ಸ್ತ್ರೀಪರ್ವ: ವಿಶೋಕ ಪರ್ವ
೪
ಸಂಸಾರತತ್ತ್ವವನ್ನು ಹೇಳಿ ವಿದುರನು ಧೃತರಾಷ್ಟ್ರನನ್ನು ಸಂತವಿಸಿದುದು (೧-೧೫).
11004001 ಧೃತರಾಷ್ಟ್ರ ಉವಾಚ
11004001a ಕಥಂ ಸಂಸಾರಗಹನಂ ವಿಜ್ಞೇಯಂ ವದತಾಂ ವರ|
11004001c ಏತದಿಚ್ಚಾಮ್ಯಹಂ ಶ್ರೋತುಂ ತತ್ತ್ವಮಾಖ್ಯಾಹಿ ಪೃಚ್ಚತಃ||
ಧೃತರಾಷ್ಟ್ರನು ಹೇಳಿದನು: “ಮಾತುನಾಡುವವರಲ್ಲಿ ಶ್ರೇಷ್ಠ! ಈ ಅಗಾಧ ಸಂಸಾರವನ್ನು ಹೇಗೆ ತಿಳಿದುಕೊಳ್ಳಬೇಕು? ಇದನ್ನು ಕೇಳಲು ಬಯಸುತ್ತೇನೆ. ಕೇಳುತ್ತಿರುವ ನನಗೆ ಈ ತತ್ತ್ವವನ್ನು ಹೇಳು.”
11004002 ವಿದುರ ಉವಾಚ
11004002a ಜನ್ಮಪ್ರಭೃತಿ ಭೂತಾನಾಂ ಕ್ರಿಯಾಃ ಸರ್ವಾಃ ಶೃಣು ಪ್ರಭೋ|
11004002c ಪೂರ್ವಮೇವೇಹ ಕಲಲೇ ವಸತೇ ಕಿಂ ಚಿದಂತರಮ್||
ವಿದುರನು ಹೇಳಿದನು: “ಪ್ರಭೋ! ಜನ್ಮಪ್ರಭೃತಿ ಭೂತಗಳ ಕ್ರಿಯೆಗಳೆಲ್ಲವನ್ನೂ ಕೇಳು. ಜನ್ಮಕ್ಕೆ ಮೊದಲು ಸ್ವಲ್ಪಕಾಲ ಗರ್ಭವು ಕಲಲದಲ್ಲಿ ವಾಸಿಸಿರುತ್ತದೆ.
11004003a ತತಃ ಸ ಪಂಚಮೇಽತೀತೇ ಮಾಸೇ ಮಾಂಸಂ ಪ್ರಕಲ್ಪಯೇತ್|
11004003c ತತಃ ಸರ್ವಾಂಗಸಂಪೂರ್ಣೋ ಗರ್ಭೋ ಮಾಸೇ ಪ್ರಜಾಯತೇ||
ಅನಂತರ ಐದು ತಿಂಗಳು ಕಳೆಯಲು ಮಾಂಸದ ರೂಪವನ್ನು ಪಡೆಯುತ್ತದೆ. ಆಗ ಗರ್ಭವು ಸರ್ವಾಂಗಗಳನ್ನು ಪಡೆದು ಸಂಪೂರ್ಣವಾಗುತ್ತದೆ.
11004004a ಅಮೇಧ್ಯಮಧ್ಯೇ ವಸತಿ ಮಾಂಸಶೋಣಿತಲೇಪನೇ|
11004004c ತತಸ್ತು ವಾಯುವೇಗೇನ ಊರ್ಧ್ವಪಾದೋ ಹ್ಯಧಃಶಿರಾಃ||
ಮಾಂಸರಕ್ತಗಳಿಂದ ಲೇಪನಗೊಂಡು ಅದು ಅಮೇಧ್ಯದ ಮಧ್ಯದಲ್ಲಿ ವಾಸಮಾಡುತ್ತದೆ. ಅನಂತರ ವಾಯುವೇಗದ ಕಾರಣದಿಂದ ಗರ್ಭವು ತಲೆಕೆಳಗೆ ಕಾಲು ಮೇಲೆ ಮಾಡಿಕೊಳ್ಳುತ್ತದೆ.
11004005a ಯೋನಿದ್ವಾರಮುಪಾಗಮ್ಯ ಬಹೂನ್ ಕ್ಲೇಶಾನ್ಸಮೃಚ್ಚತಿ|
11004005c ಯೋನಿಸಂಪೀಡನಾಚ್ಚೈವ ಪೂರ್ವಕರ್ಮಭಿರನ್ವಿತಃ||
ಯೋನಿದ್ವಾರಕ್ಕೆ ಬಂದು ಅದು ಅನೇಕ ಕ್ಲೇಶಗಳನ್ನು ಅನುಭವಿಸುತ್ತದೆ. ಪೂರ್ವಕರ್ಮಗಳನ್ನು ಹೊತ್ತುತಂದಿರುವ ಅದು ಯೋನಿಪೀಡನೆಯನ್ನು ಅನುಭವಿಸುತ್ತದೆ.
11004006a ತಸ್ಮಾನ್ಮುಕ್ತಃ ಸ ಸಂಸಾರಾದನ್ಯಾನ್ಪಶ್ಯತ್ಯುಪದ್ರವಾನ್|
11004006c ಗ್ರಹಾಸ್ತಮುಪಸರ್ಪಂತಿ ಸಾರಮೇಯಾ ಇವಾಮಿಷಮ್||
ಯೋನಿಪೀಡೆಯಿಂದ ಬಿಡುಗಡೆಹೊಂದಿ ಸಂಸಾರದಲ್ಲಿ ಅನ್ಯ ಉಪದ್ರವಗಳನ್ನು ಕಾಣುತ್ತದೆ. ನಾಯಿಗಳು ಮಾಂಸವನ್ನು ಹುಡುಕಿಕೊಂಡು ಹೋಗುವಂತೆ ಗ್ರಹಗಳು ಹುಟ್ಟಿದ ಮಗುವನ್ನು ಕಾಡುತ್ತವೆ.
11004007a ತತಃ ಪ್ರಾಪ್ತೋತ್ತರೇ ಕಾಲೇ ವ್ಯಾಧಯಶ್ಚಾಪಿ ತಂ ತಥಾ|
11004007c ಉಪಸರ್ಪಂತಿ ಜೀವಂತಂ ಬಧ್ಯಮಾನಂ ಸ್ವಕರ್ಮಭಿಃ||
ಸಮಯವು ಕಳೆಯುತ್ತಿದ್ದಂತೆ ತನ್ನ ಕರ್ಮಗಳಿಂದಲೇ ಬಂಧಿತನಾದ ಜೀವವನ್ನು ವ್ಯಾಧಿಗಳು ಸಮೀಪಿಸುತ್ತವೆ.
11004008a ಬದ್ಧಮಿಂದ್ರಿಯಪಾಶೈಸ್ತಂ ಸಂಗಸ್ವಾದುಭಿರಾತುರಮ್|
11004008c ವ್ಯಸನಾನ್ಯುಪವರ್ತಂತೇ ವಿವಿಧಾನಿ ನರಾಧಿಪ|
11004008e ಬಧ್ಯಮಾನಶ್ಚ ತೈರ್ಭೂಯೋ ನೈವ ತೃಪ್ತಿಮುಪೈತಿ ಸಃ||
ನರಾಧಿಪ! ಇಂದ್ರಿಯಗಳೆಂಬ ಹಗ್ಗಗಳಿಂದ ಬಂಧಿತನಾದ ಮತ್ತು ವಿಷಯಗಳಿಗೆ ಅಂಟಿಕೊಂಡಿರುವ ಆ ಜೀವವನ್ನು ವ್ಯಸನಗಳೂ ಕಾಡುತ್ತವೆ. ಅವುಗಳಿಂದ ಬಂಧಿತನಾದ ಅವನು ತೃಪ್ತಿಯನ್ನೇ ಹೊಂದುವುದಿಲ್ಲ.
11004009a ಅಯಂ ನ ಬುಧ್ಯತೇ ತಾವದ್ಯಮಲೋಕಮಥಾಗತಮ್|
11004009c ಯಮದೂತೈರ್ವಿಕೃಷ್ಯಂಶ್ಚ ಮೃತ್ಯುಂ ಕಾಲೇನ ಗಚ್ಚತಿ||
ಆಗ ಅವನಿಗೆ ಯಮಲೋಕಕ್ಕೆ ಹೋಗುವೆನೆಂಬ ಅರಿವೆಯೇ ಇರುವುದಿಲ್ಲ. ಸಮಯಬಂದಾಗ ಯಮದೂತರಿಂದ ಎಳೆಯಲ್ಪಟ್ಟ ಅವನು ಮೃತ್ಯುವನ್ನು ಹೊಂದುತ್ತಾನೆ.
11004010a ವಾಗ್ಘೀನಸ್ಯ ಚ ಯನ್ಮಾತ್ರಮಿಷ್ಟಾನಿಷ್ಟಂ ಕೃತಂ ಮುಖೇ|
11004010c ಭೂಯ ಏವಾತ್ಮನಾತ್ಮಾನಂ ಬಧ್ಯಮಾನಮುಪೇಕ್ಷತೇ||
ಮಾತನಾಡಲೂ ಶಕ್ಯನಾಗಿರದ ಅವನ ಮುಂದೆ ತಾನು ಮಾಡಿದ ಇಷ್ಟಾನಿಷ್ಟ ಕರ್ಮಗಳು ನಿಲ್ಲುತ್ತವೆ. ಮತ್ತೊಮ್ಮೆ ಆ ಕರ್ಮಗಳು ಅವನನ್ನು ಬಂಧಿಸುತ್ತಿದ್ದರೂ ಅವನು ಸುಮ್ಮನೇ ನೋಡುತ್ತಿರಬೇಕಾಗುತ್ತದೆ.
11004011a ಅಹೋ ವಿನಿಕೃತೋ ಲೋಕೋ ಲೋಭೇನ ಚ ವಶೀಕೃತಃ|
11004011c ಲೋಭಕ್ರೋಧಮದೋನ್ಮತ್ತೋ ನಾತ್ಮಾನಮವಬುಧ್ಯತೇ||
ಅಯ್ಯೋ! ಲೋಭಕ್ಕೆ ಅಧೀನವಾಗಿ ಲೋಕವು ಮೋಸಹೋಗಿಬಿಟ್ಟಿದೆ! ಲೋಭ-ಕ್ರೋಧ-ಮದೋನ್ಮತ್ತವಾಗಿ ತನ್ನನ್ನು ತಾನೇ ತಿಳಿದುಕೊಳ್ಳದಾಗಿದೆ.
11004012a ಕುಲೀನತ್ವೇನ ರಮತೇ ದುಷ್ಕುಲೀನಾನ್ವಿಕುತ್ಸಯನ್|
11004012c ಧನದರ್ಪೇಣ ದೃಪ್ತಶ್ಚ ದರಿದ್ರಾನಪರಿಕುತ್ಸಯನ್||
ಉತ್ತಮ ಕುಲದಲ್ಲಿ ಹುಟ್ಟಿದವನು ಕೀಳುಕುಲದಲ್ಲಿ ಹುಟ್ಟಿದವನನ್ನು ನಿಂದಿಸುತ್ತಾ ರಮಿಸುತ್ತಾನೆ. ಧನದ ದರ್ಪದಿಂದ ಗರ್ವಿತರಾಗಿ ದರಿದ್ರರನ್ನು ಅಪಹಾಸ್ಯಮಾಡುತ್ತಾರೆ.
11004013a ಮೂರ್ಖಾನಿತಿ ಪರಾನಾಹ ನಾತ್ಮಾನಂ ಸಮವೇಕ್ಷತೇ|
11004013c ಶಿಕ್ಷಾಂ ಕ್ಷಿಪತಿ ಚಾನ್ಯೇಷಾಂ ನಾತ್ಮಾನಂ ಶಾಸ್ತುಮಿಚ್ಚತಿ||
ಇತರರು ಮೂರ್ಖರೆಂದು ಹೇಳುತ್ತಾನೆಯೇ ಹೊರತು ತನ್ನನ್ನು ತಾನು ಪರೀಕ್ಷಿಸಿಕೊಳ್ಳುವುದಿಲ್ಲ. ಇತರರ ಮೇಲೆ ದೋಷಗಳನ್ನು ಹೊರಿಸುತ್ತಾನೆಯೇ ಹೊರತು ತನ್ನನ್ನು ತಾನು ಹಿಡಿತದಲ್ಲಿಟ್ಟುಕೊಳ್ಳುವುದಿಲ್ಲ.
11004014a ಅಧ್ರುವೇ ಜೀವಲೋಕೇಽಸ್ಮಿನ್ಯೋ ಧರ್ಮಮನುಪಾಲಯನ್|
11004014c ಜನ್ಮಪ್ರಭೃತಿ ವರ್ತೇತ ಪ್ರಾಪ್ನುಯಾತ್ಪರಮಾಂ ಗತಿಮ್||
ಅಶಾಶ್ವತವಾದ ಈ ಜಗತ್ತಿನಲ್ಲಿ ಯಾರು ಜನ್ಮಪ್ರಭೃತಿ ಧರ್ಮವನ್ನು ಅನುಸರಿಸಿ ಜೀವನ ನಡೆಸುತ್ತಾರೋ ಅವರು ಪರಮ ಗತಿಯನ್ನು ಹೊಂದುತ್ತಾರೆ.
11004015a ಏವಂ ಸರ್ವಂ ವಿದಿತ್ವಾ ವೈ ಯಸ್ತತ್ತ್ವಮನುವರ್ತತೇ|
11004015c ಸ ಪ್ರಮೋಕ್ಷಾಯ ಲಭತೇ ಪಂಥಾನಂ ಮನುಜಾಧಿಪ||
ಮನುಜಾಧಿಪ! ಹೀಗೆ ಸರ್ವವನ್ನೂ ತಿಳಿದುಕೊಂಡು ಆ ತತ್ತ್ವದಂತೆಯೇ ವರ್ತಿಸುವವನು ಮೋಕ್ಷದ ದಾರಿಯನ್ನು ಪಡೆಯುತ್ತಾನೆ.”
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಚತುರ್ಥೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ನಾಲ್ಕನೇ ಅಧ್ಯಾಯವು.