Shalya Parva: Chapter 17

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯಪರ್ವ: ಹ್ರದಪ್ರವೇಶಪರ್ವ

೧೭

ಮದ್ರಸೇನೆಯೊಂದಿಗೆ ಪಾಂಡವರ ಯುದ್ಧ (೧-೧೫).  ಶಕುನಿ-ದುರ್ಯೋಧನರ ಸಂವಾದ (೧೬-೨೫). ಪಾಂಡವರಿಂದ ಮದ್ರಸೇನೆಯ ಸಂಹಾರ (೨೬-೩೬).  ಕೌರವ ಸೇನೆಯ ಪಲಾಯನ (೩೭-೩೯).

09017001 ಸಂಜಯ ಉವಾಚ

09017001a ಶಲ್ಯೇ ತು ನಿಹತೇ ರಾಜನ್ಮದ್ರರಾಜಪದಾನುಗಾಃ|

09017001c ರಥಾಃ ಸಪ್ತಶತಾ ವೀರಾ ನಿರ್ಯಯುರ್ಮಹತೋ ಬಲಾತ್||

ಸಂಜಯನು ಹೇಳಿದನು: “ರಾಜನ್! ಶಲ್ಯನು ಹತನಾಗಲು ಮದ್ರರಾಜ ಪದಾನುಗ ಏಳುನೂರು ವೀರ ರಥರು ಮಹಾ ಸೇನೆಯೊಂದಿಗೆ ಯುದ್ಧಕ್ಕೆ ಮರಳಿದರು.

09017002a ದುರ್ಯೋಧನಸ್ತು ದ್ವಿರದಮಾರುಹ್ಯಾಚಲಸಂನಿಭಂ|

09017002c ಚತ್ರೇಣ ಧ್ರಿಯಮಾಣೇನ ವೀಜ್ಯಮಾನಶ್ಚ ಚಾಮರೈಃ||

09017002e ನ ಗಂತವ್ಯಂ ನ ಗಂತವ್ಯಮಿತಿ ಮದ್ರಾನವಾರಯತ್||

ದುರ್ಯೋಧನನಾದರೋ ಪರ್ವತದಂತಿದ್ದ ಆನೆಯನ್ನೇರಿ, ಶ್ವೇತಛತ್ರದಡಿಯಲ್ಲಿ, ಚಾಮರಗಳು ಬೀಸುತ್ತಿರಲು, “ಹೋಗಬೇಡಿ! ಹೋಗಬೇಡಿ!” ಎಂದು ಮದ್ರರನ್ನು ತಡೆದನು.

09017003a ದುರ್ಯೋಧನೇನ ತೇ ವೀರಾ ವಾರ್ಯಮಾಣಾಃ ಪುನಃ ಪುನಃ|

09017003c ಯುಧಿಷ್ಠಿರಂ ಜಿಘಾಂಸಂತಃ ಪಾಂಡೂನಾಂ ಪ್ರಾವಿಶನ್ಬಲಂ||

ದುರ್ಯೋಧನನಿಂದ ಪುನಃ ಪುನಃ ತಡೆಯಲ್ಪಟ್ಟರೂ ಆ ವೀರರು ಯುಧಿಷ್ಠಿರನ ಪಾಂಡವ ಸೇನೆಯನ್ನು ಪ್ರವೇಶಿಸಿದರು.

09017004a ತೇ ತು ಶೂರಾ ಮಹಾರಾಜ ಕೃತಚಿತ್ತಾಃ ಸ್ಮ ಯೋಧನೇ|

09017004c ಧನುಃಶಬ್ದಂ ಮಹತ್ಕೃತ್ವಾ ಸಹಾಯುಧ್ಯಂತ ಪಾಂಡವೈಃ||

ಮಹಾರಾಜ! ಆ ಶೂರರಾದರೋ ಯುದ್ಧದ ದೃಢನಿಶ್ಚಯವನ್ನು ಮಾಡಿ ಜೋರಾಗಿ ಧನುಸ್ಸುಗಳನ್ನು ಟೇಂಕರಿಸುತ್ತಾ ಪಾಂಡವರೊಂದಿಗೆ ಯುದ್ಧದಲ್ಲಿ ತೊಡಗಿದರು.

09017005a ಶ್ರುತ್ವಾ ತು ನಿಹತಂ ಶಲ್ಯಂ ಧರ್ಮಪುತ್ರಂ ಚ ಪೀಡಿತಂ|

09017005c ಮದ್ರರಾಜಪ್ರಿಯೇ ಯುಕ್ತೈರ್ಮದ್ರಕಾಣಾಂ ಮಹಾರಥೈಃ||

09017006a ಆಜಗಾಮ ತತಃ ಪಾರ್ಥೋ ಗಾಂಡೀವಂ ವಿಕ್ಷಿಪನ್ಧನುಃ|

09017006c ಪೂರಯನ್ರಥಘೋಷೇಣ ದಿಶಃ ಸರ್ವಾ ಮಹಾರಥಃ||

ಶಲ್ಯನನ್ನು ಸಂಹರಿಸಿದ ಧರ್ಮಪುತ್ರನನ್ನು ಮದ್ರರಾಜನ ಪ್ರಿಯರು ಮದ್ರಕರ ಮಹಾರಥರಿಂದೊಡಗೂಡಿ ಪೀಡಿಸುತ್ತಿದ್ದಾರೆ ಎಂದು ಕೇಳಿದ ಮಹಾರಥ ಪಾರ್ಥನು ಗಾಂಡೀವ ಧನುಸ್ಸನ್ನು ಟೇಂಕರಿಸುತ್ತಾ ರಥಘೋಷದಿಂದ ಎಲ್ಲ ದಿಕ್ಕುಗಳನ್ನೂ ಮೊಳಗಿಸುತ್ತಾ ಅಲ್ಲಿಗೆ ಆಗಮಿಸಿದನು.

09017007a ತತೋಽರ್ಜುನಶ್ಚ ಭೀಮಶ್ಚ ಮಾದ್ರೀಪುತ್ರೌ ಚ ಪಾಂಡವೌ|

09017007c ಸಾತ್ಯಕಿಶ್ಚ ನರವ್ಯಾಘ್ರೋ ದ್ರೌಪದೇಯಾಶ್ಚ ಸರ್ವಶಃ||

09017008a ಧೃಷ್ಟದ್ಯುಮ್ನಃ ಶಿಖಂಡೀ ಚ ಪಾಂಚಾಲಾಃ ಸಹ ಸೋಮಕೈಃ|

09017008c ಯುಧಿಷ್ಠಿರಂ ಪರೀಪ್ಸಂತಃ ಸಮಂತಾತ್ಪರ್ಯವಾರಯನ್||

ಆಗ ಅರ್ಜುನ, ಭೀಮ, ಮಾದ್ರೀಪುತ್ರ ಪಾಂಡವರಿಬ್ಬರು, ನರವ್ಯಾಘ್ರ ಸಾತ್ಯಕಿ, ಎಲ್ಲ ದ್ರೌಪದೇಯರು, ಸೋಮಕರೊಂದಿಗೆ ಪಾಂಚಾಲ ಧೃಷ್ಟದ್ಯುಮ್ನ ಮತ್ತು ಶಿಖಂಡಿಯರು ಯುಧಿಷ್ಠಿರನನ್ನು ರಕ್ಷಿಸಲು ಎಲ್ಲಕಡೆಗಳಿಂದ ಅವನನ್ನು ಸುತ್ತುವರೆದರು.

09017009a ತೇ ಸಮಂತಾತ್ಪರಿವೃತಾಃ ಪಾಂಡವೈಃ ಪುರುಷರ್ಷಭಾಃ|

09017009c ಕ್ಷೋಭಯಂತಿ ಸ್ಮ ತಾಂ ಸೇನಾಂ ಮಕರಾಃ ಸಾಗರಂ ಯಥಾ||

ಎಲ್ಲಕಡೆಗಳಿಂದ ಸುತ್ತುವರೆದ ಆ ಪಾಂಡವ ಪುರುಷರ್ಷಭರು ಮದ್ರಸೇನೆಯನ್ನು ಮೊಸಳೆಗಳು ಸಮುದ್ರವನ್ನು ಹೇಗೋ ಹಾಗೆ ಕ್ಷೋಭೆಗೊಳಿಸಿದರು.

09017010a ಪುರೋವಾತೇನ ಗಂಗೇವ ಕ್ಷೋಭ್ಯಮಾನಾ ಮಹಾನದೀ|

09017010c ಅಕ್ಷೋಭ್ಯತ ತದಾ ರಾಜನ್ಪಾಂಡೂನಾಂ ಧ್ವಜಿನೀ ಪುನಃ||

ರಾಜನ್! ಪೂರ್ವದಿಕ್ಕಿನ ಗಾಳಿಯಿಂದ ಮಹಾನದೀ ಗಂಗೆಯು ಅಲ್ಲೋಲ-ಕಲ್ಲೋಲಗೊಳ್ಳುವಂತೆ ಮದ್ರಸೇನೆಯು ಪಾಂಡವ ಸೇನೆಯಿಂದ ಕ್ಷೋಭೆಗೊಂಡಿತು.

09017011a ಪ್ರಸ್ಕಂದ್ಯ ಸೇನಾಂ ಮಹತೀಂ ತ್ಯಕ್ತಾತ್ಮಾನೋ ಮಹಾರಥಾಃ|

09017011c ವೃಕ್ಷಾನಿವ ಮಹಾವಾತಾಃ ಕಂಪಯಂತಿ ಸ್ಮ ತಾವಕಾಃ||

ತಮ್ಮನ್ನು ತಾವೇ ಮುಡುಪಾಗಿಟ್ಟಿದ್ದ ನಿನ್ನ ಕಡೆಯ ಮಹಾರಥರು ಆ ಮಹಾ ಸೇನೆಗೆ ಸಿಲುಕಿ ಭಿರುಗಾಳಿಗೆ ಸಿಲುಕಿದ ವೃಕ್ಷಗಳಂತೆ ತತ್ತರಿಸುತ್ತಿದ್ದರು.

09017012a ಬಹವಶ್ಚುಕ್ರುಶುಸ್ತತ್ರ ಕ್ವ ಸ ರಾಜಾ ಯುಧಿಷ್ಠಿರಃ|

09017012c ಭ್ರಾತರೋ ವಾಸ್ಯ ತೇ ಶೂರಾ ದೃಶ್ಯಂತೇ ನೇಹ ಕೇ ಚನ||

09017013a ಪಾಂಚಾಲಾನಾಂ ಮಹಾವೀರ್ಯಾಃ ಶಿಖಂಡೀ ಚ ಮಹಾರಥಃ|

09017013c ಧೃಷ್ಟದ್ಯುಮ್ನೋಽಥ ಶೈನೇಯೋ ದ್ರೌಪದೇಯಾಶ್ಚ ಸರ್ವಶಃ||

ಅಲ್ಲಿ ಅನೇಕರ “ರಾಜಾ ಯುಧಿಷ್ಠಿರನೆಲ್ಲಿ? ಅವನ ಶೂರ ಸಹೋದರರೆಲ್ಲಿ? ಯಾರೂ ಇಲ್ಲಿ ಕಾಣುತ್ತಿಲ್ಲವಲ್ಲ! ಪಾಂಚಾಲರ ಮಹಾವೀರ ಮಹಾರಥ ಶಿಖಂಡೀ ಮತ್ತು ಧೃಷ್ಟದ್ಯುಮ್ನರೆಲ್ಲಿ? ಶೈನೇಯ ಮತ್ತು ಎಲ್ಲ ದ್ರೌಪದೇಯರು ಎಲ್ಲಿ?” ಎಂಬ ಕೂಗುಗಳು ಎಲ್ಲ ಕಡೆಗಳಿಂದ ಕೇಳಿಬರುತ್ತಿದ್ದವು.

09017014a ಏವಂ ತಾನ್ವಾದಿನಃ ಶೂರಾನ್ದ್ರೌಪದೇಯಾ ಮಹಾರಥಾಃ|

09017014c ಅಭ್ಯಘ್ನನ್ಯುಯುಧಾನಶ್ಚ ಮದ್ರರಾಜಪದಾನುಗಾನ್||

ಹೀಗೆ ಕೂಗಿಕೊಳ್ಳುತ್ತಿದ್ದ ಮದ್ರರಾಜನ ಶೂರ ಅನುಯಾಯಿಗಳನ್ನು ಮಹಾರಥ ಯುಯುಧಾನ ಮತ್ತು ದ್ರೌಪದೇಯರು ಸಂಹರಿಸಿದರು.

09017015a ಚಕ್ರೈರ್ವಿಮಥಿತೈಃ ಕೇ ಚಿತ್ಕೇ ಚಿಚ್ಛಿನ್ನೈರ್ಮಹಾಧ್ವಜೈಃ|

09017015c ಪ್ರತ್ಯದೃಶ್ಯಂತ ಸಮರೇ ತಾವಕಾ ನಿಹತಾಃ ಪರೈಃ||

ಕೆಲವರ ರಥಚಕ್ರಗಳು ತುಂಡಾದವು. ಇನ್ನು ಕೆಲವರ ಮಹಾಧ್ವಜಗಳು ಮುರಿದು ಬಿದ್ದವು. ಸಮರದಲ್ಲಿ ನಿನ್ನವರು ಶತ್ರುಗಳಿಂದ ಹತರಾಗುತ್ತಿರುವುದು ಕಾಣುತ್ತಿತ್ತು.

09017016a ಆಲೋಕ್ಯ ಪಾಂಡವಾನ್ಯುದ್ಧೇ ಯೋಧಾ ರಾಜನ್ಸಮಂತತಃ|

09017016c ವಾರ್ಯಮಾಣಾ ಯಯುರ್ವೇಗಾತ್ತವ ಪುತ್ರೇಣ ಭಾರತ||

ರಾಜನ್! ಭಾರತ! ಸುತ್ತುವರೆದ ಪಾಂಡವ ಯೋಧರು ಯುದ್ಧಮಾಡುತ್ತಿರುವುದನ್ನು ನೋಡಿ ನಿನ್ನ ಮಗನು ಮದ್ರಸೇನೆಯನ್ನು ಮುನ್ನುಗ್ಗದಂತೆ ತಡೆಯಲು ವೇಗದಿಂದ ಬಂದನು.

09017017a ದುರ್ಯೋಧನಸ್ತು ತಾನ್ವೀರಾನ್ವಾರಯಾಮಾಸ ಸಾಂತ್ವಯನ್|

09017017c ನ ಚಾಸ್ಯ ಶಾಸನಂ ಕಶ್ಚಿತ್ತತ್ರ ಚಕ್ರೇ ಮಹಾರಥಃ||

ದುರ್ಯೋಧನನಾದರೋ ಆ ವೀರರನ್ನು ಸಂತವಿಸಿ ತಡೆಯುತ್ತಿದ್ದನು. ಆದರೂ ಅಲ್ಲಿ ಅವನ ಆಜ್ಞೆಯಂತೆ ಯಾರೂ ಮಾಡುತ್ತಿರಲಿಲ್ಲ.

09017018a ತತೋ ಗಾಂಧಾರರಾಜಸ್ಯ ಪುತ್ರಃ ಶಕುನಿರಬ್ರವೀತ್|

09017018c ದುರ್ಯೋಧನಂ ಮಹಾರಾಜ ವಚನಂ ವಚನಕ್ಷಮಃ|

ಮಹಾರಾಜ! ಆಗ ಗಾಂಧಾರರಾಜನ ಮಗ ಮಾತಿನ ಮಲ್ಲ ಶಕುನಿಯು ದುರ್ಯೋಧನನಿಗೆ ಹೇಳಿದನು:

09017019a ಕಿಂ ನಃ ಸಂಪ್ರೇಕ್ಷಮಾಣಾನಾಂ ಮದ್ರಾಣಾಂ ಹನ್ಯತೇ ಬಲಂ|

09017019c ನ ಯುಕ್ತಮೇತತ್ಸಮರೇ ತ್ವಯಿ ತಿಷ್ಠತಿ ಭಾರತ||

“ಭಾರತ! ಮದ್ರಸೇನೆಯು ಹತವಾಗುತ್ತಿರುವುದನ್ನು ನಾವು ಸುಮ್ಮನೇ ಏಕೆ ನೋಡುತ್ತಿದ್ದೇವೆ? ನೀನು ಇಲ್ಲಿ ನಿಂತಿರುವಾಗ ಸಮರದಲ್ಲಿ ಹೀಗಾಗುತ್ತಿರುವುದು ಸರಿಯಲ್ಲ.

09017020a ಸಹಿತೈರ್ನಾಮ ಯೋದ್ಧವ್ಯಮಿತ್ಯೇಷ ಸಮಯಃ ಕೃತಃ|

09017020c ಅಥ ಕಸ್ಮಾತ್ಪರಾನೇವ ಘ್ನತೋ ಮರ್ಷಯಸೇ ನೃಪ||

ನೃಪ! ನಾವೆಲ್ಲರೂ ಒಟ್ಟಿಗೇ ಯುದ್ಧ ಮಾಡುತ್ತೇವೆಂದು ಒಪ್ಪಂದ ಮಾಡಿಕೊಂಡಿರಲಿಲ್ಲವೇ? ನೃಪ! ಆದರೂ ಶತ್ರುಗಳು ವಧಿಸುತ್ತಿರುವಾಗ ಹೇಗೆ ತಾನೇ ನೀನು ಸಹಿಸಿಕೊಂಡಿದ್ದೀಯೆ?”

09017021 ದುರ್ಯೋಧನ ಉವಾಚ

09017021a ವಾರ್ಯಮಾಣಾ ಮಯಾ ಪೂರ್ವಂ ನೈತೇ ಚಕ್ರುರ್ವಚೋ ಮಮ|

09017021c ಏತೇ ಹಿ ನಿಹತಾಃ ಸರ್ವೇ ಪ್ರಸ್ಕನ್ನಾಃ ಪಾಂಡುವಾಹಿನೀಂ||

ದುರ್ಯೋಧನನು ಹೇಳಿದನು: “ಈ ಹಿಂದೆಯೇ ನಾನು ಅವರನ್ನು ತಡೆದರೂ ಅವರು ನನ್ನ ಮಾತಿನಂತೆ ನಡೆದುಕೊಳ್ಳಲಿಲ್ಲ. ಪಾಂಡುಸೇನೆಯೊಳಗೆ ಹೊಕ್ಕಿರುವ ಅವರೆಲ್ಲರೂ ಹತರಾಗಿರಬಹುದು.”

09017022 ಶಕುನಿರುವಾಚ|

09017022a ನ ಭರ್ತುಃ ಶಾಸನಂ ವೀರಾ ರಣೇ ಕುರ್ವಂತ್ಯಮರ್ಷಿತಾಃ|

09017022c ಅಲಂ ಕ್ರೋದ್ಧುಂ ತಥೈತೇಷಾಂ ನಾಯಂ ಕಾಲ ಉಪೇಕ್ಷಿತುಂ||

ಶಕುನಿಯು ಹೇಳಿದನು: “ಕ್ರೋಧಾಭಿಭೂತರಾಗಿ ಯುದ್ಧಮಾಡುತ್ತಿರುವ ವೀರರು ಒಡೆಯನ ಆಜ್ಞೆಯನ್ನು ಪಾಲಿಸುವುದಿಲ್ಲ. ಆದುದರಿಂದ ಅವರ ಮೇಲೆ ಕುಪಿತರಾಗುವ ಕಾಲವಿದಲ್ಲ!

09017023a ಯಾಮಃ ಸರ್ವೇಽತ್ರ ಸಂಭೂಯ ಸವಾಜಿರಥಕುಂಜರಾಃ|

09017023c ಪರಿತ್ರಾತುಂ ಮಹೇಷ್ವಾಸಾನ್ಮದ್ರರಾಜಪದಾನುಗಾನ್||

ಆದುದರಿಂದ ನಾವೆಲ್ಲರೂ ಮದ್ರರಾಜನ ಅನುಯಾಯೀ ಮಹೇಷ್ವಾಸರನ್ನು ರಕ್ಷಿಸಲು ಅಶ್ವ-ರಥ-ಗಜಸೇನೆಗಳೊಂದಿಗೆ ಅಲ್ಲಿಗೆ ಹೋಗೋಣ.

09017024a ಅನ್ಯೋನ್ಯಂ ಪರಿರಕ್ಷಾಮೋ ಯತ್ನೇನ ಮಹತಾ ನೃಪ||

09017024c ಏವಂ ಸರ್ವೇಽನುಸಂಚಿಂತ್ಯ ಪ್ರಯಯುರ್ಯತ್ರ ಸೈನಿಕಾಃ|

ನೃಪ! ಮಹಾ ಪ್ರಯತ್ನದಿಂದ ಅನ್ಯೋನ್ಯರನ್ನು ರಕ್ಷಿಸೋಣ. ಇವೆಲ್ಲವನ್ನೂ ಆಲೋಚಿಸಿ ಸೈನಿಕರಿರುವಲ್ಲಿಗೆ ನಾವೆಲ್ಲರೂ ಹೋಗೋಣ!”

09017025 ಸಂಜಯ ಉವಾಚ|

09017025a ಏವಮುಕ್ತಸ್ತತೋ ರಾಜಾ ಬಲೇನ ಮಹತಾ ವೃತಃ|

09017025c ಪ್ರಯಯೌ ಸಿಂಹನಾದೇನ ಕಂಪಯನ್ ವೈ ವಸುಂಧರಾಂ||

ಸಂಜಯನು ಹೇಳಿದನು: “ಹೀಗೆ ಹೇಳಿ ರಾಜನು ಮಹಾಸೇನೆಯಿಂದ ಆವೃತನಾಗಿ ಸಿಂಹನಾದದಿಂದ ವಸುಂಧರೆಯನ್ನು ಕಂಪಿಸುತ್ತಾ ಹೊರಟನು.

09017026a ಹತ ವಿಧ್ಯತ ಗೃಹ್ಣೀತ ಪ್ರಹರಧ್ವಂ ನಿಕೃಂತತ|

09017026c ಇತ್ಯಾಸೀತ್ತುಮುಲಃ ಶಬ್ದಸ್ತವ ಸೈನ್ಯಸ್ಯ ಭಾರತ||

ಭಾರತ! ನಿನ್ನ ಸೇನೆಯಲ್ಲಿ “ಕೊಲ್ಲಿರಿ! ಗಾಯಗೊಳಿಸಿರಿ! ಬಂಧಿಸಿರಿ! ಪ್ರಹರಿಸಿರಿ! ಕತ್ತರಿಸಿರಿ!” ಎಂಬ ತುಮುಲ ಶಬ್ಧಗಳು ಕೇಳಿಬಂದವು.

09017027a ಪಾಂಡವಾಸ್ತು ರಣೇ ದೃಷ್ಟ್ವಾ ಮದ್ರರಾಜಪದಾನುಗಾನ್|

09017027c ಸಹಿತಾನಭ್ಯವರ್ತಂತ ಗುಲ್ಮಮಾಸ್ಥಾಯ ಮಧ್ಯಮಂ||

ರಣದಲ್ಲಿ ಮದ್ರರಾಜನ ಅನುಯಾಯಿಗಳನ್ನು ನೋಡಿ ಪಾಂಡವರು ಮಧ್ಯಮ ಗುಲ್ಮದ ಆಶ್ರಯವನ್ನು ಪಡೆದು ಒಟ್ಟಾಗಿ ಎದುರಿಸಿದರು.

09017028a ತೇ ಮುಹೂರ್ತಾದ್ರಣೇ ವೀರಾ ಹಸ್ತಾಹಸ್ತಂ ವಿಶಾಂ ಪತೇ|

09017028c ನಿಹತಾಃ ಪ್ರತ್ಯದೃಶ್ಯಂತ ಮದ್ರರಾಜಪದಾನುಗಾಃ||

ವಿಶಾಂಪತೇ! ಕೈ-ಕೈತಾಗಿ ನಡೆದ ಆ ಯುದ್ಧದಲ್ಲಿ ಮುಹೂರ್ತಕಾಲದಲ್ಲಿಯೇ ಮದ್ರರಾಜನ ಅನುಯಾಯಿಗಳು ಹತರಾದುದು ಕಂಡುಬಂದಿತು.

09017029a ತತೋ ನಃ ಸಂಪ್ರಯಾತಾನಾಂ ಹತಾಮಿತ್ರಾಸ್ತರಸ್ವಿನಃ|

09017029c ಹೃಷ್ಟಾಃ ಕಿಲಕಿಲಾಶಬ್ದಮಕುರ್ವನ್ಸಹಿತಾಃ ಪರೇ||

ನಾವು ಅಲ್ಲಿಗೆ ಹೋಗುವುದರೊಳಗೇ ತರಸ್ವಿ ಅಮಿತ್ರರು ಅವರನ್ನು ಸಂಹರಿಸಿಬಿಟ್ಟಿದ್ದರು. ಶತ್ರುಗಳು ಒಂದಾಗಿ ಹೃಷ್ಟರಾಗಿ ಕಿಲ-ಕಿಲಾ ಶಬ್ಧವನ್ನು ಮಾಡುತ್ತಿದ್ದರು.

09017030a ಅಥೋತ್ಥಿತಾನಿ ರುಂಡಾನಿ ಸಮದೃಶ್ಯಂತ ಸರ್ವಶಃ|

09017030c ಪಪಾತ ಮಹತೀ ಚೋಲ್ಕಾ ಮಧ್ಯೇನಾದಿತ್ಯಮಂಡಲಂ||

ಎಲ್ಲಕಡೆ ರುಂಡಗಳು ಎದ್ದು ಕುಣಿಯುತ್ತಿರುವುದು ಕಂಡುಬಂದಿತು. ಆದಿತ್ಯಮಂಡಲದ ಮಧ್ಯದಿಂದ ಮಹಾ‌ಉಲ್ಕೆಯೊಂದು ಬಿದ್ದಿತು.

09017031a ರಥೈರ್ಭಗ್ನೈರ್ಯುಗಾಕ್ಷೈಶ್ಚ ನಿಹತೈಶ್ಚ ಮಹಾರಥೈಃ|

09017031c ಅಶ್ವೈರ್ನಿಪತಿತೈಶ್ಚೈವ ಸಂಚನ್ನಾಭೂದ್ವಸುಂಧರಾ||

ಮುರಿದುಹೋದ ರಥ-ನೊಗಗಳಿಂದಲೂ, ಹತರಾದ ಮಹಾರಥರಿಂದಲೂ, ಕೆಳಗುರುಳಿದ ಕುದುರೆಗಳಿಂದಲೂ ವಸುಂಧರೆಯು ತುಂಬಿಹೋಗಿತ್ತು.

09017032a ವಾತಾಯಮಾನೈಸ್ತುರಗೈರ್ಯುಗಾಸಕ್ತೈಸ್ತುರಂಗಮೈಃ|

09017032c ಅದೃಶ್ಯಂತ ಮಹಾರಾಜ ಯೋಧಾಸ್ತತ್ರ ರಣಾಜಿರೇ||

ಮಹಾರಾಜ! ಆ ರಣಾಂಗಣದಲ್ಲಿ ರಥದ ನೊಗಕ್ಕೆ ಸಿಕ್ಕಿಕೊಂಡಿದ್ದ ಯೋಧರು ಗಾಳಿಯ ವೇಗದಲ್ಲಿ ಹೋಗುತ್ತಿದ್ದ ಕುದುರೆಗಳಿಂದ ಎಳೆದುಕೊಂಡು ಹೋಗುತ್ತಿದ್ದುದು ಕಂಡುಬಂದಿತು.

09017033a ಭಗ್ನಚಕ್ರಾನ್ರಥಾನ್ ಕೇ ಚಿದವಹಂಸ್ತುರಗಾ ರಣೇ|

09017033c ರಥಾರ್ಧಂ ಕೇ ಚಿದಾದಾಯ ದಿಶೋ ದಶ ವಿಬಭ್ರಮುಃ||

09017033e ತತ್ರ ತತ್ರ ಚ ದೃಶ್ಯಂತೇ ಯೋಕ್ತ್ರೈಃ ಶ್ಲಿಷ್ಟಾಃ ಸ್ಮ ವಾಜಿನಃ||

ಕೆಲವು ಕುದುರೆಗಳು ಮುರಿದುಹೋಗಿದ್ದ ರಥ ಚಕ್ರಗಳನ್ನು, ಇನ್ನು ಕೆಲವು ಅರ್ಧರಥವನ್ನೇ ಎಳೆದುಕೊಂಡು ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದವು. ನೊಗಪಟ್ಟಿಗಳಿಗೆ ಸಿಲುಕಿಕೊಂಡ ಕುದುರೆಗಳು ಅಲ್ಲಲ್ಲಿ ಕಾಣಬರುತ್ತಿದ್ದವು.

09017034a ರಥಿನಃ ಪತಮಾನಾಶ್ಚ ವ್ಯದೃಶ್ಯಂತ ನರೋತ್ತಮ|

09017034c ಗಗನಾತ್ಪ್ರಚ್ಯುತಾಃ ಸಿದ್ಧಾಃ ಪುಣ್ಯಾನಾಮಿವ ಸಂಕ್ಷಯೇ||

ನರೋತ್ತಮ! ಪುಣ್ಯಗಳು ಮುಗಿದುಹೋಗಲು ಗಗನದಿಂದ ಚ್ಯುತರಾಗಿ ಬೀಳುತ್ತಿರುವ ಸಿದ್ಧರಂತೆ ರಥಿಗಳು ಬೀಳುತ್ತಿರುವುದು ಕಾಣುತ್ತಿತ್ತು.

09017035a ನಿಹತೇಷು ಚ ಶೂರೇಷು ಮದ್ರರಾಜಾನುಗೇಷು ಚ|

09017035c ಅಸ್ಮಾನಾಪತತಶ್ಚಾಪಿ ದೃಷ್ಟ್ವಾ ಪಾರ್ಥಾ ಮಹಾರಥಾಃ||

09017036a ಅಭ್ಯವರ್ತಂತ ವೇಗೇನ ಜಯಗೃಧ್ರಾಃ ಪ್ರಹಾರಿಣಃ|

09017036c ಬಾಣಶಬ್ದರವಾನ್ಕೃತ್ವಾ ವಿಮಿಶ್ರಾನ್ ಶಂಖನಿಸ್ವನೈಃ||

ಶೂರ ಮದ್ರರಾಜನ ಅನುಯಾಯಿಗಳು ಹತರಾಗಲು ಬರುತ್ತಿರುವ ನಮ್ಮನ್ನು ನೋಡಿದ ವಿಜಯೇಚ್ಛು ಮಹಾರಥ ಪಾರ್ಥರು ವೇಗದಿಂದ ಬಾಣಶಬ್ಧರವದೊಂದಿಗೆ ಶಂಖನಾದಗಳನ್ನು ಸೇರಿಸುತ್ತಾ ಪ್ರಹರಿಸಿ ಆಕ್ರಮಣಿಸಿದರು.

09017037a ಅಸ್ಮಾಂಸ್ತು ಪುನರಾಸಾದ್ಯ ಲಬ್ಧಲಕ್ಷಾಃ ಪ್ರಹಾರಿಣಃ|

09017037c ಶರಾಸನಾನಿ ಧುನ್ವಾನಾಃ ಸಿಂಹನಾದಾನ್ಪ್ರಚುಕ್ರುಶುಃ||

ನಮ್ಮ ಬಳಿಬಂದು ಗುರಿಯನ್ನು ಪಡೆದ ಆ ಪ್ರಹಾರಿಗಳು ಪುನಃ ಧನುಸ್ಸುಗಳನ್ನು ಟೇಂಕರಿಸುತ್ತಾ ಸಿಂಹನಾದಗೈದರು.

09017038a ತತೋ ಹತಮಭಿಪ್ರೇಕ್ಷ್ಯ ಮದ್ರರಾಜಬಲಂ ಮಹತ್|

09017038c ಮದ್ರರಾಜಂ ಚ ಸಮರೇ ದೃಷ್ಟ್ವಾ ಶೂರಂ ನಿಪಾತಿತಂ|

09017038e ದುರ್ಯೋಧನಬಲಂ ಸರ್ವಂ ಪುನರಾಸೀತ್ ಪರಾಙ್ಮುಖಂ||

ಸಮರದಲ್ಲಿ ಶೂರ ಮದ್ರರಾಜನು ಕೆಳಗುರುಳಿದುದನ್ನು ಮತ್ತು ಮದ್ರರಾಜನ ಮಹಾ ಸೇನೆಯೂ ಹತವಾದುದನ್ನು ನೋಡಿದ ದುರ್ಯೋಧನ ಸೇನೆಯೆಲ್ಲವೂ ಪುನಃ ಪರಾಙ್ಮುಖವಾಯಿತು.

09017039a ವಧ್ಯಮಾನಂ ಮಹಾರಾಜ ಪಾಂಡವೈರ್ಜಿತಕಾಶಿಭಿಃ|

09017039c ದಿಶೋ ಭೇಜೇಽಥ ಸಂಭ್ರಾಂತಂ ತ್ರಾಸಿತಂ ದೃಢಧನ್ವಿಭಿಃ||

ಮಹಾರಾಜ! ವಿಜಯೋಲ್ಲಾಸಿತ ದೃಢಧನ್ವಿ ಪಾಂಡವರಿಂದ ವಧಿಸಲ್ಪಟ್ಟು ಸಂಭ್ರಾಂತಗೊಂಡಿದ್ದ ಕೌರವ ಸೇನೆಯು ಗಾಬರಿಗೊಂಡು ದಿಕ್ಕಾಪಾಲಾಗಿ ಪಲಾಯನಮಾಡಿತು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸಂಕುಲಯುದ್ಧೇ ಸಪ್ತದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನೇಳನೇ ಅಧ್ಯಾಯವು.

Comments are closed.