Shalya Parva: Chapter 13

ಶಲ್ಯಪರ್ವ: ಶಲ್ಯವಧ ಪರ್ವ

೧೩

ಅಶ್ವತ್ಥಾಮ ಮತ್ತು ತ್ರಿಗರ್ತರೊಡನೆ ಅರ್ಜುನನ ಯುದ್ಧ (೧-೩೩). ಅಶ್ವತ್ಥಾಮನಿಂದ ಪಾಂಚಾಲ ಸುರಥನ ವಧೆ (೩೪-೪೧). ಅರ್ಜುನ ಪರಾಕ್ರಮ (೪೨-೪೫).

09013001 ಸಂಜಯ ಉವಾಚ

09013001a ಅರ್ಜುನೋ ದ್ರೌಣಿನಾ ವಿದ್ಧೋ ಯುದ್ಧೇ ಬಹುಭಿರಾಯಸೈಃ|

09013001c ತಸ್ಯ ಚಾನುಚರೈಃ ಶೂರೈಸ್ತ್ರಿಗರ್ತಾನಾಂ ಮಹಾರಥೈಃ||

09013001e ದ್ರೌಣಿಂ ವಿವ್ಯಾಧ ಸಮರೇ ತ್ರಿಭಿರೇವ ಶಿಲೀಮುಖೈಃ||

ಸಂಜಯನು ಹೇಳಿದನು: “ದ್ರೌಣಿ ಮತ್ತು ಅವನನ್ನು ಅನುಸರಿಸಿ ಹೋಗುತ್ತಿದ್ದ ತ್ರಿಗರ್ತರ ಮಹಾರಥಶೂರರು ಅರ್ಜುನನನ್ನು ಅನೇಕ ಲೋಹಮಯ ಬಾಣಗಳಿಂದ ಗಾಯಗೊಳಿಸಿದರು. ಆಗ ಸಮರದಲ್ಲಿ ಅರ್ಜುನನು ದ್ರೌಣಿಯನ್ನು ಮೂರು ಶಿಲೀಮುಖಿಗಳಿಂದ ಹೊಡೆದನು.

09013002a ತಥೇತರಾನ್ಮಹೇಷ್ವಾಸಾನ್ದ್ವಾಭ್ಯಾಂ ದ್ವಾಭ್ಯಾಂ ಧನಂಜಯಃ|

09013002c ಭೂಯಶ್ಚೈವ ಮಹಾಬಾಹುಃ ಶರವರ್ಷೈರವಾಕಿರತ್||

ಇತರ ಮಹೇಷ್ವಾಸರನ್ನೂ ಎರೆಡೆರಡು ಬಾಣಗಳಿಂದ ಮಹಾಬಾಹು ಧನಂಜಯನು ಹೊಡೆದು ಪುನಃ ಅವರನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು.

09013003a ಶರಕಂಟಕಿತಾಸ್ತೇ ತು ತಾವಕಾ ಭರತರ್ಷಭ|

09013003c ನ ಜಹುಃ ಸಮರೇ ಪಾರ್ಥಂ ವಧ್ಯಮಾನಾಃ ಶಿತೈಃ ಶರೈಃ||

ಭರತರ್ಷಭ! ಮುಳ್ಳುಗಳಂತಿದ್ದ ಬಾಣಗಳು ನಾಟಿಕೊಂಡಿದ್ದರೂ ಪಾರ್ಥನ ನಿಶಿತ ಶರಗಳಿಂದ ಪ್ರಹರಿಸಲ್ಪಡುತ್ತಿದ್ದ ನಿನ್ನವರು ಸಮರದಲ್ಲಿ ಪಾರ್ಥನನ್ನು ಬಿಟ್ಟು ಕದಲಲಿಲ್ಲ.

09013004a ತೇಽರ್ಜುನಂ ರಥವಂಶೇನ ದ್ರೋಣಪುತ್ರಪುರೋಗಮಾಃ|

09013004c ಅಯೋಧಯಂತ ಸಮರೇ ಪರಿವಾರ್ಯ ಮಹಾರಥಾಃ||

ದ್ರೋಣಪುತ್ರನ ನಾಯಕತ್ವದಲ್ಲಿ ಆ ಮಹಾರಥರು ರಥಸಮೂಹಗಳಿಂದ ಸಮರದಲ್ಲಿ ಅರ್ಜುನನನ್ನು ಸುತ್ತುವರೆದು ಯುದ್ಧಮಾಡುತ್ತಿದ್ದರು.

09013005a ತೈಸ್ತು ಕ್ಷಿಪ್ತಾಃ ಶರಾ ರಾಜನ್ಕಾರ್ತಸ್ವರವಿಭೂಷಿತಾಃ|

09013005c ಅರ್ಜುನಸ್ಯ ರಥೋಪಸ್ಥಂ ಪೂರಯಾಮಾಸುರಂಜಸಾ||

ರಾಜನ್! ಅವರು ಪ್ರಯೋಗಿಸುತ್ತಿದ್ದ ಸುವರ್ಣ ವಿಭೂಷಿತ ಶರಗಳು ಬೇಗನೇ ಅರ್ಜುನನ ರಥಪೀಠವನ್ನು ತುಂಬಿಬಿಟ್ಟವು.

09013006a ತಥಾ ಕೃಷ್ಣೌ ಮಹೇಷ್ವಾಸೌ ವೃಷಭೌ ಸರ್ವಧನ್ವಿನಾಂ|

09013006c ಶರೈರ್ವೀಕ್ಷ್ಯ ವಿತುನ್ನಾಂಗೌ ಪ್ರಹೃಷ್ಟೌ ಯುದ್ಧದುರ್ಮದೌ||

ಆಗ ಸರ್ವಧನ್ವಿಗಳಲ್ಲಿ ವೃಷಭರಂತಿದ್ದ ಯುದ್ಧದುರ್ಮದ ಮಹೇಷ್ವಾಸ ಕೃಷ್ಣರಿಬ್ಬರ ಅಂಗಗಳೂ ತಮ್ಮ ಶರಗಳಿಂದ ಕ್ಷತವಿಕ್ಷತವಾಗಿರುವುದನ್ನು ನೋಡಿ ಅವರು ಪ್ರಹೃಷ್ಟರಾದರು.

09013007a ಕೂಬರಂ ರಥಚಕ್ರಾಣಿ ಈಷಾ ಯೋಕ್ತ್ರಾಣಿ ಚಾಭಿಭೋ|

09013007c ಯುಗಂ ಚೈವಾನುಕರ್ಷಂ ಚ ಶರಭೂತಮಭೂತ್ತದಾ||

ವಿಭೋ! ಅರ್ಜುನನ ರಥದ ಮೂಕಿ, ಚಕ್ರಗಳು, ಹಗ್ಗಗಳು, ನೊಗ, ತೋಳುಮರ ಎಲ್ಲವೂ ಬಾಣಮಯವಾಗಿದ್ದವು. ಅದೊಂದು ಅಭೂತಪೂರ್ವವಾಗಿತ್ತು.

09013008a ನೈತಾದೃಶಂ ದೃಷ್ಟಪೂರ್ವಂ ರಾಜನ್ನೈವ ಚ ನಃ ಶ್ರುತಂ|

09013008c ಯಾದೃಶಂ ತತ್ರ ಪಾರ್ಥಸ್ಯ ತಾವಕಾಃ ಸಂಪ್ರಚಕ್ರಿರೇ||

ರಾಜನ್! ಅಲ್ಲಿ ನಿನ್ನವರು ಪಾರ್ಥನಿಗೆ ಕೊಟ್ಟ ಉಪಟಳವನ್ನು ಇದಕ್ಕೂ ಮೊದಲು ಯಾರೂ ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ.

09013009a ಸ ರಥಃ ಸರ್ವತೋ ಭಾತಿ ಚಿತ್ರಪುಂಖೈಃ ಶಿತೈಃ ಶರೈಃ|

09013009c ಉಲ್ಕಾಶತೈಃ ಸಂಪ್ರದೀಪ್ತಂ ವಿಮಾನಮಿವ ಭೂತಲೇ||

ವಿಚಿತ್ರ ಪುಂಖಗಳ ನಿಶಿತ ಶರಗಳಿಂದ ಎಲ್ಲಕಡೆ ತುಂಬಿಹೋಗಿದ್ದ ಅವನ ರಥವು ರಣಭೂಮಿಯಲ್ಲಿ ನೂರಾರು ಉಲ್ಕೆಗಳು ಉರಿಯುತ್ತಿರುವ ವಿಮಾನದಂತೆಯೇ ಕಾಣುತ್ತಿತ್ತು.

09013010a ತತೋಽರ್ಜುನೋ ಮಹಾರಾಜ ಶರೈಃ ಸನ್ನತಪರ್ವಭಿಃ|

09013010c ಅವಾಕಿರತ್ತಾಂ ಪೃತನಾಂ ಮೇಘೋ ವೃಷ್ಟ್ಯಾ ಯಥಾಚಲಂ||

ಮಹಾರಾಜ! ಆಗ ಅರ್ಜುನನು ಸನ್ನತಪರ್ವ ಶರಗಳಿಂದ ಮೇಘವು ಪರ್ವತವನ್ನು ಮಳೆಯಿಂದ ಹೇಗೋ ಹಾಗೆ ಸೇನಾಸಮೂಹಗಳನ್ನು ಮುಚ್ಚಿಬಿಟ್ಟನು.

09013011a ತೇ ವಧ್ಯಮಾನಾಃ ಸಮರೇ ಪಾರ್ಥನಾಮಾಂಕಿತೈಃ ಶರೈಃ|

09013011c ಪಾರ್ಥಭೂತಮಮನ್ಯಂತ ಪ್ರೇಕ್ಷಮಾಣಾಸ್ತಥಾವಿಧಂ||

ಸಮರದಲ್ಲಿ ಪಾರ್ಥನಾಮಾಂಕಿತ ಶರಗಳಿಂದ ವಧಿಸಲ್ಪಟ್ಟ ಅವರು ಪಾರ್ಥನನ್ನು ಬಾಣರೂಪದಲ್ಲಿಯೇ ಕಾಣುತ್ತಾ ಸರ್ವವೂ ಪಾರ್ಥಮಯವಾಗಿದೆಯೆಂದೇ ಭಾವಿಸಿದರು.

09013012a ತತೋಽದ್ಭುತಶರಜ್ವಾಲೋ ಧನುಃಶಬ್ದಾನಿಲೋ ಮಹಾನ್|

09013012c ಸೇನೇಂಧನಂ ದದಾಹಾಶು ತಾವಕಂ ಪಾರ್ಥಪಾವಕಃ||

ಆಗ ಅದ್ಭುತ ಶರಜ್ವಾಲೆ ಮತ್ತು ಧನುಸ್ಸಿನ ಟೇಂಕಾರ ಶಬ್ಧದ ಮಹಾ ಭಿರುಗಾಳಿಯಿಂದ ಪಾರ್ಥನೆಂಬ ಪಾವಕನು ನಿನ್ನ ಸೇನೆಯನ್ನು ಇಂಧನದಂತೆ ಸುಟ್ಟನು.

09013013a ಚಕ್ರಾಣಾಂ ಪತತಾಂ ಚೈವ ಯುಗಾನಾಂ ಚ ಧರಾತಲೇ|

09013013c ತೂಣೀರಾಣಾಂ ಪತಾಕಾನಾಂ ಧ್ವಜಾನಾಂ ಚ ರಥೈಃ ಸಹ||

09013014a ಈಷಾಣಾಮನುಕರ್ಷಾಣಾಂ ತ್ರಿವೇಣೂನಾಂ ಚ ಭಾರತ|

09013014c ಅಕ್ಷಾಣಾಮಥ ಯೋಕ್ತ್ರಾಣಾಂ ಪ್ರತೋದಾನಾಂ ಚ ಸರ್ವಶಃ||

09013015a ಶಿರಸಾಂ ಪತತಾಂ ಚೈವ ಕುಂಡಲೋಷ್ಣೀಷಧಾರಿಣಾಂ|

09013015c ಭುಜಾನಾಂ ಚ ಮಹಾರಾಜ ಸ್ಕಂಧಾನಾಂ ಚ ಸಮಂತತಃ||

09013016a ಚತ್ರಾಣಾಂ ವ್ಯಜನೈಃ ಸಾರ್ಧಂ ಮುಕುಟಾನಾಂ ಚ ರಾಶಯಃ|

09013016c ಸಮದೃಶ್ಯಂತ ಪಾರ್ಥಸ್ಯ ರಥಮಾರ್ಗೇಷು ಭಾರತ||

ಭಾರತ! ರಣಭೂಮಿಯಲ್ಲಿ ಪಾರ್ಥನ ರಥಮಾರ್ಗದಲ್ಲಿ ರಥಗಳೊಂದಿಗೆ ಚಕ್ರಗಳು-ನೊಗಗಳು-ತೂಣೀರಗಳು-ಪತಾಕೆಗಳು- ಧ್ವಜಗಳು-ಈಷಾದಂಡಗಳು-ಹಗ್ಗಗಳು-ತ್ರಿವೇಣುಗಳು-ಅಚ್ಚುಮರಗಳು- ಲಗಾಮುಗಳು-ಚಾವಟಿಗಳು-ಕುಂಡಲ-ಶಿರಸ್ತ್ರಾಣಗಳನ್ನು ಧರಿಸಿದ್ದ ಶಿರಸ್ಸುಗಳು-ಭುಜಗಳು-ಹೆಗಲುಗಳು-ಛತ್ರ-ವ್ಯಜನಗಳು-ಕಿರೀಟಗಳು ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದಿತು.

09013017a ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ|

09013017c ಬಭೂವ ಭರತಶ್ರೇಷ್ಠ ರುದ್ರಸ್ಯಾಕ್ರೀಡನಂ ಯಥಾ||

09013017e ಭೀರೂಣಾಂ ತ್ರಾಸಜನನೀ ಶೂರಾಣಾಂ ಹರ್ಷವರ್ಧನೀ||

ಭರತಶ್ರೇಷ್ಠ! ಮಾಂಸ-ರಕ್ತಗಳ ಕೆಸರಿನಿಂದ ರಣಭೂಮಿಯು ತಿರುಗಾಡಲು ದುರ್ಗಮವಾಗಿ, ಅದು ಹೇಡಿಗಳಿಗೆ ಭಯವನ್ನುಂಟುಮಾಡುವ ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ, ರುದ್ರದೇವನ ಆಟದ ಮೈದಾನದಂತಾಯಿತು.

09013018a ಹತ್ವಾ ತು ಸಮರೇ ಪಾರ್ಥಃ ಸಹಸ್ರೇ ದ್ವೇ ಪರಂತಪ|

09013018c ರಥಾನಾಂ ಸವರೂಥಾನಾಂ ವಿಧೂಮೋಽಗ್ನಿರಿವ ಜ್ವಲನ್||

ಸಮರದಲ್ಲಿ ಪರಂತಪ ಪಾರ್ಥನು ಎರಡು ಸಾವಿರ ರಥಗಳನ್ನು ಧ್ವಂಸಮಾಡಿ ಧೂಮರಹಿತ ಅಗ್ನಿಜ್ವಾಲೆಯಂತೆ ಪ್ರಕಾಶಿಸಿದನು.

09013019a ಯಥಾ ಹಿ ಭಗವಾನಗ್ನಿರ್ಜಗದ್ದಗ್ಧ್ವಾ ಚರಾಚರಂ|

09013019c ವಿಧೂಮೋ ದೃಶ್ಯತೇ ರಾಜಂಸ್ತಥಾ ಪಾರ್ಥೋ ಮಹಾರಥಃ||

ರಾಜನ್! ಚರಾಜರಗಳೊಂದಿಗೆ ಜಗತ್ತನ್ನೇ ಸುಟ್ಟ ಭಗವಾನ್ ಅಗ್ನಿಯು ಧೂಮರಹಿತನಾಗಿ ಕಾಣುವಂತೆ ಮಹಾರಥ ಪಾರ್ಥನು ಕಂಡನು.

09013020a ದ್ರೌಣಿಸ್ತು ಸಮರೇ ದೃಷ್ಟ್ವಾ ಪಾಂಡವಸ್ಯ ಪರಾಕ್ರಮಂ|

09013020c ರಥೇನಾತಿಪತಾಕೇನ ಪಾಂಡವಂ ಪ್ರತ್ಯವಾರಯತ್||

ಸಮರದಲ್ಲಿ ಪಾಂಡವನ ಪರಾಕ್ರಮವನ್ನು ನೋಡಿ ದ್ರೌಣಿಯಾದರೋ ಉನ್ನತ ಧ್ವಜವುಳ್ಳ ರಥದಿಂದ ಪಾಂಡವನನ್ನು ತಡೆದನು.

09013021a ತಾವುಭೌ ಪುರುಷವ್ಯಾಘ್ರೌ ಶ್ವೇತಾಶ್ವೌ ಧನ್ವಿನಾಂ ವರೌ|

09013021c ಸಮೀಯತುಸ್ತದಾ ತೂರ್ಣಂ ಪರಸ್ಪರವಧೈಷಿಣೌ||

ಆ ಇಬ್ಬರು ಪುರುಷವ್ಯಾಘ್ರ-ಶ್ವೇತಾಶ್ವ ಧನ್ವಿಗಳಲ್ಲಿ ಶ್ರೇಷ್ಠರು ಪರಸ್ಪರರನ್ನು ವಧಿಸಲು ಬಯಸಿ ಬೇಗನೇ ಸಂಘರ್ಷಿಸಿದರು.

09013022a ತಯೋರಾಸೀನ್ಮಹಾರಾಜ ಬಾಣವರ್ಷಂ ಸುದಾರುಣಂ|

09013022c ಜೀಮೂತಾನಾಂ ಯಥಾ ವೃಷ್ಟಿಸ್ತಪಾಂತೇ ಭರತರ್ಷಭ||

ಮಹಾರಾಜ! ಭರತರ್ಷಭ! ಆಗ ಮಳೆಗಾಲದಲ್ಲಿ ಮೇಘಗಳು ಮಳೆಸುರಿಸುವಂತೆ ಅವರ ಸುದಾರುಣ ಬಾಣವರ್ಷವು ಸುರಿಯಿತು.

09013023a ಅನ್ಯೋನ್ಯಸ್ಪರ್ಧಿನೌ ತೌ ತು ಶರೈಃ ಸನ್ನತಪರ್ವಭಿಃ|

09013023c ತತಕ್ಷತುರ್ಮೃಧೇಽನ್ಯೋನ್ಯಂ ಶೃಂಗಾಭ್ಯಾಂ ವೃಷಭಾವಿವ||

ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿರುವ ಅವರಿಬ್ಬರೂ ಎರಡು ಗೂಳಿಗಳು ತಮ್ಮ ಕೋಡುಗಳಿಂದ ಹೇಗೋ ಹಾಗೆ ಸನ್ನತಪರ್ವ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

09013024a ತಯೋರ್ಯುದ್ಧಂ ಮಹಾರಾಜ ಚಿರಂ ಸಮಮಿವಾಭವತ್|

09013024c ಅಸ್ತ್ರಾಣಾಂ ಸಂಗಮಶ್ಚೈವ ಘೋರಸ್ತತ್ರಾಭವನ್ಮಹಾನ್||

ಮಹಾರಾಜ! ಬಹಳ ಸಮಯದವರೆಗೆ ಅವರಿಬ್ಬರ ಯುದ್ಧವು ಸಮಸಮವಾಗಿಯೇ ನಡೆಯಿತು. ಅಲ್ಲಿ ಘೋರ ಅಸ್ತ್ರಗಳ ಮಹಾ ಸಂಗಮವು ನಡೆಯಿತು.

09013025a ತತೋಽರ್ಜುನಂ ದ್ವಾದಶಭೀ ರುಕ್ಮಪುಂಖೈಃ ಸುತೇಜನೈಃ|

09013025c ವಾಸುದೇವಂ ಚ ದಶಭಿರ್ದ್ರೌಣಿರ್ವಿವ್ಯಾಧ ಭಾರತ||

ಭಾರತ! ಆಗ ದ್ರೌಣಿಯು ಅರ್ಜುನನನ್ನು ಹನ್ನೆರಡು ರುಕ್ಮಪುಂಖಗಳ ತೇಜಯುಕ್ತ ಬಾಣಗಳಿಂದ ಮತ್ತು ವಾಸುದೇವನನ್ನು ಹತ್ತು ಬಾಣಗಳಿಂದ ಹೊಡೆದನು.

09013026a ತತಃ ಪ್ರಹಸ್ಯ ಬೀಭತ್ಸುರ್ವ್ಯಾಕ್ಷಿಪದ್ಗಾಂಡಿವಂ ಧನುಃ|

09013026c ಮಾನಯಿತ್ವಾ ಮುಹೂರ್ತಂ ಚ ಗುರುಪುತ್ರಂ ಮಹಾಹವೇ||

ಆ ಮಹಾಯುದ್ಧದಲ್ಲಿ ಮುಹೂರ್ತಕಾಲ ಗುರುಪುತ್ರನನ್ನು ಗೌರವಿಸಿ, ಜೋರಾಗಿ ನಗುತ್ತಾ ಬೀಭತ್ಸುವು ಗಾಂಡೀವ ಧನುಸ್ಸನ್ನು ದೀರ್ಘವಾಗಿ ಸೆಳೆದನು.

09013027a ವ್ಯಶ್ವಸೂತರಥಂ ಚಕ್ರೇ ಸವ್ಯಸಾಚೀ ಮಹಾರಥಃ|

09013027c ಮೃದುಪೂರ್ವಂ ತತಶ್ಚೈನಂ ತ್ರಿಭಿರ್ವಿವ್ಯಾಧ ಸಾಯಕೈಃ||

ಮಹಾರಥ ಸವ್ಯಸಾಚಿಯು ಅಶ್ವ-ಸೂತ-ರಥಗಳಿಂದ ವಿಹೀನನನ್ನಾಗಿ ಮಾಡಿ ಅವನನ್ನು ಮೂರು ಸಾಯಕಗಳಿಂದ ಮೃದುಪೂರ್ವಕವಾಗಿಯೇ ಹೊಡೆದನು.

09013028a ಹತಾಶ್ವೇ ತು ರಥೇ ತಿಷ್ಠನ್ದ್ರೋಣಪುತ್ರಸ್ತ್ವಯಸ್ಮಯಂ|

09013028c ಮುಸಲಂ ಪಾಂಡುಪುತ್ರಾಯ ಚಿಕ್ಷೇಪ ಪರಿಘೋಪಮಂ||

ಕುದುರೆಗಳು ಹತಗೊಳ್ಳಲು ದ್ರೋಣಪುತ್ರನು ರಥದ ಮೇಲೆಯೇ ನಿಂತು ಲೋಹಮಯ ಪರಿಘದಂತಿದ್ದ ಮುಸಲವನ್ನು ಪಾಂಡುಪುತ್ರನ ಮೇಲೆ ಎಸೆದನು.

09013029a ತಮಾಪತಂತಂ ಸಹಸಾ ಹೇಮಪಟ್ಟವಿಭೂಷಿತಂ|

09013029c ಚಿಚ್ಚೇದ ಸಪ್ತಧಾ ವೀರಃ ಪಾರ್ಥಃ ಶತ್ರುನಿಬರ್ಹಣಃ||

ಮೇಲೆ ಬೀಳುತ್ತಿದ್ದ ಆ ಹೇಮಪಟ್ಟವಿಭೂಷಿತ ಮುಸಲವನ್ನು ತಕ್ಷಣವೇ ವೀರ ಶತ್ರುನಿಬರ್ಹಣ ಪಾರ್ಥನು ಏಳು ತುಂಡುಗಳನ್ನಾಗಿ ಕತ್ತರಿಸಿದನು.

09013030a ಸ ಚ್ಚಿನ್ನಂ ಮುಸಲಂ ದೃಷ್ಟ್ವಾ ದ್ರೌಣಿಃ ಪರಮಕೋಪನಃ|

09013030c ಆದದೇ ಪರಿಘಂ ಘೋರಂ ನಗೇಂದ್ರಶಿಖರೋಪಮಂ||

09013030e ಚಿಕ್ಷೇಪ ಚೈವ ಪಾರ್ಥಾಯ ದ್ರೌಣಿರ್ಯುದ್ಧವಿಶಾರದಃ|

ಆ ಮುಸಲವು ತುಂಡಾಗಿದ್ದುದನ್ನು ಕಂಡ ಯುದ್ಧ ವಿಶಾರದ ದ್ರೌಣಿಯು ಪರ್ವತಶಿಖರದಂತಿದ್ದ ಘೋರ ಪರಿಘವನ್ನು ತೆಗೆದುಕೊಂಡು ಅದನ್ನು ಪಾರ್ಥನ ಮೇಲೆ ಎಸೆದನು.

09013031a ತಮಂತಕಮಿವ ಕ್ರುದ್ಧಂ ಪರಿಘಂ ಪ್ರೇಕ್ಷ್ಯ ಪಾಂಡವಃ||

09013031c ಅರ್ಜುನಸ್ತ್ವರಿತೋ ಜಘ್ನೇ ಪಂಚಭಿಃ ಸಾಯಕೋತ್ತಮೈಃ|

ಕ್ರುದ್ಧ ಅಂತಕನಂತಿದ್ದ ಆ ಪರಿಘವನ್ನು ನೋಡಿದ ಪಾಂಡವ ಅರ್ಜುನನು ತ್ವರೆಮಾಡಿ ಐದು ಉತ್ತಮ ಸಾಯಕಗಳಿಂದ ಅದನ್ನು ನಾಶಗೊಳಿಸಿದನು.

09013032a ಸ ಚ್ಚಿನ್ನಃ ಪತಿತೋ ಭೂಮೌ ಪಾರ್ಥಬಾಣೈರ್ಮಹಾಹವೇ||

09013032c ದಾರಯನ್ಪೃಥಿವೀಂದ್ರಾಣಾಂ ಮನಃ ಶಬ್ದೇನ ಭಾರತ|

ಭಾರತ! ಮಹಾಹವದಲ್ಲಿ ಪಾರ್ಥನ ಬಾಣಗಳಿಂದ ಕತ್ತರಿಸಲ್ಪಟ್ಟ ಆ ಪರಿಘವು ರಾಜರ ಮನಸ್ಸನ್ನು ಸೀಳುವಂತೆ ಶಬ್ಧಮಾಡುತ್ತಾ ಭೂಮಿಯ ಮೇಲೆ ಬಿದ್ದಿತು.

09013033a ತತೋಽಪರೈಸ್ತ್ರಿಭಿರ್ಬಾಣೈರ್ದ್ರೌಣಿಂ ವಿವ್ಯಾಧ ಪಾಂಡವಃ||

09013033c ಸೋಽತಿವಿದ್ಧೋ ಬಲವತಾ ಪಾರ್ಥೇನ ಸುಮಹಾಬಲಃ|

09013033e ನ ಸಂಭ್ರಾಂತಸ್ತದಾ ದ್ರೌಣಿಃ ಪೌರುಷೇ ಸ್ವೇ ವ್ಯವಸ್ಥಿತಃ||

ಅನಂತರ ಪಾಂಡವನು ದ್ರೌಣಿಯನ್ನು ಬೇರೆ ಮೂರು ಬಾಣಗಳಿಂದ ಹೊಡೆದನು. ಪಾರ್ಥನಿಂದ ಬಲವಾಗಿ ಪ್ರಹರಿಸಲ್ಪಟ್ಟರೂ ಆ ಸುಮಹಾಬಲ ದ್ರೌಣಿಯು ಪೌರುಷದಿಂದ ಸ್ವಲ್ವವೂ ವಿಚಲಿತನಾಗಲಿಲ್ಲ.

09013034a ಸುಧರ್ಮಾ ತು ತತೋ ರಾಜನ್ಭಾರದ್ವಾಜಂ ಮಹಾರಥಂ|

09013034c ಅವಾಕಿರಚ್ಚರವ್ರಾತೈಃ ಸರ್ವಕ್ಷತ್ರಸ್ಯ ಪಶ್ಯತಃ||

ರಾಜನ್! ಆಗ ಸುಧರ್ಮನು ಸರ್ವ ಕ್ಷತ್ರಿಯರೂ ನೋಡುತ್ತಿದ್ದಂತೆಯೇ ಭಾರದ್ವಾಜ ಮಹಾರಥ ಅಶ್ವತ್ಥಾಮನನ್ನು ಶರಗಳಿಂದ ಆಚ್ಛಾದಿಸಿದನು.

09013035a ತತಸ್ತು ಸುರಥೋಽಪ್ಯಾಜೌ ಪಾಂಚಾಲಾನಾಂ ಮಹಾರಥಃ|

09013035c ರಥೇನ ಮೇಘಘೋಷೇಣ ದ್ರೌಣಿಮೇವಾಭ್ಯಧಾವತ||

ಆಗ ಪಾಂಚಾಲರ ಮಹಾರಥ ಸುರಥನು ಮೇಘಘೋಷದ ರಥದಿಂದ ದ್ರೌಣಿಯನ್ನು ಆಕ್ರಮಣಿಸಿದನು.

09013036a ವಿಕರ್ಷನ್ವೈ ಧನುಃ ಶ್ರೇಷ್ಠಂ ಸರ್ವಭಾರಸಹಂ ದೃಢಂ|

09013036c ಜ್ವಲನಾಶೀವಿಷನಿಭೈಃ ಶರೈಶ್ಚೈನಮವಾಕಿರತ್||

ಸರ್ವಭಾರವನ್ನು ಸಹಿಸಬಲ್ಲ ದೃಢ ಶ್ರೇಷ್ಠ ಧನುಸ್ಸನ್ನು ಸೆಳೆದು ಸುರಥನು ಸರ್ಪಾಗ್ನಿಸದೃಶ ಬಾಣಗಳಿಂದ ಅಶ್ವತ್ಥಾಮನನ್ನು ಮುಚ್ಚಿದನು.

09013037a ಸುರಥಂ ತು ತತಃ ಕ್ರುದ್ಧಮಾಪತಂತಂ ಮಹಾರಥಂ|

09013037c ಚುಕೋಪ ಸಮರೇ ದ್ರೌಣಿರ್ದಂಡಾಹತ ಇವೋರಗಃ||

ಸಮರದಲ್ಲಿ ಕ್ರುದ್ಧನಾಗಿ ತನ್ನ ಮೇಲೆ ಎರಗುತ್ತಿದ್ದ ಮಹಾರಥ ಸುರಥನನ್ನು ನೋಡಿ ದ್ರೌಣಿಯು ದಂಡದಿಂದ ಪೆಟ್ಟುತಿಂದ ಸರ್ಪದಂತೆ ಅತಿ ಕುಪಿತನಾದನು.

09013038a ತ್ರಿಶಿಖಾಂ ಭ್ರುಕುಟೀಂ ಕೃತ್ವಾ ಸೃಕ್ಕಿಣೀ ಪರಿಲೇಲಿಹನ್|

09013038c ಉದ್ವೀಕ್ಷ್ಯ ಸುರಥಂ ರೋಷಾದ್ಧನುರ್ಜ್ಯಾಮವಮೃಜ್ಯ ಚ||

09013038e ಮುಮೋಚ ತೀಕ್ಷ್ಣಂ ನಾರಾಚಂ ಯಮದಂಡಸಮದ್ಯುತಿಂ||

ಹುಬ್ಬನ್ನು ಗಂಟಿಕ್ಕಿ ಕಟವಾಯಿಯನ್ನು ನೆಕ್ಕುತ್ತಾ ಸುರಥನನ್ನು ಕೋಪದಿಂದ ದಿಟ್ಟಿಸಿ ನೋಡುತ್ತಾ ಧನುಸ್ಸಿನ ಶಿಂಜನಿಯನ್ನು ತೀಡಿ ಯಮದಂಡದಂತೆ ಬೆಳಗುತ್ತಿದ್ದ ತೀಕ್ಷ್ಣ ನಾರಾಚವನ್ನು ಅವನ ಮೇಲೆ ಪ್ರಯೋಗಿಸಿದನು.

09013039a ಸ ತಸ್ಯ ಹೃದಯಂ ಭಿತ್ತ್ವಾ ಪ್ರವಿವೇಶಾತಿವೇಗತಃ|

09013039c ಶಕ್ರಾಶನಿರಿವೋತ್ಸೃಷ್ಟಾ ವಿದಾರ್ಯ ಧರಣೀತಲಂ||

ಶಕ್ರನಿಂದ ಪ್ರಯೋಗಿಸಲ್ಪಟ್ಟ ವಜ್ರಾಯುಧವು ಭೂಮಿಯನ್ನು ಭೇದಿಸಿ ಹೋಗುವಂತೆ ಅದು ಅತಿವೇಗದಿಂದ ಸುರಥನ ಹೃದಯವನ್ನು ಭೇದಿಸಿ ಭೂಮಿಯನ್ನು ಹೊಕ್ಕಿತು.

09013040a ತತಸ್ತಂ ಪತಿತಂ ಭೂಮೌ ನಾರಾಚೇನ ಸಮಾಹತಂ|

09013040c ವಜ್ರೇಣೇವ ಯಥಾ ಶೃಂಗಂ ಪರ್ವತಸ್ಯ ಮಹಾಧನಂ||

ವಜ್ರಾಯುಧ ಪ್ರಹಾರದಿಂದ ಭಿನ್ನ ಪರ್ವತ ಶಿಖರವು ಕೆಳಕ್ಕೆ ಬೀಳುವಂತೆ ಆ ನಾರಾಚದಿಂದ ಪ್ರಹೃತನಾದ ಸುರಥನು ಭಗ್ನನಾಗಿ ಭೂಮಿಯ ಮೇಲೆ ಬಿದ್ದನು.

09013041a ತಸ್ಮಿಂಸ್ತು ನಿಹತೇ ವೀರೇ ದ್ರೋಣಪುತ್ರಃ ಪ್ರತಾಪವಾನ್|

09013041c ಆರುರೋಹ ರಥಂ ತೂರ್ಣಂ ತಮೇವ ರಥಿನಾಂ ವರಃ||

ಆ ವೀರನು ಹತನಾಗಲು ರಥಿಗಳಲ್ಲಿ ಶ್ರೇಷ್ಠ ಪ್ರತಾಪವಾನ್ ದ್ರೋಣಪುತ್ರನು ಬೇಗನೇ ತನ್ನದೇ ರಥವನ್ನು ಏರಿದನು.

09013042a ತತಃ ಸಜ್ಜೋ ಮಹಾರಾಜ ದ್ರೌಣಿರಾಹವದುರ್ಮದಃ|

09013042c ಅರ್ಜುನಂ ಯೋಧಯಾಮಾಸ ಸಂಶಪ್ತಕವೃತೋ ರಣೇ||

ಮಹಾರಾಜ! ಅನಂತರ ಯುದ್ಧದುರ್ಮದ ದ್ರೌಣಿಯು ಸಜ್ಜಾಗಿ ರಣದಲ್ಲಿ ಸಂಶಪ್ತಕರಿಂದ ಸುತ್ತುವರೆಯಲ್ಪಟ್ಟು ಅರ್ಜುನನೊಡನೆ ಯುದ್ಧದಲ್ಲಿ ತೊಡಗಿದನು.

09013043a ತತ್ರ ಯುದ್ಧಂ ಮಹಚ್ಚಾಸೀದರ್ಜುನಸ್ಯ ಪರೈಃ ಸಹ|

09013043c ಮಧ್ಯಂದಿನಗತೇ ಸೂರ್ಯೇ ಯಮರಾಷ್ಟ್ರವಿವರ್ಧನಂ||

ಸೂರ್ಯನು ನಡುನೆತ್ತಿಗೆ ಬರಲು ಶತ್ರುಗಳೊಂದಿಗೆ ಅರ್ಜುನನ ಯಮರಾಷ್ಟ್ರವನ್ನು ವರ್ಧಿಸುವ ಮಹಾ ಯುದ್ಧವು ನಡೆಯಿತು.

09013044a ತತ್ರಾಶ್ಚರ್ಯಮಪಶ್ಯಾಮ ದೃಷ್ಟ್ವಾ ತೇಷಾಂ ಪರಾಕ್ರಮಂ|

09013044c ಯದೇಕೋ ಯುಗಪದ್ವೀರಾನ್ ಸಮಯೋಧಯದರ್ಜುನಃ||

ಒಬ್ಬನೇ ಅನೇಕ ವೀರ ಯೋಧರೊಡನೆ ಯುದ್ಧಮಾಡುತ್ತಿರುವ ಅರ್ಜುನನ ಪರಾಕ್ರಮವನ್ನು ನೋಡಿದೆವು. ಅದೊಂದು ಆಶ್ಚರ್ಯವಾಗಿತ್ತು.

09013045a ವಿಮರ್ದಸ್ತು ಮಹಾನಾಸೀದರ್ಜುನಸ್ಯ ಪರೈಃ ಸಹ|

09013045c ಶತಕ್ರತೋರ್ಯಥಾ ಪೂರ್ವಂ ಮಹತ್ಯಾ ದೈತ್ಯಸೇನಯಾ||

ದೈತ್ಯರ ಮಹಾಸೇನೆಯೊಡನೆ ಹಿಂದೆ ಶತಕ್ರತುವಿನ ಯುದ್ಧವು ಹೇಗಿತ್ತೋ ಹಾಗೆ ಶತ್ರುಗಳೊಂದಿಗೆ ಅರ್ಜುನನ ಯುದ್ಧವು ಮಹಾ ವಿಮರ್ದನಕಾರಿಯಾಗಿತ್ತು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಸಂಕುಲಯುದ್ಧೇ ತ್ರಯೋದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿಮೂರನೇ ಅಧ್ಯಾಯವು.

Comments are closed.