ಶಲ್ಯಪರ್ವ: ಹ್ರದಪ್ರವೇಶಪರ್ವ
೨೫
ಭೀಮಸೇನನು ಧೃತರಾಷ್ಟ್ರನ ಹನ್ನೊಂದು ಮಕ್ಕಳನ್ನು - ದುರ್ಮರ್ಷಣ, ಚೈತ್ರ, ಭೂರಿಬಲ, ರವಿ, ಶ್ರುತಾಂತ, ಜಯತ್ಸೇನ, ದುರ್ವಿಮೋಚನ, ದುಷ್ಪ್ರಧರ್ಷ, ಸುಜಾತ, ದುರ್ವಿಷಹ, ಶ್ರುತರ್ವ – ವಧಿಸಿದುದು (೧-೩೭).
09025001 ಸಂಜಯ ಉವಾಚ
09025001a ಗಜಾನೀಕೇ ಹತೇ ತಸ್ಮಿನ್ಪಾಂಡುಪುತ್ರೇಣ ಭಾರತ|
09025001c ವಧ್ಯಮಾನೇ ಬಲೇ ಚೈವ ಭೀಮಸೇನೇನ ಸಂಯುಗೇ||
09025002a ಚರಂತಂ ಚ ತಥಾ ದೃಷ್ಟ್ವಾ ಭೀಮಸೇನಮರಿಂದಮಂ|
09025002c ದಂಡಹಸ್ತಂ ಯಥಾ ಕ್ರುದ್ಧಮಂತಕಂ ಪ್ರಾಣಹಾರಿಣಂ||
ಸಂಜಯನು ಹೇಳಿದನು: “ಭಾರತ! ಪಾಂಡುಪುತ್ರನಿಂದ ಆ ಗಜಸೇನೆಯು ಹತವಾಗಲು ಮತ್ತು ಯುದ್ಧದಲ್ಲಿ ಭೀಮಸೇನನಿಂದ ಸೇನೆಗಳು ಕೂಡ ವಧಿಸಲ್ಪಡಲು ಕ್ರುದ್ಧ ಪ್ರಾಣಹಾರೀ ಅಂತಕನಂತೆ ದಂಡವನ್ನು ಹಿಡಿದು ಅರಿಂದಮ ಭೀಮಸೇನನು ಸಂಚರಿಸುತ್ತಾ ಕಂಡುಬಂದನು.
09025003a ಸಮೇತ್ಯ ಸಮರೇ ರಾಜನ್ ಹತಶೇಷಾಃ ಸುತಾಸ್ತವ|
09025003c ಅದೃಶ್ಯಮಾನೇ ಕೌರವ್ಯೇ ಪುತ್ರೇ ದುರ್ಯೋಧನೇ ತವ||
09025003e ಸೋದರ್ಯಾಃ ಸಹಿತಾ ಭೂತ್ವಾ ಭೀಮಸೇನಮುಪಾದ್ರವನ್||
ರಾಜನ್! ನಿನ್ನ ಪುತ್ರ ಕೌರವ್ಯ ದುರ್ಯೋಧನನು ಅದೃಶ್ಯನಾಗಲು ಅಳಿದುಳಿದ ನಿನ್ನ ಮಕ್ಕಳು ಸಹೋದರರು ಒಟ್ಟಾಗಿ ಸಮರದಲ್ಲಿ ಭೀಮಸೇನನನ್ನು ಆಕ್ರಮಣಿಸಿದರು.
09025004a ದುರ್ಮರ್ಷಣೋ ಮಹಾರಾಜ ಜೈತ್ರೋ ಭೂರಿಬಲೋ ರವಿಃ|
09025004c ಇತ್ಯೇತೇ ಸಹಿತಾ ಭೂತ್ವಾ ತವ ಪುತ್ರಾಃ ಸಮಂತತಃ||
09025004e ಭೀಮಸೇನಮಭಿದ್ರುತ್ಯ ರುರುಧುಃ ಸರ್ವತೋದಿಶಂ||
ಮಹಾರಾಜ! ದುರ್ಮರ್ಷಣ, ಚೈತ್ರ, ಭೂರಿಬಲ, ರವಿ, ಮತ್ತು ಇತರ ನಿನ್ನ ಮಕ್ಕಳು ಒಟ್ಟಾಗಿ ಭೀಮಸೇನನನ್ನು ಆಕ್ರಮಣಿಸಿ ಅವನನ್ನು ಎಲ್ಲ ಕಡೆಗಳಿಂದ ತಡೆದರು.
09025005a ತತೋ ಭೀಮೋ ಮಹಾರಾಜ ಸ್ವರಥಂ ಪುನರಾಸ್ಥಿತಃ|
09025005c ಮುಮೋಚ ನಿಶಿತಾನ್ಬಾಣಾನ್ಪುತ್ರಾಣಾಂ ತವ ಮರ್ಮಸು||
ಮಹಾರಾಜ! ಆಗ ಭೀಮನು ತನ್ನ ರಥವನ್ನು ಪುನಃ ಏರಿ ನಿನ್ನ ಮಕ್ಕಳ ಮರ್ಮಸ್ಥಾನಗಳಿಗೆ ಗುರಿಯಿಟ್ಟು ನಿಶಿತ ಬಾಣಗಳನ್ನು ಪ್ರಯೋಗಿಸಿದನು.
09025006a ತೇ ಕೀರ್ಯಮಾಣಾ ಭೀಮೇನ ಪುತ್ರಾಸ್ತವ ಮಹಾರಣೇ|
09025006c ಭೀಮಸೇನಮಪಾಸೇಧನ್ಪ್ರವಣಾದಿವ ಕುಂಜರಂ||
ಮಹಾರಣದಲ್ಲಿ ಭೀಮಸೇನನಿಂದ ಪ್ರಹರಿಸಲ್ಪಟ್ಟ ನಿನ್ನ ಮಕ್ಕಳು ಇಳಿಜಾರಿನ ಪ್ರದೇಶದಿಂದ ಆನೆಯನ್ನು ಮೇಲಕ್ಕೆಳೆಯುವಂತೆ ಭೀಮಸೇನನನ್ನು ಸೆಳೆಯಲು ತೊಡಗಿದರು.
09025007a ತತಃ ಕ್ರುದ್ಧೋ ರಣೇ ಭೀಮಃ ಶಿರೋ ದುರ್ಮರ್ಷಣಸ್ಯ ಹ|
09025007c ಕ್ಷುರಪ್ರೇಣ ಪ್ರಮಥ್ಯಾಶು ಪಾತಯಾಮಾಸ ಭೂತಲೇ||
ಆಗ ಕ್ರುದ್ಧ ಭೀಮಸೇನನು ರಣದಲ್ಲಿ ದುರ್ಮರ್ಷಣನ ಶಿರವನ್ನು ಕ್ಷುರಪ್ರದಿಂದ ಹೊಡೆಯಲು ಅವನು ಭೂತಲದ ಮೇಲೆ ಬಿದ್ದನು.
09025008a ತತೋಽಪರೇಣ ಭಲ್ಲೇನ ಸರ್ವಾವರಣಭೇದಿನಾ|
09025008c ಶ್ರುತಾಂತಮವಧೀದ್ಭೀಮಸ್ತವ ಪುತ್ರಂ ಮಹಾರಥಃ||
ಮಹಾರಥ ಭೀಮನು ಸರ್ವಾವರಣಗಳನ್ನೂ ಭೇದಿಸಬಲ್ಲ ಇನ್ನೊಂದು ಭಲ್ಲದಿಂದ ನಿನ್ನ ಪುತ್ರ ಶ್ರುತಾಂತನನ್ನು ವಧಿಸಿದನು.
09025009a ಜಯತ್ಸೇನಂ ತತೋ ವಿದ್ಧ್ವಾ ನಾರಾಚೇನ ಹಸನ್ನಿವ|
09025009c ಪಾತಯಾಮಾಸ ಕೌರವ್ಯಂ ರಥೋಪಸ್ಥಾದರಿಂದಮಃ||
09025009e ಸ ಪಪಾತ ರಥಾದ್ರಾಜನ್ಭೂಮೌ ತೂರ್ಣಂ ಮಮಾರ ಚ||
ಅನಂತರ ಮುಗುಳ್ನಗೆಯೊಂದಿಗೆ ನಾರಾಚದಿಂದ ಜಯತ್ಸೇನನನ್ನು ಹೊಡೆದು ಆ ಅರಿಂದಮನು ಕೌರವ್ಯನನ್ನು ರಥಪೀಠದಿಂದ ಕೆಳಕ್ಕುರುಳಿಸಿದನು. ರಾಜನ್! ಕೂಡಲೇ ಅವನು ರಥದಿಂದ ಕೆಳಕ್ಕೆ ಬಿದ್ದು ಅಸುನೀಗಿದನು.
09025010a ಶ್ರುತರ್ವಾ ತು ತತೋ ಭೀಮಂ ಕ್ರುದ್ಧೋ ವಿವ್ಯಾಧ ಮಾರಿಷ|
09025010c ಶತೇನ ಗೃಧ್ರವಾಜಾನಾಂ ಶರಾಣಾಂ ನತಪರ್ವಣಾಂ||
ಮಾರಿಷ! ಆಗ ಶ್ರುತರ್ವನು ಕ್ರುದ್ಧನಾಗಿ ಭೀಮನನ್ನು ಹದ್ದಿನಗರಿಗಳುಳ್ಳ ನೂರು ನತಪರ್ವ ಶರಗಳಿಂದ ಹೊಡೆದನು.
09025011a ತತಃ ಕ್ರುದ್ಧೋ ರಣೇ ಭೀಮೋ ಜೈತ್ರಂ ಭೂರಿಬಲಂ ರವಿಂ|
09025011c ತ್ರೀನೇತಾಂಸ್ತ್ರಿಭಿರಾನರ್ಚದ್ವಿಷಾಗ್ನಿಪ್ರತಿಮೈಃ ಶರೈಃ||
ರಣದಲ್ಲಿ ಆಗ ಕ್ರುದ್ಧನಾದ ಭೀಮನು ಚೈತ್ರ, ಭೂರಿಬಲ ಮತ್ತು ರವಿ ಈ ಮೂವರನ್ನು ವಿಷಾಗ್ನಿ-ಸಮ ಮೂರು ಶರಗಳಿಂದ ಪ್ರಹರಿಸಿದನು.
09025012a ತೇ ಹತಾ ನ್ಯಪತನ್ಭೂಮೌ ಸ್ಯಂದನೇಭ್ಯೋ ಮಹಾರಥಾಃ|
09025012c ವಸಂತೇ ಪುಷ್ಪಶಬಲಾ ನಿಕೃತ್ತಾ ಇವ ಕಿಂಶುಕಾಃ||
ವಸಂತಋತುವಿನಲ್ಲಿ ಕತ್ತರಿಸಿ ಕೆಳಗೆ ಬೀಳುವ ಪುಷ್ಪಭರಿತ ಮುತ್ತುಗದ ಮರಗಳಂತೆ ಆ ಮೂವರು ಮಹಾರಥರೂ ಹತರಾಗಿ ತಮ್ಮ ತಮ್ಮ ರಥಗಳಿಂದ ಭೂಮಿಯ ಮೇಲೆ ಬಿದ್ದರು.
09025013a ತತೋಽಪರೇಣ ತೀಕ್ಷ್ಣೇನ ನಾರಾಚೇನ ಪರಂತಪಃ|
09025013c ದುರ್ವಿಮೋಚನಮಾಹತ್ಯ ಪ್ರೇಷಯಾಮಾಸ ಮೃತ್ಯವೇ||
ಅನಂತರ ಪರಂತಪ ಭೀಮನು ಇನ್ನೊಂದು ತೀಕ್ಷ್ಣ ನಾರಾಚದಿಂದ ದುರ್ವಿಮೋಚನನನ್ನು ಹೊಡೆದು ಅವನನ್ನು ಮೃತ್ಯುಲೋಕಕ್ಕೆ ಕಳುಹಿಸಿದನು.
09025014a ಸ ಹತಃ ಪ್ರಾಪತದ್ಭೂಮೌ ಸ್ವರಥಾದ್ರಥಿನಾಂ ವರಃ|
09025014c ಗಿರೇಸ್ತು ಕೂಟಜೋ ಭಗ್ನೋ ಮಾರುತೇನೇವ ಪಾದಪಃ||
ಪರ್ವತ ಶಿಖರದಲ್ಲಿದ್ದ ವೃಕ್ಷವು ಭಿರುಗಾಳಿಯಿಂದ ಭಗ್ನವಾಗಿ ಉರುಳಿ ಬೀಳುವಂತೆ ಆ ರಥಿ-ಶ್ರೇಷ್ಠನು ಹತನಾಗಿ ಭೂಮಿಯ ಮೇಲೆ ಬಿದ್ದನು.
09025015a ದುಷ್ಪ್ರಧರ್ಷಂ ತತಶ್ಚೈವ ಸುಜಾತಂ ಚ ಸುತೌ ತವ|
09025015c ಏಕೈಕಂ ನ್ಯವಧೀತ್ಸಂಖ್ಯೇ ದ್ವಾಭ್ಯಾಂ ದ್ವಾಭ್ಯಾಂ ಚಮೂಮುಖೇ||
09025015e ತೌ ಶಿಲೀಮುಖವಿದ್ಧಾಂಗೌ ಪೇತತೂ ರಥಸತ್ತಮೌ||
ಅನಂತರ ಭೀಮಸೇನನು ರಣದಲ್ಲಿ ನಿನ್ನ ಮಕ್ಕಳಾದ ದುಷ್ಪ್ರಧರ್ಷ ಮತ್ತು ಸುಜಾತರನ್ನು ಸೇನಾಮುಖದಲ್ಲಿ ಒಬ್ಬೊಬ್ಬರನ್ನೂ ಎರಡೆರಡು ಬಾಣಗಳಿಂದ ಹೊಡೆದು ಸಂಹರಿಸಿದನು. ಶಿಲೀಮುಖಗಳಿಂದ ಗಾಯಗೊಂಡಿದ್ದ ಆ ಇಬ್ಬರು ರಥಸತ್ತಮರೂ ಕೆಳಗೆ ಬಿದ್ದರು.
09025016a ತತೋ ಯತಂತಮಪರಮಭಿವೀಕ್ಷ್ಯ ಸುತಂ ತವ|
09025016c ಭಲ್ಲೇನ ಯುಧಿ ವಿವ್ಯಾಧ ಭೀಮೋ ದುರ್ವಿಷಹಂ ರಣೇ||
09025016e ಸ ಪಪಾತ ಹತೋ ವಾಹಾತ್ಪಶ್ಯತಾಂ ಸರ್ವಧನ್ವಿನಾಂ||
ಆಗ ರಣದಲ್ಲಿ ಪ್ರಯತ್ನಿಸುತ್ತಿದ್ದ ನಿನ್ನ ಇನ್ನೊಬ್ಬ ಮಗ ದುರ್ವಿಷಹನನ್ನು ನೋಡಿ ಭೀಮನು ಅವನನ್ನು ಭಲ್ಲದಿಂದ ಹೊಡೆದನು. ಅವನು ಸರ್ವಧನ್ವಿಗಳೂ ನೋಡುತ್ತಿದ್ದಂತೆ ವಾಹನದಿಂದ ಕೆಳಕ್ಕುರುಳಿ ಬಿದ್ದನು.
09025017a ದೃಷ್ಟ್ವಾ ತು ನಿಹತಾನ್ಭ್ರಾತೄನ್ಬಹೂನೇಕೇನ ಸಂಯುಗೇ|
09025017c ಅಮರ್ಷವಶಮಾಪನ್ನಃ ಶ್ರುತರ್ವಾ ಭೀಮಮಭ್ಯಯಾತ್||
09025018a ವಿಕ್ಷಿಪನ್ಸುಮಹಚ್ಚಾಪಂ ಕಾರ್ತಸ್ವರವಿಭೂಷಿತಂ|
09025018c ವಿಸೃಜನ್ಸಾಯಕಾಂಶ್ಚೈವ ವಿಷಾಗ್ನಿಪ್ರತಿಮಾನ್ ಬಹೂನ್||
ಯುದ್ಧದಲ್ಲಿ ಒಬ್ಬನಿಂದಲೇ ತನ್ನ ಅನೇಕ ಸಹೋದರರು ಹತರಾಗಿದ್ದುದನ್ನು ಕಂಡು ಸಹಿಸಿಕೊಳ್ಳಲಾರದೇ ಶ್ರುತರ್ವನು ಸುವರ್ಣವಿಭೂಷಿತ ಮಹಾಚಾಪವನ್ನು ಸೆಳೆಯುತ್ತಾ ವಿಷಾಗ್ನಿಗೆ ಸಮಾನ ಅನೇಕ ಸಾಯಕಗಳನ್ನು ಪ್ರಯೋಗಿಸುತ್ತಾ ಭೀಮನನ್ನು ಆಕ್ರಮಣಿಸಿದನು.
09025019a ಸ ತು ರಾಜನ್ಧನುಶ್ಚಿತ್ತ್ವಾ ಪಾಂಡವಸ್ಯ ಮಹಾಮೃಧೇ|
09025019c ಅಥೈನಂ ಚಿನ್ನಧನ್ವಾನಂ ವಿಂಶತ್ಯಾ ಸಮವಾಕಿರತ್||
ರಾಜನ್! ಆ ಮಹಾಯುದ್ಧದಲ್ಲಿ ಅವನು ಪಾಂಡವನ ಧನುಸ್ಸನ್ನು ತುಂಡರಿಸಿ, ಧನುಸ್ಸು ಕತ್ತರಿಸಲ್ಪಟ್ಟ ಅವನನ್ನು ಇಪ್ಪತ್ತು ಬಾಣಗಳಿಂದ ಮುಸುಕಿದನು.
09025020a ತತೋಽನ್ಯದ್ಧನುರಾದಾಯ ಭೀಮಸೇನೋ ಮಹಾರಥಃ|
09025020c ಅವಾಕಿರತ್ತವ ಸುತಂ ತಿಷ್ಠ ತಿಷ್ಠೇತಿ ಚಾಬ್ರವೀತ್||
ಆಗ ಮಹಾರಥ ಭೀಮಸೇನನು ಅನ್ಯ ಧನುಸ್ಸನ್ನು ಮೇಲೆತ್ತಿಕೊಂಡು ನಿನ್ನ ಮಗನನ್ನು ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು.
09025021a ಮಹದಾಸೀತ್ತಯೋರ್ಯುದ್ಧಂ ಚಿತ್ರರೂಪಂ ಭಯಾನಕಂ|
09025021c ಯಾದೃಶಂ ಸಮರೇ ಪೂರ್ವಂ ಜಂಭವಾಸವಯೋರಭೂತ್||
ಹಿಂದೆ ಜಂಭವ-ವಾಸವರ ನಡುವೆ ನಡೆದ ಸಮರದಂತೆ ಅವರಿಬ್ಬರ ಮಹಾ ಯುದ್ಧವು ವಿಚಿತ್ರವೂ ಭಯಾನಕವೂ ಆಗಿತ್ತು.
09025022a ತಯೋಸ್ತತ್ರ ಶರೈರ್ಮುಕ್ತೈರ್ಯಮದಂಡನಿಭೈಃ ಶುಭೈಃ|
09025022c ಸಮಾಚ್ಚನ್ನಾ ಧರಾ ಸರ್ವಾ ಖಂ ಚ ಸರ್ವಾ ದಿಶಸ್ತಥಾ||
ಅವರಿಬ್ಬರಿಂದ ಮುಕ್ತವಾದ ಯಮದಂಡಗಳಂತೆ ನಿಶಿತ-ಶುಭ ಬಾಣಗಳು ಭೂಮಿ, ಆಕಾಶ, ದಿಕ್ಕು ಮತ್ತು ಉಪದಿಕ್ಕುಗಳನ್ನು ಮುಸುಕಿದವು.
09025023a ತತಃ ಶ್ರುತರ್ವಾ ಸಂಕ್ರುದ್ಧೋ ಧನುರಾಯಮ್ಯ ಸಾಯಕೈಃ|
09025023c ಭೀಮಸೇನಂ ರಣೇ ರಾಜನ್ಬಾಹ್ವೋರುರಸಿ ಚಾರ್ಪಯತ್||
ರಾಜನ್! ಆಗ ರಣದಲ್ಲಿ ಸಂಕ್ರುದ್ಧನಾದ ಶ್ರುತರ್ವನು ಧನುಸ್ಸನ್ನೆತ್ತಿ ಸಾಯಕಗಳಿಂದ ಭೀಮಸೇನನ ಬಾಹು-ಎದೆಗಳಿಗೆ ಹೊಡೆದನು.
09025024a ಸೋಽತಿವಿದ್ಧೋ ಮಹಾರಾಜ ತವ ಪುತ್ರೇಣ ಧನ್ವಿನಾ|
09025024c ಭೀಮಃ ಸಂಚುಕ್ಷುಭೇ ಕ್ರುದ್ಧಃ ಪರ್ವಣೀವ ಮಹೋದಧಿಃ||
ಮಹಾರಾಜ! ನಿನ್ನ ಧನ್ವಿ ಪುತ್ರನಿಂದ ಹೀಗೆ ಅತಿಯಾಗಿ ಪ್ರಹರಿಸಲ್ಪಟ್ಟ ಭೀಮನು ಪರ್ವಕಾಲದಲ್ಲಿ ಮಹಾಸಾಗರವು ಕ್ಷೋಭೆಗೊಳ್ಳುವಂತೆ ಕ್ರುದ್ಧನಾಗಿ ಭುಗಿಲೆದ್ದನು.
09025025a ತತೋ ಭೀಮೋ ರುಷಾವಿಷ್ಟಃ ಪುತ್ರಸ್ಯ ತವ ಮಾರಿಷ|
09025025c ಸಾರಥಿಂ ಚತುರಶ್ಚಾಶ್ವಾನ್ಬಾಣೈರ್ನಿನ್ಯೇ ಯಮಕ್ಷಯಂ||
ಮಾರಿಷ! ಆಗ ರೋಷಾವಿಷ್ಟನಾದ ಭೀಮನು ನಿನ್ನ ಪುತ್ರನ ಸಾರಥಿಯನ್ನೂ, ನಾಲ್ಕು ಅಶ್ವಗಳನ್ನೂ ಬಾಣಗಳಿಂದ ಯಮಕ್ಷಯಕ್ಕೆ ಕಳುಹಿಸಿದನು.
09025026a ವಿರಥಂ ತಂ ಸಮಾಲಕ್ಷ್ಯ ವಿಶಿಖೈರ್ಲೋಮವಾಹಿಭಿಃ|
09025026c ಅವಾಕಿರದಮೇಯಾತ್ಮಾ ದರ್ಶಯನ್ಪಾಣಿಲಾಘವಂ||
ಅವನು ವಿರಥನಾದುದನ್ನು ನೋಡಿ ಆ ಅಮೇಯಾತ್ಮ ಭೀಮನು ಕೂದಲನ್ನೂ ಸೀಳಬಲ್ಲಷ್ಟು ಹರಿತವಾದ ವಿಶಿಖಗಳಿಂದ ಅವನನ್ನು ಮುಚ್ಚಿ ತನ್ನ ಹಸ್ತಲಾಘವವನ್ನು ತೋರಿಸಿದನು.
09025027a ಶ್ರುತರ್ವಾ ವಿರಥೋ ರಾಜನ್ನಾದದೇ ಖಡ್ಗಚರ್ಮಣೀ|
09025027c ಅಥಾಸ್ಯಾದದತಃ ಖಡ್ಗಂ ಶತಚಂದ್ರಂ ಚ ಭಾನುಮತ್||
09025027e ಕ್ಷುರಪ್ರೇಣ ಶಿರಃ ಕಾಯಾತ್ಪಾತಯಾಮಾಸ ಪಾಂಡವಃ||
ರಾಜನ್! ವಿರಥನಾದ ಶ್ರುತರ್ವನು ಖಡ್ಗ-ಗುರಾಣಿಗಳನ್ನು ಎತ್ತಿಕೊಂಡನು. ಅವನು ನೂರು ಚಂದ್ರಗಳಂತೆ ಹೊಳೆಯುತ್ತಿದ್ದ ಖಡ್ಗವನ್ನು ಎತ್ತಿಕೊಳ್ಳಲು ಪಾಂಡವ ಭೀಮನು ಕ್ಷುರಪ್ರದಿಂದ ಅವನ ಶಿರವನ್ನು ಶರೀರದಿಂದ ಬೇರ್ಪಡಿಸಿ ಬೀಳಿಸಿದನು.
09025028a ಚಿನ್ನೋತ್ತಮಾಂಗಸ್ಯ ತತಃ ಕ್ಷುರಪ್ರೇಣ ಮಹಾತ್ಮನಃ|
09025028c ಪಪಾತ ಕಾಯಃ ಸ ರಥಾದ್ವಸುಧಾಮನುನಾದಯನ್||
ಆ ಮಹಾತ್ಮನ ಕ್ಷುರಪ್ರದಿಂದ ಶಿರವು ಕತ್ತರಿಸಲ್ಪಡಲು ಅವನ ಕಾಯವು ಶಬ್ಧಮಾಡುತ್ತಾ ರಥದಿಂದ ಭೂಮಿಯ ಮೇಲೆ ಬಿದ್ದಿತು.
09025029a ತಸ್ಮಿನ್ನಿಪತಿತೇ ವೀರೇ ತಾವಕಾ ಭಯಮೋಹಿತಾಃ|
09025029c ಅಭ್ಯದ್ರವಂತ ಸಂಗ್ರಾಮೇ ಭೀಮಸೇನಂ ಯುಯುತ್ಸವಃ||
ಆ ವೀರನು ಕೆಳಗೆ ಬೀಳಲು ಭಯಮೋಹಿತರಾದ ನಿನ್ನವರು ಸಂಗ್ರಾಮದಲ್ಲಿ ಭೀಮಸೇನನೊಡನೆ ಯುದ್ಧಮಾಡುತ್ತಾ ಆಕ್ರಮಣಿಸಿದರು.
09025030a ತಾನಾಪತತ ಏವಾಶು ಹತಶೇಷಾದ್ಬಲಾರ್ಣವಾತ್|
09025030c ದಂಶಿತಃ ಪ್ರತಿಜಗ್ರಾಹ ಭೀಮಸೇನಃ ಪ್ರತಾಪವಾನ್||
09025030e ತೇ ತು ತಂ ವೈ ಸಮಾಸಾದ್ಯ ಪರಿವವ್ರುಃ ಸಮಂತತಃ|
ತನ್ನ ಮೇಲೆ ಎರಗಿದ ಆ ಅಳಿದುಳಿದ ಸೇನೆಯನ್ನು ಕವಚಧಾರೀ ಪ್ರತಾಪವಾನ್ ಭೀಮಸೇನನು ತಡೆದು ಎದುರಿಸಿದನು.
09025031a ತತಸ್ತು ಸಂವೃತೋ ಭೀಮಸ್ತಾವಕೈರ್ನಿಶಿತೈಃ ಶರೈಃ|
09025031c ಪೀಡಯಾಮಾಸ ತಾನ್ಸರ್ವಾನ್ಸಹಸ್ರಾಕ್ಷ ಇವಾಸುರಾನ್||
ಅವರಿಂದ ಸುತ್ತುವರೆಯಲ್ಪಟ್ಟ ಭೀಮಸೇನನು ನಿಶಿತ ಶರಗಳಿಂದ ಅವರೆಲ್ಲರನ್ನೂ ಸಹಸ್ರಾಕ್ಷ ಇಂದ್ರನು ಅಸುರರನ್ನು ಹೇಗೋ ಹಾಗೆ ಪೀಡಿಸತೊಡಗಿದನು.
09025032a ತತಃ ಪಂಚಶತಾನ್ ಹತ್ವಾ ಸವರೂಥಾನ್ಮಹಾರಥಾನ್|
09025032c ಜಘಾನ ಕುಂಜರಾನೀಕಂ ಪುನಃ ಸಪ್ತಶತಂ ಯುಧಿ||
ಆಗ ಅವನು ಯುದ್ಧದಲ್ಲಿ ಐದು ನೂರು ಆವರಣಗಳಿಂದ ಕೂಡಿದ್ದ ಮಹಾರಥರನ್ನು ಸಂಹರಿಸಿ ಪುನಃ ಏಳು ನೂರು ಗಜಸೇನೆಗಳನ್ನು ಸಂಹರಿಸಿದನು.
09025033a ಹತ್ವಾ ದಶ ಸಹಸ್ರಾಣಿ ಪತ್ತೀನಾಂ ಪರಮೇಷುಭಿಃ|
09025033c ವಾಜಿನಾಂ ಚ ಶತಾನ್ಯಷ್ಟೌ ಪಾಂಡವಃ ಸ್ಮ ವಿರಾಜತೇ||
ಪರಮ ಬಾಣಗಳಿಂದ ಹತ್ತುಸಾವಿರ ಪದಾತಿಗಳನ್ನು ಸಂಹರಿಸಿ ಪಾಂಡವನು ಎಂಟು ನೂರು ಕುದುರೆಗಳನ್ನು ಸಂಹರಿಸಿ ವಿರಾಜಿಸಿದನು.
09025034a ಭೀಮಸೇನಸ್ತು ಕೌಂತೇಯೋ ಹತ್ವಾ ಯುದ್ಧೇ ಸುತಾಂಸ್ತವ|
09025034c ಮೇನೇ ಕೃತಾರ್ಥಮಾತ್ಮಾನಂ ಸಫಲಂ ಜನ್ಮ ಚ ಪ್ರಭೋ||
ಪ್ರಭೋ! ನಿನ್ನ ಮಕ್ಕಳನ್ನು ಯುದ್ಧದಲ್ಲಿ ಕೊಂದು ಕೌಂತೇಯ ಭೀಮಸೇನನು ತನ್ನನ್ನು ತಾನು ಕೃತಾರ್ಥನಾದನೆಂದೂ ಜನ್ಮವು ಸಫಲವಾಯಿತೆಂದೂ ತಿಳಿದುಕೊಂಡನು.
09025035a ತಂ ತಥಾ ಯುಧ್ಯಮಾನಂ ಚ ವಿನಿಘ್ನಂತಂ ಚ ತಾವಕಾನ್|
09025035c ಈಕ್ಷಿತುಂ ನೋತ್ಸಹಂತೇ ಸ್ಮ ತವ ಸೈನ್ಯಾನಿ ಭಾರತ||
ಭಾರತ! ಹಾಗೆ ಯುದ್ಧಮಾಡಿ ನಿನ್ನವರನ್ನು ಸಂಹರಿಸುತ್ತಿದ್ದ ಅವನನ್ನು ನೋಡಲು ನಿನ್ನ ಸೈನ್ಯದವರು ಯಾರೂ ಉತ್ಸುಕರಾಗಿರಲಿಲ್ಲ.
09025036a ವಿದ್ರಾವ್ಯ ತು ಕುರೂನ್ಸರ್ವಾಂಸ್ತಾಂಶ್ಚ ಹತ್ವಾ ಪದಾನುಗಾನ್|
09025036c ದೋರ್ಭ್ಯಾಂ ಶಬ್ದಂ ತತಶ್ಚಕ್ರೇ ತ್ರಾಸಯಾನೋ ಮಹಾದ್ವಿಪಾನ್||
ಕುರುಗಳೆಲ್ಲರನ್ನೂ ಓಡಿಸಿ, ಅವರ ಅನುಯಾಯಿಗಳೆಲ್ಲರನ್ನೂ ಸಂಹರಿಸಿ, ತನ್ನ ಎರಡೂ ಭುಜಗಳನ್ನು ತಟ್ಟಿಕೊಳ್ಳುತ್ತಾ ಅದರ ಶಬ್ಧದಿಂದ ಮಹಾಗಜಗಳನ್ನು ಹೆದರಿಸುತ್ತಿದ್ದನು.
09025037a ಹತಭೂಯಿಷ್ಠಯೋಧಾ ತು ತವ ಸೇನಾ ವಿಶಾಂ ಪತೇ|
09025037c ಕಿಂಚಿಚ್ಚೇಷಾ ಮಹಾರಾಜ ಕೃಪಣಾ ಸಮಪದ್ಯತ||
ವಿಶಾಂಪತೇ! ನಿನ್ನ ಸೇನೆಯಲ್ಲಿ ಬಹುಪಾಲು ಯೋಧರು ಹತರಾಗಿ ಹೋಗಿದ್ದರು. ಮಹಾರಾಜ! ಉಳಿದ ಸ್ವಲ್ಪ ಜನರೂ ದೀನರಾಗಿದ್ದರು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಏಕಾದಶಧಾರ್ತರಾಷ್ಟ್ರವಧೇ ಪಂಚವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಏಕಾದಶಧಾರ್ತರಾಷ್ಟ್ರವಧ ಎನ್ನುವ ಇಪ್ಪತ್ತೈದನೇ ಅಧ್ಯಾಯವು.