ಶಲ್ಯಪರ್ವ: ಸಾರಸ್ವತಪರ್ವ
೪೮
ಇಂದ್ರತೀರ್ಥ ಮಹಾತ್ಮೆ (೧-೬). ಯಮುನಾ ತೀರ್ಥ ಮತ್ತು ಆದಿತ್ಯ ತೀರ್ಥಗಳ ಚರಿತ್ರೆ (೭-೨೩).
09048001 ವೈಶಂಪಾಯನ ಉವಾಚ
09048001a ಇಂದ್ರತೀರ್ಥಂ ತತೋ ಗತ್ವಾ ಯದೂನಾಂ ಪ್ರವರೋ ಬಲೀ|
09048001c ವಿಪ್ರೇಭ್ಯೋ ಧನರತ್ನಾನಿ ದದೌ ಸ್ನಾತ್ವಾ ಯಥಾವಿಧಿ||
ವೈಶಂಪಾಯನನು ಹೇಳಿದನು: “ಯದುಶ್ರೇಷ್ಠ ಬಲರಾಮನು ಇಂದ್ರತೀರ್ಥಕ್ಕೆ ಹೋಗಿ ಅಲ್ಲಿ ಯಥಾವಿಧಿಯಾಗಿ ಸ್ನಾನಮಾಡಿ ಧನರತ್ನಾದಿಗಳನ್ನು ವಿಪ್ರರಿಗೆ ದಾನವನ್ನಾಗಿತ್ತನು.
09048002a ತತ್ರ ಹ್ಯಮರರಾಜೋಽಸಾವೀಜೇ ಕ್ರತುಶತೇನ ಹ|
09048002c ಬೃಹಸ್ಪತೇಶ್ಚ ದೇವೇಶಃ ಪ್ರದದೌ ವಿಪುಲಂ ಧನಂ||
ಅಲ್ಲಿಯೇ ಅಮರರಾಜನು ನೂರು ಕ್ರತುಗಳನ್ನು ನೆರವೇರಿಸಿದ್ದನು ಮತ್ತು ದೇವೇಶನು ಬೃಹಸ್ಪತಿಗೆ ವಿಪುಲ ಧನವನ್ನು ದಾನಮಾಡಿದ್ದನು.
09048003a ನಿರರ್ಗಲಾನ್ಸಜಾರೂಥ್ಯಾನ್ಸರ್ವಾನ್ವಿವಿಧದಕ್ಷಿಣಾನ್|
09048003c ಆಜಹಾರ ಕ್ರತೂಂಸ್ತತ್ರ ಯಥೋಕ್ತಾನ್ವೇದಪಾರಗೈಃ||
ವೇದಪಾರಂಗತರು ಹೇಳಿರುವಂತೆ ಎಲ್ಲವನ್ನೂ ಸಜ್ಜುಗೊಳಿಸಿ ವಿವಿಧ ದಕ್ಷಿಣೆಗಳನ್ನಿತ್ತು ಅವನು ನಿರರ್ಗಲವಾಗಿ ಅಲ್ಲಿ ಕ್ರತುಗಳನ್ನು ಪೂರೈಸಿದನು.
09048004a ತಾನ್ಕ್ರತೂನ್ಭರತಶ್ರೇಷ್ಠ ಶತಕೃತ್ವೋ ಮಹಾದ್ಯುತಿಃ|
09048004c ಪೂರಯಾಮಾಸ ವಿಧಿವತ್ತತಃ ಖ್ಯಾತಃ ಶತಕ್ರತುಃ||
ಭರತಶ್ರೇಷ್ಠ! ನೂರು ಕ್ರತುಗಳನ್ನು ವಿಧಿವತ್ತಾಗಿ ಪೂರೈಸಿ ಆ ಮಹಾದ್ಯುತಿಯು ಶತಕ್ರತುವೆಂದು ವಿಖ್ಯಾತನಾದನು.
09048005a ತಸ್ಯ ನಾಮ್ನಾ ಚ ತತ್ತೀರ್ಥಂ ಶಿವಂ ಪುಣ್ಯಂ ಸನಾತನಂ|
09048005c ಇಂದ್ರತೀರ್ಥಮಿತಿ ಖ್ಯಾತಂ ಸರ್ವಪಾಪಪ್ರಮೋಚನಂ||
ಸರ್ವಪಾಪಗಳನ್ನೂ ತೊಳೆಯುವ ಆ ಶುಭ, ಪುಣ್ಯ, ಸನಾತನ ತೀರ್ಥವು ಇಂದ್ರತೀರ್ಥವೆಂಬ ಹೆಸರಿನಿಂದ ಖ್ಯಾತವಾಯಿತು.
09048006a ಉಪಸ್ಪೃಶ್ಯ ಚ ತತ್ರಾಪಿ ವಿಧಿವನ್ಮುಸಲಾಯುಧಃ|
09048006c ಬ್ರಾಹ್ಮಣಾನ್ಪೂಜಯಿತ್ವಾ ಚ ಪಾನಾಚ್ಚಾದನಭೋಜನೈಃ|
09048006e ಶುಭಂ ತೀರ್ಥವರಂ ತಸ್ಮಾದ್ರಾಮತೀರ್ಥಂ ಜಗಾಮ ಹ||
ಅಲ್ಲಿ ಕೂಡ ವಿಧಿವತ್ತಾಗಿ ಸ್ನಾನಮಾಡಿ ಮುಸಲಾಯುಧನು ಪಾನೀಯ-ವಸ್ತ್ರ-ಭೋಜನಗಳಿಂದ ಬ್ರಾಹ್ಮಣರನ್ನು ಪೂಜಿಸಿ, ಅಲ್ಲಿಂದ ತೀರ್ಥಶ್ರೇಷ್ಠ ಶುಭ ರಾಮತೀರ್ಥಕ್ಕೆ ಹೋದನು.
09048007a ಯತ್ರ ರಾಮೋ ಮಹಾಭಾಗೋ ಭಾರ್ಗವಃ ಸುಮಹಾತಪಾಃ|
09048007c ಅಸಕೃತ್ಪೃಥಿವೀಂ ಸರ್ವಾಂ ಹತಕ್ಷತ್ರಿಯಪುಂಗವಾಂ||
09048008a ಉಪಾಧ್ಯಾಯಂ ಪುರಸ್ಕೃತ್ಯ ಕಶ್ಯಪಂ ಮುನಿಸತ್ತಮಂ|
09048008c ಅಯಜದ್ವಾಜಪೇಯೇನ ಸೋಽಶ್ವಮೇಧಶತೇನ ಚ||
09048008e ಪ್ರದದೌ ದಕ್ಷಿಣಾರ್ಥಂ ಚ ಪೃಥಿವೀಂ ವೈ ಸಸಾಗರಾಂ||
ಅಲ್ಲಿ ಮಹಾತಪಸ್ವಿ ಮಹಾಭಾಗ ಭಾರ್ಗವ ರಾಮನು ಪೃಥ್ವಿಯ ಸರ್ವ ಕ್ಷತ್ರಿಯ ಪುಂಗವರನ್ನೂ ಸಂಹರಿಸಿ ಮುನಿಸತ್ತಮ ಕಶ್ಯಪನನ್ನು ಉಪಾಧ್ಯಾಯನನ್ನಾಗಿ ಗೌರವಿಸಿ ವಾಜಪೇಯ ಮತ್ತು ನೂರು ಅಶ್ವಮೇಧಗಳನ್ನು ನಡೆಸಿದ್ದನು ಮತ್ತು ಸಾಗರಗಳೊಂದಿಗೆ ಈ ಪೃಥ್ವಿಯನ್ನು ದಕ್ಷಿಣಾರ್ಥವಾಗಿ ಕೊಟ್ಟಿದ್ದನು.
09048009a ರಾಮೋ ದತ್ತ್ವಾ ಧನಂ ತತ್ರ ದ್ವಿಜೇಭ್ಯೋ ಜನಮೇಜಯ|
09048009c ಉಪಸ್ಪೃಶ್ಯ ಯಥಾನ್ಯಾಯಂ ಪೂಜಯಿತ್ವಾ ತಥಾ ದ್ವಿಜಾನ್||
09048010a ಪುಣ್ಯೇ ತೀರ್ಥೇ ಶುಭೇ ದೇಶೇ ವಸು ದತ್ತ್ವಾ ಶುಭಾನನಃ|
09048010c ಮುನೀಂಶ್ಚೈವಾಭಿವಾದ್ಯಾಥ ಯಮುನಾತೀರ್ಥಮಾಗಮತ್||
ಜನಮೇಜಯ! ಆ ಪುಣ್ಯ ತೀರ್ಥ ಶುಭ ದೇಶದಲ್ಲಿ ಯಥಾನ್ಯಾಯವಾಗಿ ಸ್ನಾನಮಾಡಿ ದ್ವಿಜರನ್ನು ಪೂಜಿಸಿ, ದ್ವಿಜರಿಗೆ ಧನ-ಸಂಪತ್ತುಗಳನ್ನಿತ್ತು, ಮುನಿಗಳಿಗೆ ಅಭಿವಂದಿಸಿ ಶುಭಾನನ ಬಲರಾಮನು ಯಮುನಾ ತೀರ್ಥಕ್ಕೆ ಆಗಮಿಸಿದನು.
09048011a ಯತ್ರಾನಯಾಮಾಸ ತದಾ ರಾಜಸೂಯಂ ಮಹೀಪತೇ|
09048011c ಪುತ್ರೋಽದಿತೇರ್ಮಹಾಭಾಗೋ ವರುಣೋ ವೈ ಸಿತಪ್ರಭಃ||
ಮಹೀಪತೇ! ಅಲ್ಲಿಯೇ ಅದಿತಿಯ ಪುತ್ರ ಮಹಾಭಾಗ ಸಿತಪ್ರಭ ವರುಣನು ರಾಜಸೂಯ ಯಾಗವನ್ನು ಮಾಡಿದ್ದನು.
09048012a ತತ್ರ ನಿರ್ಜಿತ್ಯ ಸಂಗ್ರಾಮೇ ಮಾನುಷಾನ್ದೈವತಾಂಸ್ತಥಾ|
09048012c ವರಂ ಕ್ರತುಂ ಸಮಾಜಹ್ರೇ ವರುಣಃ ಪರವೀರಹಾ||
ಸಂಗ್ರಾಮದಲ್ಲಿ ಮನುಷ್ಯ-ದೇವತೆಗಳನ್ನು ಜಯಿಸಿ ಪರವೀರಹ ವರುಣನು ಆ ಶ್ರೇಷ್ಠಕ್ರತುವನ್ನು ಕೈಗೊಂಡಿದ್ದನು.
09048013a ತಸ್ಮಿನ್ ಕ್ರತುವರೇ ವೃತ್ತೇ ಸಂಗ್ರಾಮಃ ಸಮಜಾಯತ|
09048013c ದೇವಾನಾಂ ದಾನವಾನಾಂ ಚ ತ್ರೈಲೋಕ್ಯಸ್ಯ ಕ್ಷಯಾವಹಃ||
ಆ ಶ್ರೇಷ್ಠ ಕ್ರತುವು ನಡೆಯುತ್ತಲೇ ಮೂರುಲೋಕಗಳನ್ನು ನಾಶಪಡಿಸುವ ದೇವ-ದಾನವ ಸಂಗ್ರಾಮವು ಪ್ರಾರಂಭವಾಯಿತು.
09048014a ರಾಜಸೂಯೇ ಕ್ರತುಶ್ರೇಷ್ಠೇ ನಿವೃತ್ತೇ ಜನಮೇಜಯ|
09048014c ಜಾಯತೇ ಸುಮಹಾಘೋರಃ ಸಂಗ್ರಾಮಃ ಕ್ಷತ್ರಿಯಾನ್ಪ್ರತಿ||
ಜನಮೇಜಯ! ಶ್ರೇಷ್ಠ ಕ್ರತು ರಾಜಸೂಯವು ಮುಗಿದನಂತರ ಕ್ಷತ್ರಿಯರಲ್ಲಿ ಮಹಾಘೋರ ಸಂಗ್ರಾಮವು ಹುಟ್ಟುತ್ತದೆ.
09048015a ಸೀರಾಯುಧಸ್ತದಾ ರಾಮಸ್ತಸ್ಮಿಂಸ್ತೀರ್ಥವರೇ ತದಾ|
09048015c ತತ್ರ ಸ್ನಾತ್ವಾ ಚ ದತ್ತ್ವಾ ಚ ದ್ವಿಜೇಭ್ಯೋ ವಸು ಮಾಧವಃ||
ಆ ಶ್ರೇಷ್ಠ ತೀರ್ಥದಲ್ಲಿ ಹಲಾಯುಧ ಮಾಧವ ರಾಮನು ಸ್ನಾನಮಾಡಿ ದ್ವಿಜರಿಗೆ ಸಂಪತ್ತನ್ನು ದಾನಮಾಡಿದನು.
09048016a ವನಮಾಲೀ ತತೋ ಹೃಷ್ಟಃ ಸ್ತೂಯಮಾನೋ ದ್ವಿಜಾತಿಭಿಃ|
09048016c ತಸ್ಮಾದಾದಿತ್ಯತೀರ್ಥಂ ಚ ಜಗಾಮ ಕಮಲೇಕ್ಷಣಃ||
ಕಮಲೇಕ್ಷಣ ವನಮಾಲಿಯು ದ್ವಿಜರಿಂದ ಸ್ತುತಿಸಲ್ಪಟ್ಟು ಹೃಷ್ಟನಾಗಿ ಅಲ್ಲಿಂದ ಆದಿತ್ಯತೀರ್ಥಕ್ಕೆ ಹೋದನು.
09048017a ಯತ್ರೇಷ್ಟ್ವಾ ಭಗವಾನ್ಜ್ಯೋತಿರ್ಭಾಸ್ಕರೋ ರಾಜಸತ್ತಮ|
09048017c ಜ್ಯೋತಿಷಾಮಾಧಿಪತ್ಯಂ ಚ ಪ್ರಭಾವಂ ಚಾಭ್ಯಪದ್ಯತ||
ರಾಜಸತ್ತಮ! ಅಲ್ಲಿಯೇ ಭಗವಾನ್ ಜ್ಯೋತಿರ್ಮಯ ಭಾಸ್ಕರನು ಯಜ್ಞಮಾಡಿ ನಕ್ಷತ್ರಗಳ ಅಧಿಪತ್ಯವನ್ನೂ ಪ್ರಭಾವವನ್ನೂ ಪಡೆದನು.
09048018a ತಸ್ಯಾ ನದ್ಯಾಸ್ತು ತೀರೇ ವೈ ಸರ್ವೇ ದೇವಾಃ ಸವಾಸವಾಃ|
09048018c ವಿಶ್ವೇದೇವಾಃ ಸಮರುತೋ ಗಂಧರ್ವಾಪ್ಸರಸಶ್ಚ ಹ||
09048019a ದ್ವೈಪಾಯನಃ ಶುಕಶ್ಚೈವ ಕೃಷ್ಣಶ್ಚ ಮಧುಸೂದನಃ|
09048019c ಯಕ್ಷಾಶ್ಚ ರಾಕ್ಷಸಾಶ್ಚೈವ ಪಿಶಾಚಾಶ್ಚ ವಿಶಾಂ ಪತೇ||
09048020a ಏತೇ ಚಾನ್ಯೇ ಚ ಬಹವೋ ಯೋಗಸಿದ್ಧಾಃ ಸಹಸ್ರಶಃ|
09048020c ತಸ್ಮಿಂಸ್ತೀರ್ಥೇ ಸರಸ್ವತ್ಯಾಃ ಶಿವೇ ಪುಣ್ಯೇ ಪರಂತಪ||
ಪರಂತಪ! ವಿಶಾಂಪತೇ! ಆ ಪುಣ್ಯ ಶಿವೆ ಸರಸ್ವತೀ ನದಿಯ ತೀರದ ತಿರ್ಥದಲ್ಲಿಯೇ ವಾಸವನೊಂದಿಗೆ ಸರ್ವ ದೇವತೆಗಳೂ, ವಿಶ್ವೇ ದೇವರೂ, ಮರುತ-ಗಂಧರ್ವ-ಅಪ್ಸರೆಯರೂ, ದ್ವೈಪಾಯನ, ಶುಕ, ಮಧುಸೂದನ ಕೃಷ್ಣ, ಯಕ್ಷ-ರಾಕ್ಷಸ-ಪಿಶಾಚಿಗಳೂ, ಇನ್ನೂ ಅನೇಕ ಸಹಸ್ರರು ಯೋಗಸಿದ್ಧಿಗಳನ್ನು ಪಡೆದರು.
09048021a ತತ್ರ ಹತ್ವಾ ಪುರಾ ವಿಷ್ಣುರಸುರೌ ಮಧುಕೈಟಭೌ|
09048021c ಆಪ್ಲುತೋ ಭರತಶ್ರೇಷ್ಠ ತೀರ್ಥಪ್ರವರ ಉತ್ತಮೇ||
ಭರತಶ್ರೇಷ್ಠ! ಹಿಂದೆ ವಿಷ್ಣುವು ಅಸುರ ಮಧು-ಕೈಟಭರನ್ನು ಸಂಹರಿಸಿ ಈ ಉತ್ತಮ ತೀರ್ಥಪ್ರವರಲ್ಲಿ ಸ್ನಾನಮಾಡಿದ್ದನು.
09048022a ದ್ವೈಪಾಯನಶ್ಚ ಧರ್ಮಾತ್ಮಾ ತತ್ರೈವಾಪ್ಲುತ್ಯ ಭಾರತ|
09048022c ಸಂಪ್ರಾಪ್ತಃ ಪರಮಂ ಯೋಗಂ ಸಿದ್ಧಿಂ ಚ ಪರಮಾಂ ಗತಃ||
ಭಾರತ! ಧರ್ಮಾತ್ಮ ದ್ವೈಪಾಯನನೂ ಕೂಡ ಅಲ್ಲಿಯೇ ಸ್ನಾನಮಾಡಿ ಪರಮ ಯೋಗ-ಸಿದ್ಧಿಗಳನ್ನೂ ಪರಮ ಗತಿಯನ್ನೂ ಪಡೆದಿದ್ದನು.
09048023a ಅಸಿತೋ ದೇವಲಶ್ಚೈವ ತಸ್ಮಿನ್ನೇವ ಮಹಾತಪಾಃ|
09048023c ಪರಮಂ ಯೋಗಮಾಸ್ಥಾಯ ಋಷಿರ್ಯೋಗಮವಾಪ್ತವಾನ್||
ಮಹಾತಪಸ್ವಿ ಅಸಿತ ದೇವಲನು ಕೂಡ ಅಲ್ಲಿಯೇ ಪರಮಯೋಗವನ್ನಾಶ್ರಯಿಸಿ ಋಷಿಯೋಗವನ್ನು ಪಡೆದಿದ್ದನು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಅಷ್ಠಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ