Adi Parva: Chapter 39

ಆದಿ ಪರ್ವ: ಆಸ್ತೀಕ ಪರ್ವ

೩೯

ತಕ್ಷಕನು ಕಾಶ್ಯಪನನ್ನು ಹಿಂದೆ ಕಳುಹಿಸಿದುದು (೧-೨೦). ತಕ್ಷಕನು ಪರಿಕ್ಷಿತನನ್ನು ಕಚ್ಚಿ ಕೊಂದುದು (೨೧-೩೦).

01039001 ತಕ್ಷಕ ಉವಾಚ

01039001a ದಷ್ಟಂ ಯದಿ ಮಯೇಹ ತ್ವಂ ಶಕ್ತಃ ಕಿಂ ಚಿಚ್ಚಿಕಿತ್ಸಿತುಂ|

01039001c ತತೋ ವೃಕ್ಷಂ ಮಯಾ ದಷ್ಟಮಿಮಂ ಜೀವಯ ಕಾಶ್ಯಪ||

ತಕ್ಷಕನು ಹೇಳಿದನು: “ಕಾಶ್ಯಪ! ನನ್ನಿಂದ ಕಚ್ಚಲ್ಪಟ್ಟ ಯಾರನ್ನೂ ನೀನು ಗುಣಪಡಿಸಬಲ್ಲೆಯೆಂದಾದರೆ ನಾನು ಕಚ್ಚುವ ಈ ವೃಕ್ಷವನ್ನು ಪುನರ್ಜೀವಗೊಳಿಸು.

01039002a ಪರಂ ಮಂತ್ರಬಲಂ ಯತ್ತೇ ತದ್ದರ್ಶಯ ಯತಸ್ವ ಚ|

01039002c ನ್ಯಗ್ರೋಧಮೇನಂ ಧಕ್ಷ್ಯಾಮಿ ಪಶ್ಯತಸ್ತೇ ದ್ವಿಜೋತ್ತಮ||

ದ್ವಿಜೋತ್ತಮ! ನಿನ್ನ ಕಣ್ಣಮುಂದೆಯೇ ಈ ಆಲದ ಮರವನ್ನು ಸುಟ್ಟು ಭಸ್ಮಮಾಡುತ್ತೇನೆ. ಆಗ ನಿನ್ನ ವಿಶೇಷ ಮಂತ್ರಬಲವನ್ನು ತೋರಿಸು.”

01039003 ಕಾಶ್ಯಪ ಉವಾಚ

01039003a ದಶ ನಾಗೇಂದ್ರ ವೃಕ್ಷಂ ತ್ವಂ ಯಮೇನಮಭಿಮನ್ಯಸೇ|

01039003c ಅಹಮೇನಂ ತ್ವಯಾ ದಷ್ಟಂ ಜೀವಯಿಷ್ಯೇ ಭುಜಂಗಮ||

ಕಾಶ್ಯಪನು ಹೇಳಿದನು: “ನಾಗೇಂದ್ರ! ನಿನಗೆ ಇಷ್ಟವಾದರೆ ಈ ವೃಕ್ಷವನ್ನು ಕಚ್ಚು. ಭುಜಂಗಮ! ನೀನು ನೋಡುತ್ತಿದ್ದ ಹಾಗೆಯೇ ಅದನ್ನು ನಾನು ಬದುಕಿಸುತ್ತೇನೆ.””

01039004 ಸೂತ ಉವಾಚ

01039004a ಏವಮುಕ್ತಃ ಸ ನಾಗೇಂದ್ರಃ ಕಾಶ್ಯಪೇನ ಮಹಾತ್ಮನಾ|

01039004c ಅದಶದ್ವೃಕ್ಷಮಭ್ಯೇತ್ಯ ನ್ಯಗ್ರೋಧಂ ಪನ್ನಗೋತ್ತಮಃ||

ಸೂತನು ಹೇಳಿದನು: “ಮಹಾತ್ಮ ಕಾಶ್ಯಪನಿಂದ ಹೀಗೆ ಹೇಳಲ್ಪಟ್ಟ ನಾಗೇಂದ್ರ ಪನ್ನಗೋತ್ತಮನು ಅಲ್ಲಿದ್ದ ನ್ಯಗ್ರೋಧ ವೃಕ್ಷವನ್ನು ಕಚ್ಚಿದನು.

01039005a ಸ ವೃಕ್ಷಸ್ತೇನ ದಷ್ಟಃ ಸನ್ಸದ್ಯ ಏವ ಮಹಾದ್ಯುತೇ|

01039005c ಆಶೀವಿಷವಿಷೋಪೇತಃ ಪ್ರಜಜ್ವಾಲ ಸಮಂತತಃ||

ಆ ಮಹಾದ್ಯುತಿಯಿಂದ ಕಚ್ಚಲ್ಪಟ್ಟ ವೃಕ್ಷವು ವಿಷವನ್ನುಂಡು ಎಲ್ಲಾ ಕಡೆಯಿಂದಲೂ ಸುಟ್ಟು ಉರಿಯತೊಡಗಿತು.

01039006a ತಂ ದಗ್ಧ್ವಾ ಸ ನಗಂ ನಾಗಃ ಕಾಶ್ಯಪಂ ಪುನರಬ್ರವೀತ್|

01039006c ಕುರು ಯತ್ನಂ ದ್ವಿಜಶ್ರೇಷ್ಠ ಜೀವಯೈನಂ ವನಸ್ಪತಿಂ||

ಆ ಮರವನ್ನು ಸುಟ್ಟುಹಾಕಿದ ನಾಗನು ಕಾಶ್ಯಪನಿಗೆ ಪುನಃ ಹೇಳಿದನು: “ದ್ವಿಜಶ್ರೇಷ್ಠ! ಈ ವನಸ್ಪತಿಯನ್ನು ಜೀವಗೊಳಿಸಲು ನಿನ್ನ ಪ್ರಯತ್ನ ಮಾಡು.”

01039007a ಭಸ್ಮೀಭೂತಂ ತತೋ ವೃಕ್ಷಂ ಪನ್ನಗೇಂದ್ರಸ್ಯ ತೇಜಸಾ|

01039007c ಭಸ್ಮ ಸರ್ವಂ ಸಮಾಹೃತ್ಯ ಕಾಶ್ಯಪೋ ವಾಕ್ಯಮಬ್ರವೀತ್||

ಪನ್ನಗೇಂದ್ರನ ತೇಜಸ್ಸಿನಿಂದ ಭಸ್ಮೀಭೂತ ಆ ವೃಕ್ಷದ ಎಲ್ಲ ಭಸ್ಮವನ್ನು ತೆಗೆದುಕೊಂಡು ಕಾಶ್ಯಪನು ಈ ವಾಕ್ಯಗಳನ್ನು ಹೇಳಿದನು:

01039008a ವಿದ್ಯಾಬಲಂ ಪನ್ನಗೇಂದ್ರ ಪಶ್ಯ ಮೇಽಸ್ಮಿನ್ವನಸ್ಪತೌ|

01039008c ಅಹಂ ಸಂಜೀವಯಾಮ್ಯೇನಂ ಪಶ್ಯತಸ್ತೇ ಭುಜಂಗಮ||

“ಪನ್ನಗೇಂದ್ರ! ನೋಡು! ನನ್ನ ವಿದ್ಯಾಬಲದಿಂದ ಈ ವನಸ್ಪತಿಯನ್ನು ಈಗ ಸಜೀವಗೊಳಿಸುತ್ತೇನೆ. ನೋಡುತ್ತಿರು ಭುಜಂಗಮ!”

01039009a ತತಃ ಸ ಭಗವಾನ್ವಿದ್ವಾನ್ಕಾಶ್ಯಪೋ ದ್ವಿಜಸತ್ತಮಃ|

01039009c ಭಸ್ಮರಾಶೀಕೃತಂ ವೃಕ್ಷಂ ವಿದ್ಯಯಾ ಸಮಜೀವಯತ್||

ಆಗ ಆ ಭಗವಾನ್ ವಿದ್ವಾನ್ ದ್ವಿಜಸತ್ತಮ ಕಾಶ್ಯಪನು ಭಸ್ಮದ ರಾಶಿಯಾಗಿದ್ದ ವೃಕ್ಷವನ್ನು ತನ್ನ ವಿದ್ಯೆಯಿಂದ ಸಜೀವಗೊಳಿಸಿದನು.

01039010a ಅಂಕುರಂ ತಂ ಸ ಕೃತವಾಂಸ್ತತಃ ಪರ್ಣದ್ವಯಾನ್ವಿತಂ|

01039010c ಪಲಾಶಿನಂ ಶಾಖಿನಂ ಚ ತಥಾ ವಿಟಪಿನಂ ಪುನಃ||

ಮೊದಲು ಅವನು ಅಂಕುರವನ್ನು ಮಾಡಿದನು, ಅದಕ್ಕೆ ಎರಡು ಎಲೆಗಳನ್ನಿತ್ತನು, ಮತ್ತು ಪಲಾಶ ರೆಂಬೆಗಳನ್ನಿತ್ತು ಪುನಃ ಅದನ್ನು ಮೊದಲಿನ ಮರದಂತೆಯೇ ಮಾಡಿದನು.

01039011a ತಂ ದೃಷ್ಟ್ವಾ ಜೀವಿತಂ ವೃಕ್ಷಂ ಕಾಶ್ಯಪೇನ ಮಹಾತ್ಮನಾ|

01039011c ಉವಾಚ ತಕ್ಷಕೋ ಬ್ರಹ್ಮನ್ನೇತದತ್ಯದ್ಭುತಂ ತ್ವಯಿ||

ಮಹಾತ್ಮ ಕಾಶ್ಯಪನಿಂದ ಜೀವಿತಗೊಂಡ ಆ ವೃಕ್ಷವನ್ನು ನೋಡಿದ ತಕ್ಷಕನು ಹೇಳಿದನು: “ಬ್ರಾಹ್ಮಣ! ನಿನ್ನ ಈ ಕೃತಿಯು ಅತ್ಯದ್ಭುತವೇ ಸರಿ.

01039012a ವಿಪ್ರೇಂದ್ರ ಯದ್ವಿಷಂ ಹನ್ಯಾ ಮಮ ವಾ ಮದ್ವಿಧಸ್ಯ ವಾ|

01039012c ಕಂ ತ್ವಮರ್ಥಮಭಿಪ್ರೇಪ್ಸುರ್ಯಾಸಿ ತತ್ರ ತಪೋಧನ||

ವಿಪ್ರೇಂದ್ರ! ನೀನು ನನ್ನ ಈ ವಿಷ ಅಥವಾ ಬೇರೆ ಯಾವ ವಿಷವನ್ನೂ ನಾಶಪಡಿಸಬಲ್ಲೆ. ತಪೋಧನ! ನೀನು ಹೋಗುತ್ತಿರುವಲ್ಲಿ ಎಷ್ಟು ಸಂಪತ್ತನ್ನು ಅಪೇಕ್ಷಿಸುತ್ತಿದ್ದೀಯೆ?

01039013a ಯತ್ತೇಽಭಿಲಷಿತಂ ಪ್ರಾಪ್ತುಂ ಫಲಂ ತಸ್ಮಾನ್ನೃಪೋತ್ತಮಾತ್|

01039013c ಅಹಮೇವ ಪ್ರದಾಸ್ಯಾಮಿ ತತ್ತೇ ಯದ್ಯಪಿ ದುರ್ಲಭಂ||

ನೃಪೋತ್ತಮನಿಂದ ನೀನು ಬಯಸುವ ಪರಿಹಾರವನ್ನು ಎಷ್ಟು ಕಷ್ಟವಾದರೂ ನಾನೇ ನಿನಗೆ ಕೊಡುತ್ತೇನೆ.

01039014a ವಿಪ್ರಶಾಪಾಭಿಭೂತೇ ಚ ಕ್ಷೀಣಾಯುಷಿ ನರಾಧಿಪೇ|

01039014c ಘಟಮಾನಸ್ಯ ತೇ ವಿಪ್ರ ಸಿದ್ಧಿಃ ಸಂಶಯಿತಾ ಭವೇತ್||

ವಿಪ್ರ! ಬ್ರಾಹ್ಮಣನ ಶಾಪಕ್ಕೊಳಗಾದ ಕ್ಷೀಣಾಯುಷಿ ಆ ನರಾಧಿಪನನ್ನು ಉಳಿಸುವ ನಿನ್ನ ಪ್ರಯತ್ನ ಯಶಸ್ವಿಯಾಗುವುದು ಸಂಶಯವೇ.

01039015a ತತೋ ಯಶಃ ಪ್ರದೀಪ್ತಂ ತೇ ತ್ರಿಷು ಲೋಕೇಷು ವಿಶ್ರುತಂ|

01039015c ವಿರಷ್ಮಿರಿವ ಘರ್ಮಾಂಶುರಂತರ್ಧಾನಮಿತೋ ವ್ರಜೇತ್||

ಅದರಿಂದ ಮೂರೂ ಲೋಕಗಳಲ್ಲಿ ವಿಶೃತ ದೇದೀಪ್ಯಮಾನ ನಿನ್ನ ಈ ಯಶಸ್ಸು ಸೂರ್ಯನಕಿರಣಗಳನ್ನು ಕಿತ್ತುಕೊಂಡರೆ ಹೇಗೋ ಹಾಗೆ ನಂದಿಹೋಗುತ್ತದೆ.”

01039016 ಕಾಶ್ಯಪ ಉವಾಚ

01039016a ಧನಾರ್ಥೀ ಯಾಮ್ಯಹಂ ತತ್ರ ತನ್ಮೇ ದಿತ್ಸ ಭುಜಂಗಮ|

01039016c ತತೋಽಹಂ ವಿನಿವರ್ತಿಷ್ಯೇ ಗೃಹಾಯೋರಗಸತ್ತಮ||

ಕಾಶ್ಯಪನು ಹೇಳಿದನು: “ಹಣಕ್ಕೋಸ್ಕರವೇ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಭುಜಂಗಮ! ಉರಗಸತ್ತಮ! ನೀನು ನನಗೆ ಅದನ್ನೇ ನೀಡುವೆಯಾದರೆ ನಿನ್ನಿಂದ ಅದನ್ನು ಸ್ವೀಕರಿಸಿ ಮನೆಗೆ ಹಿಂದಿರುಗುತ್ತೇನೆ.”

01039017 ತಕ್ಷಕ ಉವಾಚ

01039017a ಯಾವದ್ಧನಂ ಪ್ರಾರ್ಥಯಸೇ ತಸ್ಮಾದ್ರಾಜ್ಞಸ್ತತೋಽಧಿಕಂ|

01039017c ಅಹಂ ತೇಽದ್ಯ ಪ್ರದಾಸ್ಯಾಮಿ ನಿವರ್ತಸ್ವ ದ್ವಿಜೋತ್ತಮ||

ತಕ್ಷಕನು ಹೇಳಿದನು: “ರಾಜನಿಂದ ಎಷ್ಟು ಧನವನ್ನು ಕೇಳಬಯಸುತ್ತೀಯೋ ಅದಕ್ಕೂ ಅಧಿಕ ಧನವನ್ನು ನಾನು ನಿನಗೆ ಕೊಡುತ್ತೇನೆ. ದ್ವಿಜೋತ್ತಮ! ಹಿಂದಿರುಗು.””

01039018 ಸೂತ ಉವಾಚ

01039018a ತಕ್ಷಕಸ್ಯ ವಚಃ ಶ್ರುತ್ವಾ ಕಾಶ್ಯಪೋ ದ್ವಿಜಸತ್ತಮಃ|

01039018c ಪ್ರದಧ್ಯೌ ಸುಮಹಾತೇಜಾ ರಾಜಾನಂ ಪ್ರತಿ ಬುದ್ಧಿಮಾನ್||

01039019a ದಿವ್ಯಜ್ಞಾನಃ ಸ ತೇಜಸ್ವೀ ಜ್ಞಾತ್ವಾ ತಂ ನೃಪತಿಂ ತದಾ|

01039019c ಕ್ಷೀಣಾಯುಷಂ ಪಾಂಡವೇಯಮಪಾವರ್ತತ ಕಾಶ್ಯಪಃ|

01039019e ಲಬ್ಧ್ವಾ ವಿತ್ತಂ ಮುನಿವರಸ್ತಕ್ಷಕಾದ್ಯಾವದೀಪ್ಸಿತಂ||

ಸೂತನು ಹೇಳಿದನು: “ತಕ್ಷಕನ ಮಾತುಗಳನ್ನು ಕೇಳಿದ ಮಹಾತೇಜಸ್ವಿ ಬುದ್ಧಿವಂತ ತೇಜಸ್ವಿ ದ್ವಿಜಸತ್ತಮ ಕಾಶ್ಯಪನು ರಾಜನ ಕುರಿತು ಯೋಚಿಸಿ ತನ್ನ ದಿವ್ಯಜ್ಞಾನದಿಂದ ಪಾಂಡವ ಕುಲದಲ್ಲಿ ಜನಿಸಿದ ಆ ನೃಪತಿಯು ಕ್ಷೀಣಾಯುಷಿಯೆಂದು ತಿಳಿದನು. ಆಗ ಆ ಮುನಿವರನು ತಕ್ಷಕನಿಂದ ತನಗಿಷ್ಟವಾದಷ್ಟು ವಿತ್ತವನ್ನು ಪಡೆದು ಹಿಂದಿರುಗಿದನು.

01039020a ನಿವೃತ್ತೇ ಕಾಶ್ಯಪೇ ತಸ್ಮಿನ್ಸಮಯೇನ ಮಹಾತ್ಮನಿ|

01039020c ಜಗಾಮ ತಕ್ಷಕಸ್ತೂರ್ಣಂ ನಗರಂ ನಾಗಸಾಹ್ವಯಂ||

ಒಪ್ಪಂದದಂತೆ ಆ ಮಹಾತ್ಮ ಕಾಶ್ಯಪನು ಅಲ್ಲಿಂದ ಮರಳಲು, ತಕ್ಷಕನು ಅವಸರದಲ್ಲಿ ನಾಗಸಾಹ್ವಯ ನಗರಕ್ಕೆ ಬಂದನು.

01039021a ಅಥ ಶುಶ್ರಾವ ಗಚ್ಛನ್ಸ ತಕ್ಷಕೋ ಜಗತೀಪತಿಂ|

01039021c ಮಂತ್ರಾಗದೈರ್ವಿಷಹರೈ ರಕ್ಷ್ಯಮಾಣಂ ಪ್ರಯತ್ನತಃ||

ಹೋಗುತ್ತಿರುವಾಗ ತಕ್ಷಕನು ಆ ಜಗತ್ಪತಿಯು ವಿಷಹರ ಮಂತ್ರೌಷಧಿಗಳಿಂದ ಬಹು ಜಾಗರೂಕನಾಗಿ ರಕ್ಷಿಸಲ್ಪಟ್ಟಿದ್ದಾನೆ ಎಂದು ಕೇಳಿದನು.

01039022a ಸ ಚಿಂತಯಾಮಾಸ ತದಾ ಮಾಯಾಯೋಗೇನ ಪಾರ್ಥಿವಃ|

01039022c ಮಯಾ ವಂಚಯಿತವ್ಯೋಽಸೌ ಕ ಉಪಾಯೋ ಭವೇದಿತಿ||

ಆಗ ಅವನು “ರಾಜನನ್ನು ಮಾಯಾಯೋಗದಿಂದ ವಂಚಿಸಬೇಕು. ಅದರ ಉಪಾಯವಾದರೂ ಏನು?” ಎಂದು ಚಿಂತಿಸತೊಡಗಿದನು.

01039023a ತತಸ್ತಾಪಸರೂಪೇಣ ಪ್ರಾಹಿಣೋತ್ಸ ಭುಜಂಗಮಾನ್|

01039023c ಫಲಪತ್ರೋದಕಂ ಗೃಹ್ಯ ರಾಜ್ಞೇ ನಾಗೋಽಥ ತಕ್ಷಕಃ||

ಆಗ ನಾಗ ತಕ್ಷಕನು ಕೆಲವು ಸರ್ಪಗಳನ್ನು ತಾಪಸರ ರೂಪದಲ್ಲಿ ರಾಜನಿಗೆ ಫಲ ಪತ್ರ ಉದಕಗಳನ್ನು ಕೊಟ್ಟು ಕಳುಹಿಸಿದನು.

01039024 ತಕ್ಷಕ ಉವಾಚ

01039024a ಗಚ್ಛಧ್ವಂ ಯೂಯಮವ್ಯಗ್ರಾ ರಾಜಾನಂ ಕಾರ್ಯವತ್ತಯಾ|

01039024c ಫಲಪತ್ರೋದಕಂ ನಾಮ ಪ್ರತಿಗ್ರಾಹಯಿತುಂ ನೃಪಂ||

ತಕ್ಷಕನು ಹೇಳಿದನು: “ರಾಜನಲ್ಲಿ ಒಂದು ಮುಖ್ಯ ಕಾರ್ಯವಿದೆಯೆಂದು ನೀವೆಲ್ಲರೂ ಅವನಲ್ಲಿ ಹೋಗಿ ರಾಜನು ಫಲಪತ್ರೋದಕಗಳನ್ನು ಸ್ವೀಕರಿಸುವಂತೆ ಒತ್ತಾಯಿಸಿ.””

01039025 ಸೂತ ಉವಾಚ

01039025a ತೇ ತಕ್ಷಕಸಮಾದಿಷ್ಟಾಸ್ತಥಾ ಚಕ್ರುರ್ಭುಜಂಗಮಾಃ|

01039025c ಉಪನಿನ್ಯುಸ್ತಥಾ ರಾಜ್ಞೇ ದರ್ಭಾನಾಪಃ ಫಲಾನಿ ಚ||

ಸೂತನು ಹೇಳಿದನು: “ತಕ್ಷಕನ ಮಾತಿನಂತೆ ಆ ಸರ್ಪಗಳು ರಾಜನಿಗೆ ದರ್ಭೆ, ನೀರು ಮತ್ತು ಫಲಗಳನ್ನು ಹಿಡಿದು ಹೊರಟವು.

01039026a ತಚ್ಚ ಸರ್ವಂ ಸ ರಾಜೇಂದ್ರಃ ಪ್ರತಿಜಗ್ರಾಹ ವೀರ್ಯವಾನ್|

01039026c ಕೃತ್ವಾ ಚ ತೇಷಾಂ ಕಾರ್ಯಾಣಿ ಗಮ್ಯತಾಮಿತ್ಯುವಾಚ ತಾನ್||

ವೀರ್ಯವಾನ್ ರಾಜೇಂದ್ರನು ಅವರು ತಂದ ಸರ್ವವನ್ನೂ ಸ್ವೀಕರಿಸಿ ಅವರ ಕೆಲಸವು ಮುಗಿದ ಬಳಿಕ ಅವರಿಗೆ ಹಿಂದಿರುಗಲು ಹೇಳಿದನು.

01039027a ಗತೇಷು ತೇಷು ನಾಗೇಷು ತಾಪಸಚ್ಛದ್ಮರೂಪಿಷು|

01039027c ಅಮಾತ್ಯಾನ್ಸುಹೃದಶ್ಚೈವ ಪ್ರೋವಾಚ ಸ ನರಾಧಿಪಃ||

ತಾಪಸರ ರೂಪ ತಳೆದಿದ್ದ ಆ ನಾಗಗಳು ಹೋದ ಬಳಿಕ ತನ್ನ ಅಮಾತ್ಯರು ಮತ್ತು ಸುಹೃದಯರಿಗೆ ಹೇಳಿದನು:

01039028a ಭಕ್ಷಯಂತು ಭವಂತೋ ವೈ ಸ್ವಾದೂನೀಮಾನಿ ಸರ್ವಶಃ|

01039028c ತಾಪಸೈರುಪನೀತಾನಿ ಫಲಾನಿ ಸಹಿತಾ ಮಯಾ||

“ತಾಪಸರು ತಂದಿರುವ ಈ ಸ್ವಾಧಿಷ್ಟ ಫಲಗಳನ್ನು ನೀವೆಲ್ಲರೂ ನನ್ನ ಜೊತೆ ಸೇರಿ ಸೇವಿಸಿರಿ.”

01039029a ತತೋ ರಾಜಾ ಸಸಚಿವಃ ಫಲಾನ್ಯಾದಾತುಮೈಚ್ಛತ|

01039029c ಯದ್ಗೃಹೀತಂ ಫಲಂ ರಾಜ್ಞಾ ತತ್ರ ಕೃಮಿರಭೂದಣುಃ|

01039029e ಹ್ರಸ್ವಕಃ ಕೃಷ್ಣನಯನಸ್ತಾಮ್ರೋ ವರ್ಣೇನ ಶೌನಕ||

ಶೌನಕ! ರಾಜನು ತನ್ನ ಸಚಿವರೊಂದಿಗೆ ಹಣ್ಣುಗಳನ್ನು ತಿನ್ನಲು ಬಯಸಿದಾಗ, ರಾಜನು ಹಿಡಿದ ಫಲದಲ್ಲಿ ಅಣುವಿನಷ್ಟು ಚಿಕ್ಕ, ಕಪ್ಪು ಕಣ್ಣುಗಳ ತಾಮ್ರ ವರ್ಣದ ಕ್ರಿಮಿಯೊಂದು ಕಾಣಿಸಿಕೊಂಡಿತು.

01039030a ಸ ತಂ ಗೃಹ್ಯ ನೃಪಶ್ರೇಷ್ಠಃ ಸಚಿವಾನಿದಮಬ್ರವೀತ್|

01039030c ಅಸ್ತಮಭ್ಯೇತಿ ಸವಿತಾ ವಿಷಾದದ್ಯ ನ ಮೇ ಭಯಂ||

01039031a ಸತ್ಯವಾಗಸ್ತು ಸ ಮುನಿಃ ಕೃಮಿಕೋ ಮಾಂ ದಶತ್ವಯಂ|

01039031c ತಕ್ಷಕೋ ನಾಮ ಭೂತ್ವಾ ವೈ ತಥಾ ಪರಿಹೃತಂ ಭವೇತ್||

ಅದನ್ನು ಹಿಡಿದ ನೃಪಶ್ರೇಷ್ಠನು ತನ್ನ ಸಚಿವರನ್ನುದ್ದೇಶಿಸಿ ಹೇಳಿದನು: “ಸೂರ್ಯಾಸ್ತವಾಗುತ್ತಿದೆ. ಇನ್ನು ನನಗೆ ವಿಷದ ಭಯವಿಲ್ಲ. ಆ ಮುನಿಯ ಮಾತನ್ನು ಸತ್ಯವಾಗಿಸಲೋಸುಗ ಈ ಕ್ರಿಮಿಯು ತಕ್ಷಕನಾಗಿ ನನ್ನನ್ನು ಕಚ್ಚಲಿ. ಈ ರೀತಿ ಸತ್ಯವನ್ನು ಸುಳ್ಳಾಗದಂತೆ ತಡೆಗಟ್ಟಲಿ!”

01039032a ತೇ ಚೈನಮನ್ವವರ್ತಂತ ಮಂತ್ರಿಣಃ ಕಾಲಚೋದಿತಾಃ|

01039032c ಏವಮುಕ್ತ್ವಾ ಸ ರಾಜೇಂದ್ರೋ ಗ್ರೀವಾಯಾಂ ಸಂನಿವೇಶ್ಯ ಹ|

01039032e ಕೃಮಿಕಂ ಪ್ರಾಹಸತ್ತೂರ್ಣಂ ಮುಮೂರ್ಷುರ್ನಷ್ಟಚೇತನಃ||

ಕಾಲಚೋದಿತ ಮಂತ್ರಿಗಳು ಅವನ ಈ ಮಾತನ್ನು ಪ್ರಶಂಸಿಸಿದರು. ಹೀಗೆ ಹೇಳಿದ ರಾಜೇಂದ್ರನು ಜೋರಾಗಿ ನಗುತ್ತಾ ಆ ಕ್ರಿಮಿಯನ್ನು ತನ್ನ ಕುತ್ತಿಗೆಯ ಮೇಲೆ ಇಟ್ಟಾಕ್ಷಣವೇ ತನ್ನ ಚೇತನವನ್ನು ಕಳೆದುಕೊಂಡು ಮೂರ್ಛಿತನಾದನು.

01039033a ಹಸನ್ನೇವ ಚ ಭೋಗೇನ ತಕ್ಷಕೇಣಾಭಿವೇಷ್ಟಿತಃ|

01039033c ತಸ್ಮಾತ್ಫಲಾದ್ವಿನಿಷ್ಕ್ರಮ್ಯ ಯತ್ತದ್ರಾಜ್ಞೇ ನಿವೇದಿತಂ||

ರಾಜನು ನಗುತ್ತಿರುವಾಗ ಆ ಫಲದಿಂದ ಹೊರಬಂದ ತಕ್ಷಕನು ಅವನನ್ನು ಸುತ್ತಿಹಾಕಿಕೊಂಡಿದ್ದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ತಕ್ಷಕದಂಶೇ ಏಕೋನಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ತಕ್ಷಕದಂಶ ಎನ್ನುವ ಮೂವತ್ತೊಂಭತ್ತನೆಯ ಅಧ್ಯಾಯವು.

Leave a Reply

Your email address will not be published. Required fields are marked *