ಸ್ತ್ರೀ ಪರ್ವ
೧೦
ಕೃಪ, ಕೃತವರ್ಮ, ಅಶ್ವತ್ಥಾಮರು ಧೃತರಾಷ್ಟ್ರನನ್ನು ದಾರಿಯಲ್ಲಿಯೇ ಭೇಟಿ ಮಾಡಿ ರಣರಂಗದಿಂದ ಪಲಾಯನ ಮಾಡಿದುದು (೧-೨೩).
11010001 ವೈಶಂಪಾಯನ ಉವಾಚ
11010001a ಕ್ರೋಶಮಾತ್ರಂ ತತೋ ಗತ್ವಾ ದದೃಶುಸ್ತಾನ್ಮಹಾರಥಾನ್|
11010001c ಶಾರದ್ವತಂ ಕೃಪಂ ದ್ರೌಣಿಂ ಕೃತವರ್ಮಾಣಮೇವ ಚ||
ವೈಶಂಪಾಯನನು ಹೇಳಿದನು: “ಕ್ರೋಶಮಾತ್ರ ದೂರ ಹೋಗಿ ಅಲ್ಲಿ ಅವನು ಆ ಮಹಾರಥರನ್ನು – ಶಾರದ್ವತ ಕೃಪ, ದ್ರೌಣಿ ಮತ್ತು ಕೃತವರ್ಮರನ್ನು – ಕಂಡನು.
11010002a ತೇ ತು ದೃಷ್ಟ್ವೈವ ರಾಜಾನಂ ಪ್ರಜ್ಞಾಚಕ್ಷುಷಮೀಶ್ವರಮ್|
11010002c ಅಶ್ರುಕಂಠಾ ವಿನಿಃಶ್ವಸ್ಯ ರುದಂತಮಿದಮಬ್ರುವನ್||
ಪ್ರಜ್ಞಾಚಕ್ಷು ಒಡೆಯ ರಾಜನನ್ನು ನೋಡಿದೊಡನೆಯೇ ಅವರು ನಿಟ್ಟುಸಿರು ಬಿಡುತ್ತಾ, ಅಳುತ್ತಾ ಗದ್ಗದ ಕಂಠದಿಂದ ಇಂತೆಂದರು:
11010003a ಪುತ್ರಸ್ತವ ಮಹಾರಾಜ ಕೃತ್ವಾ ಕರ್ಮ ಸುದುಷ್ಕರಮ್|
11010003c ಗತಃ ಸಾನುಚರೋ ರಾಜನ್ ಶಕ್ರಲೋಕಂ ಮಹೀಪತಿಃ||
“ಮಹಾರಾಜ! ರಾಜನ್! ನಿನ್ನ ಮಗ ಮಹೀಪತಿಯು ಸುದುಷ್ಕರ ಕರ್ಮವನ್ನೆಸಗಿ ಅನುಚರರೊಂದಿಗೆ ಶಕ್ರಲೋಕಕ್ಕೆ ಹೋದನು.
11010004a ದುರ್ಯೋಧನಬಲಾನ್ಮುಕ್ತಾ ವಯಮೇವ ತ್ರಯೋ ರಥಾಃ|
11010004c ಸರ್ವಮನ್ಯತ್ಪರಿಕ್ಷೀಣಂ ಸೈನ್ಯಂ ತೇ ಭರತರ್ಷಭ||
ಭರತರ್ಷಭ! ದುರ್ಯೋಧನನ ಸೇನೆಯಲ್ಲಿ ನಾವು ಮೂವರು ರಥರು ಮಾತ್ರ ಉಳಿದುಕೊಂಡಿದ್ದೇವೆ. ನಿನ್ನ ಸೇನೆಯಲ್ಲಿ ಅನ್ಯರೆಲ್ಲರೂ ನಾಶವಾಗಿದ್ದಾರೆ.”
11010005a ಇತ್ಯೇವಮುಕ್ತ್ವಾ ರಾಜಾನಂ ಕೃಪಃ ಶಾರದ್ವತಸ್ತದಾ|
11010005c ಗಾಂಧಾರೀಂ ಪುತ್ರಶೋಕಾರ್ತಾಮಿದಂ ವಚನಮಬ್ರವೀತ್||
ಹೀಗೆ ಹೇಳಿ ಕೃಪ ಶಾರದ್ವತನು ಪುತ್ರಶೋಕಾರ್ತರಾದ ರಾಜ ಮತ್ತು ಗಾಂಧಾರಿಯರಿಗೆ ಈ ಮಾತನ್ನಾಡಿದನು:
11010006a ಅಭೀತಾ ಯುಧ್ಯಮಾನಾಸ್ತೇ ಘ್ನಂತಃ ಶತ್ರುಗಣಾನ್ಬಹೂನ್|
11010006c ವೀರಕರ್ಮಾಣಿ ಕುರ್ವಾಣಾಃ ಪುತ್ರಾಸ್ತೇ ನಿಧನಂ ಗತಾಃ||
ಅಭೀತರಾಗಿ ಯುದ್ಧ ಮಾಡುತ್ತಿದ್ದ ಅವರು ಶತ್ರುಗಣಗಳಿಂದ ಹತರಾದರು. ಅನೇಕ ವೀರಕರ್ಮಗಳನ್ನು ಮಾಡಿದ ನಿನ್ನ ಪುತ್ರರು ನಿಧನ ಹೊಂದಿದರು.
11010007a ಧ್ರುವಂ ಸಂಪ್ರಾಪ್ಯ ಲೋಕಾಂಸ್ತೇ ನಿರ್ಮಲಾನ್ ಶಸ್ತ್ರನಿರ್ಜಿತಾನ್|
11010007c ಭಾಸ್ವರಂ ದೇಹಮಾಸ್ಥಾಯ ವಿಹರಂತ್ಯಮರಾ ಇವ||
ನಿಶ್ಚಯವಾಗಿಯೂ ಅವರು ನಿರ್ಮಲ ಶಸ್ತ್ರಗಳಿಂದ ನಿಧನಹೊಂದಿ ಉತ್ತಮ ಲೋಕಗಳನ್ನು ಪಡೆದು ಹೊಳೆಯುವ ದೇಹಗಳನ್ನು ಧರಿಸಿ ಅಮರರಂತೆ ಅಲ್ಲಿ ವಿಹರಿಸುತ್ತಿದ್ದಾರೆ.
11010008a ನ ಹಿ ಕಶ್ಚಿದ್ಧಿ ಶೂರಾಣಾಂ ಯುಧ್ಯಮಾನಃ ಪರಾಙ್ಮುಖಃ|
11010008c ಶಸ್ತ್ರೇಣ ನಿಧನಂ ಪ್ರಾಪ್ತೋ ನ ಚ ಕಶ್ಚಿತ್ಕೃತಾಂಜಲಿಃ||
ಆ ಶೂರರಲ್ಲಿ ಯಾರೂ ಯುದ್ಧಮಾಡುತ್ತಿರುವಾಗ ಪರಾಙ್ಮುಖರಾಗಲಿಲ್ಲ. ಶಸ್ತ್ರಗಳಿಂದ ಸಾವನ್ನು ಪಡೆದ ಅವರಲ್ಲಿ ಯಾರೂ ಶತ್ರುಗಳ ಮುಂದೆ ಕೈಜೋಡಿಸಿ ನಿಂತಿರಲಿಲ್ಲ.
11010009a ಏತಾಂ ತಾಂ ಕ್ಷತ್ರಿಯಸ್ಯಾಹುಃ ಪುರಾಣಾಂ ಪರಮಾಂ ಗತಿಮ್|
11010009c ಶಸ್ತ್ರೇಣ ನಿಧನಂ ಸಂಖ್ಯೇ ತಾನ್ನ ಶೋಚಿತುಮರ್ಹಸಿ||
ಈ ರೀತಿ ಯುದ್ಧದಲ್ಲಿ ಶಸ್ತ್ರಗಳಿಂದ ನಿಧನಹೊಂದಿದ ಕ್ಷತ್ರಿಯರು ಪರಮ ಗತಿಯನ್ನು ಹೊಂದುತ್ತಾರೆಂದು ಪುರಾಣಗಳು ಹೇಳುತ್ತವೆ. ಆದುದರಿಂದ ಅದರ ಕುರಿತು ಶೋಕಿಸಬಾರದು.
11010010a ನ ಚಾಪಿ ಶತ್ರವಸ್ತೇಷಾಮ್ರುಧ್ಯಂತೇ ರಾಜ್ಞಿ ಪಾಂಡವಾಃ|
11010010c ಶೃಣು ಯತ್ಕೃತಮಸ್ಮಾಭಿರಶ್ವತ್ಥಾಮಪುರೋಗಮೈಃ||
ಅವರ ಶತ್ರುವಾದ ಪಾಂಡವರು ಮತ್ತು ಅವರ ರಾಣಿಯೂ ರೋದಿಸುತ್ತಿದ್ದಾರೆ. ಅಶ್ವತ್ಥಾಮನ ನಾಯಕತ್ವದಲ್ಲಿ ನಾವೇನು ಮಾಡಿದೆವೆನ್ನುವುದನ್ನು ಕೇಳು.
11010011a ಅಧರ್ಮೇಣ ಹತಂ ಶ್ರುತ್ವಾ ಭೀಮಸೇನೇನ ತೇ ಸುತಮ್|
11010011c ಸುಪ್ತಂ ಶಿಬಿರಮಾವಿಶ್ಯ ಪಾಂಡೂನಾಂ ಕದನಂ ಕೃತಮ್||
ನಿನ್ನ ಮಗನು ಭೀಮಸೇನನಿಂದ ಅಧರ್ಮರೀತಿಯಿಂದ ಹತನಾದನೆಂದು ಕೇಳಿ ನಾವು ಮಲಗಿದ್ದ ಪಾಂಡವರ ಶಿಬಿರವನ್ನು ಪ್ರವೇಶಿಸಿ ಕದನವಾಡಿದೆವು.
11010012a ಪಾಂಚಾಲಾ ನಿಹತಾಃ ಸರ್ವೇ ಧೃಷ್ಟದ್ಯುಮ್ನಪುರೋಗಮಾಃ|
11010012c ದ್ರುಪದಸ್ಯಾತ್ಮಜಾಶ್ಚೈವ ದ್ರೌಪದೇಯಾಶ್ಚ ಪಾತಿತಾಃ||
ಧೃಷ್ಟದ್ಯುಮ್ನನನ್ನು ಮೊದಲ್ಗೊಂಡು ಪಾಂಚಾಲರೆಲ್ಲರೂ ಹತರಾದರು. ದ್ರುಪದನ ಮಕ್ಕಳೂ ದ್ರೌಪದೇಯರೂ ಕೆಳಗುರುಳಿದರು.
11010013a ತಥಾ ವಿಶಸನಂ ಕೃತ್ವಾ ಪುತ್ರಶತ್ರುಗಣಸ್ಯ ತೇ|
11010013c ಪ್ರಾದ್ರವಾಮ ರಣೇ ಸ್ಥಾತುಂ ನ ಹಿ ಶಕ್ಯಾಮಹೇ ತ್ರಯಃ||
ಹಾಗೆ ನಿನ್ನ ಪುತ್ರನ ಶತ್ರುಗಣವನ್ನು ನಾಶಮಾಡಿ ನಾವು ಓಡಿ ಬಂದಿದ್ದೇವೆ. ನಾವು ಮೂವರು ರಣದಲ್ಲಿ ಅವರನ್ನು ಎದುರಿಸಿ ನಿಲ್ಲಲಾರೆವು.
11010014a ತೇ ಹಿ ಶೂರಾ ಮಹೇಷ್ವಾಸಾಃ ಕ್ಷಿಪ್ರಮೇಷ್ಯಂತಿ ಪಾಂಡವಾಃ|
11010014c ಅಮರ್ಷವಶಮಾಪನ್ನಾ ವೈರಂ ಪ್ರತಿಜಿಹೀರ್ಷವಃ||
ಕ್ರೋಧವಶರಾದ ಆ ಶೂರ ಮಹೇಷ್ವಾಸ ಪಾಂಡವರು, ವೈರಕ್ಕೆ ಪ್ರತೀಕಾರವನ್ನು ಮಾಡಲು ಬಯಸಿ ವೇಗದಿಂದ ಬರುತ್ತಿದ್ದಾರೆ.
11010015a ನಿಹತಾನಾತ್ಮಜಾನ್ ಶ್ರುತ್ವಾ ಪ್ರಮತ್ತಾನ್ಪುರುಷರ್ಷಭಾಃ|
11010015c ನಿನೀಷಂತಃ ಪದಂ ಶೂರಾಃ ಕ್ಷಿಪ್ರಮೇವ ಯಶಸ್ವಿನಿ||
ಮಕ್ಕಳು ಹತರಾದರೆಂದು ಕೇಳಿ ಪ್ರಮತ್ತರಾದ ಆ ಶೂರ ಪುರುಷರ್ಷಭರು ನಮ್ಮ ದಾರಿಯನ್ನೇ ಹಿಡಿದು ಬೇಗ ಬಂದುಬಿಡುತ್ತಾರೆ.
11010016a ಪಾಂಡೂನಾಂ ಕಿಲ್ಬಿಷಂ ಕೃತ್ವಾ ಸಂಸ್ಥಾತುಂ ನೋತ್ಸಹಾಮಹೇ|
11010016c ಅನುಜಾನೀಹಿ ನೋ ರಾಜ್ಞಿ ಮಾ ಚ ಶೋಕೇ ಮನಃ ಕೃಥಾಃ||
ಪಾಂಡವರಿಗೆ ಕೆಟ್ಟದ್ದನ್ನು ಮಾಡಿ ಇಲ್ಲಿ ನಿಂತುಕೊಳ್ಳಲು ಇಚ್ಛಿಸುವುದಿಲ್ಲ. ನಮಗೆ ಅನುಮತಿಯನ್ನು ನೀಡು. ರಾಣಿ! ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ!
11010017a ರಾಜಂಸ್ತ್ವಮನುಜಾನೀಹಿ ಧೈರ್ಯಮಾತಿಷ್ಠ ಚೋತ್ತಮಮ್|
11010017c ನಿಷ್ಠಾಂತಂ ಪಶ್ಯ ಚಾಪಿ ತ್ವಂ ಕ್ಷತ್ರಧರ್ಮಂ ಚ ಕೇವಲಮ್||
ರಾಜನ್! ನೀನೂ ಕೂಡ ಅನುಮತಿಯನ್ನು ನೀಡು. ಉತ್ತಮ ಧೈರ್ಯವನ್ನು ತಂದುಕೋ! ಕೇವಲ ಕ್ಷತ್ರಧರ್ಮವನ್ನು ಗಮನದಲ್ಲಿಟ್ಟುಕೊಂಡು ಆಗಿಹೋದುದನ್ನು ಕಾಣು.”
11010018a ಇತ್ಯೇವಮುಕ್ತ್ವಾ ರಾಜಾನಂ ಕೃತ್ವಾ ಚಾಭಿಪ್ರದಕ್ಷಿಣಮ್|
11010018c ಕೃಪಶ್ಚ ಕೃತವರ್ಮಾ ಚ ದ್ರೋಣಪುತ್ರಶ್ಚ ಭಾರತ||
11010019a ಅವೇಕ್ಷಮಾಣಾ ರಾಜಾನಂ ಧೃತರಾಷ್ಟ್ರಂ ಮನೀಷಿಣಮ್|
11010019c ಗಂಗಾಮನು ಮಹಾತ್ಮಾನಸ್ತೂರ್ಣಮಶ್ವಾನಚೋದಯನ್||
ಹೀಗೆ ಹೇಳಿ, ರಾಜನಿಗೆ ಪ್ರದಕ್ಷಿಣೆ ಹಾಕಿ, ಕೃಪ, ಕೃತವರ್ಮ ಮತ್ತು ದ್ರೋಣಪುತ್ರರು ಮಹಾತ್ಮ ಮನೀಷಿಣಿ ರಾಜ ಧೃತರಾಷ್ಟ್ರನನ್ನು ತಿರುಗಿ ನೋಡುತ್ತಲೇ ಗಂಗಾನದಿಯ ಕಡೆ ಶೀಘ್ರವಾಗಿ ಅಶ್ವಗಳನ್ನು ಓಡಿಸಿದರು.
11010020a ಅಪಕ್ರಮ್ಯ ತು ತೇ ರಾಜನ್ಸರ್ವ ಏವ ಮಹಾರಥಾಃ|
11010020c ಆಮಂತ್ರ್ಯಾನ್ಯೋನ್ಯಮುದ್ವಿಗ್ನಾಸ್ತ್ರಿಧಾ ತೇ ಪ್ರಯಯುಸ್ತತಃ||
ರಾಜನ್! ಗಂಗಾನದಿಯನ್ನು ದಾಟಿ ಉದ್ವಿಗ್ನರಾಗಿ ಮಂತ್ರಾಲೋಚನೆಮಾಡಿ ಆ ಮೂವರು ಮಹಾರಥರೂ ಪ್ರತ್ಯೇಕ ಮೂರುದಾರಿಗಳನ್ನು ಹಿಡಿದು ಹೊರಟುಹೋದರು.
11010021a ಜಗಾಮ ಹಾಸ್ತಿನಪುರಂ ಕೃಪಃ ಶಾರದ್ವತಸ್ತದಾ|
11010021c ಸ್ವಮೇವ ರಾಷ್ಟ್ರಂ ಹಾರ್ದಿಕ್ಯೋ ದ್ರೌಣಿರ್ವ್ಯಾಸಾಶ್ರಮಂ ಯಯೌ||
ಕೃಪ ಶಾರದ್ವತನು ಹಸ್ತಿನಾಪುರಕ್ಕೆ ಹೋದನು. ಹಾರ್ದಿಕ್ಯನು ತನ್ನ ದೇಶಕ್ಕೆ ಹೊರಟುಹೋದನು. ಮತ್ತು ದ್ರೌಣಿಯು ವ್ಯಾಸಾಶ್ರಮಕ್ಕೆ ಹೋದನು.
11010022a ಏವಂ ತೇ ಪ್ರಯಯುರ್ವೀರಾ ವೀಕ್ಷಮಾಣಾಃ ಪರಸ್ಪರಮ್|
11010022c ಭಯಾರ್ತಾಃ ಪಾಂಡುಪುತ್ರಾಣಾಮಾಗಸ್ಕೃತ್ವಾ ಮಹಾತ್ಮನಾಮ್||
ಮಹಾತ್ಮ ಪಾಂಡುಪುತ್ರರಿಗೆ ಮಹಾಪರಾಧವನ್ನೆಸಗಿದ್ದ ಆ ವೀರರು ಭಯಾರ್ತರಾಗಿ ಪರಸ್ಪರರನ್ನೇ ನೋಡುತ್ತಾ ಹೀಗೆ ಹೊರಟುಹೋದರು.
11010023a ಸಮೇತ್ಯ ವೀರಾ ರಾಜಾನಂ ತದಾ ತ್ವನುದಿತೇ ರವೌ|
11010023c ವಿಪ್ರಜಗ್ಮುರ್ಮಹಾರಾಜ ಯಥೇಚ್ಚಕಮರಿಂದಮಾಃ||
ಮಹಾರಾಜ! ರಾಜ ಧೃತರಾಷ್ಟ್ರನನ್ನು ಭೇಟಿಯಾಗಿ ಆ ವೀರ ಅರಿಂದಮರು ಸೂರ್ಯೋದಯವಾಗುವುದರೊಳಗಾಗಿ ಇಚ್ಛಿಸಿದ್ದ ಸ್ಥಳಗಳನ್ನು ಸೇರಿದರು.”
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಕೃಪದ್ರೌಣಿಭೋಜದರ್ಶನೇ ದಶಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಕೃಪದ್ರೌಣಿಭೋಜದರ್ಶನ ಎನ್ನುವ ಹತ್ತನೇ ಅಧ್ಯಾಯವು.