ಸ್ತ್ರೀಪರ್ವ: ವಿಶೋಕ ಪರ್ವ
೨
ದೃತರಾಷ್ಟ್ರನನ್ನು ವಿದುರನು ಸುಭಾಷಿತಗಳನ್ನು ಹೇಳಿ ಸಂತವಿಸಿದುದು (೧-೨೩).
11002001 ವೈಶಂಪಾಯನ ಉವಾಚ
11002001a ತತೋಽಮೃತಸಮೈರ್ವಾಕ್ಯೈರ್ಹ್ಲಾದಯನ್ಪುರುಷರ್ಷಭಮ್|
11002001c ವೈಚಿತ್ರವೀರ್ಯಂ ವಿದುರೋ ಯದುವಾಚ ನಿಬೋಧ ತತ್||
ವೈಶಂಪಾಯನನು ಹೇಳಿದನು: “ಆಗ ವಿದುರನು ಅಮೃತ ಸಮಾನ ಮಾತುಗಳಿಂದ ಪುರುಷರ್ಷಭ ವೈಚಿತ್ರವೀರ್ಯನನ್ನು ಆಹ್ಲಾದಗೊಳಿಸಿದನು. ಏನು ಹೇಳಿದನೆನ್ನುವುದನ್ನು ಕೇಳು!
11002002 ವಿದುರ ಉವಾಚ
11002002a ಉತ್ತಿಷ್ಠ ರಾಜನ್ ಕಿಂ ಶೇಷೇ ಧಾರಯಾತ್ಮಾನಮಾತ್ಮನಾ|
11002002c ಸ್ಥಿರಜಂಗಮಮರ್ತ್ಯಾನಾಂ ಸರ್ವೇಷಾಮೇಷ ನಿರ್ಣಯಃ||
ವಿದುರನು ಹೇಳಿದನು: “ಮೇಲೇಳು ರಾಜನ್! ಏಕೆ ಮಲಗಿರುವೆ? ಬುದ್ಧಿಯಿಂದ ನಿನ್ನ ಮನಸ್ಸನ್ನು ಸ್ಥಿರಗೊಳಿಸಿಕೋ! ಸ್ಥಿರ-ಜಂಗಮಗಳು ಮತ್ತು ಮನುಷ್ಯರು ಎಲ್ಲರ ನಿರ್ಣಯವೂ ಒಂದೇ!
11002003a ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಚ್ರಯಾಃ|
11002003c ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಹಿ ಜೀವಿತಮ್||
ಸಂಗ್ರಹಿಸಿದುದೆಲ್ಲವೂ ಕಡಿಮೆಯಾಗುತ್ತವೆ. ಮೇಲೇರಿದವು ಕೆಳಗೆ ಬೀಳುತ್ತವೆ. ಸೇರುವಿಕೆಯು ವಿಯೋಗದಲ್ಲಿ ಕೊನೆಯಾಗುತ್ತದೆ. ಮತ್ತು ಜೀವನವು ಮರಣದಲ್ಲಿ ಕೊನೆಗೊಳ್ಳುತ್ತದೆ.
11002004a ಯದಾ ಶೂರಂ ಚ ಭೀರುಂ ಚ ಯಮಃ ಕರ್ಷತಿ ಭಾರತ|
11002004c ತತ್ಕಿಂ ನ ಯೋತ್ಸ್ಯಂತಿ ಹಿ ತೇ ಕ್ಷತ್ರಿಯಾಃ ಕ್ಷತ್ರಿಯರ್ಷಭ||
ಭಾರತ! ಕ್ಷತ್ರಿಯರ್ಷಭ! ಶೂರನಾಗಿರಲಿ ಹೇಡಿಯಾಗಿರಲಿ ಯಮನು ಎಳೆದುಕೊಂಡು ಹೋಗುತ್ತಾನೆ. ಹೀಗಿರುವಾಗ ಕ್ಷತ್ರಿಯರು ಏಕೆ ಯುದ್ಧಮಾಡುವುದಿಲ್ಲ?
11002005a ಅಯುಧ್ಯಮಾನೋ ಮ್ರಿಯತೇ ಯುಧ್ಯಮಾನಶ್ಚ ಜೀವತಿ|
11002005c ಕಾಲಂ ಪ್ರಾಪ್ಯ ಮಹಾರಾಜ ನ ಕಶ್ಚಿದತಿವರ್ತತೇ||
ಮಹಾರಾಜ! ಯುದ್ಧಮಾಡದೇ ಉಳಿದುಕೊಂಡಿರುವವರು ಮತ್ತು ಯುದ್ಧಮಾಡಿಯೂ ಜೀವಂತವಿರುವವರು ಎಲ್ಲರಿಗೂ ಕಾಲವು ಒಂದೇರೀತಿಯಲ್ಲಿ ವರ್ತಿಸುತ್ತದೆ.
11002006a ನ ಚಾಪ್ಯೇತಾನ್ ಹತಾನ್ಯುದ್ಧೇ ರಾಜನ್ ಶೋಚಿತುಮರ್ಹಸಿ|
11002006c ಪ್ರಮಾಣಂ ಯದಿ ಶಾಸ್ತ್ರಾಣಿ ಗತಾಸ್ತೇ ಪರಮಾಂ ಗತಿಮ್||
ರಾಜನ್! ಶಾಸ್ತ್ರಗಳ ಪ್ರಮಾಣದ ಪ್ರಕಾರ ಯುದ್ಧದಲ್ಲಿ ಹತರಾದವರ ಕುರಿತು ಶೋಕಿಸಬಾರದು. ಏಕೆಂದರೆ ಅವರು ಪರಮ ಗತಿಯನ್ನು ಪಡೆದಿರುತ್ತಾರೆ.
11002007a ಸರ್ವೇ ಸ್ವಾಧ್ಯಾಯವಂತೋ ಹಿ ಸರ್ವೇ ಚ ಚರಿತವ್ರತಾಃ|
11002007c ಸರ್ವೇ ಚಾಭಿಮುಖಾಃ ಕ್ಷೀಣಾಸ್ತತ್ರ ಕಾ ಪರಿದೇವನಾ||
ಎಲ್ಲರೂ ವೇದಾಧ್ಯಯನ ಮಾಡಿದ್ದರು. ಎಲ್ಲರೂ ವ್ರತಗಳನ್ನು ನಡೆಸಿದ್ದರು. ಎಲ್ಲರೂ ಶತ್ರುಗಳನ್ನು ಎದುರಿಸಿಯೇ ಮಡಿದರು. ಅದರಲ್ಲಿ ದುಃಖಿಸುವುದೇನಿದೆ?
11002008a ಅದರ್ಶನಾದಾಪತಿತಾಃ ಪುನಶ್ಚಾದರ್ಶನಂ ಗತಾಃ|
11002008c ನ ತೇ ತವ ನ ತೇಷಾಂ ತ್ವಂ ತತ್ರ ಕಾ ಪರಿದೇವನಾ||
ಕಣ್ಣಿಗೆ ಕಾಣಿಸದೇ ಇರುವಲ್ಲಿಂದ ಬಂದ ಅವರು ಪುನಃ ಕಣ್ಣಿಗೆ ಕಾಣಿಸದೇ ಇರುವಲ್ಲಿಗೆ ಹೋಗಿದ್ದಾರೆ! ಅವರು ನಿನ್ನವರೂ ಅಲ್ಲ. ನೀನು ಅವರವನೂ ಅಲ್ಲ. ಅದರಲ್ಲಿ ದುಃಖಿಸುವುದೇನಿದೆ?
11002009a ಹತೋಽಪಿ ಲಭತೇ ಸ್ವರ್ಗಂ ಹತ್ವಾ ಚ ಲಭತೇ ಯಶಃ|
11002009c ಉಭಯಂ ನೋ ಬಹುಗುಣಂ ನಾಸ್ತಿ ನಿಷ್ಫಲತಾ ರಣೇ||
ಸತ್ತರೂ ಸ್ವರ್ಗವನ್ನು ಪಡೆಯುತ್ತಾರೆ. ಕೊಂದರೂ ಯಶಸ್ಸನ್ನು ಪಡೆಯುತ್ತಾರೆ. ಇವೆರಡೂ ಮಹಾಗುಣಯುಕ್ತವಾದವುಗಳು. ಆದುದರಿಂದ ರಣದಲ್ಲಿ ಯಾವುದೂ ನಿಷ್ಫಲವಾಗುವುದಿಲ್ಲ.
11002010a ತೇಷಾಂ ಕಾಮದುಘಾಽಲ್ಲೋಕಾನಿಂದ್ರಃ ಸಂಕಲ್ಪಯಿಷ್ಯತಿ|
11002010c ಇಂದ್ರಸ್ಯಾತಿಥಯೋ ಹ್ಯೇತೇ ಭವಂತಿ ಪುರುಷರ್ಷಭ||
ಅವರ ಕಾಮನೆಗಳಿಗೆ ತಕ್ಕಂತೆ ಇಂದ್ರನೇ ಲೋಕಗಳನ್ನು ಸಿದ್ಧಪಡಿಸುತ್ತಾನೆ. ಪುರುಷರ್ಷಭ! ಅವರು ಇಂದ್ರನ ಅತಿಥಿಗಳೇ ಆಗುತ್ತಾರೆ.
11002011a ನ ಯಜ್ಞೈರ್ದಕ್ಷಿಣಾವದ್ಭಿರ್ನ ತಪೋಭಿರ್ನ ವಿದ್ಯಯಾ|
11002011c ಸ್ವರ್ಗಂ ಯಾಂತಿ ತಥಾ ಮರ್ತ್ಯಾ ಯಥಾ ಶೂರಾ ರಣೇ ಹತಾಃ||
ರಣದಲ್ಲಿ ಹತರಾದ ಶೂರ ನರರು ಸ್ವರ್ಗಕ್ಕೆ ಹೋಗುವಂತೆ ಬಹಳ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಮಾಡುವುದರಿಂದಲೂ, ತಪಸ್ಸಿನಿಂದಲೂ, ಮತ್ತು ವಿದ್ಯೆಯಿಂದಲೂ ಸಾಧ್ಯವಿಲ್ಲ.
11002012a ಮಾತಾಪಿತೃಸಹಸ್ರಾಣಿ ಪುತ್ರದಾರಶತಾನಿ ಚ|
11002012c ಸಂಸಾರೇಷ್ವನುಭೂತಾನಿ ಕಸ್ಯ ತೇ ಕಸ್ಯ ವಾ ವಯಮ್||
ಈ ಸಂಸಾರದಲ್ಲಿ ನಾವು ಸಾವಿರಾರು ಮಾತಾ-ಪಿತೃಗಳನ್ನು, ನೂರಾರು ಮಕ್ಕಳು-ಪತ್ನಿಯರನ್ನು ಅನುಭವಿಸಿದ್ದೇವೆ. ಆದರೆ ಈಗ ಅವರು ಯಾರವರು ಮತ್ತು ನಾವು ಯಾರು?
11002013a ಶೋಕಸ್ಥಾನಸಹಸ್ರಾಣಿ ಭಯಸ್ಥಾನಶತಾನಿ ಚ|
11002013c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್||
ಶೋಕಪಡಲು ಸಹಸ್ರಾರು ಕಾರಣಗಳಿರುತ್ತವೆ ಮತ್ತು ಭಯಪಡಲು ಸಹಸ್ರಾರು ಕಾರಣಗಳಿರುತ್ತವೆ. ಆದರೆ ಅವು ಕೇವಲ ಮೂಢರನ್ನು ದಿನನಿತ್ಯವೂ ಬಾಧಿಸುತ್ತಿರುತ್ತದೆ. ಪಂಡಿತರನ್ನಲ್ಲ.
11002014a ನ ಕಾಲಸ್ಯ ಪ್ರಿಯಃ ಕಶ್ಚಿನ್ನ ದ್ವೇಷ್ಯಃ ಕುರುಸತ್ತಮ|
11002014c ನ ಮಧ್ಯಸ್ಥಃ ಕ್ವ ಚಿತ್ಕಾಲಃ ಸರ್ವಂ ಕಾಲಃ ಪ್ರಕರ್ಷತಿ||
ಕುರುಸತ್ತಮ! ಕಾಲಕ್ಕೆ ಯಾರೂ ಪ್ರಿಯರಾದವರಿಲ್ಲ; ದ್ವೇಷಿಗಳೂ ಇಲ್ಲ. ಪ್ರೀತಿ-ದ್ವೇಷಗಳಿಲ್ಲದ ಮಧ್ಯಸ್ಥನೂ ಇಲ್ಲ. ಕಾಲವು ಸರ್ವವನ್ನೂ ಎಳೆದುಕೊಂಡು ಹೋಗುತ್ತದೆ.
11002015a ಅನಿತ್ಯಂ ಜೀವಿತಂ ರೂಪಂ ಯೌವನಂ ದ್ರವ್ಯಸಂಚಯಃ|
11002015c ಆರೋಗ್ಯಂ ಪ್ರಿಯಸಂವಾಸೋ ಗೃಧ್ಯೇದೇಷು ನ ಪಂಡಿತಃ||
ಜೀವ, ರೂಪ, ಯೌವನ, ದ್ರವ್ಯಸಂಚಯ, ಆರೋಗ್ಯ, ಪ್ರಿಯರೊಂದಿಗೆ ವಾಸ ಇವೆಲ್ಲವೂ ಅನಿತ್ಯವಾದವುಗಳು. ಪಂಡಿತನು ಇವುಗಳಲ್ಲಿ ಆಸೆಪಡುವುದಿಲ್ಲ.
11002016a ನ ಜಾನಪದಿಕಂ ದುಃಖಮೇಕಃ ಶೋಚಿತುಮರ್ಹಸಿ|
11002016c ಅಪ್ಯಭಾವೇನ ಯುಜ್ಯೇತ ತಚ್ಚಾಸ್ಯ ನ ನಿವರ್ತತೇ||
ದೇಶಕ್ಕೇ ಒದಗಿಬಂದಿರುವ ದುಃಖವನ್ನು ನಿನಗೊಬ್ಬನಿಗೇ ಬಂದಿರುವ ದುಃಖವೆಂದು ಶೋಕಿಸುವುದು ಸರಿಯಲ್ಲ. ಶೋಕಿಸುತ್ತಲೇ ಮರಣಹೊಂದಿದರೂ ಅವನ ಶೋಕವು ಹೋಗುವುದಿಲ್ಲ.
11002017a ಅಶೋಚನ್ಪ್ರತಿಕುರ್ವೀತ ಯದಿ ಪಶ್ಯೇತ್ಪರಾಕ್ರಮಮ್|
11002017c ಭೈಷಜ್ಯಮೇತದ್ದುಃಖಸ್ಯ ಯದೇತನ್ನಾನುಚಿಂತಯೇತ್|
11002017e ಚಿಂತ್ಯಮಾನಂ ಹಿ ನ ವ್ಯೇತಿ ಭೂಯಶ್ಚಾಪಿ ವಿವರ್ಧತೇ||
ಪರಾಕ್ರಮವಿರುವವನು ಶೋಕಿಸುವುದಕ್ಕೆ ಬದಲಾಗಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ನಡೆದುಹೋಗಿದುದರ ಕುರಿತು ಚಿಂತಿಸದಿರುವುದೇ ದುಃಖಕ್ಕೆ ಚಿಕಿತ್ಸೆ. ಚಿಂತೆಯಿಂದ ದುಃಖವು ಇನ್ನೂ ಹೆಚ್ಚಾಗುವುದೇ ಹೊರತು ಶೋಕವು ಹೊರಟುಹೋಗುವುದಿಲ್ಲ.
11002018a ಅನಿಷ್ಟಸಂಪ್ರಯೋಗಾಚ್ಚ ವಿಪ್ರಯೋಗಾತ್ಪ್ರಿಯಸ್ಯ ಚ|
11002018c ಮನುಷ್ಯಾ ಮಾನಸೈರ್ದುಃಖೈರ್ಯುಜ್ಯಂತೇ ಯೇಽಲ್ಪಬುದ್ಧಯಃ||
ಅಲ್ಪಬುದ್ಧಿಯ ಮನುಷ್ಯರು ಅನಿಷ್ಟವನ್ನು ಪಡೆಯುವುದರಿಂದ ಮತ್ತು ಪ್ರಿಯವಾದುದ್ದನ್ನು ಕಳೆದುಕೊಳ್ಳುವುದರಿಂದ ಮಾನಸಿಕ ದುಃಖವನ್ನು ಅನುಭವಿಸುತ್ತಾರೆ.
11002019a ನಾರ್ಥೋ ನ ಧರ್ಮೋ ನ ಸುಖಂ ಯದೇತದನುಶೋಚಸಿ|
11002019c ನ ಚ ನಾಪೈತಿ ಕಾರ್ಯಾರ್ಥಾತ್ತ್ರಿವರ್ಗಾಚ್ಚೈವ ಭ್ರಶ್ಯತೇ||
ಈ ಶೋಕವು ಅರ್ಥ-ಧರ್ಮ-ಸುಖಗಳ ಸಾಧಕವಲ್ಲ. ಈ ರೀತಿಯ ದುಃಖವು ಮನುಷ್ಯನನ್ನು ಮಾಡಬೇಕಾದ ಕರ್ತವ್ಯದಿಂದ ಭ್ರಷ್ಟನನ್ನಾಗಿಸುತ್ತದೆ.
11002020a ಅನ್ಯಾಮನ್ಯಾಂ ಧನಾವಸ್ಥಾಂ ಪ್ರಾಪ್ಯ ವೈಶೇಷಿಕೀಂ ನರಾಃ|
11002020c ಅಸಂತುಷ್ಟಾಃ ಪ್ರಮುಹ್ಯಂತಿ ಸಂತೋಷಂ ಯಾಂತಿ ಪಂಡಿತಾಃ||
ಧನದ ಬೇರೆ ಬೇರೆ ಅವಸ್ಥಾ-ವಿಶೇಷಗಳನ್ನು ಹೊಂದಿ ಅಸಂತುಷ್ಟರಾಗಿ ನರರು ವಿಮೋಹಗೊಳ್ಳುತ್ತಾರೆ. ಆದರೆ ಪಂಡಿತರು ಅವುಗಳಿಂದ ಸಂತೋಷವನ್ನೇ ಪಡೆಯುತ್ತಾರೆ.
11002021a ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಚಾರೀರಮೌಷಧೈಃ|
11002021c ಏತಜ್ಞಾನಸ್ಯ ಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್||
ಮಾನಸಿಕ ದುಃಖವನ್ನು ಪ್ರಜ್ಞೆಯಿಂದಲೂ, ಶಾರೀರಿಕ ದುಃಖವನ್ನು ಔಷಧಗಳಿಂದಲೂ ಪರಿಹರಿಸಿಕೊಳ್ಳಬೇಕು. ಇದು ಜ್ಞಾನದ ಸಾಮರ್ಥ್ಯ. ಬಾಲಕರ ಸಮನಾಗಿರಬಾರದು.
11002022a ಶಯಾನಂ ಚಾನುಶಯತಿ ತಿಷ್ಠಂತಂ ಚಾನುತಿಷ್ಠತಿ|
11002022c ಅನುಧಾವತಿ ಧಾವಂತಂ ಕರ್ಮ ಪೂರ್ವಕೃತಂ ನರಮ್||
ಪೂರ್ವಕೃತ ಕರ್ಮವು ಮನುಷ್ಯನು ಮಲಗಿರುವಾಗ ಜೊತೆಯಲ್ಲಿಯೇ ಮಲಗುತ್ತದೆ, ನಿಂತಿರುವಾಗ ಜೊತೆಯಲ್ಲಿಯೇ ನಿಂತಿರುತ್ತದೆ ಮತ್ತು ಓಡಿ ಹೋಗುವಾಗ ಜೊತೆಯಲ್ಲಿಯೇ ಓಡಿ ಬರುತ್ತದೆ.
11002023a ಯಸ್ಯಾಂ ಯಸ್ಯಾಮವಸ್ಥಾಯಾಂ ಯತ್ಕರೋತಿ ಶುಭಾಶುಭಮ್|
11002023c ತಸ್ಯಾಂ ತಸ್ಯಾಮವಸ್ಥಾಯಾಂ ತತ್ತತ್ಫಲಮುಪಾಶ್ನುತೇ||
ಯಾವ ಯಾವ ಅವಸ್ಥೆಗಳಲ್ಲಿ ಶುಭಾಶುಭ ಕರ್ಮಗಳನ್ನು ಮಾಡಿರುತ್ತಾನೋ ಅವುಗಳನ್ನು ಮನುಷ್ಯನು ಆಯಾ ಅವಸ್ಥೆಗಳಲ್ಲಿ ಅದೇ ಫಲಗಳನ್ನು ಪಡೆಯುತ್ತಾನೆ.”
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ದ್ವಿತೀಯೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಎರಡನೇ ಅಧ್ಯಾಯವು.