ಅಶ್ವಮೇಧಿಕ ಪರ್ವ
೬
ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಮುಂದುವರೆಸಿದುದು (೧-೩೩).
14006001 ವ್ಯಾಸ ಉವಾಚ
14006001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
14006001c ಬೃಹಸ್ಪತೇಶ್ಚ ಸಂವಾದಂ ಮರುತ್ತಸ್ಯ ಚ ಭಾರತ||
ವ್ಯಾಸನು ಹೇಳಿದನು: “ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಬೃಹಸ್ಪತಿ ಮತ್ತು ಮರುತ್ತರ ಸಂವಾದವನ್ನು ಉದಾಹರಿಸುತ್ತಾರೆ.
14006002a ದೇವರಾಜಸ್ಯ ಸಮಯಂ ಕೃತಮಾಂಗಿರಸೇನ ಹ|
14006002c ಶ್ರುತ್ವಾ ಮರುತ್ತೋ ನೃಪತಿರ್ಮನ್ಯುಮಾಹಾರಯತ್ತದಾ||
ದೇವರಾಜನು ಆಂಗಿರಸ ಬೃಹಸ್ಪತಿಯೊಡನೆ ಮಾಡಿದ ಒಪ್ಪಂದವನ್ನು ಕೇಳಿ ನೃಪತಿ ಮರುತ್ತನು ಅತ್ಯಂತ ಕುಪಿತನಾದನು.
14006003a ಸಂಕಲ್ಪ್ಯ ಮನಸಾ ಯಜ್ಞಂ ಕರಂಧಮಸುತಾತ್ಮಜಃ|
14006003c ಬೃಹಸ್ಪತಿಮುಪಾಗಮ್ಯ ವಾಗ್ಮೀ ವಚನಮಬ್ರವೀತ್||
ಕರಂಧಮನ ಮೊಮ್ಮಗ ವಾಗ್ಮಿ ಮರುತ್ತನು ಮನಸ್ಸಿನಲ್ಲಿಯೇ ಯಜ್ಞದ ಸಂಕಲ್ಪವನ್ನು ಮಾಡಿ ಬೃಹಸ್ಪತಿಯ ಬಳಿಹೋಗಿ ಈ ಮಾತನ್ನಾಡಿದನು:
14006004a ಭಗವನ್ಯನ್ಮಯಾ ಪೂರ್ವಮಭಿಗಮ್ಯ ತಪೋಧನ|
14006004c ಕೃತೋಽಭಿಸಂಧಿರ್ಯಜ್ಞಾಯ ಭವತೋ ವಚನಾದ್ಗುರೋ||
“ಭಗವನ್! ತಪೋಧನ! ಗುರೋ! ಹಿಂದೊಮ್ಮೆ ನಾನು ನಿನ್ನ ಬಳಿಬಂದಾಗ ನಿನ್ನ ಮಾತಿನಂತೆಯೇ ಯಜ್ಞದ ಕುರಿತು ಒಪ್ಪಂದಮಾಡಿಕೊಂಡಿದ್ದೆವು.
14006005a ತಮಹಂ ಯಷ್ಟುಮಿಚ್ಚಾಮಿ ಸಂಭಾರಾಃ ಸಂಭೃತಾಶ್ಚ ಮೇ|
14006005c ಯಾಜ್ಯೋಽಸ್ಮಿ ಭವತಃ ಸಾಧೋ ತತ್ಪ್ರಾಪ್ನುಹಿ ವಿಧತ್ಸ್ವ ಚ||
ಈಗ ನಾನು ಆ ಯಜ್ಞವನ್ನು ಮಾಡಲು ಬಯಸುತ್ತೇನೆ. ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸೇರಿಸಿಕೊಂಡಿದ್ದೇನೆ. ಹಿಂದಿನಿಂದಲೂ ನಾನು ನಿನ್ನಿಂದ ಯಜ್ಞಗಳನ್ನು ಮಾಡಿಸಿಕೊಂಡು ಬಂದಿದ್ದೇನೆ. ಅದುದರಿಂದ ಬಂದು ಅದನ್ನು ವಿಧಿವತ್ತಾಗಿ ನಡೆಸಿಕೊಡು.”
14006006 ಬೃಹಸ್ಪತಿರುವಾಚ
14006006a ನ ಕಾಮಯೇ ಯಾಜಯಿತುಂ ತ್ವಾಮಹಂ ಪೃಥಿವೀಪತೇ|
14006006c ವೃತೋಽಸ್ಮಿ ದೇವರಾಜೇನ ಪ್ರತಿಜ್ಞಾತಂ ಚ ತಸ್ಯ ಮೇ||
ಬೃಹಸ್ಪತಿಯು ಹೇಳಿದನು: “ಪೃಥಿವೀಪತೇ! ನಿನಗೆ ಯಜ್ಞವನ್ನು ಮಾಡಿಸಲು ನಾನು ಬಯಸುತ್ತಿಲ್ಲ. ದೇವರಾಜನು ನನ್ನನ್ನು ಪುರೋಹಿತನನ್ನಾಗಿ ಮಾಡಿಕೊಂಡಿದ್ದಾನೆ. ಬೇರೆಯವರ ಪುರೋಹಿತನಾಗುವುದಿಲ್ಲವೆಂದು ನಾನು ಅವನಿಗೆ ಪ್ರತಿಜ್ಞೆಮಾಡಿದ್ದೇನೆ.”
14006007 ಮರುತ್ತ ಉವಾಚ
14006007a ಪಿತ್ರ್ಯಮಸ್ಮಿ ತವ ಕ್ಷೇತ್ರಂ ಬಹು ಮನ್ಯೇ ಚ ತೇ ಭೃಶಮ್|
14006007c ನ ಚಾಸ್ಮ್ಯಯಾಜ್ಯತಾಂ ಪ್ರಾಪ್ತೋ ಭಜಮಾನಂ ಭಜಸ್ವ ಮಾಮ್||
ಮರುತ್ತನು ಹೇಳಿದನು: “ಪಿತೃ-ಪಿತಾಮಹರ ಕಾಲದಿಂದಲೂ ನಾವು ನಿನ್ನನ್ನು ತುಂಬಾ ಮನ್ನಿಸಿಕೊಂಡು ಬಂದಿದ್ದೇವೆ. ನಿನ್ನನ್ನೇ ಭಜಿಸುವ ನನಗೆ ಯಜ್ಞವನ್ನು ಮಾಡಿಸಿಕೊಟ್ಟು ನನ್ನನ್ನು ಪಾಲಿಸಬೇಕು.”
14006008 ಬೃಹಸ್ಪತಿರುವಾಚ
14006008a ಅಮರ್ತ್ಯಂ ಯಾಜಯಿತ್ವಾಹಂ ಯಾಜಯಿಷ್ಯೇ ನ ಮಾನುಷಮ್|
14006008c ಮರುತ್ತ ಗಚ್ಚ ವಾ ಮಾ ವಾ ನಿವೃತ್ತೋಽಸ್ಮ್ಯದ್ಯ ಯಾಜನಾತ್||
ಬೃಹಸ್ಪತಿಯು ಹೇಳಿದನು: “ಅಮರರಿಗೆ ಯಜ್ಞಮಾಡಿಸಿಕೊಡುವ ನಾನು ಮನುಷ್ಯರಿಗೆ ಯಜ್ಞಮಾಡಿಸಿ ಕೊಡುವುದಿಲ್ಲ. ಮರುತ್ತ! ಹೋಗು ಅಥವಾ ಇಲ್ಲಿಯೇ ಇರು. ಆದರೆ ನಾನು ಮಾತ್ರ ನಿನ್ನ ಯಜ್ಞವನ್ನು ಮಾಡಿಸಿಕೊಡುವುದಿಲ್ಲ.
14006009a ನ ತ್ವಾಂ ಯಾಜಯಿತಾಸ್ಮ್ಯದ್ಯ ವೃಣು ತ್ವಂ ಯಮಿಹೇಚ್ಚಸಿ|
14006009c ಉಪಾಧ್ಯಾಯಂ ಮಹಾಬಾಹೋ ಯಸ್ತೇ ಯಜ್ಞಂ ಕರಿಷ್ಯತಿ||
ಮಹಾಬಾಹೋ! ನಾನು ಇಂದು ನಿನ್ನ ಯಜ್ಞವನ್ನು ಮಾಡಿಸಿಕೊಡುವುದಿಲ್ಲ. ಆದುದರಿಂದ ನಿನಗೆ ಯಜ್ಞವನ್ನು ಮಾಡಿಸಿಕೊಡುವ ಯಾರನ್ನು ನೀನು ಉಪಾಧ್ಯಾಯನಾಗಿ ಬಯಸುತ್ತೀಯೋ ಅವನನ್ನು ಆರಿಸಿಕೋ!””
14006010 ವ್ಯಾಸ ಉವಾಚ
14006010a ಏವಮುಕ್ತಸ್ತು ನೃಪತಿರ್ಮರುತ್ತೋ ವ್ರೀಡಿತೋಽಭವತ್|
14006010c ಪ್ರತ್ಯಾಗಚ್ಚಚ್ಚ ಸಂವಿಗ್ನೋ ದದರ್ಶ ಪಥಿ ನಾರದಮ್||
ವ್ಯಾಸನು ಹೇಳಿದನು: “ಅವನು ಹೀಗೆ ಹೇಳಲು ನೃಪತಿ ಮರುತ್ತನಿಗೆ ನಾಚಿಕೆಯಾಯಿತು. ಸಂವಿಗ್ನನಾಗಿ ಅವನು ಹಿಂದಿರುಗಿ ಬರುತ್ತಿರುವಾಗ ಮಾರ್ಗದಲ್ಲಿ ನಾರದನನ್ನು ಕಂಡನು.
14006011a ದೇವರ್ಷಿಣಾ ಸಮಾಗಮ್ಯ ನಾರದೇನ ಸ ಪಾರ್ಥಿವಃ|
14006011c ವಿಧಿವತ್ಪ್ರಾಂಜಲಿಸ್ತಸ್ಥಾವಥೈನಂ ನಾರದೋಽಬ್ರವೀತ್||
ದೇವರ್ಷಿ ನಾರದನನ್ನು ಭೇಟಿಯಾಗಿ ಆ ಪಾರ್ಥಿವನು ವಿಧಿವತ್ತಾಗಿ ಕೈಮುಗಿದು ನಿಂತುಕೊಳ್ಳಲು ನಾರದನು ಅವನಿಗೆ ಹೇಳಿದನು:
14006012a ರಾಜರ್ಷೇ ನಾತಿಹೃಷ್ಟೋಽಸಿ ಕಚ್ಚಿತ್ಕ್ಷೇಮಂ ತವಾನಘ|
14006012c ಕ್ವ ಗತೋಽಸಿ ಕುತೋ ವೇದಮಪ್ರೀತಿಸ್ಥಾನಮಾಗತಮ್||
“ರಾಜರ್ಷೇ! ಅನಘ! ಅತಿಯಾಗಿ ಸಂತೋಷದಿಂದಿರುವಂತೆ ನೀನು ಕಾಣುತ್ತಿಲ್ಲ! ಎಲ್ಲವೂ ಕ್ಷೇಮ ತಾನೇ? ಎಲ್ಲಿಗೆ ಹೋಗಿದ್ದೆ? ಮತ್ತು ನಿನಗೆ ಯಾವುದರಿಂದ ಈ ವೇದನೆಯುಂಟಾಗಿದೆ?
14006013a ಶ್ರೋತವ್ಯಂ ಚೇನ್ಮಯಾ ರಾಜನ್ಬ್ರೂಹಿ ಮೇ ಪಾರ್ಥಿವರ್ಷಭ|
14006013c ವ್ಯಪನೇಷ್ಯಾಮಿ ತೇ ಮನ್ಯುಂ ಸರ್ವಯತ್ನೈರ್ನರಾಧಿಪ||
ರಾಜನ್! ಪಾರ್ಥಿವರ್ಷಭ! ನರಾಧಿಪ! ನನಗೆ ಅದನ್ನು ಹೇಳು. ಸರ್ವಯತ್ನದಿಂದಲೂ ನಿನಗಾಗಿರುವ ದುಃಖವನ್ನು ಹೋಗಲಾಡಿಸುತ್ತೇನೆ.”
14006014a ಏವಮುಕ್ತೋ ಮರುತ್ತಸ್ತು ನಾರದೇನ ಮಹರ್ಷಿಣಾ|
14006014c ವಿಪ್ರಲಂಭಮುಪಾಧ್ಯಾಯಾತ್ಸರ್ವಮೇವ ನ್ಯವೇದಯತ್||
ಮಹರ್ಷಿ ನಾರದನು ಹೀಗೆ ಹೇಳಲು ಮರುತ್ತನು ತನ್ನ ಉಪಾಧ್ಯಾಯ ಬೃಹಸ್ಪತಿಯು ಮಾಡಿದ ವಂಚನೆಯಲ್ಲವನ್ನೂ ಅವನಿಗೆ ವರದಿ ಮಾಡಿದನು.
14006015a ಗತೋಽಸ್ಮ್ಯಂಗಿರಸಃ ಪುತ್ರಂ ದೇವಾಚಾರ್ಯಂ ಬೃಹಸ್ಪತಿಮ್|
14006015c ಯಜ್ಞಾರ್ಥಮೃತ್ವಿಜಂ ದ್ರಷ್ಟುಂ ಸ ಚ ಮಾಂ ನಾಭ್ಯನಂದತ||
“ನಾನು ಅಂಗಿರಸನ ಪುತ್ರ ದೇವಾಚಾರ್ಯ ಬೃಹಸ್ಪತಿಯ ಬಳಿ ಯಜ್ಞದ ಋತ್ವಿಜನಾಗೆಂದು ಕೇಳಲು ಹೋಗಿದ್ದೆ. ಅವನು ನನ್ನ ಪ್ರಾರ್ಥನೆಯನ್ನು ಮನ್ನಿಸಲಿಲ್ಲ.
14006016a ಪ್ರತ್ಯಾಖ್ಯಾತಶ್ಚ ತೇನಾಹಂ ಜೀವಿತುಂ ನಾದ್ಯ ಕಾಮಯೇ|
14006016c ಪರಿತ್ಯಕ್ತಶ್ಚ ಗುರುಣಾ ದೂಷಿತಶ್ಚಾಸ್ಮಿ ನಾರದ||
ಮರಣಧರ್ಮವನ್ನನುಸರಿಸುವ ನನ್ನ ಪುರೋಹಿತನಾಗಲು ಅವನು ಬಯಸುವುದಿಲ್ಲವೆಂದು ಹೇಳಿದನು. ನಾರದ! ಗುರುವಿನಿಂದ ತಿರಸ್ಕರಿಸಲ್ಪಟ್ಟ ನಾನು ದೂಷಿತನಾಗಿದ್ದೇನೆ.”
14006017a ಏವಮುಕ್ತಸ್ತು ರಾಜ್ಞಾ ಸ ನಾರದಃ ಪ್ರತ್ಯುವಾಚ ಹ|
14006017c ಆವಿಕ್ಷಿತಂ ಮಹಾರಾಜ ವಾಚಾ ಸಂಜೀವಯನ್ನಿವ||
ರಾಜನು ಹೀಗೆ ಹೇಳಲು ನಾರದನು ಅವಿಕ್ಷಿತನ ಮಗ ಆ ರಾಜನನ್ನು ಪುನರ್ಜೀವಿತಗೊಳಿಸಿದನೋ ಎನ್ನುವಂತೆ ಹೀಗೆ ಉತ್ತರಿಸಿದನು:
14006018a ರಾಜನ್ನಂಗಿರಸಃ ಪುತ್ರಃ ಸಂವರ್ತೋ ನಾಮ ಧಾರ್ಮಿಕಃ|
14006018c ಚಂಕ್ರಮೀತಿ ದಿಶಃ ಸರ್ವಾ ದಿಗ್ವಾಸಾ ಮೋಹಯನ್ಪ್ರಜಾಃ||
“ಅಂಗಿರಸನ ಮಗ ಸಂವರ್ತ ಎಂಬ ಹೆಸರಿನ ಧಾರ್ಮಿಕನು ದಿಗಂಬರನಾಗಿ ಜನರನ್ನು ಭ್ರಾಂತಿಗೊಳಿಸುತ್ತಾ ಎಲ್ಲ ದಿಕ್ಕುಗಳಲ್ಲಿಯೂ ತಿರುಗುತ್ತಿದ್ದಾನೆ.
14006019a ತಂ ಗಚ್ಚ ಯದಿ ಯಾಜ್ಯಂ ತ್ವಾಂ ನ ವಾಂಚತಿ ಬೃಹಸ್ಪತಿಃ|
14006019c ಪ್ರಸನ್ನಸ್ತ್ವಾಂ ಮಹಾರಾಜ ಸಂವರ್ತೋ ಯಾಜಯಿಷ್ಯತಿ||
ಬೃಹಸ್ಪತಿಯು ನಿನಗೆ ಯಜ್ಞವನ್ನು ಮಾಡಲು ಬಯಸದೇ ಇದ್ದರೆ ಮಹಾರಾಜ! ನೀನು ಅವನ ಬಳಿಗೆ ಹೋಗು. ಸಂವರ್ತನು ಪ್ರಸನ್ನನಾದರೆ ಅವನೇ ನಿನ್ನ ಯಜ್ಞವನ್ನು ಮಾಡಿಸಿಕೊಡುತ್ತಾನೆ.”
14006020 ಮರುತ್ತ ಉವಾಚ
14006020a ಸಂಜೀವಿತೋಽಹಂ ಭವತಾ ವಾಕ್ಯೇನಾನೇನ ನಾರದ|
14006020c ಪಶ್ಯೇಯಂ ಕ್ವ ನು ಸಂವರ್ತಂ ಶಂಸ ಮೇ ವದತಾಂ ವರ||
ಮರುತ್ತನು ಹೇಳಿದನು: “ನಾರದ! ನಿನ್ನ ಮಾತಿನಿಂದ ನನಗೆ ಪುನಃ ಜೀವಬಂದಂತಾಗಿದೆ. ಮಾತನಾಡುವವರಲ್ಲಿ ಶ್ರೇಷ್ಠನೇ! ಈ ಸಂವರ್ತನನ್ನು ಎಲ್ಲಿ ಕಾಣಬಲ್ಲೆ ಎನ್ನುವುದನ್ನು ಹೇಳು.
14006021a ಕಥಂ ಚ ತಸ್ಮೈ ವರ್ತೇಯಂ ಕಥಂ ಮಾಂ ನ ಪರಿತ್ಯಜೇತ್|
14006021c ಪ್ರತ್ಯಾಖ್ಯಾತಶ್ಚ ತೇನಾಪಿ ನಾಹಂ ಜೀವಿತುಮುತ್ಸಹೇ||
ಅವನೊಡನೆ ನಾನು ಹೇಗೆ ನಡೆದುಕೊಳ್ಳಬೇಕು? ಹೇಗಿದ್ದರೆ ಅವನು ನನ್ನನ್ನು ತಿರಸ್ಕರಿಸುವುದಿಲ್ಲ? ಅವನಿಂದ ನಾನು ತಿರಸ್ಕೃತನಾದರೆ ಮುಂದೆ ಜೀವಿಸಲು ಬಯಸುವುದಿಲ್ಲ.”
14006022 ನಾರದ ಉವಾಚ
14006022a ಉನ್ಮತ್ತವೇಷಂ ಬಿಭ್ರತ್ಸ ಚಂಕ್ರಮೀತಿ ಯಥಾಸುಖಮ್|
14006022c ವಾರಾಣಸೀಂ ತು ನಗರೀಮಭೀಕ್ಷ್ಣಮುಪಸೇವತೇ||
ನಾರದನು ಹೇಳಿದನು: “ಅವನು ಹುಚ್ಚನ ವೇಷವನ್ನು ಧರಿಸಿ ವಾರಣಾಸೀ ನಗರದಲ್ಲಿ ಶಿವನನ್ನು ದರ್ಶಿಸಲು ಬೇಕಾದಂತೆ ತಿರುಗಾಡುತ್ತಿದ್ದಾನೆ.
14006023a ತಸ್ಯಾ ದ್ವಾರಂ ಸಮಾಸಾದ್ಯ ನ್ಯಸೇಥಾಃ ಕುಣಪಂ ಕ್ವ ಚಿತ್|
14006023c ತಂ ದೃಷ್ಟ್ವಾ ಯೋ ನಿವರ್ತೇತ ಸ ಸಂವರ್ತೋ ಮಹೀಪತೇ||
ಮಹೀಪತೇ! ಆ ನಗರದ ದ್ವಾರಕ್ಕೆ ಹೋಗಿ ಅಲ್ಲಿ ಯಾವುದಾದರೂ ಹೆಣವನ್ನು ಇಟ್ಟು, ಹೆಣವನ್ನು ನೋಡಿ ಹಿಂದಿರುಗುವವನೇ ಸಂವರ್ತನೆಂದು ತಿಳಿ.
14006024a ತಂ ಪೃಷ್ಠತೋಽನುಗಚ್ಚೇಥಾ ಯತ್ರ ಗಚ್ಚೇತ್ಸ ವೀರ್ಯವಾನ್|
14006024c ತಮೇಕಾಂತೇ ಸಮಾಸಾದ್ಯ ಪ್ರಾಂಜಲಿಃ ಶರಣಂ ವ್ರಜೇಃ||
ಮುಂದೆ ಹೋಗುತ್ತಿರುವ ಆ ವೀರ್ಯವಂತನನ್ನೇ ಅನುಸರಿಸಿ ಹೋಗಬೇಕು. ಏಕಾಂತದಲ್ಲಿ ಅವನ ಬಳಿಸಾರಿ ಕೈಮುಗಿದು ಶರಣುಹೋಗಬೇಕು.
14006025a ಪೃಚ್ಚೇತ್ತ್ವಾಂ ತ್ವಾಂ ಯದಿ ಕೇನಾಹಂ ತವಾಖ್ಯಾತ ಇತಿ ಸ್ಮ ಹ|
14006025c ಬ್ರೂಯಾಸ್ತ್ವಂ ನಾರದೇನೇತಿ ಸಂತಪ್ತ ಇವ ಶತ್ರುಹನ್||
ಶತ್ರುಸಂಹಾರಕ! ನನ್ನ ಕುರಿತು ನಿನಗೆ ಯಾರು ಹೇಳಿದರೆಂದು ಅವನು ನಿನ್ನನ್ನು ಕೇಳಿದರೆ ನಾರದನು ಹೇಳಿದನೆಂದು ಅವನಿಗೆ ಹೇಳು.
14006026a ಸ ಚೇತ್ತ್ವಾಮನುಯುಂಜೀತ ಮಮಾಭಿಗಮನೇಪ್ಸಯಾ|
14006026c ಶಂಸೇಥಾ ವಹ್ನಿಮಾರೂಢಂ ಮಾಮಪಿ ತ್ವಮಶಂಕಯಾ||
ನನ್ನ ಸಮೀಪಕ್ಕೆ ಬರುವ ಇಚ್ಛೆಯಿಂದ ನಾರದನು ಎಲ್ಲಿದ್ದಾನೆಂದು ಕೇಳಿದರೆ ನಾರದನು ಬೆಂಕಿಯಲ್ಲಿ ಸೇರಿಹೋದನೆಂದು ನಿಃಶಂಕೆಯಿಂದ ಹೇಳು.””
14006027 ವ್ಯಾಸ ಉವಾಚ
14006027a ಸ ತಥೇತಿ ಪ್ರತಿಶ್ರುತ್ಯ ಪೂಜಯಿತ್ವಾ ಚ ನಾರದಮ್|
14006027c ಅಭ್ಯನುಜ್ಞಾಯ ರಾಜರ್ಷಿರ್ಯಯೌ ವಾರಾಣಸೀಂ ಪುರೀಮ್||
ವ್ಯಾಸನು ಹೇಳಿದನು: “ಹಾಗೆಯೇ ಆಗಲೆಂದು ಹೇಳಿ ನಾರದನನ್ನು ಪೂಜಿಸಿ ಅವನ ಅನುಜ್ಞೆಯನ್ನು ಪಡೆದು ರಾಜರ್ಷಿಯು ವಾರಣಸೀ ಪುರಿಗೆ ಹೋದನು.
14006028a ತತ್ರ ಗತ್ವಾ ಯಥೋಕ್ತಂ ಸ ಪುರ್ಯಾ ದ್ವಾರೇ ಮಹಾಯಶಾಃ|
14006028c ಕುಣಪಂ ಸ್ಥಾಪಯಾಮಾಸ ನಾರದಸ್ಯ ವಚಃ ಸ್ಮರನ್||
ಅಲ್ಲಿ ಹೋಗಿ ನಾರದನ ಮಾತನ್ನು ಸ್ಮರಿಸಿಕೊಳ್ಳುತ್ತಾ ಅವನು ಹೇಳಿದಂತೆ ಪುರದ ಮಹಾದ್ವಾರದಲ್ಲಿ ಆ ಮಹಾಯಶಸ್ವಿ ಮರುತ್ತನು ಒಂದು ಹೆಣವನ್ನು ಇಟ್ಟನು.
14006029a ಯೌಗಪದ್ಯೇನ ವಿಪ್ರಶ್ಚ ಸ ಪುರೀದ್ವಾರಮಾವಿಶತ್|
14006029c ತತಃ ಸ ಕುಣಪಂ ದೃಷ್ಟ್ವಾ ಸಹಸಾ ಸ ನ್ಯವರ್ತತ||
ಅದೇ ಸಮಯಕ್ಕೆ ಸರಿಯಾಗಿ ವಿಪ್ರನೋರ್ವನು ಪುರದ ದ್ವಾರವನ್ನು ಪ್ರವೇಶಿಸಿದನು. ಅವನು ಹೆಣವನ್ನು ನೋಡಿ ಕೂಡಲೇ ಹಿಂದಿರುಗಿದನು.
14006030a ಸ ತಂ ನಿವೃತ್ತಮಾಲಕ್ಷ್ಯ ಪ್ರಾಂಜಲಿಃ ಪೃಷ್ಠತೋಽನ್ವಗಾತ್|
14006030c ಆವಿಕ್ಷಿತೋ ಮಹೀಪಾಲಃ ಸಂವರ್ತಮುಪಶಿಕ್ಷಿತುಮ್||
ಅವನು ಹಿಂದಿರುಗಿದುದನ್ನು ನೋಡಿ ಮಹೀಪಾಲ ಆವಿಕ್ಷಿತನು ಸಂವರ್ತನನ್ನು ಪುರೋಹಿತನನ್ನಾಗಿಸಲು ಕೈಮುಗಿದುಕೊಂಡು ಅವನ ಹಿಂದೆಯೇ ಅನುಸರಿಸಿ ಹೋದನು.
14006031a ಸ ಏನಂ ವಿಜನೇ ದೃಷ್ಟ್ವಾ ಪಾಂಸುಭಿಃ ಕರ್ದಮೇನ ಚ|
14006031c ಶ್ಲೇಷ್ಮಣಾ ಚಾಪಿ ರಾಜಾನಂ ಷ್ಠೀವನೈಶ್ಚ ಸಮಾಕಿರತ್||
ಯಾರೂ ಇಲ್ಲದಿರುವಲ್ಲಿ ಅವನನ್ನು ನೋಡಿ ಸಂವರ್ತನು ರಾಜನನ್ನು ಕೆಸರಿನಿಂದ, ಕಫದಿಂದ, ಉಗುಳಿನಿಂದ ಮತ್ತು ಧೂಳಿನಿಂದ ಮುಚ್ಚಿಬಿಟ್ಟನು.
14006032a ಸ ತಥಾ ಬಾಧ್ಯಮಾನೋಽಪಿ ಸಂವರ್ತೇನ ಮಹೀಪತಿಃ|
14006032c ಅನ್ವಗಾದೇವ ತಮೃಷಿಂ ಪ್ರಾಂಜಲಿಃ ಸಂಪ್ರಸಾದಯನ್||
ಸಂವರ್ತನಿಂದ ಹಾಗೆ ಬಾಧೆಗೊಳಗಾದರೂ ಮಹೀಪತಿಯು ಆ ಋಷಿಯನ್ನು ಕೈಮುಗಿದು ಹಿಂಬಾಲಿಸುತ್ತಾ ಹೋಗಿ ಪ್ರಸನ್ನಗೊಳಿಸಿದನು.
14006033a ತತೋ ನಿವೃತ್ಯ ಸಂವರ್ತಃ ಪರಿಶ್ರಾಂತ ಉಪಾವಿಶತ್|
14006033c ಶೀತಲಚ್ಚಾಯಮಾಸಾದ್ಯ ನ್ಯಗ್ರೋಧಂ ಬಹುಶಾಖಿನಮ್||
ಆಗ ಆಯಾಸಗೊಂಡಿದ್ದ ಸಂವರ್ತನು ಹಿಂದಿರುಗಿ ಬಂದು ತಂಪಾದ ನೆರಳಿದ್ದ ವಿಶಾಲ ರೆಂಬೆಗಳುಳ್ಳ ಆಲದ ಮರದ ಕೆಳಗೆ ಕುಳಿತುಕೊಂಡನು.
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಷಷ್ಟೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಆರನೇ ಅಧ್ಯಾಯವು.