರಮಾನಸಾನ್|
14019012c ಶನೈರ್ನಿರ್ವಾಣಮಾಪ್ನೋತಿ ನಿರಿಂಧನ ಇವಾನಲಃ||
ಬುದ್ಧಿ-ಶರೀರ-ಮನೋಜನಿತವಾದ ಸರ್ವಸಂಕಲ್ಪಗಳನ್ನೂ ತೊರೆದವನು ಇಂಧನವಿಲ್ಲದ ಅಗ್ನಿಯಂತೆ ಮೆಲ್ಲನೇ ನಿರ್ವಾಣವನ್ನು ಹೊಂದುತ್ತಾನೆ.
14019013a ವಿಮುಕ್ತಃ ಸರ್ವಸಂಸ್ಕಾರೈಸ್ತತೋ ಬ್ರಹ್ಮ ಸನಾತನಮ್|
14019013c ಪರಮಾಪ್ನೋತಿ ಸಂಶಾಂತಮಚಲಂ ದಿವ್ಯಮಕ್ಷರಮ್||
ಸರ್ವಸಂಸ್ಕಾರಗಳಿಂದಲೂ ವಿಮುಕ್ತನಾಗಿ ಅವನು ಶಾಂತ, ಅಚಲ, ದಿವ್ಯ, ಅಕ್ಷರ, ಪರಮ ಸನಾತನ ಬ್ರಹ್ಮನನ್ನು ಹೊಂದುತ್ತಾನೆ.
14019014a ಅತಃ ಪರಂ ಪ್ರವಕ್ಷ್ಯಾಮಿ ಯೋಗಶಾಸ್ತ್ರಮನುತ್ತಮಮ್|
14019014c ಯಜ್ಞಾತ್ವಾ ಸಿದ್ಧಮಾತ್ಮಾನಂ ಲೋಕೇ ಪಶ್ಯಂತಿ ಯೋಗಿನಃ||
ಈಗ ನಾನು ಅನುತ್ತಮ ಪರಮ ಯೋಗಶಾಸ್ತ್ರವನ್ನು ಹೇಳುತ್ತೇನೆ. ಇದನ್ನು ತಿಳಿದುಕೊಂಡ ಯೋಗಿಗಳು ಲೋಕದಲ್ಲಿ ಆತ್ಮಸಿದ್ಧಿಯನ್ನು ಕಾಣುತ್ತಾರೆ.
14019015a ತಸ್ಯೋಪದೇಶಂ ಪಶ್ಯಾಮಿ ಯಥಾವತ್ತನ್ನಿಬೋಧ ಮೇ|
14019015c ಯೈರ್ದ್ವಾರೈಶ್ಚಾರಯನ್ನಿತ್ಯಂ ಪಶ್ಯತ್ಯಾತ್ಮಾನಮಾತ್ಮನಿ||
ಯಾವ ದ್ವಾರಗಳಲ್ಲಿ ಸಂಚರಿಸಿ ಯೋಗಿಗಳು ತಮ್ಮಲ್ಲಿಯೇ ಆತ್ಮನನ್ನು ಕಾಣುತ್ತಾರೋ ಆ ಉಪದೇಶವನ್ನು ಹೇಳುತ್ತೇನೆ. ಅದನ್ನು ಕೇಳು.
14019016a ಇಂದ್ರಿಯಾಣಿ ತು ಸಂಹೃತ್ಯ ಮನ ಆತ್ಮನಿ ಧಾರಯೇತ್|
14019016c ತೀವ್ರಂ ತಪ್ತ್ವಾ ತಪಃ ಪೂರ್ವಂ ತತೋ ಯೋಕ್ತುಮುಪಕ್ರಮೇತ್||
ಇಂದ್ರಿಯಗಳನ್ನು ನಿಗ್ರಹಿಸಿ ಮನಸ್ಸನ್ನು ಆತ್ಮನಲ್ಲಿ ಧರಿಸಬೇಕು. ಮೊದಲು ತೀವ್ರ ತಪಸ್ಸನ್ನು ತಪಿಸಿ ನಂತರ ಈ ಯೋಗವನ್ನು ಪ್ರಾರಂಭಿಸಬೇಕು.
14019017a ತಪಸ್ವೀ ತ್ಯಕ್ತಸಂಕಲ್ಪೋ ದಂಭಾಹಂಕಾರವರ್ಜಿತಃ|
14019017c ಮನೀಷೀ ಮನಸಾ ವಿಪ್ರಃ ಪಶ್ಯತ್ಯಾತ್ಮಾನಮಾತ್ಮನಿ||
ವಿಪ್ರ! ದಂಭ-ಅಹಂಕಾರಗಳನ್ನು ತ್ಯಜಿಸಿ, ಸಂಕಲ್ಪಗಳನ್ನು ತ್ಯಜಿಸಿ ತಪಸ್ವಿ ಮನೀಷಿಯು ಮನಸ್ಸಿನ ಮೂಲಕ ತನ್ನಲ್ಲಿಯೇ ಆತ್ಮನನ್ನು ಕಾಣುತ್ತಾನೆ.
14019018a ಸ ಚೇಚ್ಚಕ್ನೋತ್ಯಯಂ ಸಾಧುರ್ಯೋಕ್ತುಮಾತ್ಮಾನಮಾತ್ಮನಿ|
14019018c ತತ ಏಕಾಂತಶೀಲಃ ಸ ಪಶ್ಯತ್ಯಾತ್ಮಾನಮಾತ್ಮನಿ||
ಏಕಾಂತಶೀಲನಾದ ಸಾಧಕನು ಮನಸ್ಸನ್ನು ಆತ್ಮನಲ್ಲಿ ಸೇರಿಸುವ ಪ್ರಯತ್ನದಲ್ಲಿ ಸಫಲಗೊಂಡರೆ ತನ್ನಲ್ಲಿಯೇ ಆತ್ಮನನ್ನು ಕಾಣುತ್ತಾನೆ.
14019019a ಸಂಯತಃ ಸತತಂ ಯುಕ್ತ ಆತ್ಮವಾನ್ವಿಜಿತೇಂದ್ರಿಯಃ|
14019019c ತಥಾಯಮಾತ್ಮನಾತ್ಮಾನಂ ಸಾಧು ಯುಕ್ತಃ ಪ್ರಪಶ್ಯತಿ||
ಸತತವೂ ಸಂಯಮದಿಂದಿರುವ ಜಿತೇಂದ್ರಿಯ ಯೋಗಯುಕ್ತ ಆತ್ಮವಂತ ಸಾಧುವು ತನ್ನಲ್ಲಿಯೇ ಆತ್ಮನನ್ನು ಕಾಣುತ್ತಾನೆ.
14019020a ಯಥಾ ಹಿ ಪುರುಷಃ ಸ್ವಪ್ನೇ ದೃಷ್ಟ್ವಾ ಪಶ್ಯತ್ಯಸಾವಿತಿ|
14019020c ತಥಾರೂಪಮಿವಾತ್ಮಾನಂ ಸಾಧು ಯುಕ್ತಃ ಪ್ರಪಶ್ಯತಿ||
ಸ್ವಪ್ನದಲ್ಲಿ ನೋಡಿದುದನ್ನು ಪುರುಷನು ಗುರುತಿಸುವಂತೆ ಯೋಗಯುಕ್ತನಾದ ಸಾಧುವು ಆತ್ಮದ ರೂಪವನ್ನು ನೋಡುತ್ತಾನೆ.
14019021a ಇಷೀಕಾಂ ವಾ ಯಥಾ ಮುಂಜಾತ್ಕಶ್ಚಿನ್ನಿರ್ಹೃತ್ಯ ದರ್ಶಯೇತ್|
14019021c ಯೋಗೀ ನಿಷ್ಕೃಷ್ಟಮಾತ್ಮಾನಂ ತಥಾ ಸಂಪಶ್ಯತೇ ತನೌ||
ಮುಂಜದ ಹುಲ್ಲಿನಿಂದ ಅದರೊಳಗಿರುವ ಇಷೀಕವನ್ನು ತೆಗೆದು ತೋರಿಸುವಂತೆ ಯೋಗಿಯು ಆತ್ಮನನ್ನು ದೇಹದಿಂದ ಪ್ರತ್ಯೇಕೀಕರಿಸಿ ನೋಡುತ್ತಾನೆ.
14019022a ಮುಂಜಂ ಶರೀರಂ ತಸ್ಯಾಹುರಿಷೀಕಾಮಾತ್ಮನಿ ಶ್ರಿತಾಮ್|
14019022c ಏತನ್ನಿದರ್ಶನಂ ಪ್ರೋಕ್ತಂ ಯೋಗವಿದ್ಭಿರನುತ್ತಮಮ್||
ಮುಂಜವನ್ನು ಶರೀರವೆಂದೂ ಅದರಲ್ಲಿರುವ ಇಷೀಕವೇ ದೇಹವನ್ನಾಶ್ರಯಿಸಿರುವ ಆತ್ಮವೆಂದೂ ಹೇಳುತ್ತಾರೆ. ಯೋಗ ವಿದ್ಯೆಯನ್ನು ತಿಳಿದವರು ಇದೇ ಉತ್ತಮ ನಿದರ್ಶನವನ್ನು ಹೇಳುತ್ತಾರೆ.
14019023a ಯದಾ ಹಿ ಯುಕ್ತಮಾತ್ಮಾನಂ ಸಮ್ಯಕ್ಪಶ್ಯತಿ ದೇಹಭೃತ್|
14019023c ತದಾಸ್ಯ ನೇಶತೇ ಕಶ್ಚಿತ್ರೈಲೋಕ್ಯಸ್ಯಾಪಿ ಯಃ ಪ್ರಭುಃ||
ಯೋಗದ ಒಳಗಣ್ಣಿನಿಂದ ಆತ್ಮನನ್ನು ಚೆನ್ನಾಗಿ ನೋಡುವ ದೇಹಧಾರಿಗೆ ತ್ರೈಲೋಕ್ಯದ ಪ್ರಭುವೂ ಕೂಡ ಈಶ್ವರನಾಗಿರುವುದಿಲ್ಲ.
14019024a ಅನ್ಯೋನ್ಯಾಶ್ಚೈವ ತನವೋ ಯಥೇಷ್ಟಂ ಪ್ರತಿಪದ್ಯತೇ|
14019024c ವಿನಿವೃತ್ಯ ಜರಾಮೃತ್ಯೂ ನ ಹೃಷ್ಯತಿ ನ ಶೋಚತಿ||
ಅಂಥವನು ಯಥೇಷ್ಟವಾಗಿ ಬೇರೆ ಬೇರೆ ಶರೀರಗಳನ್ನು ಪಡೆದುಕೊಳ್ಳುತ್ತಾನೆ. ಮುಪ್ಪು-ಸಾವುಗಳನ್ನು ದೂರೀಕರಿಸಿ ಅವನು ಹರ್ಷಿಸುವುದೂ ಇಲ್ಲ ಮತ್ತು ಶೋಕಿಸುವುದೂ ಇಲ್ಲ.
14019025a ದೇವಾನಾಮಪಿ ದೇವತ್ವಂ ಯುಕ್ತಃ ಕಾರಯತೇ ವಶೀ|
14019025c ಬ್ರಹ್ಮ ಚಾವ್ಯಯಮಾಪ್ನೋತಿ ಹಿತ್ವಾ ದೇಹಮಶಾಶ್ವತಮ್||
ಯೋಗಯುಕ್ತನು ದೇವತೆಗಳ ದೇವತ್ವವನ್ನು ಕೂಡ ವಶೀಕರಿಸುತ್ತಾನೆ. ಈ ಅಶಾಶ್ವತ ದೇಹವನ್ನು ತೊರೆದು ಅವಿನಾಶೀ ಬ್ರಹ್ಮನನ್ನು ಸೇರುತ್ತಾನೆ.
14019026a ವಿನಶ್ಯತ್ಸ್ವಪಿ ಲೋಕೇಷು ನ ಭಯಂ ತಸ್ಯ ಜಾಯತೇ|
14019026c ಕ್ಲಿಶ್ಯಮಾನೇಷು ಭೂತೇಷು ನ ಸ ಕ್ಲಿಶ್ಯತಿ ಕೇನ ಚಿತ್||
ಲೋಕವೇ ವಿನಾಶಹೊಂದಿದರೂ ಅವನಿಗೆ ಭಯವುಂಟಾಗುವುದಿಲ್ಲ. ಎಲ್ಲ ಪ್ರಾಣಿಗಳೂ ಕ್ಲೇಶಪಟ್ಟರೂ ಅವನಿಗೆ ಯಾವುದೇ ರೀತಿಯ ಕ್ಲೇಶವುಂಟಾಗುವುದಿಲ್ಲ.
14019027a ದುಃಖಶೋಕಮಯೈರ್ಘೋರೈಃ ಸಂಗಸ್ನೇಹಸಮುದ್ಭವೈಃ|
14019027c ನ ವಿಚಾಲ್ಯೇತ ಯುಕ್ತಾತ್ಮಾ ನಿಃಸ್ಪೃಹಃ ಶಾಂತಮಾನಸಃ||
ಆಸೆಗಳೆಲ್ಲವನ್ನೂ ತೊರೆದು ಶಾಂತಮನಸ್ಕನಾದ ಯುಕ್ತಾತ್ಮನು ಸಂಗ-ಸ್ನೇಹಗಳಿಂದ ಹುಟ್ಟುವ ಘೋರ ದುಃಖ-ಶೋಕಾದಿಗಳಿಂದ ವಿಚಲಿತನಾಗುವುದಿಲ್ಲ.
14019028a ನೈನಂ ಶಸ್ತ್ರಾಣಿ ವಿಧ್ಯಂತೇ ನ ಮೃತ್ಯುಶ್ಚಾಸ್ಯ ವಿದ್ಯತೇ|
14019028c ನಾತಃ ಸುಖತರಂ ಕಿಂ ಚಿಲ್ಲೋಕೇ ಕ್ವ ಚನ ವಿದ್ಯತೇ||
ಶಸ್ತ್ರಗಳು ಅವನನ್ನು ಭೇದಿಸಲಾರವು. ಅವನಿಗೆ ಮೃತ್ಯುವೆನ್ನುವುದೇ ಇಲ್ಲ. ಈ ಲೋಕದಲ್ಲಿ ಅವನಿಗಿಂತಲೂ ಸುಖಿಯಾದವನು ಬೇರೆ ಯಾರೂ ಕಾಣಲಾರರು.
14019029a ಸಮ್ಯಗ್ಯುಕ್ತ್ವಾ ಯದಾತ್ಮಾನಮಾತ್ಮನ್ಯೇವ ಪ್ರಪಶ್ಯತಿ|
14019029c ತದೈವ ನ ಸ್ಪೃಹಯತೇ ಸಾಕ್ಷಾದಪಿ ಶತಕ್ರತೋಃ||
ಆತ್ಮನಲ್ಲಿ ಲೀನನಾಗಿ ಅವನು ಆತ್ಮನನ್ನೇ ಕಾಣುತ್ತಿರುತ್ತಾನೆ. ಅಂಥವನು ಸಾಕ್ಷಾದ್ ಶತಕ್ರತುವಿನ ಪದವಿಯನ್ನೂ ಬಯಸುವುದಿಲ್ಲ.
14019030a ನಿರ್ವೇದಸ್ತು ನ ಗಂತವ್ಯೋ ಯುಂಜಾನೇನ ಕಥಂ ಚನ|
14019030c ಯೋಗಮೇಕಾಂತಶೀಲಸ್ತು ಯಥಾ ಯುಂಜೀತ ತಚ್ಚೃಣು||
ಏಕಾಂತಶೀಲನಾಗಿ ಧ್ಯಾನಮಾಡುವ ಯೋಗಿಗೆ ಯೋಗವು ಹೇಗೆ ಸಿದ್ಧಿಸುವುದು ಎನ್ನುವನ್ನು ಹೇಳುತ್ತೇನೆ. ಕೇಳು.
14019031a ದೃಷ್ಟಪೂರ್ವಾಂ ದಿಶಂ ಚಿಂತ್ಯ ಯಸ್ಮಿನ್ಸಂನಿವಸೇತ್ಪುರೇ|
14019031c ಪುರಸ್ಯಾಭ್ಯಂತರೇ ತಸ್ಯ ಮನಶ್ಚಾರ್ಯಂ ನ ಬಾಹ್ಯತಃ||
ಮೊದಲೇ ಕಂಡುಕೊಂಡಂತೆ ದೇಹದ ಯಾವ ಭಾಗದಲ್ಲಿ ಆತ್ಮನು ವಾಸಿಸಿರುವನೋ ಅದರ ಮೇಲೆಯೇ ಮನಸ್ಸನ್ನು ಏಕೀಕರಿಸಬೇಕು. ಶರೀರದ ಹೊರಭಾಗದಲ್ಲಿ ಮನಸ್ಸನ್ನಿಡಬಾರದು.
14019032a ಪುರಸ್ಯಾಭ್ಯಂತರೇ ತಿಷ್ಠನ್ಯಸ್ಮಿನ್ನಾವಸಥೇ ವಸೇತ್|
14019032c ತಸ್ಮಿನ್ನಾವಸಥೇ ಧಾರ್ಯಂ ಸಬಾಹ್ಯಾಭ್ಯಂತರಂ ಮನಃ||
ಶರೀರದಲ್ಲಿ ಆತ್ಮನು ಯಾವ ಚಕ್ರದಲ್ಲಿರುವನೋ ಆ ಚಕ್ರದಲ್ಲಿಯೇ ಹೊರಗಿನ ಮತ್ತು ಒಳಗಿನ ವಿಷಯಗಳನ್ನು ಹೊಂದಿರುವ ಮನಸ್ಸನ್ನು ಧಾರಣೆಮಾಡಿಕೊಳ್ಳಬೇಕು.
14019033a ಪ್ರಚಿಂತ್ಯಾವಸಥಂ ಕೃತ್ಸ್ನಂ ಯಸ್ಮಿನ್ಕಾಯೇಽವತಿಷ್ಠತೇ|
14019033c ತಸ್ಮಿನ್ಕಾಯೇ ಮನಶ್ಚಾರ್ಯಂ ನ ಕಥಂ ಚನ ಬಾಹ್ಯತಃ||
ಆತ್ಮನಿರುವ ಮೂಲಾಧಾರಾದಿ ಚಕ್ರಗಳಲ್ಲಿ ಮನಸ್ಸನ್ನು ಸಂಪೂರ್ಣವಾಗಿ ಅನುಸಂಧಾನ ಮಾಡಿ ಧ್ಯಾನಮಾಡುತ್ತಿರುವಾಗ ಆತ್ಮನ ದರ್ಶನವಾದ ಸಮಯದಲ್ಲಿ ಬಾಹ್ಯವಿಷಗಳ್ಯಾವುವೂ ಆ ಮನಸ್ಸಿನಲ್ಲಿ ಇರುವುದಿಲ್ಲ. ಮನಸ್ಸು ಕನ್ನಡಿಯಂತೆ ಸ್ವಚ್ಛವಾದಾಗಲೇ ಆತ್ಮದರ್ಶನವಾಗುವುದು.
14019034a ಸಂನಿಯಮ್ಯೇಂದ್ರಿಯಗ್ರಾಮಂ ನಿರ್ಘೋಷೇ ನಿರ್ಜನೇ ವನೇ|
14019034c ಕಾಯಮಭ್ಯಂತರಂ ಕೃತ್ಸ್ನಮೇಕಾಗ್ರಃ ಪರಿಚಿಂತಯೇತ್||
ಇಂದ್ರಿಯ ಸಮುದಾಯಗಳನ್ನು ನಿಯಂತ್ರಿಸಿಕೊಂಡು ನಿಃಶಬ್ಧವಾದ ನಿರ್ಜನ ವನದಲ್ಲಿ ದೇಹದ ಒಳಗಿರುವ ಆತ್ಮನನ್ನು ಏಕಾಗ್ರಚಿತ್ತನಾಗಿ ಧ್ಯಾನಿಸಬೇಕು.
14019035a ದಂತಾಂಸ್ತಾಲು ಚ ಜಿಹ್ವಾಂ ಚ ಗಲಂ ಗ್ರೀವಾಂ ತಥೈವ ಚ|
14019035c ಹೃದಯಂ ಚಿಂತಯೇಚ್ಚಾಪಿ ತಥಾ ಹೃದಯಬಂಧನಮ್||
ಹಲ್ಲುಗಳು, ದವಡೆಗಳು, ನಾಲಿಗೆ, ಗಂಟಲು, ಕೊರಳು, ಹೃದಯ ಮತ್ತು ನಾಡಿಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನಿಸಬೇಕು.”
14019036a ಇತ್ಯುಕ್ತಃ ಸ ಮಯಾ ಶಿಷ್ಯೋ ಮೇಧಾವೀ ಮಧುಸೂದನ|
14019036c ಪಪ್ರಚ್ಚ ಪುನರೇವೇಮಂ ಮೋಕ್ಷಧರ್ಮಂ ಸುದುರ್ವಚಮ್||
ಮಧುಸೂದನ! ಸಿದ್ಧಪುರುಷನು ಹೀಗೆ ಹೇಳಲು, ನಿರೂಪಿಸಲು ಅತ್ಯಂತ ಕಠಿನವಾದ ಮೋಕ್ಷಧರ್ಮದ ಕುರಿತು ನನ್ನ ಆ ಮೇಧಾವೀ ಶಿಷ್ಯನು ಪುನಃ ಪ್ರಶ್ನಿಸಿದನು.
14019037a ಭುಕ್ತಂ ಭುಕ್ತಂ ಕಥಮಿದಮನ್ನಂ ಕೋಷ್ಠೇ ವಿಪಚ್ಯತೇ|
14019037c ಕಥಂ ರಸತ್ವಂ ವ್ರಜತಿ ಶೋಣಿತಂ ಜಾಯತೇ ಕಥಮ್|
14019037e ತಥಾ ಮಾಂಸಂ ಚ ಮೇದಶ್ಚ ಸ್ನಾಯ್ವಸ್ಥೀನಿ ಚ ಪೋಷತಿ||
“ಪ್ರತಿದಿನವೂ ತಿನ್ನುವ ಆಹಾರವು ಹೊಟ್ಟೆಯಲ್ಲಿ ಹೇಗೆ ಪಚನವಾಗುತ್ತದೆ? ಅದು ಹೇಗೆ ರಸರೂಪವನ್ನು ಹೊಂದುತ್ತದೆ? ಅದು ಹೇಗೆ ರಕ್ತವಾಗಿ ಮಾಂಸ-ಮೇದ, ಸ್ನಾಯು, ಮೂಳೆಗಳನ್ನು ಪೋಷಿಸುತ್ತದೆ?
14019038a ಕಥಮೇತಾನಿ ಸರ್ವಾಣಿ ಶರೀರಾಣಿ ಶರೀರಿಣಾಮ್|
14019038c ವರ್ಧಂತೇ ವರ್ಧಮಾನಸ್ಯ ವರ್ಧತೇ ಚ ಕಥಂ ಬಲಮ್|
14019038e ನಿರೋಜಸಾಂ ನಿಷ್ಕ್ರಮಣಂ ಮಲಾನಾಂ ಚ ಪೃಥಕ್ಪೃಥಕ್||
ಶರೀರಿಯ ಈ ಎಲ್ಲ ಶರೀರಭಾಗಗಳೂ ಹೇಗೆ ಬೆಳೆಯುತ್ತವೆ? ಬೆಳೆಯುತ್ತಿರುವ ಶರೀರದ ಬಲವೂ ಹೇಗೆ ವೃದ್ಧಿಸುತ್ತದೆ? ಮಲ-ಮೂತ್ರಾದಿಗಳು ಪ್ರತ್ಯೇಕವಾಗಿ ಶರೀರದಿಂದ ಹೇಗೆ ಹೊರಹೋಗುತ್ತವೆ?
14019039a ಕುತೋ ವಾಯಂ ಪ್ರಶ್ವಸಿತಿ ಉಚ್ಚ್ವಸಿತ್ಯಪಿ ವಾ ಪುನಃ|
14019039c ಕಂ ಚ ದೇಶಮಧಿಷ್ಠಾಯ ತಿಷ್ಠತ್ಯಾತ್ಮಾಯಮಾತ್ಮನಿ||
ಮನುಷ್ಯನು ಏಕೆ ವಾಯುವನ್ನು ಒಳಗೆ ಎಳೆದುಕೊಳ್ಳುತ್ತಾನೆ ಮತ್ತು ಪುನಃ ಹೊರಹಾಕುತ್ತಾನೆ? ಈ ಆತ್ಮನು ಮನುಷ್ಯದೇಹದ ಯಾವ ಸ್ಥಾನದಲ್ಲಿ ಆಶ್ರಯಿಸಿರುತ್ತಾನೆ?
14019040a ಜೀವಃ ಕಾಯಂ ವಹತಿ ಚೇಚ್ಚೇಷ್ಟಯಾನಃ ಕಲೇವರಮ್|
14019040c ಕಿಂವರ್ಣಂ ಕೀದೃಶಂ ಚೈವ ನಿವೇಶಯತಿ ವೈ ಮನಃ|
14019040e ಯಾಥಾತಥ್ಯೇನ ಭಗವನ್ವಕ್ತುಮರ್ಹಸಿ ಮೇಽನಘ||
ಚೇಷ್ಟಾಶೀಲನಾದ ಜೀವಾತ್ಮನು ಈ ಶರೀರವನ್ನು ಹೇಗೆ ಧಾರಣೆಮಾಡುತ್ತಾನೆ? ಈ ಜೀವನ ಬಣ್ಣವ್ಯಾವುದು? ಅವನು ಯಾವ ರೂಪದಲ್ಲಿ ಮನಸ್ಸನ್ನು ಪ್ರವೇಶಿಸುತ್ತಾನೆ? ಭಗವನ್! ಅನಘ! ಇದನ್ನು ಯಥಾತಥ್ಯವಾಗಿ ನನಗೆ ಹೇಳಬೇಕು.”
14019041a ಇತಿ ಸಂಪರಿಪೃಷ್ಟೋಽಹಂ ತೇನ ವಿಪ್ರೇಣ ಮಾಧವ|
14019041c ಪ್ರತ್ಯಬ್ರುವಂ ಮಹಾಬಾಹೋ ಯಥಾಶ್ರುತಮರಿಂದಮ||
ಮಾಧವ! ಅರಿಂದಮ! ಮಹಾಬಾಹೋ! ಆ ವಿಪ್ರನು ಹೀಗೆ ನನ್ನನ್ನು ಕೇಳಲು, ನಾನು ಅರಿತುಕೊಂಡಿದ್ದುದನ್ನು ಅವನಿಗೆ ಹೇಳಿದೆನು[1]:
14019042a ಯಥಾ ಸ್ವಕೋಷ್ಠೇ ಪ್ರಕ್ಷಿಪ್ಯ ಕೋಷ್ಠಂ ಭಾಂಡಮನಾ ಭವೇತ್|
14019042c ತಥಾ ಸ್ವಕಾಯೇ ಪ್ರಕ್ಷಿಪ್ಯ ಮನೋ ದ್ವಾರೈರನಿಶ್ಚಲೈಃ|
14019042e ಆತ್ಮಾನಂ ತತ್ರ ಮಾರ್ಗೇತ ಪ್ರಮಾದಂ ಪರಿವರ್ಜಯೇತ್||
“ತನ್ನ ಕೊಠಡಿಯಲ್ಲಿ ಧನವನ್ನು ಬಚ್ಚಿಟ್ಟು ಅದರ ಕುರಿತೇ ಚಿಂತಿಸುವವನಂತೆ ತನ್ನ ಕಾಯದಲ್ಲಿ ನಿಶ್ಚಲವಾದ ಮನಸ್ಸನ್ನು ಇರಿಸಿಕೊಂಡು ಅದರ ಮೂಲಕ ಆತ್ಮನನ್ನು ಹುಡುಕಬೇಕು. ಆ ಮಾರ್ಗದಲ್ಲಿ ಪ್ರಮಾದಗಳನ್ನು ವರ್ಜಿಸಬೇಕು.
14019043a ಏವಂ ಸತತಮುದ್ಯುಕ್ತಃ ಪ್ರೀತಾತ್ಮಾ ನಚಿರಾದಿವ|
14019043c ಆಸಾದಯತಿ ತದ್ಬ್ರಹ್ಮ ಯದ್ದೃಷ್ಟ್ವಾ ಸ್ಯಾತ್ಪ್ರಧಾನವಿತ್||
ಹೀಗೆ ಸತತವಾಗಿ ಧ್ಯಾನಪರನಾಗಿರುವವನು ಬಹುಬೇಗ ಪ್ರೀತಾತ್ಮನಾಗಿ ಆ ಬ್ರಹ್ಮನನ್ನು ಹೊಂದುತ್ತಾನೆ. ಆಗ ಅವನಿಗೆ ಪ್ರಧಾನಸ್ವರೂಪವು ತಿಳಿಯುತ್ತದೆ.
14019044a ನ ತ್ವಸೌ ಚಕ್ಷುಷಾ ಗ್ರಾಹ್ಯೋ ನ ಚ ಸರ್ವೈರಪೀಂದ್ರಿಯೈಃ|
14019044c ಮನಸೈವ ಪ್ರದೀಪೇನ ಮಹಾನಾತ್ಮನಿ ದೃಶ್ಯತೇ||
ಕಣ್ಣು ಮತ್ತು ಸರ್ವ ಇಂದ್ರಿಯಗಳಿಗೂ ಗ್ರಾಹ್ಯವಲ್ಲದ ಆ ಮಹಾ ಆತ್ಮನು ಮನಸ್ಸೆಂಬ ದೀಪದಿಂದಲೇ ಕಾಣಿಸುತ್ತಾನೆ.
14019045a ಸರ್ವತಃಪಾಣಿಪಾದಂ ತಂ ಸರ್ವತೋಕ್ಷಿಶಿರೋಮುಖಮ್|
14019045c ಜೀವೋ ನಿಷ್ಕ್ರಾಂತಮಾತ್ಮಾನಂ ಶರೀರಾತ್ಸಂಪ್ರಪಶ್ಯತಿ||
ಜೀವನು ಶರೀರದ ಹೊರಬರುವ ಎಲ್ಲಕಡೆ ಕೈ-ಕಾಲುಗಳುಳ್ಳ, ಎಲ್ಲಕಡೆ ಕಣ್ಣು-ಶಿರ-ಮುಖಗಳುಳ್ಳ ಆತ್ಮನನ್ನು ಕಾಣುತ್ತಾನೆ.
14019046a ಸ ತದುತ್ಸೃಜ್ಯ ದೇಹಂ ಸ್ವಂ ಧಾರಯನ್ಬ್ರಹ್ಮ ಕೇವಲಮ್|
14019046c ಆತ್ಮಾನಮಾಲೋಕಯತಿ ಮನಸಾ ಪ್ರಹಸನ್ನಿವ||
ಅವನು ತನ್ನ ದೇಹವನ್ನು ತೊರೆದು ಕೇವಲ ಬ್ರಹ್ಮನನ್ನು ಧಾರಣೆಮಾಡಿ ನಸುನಗುತ್ತಿರುವ ಮನಸ್ಸಿನಿಂದ ಆತ್ಮನನ್ನು ನೋಡುತ್ತಾನೆ.
14019047a ಇದಂ ಸರ್ವರಹಸ್ಯಂ ತೇ ಮಯೋಕ್ತಂ ದ್ವಿಜಸತ್ತಮ|
14019047c ಆಪೃಚ್ಚೇ ಸಾಧಯಿಷ್ಯಾಮಿ ಗಚ್ಚ ಶಿಷ್ಯ ಯಥಾಸುಖಮ್||
ದ್ವಿಜಸತ್ತಮ! ಇದೋ ಸರ್ವರಹಸ್ಯಗಳನ್ನೂ ನಿನಗೆ ಹೇಳಿದ್ದೇನೆ. ಶಿಷ್ಯ! ಸಾಧನೆಗೆ ಅನುಮತಿಕೊಡು. ನೀನು ಯಥಾಸುಖವಾಗಿ ಹೋಗು!”
14019048a ಇತ್ಯುಕ್ತಃ ಸ ತದಾ ಕೃಷ್ಣ ಮಯಾ ಶಿಷ್ಯೋ ಮಹಾತಪಾಃ|
14019048c ಅಗಚ್ಚತ ಯಥಾಕಾಮಂ ಬ್ರಾಹ್ಮಣಶ್ಚಿನ್ನಸಂಶಯಃ||
ಕೃಷ್ಣ! ನಾನು ಹೀಗೆ ಹೇಳಲು ನನ್ನ ಮಹಾತಪಸ್ವೀ ಬ್ರಾಹ್ಮಣ ಶಿಷ್ಯನು ಸಂಶಯಗಳನ್ನು ನಿವಾರಿಸಿಕೊಂಡು ಬೇಕಾದಲ್ಲಿಗೆ ಹೊರಟುಹೋದನು.””
14019049 ವಾಸುದೇವ ಉವಾಚ
14019049a ಇತ್ಯುಕ್ತ್ವಾ ಸ ತದಾ ವಾಕ್ಯಂ ಮಾಂ ಪಾರ್ಥ ದ್ವಿಜಪುಂಗವಃ|
14019049c ಮೋಕ್ಷಧರ್ಮಾಶ್ರಿತಃ ಸಮ್ಯಕ್ತತ್ರೈವಾಂತರಧೀಯತ||
ವಾಸುದೇವನು ಹೇಳಿದನು: “ಪಾರ್ಥ! ಮೋಕ್ಷಧರ್ಮವನ್ನೇ ಸಂಪೂರ್ಣವಾಗಿ ಆಶ್ರಯಿಸಿದ ಆ ದ್ವಿಜಪುಂಗವನು ನನಗೆ ಈ ಮಾತುಗಳನ್ನಾಡಿ ಅಲ್ಲಿಯೇ ಅಂತರ್ಧಾನನಾದನು.
14019050a ಕಚ್ಚಿದೇತತ್ತ್ವಯಾ ಪಾರ್ಥ ಶ್ರುತಮೇಕಾಗ್ರಚೇತಸಾ|
14019050c ತದಾಪಿ ಹಿ ರಥಸ್ಥಸ್ತ್ವಂ ಶ್ರುತವಾನೇತದೇವ ಹಿ||
ಪಾರ್ಥ! ಈಗಲಾದರೂ ನಾನು ಹೇಳಿದುದನ್ನು ಏಕಾಗ್ರಚಿತ್ತನಾಗಿ ಕೇಳಿದೆಯಾ? ಅಗಲೂ ಕೂಡ ರಥಸ್ಥನಾಗಿದ್ದ ನಿನಗೆ ಇದರ ಕುರಿತೇ ಹೇಳಿದ್ದೆ.
14019051a ನೈತತ್ಪಾರ್ಥ ಸುವಿಜ್ಞೇಯಂ ವ್ಯಾಮಿಶ್ರೇಣೇತಿ ಮೇ ಮತಿಃ|
14019051c ನರೇಣಾಕೃತಸಂಜ್ಞೇನ ವಿದಗ್ಧೇನಾಕೃತಾತ್ಮನಾ||
ಪಾರ್ಥ! ಬುದ್ಧಿಯಲ್ಲಿ ವ್ಯಗ್ರತೆಯಿದ್ದರೆ ಇದು ಚೆನ್ನಾಗಿ ಅರ್ಥವಾಗಲಾರದೆಂದು ನನ್ನ ಅಭಿಪ್ರಾಯ. ಆತ್ಮವಿದ್ಯಾಸಂಪ್ರದಾಯವನ್ನು ಚೆನ್ನಾಗಿ ತಿಳಿದುಕೊಂಡಿರುವ ವಿಶುದ್ಧ ಅಂತಃಕರಣವಿರುವವನಿಗೆ ಇದು ಚೆನ್ನಾಗಿ ಅರ್ಥವಾಗಬಹುದು.
14019052a ಸುರಹಸ್ಯಮಿದಂ ಪ್ರೋಕ್ತಂ ದೇವಾನಾಂ ಭರತರ್ಷಭ|
14019052c ಕಚ್ಚಿನ್ನೇದಂ ಶ್ರುತಂ ಪಾರ್ಥ ಮರ್ತ್ಯೇನಾನ್ಯೇನ ಕೇನ ಚಿತ್||
ಭರತರ್ಷಭ! ಪಾರ್ಥ! ಈ ರಹಸ್ಯವನ್ನು ದೇವತೆಗಳಿಗೆ ಹೇಳಿದ್ದೇನೆ. ಮನುಷ್ಯರಲ್ಲಿ ಇದನ್ನು ಬೇರೆ ಯಾರೂ ಎಂದೂ ಕೇಳಿಲ್ಲ.
14019053a ನ ಹ್ಯೇತಚ್ಚ್ರೋತುಮರ್ಹೋಽನ್ಯೋ ಮನುಷ್ಯಸ್ತ್ವಾಮೃತೇಽನಘ|
14019053c ನೈತದದ್ಯ ಸುವಿಜ್ಞೇಯಂ ವ್ಯಾಮಿಶ್ರೇಣಾಂತರಾತ್ಮನಾ||
ಅನಘ! ನಿನ್ನನ್ನು ಬಿಟ್ಟು ಬೇರೆ ಯಾವ ಮನುಷ್ಯನೂ ಇದನ್ನು ತಿಳಿದುಕೊಳ್ಳಲು ಅರ್ಹನಲ್ಲ. ಸಂದೇಹಗ್ರಸ್ತ ಅಂತರಾತ್ಮವುಳ್ಳವರು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾರರು.
14019054a ಕ್ರಿಯಾವದ್ಭಿರ್ಹಿ ಕೌಂತೇಯ ದೇವಲೋಕಃ ಸಮಾವೃತಃ|
14019054c ನ ಚೈತದಿಷ್ಟಂ ದೇವಾನಾಂ ಮರ್ತ್ಯೈ ರೂಪನಿವರ್ತನಮ್||
ಕೌಂತೇಯ! ಕ್ರಿಯಾವಂತರಿಂದ ದೇವಲೋಕವು ತುಂಬಿಹೋಗಿದೆ. ಮನುಷ್ಯರು ಅಮರರಾಗುವುದು ದೇವತೆಗಳಿಗೆ ಇಷ್ಟವಿಲ್ಲ.
14019055a ಪರಾ ಹಿ ಸಾ ಗತಿಃ ಪಾರ್ಥ ಯತ್ತದ್ಬ್ರಹ್ಮ ಸನಾತನಮ್|
14019055c ಯತ್ರಾಮೃತತ್ವಂ ಪ್ರಾಪ್ನೋತಿ ತ್ಯಕ್ತ್ವಾ ದುಃಖಂ ಸದಾ ಸುಖೀ||
ಪಾರ್ಥ! ಜೀವನಿಗೆ ಸನಾತನ ಬ್ರಹ್ಮವೇ ಪರಮ ಗತಿಯು. ಅಲ್ಲಿ ಅದು ಅಮೃತತ್ವವನ್ನು ಪಡೆದು ದುಃಖವನ್ನು ತೊರೆದು ಸದಾ ಸುಖಿಯಾಗಿರುತ್ತದೆ.
14019056a ಏವಂ ಹಿ ಧರ್ಮಮಾಸ್ಥಾಯ ಯೇಽಪಿ ಸ್ಯುಃ ಪಾಪಯೋನಯಃ|
14019056c ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಽಪಿ ಯಾಂತಿ ಪರಾಂ ಗತಿಮ್||
ಇದೇ ಧರ್ಮವನ್ನು ಆಶ್ರಯಿಸಿ ಸ್ತ್ರೀಯರು, ವೈಶ್ಯರು, ಶೂದ್ರರು ಮತ್ತು ಪಾಪಯೋನಿಗಳಲ್ಲಿ ಹುಟ್ಟಿದವರೆಲ್ಲರೂ ಪರಮ ಗತಿಯನ್ನು ಪಡೆಯುತ್ತಾರೆ.
14019057a ಕಿಂ ಪುನರ್ಬ್ರಾಹ್ಮಣಾಃ ಪಾರ್ಥ ಕ್ಷತ್ರಿಯಾ ವಾ ಬಹುಶ್ರುತಾಃ|
14019057c ಸ್ವಧರ್ಮರತಯೋ ನಿತ್ಯಂ ಬ್ರಹ್ಮಲೋಕಪರಾಯಣಾಃ||
ಹೀಗಿರುವಾಗ ಸ್ವಧರ್ಮನಿರತರೂ, ಬಹುಶ್ರುತರೂ ಮತ್ತು ನಿತ್ಯವೂ ಬ್ರಹ್ಮಲೋಕಪರಾಯಣರೂ ಆದ ಬ್ರಾಹ್ಮಣ-ಕ್ಷತ್ರಿಯರ ವಿಷಯದಲ್ಲಿ ಏನು ಹೇಳುವುದು?
14019058a ಹೇತುಮಚ್ಚೈತದುದ್ದಿಷ್ಟಮುಪಾಯಾಶ್ಚಾಸ್ಯ ಸಾಧನೇ|
14019058c ಸಿದ್ಧೇಃ ಫಲಂ ಚ ಮೋಕ್ಷಶ್ಚ ದುಃಖಸ್ಯ ಚ ವಿನಿರ್ಣಯಃ|
14019058e ಅತಃ ಪರಂ ಸುಖಂ ತ್ವನ್ಯತ್ಕಿಂ ನು ಸ್ಯಾದ್ಭರತರ್ಷಭ||
ಸಾಧನೆಯ ಉದ್ದೇಶವನ್ನೂ ಉಪಾಯಗಳನ್ನೂ ನಾನು ನಿನಗೆ ಹೇಳಿದ್ದೇನೆ. ಸಿದ್ಧಿ, ಫಲ, ಮೋಕ್ಷ, ಮತ್ತು ದುಃಖ ಇವುಗಳ ಸ್ವರೂಪಗಳನ್ನೂ ನಿರ್ಣಯಿಸಿ ಹೇಳಿದ್ದೇನೆ. ಭರತರ್ಷಭ! ಇದಕ್ಕಿಂತಲೂ ಪರಮ ಸುಖವು ಬೇರೊಂದಿಲ್ಲ.
14019059a ಶ್ರುತವಾನ್ಶ್ರದ್ದಧಾನಶ್ಚ ಪರಾಕ್ರಾಂತಶ್ಚ ಪಾಂಡವ|
14019059c ಯಃ ಪರಿತ್ಯಜತೇ ಮರ್ತ್ಯೋ ಲೋಕತಂತ್ರಮಸಾರವತ್|
14019059e ಏತೈರುಪಾಯೈಃ ಸ ಕ್ಷಿಪ್ರಂ ಪರಾಂ ಗತಿಮವಾಪ್ನುಯಾತ್||
ಪಾಂಡವ! ಬುದ್ಧಿವಂತನೂ ಶ್ರದ್ಧಾಳುವೂ ಮತ್ತು ಪರಾಕ್ರಮಿಯೂ ಆದವನು ಲೌಕಿಕ ಸುಖವು ಸಾರಹೀನವೆಂದು ತಿಳಿದು ಎಲ್ಲವನ್ನೂ ಪರಿತ್ಯಜಿಸಿ ನಾನು ಹೇಳಿರುವ ಉಪಾಯಗಳಿಂದ ಸಾಧನೆಯನ್ನು ಮಾಡಿದರೆ ಅವನು ಬಹಳ ಬೇಗ ಪರಮ ಗತಿಯನ್ನು ಹೊಂದುತ್ತಾನೆ.
14019060a ಏತಾವದೇವ ವಕ್ತವ್ಯಂ ನಾತೋ ಭೂಯೋಽಸ್ತಿ ಕಿಂ ಚನ|
14019060c ಷಣ್ಮಾಸಾನ್ನಿತ್ಯಯುಕ್ತಸ್ಯ ಯೋಗಃ ಪಾರ್ಥ ಪ್ರವರ್ತತೇ||
ಬ್ರಹ್ಮಸಾಕ್ಷಾತ್ಕಾರದ ವಿಷಯದಲ್ಲಿ ಇಷ್ಟು ಮಾತ್ರ ಹೇಳಬಹುದು. ಇದಕ್ಕಿಂತಲೂ ಹೆಚ್ಚು ಹೇಳಬೇಕಾದುದು ಏನೂ ಇಲ್ಲ. ಪಾರ್ಥ! ಆರು ತಿಂಗಳವರೆಗೆ ಸತತವಾಗಿ ಈ ಯೋಗಾಭ್ಯಾಸಮಾಡುತ್ತಿದ್ದರೆ ಅವನಿಗೆ ಯೋಗದ ಸಿದ್ಧಿಯಾಗುತ್ತದೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಏಕೋನವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.
[1] ದ್ವಾರಕೆಗೆ ಬಂದು ಕೃಷ್ಣನನ್ನು ಸಂದರ್ಶಿಸಿದ್ದ ಬ್ರಾಹ್ಮಣನೇ ಮೋಕ್ಷಧರ್ಮದ ಕುರಿತು ಕಾಶ್ಯಪನಿಗೆ ಬೋಧಿಸಿದ ಸಿದ್ಧಪುರುಷನೆಂದು ಈಗ ತಿಳಿಯುತ್ತದೆ.