ಸ್ತ್ರೀಪರ್ವ: ವಿಶೋಕ ಪರ್ವ
೭
ವಿದುರನು ಧೃತರಾಷ್ಟ್ರನನ್ನು ತತ್ತ್ವಯುಕ್ತ ಮಾತುಗಳಿಂದ ಸಂತವಿಸಿದುದು (೧-೨೦).
11007001 ಧೃತರಾಷ್ಟ್ರ ಉವಾಚ
11007001a ಅಹೋಽಭಿಹಿತಮಾಖ್ಯಾನಂ ಭವತಾ ತತ್ತ್ವದರ್ಶಿನಾ|
11007001c ಭೂಯ ಏವ ತು ಮೇ ಹರ್ಷಃ ಶ್ರೋತುಂ ವಾಗಮೃತಂ ತವ||
ಧೃತರಾಷ್ಟ್ರನು ಹೇಳಿದನು: “ಅಯ್ಯಾ! ತತ್ತ್ವದರ್ಶಿಯಾದ ನಿನ್ನಿಂದ ಈ ಅದ್ಭುತ ಆಖ್ಯಾನವನ್ನು ಕೇಳಿದೆನು. ನಿನ್ನ ವಚನಾಮೃತವನ್ನು ಇನ್ನೂ ಕೇಳಲು ನನಗೆ ಹರ್ಷವಾಗುತ್ತದೆ.”
11007002 ವಿದುರ ಉವಾಚ
11007002a ಶೃಣು ಭೂಯಃ ಪ್ರವಕ್ಷ್ಯಾಮಿ ಮಾರ್ಗಸ್ಯೈತಸ್ಯ ವಿಸ್ತರಮ್|
11007002c ಯಚ್ಚ್ರುತ್ವಾ ವಿಪ್ರಮುಚ್ಯಂತೇ ಸಂಸಾರೇಭ್ಯೋ ವಿಚಕ್ಷಣಾಃ||
ವಿದುರನು ಹೇಳಿದನು: “ಇದರ ಮಾರ್ಗವನ್ನು ವಿಸ್ತಾರವಾಗಿ ಇನ್ನೊಮ್ಮೆ ಹೇಳುತ್ತೇನೆ. ಕೇಳು. ಇದನ್ನು ಕೇಳಿದ ವಿಚಕ್ಷಣರು ಸಂಸಾರಬಂಧನದಿಂದ ವಿಮುಕ್ತರಾಗುತ್ತಾರೆ.
11007003a ಯಥಾ ತು ಪುರುಷೋ ರಾಜನ್ದೀರ್ಘಮಧ್ವಾನಮಾಸ್ಥಿತಃ|
11007003c ಕ್ವ ಚಿತ್ಕ್ವ ಚಿಚ್ಚ್ರಮಾತ್ ಸ್ಥಾತಾ ಕುರುತೇ ವಾಸಮೇವ ವಾ||
11007004a ಏವಂ ಸಂಸಾರಪರ್ಯಾಯೇ ಗರ್ಭವಾಸೇಷು ಭಾರತ|
11007004c ಕುರ್ವಂತಿ ದುರ್ಬುಧಾ ವಾಸಂ ಮುಚ್ಯಂತೇ ತತ್ರ ಪಂಡಿತಾಃ||
ರಾಜನ್! ದೀರ್ಘ ಯಾತ್ರೆಯನ್ನು ಕೈಗೊಂಡಿರುವ ಪುರುಷನು ಹೇಗೆ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಸಮಯ ಕೆಲವೆಡೆಗಳಲ್ಲಿ ತಂಗುತ್ತಾನೋ ಹಾಗೆ ಈ ಸಂಸಾರವೆಂಬ ಪಯಣದಲ್ಲಿ ಅನೇಕ ಗರ್ಭಗಳಲ್ಲಿ ಜೀವನು ತಂಗುತ್ತಾನೆ. ಭಾರತ! ಆದರೆ ತಿಳುವಳಿಕೆಯಿಲ್ಲದವರು ಮಾಡುವ ಈ ವಿಶ್ರಾಂತಿಯ ವಾಸದಿಂದ ಪಂಡಿತರಾದವರು ಮುಕ್ತರಾಗಿರುತ್ತಾರೆ.
11007005a ತಸ್ಮಾದಧ್ವಾನಮೇವೈತಮಾಹುಃ ಶಾಸ್ತ್ರವಿದೋ ಜನಾಃ|
11007005c ಯತ್ತು ಸಂಸಾರಗಹನಂ ವನಮಾಹುರ್ಮನೀಷಿಣಃ||
ಸಂಸಾರವನ್ನು ಗಹನ ವನಕ್ಕೆ ಹೇಗೆ ಮನೀಷಿಣರು ಹೋಲಿಸುತ್ತಾರೋ ಹಾಗೆ ಶಾಸ್ತ್ರಗಳನ್ನು ತಿಳಿದವರು ಗರ್ಭಾವಾಸವನ್ನು ದೀರ್ಘಯಾತ್ರೆಯ ತಂಗುದಾಣವೆಂದು ನಿರೂಪಿಸಿರುತ್ತಾರೆ.
11007006a ಸೋಽಯಂ ಲೋಕಸಮಾವರ್ತೋ ಮರ್ತ್ಯಾನಾಂ ಭರತರ್ಷಭ|
11007006c ಚರಾಣಾಂ ಸ್ಥಾವರಾಣಾಂ ಚ ಗೃಧ್ಯೇತ್ತತ್ರ ನ ಪಂಡಿತಃ||
ಭರತರ್ಷಭ! ಈ ರೀತಿ ಮರ್ತ್ಯರ, ಸ್ಥಾವರ-ಚರಗಳ ಲೋಕಚಕ್ರವು ತಿರುಗುತ್ತಿರುತ್ತದೆ. ಪಂಡಿತರು ಇದರಲ್ಲಿ ಆಸಕ್ತರಾಗುವುದಿಲ್ಲ.
11007007a ಶಾರೀರಾ ಮಾನಸಾಶ್ಚೈವ ಮರ್ತ್ಯಾನಾಂ ಯೇ ತು ವ್ಯಾಧಯಃ|
11007007c ಪ್ರತ್ಯಕ್ಷಾಶ್ಚ ಪರೋಕ್ಷಾಶ್ಚ ತೇ ವ್ಯಾಲಾಃ ಕಥಿತಾ ಬುಧೈಃ||
ಮನುಷ್ಯರ ಶಾರೀರಿಕ ಮತ್ತು ಮಾನಸಿಕ, ಪ್ರತ್ಯಕ್ಷ ಮತ್ತು ಪರೋಕ್ಷ ವ್ಯಾಧಿಗಳನ್ನು ವಿಷಸರ್ಪಗಳೆಂದು ತಿಳಿದವರು ಹೇಳುತ್ತಾರೆ.
11007008a ಕ್ಲಿಶ್ಯಮಾನಾಶ್ಚ ತೈರ್ನಿತ್ಯಂ ಹನ್ಯಮಾನಾಶ್ಚ ಭಾರತ|
11007008c ಸ್ವಕರ್ಮಭಿರ್ಮಹಾವ್ಯಾಲೈರ್ನೋದ್ವಿಜಂತ್ಯಲ್ಪಬುದ್ಧಯಃ||
ಭಾರತ! ಸ್ವಕರ್ಮಗಳ ಫಲಗಳಾಗಿರುವ ಇವುಗಳಿಂದ ನಿತ್ಯವೂ ಪೀಡಿಸಲ್ಪಟ್ಟು ಸಾಯುತ್ತಿದ್ದರೂ ಅಲ್ಪಬುದ್ಧಿಯವರು ಈ ವಿಷಸರ್ಪಗಳಿಂದ ಉದ್ವಿಗ್ನರಾಗುವುದಿಲ್ಲ.
11007009a ಅಥಾಪಿ ತೈರ್ವಿಮುಚ್ಯೇತ ವ್ಯಾಧಿಭಿಃ ಪುರುಷೋ ನೃಪ|
11007009c ಆವೃಣೋತ್ಯೇವ ತಂ ಪಶ್ಚಾಜ್ಜರಾ ರೂಪವಿನಾಶಿನೀ||
ನೃಪ! ಪುರುಷನು ವ್ಯಾಧಿಗಳಿಂದ ಬಿಡುಗಡೆ ಹೊಂದಿದರೂ, ನಂತರ ಅವನನ್ನು ರೂಪವಿನಾಶಿನೀ ಮುಪ್ಪು ಆವರಿಸುವುದು ನಿಶ್ಚಿತ!
11007010a ಶಬ್ಧರೂಪರಸಸ್ಪರ್ಶೈರ್ಗಂಧೈಶ್ಚ ವಿವಿಧೈರಪಿ|
11007010c ಮಜ್ಜಮಾನಂ ಮಹಾಪಂಕೇ ನಿರಾಲಂಬೇ ಸಮಂತತಃ||
11007011a ಸಂವತ್ಸರರ್ತವೋ ಮಾಸಾಃ ಪಕ್ಷಾಹೋರಾತ್ರಸಂಧಯಃ|
11007011c ಕ್ರಮೇಣಾಸ್ಯ ಪ್ರಲುಮ್ಪಂತಿ ರೂಪಮಾಯುಸ್ತಥೈವ ಚ||
ವಿವಿಧ ಶಬ್ಧ-ರೂಪ-ರಸ-ಸ್ಪರ್ಶ-ಗಂಧಗಳೆಂಬ ಮಹಾ ಕೆಸರಿನಲ್ಲಿ ಸುತ್ತಲೂ ಆಶ್ರಯವಿಲ್ಲದೇ ಮುಳುಗುತ್ತಿರುವವನ ರೂಪ-ವಯಸ್ಸುಗಳನ್ನು ಸಂವತ್ಸರ-ಮಾಸ-ಪಕ್ಷ-ಆಹೋ-ರಾತ್ರಿ-ಸಂಧ್ಯಾಕಾಲಗಳು ಕ್ರಮೇಣವಾಗಿ ಕ್ಷೀಣಿಸುತ್ತಾ ಬರುತ್ತವೆ.
11007012a ಏತೇ ಕಾಲಸ್ಯ ನಿಧಯೋ ನೈತಾನ್ಜಾನಂತಿ ದುರ್ಬುಧಾಃ|
11007012c ಅತ್ರಾಭಿಲಿಖಿತಾನ್ಯಾಹುಃ ಸರ್ವಭೂತಾನಿ ಕರ್ಮಣಾ||
ಇವೇ ಕಾಲದ ಪ್ರತಿನಿಧಿಗಳು. ದುರ್ಬುಧರು ಇವುಗಳನ್ನು ಅರಿತುಕೊಂಡಿರುವುದಿಲ್ಲ. ಸರ್ವಭೂತಗಳ ಕರ್ಮಗಳನ್ನು ಮೊದಲೇ ಬರೆದಿಡಲಾಗಿದೆ ಎಂದು ಹೇಳುತ್ತಾರೆ.
11007013a ರಥಂ ಶರೀರಂ ಭೂತಾನಾಂ ಸತ್ತ್ವಮಾಹುಸ್ತು ಸಾರಥಿಮ್|
11007013c ಇಂದ್ರಿಯಾಣಿ ಹಯಾನಾಹುಃ ಕರ್ಮ ಬುದ್ಧಿಶ್ಚ ರಶ್ಮಯಃ||
ಭೂತಗಳ ಶರೀರವನ್ನು ರಥವೆಂದೂ, ಸಾರಥಿಯನ್ನು ಅದರೊಳಗಿರುವ ಸತ್ತ್ವವೆಂದೂ ಹೇಳುತ್ತಾರೆ. ಇಂದ್ರಿಯಗಳನ್ನು ಕುದುರೆಗಳೆಂದೂ ಕರ್ಮಮಾಡುವ ಬುದ್ಧಿಯನ್ನು ಕಡಿವಾಣಗಳೆಂದೂ ಹೇಳುತ್ತಾರೆ.
11007014a ತೇಷಾಂ ಹಯಾನಾಂ ಯೋ ವೇಗಂ ಧಾವತಾಮನುಧಾವತಿ|
11007014c ಸ ತು ಸಂಸಾರಚಕ್ರೇಽಸ್ಮಿಂಶ್ಚಕ್ರವತ್ಪರಿವರ್ತತೇ||
ಆ ಕುದುರೆಗಳು ಯಾವ ವೇಗದಲ್ಲಿ ಹೋಗುತ್ತಿರುತ್ತವೆಯೋ ಅದೇ ವೇಗದಲ್ಲಿ ಹೋಗುತ್ತಿರುವವನು ಈ ಸಂಸಾರ ಚಕ್ರದಲ್ಲಿ ಚಕ್ರದಂತೆ ತಿರುಗುತ್ತಿರುತ್ತಾನೆ.
11007015a ಯಸ್ತಾನ್ಯಮಯತೇ ಬುದ್ಧ್ಯಾ ಸ ಯಂತಾ ನ ನಿವರ್ತತೇ|
11007015c ಯಾಮ್ಯಮಾಹೂ ರಥಂ ಹ್ಯೇನಂ ಮುಹ್ಯಂತೇ ಯೇನ ದುರ್ಬುಧಾಃ||
ಬುದ್ಧಿಯಿಂದ ಯಾರು ಇದನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾನೋ ಅವನು ಸಂಸಾರಚಕ್ರಕ್ಕೆ ಹಿಂದಿರುಗುವುದಿಲ್ಲ. ಯಾಮ್ಯರಥವೆಂದು ಕರೆಯಲ್ಪಡುವ ಇದರಿಂದ ಮೂಢರು ವ್ಯಾಮೋಹಿತರಾಗಿರುತ್ತಾರೆ.
11007016a ಸ ಚೈತತ್ಪ್ರಾಪ್ನುತೇ ರಾಜನ್ಯತ್ತ್ವಂ ಪ್ರಾಪ್ತೋ ನರಾಧಿಪ|
11007016c ರಾಜ್ಯನಾಶಂ ಸುಹೃನ್ನಾಶಂ ಸುತನಾಶಂ ಚ ಭಾರತ||
ರಾಜನ್! ನರಾಧಿಪ! ಭಾರತ! ನೀನು ಪಡೆದಿರುವ ರಾಜ್ಯನಾಶ, ಸುಹೃದಯರ ನಾಶ ಮತ್ತು ಮಕ್ಕಳ ನಾಶ ಮೊದಲಾದ ಅವಸ್ಥೆಯನ್ನೇ ಅವರೂ ಪಡೆಯುತ್ತಾರೆ.
11007017a ಅನುತರ್ಷುಲಮೇವೈತದ್ದುಃಖಂ ಭವತಿ ಭಾರತ|
11007017c ಸಾಧುಃ ಪರಮದುಃಖಾನಾಂ ದುಃಖಭೈಷಜ್ಯಮಾಚರೇತ್||
ಭಾರತ! ಅತಿವ್ಯಾಮೋಹವೇ ದುಃಖಕ್ಕೆ ಕಾರಣವಾಗುತ್ತದೆ. ಸಾಧುವಾದವನು ಪರಮದುಃಖಗಳಿಗೆ ದುಃಖದ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕು.
11007018a ನ ವಿಕ್ರಮೋ ನ ಚಾಪ್ಯರ್ಥೋ ನ ಮಿತ್ರಂ ನ ಸುಹೃಜ್ಜನಃ|
11007018c ತಥೋನ್ಮೋಚಯತೇ ದುಃಖಾದ್ಯಥಾತ್ಮಾ ಸ್ಥಿರಸಂಯಮಃ||
ಆತ್ಮದ ಸ್ಥಿರ-ಸಂಯಮಗಳಿಂದ ದೊರೆಯುವ ದುಃಖಾದಿಗಳ ಬಿಡುಗಡೆಯು ವಿಕ್ರಮದಿಂದಾಗಲೀ, ಸಂಪತ್ತಿನಿಂದಾಲೀ, ಮಿತ್ರ-ಸುಹೃಜ್ಜನರಿಂದಾಗಲೀ ದೊರೆಯುವುದಿಲ್ಲ.
11007019a ತಸ್ಮಾನ್ಮೈತ್ರಂ ಸಮಾಸ್ಥಾಯ ಶೀಲಮಾಪದ್ಯ ಭಾರತ|
11007019c ದಮಸ್ತ್ಯಾಗೋಽಪ್ರಮಾದಶ್ಚ ತೇ ತ್ರಯೋ ಬ್ರಹ್ಮಣೋ ಹಯಾಃ||
ಆದುದರಿಂದ ಭಾರತ! ಸರ್ವತ್ರ ಸರ್ವರಲ್ಲಿಯೂ ಮೈತ್ರೀಭಾವವನ್ನು ಹೊಂದಿ ಶೀಲವನ್ನು ಪಡೆದುಕೋ! ದಮ, ತ್ಯಾಗ ಮತ್ತು ಅಪ್ರಮಾದ ಈ ಮೂರು ಬ್ರಹ್ಮನ ಸ್ಥಾನಕ್ಕೊಯ್ಯುವ ಕುದುರೆಗಳು.
11007020a ಶೀಲರಶ್ಮಿಸಮಾಯುಕ್ತೇ ಸ್ಥಿತೋ ಯೋ ಮಾನಸೇ ರಥೇ|
11007020c ತ್ಯಕ್ತ್ವಾ ಮೃತ್ಯುಭಯಂ ರಾಜನ್ಬ್ರಹ್ಮಲೋಕಂ ಸ ಗಚ್ಚತಿ||
ರಾಜನ್! ಮನಸ್ಸಿನಲ್ಲಿ ಶೀಲವೆಂಬ ಕಡಿವಾಣವನ್ನು ಹಿಡಿದು ರಥದಲ್ಲಿ ಕುಳಿತಿರುವವನು ಮೃತ್ಯುಭಯವನ್ನು ತ್ಯಜಿಸಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ.””
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಸಪ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಏಳನೇ ಅಧ್ಯಾಯವು.