||ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ: ಶ್ರಾದ್ಧ ಪರ್ವ
೨೬
11026001 ವಾಸುದೇವ ಉವಾಚ
11026001a ಉತ್ತಿಷ್ಠೋತ್ತಿಷ್ಠ ಗಾಂಧಾರಿ ಮಾ ಚ ಶೋಕೇ ಮನಃ ಕೃಥಾಃ|
11026001c ತವೈವ ಹ್ಯಪರಾಧೇನ ಕುರವೋ ನಿಧನಂ ಗತಾಃ||
ವಾಸುದೇವನು ಹೇಳಿದನು: “ಏಳು ಗಾಂಧಾರೀ! ಏಳು! ಮನಸ್ಸನ್ನು ಶೋಕದಲ್ಲಿ ಮುಳುಗಿಸಬೇಡ. ನಿನ್ನ ಅಪರಾಧದಿಂದಲೇ ಕುರುಗಳು ನಿಧನ ಹೊಂದಿದರು.
11026002a ಯಾ ತ್ವಂ ಪುತ್ರಂ ದುರಾತ್ಮಾನಮೀರ್ಷುಮತ್ಯಂತಮಾನಿನಮ್|
11026002c ದುರ್ಯೋಧನಂ ಪುರಸ್ಕೃತ್ಯ ದುಷ್ಕೃತಂ ಸಾಧು ಮನ್ಯಸೇ||
11026003a ನಿಷ್ಠುರಂ ವೈರಪರುಷಂ ವೃದ್ಧಾನಾಂ ಶಾಸನಾತಿಗಮ್|
11026003c ಕಥಮಾತ್ಮಕೃತಂ ದೋಷಂ ಮಯ್ಯಾಧಾತುಮಿಹೇಚ್ಚಸಿ||
ದುರಾತ್ಮ, ಮಾತ್ಸರ್ಯಿ, ಅತ್ಯಂತ ಅಭಿಮಾನಿ, ನಿಷ್ಠುರನಾಗಿದ್ದ, ಹಿರಿಯರ ಮಾತನ್ನು ಮೀರುತ್ತಿದ್ದ ವೈರಪುರುಷ ನಿನ್ನ ಪುತ್ರ ದುರ್ಯೋಧನನನ್ನು ಮುಂದಿಟ್ಟುಕೊಂಡು ಮಾಡಿರುವ ದುಷ್ಕರ್ಮವನ್ನು ನೀನು ಸತ್ಕರ್ಮವೆಂದು ಭಾವಿಸುತ್ತಿರುವೆಯಾ? ನಿನ್ನದೇ ದೋಷವನ್ನು ನನ್ನ ಮೇಲೆ ಏಕೆ ಹಾಕುತ್ತಿರುವೆ?
11026004a ಮೃತಂ ವಾ ಯದಿ ವಾ ನಷ್ಟಂ ಯೋಽತೀತಮನುಶೋಚತಿ|
11026004c ದುಃಖೇನ ಲಭತೇ ದುಃಖಂ ದ್ವಾವನರ್ಥೌ ಪ್ರಪದ್ಯತೇ||
ಮೃತನಾದವರ, ನಷ್ಟವಾದುದರ ಮತ್ತು ಆಗಿಹೋದುದರ ಕುರಿತು ಶೋಕಿಸಿ ದುಃಖಿಸುವುದರಿಂದ ದುಃಖವೇ ದೊರೆಯುತ್ತದೆಯಲ್ಲದೇ ಯಾವ ಪರಿಹಾರವೂ ದೊರಕುವುದಿಲ್ಲ.
11026005a ತಪೋರ್ಥೀಯಂ ಬ್ರಾಹ್ಮಣೀ ಧತ್ತ ಗರ್ಭಂ
ಗೌರ್ವೋಢಾರಂ ಧಾವಿತಾರಂ ತುರಂಗೀ|
11026005c ಶೂದ್ರಾ ದಾಸಂ ಪಶುಪಾಲಂ ತು ವೈಶ್ಯಾ
ವಧಾರ್ಥೀಯಂ ತ್ವದ್ವಿಧಾ ರಾಜಪುತ್ರೀ||
ಬ್ರಾಹ್ಮಣಿಯು ತಪಸ್ಸು ಮಾಡಲಿಚ್ಛಿಸುವವನ ಸಲುವಾಗಿ, ಹಸುವು ಹೊರೆಯನ್ನು ಹೊರುವ ಎತ್ತಿಗಾಗಿ, ಕುದುರೆಯು ವೇಗವಾಗಿ ಓಡಬಲ್ಲ ಕುದುರೆಯ ಸಲುವಾಗಿ, ಶೂದ್ರಳು ದಾಸನಿಗಾಗಿ, ವೈಶ್ಯಳು ಪಶುಪಾಲನಿಗಾಗಿ, ಮತ್ತು ನಿನ್ನಂಥಹ ರಾಜಪುತ್ರಿಯು ಯುದ್ಧದಲ್ಲಿ ವಧಿಸಲ್ಪಡಲು ಇಚ್ಛಿಸುವವನಿಗಾಗಿಯೇ ಗರ್ಭವನ್ನು ಧರಿಸುತ್ತಾರೆ.””
11026006 ವೈಶಂಪಾಯನ ಉವಾಚ
11026006a ತಚ್ಚ್ರುತ್ವಾ ವಾಸುದೇವಸ್ಯ ಪುನರುಕ್ತಂ ವಚೋಽಪ್ರಿಯಮ್|
11026006c ತೂಷ್ಣೀಂ ಬಭೂವ ಗಾಂಧಾರೀ ಶೋಕವ್ಯಾಕುಲಲೋಚನಾ||
ವೈಶಂಪಾಯನನು ಹೇಳಿದನು: “ವಾಸುದೇವನು ಪುನಃ ಆಡಿದ ಆ ಅಪ್ರಿಯ ವಚನವನ್ನು ಕೇಳಿ ಶೋಕ-ವ್ಯಾಕುಲ ಲೋಚನೆ ಗಾಂಧಾರಿಯು ಸುಮ್ಮನಾದಳು.
11026007a ಧೃತರಾಷ್ಟ್ರಸ್ತು ರಾಜರ್ಷಿರ್ನಿಗೃಹ್ಯಾಬುದ್ಧಿಜಂ ತಮಃ|
11026007c ಪರ್ಯಪೃಚ್ಚತ ಧರ್ಮಾತ್ಮಾ ಧರ್ಮರಾಜಂ ಯುಧಿಷ್ಠಿರಮ್||
ರಾಜರ್ಷಿ ಧರ್ಮಾತ್ಮಾ ಧೃತರಾಷ್ಟ್ರನಾದರೋ ಅಜ್ಞಾನದಿಂದುಂಟಾಗಿದ್ದ ತಮವನ್ನು ತೊಲಗಿಸಿಕೊಂಡು ಧರ್ಮರಾಜ ಯುಧಿಷ್ಠಿರನಿಗೆ ಕೇಳಿದನು:
11026008a ಜೀವತಾಂ ಪರಿಮಾಣಜ್ಞಃ ಸೈನ್ಯಾನಾಮಸಿ ಪಾಂಡವ|
11026008c ಹತಾನಾಂ ಯದಿ ಜಾನೀಷೇ ಪರಿಮಾಣಂ ವದಸ್ವ ಮೇ||
“ಪಾಂಡವ! ಸೈನ್ಯಗಳಲ್ಲಿ ಜೀವಂತವಾಗಿರುವವರು ಎಷ್ಟು ಎನ್ನುವುದನ್ನು ನೀನು ತಿಳಿದಿದ್ದೀಯೆ. ಹತರಾದವರ ಸಂಖ್ಯೆ ಎಷ್ಟೆಂದು ನಿನಗೆ ತಿಳಿದಿದ್ದರೆ ನನಗೆ ಹೇಳು!”
11026009 ಯುಧಿಷ್ಠಿರ ಉವಾಚ
11026009a ದಶಾಯುತಾನಾಮಯುತಂ ಸಹಸ್ರಾಣಿ ಚ ವಿಂಶತಿಃ|
11026009c ಕೋಟ್ಯಃ ಷಷ್ಟಿಶ್ಚ ಷಟ್ಚೈವ ಯೇಽಸ್ಮಿನ್ರಾಜಮೃಧೇ ಹತಾಃ||
ಯುಧಿಷ್ಠಿರನು ಹೇಳಿದನು: “ರಾಜನ್! ಒಂದು ಅರಬ, ಅರವತ್ತಾರು ಕೋಟಿ ಇಪ್ಪತ್ತು ಸಾವಿರ ಯೋಧರು ಈ ಯುದ್ಧದಲ್ಲಿ ಹತರಾದರು.
11026010a ಅಲಕ್ಷ್ಯಾಣಾಂ ತು ವೀರಾಣಾಂ ಸಹಸ್ರಾಣಿ ಚತುರ್ದಶ|
11026010c ದಶ ಚಾನ್ಯಾನಿ ರಾಜೇಂದ್ರ ಶತಂ ಷಷ್ಟಿಶ್ಚ ಪಂಚ ಚ||
ರಾಜೇಂದ್ರ! ಏನಾದರೆಂದು ತಿಳಿಯದೇ ಇರುವ ವೀರರ ಸಂಖ್ಯೆಯು ಇಪ್ಪತ್ನಾಲ್ಕು ಸಾವಿರದ ಒಂದು ನೂರ ಅರವತ್ತೈದು.”
11026011 ಧೃತರಾಷ್ಟ್ರ ಉವಾಚ
11026011a ಯುಧಿಷ್ಠಿರ ಗತಿಂ ಕಾಂ ತೇ ಗತಾಃ ಪುರುಷಸತ್ತಮಾಃ|
11026011c ಆಚಕ್ಷ್ವ ಮೇ ಮಹಾಬಾಹೋ ಸರ್ವಜ್ಞೋ ಹ್ಯಸಿ ಮೇ ಮತಃ||
ಧೃತರಾಷ್ಟ್ರನು ಹೇಳಿದನು: “ಯುಧಿಷ್ಠಿರ! ಮಹಾಬಾಹೋ! ನೀನು ಸರ್ವಜ್ಞನೆಂದು ನನಗನ್ನಿಸುತ್ತದೆ. ನಿಧನ ಹೊಂದಿದ ಆ ಪುರುಷಸತ್ತಮರು ಯಾವ ಗತಿಯನ್ನು ಹೊಂದಿದ್ದಾರೆ ಎನ್ನುವುದನ್ನೂ ಹೇಳು!”
11026012 ಯುಧಿಷ್ಠಿರ ಉವಾಚ
11026012a ಯೈರ್ಹುತಾನಿ ಶರೀರಾಣಿ ಹೃಷ್ಟೈಃ ಪರಮಸಂಯುಗೇ|
11026012c ದೇವರಾಜಸಮಾಽಲ್ಲೋಕಾನ್ಗತಾಸ್ತೇ ಸತ್ಯವಿಕ್ರಮಾಃ||
ಯುಧಿಷ್ಠಿರನು ಹೇಳಿದನು: “ತಮ್ಮ ಶರೀರಗಳನ್ನು ಈ ಪರಮಸಂಯುಗದಲ್ಲಿ ಸಂತೋಷದಿಂದ ಆಹುತಿಯನ್ನಾಗಿತ್ತ ಸತ್ಯವಿಕ್ರಮಿಗಳು ಇಂದ್ರಲೋಕ ಸಮಾನ ಲೋಕಗಳಿಗೆ ಹೋಗಿದ್ದಾರೆ.
11026013a ಯೇ ತ್ವಹೃಷ್ಟೇನ ಮನಸಾ ಮರ್ತವ್ಯಮಿತಿ ಭಾರತ|
11026013c ಯುಧ್ಯಮಾನಾ ಹತಾಃ ಸಂಖ್ಯೇ ತೇ ಗಂಧರ್ವೈಃ ಸಮಾಗತಾಃ||
ಭಾರತ! ಸಾಯಬೇಕೆಂಬ ಮನಸ್ಸಿನಿಂದ ಮಾತ್ರ ರಣದಲ್ಲಿ ಯುದ್ಧಮಾಡಿ ಸಂತೋಷವಿಲ್ಲದೇ ಸತ್ತವರು ಗಂಧರ್ವರ ಲೋಕಗಳಿಗೆ ಹೋಗಿದ್ದಾರೆ.
11026014a ಯೇ ತು ಸಂಗ್ರಾಮಭೂಮಿಷ್ಠಾ ಯಾಚಮಾನಾಃ ಪರಾಙ್ಮುಖಾಃ|
11026014c ಶಸ್ತ್ರೇಣ ನಿಧನಂ ಪ್ರಾಪ್ತಾ ಗತಾಸ್ತೇ ಗುಹ್ಯಕಾನ್ಪ್ರತಿ||
ಯುದ್ಧಭೂಮಿಯಲ್ಲಿದ್ದುಕೊಂಡು, ಪ್ರಾಣಭಿಕ್ಷೆಯನ್ನು ಬೇಡುತ್ತಾ ಪರಾಙ್ಮುಖರಾಗುತ್ತಿದ್ದಾಗ ಶಸ್ತ್ರದಿಂದ ನಿಧನ ಹೊಂದಿದವರು ಗುಹ್ಯಕರ ಲೋಕಗಳಿಗೆ ಹೋಗಿದ್ದಾರೆ.
11026015a ಪೀಡ್ಯಮಾನಾಃ ಪರೈರ್ಯೇ ತು ಹೀಯಮಾನಾ ನಿರಾಯುಧಾಃ|
11026015c ಹ್ರೀನಿಷೇಧಾ ಮಹಾತ್ಮಾನಃ ಪರಾನಭಿಮುಖಾ ರಣೇ||
11026016a ಚಿದ್ಯಮಾನಾಃ ಶಿತೈಃ ಶಸ್ತ್ರೈಃ ಕ್ಷತ್ರಧರ್ಮಪರಾಯಣಾಃ|
11026016c ಗತಾಸ್ತೇ ಬ್ರಹ್ಮಸದನಂ ಹತಾ ವೀರಾಃ ಸುವರ್ಚಸಃ||
ನಿರಾಯುಧರಾಗಿ ಕೆಳಗೆ ಬಿದ್ದು ಪೀಡಿಸಲ್ಪಟ್ಟರೂ ನಾಚದೇ ರಣದಲ್ಲಿ ಶತ್ರುಗಳನ್ನು ಎದುರಿಸಿ, ನಿಶಿತ ಶಸ್ತ್ರಗಳಿಂದ ವಧಿಸಲ್ಪಟ್ಟ ಕ್ಷತ್ರಧರ್ಮಪರಾಯಣ ಮಹಾತ್ಮ ಸುವರ್ಚಸ ವೀರರು ಬ್ರಹ್ಮಸದನಕ್ಕೆ ಹೋಗಿದ್ದಾರೆ,
11026017a ಯೇ ತತ್ರ ನಿಹತಾ ರಾಜನ್ನಂತರಾಯೋಧನಂ ಪ್ರತಿ|
11026017c ಯಥಾ ಕಥಂ ಚಿತ್ತೇ ರಾಜನ್ಸಂಪ್ರಾಪ್ತಾ ಉತ್ತರಾನ್ಕುರೂನ್||
ರಾಜನ್! ಯುದ್ಧಭೂಮಿಯೊಳಗೆ ಇದ್ದು ಈ ಮೊದಲು ಹೇಳಿದ ರೀತಿಗಳಲ್ಲದೇ ಬೇರೆ ಯಾವುದೇ ರೀತಿಯಲ್ಲಿಯಾದರೂ ಹತರಾದವರು ಉತ್ತರಕುರುದೇಶದಲ್ಲಿ ಜನ್ಮತಾಳುತ್ತಾರೆ.”
11026018 ಧೃತರಾಷ್ಟ್ರ ಉವಾಚ
11026018a ಕೇನ ಜ್ಞಾನಬಲೇನೈವಂ ಪುತ್ರ ಪಶ್ಯಸಿ ಸಿದ್ಧವತ್|
11026018c ತನ್ಮೇ ವದ ಮಹಾಬಾಹೋ ಶ್ರೋತವ್ಯಂ ಯದಿ ವೈ ಮಯಾ||
ಧೃತರಾಷ್ಟ್ರನು ಹೇಳಿದನು: “ಪುತ್ರ! ಯಾವ ಜ್ಞಾನಬಲದಿಂದ ನೀನು ಸಿದ್ಧನಂತೆ ಎಲ್ಲವನ್ನೂ ಕಾಣುತ್ತಿದ್ದೀಯೆ? ಮಹಾಬಾಹೋ! ನಾನು ಕೇಳಬಹುದಾದರೆ ಅದನ್ನು ನನಗೆ ಹೇಳು!”
11026019 ಯುಧಿಷ್ಠಿರ ಉವಾಚ
11026019a ನಿದೇಶಾದ್ಭವತಃ ಪೂರ್ವಂ ವನೇ ವಿಚರತಾ ಮಯಾ|
11026019c ತೀರ್ಥಯಾತ್ರಾಪ್ರಸಂಗೇನ ಸಂಪ್ರಾಪ್ತೋಽಯಮನುಗ್ರಹಃ||
ಯುಧಿಷ್ಠಿರನು ಹೇಳಿದನು: “ನಿನ್ನ ನಿರ್ದೇಶನದಂತೆ ಹಿಂದೆ ನಾನು ವನದಲ್ಲಿ ಸಂಚರಿಸುತ್ತಿರುವಾಗ ತೀರ್ಥಯಾತ್ರಾ ಪ್ರಸಂಗದಲ್ಲಿ ನನಗೆ ಈ ಅನುಗ್ರಹವು ಪ್ರಾಪ್ತವಾಯಿತು.
11026020a ದೇವರ್ಷಿರ್ಲೋಮಶೋ ದೃಷ್ಟಸ್ತತಃ ಪ್ರಾಪ್ತೋಽಸ್ಮ್ಯನುಸ್ಮೃತಿಮ್|
11026020c ದಿವ್ಯಂ ಚಕ್ಷುರಪಿ ಪ್ರಾಪ್ತಂ ಜ್ಞಾನಯೋಗೇನ ವೈ ಪುರಾ||
ಅಲ್ಲಿ ಕಂಡ ದೇವರ್ಷಿ ಲೋಮಶನಿಂದ ನನಗೆ ಅನುಸ್ಮೃತಿಯು ಪ್ರಾಪ್ತವಾಯಿತು. ಜ್ಞಾನಯೋಗದಿಂದ ಹಿಂದೆ ದಿವ್ಯದೃಷ್ಟಿಯೂ ದೊರಕಿತು.”
11026021 ಧೃತರಾಷ್ಟ್ರ ಉವಾಚ
11026021a ಯೇಽತ್ರಾನಾಥಾ ಜನಸ್ಯಾಸ್ಯ ಸನಾಥಾ ಯೇ ಚ ಭಾರತ|
11026021c ಕಚ್ಚಿತ್ತೇಷಾಂ ಶರೀರಾಣಿ ಧಕ್ಷ್ಯಂತಿ ವಿಧಿಪೂರ್ವಕಮ್||
ಧೃತರಾಷ್ಟ್ರನು ಹೇಳಿದನು: “ಭಾರತ! ಇಲ್ಲಿ ಅನೇಕ ಅನಾಥ ಮತ್ತು ಸನಾಥ ಯೋಧರ ಶವಗಳಿವೆ. ಇವರ ಶರೀರಗಳನ್ನು ಕೂಡ ವಿಧಿಪೂರ್ವಕವಾಗಿ ದಹನಮಾಡುತ್ತೀಯೆ ತಾನೇ?
11026022a ನ ಯೇಷಾಂ ಸಂತಿ ಕರ್ತಾರೋ ನ ಚ ಯೇಽತ್ರಾಹಿತಾಗ್ನಯಃ|
11026022c ವಯಂ ಚ ಕಸ್ಯ ಕುರ್ಯಾಮೋ ಬಹುತ್ವಾತ್ತಾತ ಕರ್ಮಣಃ||
ಇವರಲ್ಲಿ ಕೆಲವರಿಗೆ ದಹನಸಂಸ್ಕಾರಗಳನ್ನು ಮಾಡುವವರಿಲ್ಲ. ಕೆಲವರಿಗೆ ಅಗ್ನಿಯಲ್ಲಿ ದಹನವು ಅವರ ಸಂಪ್ರದಾಯಗಳಿಲ್ಲದೇ ಇರುವ ಕಾರಣದಿಂದ ಅಹಿತವೂ ಆಗಿರಬಹುದು. ಮಗೂ! ಅನೇಕರ ದಹನಕಾರ್ಯಗಳನ್ನು ಮಾಡಬೇಕಾಗಿರುವ ನಾವು ಯಾರ ಯಾರ ಕರ್ಮಗಳನ್ನು ಮಾಡೋಣ?
11026023a ಯಾನ್ಸುಪರ್ಣಾಶ್ಚ ಗೃಧ್ರಾಶ್ಚ ವಿಕರ್ಷಂತಿ ತತಸ್ತತಃ|
11026023c ತೇಷಾಂ ತು ಕರ್ಮಣಾ ಲೋಕಾ ಭವಿಷ್ಯಂತಿ ಯುಧಿಷ್ಠಿರ||
ಯುಧಿಷ್ಠಿರ! ಗರುಡ ಪಕ್ಷಿಗಳು ಮತ್ತು ಹದ್ದುಗಳು ಅಲ್ಲಲ್ಲಿ ಎಳೆದಾಡುತ್ತಿರುವವರಿಗೆ ಕೇವಲ ಶ್ರಾದ್ಧಕರ್ಮದಿಂದಲೇ ಪುಣ್ಯ ಲೋಕಗಳು ಪ್ರಾಪ್ತವಾಗುತ್ತವೆ.””
11026024 ವೈಶಂಪಾಯನ ಉವಾಚ
11026024a ಏವಮುಕ್ತೋ ಮಹಾಪ್ರಾಜ್ಞಃ ಕುಂತೀಪುತ್ರೋ ಯುಧಿಷ್ಠಿರಃ|
11026024c ಆದಿದೇಶ ಸುಧರ್ಮಾಣಂ ಧೌಮ್ಯಂ ಸೂತಂ ಚ ಸಂಜಯಮ್||
11026025a ವಿದುರಂ ಚ ಮಹಾಬುದ್ಧಿಂ ಯುಯುತ್ಸುಂ ಚೈವ ಕೌರವಮ್|
11026025c ಇಂದ್ರಸೇನಮುಖಾಂಶ್ಚೈವ ಭೃತ್ಯಾನ್ಸೂತಾಂಶ್ಚ ಸರ್ವಶಃ||
ವೈಶಂಪಾಯನನು ಹೇಳಿದನು: “ಮಹಾಪ್ರಾಜ್ಞನು ಹೀಗೆ ಹೇಳಲು ಕುಂತೀಪುತ್ರ ಯುಧಿಷ್ಠಿರನು ಸುಧರ್ಮ, ಧೌಮ್ಯ, ಸೂತ ಸಂಜಯ, ಮಹಾಬುದ್ಧಿ ವಿದುರ, ಕೌರವ ಯುಯುತ್ಸು, ಸೇವಕ ಇಂದ್ರಸೇನ ಮತ್ತು ಎಲ್ಲ ಸೂತರಿಗೂ ಆದೇಶವಿತ್ತನು:
11026026a ಭವಂತಃ ಕಾರಯಂತ್ವೇಷಾಂ ಪ್ರೇತಕಾರ್ಯಾಣಿ ಸರ್ವಶಃ|
11026026c ಯಥಾ ಚಾನಾಥವತ್ಕಿಂ ಚಿಚ್ಚರೀರಂ ನ ವಿನಶ್ಯತಿ||
“ನೀವು ಯಾರ ಶರೀರವೂ ಅನಾಥ ಶರೀರದಂತೆ ವಿನಾಶಗೊಳ್ಳದ ರೀತಿಯಲ್ಲಿ ಎಲ್ಲರಿಗೂ ಪ್ರೇತಕಾರ್ಯಗಳನ್ನು ಮಾಡಿ!”
11026027a ಶಾಸನಾದ್ಧರ್ಮರಾಜಸ್ಯ ಕ್ಷತ್ತಾ ಸೂತಶ್ಚ ಸಂಜಯಃ|
11026027c ಸುಧರ್ಮಾ ಧೌಮ್ಯಸಹಿತ ಇಂದ್ರಸೇನಾದಯಸ್ತಥಾ||
11026028a ಚಂದನಾಗುರುಕಾಷ್ಠಾನಿ ತಥಾ ಕಾಲೀಯಕಾನ್ಯುತ|
11026028c ಘೃತಂ ತೈಲಂ ಚ ಗಂಧಾಂಶ್ಚ ಕ್ಷೌಮಾಣಿ ವಸನಾನಿ ಚ||
ಧರ್ಮರಾಜನ ಶಾಸನದಂತೆ ಕ್ಷತ್ತ ವಿದುರ, ಸೂತ ಸಂಜಯ, ಧೌಮ್ಯನ ಸಹಿತ ಸುಧರ್ಮ ಮತ್ತು ಇಂದ್ರಸೇನಾದಿಗಳು ಚಂದನ, ಅಗರು, ಕಾಷ್ಠ, ಸುಗಂಧದ್ರವ್ಯ, ತುಪ್ಪ, ಎಣ್ಣೆ, ಗಂಧ, ಮತ್ತು ನವುರಾದ ವಸ್ತ್ರಗಳನ್ನು ಸಂಗ್ರಹಿಸಿದರು.
11026029a ಸಮಾಹೃತ್ಯ ಮಹಾರ್ಹಾಣಿ ದಾರೂಣಾಂ ಚೈವ ಸಂಚಯಾನ್|
11026029c ರಥಾಂಶ್ಚ ಮೃದಿತಾಂಸ್ತತ್ರ ನಾನಾಪ್ರಹರಣಾನಿ ಚ||
11026030a ಚಿತಾಃ ಕೃತ್ವಾ ಪ್ರಯತ್ನೇನ ಯಥಾಮುಖ್ಯಾನ್ನರಾಧಿಪಾನ್|
11026030c ದಾಹಯಾಮಾಸುರವ್ಯಗ್ರಾ ವಿಧಿದೃಷ್ಟೇನ ಕರ್ಮಣಾ||
ಮುರಿದು ಹೋಗಿದ್ದ ರಥಗಳಿಂದ, ನಾನಾ ಶಸ್ತ್ರಗಳಿಂದ ಮತ್ತು ಸಂಗ್ರಹಿಸಿದ ರಾಶಿಗಟ್ಟಲೆ ಕಟ್ಟಿಗೆಗಳಿಂದ ಚಿತೆಗಳನ್ನು ಮಾಡಿ, ಮುಖ್ಯರಿಂದ ಮೊದಲ್ಗೊಂಡು ಕ್ರಮೇಣವಾಗಿ ಎಲ್ಲ ನರಾಧಿಪರಿಗೂ ವೇದಗಳಲ್ಲಿ ಹೇಳಿದ ಕರ್ಮಗಳ ಮೂಲಕ ದಹನಕರ್ಮಗಳನ್ನು ಅವ್ಯಗ್ರರಾಗಿ ಪ್ರಯತ್ನಪಟ್ಟು ಮಾಡಿ ನೆರವೇರಿಸಿದರು.
11026031a ದುರ್ಯೋಧನಂ ಚ ರಾಜಾನಂ ಭ್ರಾತೄಂಶ್ಚಾಸ್ಯ ಶತಾಧಿಕಾನ್|
11026031c ಶಲ್ಯಂ ಶಲಂ ಚ ರಾಜಾನಂ ಭೂರಿಶ್ರವಸಮೇವ ಚ||
11026032a ಜಯದ್ರಥಂ ಚ ರಾಜಾನಮಭಿಮನ್ಯುಂ ಚ ಭಾರತ|
11026032c ದೌಃಶಾಸನಿಂ ಲಕ್ಷ್ಮಣಂ ಚ ಧೃಷ್ಟಕೇತುಂ ಚ ಪಾರ್ಥಿವಮ್||
11026033a ಬೃಹಂತಂ ಸೋಮದತ್ತಂ ಚ ಸೃಂಜಯಾಂಶ್ಚ ಶತಾಧಿಕಾನ್|
11026033c ರಾಜಾನಂ ಕ್ಷೇಮಧನ್ವಾನಂ ವಿರಾಟದ್ರುಪದೌ ತಥಾ||
11026034a ಶಿಖಂಡಿನಂ ಚ ಪಾಂಚಾಲ್ಯಂ ಧೃಷ್ಟದ್ಯುಮ್ನಂ ಚ ಪಾರ್ಷತಮ್|
11026034c ಯುಧಾಮನ್ಯುಂ ಚ ವಿಕ್ರಾಂತಮುತ್ತಮೌಜಸಮೇವ ಚ||
11026035a ಕೌಸಲ್ಯಂ ದ್ರೌಪದೇಯಾಂಶ್ಚ ಶಕುನಿಂ ಚಾಪಿ ಸೌಬಲಮ್|
11026035c ಅಚಲಂ ವೃಷಕಂ ಚೈವ ಭಗದತ್ತಂ ಚ ಪಾರ್ಥಿವಮ್||
11026036a ಕರ್ಣಂ ವೈಕರ್ತನಂ ಚೈವ ಸಹಪುತ್ರಮಮರ್ಷಣಮ್|
11026036c ಕೇಕಯಾಂಶ್ಚ ಮಹೇಷ್ವಾಸಾಂಸ್ತ್ರಿಗರ್ತಾಂಶ್ಚ ಮಹಾರಥಾನ್||
11026037a ಘಟೋತ್ಕಚಂ ರಾಕ್ಷಸೇಂದ್ರಂ ಬಕಭ್ರಾತರಮೇವ ಚ|
11026037c ಅಲಂಬುಸಂ ಚ ರಾಜಾನಂ ಜಲಸಂಧಂ ಚ ಪಾರ್ಥಿವಮ್||
11026038a ಅನ್ಯಾಂಶ್ಚ ಪಾರ್ಥಿವಾನ್ರಾಜನ್ ಶತಶೋಽಥ ಸಹಸ್ರಶಃ|
11026038c ಘೃತಧಾರಾಹುತೈರ್ದೀಪ್ತೈಃ ಪಾವಕೈಃ ಸಮದಾಹಯನ್||
ರಾಜಾ ದುರ್ಯೋಧನ, ಅವನ ನೂರು ಸಹೋದರರು, ಶಲ್ಯ, ಶಲ, ರಾಜಾ ಭೂರಿಶ್ರವ, ರಾಜ ಜಯದ್ರಥ, ಅಭಿಮನ್ಯು, ದುಃಶಾಸನನ ಮಗ, ಲಕ್ಷ್ಮಣ, ರಾಜ ಧೃಷ್ಟಕೇತು, ಬೃಹಂತ, ಸೋಮದತ್ತ, ನೂರಕ್ಕಿಂತಲೂ ಹೆಚ್ಚು ಸೃಂಜಯರು, ರಾಜ ಕ್ಷೇಮಧನ್ವಿ, ವಿರಾಟ ಮತ್ತು ದ್ರುಪದರು, ಪಾಂಚಾಲ್ಯ ಶಿಖಂಡಿ, ಪಾರ್ಷತ ಧೃಷ್ಟದ್ಯುಮ್ನ, ಯುಧಾಮನ್ಯು, ವಿಕ್ರಾಂತ ಉತ್ತಮೌಜಸ, ಕೌಸಲ್ಯ, ದ್ರೌಪದೇಯರು, ಸೌಬಲ ಶಕುನಿ, ಅಚಲ, ವೃಷಕ, ರಾಜ ಭಗದತ್ತ, ಪುತ್ರರೊಂದಿಗೆ ಅಮರ್ಷಣ ವೈಕರ್ತನ ಕರ್ಣ, ಮಹೇಷ್ವಾಸ ಕೇಕಯ ಸಹೋದರರು, ಮಹಾರಥ ತಿಗರ್ತರು, ರಾಕ್ಷಸೇಂದ್ರ ಘಟೋತ್ಕಚ, ಬಕನ ಸಹೋದರ ಅಲಂಬುಸ, ರಾಜ ಜಲಸಂಧ, ಮತ್ತು ಇನ್ನೂ ಅನೇಕ ನೂರಾರು ಸಹಸ್ರಾರು ರಾಜರನ್ನು ಆಜ್ಯಧಾರೆಗಳಿಂದ ಪ್ರದೀಪ್ತ ಅಗ್ನಿಗಳ ಮೂಲಕ ದಹಿಸಿದರು.
11026039a ಪಿತೃಮೇಧಾಶ್ಚ ಕೇಷಾಂ ಚಿದವರ್ತಂತ ಮಹಾತ್ಮನಾಮ್|
11026039c ಸಾಮಭಿಶ್ಚಾಪ್ಯಗಾಯಂತ ತೇಽನ್ವಶೋಚ್ಯಂತ ಚಾಪರೈಃ||
ಕೆಲವರ ಪಿತೃಮೇಧಕರ್ಮಗಳೂ ನಡೆದವು. ಸಾಮವೇದವನ್ನೂ ಹಾಡಿದರು. ಅನ್ಯರು ಶೋಕಿಸುತ್ತಿದ್ದರು.
11026040a ಸಾಮ್ನಾಮೃಚಾಂ ಚ ನಾದೇನ ಸ್ತ್ರೀಣಾಂ ಚ ರುದಿತಸ್ವನೈಃ|
11026040c ಕಶ್ಮಲಂ ಸರ್ವಭೂತಾನಾಂ ನಿಶಾಯಾಂ ಸಮಪದ್ಯತ||
ಋಕ್-ಸಾಮಗಳ ನಿನಾದದಿಂದಲೂ, ಸ್ತ್ರೀಯರ ರೋದನ ಶಬ್ಧಗಳಿಂದಲೂ ಆ ರಾತ್ರಿ ಎಲ್ಲ ಪ್ರಾಣಿಗಳ ಮನಸ್ಸೂ ವ್ಯಾಕುಲಗೊಂಡಿತ್ತು.
11026041a ತೇ ವಿಧೂಮಾಃ ಪ್ರದೀಪ್ತಾಶ್ಚ ದೀಪ್ಯಮಾನಾಶ್ಚ ಪಾವಕಾಃ|
11026041c ನಭಸೀವಾನ್ವದೃಶ್ಯಂತ ಗ್ರಹಾಸ್ತನ್ವಭ್ರಸಂವೃತಾಃ||
ಹೊಗೆಯಿಲ್ಲದೇ ಉರಿದು ಪ್ರಜ್ವಲಿಸುತ್ತಿದ್ದ ಚಿತಾಗ್ನಿಗಳು ಆಕಾಶದಲ್ಲಿ ಮೋಡಗಳಿಂದ ಸುತ್ತುವರೆಯಲ್ಪಟ್ಟ ಗ್ರಹಗಳಂತೆ ತೋರುತ್ತಿದ್ದವು.
11026042a ಯೇ ಚಾಪ್ಯನಾಥಾಸ್ತತ್ರಾಸನ್ನಾನಾದೇಶಸಮಾಗತಾಃ|
11026042c ತಾಂಶ್ಚ ಸರ್ವಾನ್ಸಮಾನಾಯ್ಯ ರಾಶೀನ್ಕೃತ್ವಾ ಸಹಸ್ರಶಃ||
11026043a ಚಿತ್ವಾ ದಾರುಭಿರವ್ಯಗ್ರಃ ಪ್ರಭೂತೈಃ ಸ್ನೇಹತಾಪಿತೈಃ|
11026043c ದಾಹಯಾಮಾಸ ವಿದುರೋ ಧರ್ಮರಾಜಸ್ಯ ಶಾಸನಾತ್||
ನಾನಾದೇಶಗಳಿಂದ ಬಂದು ಅಲ್ಲಿ ಅನಾಥರಾಗಿ ಸತ್ತಿದ್ದ ಎಲ್ಲರನ್ನೂ ಒಂದುಗೂಡಿಸಿ, ಸಹಸ್ರಾರು ರಾಶಿಗಳನ್ನು ಮಾಡಿ, ಕಟ್ಟಿಗೆ, ಮತ್ತು ತುಪ್ಪಗಳಿಂದ ಎಲ್ಲರ ದಹನ ಸಂಸ್ಕಾರಗಳನ್ನೂ ವಿದುರನು ಧರ್ಮರಾಜನ ಶಾಸನದಂತೆ ಮಾಡಿಸಿದನು.
11026044a ಕಾರಯಿತ್ವಾ ಕ್ರಿಯಾಸ್ತೇಷಾಂ ಕುರುರಾಜೋ ಯುಧಿಷ್ಠಿರಃ|
11026044c ಧೃತರಾಷ್ಟ್ರಂ ಪುರಸ್ಕೃತ್ಯ ಗಂಗಾಮಭಿಮುಖೋಽಗಮತ್||
ಅವರ ಕ್ರಿಯೆಗಳನ್ನು ಮಾಡಿಸಿ ಕುರುರಾಜ ಯುಧಿಷ್ಠಿರನು ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಗಂಗಾನದಿಯ ಕಡೆ ಹೊರಟನು.”
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಶ್ರಾದ್ಧಪರ್ವಣಿ ಕುರೂಣಾಮೌರ್ಧ್ವದೇಹಿಕೇ ಷಡ್ವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಶ್ರಾದ್ಧಪರ್ವದಲ್ಲಿ ಕುರೂಣಾಮೌರ್ಧ್ವದೇಹಿಕ ಎನ್ನುವ ಇಪ್ಪತ್ತಾರನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಣಿ ಶ್ರಾದ್ಧಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಶ್ರಾದ್ಧಪರ್ವವು|
ಇದೂವರೆಗಿನ ಒಟ್ಟು ಮಹಾಪರ್ವಗಳೂ – ೧೦/೧೮, ಉಪಪರ್ವಗಳು-೮೨/೧೦೦, ಅಧ್ಯಾಯಗಳು-೧೩೨೭/೧೯೯೫, ಶ್ಲೋಕಗಳು-೪೯೯೮೬/೭೩೭೮೪