Adi Parva: Chapter 34

ಆದಿ ಪರ್ವ: ಆಸ್ತೀಕ ಪರ್ವ

೩೪

ಏಲಾಪತ್ರನು ಶಾಪವಿಮೋಚನೆಯ ಉಪಾಯವನ್ನು ತಿಳಿಸಿದುದು (೧-೧೫).

01034001 ಸೂತ ಉವಾಚ

01034001a ಶ್ರುತ್ವಾ ತು ವಚನಂ ತೇಷಾಂ ಸರ್ವೇಷಾಮಿತಿ ಚೇತಿ ಚ|

01034001c ವಾಸುಕೇಶ್ಚ ವಚಃ ಶ್ರುತ್ವಾ ಏಲಾಪತ್ರೋಽಬ್ರವೀದಿದಂ||

ಸೂತನು ಹೇಳಿದನು: “ಎಲ್ಲ ನಾಗಗಳು ಅವರವರ ಮಾತುಗಳನ್ನು ಹೇಳಿದುದನ್ನು ಮತ್ತು ವಾಸುಕಿಯ ಈ ಮಾತುಗಳನ್ನು ಕೇಳಿದ ಏಲಾಪತ್ರನು ಅವರನ್ನುದ್ದೇಶಿಸಿ ಹೇಳಿದನು:

01034002a ನ ಸ ಯಜ್ಞೋ ನ ಭವಿತಾ ನ ಸ ರಾಜಾ ತಥಾವಿಧಃ|

01034002c ಜನಮೇಜಯಃ ಪಾಂಡವೇಯೋ ಯತೋಽಸ್ಮಾಕಂ ಮಹಾಭಯಂ||

“ವಿಧಿವಿಹಿತವಾದ ಈ ಯಜ್ಞವನ್ನಾಗಲೀ ಅಥವಾ ನಮ್ಮೆಲ್ಲರ ಈ ಮಹಾಭಯಕ್ಕೆ ಕಾರಣವಾಗಬಲ್ಲ ಪಾಂಡವೇಯ ಜನಮೇಜಯನನ್ನಾಗಲೀ ತಡೆಯಲು ಸಾಧ್ಯವಿಲ್ಲ.

01034003a ದೈವೇನೋಪಹತೋ ರಾಜನ್ಯೋ ಭವೇದಿಹ ಪೂರುಷಃ|

01034003c ಸ ದೈವಮೇವಾಶ್ರಯತೇ ನಾನ್ಯತ್ತತ್ರ ಪರಾಯಣಂ||

ರಾಜನ್! ದೈವ ಪೀಡಿತ ಪುರುಷನು ದೈವವನ್ನು ಮಾತ್ರ ಮೊರೆಹೊಗಬೇಕೇ ವಿನಃ ಬೇರೆ ಯಾವುದೂ ಅವನ ರಕ್ಷಣೆಗೆ ಬರುವುದಿಲ್ಲ.

01034004a ತದಿದಂ ದೈವಮಸ್ಮಾಕಂ ಭಯಂ ಪನ್ನಗಸತ್ತಮಾಃ|

01034004c ದೈವಮೇವಾಶ್ರಯಾಮೋಽತ್ರ ಶೃಣುಧ್ವಂ ಚ ವಚೋ ಮಮ||

ಪನ್ನಗಸತ್ತಮರೇ! ನಮ್ಮೆಲ್ಲರ ಈ ಭಯವೂ ಕೂಡ ದೈವದತ್ತವಾದದ್ದು. ದೈವದ ಆಶ್ರಯವು ಮಾತ್ರ ನಮಗಿರುವ ದಾರಿ. ನನ್ನ ಈ ಮಾತುಗಳನ್ನು ಕೇಳಿ.

01034005a ಅಹಂ ಶಾಪೇ ಸಮುತ್ಸೃಷ್ಟೇ ಸಮಶ್ರೌಷಂ ವಚಸ್ತದಾ|

01034005c ಮಾತುರುತ್ಸಂಗಮಾರೂಧೋ ಭಯಾತ್ಪನ್ನಗಸತ್ತಮಾಃ||

01034006a ದೇವಾನಾಂ ಪನ್ನಗಶ್ರೇಷ್ಠಾಸ್ತೀಕ್ಷ್ಣಾಸ್ತೀಕ್ಷ್ಣಾ ಇತಿ ಪ್ರಭೋ|

01034006c ಪಿತಾಮಹಮುಪಾಗಮ್ಯ ದುಃಖಾರ್ತಾನಾಂ ಮಹಾದ್ಯುತೇ||

ಪನ್ನಗಸತ್ತಮರೇ! ನಮ್ಮ ಕುರಿತು ಶಾಪವನ್ನು ಉಚ್ಛರಿಸಿದಾಗ ನಾನು ಭಯದಿಂದ ತಾಯಿಯ ತೊಡೆಯಮೇಲೇರಿ ಕುಳಿತುಕೊಂಡೆ. ಆಗ ನಾನು ದೇವಪ್ರಭುವು “ಇದು ಬಹಳ ತೀಕ್ಷ್ಣವಾದದ್ದು! ತೀಕ್ಷ್ಣವಾದದ್ದು!” ಎಂದು ಹೇಳುವುದನ್ನು ಕೇಳಿದೆ. ಆಗ ಆ ಮಹಾದ್ಯುತಿಗಳು ದುಃಖಾರ್ತರಾಗಿ ಪಿತಾಮಹನ ಬಳಿ ಹೋಗಿ ಹೇಳಿದರು:

01034007 ದೇವಾ ಊಚುಃ

01034007a ಕಾ ಹಿ ಲಬ್ಧ್ವಾ ಪ್ರಿಯಾನ್ಪುತ್ರಾನ್ ಶಪೇದೇವಂ ಪಿತಾಮಹ|

01034007c ಋತೇ ಕದ್ರೂಂ ತೀಕ್ಷ್ಣರೂಪಾಂ ದೇವದೇವ ತವಾಗ್ರತಃ||

ದೇವತೆಗಳು ಹೇಳಿದರು: “ಪಿತಾಮಹ! ದೇವದೇವ! ಕದ್ರುವನ್ನು ಬಿಟ್ಟು ಇನ್ನು ಯಾವ ತಾಯಿಯು ಪ್ರಿಯ ಪುತ್ರರನ್ನು ಹಡೆದು ಅವರನ್ನೇ ಈ ರೀತಿ ತೀಕ್ಷ್ಣವಾಗಿ ನಿನ್ನ ಮುಂದೆಯೇ ಶಪಿಸಬಹುದು?

01034008a ತಥೇತಿ ಚ ವಚಸ್ತಸ್ಯಾಸ್ತ್ವಯಾಪ್ಯುಕ್ತಂ ಪಿತಾಮಹ|

01034008c ಏತದಿಚ್ಛಾಮ ವಿಜ್ಞಾತುಂ ಕಾರಣಂ ಯನ್ನ ವಾರಿತಾ||

ಪಿತಾಮಹ! ನೀನೂ ಕೂಡ ಹಾಗೆಯೇ ಆಗಲಿ ಎಂದು ಹೇಳಿದ್ದುದನ್ನು ಕೇಳಿದೆವು. ನೀನು ಅದನ್ನು ತಡೆಹಿಡಿಯದೇ ಇರಲು ಕಾರಣವನ್ನು ತಿಳಿಯ ಬಯಸುತ್ತೇವೆ.”

01034009 ಬ್ರಹ್ಮೋವಾಚ

01034009a ಬಹವಃ ಪನ್ನಗಾಸ್ತೀಕ್ಷ್ಣಾ ಭೀಮವೀರ್ಯಾ ವಿಷೋಲ್ಬಣಾಃ|

01034009c ಪ್ರಜಾನಾಂ ಹಿತಕಾಮೋಽಹಂ ನ ನಿವಾರಿತವಾಂಸ್ತದಾ||

ಬ್ರಹ್ಮನು ಹೇಳಿದನು: “ತೀಕ್ಷ್ಣರೂ ಭೀಮವೀರ್ಯರೂ ಆದ ವಿಷಭರಿತ ನಾಗಗಳು ಬಹಳವಾಗಿದ್ದಾರೆ. ಪ್ರಜೆಗಳೆಲ್ಲರ ಹಿತಾಸಕ್ತಿಯಿಂದ ನಾನು ಅವಳನ್ನು ತಡೆಯಲಿಲ್ಲ.

01034010a ಯೇ ದಂದಶೂಕಾಃ ಕ್ಷುದ್ರಾಶ್ಚ ಪಾಪಚಾರಾ ವಿಷೋಲ್ಬಣಾಃ|

01034010c ತೇಷಾಂ ವಿನಾಶೋ ಭವಿತಾ ನ ತು ಯೇ ಧರ್ಮಚಾರಿಣಃ||

ಯಾರು ಸದಾ ಕಚ್ಚುವ ಪ್ರವೃತ್ತಿಯನ್ನು ಹೊಂದಿದ್ದಾರೋ, ಸಣ್ಣ ಸಣ್ಣ ವಿಷಯಕ್ಕೂ ಕಚ್ಚುತ್ತಾರೋ, ಹೆಚ್ಚಿನ ವಿಷವನ್ನು ಹೊಂದಿರುವರೋ ಅಂಥಹ ಪಾಪಚಾರಿಗಳು ಮಾತ್ರ ವಿನಾಶ ಹೊಂದುತ್ತಾರೆ. ಧರ್ಮಚಾರಿಗಳಲ್ಲ.

01034011a ಯನ್ನಿಮಿತ್ತಂ ಚ ಭವಿತಾ ಮೋಕ್ಷಸ್ತೇಷಾಂ ಮಹಾಭಯಾತ್|

01034011c ಪನ್ನಗಾನಾಂ ನಿಬೋಧಧ್ವಂ ತಸ್ಮಿನ್ಕಾಲೇ ತಥಾಗತೇ||

ಆ ಕಾಲವು ಬಂದಾಗ ನಾಗಗಳು ತಮ್ಮ ಈ ಮಹಾಭಯದಿಂದ ಹೇಗೆ ಮೋಕ್ಷವನ್ನು ಹೊಂದುತ್ತಾರೆ ಎನ್ನುವುದನ್ನು ಕೇಳಿ.

01034012a ಯಾಯಾವರಕುಲೇ ಧೀಮಾನ್ಭವಿಷ್ಯತಿ ಮಹಾನೃಷಿಃ|

01034012c ಜರತ್ಕಾರುರಿತಿ ಖ್ಯಾತಸ್ತೇಜಸ್ವೀ ನಿಯತೇಂದ್ರಿಯಃ||

ಯಾಯಾವರ ಕುಲದಲ್ಲಿ ಜರತ್ಕಾರುವೆಂದು ಖ್ಯಾತಿಗೊಳ್ಳುವ ತೇಜಸ್ವಿಯೂ ನಿಯತೇಂದ್ರಿಯನೂ ಧೀಮಂತನೂ ಆದ ಮಹಾನ್ ಋಷಿಯೊಬ್ಬನು ಹುಟ್ಟುತ್ತಾನೆ

01034013a ತಸ್ಯ ಪುತ್ರೋ ಜರತ್ಕಾರೋರುತ್ಪತ್ಸ್ಯತಿ ಮಹಾತಪಾಃ|

01034013c ಆಸ್ತೀಕೋ ನಾಮ ಯಜ್ಞಂ ಸ ಪ್ರತಿಷೇತ್ಸ್ಯತಿ ತಂ ತದಾ|

01034013e ತತ್ರ ಮೋಕ್ಷ್ಯಂತಿ ಭುಜಗಾ ಯೇ ಭವಿಷ್ಯಂತಿ ಧಾರ್ಮಿಕಾಃ||

ಜರತ್ಕಾರುವಿನಲ್ಲಿ ಜನಿಸುವ ಅವನ ಪುತ್ರ ಆಸ್ತೀಕನೆಂಬ ಹೆಸರಿನ ಮಹಾತಪಸ್ವಿಯು ಈ ಯಜ್ಞವನ್ನು ನಿಲ್ಲಿಸಿ ಧಾರ್ಮಿಕ ನಾಗಗಳ ಬಿಡುಗಡೆಮಾಡುತ್ತಾನೆ.”

01034014 ದೇವಾ ಊಚುಃ

01034014a ಸ ಮುನಿಪ್ರವರೋ ದೇವ ಜರತ್ಕಾರುರ್ಮಹಾತಪಾಃ|

01034014c ಕಸ್ಯಾಂ ಪುತ್ರಂ ಮಹಾತ್ಮಾನಂ ಜನಯಿಷ್ಯತಿ ವೀರ್ಯವಾನ್||

ದೇವತೆಗಳು ಹೇಳಿದರು: “ದೇವ! ಆ ಮುನಿಪ್ರವರ ಮಹಾತಪಸ್ವಿ ಜರತ್ಕಾರುವಿನ ಮಹಾತ್ಮ ವೀರ್ಯವಂತ ಪುತ್ರನು ಯಾರಲ್ಲಿ ಜನಿಸುತ್ತಾನೆ?”

01034015 ಬ್ರಹ್ಮೋವಾಚ

01034015a ಸನಾಮಾಯಾಂ ಸನಾಮಾ ಸ ಕನ್ಯಾಯಾಂ ದ್ವಿಜಸತ್ತಮಃ|

01034015c ಅಪತ್ಯಂ ವೀರ್ಯವಾನ್ದೇವಾ ವೀರ್ಯವಜ್ಜನಯಿಷ್ಯತಿ||

ಬ್ರಹ್ಮನು ಹೇಳಿದನು: “ದೇವತೆಗಳೇ! ಆ ವೀರ್ಯವಂತ ದ್ವಿಜಸತ್ತಮನು ತನ್ನ ಹೆಸರನ್ನೇ ಹೊಂದಿರುವ ಪತ್ನಿಯಲ್ಲಿ ತನ್ನ ಹಾಗೆಯೇ ವೀರ್ಯವಂತ ಮಗನನ್ನು ಪಡೆಯುತ್ತಾನೆ.””

01034016 ಏಲಾಪತ್ರ ಉವಾಚ

01034016a ಏವಮಸ್ತ್ವಿತಿ ತಂ ದೇವಾಃ ಪಿತಾಮಹಮಥಾಬ್ರುವನ್|

01034016c ಉಕ್ತ್ವಾ ಚೈವಂ ಗತಾ ದೇವಾಃ ಸ ಚ ದೇವಃ ಪಿತಾಮಹಃ||

ಏಲಾಪತ್ರನು ಹೇಳಿದನು: “ದೇವತೆಗಳು ಪಿತಾಮಹನಿಗೆ “ಹಾಗೆಯೇ ಆಗಲಿ” ಎಂದು ಹೇಳಲು ದೇವತೆಗಳಿಗೆ ಇದನ್ನೆಲ್ಲ ಹೇಳಿದ ದೇವ ಪಿತಾಮಹನು ಹೊರಟುಹೋದನು.

01034017a ಸೋಽಹಮೇವಂ ಪ್ರಪಶ್ಯಾಮಿ ವಾಸುಕೇ ಭಗಿನೀಂ ತವ|

01034017c ಜರತ್ಕಾರುರಿತಿ ಖ್ಯಾತಾಂ ತಾಂ ತಸ್ಮೈ ಪ್ರತಿಪಾದಯ||

01034018a ಭೈಕ್ಷವದ್ಭಿಕ್ಷಮಾಣಾಯ ನಾಗಾನಾಂ ಭಯಶಾಂತಯೇ|

01034018c ಋಷಯೇ ಸುವ್ರತಾಯ ತ್ವಮೇಷ ಮೋಕ್ಷಃ ಶ್ರುತೋ ಮಯಾ||

ವಾಸುಕಿ! ಜರತ್ಕಾರುವೆಂದು ಖ್ಯಾತಳಾಗಿರುವ ನಿನ್ನ ತಂಗಿಯನ್ನು ನೋಡುತ್ತಿದ್ದೇನೆ. ನಾಗಗಳ ಭಯವನ್ನು ನಿವಾರಿಸಲೋಸುಗ ಅವಳನ್ನು ಪತ್ನಿಗಾಗಿ ಭಿಕ್ಷೆಬೇಡುತ್ತಾ ತಿರುಗುತ್ತಿರುವ ಆ ಸುವ್ರತ ಮುನಿಗೆ ಕೊಡು. ಅದೇ ನಮಗೆ ಮೋಕ್ಷದಾಯಕವೆಂದು ಕೇಳಿದ್ದೇನೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಏಲಾಪತ್ರವಾಕ್ಯೋ ನಾಮ ಚತುಸ್ತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಏಲಾಪತ್ರವಾಕ್ಯ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.

Leave a Reply

Your email address will not be published. Required fields are marked *