ಆದಿ ಪರ್ವ: ಆಸ್ತೀಕ ಪರ್ವ
೪೦
ಜನಮೇಜಯನ ಪಟ್ಟಾಭಿಷೇಕ ಮತ್ತು ವಿವಾಹ (೧-೧೦).
01040001 ಸೂತ ಉವಾಚ
01040001a ತಂ ತಥಾ ಮಂತ್ರಿಣೋ ದೃಷ್ಟ್ವಾ ಭೋಗೇನ ಪರಿವೇಷ್ಟಿತಂ|
01040001c ವಿವರ್ಣವದನಾಃ ಸರ್ವೇ ರುರುದುರ್ಭೃಶದುಃಖಿತಾಃ||
ಸೂತನು ಹೇಳಿದನು: “ಸರ್ಪವು ಸುತ್ತಿಹಾಕಿಕೊಂಡ ಅವನನ್ನು ನೋಡಿದ ಮಂತ್ರಿಗಳೆಲ್ಲರೂ ವಿವರ್ಣವದನರಾಗಿ ದುಃಖಪೀಡಿತರಾಗಿ ರೋದಿಸಿದರು.
01040002a ತಂ ತು ನಾದಂ ತತಃ ಶ್ರುತ್ವಾ ಮಂತ್ರಿಣಸ್ತೇ ಪ್ರದುದ್ರುವುಃ|
01040002c ಅಪಶ್ಯಂಶ್ಚೈವ ತೇ ಯಾಂತಮಾಕಾಶೇ ನಾಗಮದ್ಭುತಂ||
01040003a ಸೀಮಂತಮಿವ ಕುರ್ವಾಣಂ ನಭಸಃ ಪದ್ಮವರ್ಚಸಂ|
01040003c ತಕ್ಷಕಂ ಪನ್ನಗಶ್ರೇಷ್ಠಂ ಭೃಶಂ ಶೋಕಪರಾಯಣಾಃ||
ಅವನ ಅಟ್ಟಹಾಸವನ್ನು ಕೇಳಿದ ಮಂತ್ರಿಗಳು ಎಲ್ಲಕಡೆ ಪಲಾಯನ ಮಾಡತೊಡಗಿದರು. ಶೋಕಪರಾಯಣರಾಗಿ ಓಡುತ್ತಿರುವಾಗ ಅವರು ಆ ಅದ್ಭುತ ನಾಗ ಪನ್ನಗಶ್ರೇಷ್ಠ ತಕ್ಷಕನು ಆಕಾಶವನ್ನು ಸೀಳುತ್ತಿರುವಂತೆ ಪದ್ಮವರ್ಚಸ ರೇಖೆಯನ್ನುಂಟುಮಾಡುತ್ತಾ ಹೋಗುವುದನ್ನು ಕಂಡರು.
01040004a ತತಸ್ತು ತೇ ತದ್ಗೃಹಮಗ್ನಿನಾ ವೃತಂ
ಪ್ರದೀಪ್ಯಮಾನಂ ವಿಷಜೇನ ಭೋಗಿನಃ|
01040004c ಭಯಾತ್ಪರಿತ್ಯಜ್ಯ ದಿಶಃ ಪ್ರಪೇದಿರೇ
ಪಪಾತ ತಚ್ಚಾಶನಿತಾಡಿತಂ ಯಥಾ||
ಆ ಗೃಹವು ಸರ್ಪದ ವಿಷಾಗ್ನಿಯಿಂದ ಹತ್ತಿ ಉರಿಯತೊಡಗಿತು. ಮಿಂಚು ಹೊಡೆದವನಂತೆ ಕೆಳಗುರುಳಿದ ರಾಜನನ್ನು ಅಲ್ಲಿಯೇ ಬಿಟ್ಟು ಭಯದಿಂದ ಅವರೆಲ್ಲರೂ ದಿಕ್ಕುಪಾಲಾದರು.
01040005a ತತೋ ನೃಪೇ ತಕ್ಷಕತೇಜಸಾ ಹತೇ
ಪ್ರಯುಜ್ಯ ಸರ್ವಾಃ ಪರಲೋಕಸತ್ಕ್ರಿಯಾಃ|
01040005c ಶುಚಿರ್ದ್ವಿಜೋ ರಾಜಪುರೋಹಿತಸ್ತದಾ
ತಥೈವ ತೇ ತಸ್ಯ ನೃಪಸ್ಯ ಮಂತ್ರಿಣಃ||
ಈ ರೀತಿ ರಾಜನು ತಕ್ಷಕನ ತೇಜಸ್ಸಿನಿಂದ ಹತನಾದ ನಂತರ ಆ ನೃಪನ ಮಂತ್ರಿಗಳು - ಪುಣ್ಯ ದ್ವಿಜರು ಮತ್ತು ರಾಜಪುರೋಹಿತರೊಂದಿಗೆ - ಅವನ ಎಲ್ಲ ಪರಲೋಕಸತ್ಕ್ರಿಯೆಗಳನ್ನೂ ನೆರವೇರಿಸಿದರು.
01040006a ನೃಪಂ ಶಿಶುಂ ತಸ್ಯ ಸುತಂ ಪ್ರಚಕ್ರಿರೇ
ಸಮೇತ್ಯ ಸರ್ವೇ ಪುರವಾಸಿನೋ ಜನಾಃ|
01040006c ನೃಪಂ ಯಮಾಹುಸ್ತಮಮಿತ್ರಘಾತಿನಂ
ಕುರುಪ್ರವೀರಂ ಜನಮೇಜಯಂ ಜನಾಃ||
ಸರ್ವ ಪುರವಾಸಿ ಜನರೂ ಸೇರಿ ಅವನ ಬಾಲಕ ಮಗನನ್ನು ರಾಜನನ್ನಾಗಿ ಮಾಡಿದರು. ಶತ್ರುಘಾತಿ ಕುರುಪ್ರವೀರ ನೃಪನನ್ನು ಜನರು ಜನಮೇಜಯನೆಂದು ಕರೆದರು.
01040007a ಸ ಬಾಲ ಏವಾರ್ಯಮತಿರ್ನೃಪೋತ್ತಮಃ
ಸಹೈವ ತೈರ್ಮಂತ್ರಿಪುರೋಹಿತೈಸ್ತದಾ|
01040007c ಶಶಾಸ ರಾಜ್ಯಂ ಕುರುಪುಂಗವಾಗ್ರಜೋ
ಯಥಾಸ್ಯ ವೀರಃ ಪ್ರಪಿತಾಮಹಸ್ತಥಾ||
ಬಾಲಕನಾಗಿದ್ದರೂ ಆ ನೃಪೋತ್ತಮನು ವಿವೇಕಿಯೂ ಬುದ್ಧಿವಂತನೂ ಆಗಿದ್ದನು. ಅವನ ಮಂತ್ರಿ ಮತ್ತು ಪುರೋಹಿತರೊಡನೆ ಕುರುಪುಂಗವಾಗ್ರಜನು ತನ್ನ ವೀರ ಪ್ರಪಿತಾಮಹನಂತೆ ರಾಜ್ಯವನ್ನು ಆಳಿದನು.
01040008a ತತಸ್ತು ರಾಜಾನಮಮಿತ್ರತಾಪನಂ
ಸಮೀಕ್ಷ್ಯ ತೇ ತಸ್ಯ ನೃಪಸ್ಯ ಮಂತ್ರಿಣಃ|
01040008c ಸುವರ್ಣವರ್ಮಾಣಮುಪೇತ್ಯ ಕಾಶಿಪಂ
ವಪುಷ್ಟಮಾರ್ಥಂ ವರಯಾಂ ಪ್ರಚಕ್ರಮುಃ||
ರಾಜನು ತನ್ನ ಶತ್ರುಗಳನ್ನು ತಡೆಗಟ್ಟಬಲ್ಲ ಎನ್ನುವುದನ್ನು ನೋಡಿದ ನೃಪನ ಮಂತ್ರಿಗಳು ಕಾಶೀರಾಜ ಸುವರ್ಣವರ್ಮನ ಮಗಳು ವಪುಷ್ಠಮೆಯನ್ನು ಅವನಿಗೆ ವಧುವಾಗಿ ಕೇಳಿದರು.
01040009a ತತಃ ಸ ರಾಜಾ ಪ್ರದದೌ ವಪುಷ್ಟಮಾಂ
ಕುರುಪ್ರವೀರಾಯ ಪರೀಕ್ಷ್ಯ ಧರ್ಮತಃ|
01040009c ಸ ಚಾಪಿ ತಾಂ ಪ್ರಾಪ್ಯ ಮುದಾ ಯುತೋಽಭವನ್
ನ ಚಾನ್ಯನಾರೀಷು ಮನೋ ದಧೇ ಕ್ವಚಿತ್||
ಧಾರ್ಮಿಕವಾಗಿ ಅವನನ್ನು ಪರೀಕ್ಷಿಸಿ ರಾಜನು ಕುರುಪ್ರವೀರನಿಗೆ ವಪುಷ್ಟಮೆಯನ್ನು ಕೊಟ್ಟನು. ಅವಳನ್ನು ಪಡೆದ ಅವನೂ ಕೂಡ ಸಂತಸಗೊಂಡನು. ಇದಕ್ಕೂ ಮೊದಲು ಅವನು ತನ್ನ ಮನಸ್ಸನ್ನು ಯಾರಿಗೂ ಕೊಟ್ಟಿರಲಿಲ್ಲ.
01040010a ಸರಸ್ಸು ಫುಲ್ಲೇಷು ವನೇಷು ಚೈವ ಹ
ಪ್ರಸನ್ನಚೇತಾ ವಿಜಹಾರ ವೀರ್ಯವಾನ್|
01040010c ತಥಾ ಸ ರಾಜನ್ಯವರೋ ವಿಜಹ್ರಿವಾನ್
ಯಥೋರ್ವಶೀಂ ಪ್ರಾಪ್ಯ ಪುರಾ ಪುರೂರವಾಃ||
ಆ ವೀರ್ಯವಂತನು ಸರೋವರ ಮತ್ತು ಪುಷ್ಪಭರಿತ ವನಗಳಲ್ಲಿ ಪ್ರಸನ್ನ ಮನಸ್ಕನಾಗಿ ವಿಹರಿಸಿದನು. ಹಿಂದೆ ಪುರೂರವನು ಊರ್ವಶಿಯನ್ನು ಹೊಂದಿ ಹೇಗೆ ಆನಂದವನ್ನು ಅನುಭವಿಸಿದನೋ ಹಾಗೆ ಅವನೂ ಸುಖವನ್ನು ಅನುಭವಿಸಿದನು.
01040011a ವಪುಷ್ಟಮಾ ಚಾಪಿ ವರಂ ಪತಿಂ ತದಾ
ಪ್ರತೀತರೂಪಂ ಸಮವಾಪ್ಯ ಭೂಮಿಪಂ|
01040011c ಭಾವೇನ ರಾಮಾ ರಮಯಾಂ ಬಭೂವ ವೈ
ವಿಹಾರಕಾಲೇಷ್ವವರೋಧಸುಂದರೀ||
ಅತೀವ ಸುಂದರಿ ವಪುಷ್ಟಮೆಯಾದರೂ ತನ್ನ ಹಾಗೆಯೇ ರೂಪವಂತನಾದ ಭೂಮಿಪ ಶ್ರೇಷ್ಠ ಪತಿಯನ್ನು ಪಡೆದು ಅಧಿಕ ಪ್ರೇಮದಿಂದ ಅವನನ್ನು ಸಂತೋಷಗೊಳಿಸಿದಳು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಜನಮೇಜಯರಾಜ್ಯಾಭಿಷೇಕೇ ಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಜನಮೇಜಯರಾಜ್ಯಾಭಿಷೇಕ ಎನ್ನುವ ನಲ್ವತ್ತನೆಯ ಅಧ್ಯಾಯವು.