ಶಲ್ಯಪರ್ವ: ಸಾರಸ್ವತಪರ್ವ
೪೦
ದಾಲ್ಭ್ಯ ಬಕನ ಚರಿತ್ರೆ(೧-೩೫).
09040001 ವೈಶಂಪಾಯನ ಉವಾಚ
09040001a ಬ್ರಹ್ಮಯೋನಿಭಿರಾಕೀರ್ಣಂ ಜಗಾಮ ಯದುನಂದನಃ|
09040001c ಯತ್ರ ದಾಲ್ಭ್ಯೋ ಬಕೋ ರಾಜನ್ಪಶ್ವರ್ಥಂ ಸುಮಹಾತಪಾಃ||
09040001e ಜುಹಾವ ಧೃತರಾಷ್ಟ್ರಸ್ಯ ರಾಷ್ಟ್ರಂ ವೈಚಿತ್ರವೀರ್ಯಿಣಃ||
ವೈಶಂಪಾಯನನು ಹೇಳಿದನು: “ಬ್ರಹ್ಮಯೋನಿಯಿಂದ ಯದುನಂದನನು ಆಕೀರ್ಣಕ್ಕೆ ಹೋದನು. ರಾಜನ್! ಅಲ್ಲಿ ಪಶುಗೋಸ್ಕರವಾಗಿ ಮಹಾತಪಸ್ವಿ ದಾಲ್ಭ್ಯ ಬಕನು ವಿಚಿತ್ರವೀರ್ಯನ ಮಗ ಧೃತರಾಷ್ಟ್ರನ ರಾಷ್ಟ್ರವನ್ನೇ ಹೋಮಮಾಡಿದನು.
09040002a ತಪಸಾ ಘೋರರೂಪೇಣ ಕರ್ಶಯನ್ದೇಹಮಾತ್ಮನಃ|
09040002c ಕ್ರೋಧೇನ ಮಹತಾವಿಷ್ಟೋ ಧರ್ಮಾತ್ಮಾ ವೈ ಪ್ರತಾಪವಾನ್||
ಅವನು ಘೋರರೂಪದ ತಪಸ್ಸಿನಿಂದ ತನ್ನ ದೇಹವನ್ನು ಕೃಶಗೊಳಿಸಿದ್ದನು. ಆದರೆ ಆ ಧರ್ಮಾತ್ಮ ಪ್ರತಾಪವಾನನು ಮಹಾಕ್ರೋಧಿಷ್ಟನಾಗಿದ್ದನು.
09040003a ಪುರಾ ಹಿ ನೈಮಿಷೇಯಾಣಾಂ ಸತ್ರೇ ದ್ವಾದಶವಾರ್ಷಿಕೇ|
09040003c ವೃತ್ತೇ ವಿಶ್ವಜಿತೋಽಮ್ತೇ ವೈ ಪಾಂಚಾಲಾನೃಷಯೋಽಗಮನ್||
ಹಿಂದೆ ನೈಮಿಷವಾಸಿಗಳ ಹನ್ನೆರಡು ವರ್ಷಗಳ ಸತ್ರವು ನಡೆಯುತ್ತಿರಲು ವಿಶ್ವಜಿತು ಯಾಗವು ಸಂಪೂರ್ಣಗೊಳ್ಳಲು ಋಷಿಗಳು ಪಾಂಚಾಲರಲ್ಲಿಗೆ ಹೋದರು.
09040004a ತತ್ರೇಶ್ವರಮಯಾಚಂತ ದಕ್ಷಿಣಾರ್ಥಂ ಮನೀಷಿಣಃ|
09040004c ಬಲಾನ್ವಿತಾನ್ವತ್ಸತರಾನ್ನಿರ್ವ್ಯಾಧೀನೇಕವಿಂಶತಿಂ||
ಅಲ್ಲಿಗೆ ಹೋಗಿ ರಾಜನಿಂದ ದಕ್ಷಿಣೆಯನ್ನು ಕೇಳಿ ಆ ಮುನಿಗಳು ಬಲಾನ್ವಿತ, ರೋಗರಹಿತ ಇಪ್ಪತ್ತೊಂದು ಹೋರಿಕರುಗಳನ್ನು ಪಡೆದರು.
09040005a ತಾನಬ್ರವೀದ್ಬಕೋ ವೃದ್ಧೋ ವಿಭಜಧ್ವಂ ಪಶೂನಿತಿ|
09040005c ಪಶೂನೇತಾನಹಂ ತ್ಯಕ್ತ್ವಾ ಭಿಕ್ಷಿಷ್ಯೇ ರಾಜಸತ್ತಮಂ||
ಆಗ ವೃದ್ಧ ಬಕನು ಅವರಿಗೆ “ಪಶುಗಳನ್ನು ನೀವೇ ಹಂಚಿಕೊಳ್ಳಿರಿ. ನನ್ನ ಪಾಲಿನ ಪಶುವನ್ನು ನಿಮಗೇ ಬಿಟ್ಟುಕೊಟ್ಟು ನಾನು ಇನ್ನೊಬ್ಬ ರಾಜಸತ್ತಮನಲ್ಲಿ ಭಿಕ್ಷೆಯಾಗಿ ಪಡೆಯುತ್ತೇನೆ!”
09040006a ಏವಮುಕ್ತ್ವಾ ತತೋ ರಾಜನೃಷೀನ್ಸರ್ವಾನ್ಪ್ರತಾಪವಾನ್|
09040006c ಜಗಾಮ ಧೃತರಾಷ್ಟ್ರಸ್ಯ ಭವನಂ ಬ್ರಾಹ್ಮಣೋತ್ತಮಃ||
ರಾಜನ್! ಹೀಗೆ ಆ ಋಷಿಗಳೆಲ್ಲರಿಗೆ ಹೇಳಿ ಆ ಪ್ರತಾಪವಾನ್ ಬ್ರಾಹ್ಮಣೋತ್ತಮನು ಧೃತರಾಷ್ಟ್ರನ ಭವನಕ್ಕೆ ಹೋದನು.
09040007a ಸ ಸಮೀಪಗತೋ ಭೂತ್ವಾ ಧೃತರಾಷ್ಟ್ರಂ ಜನೇಶ್ವರಂ|
09040007c ಅಯಾಚತ ಪಶೂನ್ದಾಲ್ಭ್ಯಃ ಸ ಚೈನಂ ರುಷಿತೋಽಬ್ರವೀತ್||
ಜನೇಶ್ವರ ಧೃತರಾಷ್ಟ್ರನ ಸಮೀಪ ಹೋಗಿ ದಾಲ್ಭ್ಯನು ಪಶುಗಳನ್ನು ಯಾಚಿಸಿದನು. ಆಗ ರಾಜನು ರೋಷಗೊಂಡು ಅವನೊಂದಿಗೆ ಮಾತನಾಡಿದನು.
09040008a ಯದೃಚ್ಚಯಾ ಮೃತಾ ದೃಷ್ಟ್ವಾ ಗಾಸ್ತದಾ ನೃಪಸತ್ತಮ|
09040008c ಏತಾನ್ಪಶೂನ್ನಯ ಕ್ಷಿಪ್ರಂ ಬ್ರಹ್ಮಬಂಧೋ ಯದೀಚ್ಚಸಿ||
ಆ ನೃಪಸತ್ತಮನು ದೈವೇಚ್ಛೆಯಿಂದ ಮೃತಗೊಂಡಿದ್ದ ಗೋವುಗಳನ್ನು ನೋಡಿ “ಬ್ರಹ್ಮಬಂಧುವೇ! ನಿನಗೆ ಇಷ್ಟವಾದರೆ ಈ ಪಶುಗಳನ್ನು ಬೇಗನೇ ಕೊಂಡೊಯ್ಯಿ!” ಎಂದನು.
09040009a ಋಷಿಸ್ತ್ವಥ ವಚಃ ಶ್ರುತ್ವಾ ಚಿಂತಯಾಮಾಸ ಧರ್ಮವಿತ್|
09040009c ಅಹೋ ಬತ ನೃಶಂಸಂ ವೈ ವಾಕ್ಯಮುಕ್ತೋಽಸ್ಮಿ ಸಂಸದಿ||
ಆ ಮಾತನ್ನು ಕೇಳಿ ಧರ್ಮವಿದು ಋಷಿಯು “ಅಯ್ಯೋ! ಸಂಸದಿಯಲ್ಲಿ ಇಂತಹ ಕಠೋರ ಮಾತುಗಳನ್ನು ಕೇಳಬೇಕಾಯಿತಲ್ಲ!” ಎಂದು ಚಿಂತಿಸಿದನು.
09040010a ಚಿಂತಯಿತ್ವಾ ಮುಹೂರ್ತಂ ಚ ರೋಷಾವಿಷ್ಟೋ ದ್ವಿಜೋತ್ತಮಃ|
09040010c ಮತಿಂ ಚಕ್ರೇ ವಿನಾಶಾಯ ಧೃತರಾಷ್ಟ್ರಸ್ಯ ಭೂಪತೇಃ||
ಮುಹೂರ್ತಕಾಲ ಚಿಂತಿಸಿ ರೋಷಾವಿಷ್ಟನಾದ ಆ ದ್ವಿಜೋತ್ತಮನು ಭೂಪತಿ ಧೃತರಾಷ್ಟ್ರನ ವಿನಾಶದ ಕುರಿತು ನಿಶ್ಚಯಿಸಿದನು.
09040011a ಸ ಉತ್ಕೃತ್ಯ ಮೃತಾನಾಂ ವೈ ಮಾಂಸಾನಿ ದ್ವಿಜಸತ್ತಮಃ|
09040011c ಜುಹಾವ ಧೃತರಾಷ್ಟ್ರಸ್ಯ ರಾಷ್ಟ್ರಂ ನರಪತೇಃ ಪುರಾ||
ಆ ದ್ವಿಜಸತ್ತಮನು ಮೃತ ಪಶುಗಳನ್ನೆತ್ತಿಕೊಂಡು ಹೋಗಿ ನರಪತಿ ಧೃತರಾಷ್ಟ್ರನ ರಾಜ್ಯವನ್ನು ಹೋಮಮಾಡಿದನು.
09040012a ಅವಕೀರ್ಣೇ ಸರಸ್ವತ್ಯಾಸ್ತೀರ್ಥೇ ಪ್ರಜ್ವಾಲ್ಯ ಪಾವಕಂ|
09040012c ಬಕೋ ದಾಲ್ಭ್ಯೋ ಮಹಾರಾಜ ನಿಯಮಂ ಪರಮಾಸ್ಥಿತಃ||
09040012e ಸ ತೈರೇವ ಜುಹಾವಾಸ್ಯ ರಾಷ್ಟ್ರಂ ಮಾಂಸೈರ್ಮಹಾತಪಾಃ||
ಮಹಾರಾಜ! ಮಹಾತಪಸ್ವಿ ದಾಲ್ಭ್ಯ ಬಕನು ನಿಯಮಾಸ್ಥಿತನಾಗಿದ್ದುಕೊಂಡು ಸರಸ್ವತಿಯ ಅವಕೀರ್ಣ ತೀರ್ಥದಲ್ಲಿ ಯಜ್ಞೇಶ್ವರನನ್ನು ಪ್ರಜ್ವಲಿಸಿ ಅದರಲ್ಲಿಯೇ ಮಾಂಸಗಳಿಂದ ರಾಷ್ಟ್ರವನ್ನು ಆಹುತಿಯಾಗಿತ್ತನು.
09040013a ತಸ್ಮಿಂಸ್ತು ವಿಧಿವತ್ಸತ್ರೇ ಸಂಪ್ರವೃತ್ತೇ ಸುದಾರುಣೇ|
09040013c ಅಕ್ಷೀಯತ ತತೋ ರಾಷ್ಟ್ರಂ ಧೃತರಾಷ್ಟ್ರಸ್ಯ ಪಾರ್ಥಿವ||
ಪಾರ್ಥಿವ! ಆ ಸುದಾರುಣ ಸತ್ರವು ವಿಧಿವತ್ತಾಗಿ ಮುಂದುವರೆಯುತ್ತಿದ್ದ ಹಾಗೇ ಧೃತರಾಷ್ಟ್ರನ ರಾಷ್ಟ್ರವು ಕ್ಷೀಣಿಸುತ್ತಾ ಬಂದಿತು.
09040014a ಚಿದ್ಯಮಾನಂ ಯಥಾನಂತಂ ವನಂ ಪರಶುನಾ ವಿಭೋ|
09040014c ಬಭೂವಾಪಹತಂ ತಚ್ಚಾಪ್ಯವಕೀರ್ಣಮಚೇತನಂ||
ವಿಭೋ! ಕೊಡಲಿಯಿಂದ ಕತ್ತರಿಸಲ್ಪಡುತ್ತಾ ಅರಣ್ಯವು ಕ್ಷೀಣಗೊಳ್ಳುವಂತೆ ಧೃತರಾಷ್ಟ್ರನ ರಾಷ್ಟ್ರವು ಕ್ಷೀಣಿಸುತ್ತಾ ಬಂದಿತು.
09040015a ದೃಷ್ಟ್ವಾ ತದವಕೀರ್ಣಂ ತು ರಾಷ್ಟ್ರಂ ಸ ಮನುಜಾಧಿಪಃ|
09040015c ಬಭೂವ ದುರ್ಮನಾ ರಾಜಂಶ್ಚಿಂತಯಾಮಾಸ ಚ ಪ್ರಭುಃ||
ರಾಜನ್! ತನ್ನ ರಾಷ್ಟ್ರವು ಕ್ಷೀಣಿಸುತ್ತಿರುವುದನ್ನು ನೋಡಿದ ಪ್ರಭು ಮನುಜಾಧಿಪನು ಚಿಂತಿಸಿ ದುಃಖಿತನಾದನು.
09040016a ಮೋಕ್ಷಾರ್ಥಮಕರೋದ್ಯತ್ನಂ ಬ್ರಾಹ್ಮಣೈಃ ಸಹಿತಃ ಪುರಾ|
09040016c ಅಥಾಸೌ ಪಾರ್ಥಿವಃ ಖಿನ್ನಸ್ತೇ ಚ ವಿಪ್ರಾಸ್ತದಾ ನೃಪ||
ಸಂಕಟ ವಿಮೋಚನೆಗಾಗಿ ಬ್ರಾಹ್ಮಣರೊಂದಿಗೆ ಪ್ರಯತ್ನಪಟ್ಟನು. ನೃಪ! ಆದರೂ ಪಾರ್ಥಿವ ಮತ್ತು ವಿಪ್ರರು ಖಿನ್ನರಾಗಿಯೇ ಇದ್ದರು.
09040017a ಯದಾ ಚಾಪಿ ನ ಶಕ್ನೋತಿ ರಾಷ್ಟ್ರಂ ಮೋಚಯಿತುಂ ನೃಪ|
09040017c ಅಥ ವೈಪ್ರಾಶ್ನಿಕಾಂಸ್ತತ್ರ ಪಪ್ರಚ್ಚ ಜನಮೇಜಯ||
ಜನಮೇಜಯ! ನೃಪ! ರಾಷ್ಟ್ರವನ್ನು ಆ ಸಂಕಟದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲದಾದಾಗ ಅವನು ವೈಪ್ರಾಶ್ನಿಕರನ್ನು ಕೇಳಿದನು.
09040018a ತತೋ ವೈಪ್ರಾಶ್ನಿಕಾಃ ಪ್ರಾಹುಃ ಪಶುವಿಪ್ರಕೃತಸ್ತ್ವಯಾ|
09040018c ಮಾಂಸೈರಭಿಜುಹೋತೀತಿ ತವ ರಾಷ್ಟ್ರಂ ಮುನಿರ್ಬಕಃ||
ಆಗ ವೈಪ್ರಾಶ್ನಿಕರು ಹೇಳಿದರು: “ನೀನು ವಿಪ್ರನಿಗೆ ನೀಡಿದ ಪಶುಗಳ ಮಾಂಸಗಳಿಂದ ಮುನಿ ಬಕನು ನಿನ್ನ ರಾಷ್ಟ್ರವನ್ನು ಆಹುತಿಯನ್ನಾಗಿ ಕೊಟ್ಟು ಹೋಮಿಸುತ್ತಿದ್ದಾನೆ.
09040019a ತೇನ ತೇ ಹೂಯಮಾನಸ್ಯ ರಾಷ್ಟ್ರಸ್ಯಾಸ್ಯ ಕ್ಷಯೋ ಮಹಾನ್|
09040019c ತಸ್ಯೈತತ್ತಪಸಃ ಕರ್ಮ ಯೇನ ತೇ ಹ್ಯನಯೋ ಮಹಾನ್||
09040019e ಅಪಾಂ ಕುಂಜೇ ಸರಸ್ವತ್ಯಾಸ್ತಂ ಪ್ರಸಾದಯ ಪಾರ್ಥಿವ||
ಅವನು ಹಾಗೆ ಹೋಮ ಮಾಡುತ್ತಿರುವುದರಿಂದ ನಿನ್ನ ಮಹಾ ರಾಷ್ಟ್ರವು ಕ್ಷಯವಾಗುತ್ತಿದೆ. ಆ ತಪಸ್ವಿಯ ಕರ್ಮದಿಂದಲೇ ನಿನಗೆ ಈ ಮಹಾ ನಷ್ಟವುಂಟಾಗುತ್ತಿದೆ. ಪಾರ್ಥಿವ! ಸರಸ್ವತೀ ನದಿಯ ತೀರದ ಕುಂಜಗಳಲ್ಲಿರುವ ಅವನನ್ನು ಪ್ರಸನ್ನಗೊಳಿಸು!”
09040020a ಸರಸ್ವತೀಂ ತತೋ ಗತ್ವಾ ಸ ರಾಜಾ ಬಕಮಬ್ರವೀತ್|
09040020c ನಿಪತ್ಯ ಶಿರಸಾ ಭೂಮೌ ಪ್ರಾಂಜಲಿರ್ಭರತರ್ಷಭ||
ಭರತರ್ಷಭ! ಅನಂತರ ರಾಜನು ಸರಸ್ವತೀ ತೀರಕ್ಕೆ ಹೋಗಿ ಭೂಮಿಯ ಮೇಲೆ ಶಿರಸಾ ಬಿದ್ದು ಕೈಮುಗಿದು ಬಕನಿಗೆ ಹೇಳಿದನು:
09040021a ಪ್ರಸಾದಯೇ ತ್ವಾ ಭಗವನ್ನಪರಾಧಂ ಕ್ಷಮಸ್ವ ಮೇ|
09040021c ಮಮ ದೀನಸ್ಯ ಲುಬ್ಧಸ್ಯ ಮೌರ್ಖ್ಯೇಣ ಹತಚೇತಸಃ||
09040021e ತ್ವಂ ಗತಿಸ್ತ್ವಂ ಚ ಮೇ ನಾಥಃ ಪ್ರಸಾದಂ ಕರ್ತುಮರ್ಹಸಿ||
“ಭಗವನ್! ನೀನು ಪ್ರಸನ್ನನಾಗು. ಈ ದೀನ-ಲುಬ್ಧನು ಮೂರ್ಖತನದಿಂದಾಗಿ ಚೇತನವನ್ನೇ ಕಳೆದುಕೊಂಡು ಮಾಡಿದ್ದ ಅಪರಾಧವನ್ನು ಕ್ಷಮಿಸು. ನಾಥ! ನನಗೆ ನೀನೇ ಗತಿ! ನನ್ನ ಮೇಲೆ ಪ್ರಸನ್ನನಾಗಬೇಕು!”
09040022a ತಂ ತಥಾ ವಿಲಪಂತಂ ತು ಶೋಕೋಪಹತಚೇತಸಂ|
09040022c ದೃಷ್ಟ್ವಾ ತಸ್ಯ ಕೃಪಾ ಜಜ್ಞೇ ರಾಷ್ಟ್ರಂ ತಚ್ಚ ವ್ಯಮೋಚಯತ್||
ಶೋಕೋಪಹತಚೇತಸನಾಗಿ ಹಾಗೆ ವಿಲಪಿಸುತ್ತಿರುವ ಅವನನ್ನು ನೋಡಿ ಬಕನಲ್ಲಿ ಕೃಪೆಯುಂಟಾಯಿತು. ಅವನ ರಾಷ್ಟ್ರವನ್ನು ಮುಕ್ತಗೊಳಿಸಿದನು.
09040023a ಋಷಿಃ ಪ್ರಸನ್ನಸ್ತಸ್ಯಾಭೂತ್ಸಂರಂಭಂ ಚ ವಿಹಾಯ ಸಃ|
09040023c ಮೋಕ್ಷಾರ್ಥಂ ತಸ್ಯ ರಾಷ್ಟ್ರಸ್ಯ ಜುಹಾವ ಪುನರಾಹುತಿಂ||
ಋಷಿಯು ಕೋಪವನ್ನು ತೊರೆದು ಪ್ರಸನ್ನನಾದನು. ಅವನ ರಾಜ್ಯದ ವಿಮೋಚನೆಗಾಗಿ ಪುನಃ ಆಹುತಿಯನ್ನು ಹೋಮಿಸಿದನು.
09040024a ಮೋಕ್ಷಯಿತ್ವಾ ತತೋ ರಾಷ್ಟ್ರಂ ಪ್ರತಿಗೃಹ್ಯ ಪಶೂನ್ಬಹೂನ್|
09040024c ಹೃಷ್ಟಾತ್ಮಾ ನೈಮಿಷಾರಣ್ಯಂ ಜಗಾಮ ಪುನರೇವ ಹಿ||
ರಾಷ್ಟ್ರವನ್ನು ಮುಕ್ತಗೊಳಿಸಿ, ಅನೇಕ ಪಶುಗಳನ್ನು ಸ್ವೀಕರಿಸಿ, ಹೃಷ್ಟಾತ್ಮನಾಗಿ ಮುನಿಯು ಪುನಃ ನೈಮಿಷಾರಣ್ಯಕ್ಕೆ ತೆರಳಿದನು.
09040025a ಧೃತರಾಷ್ಟ್ರೋಽಪಿ ಧರ್ಮಾತ್ಮಾ ಸ್ವಸ್ಥಚೇತಾ ಮಹಾಮನಾಃ|
09040025c ಸ್ವಮೇವ ನಗರಂ ರಾಜಾ ಪ್ರತಿಪೇದೇ ಮಹರ್ದ್ಧಿಮತ್||
ಧರ್ಮಾತ್ಮಾ ಮಹಾಮನಸ್ವಿ ರಾಜಾ ಧೃತರಾಷ್ಟ್ರನೂ ಕೂಡ ತನ್ನ ಸಮೃದ್ಧ ನಗರಕ್ಕೆ ಪ್ರಯಾಣಿಸಿದನು.
09040026a ತತ್ರ ತೀರ್ಥೇ ಮಹಾರಾಜ ಬೃಹಸ್ಪತಿರುದಾರಧೀಃ|
09040026c ಅಸುರಾಣಾಮಭಾವಾಯ ಭಾವಾಯ ಚ ದಿವೌಕಸಾಂ||
09040027a ಮಾಂಸೈರಪಿ ಜುಹಾವೇಷ್ಟಿಮಕ್ಷೀಯಂತ ತತೋಽಸುರಾಃ|
09040027c ದೈವತೈರಪಿ ಸಂಭಗ್ನಾ ಜಿತಕಾಶಿಭಿರಾಹವೇ||
ಮಹಾರಾಜ! ಅದೇ ತೀರ್ಥದಲ್ಲಿ ಉದಾರಬುದ್ಧಿ ಬೃಹಸ್ಪತಿಯು ಅಸುರರ ವಿನಾಶಕ್ಕಾಗಿ ಮತ್ತು ದಿವೌಕಸರ ವೃದ್ಧಿಗಾಗಿ ಮಾಂಸವನ್ನು ಆಹುತಿಯನ್ನಾಗಿತ್ತು ಹೋಮಿಸಿದನು. ಆಗ ಅಸುರರು ಕ್ಷೀಣಿಸಿದರು ಮತ್ತು ಯುದ್ಧದಲ್ಲಿ ವಿಜಯೋಲ್ಲಸಿತ ದೇವತೆಗಳಿಂದ ಭಗ್ನರಾದರು.
09040028a ತತ್ರಾಪಿ ವಿಧಿವದ್ದತ್ತ್ವಾ ಬ್ರಾಹ್ಮಣೇಭ್ಯೋ ಮಹಾಯಶಾಃ|
09040028c ವಾಜಿನಃ ಕುಂಜರಾಂಶ್ಚೈವ ರಥಾಂಶ್ಚಾಶ್ವತರೀಯುತಾನ್||
09040029a ರತ್ನಾನಿ ಚ ಮಹಾರ್ಹಾಣಿ ಧನಂ ಧಾನ್ಯಂ ಚ ಪುಷ್ಕಲಂ|
09040029c ಯಯೌ ತೀರ್ಥಂ ಮಹಾಬಾಹುರ್ಯಾಯಾತಂ ಪೃಥಿವೀಪತೇ||
ಪೃಥಿವೀಪತೇ! ಅಲ್ಲಿ ಕೂಡ ವಿಧಿವತ್ತಾಗಿ ಮಹಾಯಶಸ್ವೀ ಬಹಾಬಾಹು ಬಲರಾಮನು ಬ್ರಾಹ್ಮಣರಿಗೆ ಕುದುರೆ-ಆನೆ-ಹೇಸರಗತ್ತೆಗಳ ರಥ-ಬೆಲೆಬಾಳುವ ರತ್ನ-ಧನ-ದಾನ್ಯಗಳನ್ನು ಹೇರಳವಾಗಿತ್ತು ಯಾಯಾತ ತೀರ್ಥಕ್ಕೆ ಹೋದನು.
09040030a ಯತ್ರ ಯಜ್ಞೇ ಯಯಾತೇಸ್ತು ಮಹಾರಾಜ ಸರಸ್ವತೀ|
09040030c ಸರ್ಪಿಃ ಪಯಶ್ಚ ಸುಸ್ರಾವ ನಾಹುಷಸ್ಯ ಮಹಾತ್ಮನಃ||
ಮಹಾರಾಜ! ಅಲ್ಲಿ ನಹುಷನ ಮಗ ಮಹಾತ್ಮ ಯಯಾತಿಯು ಯಜ್ಞಮಾಡಿದಾಗ ಸರಸ್ವತಿಯು ಹಾಲು ತುಪ್ಪಗಳನ್ನು ನೀರಾಗಿ ಹರಿಸಿದ್ದಳು.
09040031a ತತ್ರೇಷ್ಟ್ವಾ ಪುರುಷವ್ಯಾಘ್ರೋ ಯಯಾತಿಃ ಪೃಥಿವೀಪತಿಃ|
09040031c ಆಕ್ರಾಮದೂರ್ಧ್ವಂ ಮುದಿತೋ ಲೇಭೇ ಲೋಕಾಂಶ್ಚ ಪುಷ್ಕಲಾನ್||
ಅಲ್ಲಿಯೇ ಯಾಗಮಾಡಿ ಪುರುಷವ್ಯಾಘ್ರ ಪೃಥಿವೀಪತಿ ಯಯಾತಿಯು ಪುಷ್ಕಲ ಲೋಕಗಳನ್ನು ಪಡೆದು ಮುದಿತನಾಗಿ ಮೇಲೆ ಏರಿದನು.
09040032a ಯಯಾತೇರ್ಯಜಮಾನಸ್ಯ ಯತ್ರ ರಾಜನ್ಸರಸ್ವತೀ|
09040032c ಪ್ರಸೃತಾ ಪ್ರದದೌ ಕಾಮಾನ್ಬ್ರಾಹ್ಮಣಾನಾಂ ಮಹಾತ್ಮನಾಂ||
ರಾಜನ್! ಯಯಾತಿಯು ಯಜಮಾನನಾಗಿದ್ದಾಗ ಅಲ್ಲಿ ಸರಸ್ವತಿಯು ಮಹಾತ್ಮ ಬ್ರಾಹ್ಮಣರು ಬಯಸಿದುದೆಲ್ಲವನ್ನೂ ಒದಗಿಸಿಕೊಟ್ಟಳು.
09040033a ಯತ್ರ ಯತ್ರ ಹಿ ಯೋ ವಿಪ್ರೋ ಯಾನ್ಯಾನ್ ಕಾಮಾನಭೀಪ್ಸತಿ|
09040033c ತತ್ರ ತತ್ರ ಸರಿಚ್ಚ್ರೇಷ್ಠಾ ಸಸರ್ಜ ಸುಬಹೂನ್ ರಸಾನ್||
ಎಲ್ಲೆಲ್ಲಿ ವಿಪ್ರರು ಯಾವ್ಯಾವ ಆಸೆಗಳನ್ನು ಬಯಸಿದರೋ ಅಲ್ಲಲ್ಲಿ ಆ ಸರಿತಶ್ರೇಷ್ಠೆಯು ಅನೇಕ ರಸಗಳನ್ನು ಸೃಷ್ಟಿಸಿದಳು.
09040034a ತತ್ರ ದೇವಾಃ ಸಗಂಧರ್ವಾಃ ಪ್ರೀತಾ ಯಜ್ಞಸ್ಯ ಸಂಪದಾ|
09040034c ವಿಸ್ಮಿತಾ ಮಾನುಷಾಶ್ಚಾಸನ್ದೃಷ್ಟ್ವಾ ತಾಂ ಯಜ್ಞಸಂಪದಂ||
ಗಂಧರ್ವರೊಂದಿಗೆ ದೇವತೆಗಳೂ ಕೂಡ ಆ ಯಜ್ಞದ ವೈಭವವನ್ನು ಕಂಡು ಪ್ರೀತರಾದರು. ಆ ಯಜ್ಞಸಂಪದವನ್ನು ನೋಡಿ ಮನುಷ್ಯರು ವಿಸ್ಮಿತರಾದರು.
09040035a ತತಸ್ತಾಲಕೇತುರ್ಮಹಾಧರ್ಮಸೇತುರ್
ಮಹಾತ್ಮಾ ಕೃತಾತ್ಮಾ ಮಹಾದಾನನಿತ್ಯಃ|
09040035c ವಸಿಷ್ಠಾಪವಾಹಂ ಮಹಾಭೀಮವೇಗಂ
ಧೃತಾತ್ಮಾ ಜಿತಾತ್ಮಾ ಸಮಭ್ಯಾಜಗಾಮ||
ಅನಂತರ ತಾಲಕೇತು-ಮಹಾಧರ್ಮಸೇತು-ಮಹಾತ್ಮಾ-ಕೃತಾತ್ಮಾ-ಧೃತಾತ್ಮಾ-ಜಿತಾತ್ಮ-ನಿತ್ಯವೂ ಮಹಾದಾನಗಳನ್ನು ನೀಡುವ ಬಲರಾಮನು ಮಹಾಭಯಂಕರ ವೇಗದಿಂದ ಹರಿಯುವ ವಸಿಷ್ಠಾಪವಾಹ ತೀರ್ಥಕ್ಕೆ ಹೋದನು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ನಲ್ವತ್ತನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ