Adi Parva: Chapter 28

ಆದಿ ಪರ್ವ: ಆಸ್ತೀಕ ಪರ್ವ

೨೮

ಗರುಡನು ಯುದ್ಧದಲ್ಲಿ ದೇವತೆಗಳನ್ನು ಸೋಲಿಸಿದುದು (೧-೨೦). ಬೆಂಕಿಯ ಭಿರುಗಾಳಿಯನ್ನು ಎಬ್ಬಿಸಿದುದು (೨೧-೨೫).

01028001 ಸೂತ ಉವಾಚ

01028001a ತತಸ್ತಸ್ಮಿನ್ದ್ವಿಜಶ್ರೇಷ್ಠ ಸಮುದೀರ್ಣೇ ತಥಾವಿಧೇ|

01028001c ಗರುತ್ಮಾನ್ಪಕ್ಷಿರಾಟ್ತೂರ್ಣಂ ಸಂಪ್ರಾಪ್ತೋ ವಿಬುಧಾನ್ಪ್ರತಿ||

ಸೂತನು ಹೇಳಿದನು: “ದ್ವಿಜಶ್ರೇಷ್ಠ! ದೇವತೆಗಳೆಲ್ಲರೂ ಯುದ್ಧಕ್ಕೆ ಸಿದ್ಧರಾಗಿ ನಿಂತಿರುವಾಗ ಪಕ್ಷಿರಾಜ ಗುರುತ್ಮಂತನು ಅವರ ಬಳಿ ತಲುಪಿದನು.

01028002a ತಂ ದೃಷ್ಟ್ವಾತಿಬಲಂ ಚೈವ ಪ್ರಾಕಂಪಂತ ಸಮಂತತಃ|

01028002c ಪರಸ್ಪರಂ ಚ ಪ್ರತ್ಯಘ್ನನ್ಸರ್ವಪ್ರಹರಣಾನ್ಯಪಿ||

ಆ ಅತಿಬಲನನ್ನು ಕಂಡು ದೇವತೆಗಳು ಭಯದಿಂದ ತತ್ತರಿಸುತ್ತಾ ಅವರೆಲ್ಲರ ಆಯುಧಗಳಿಂದ ಪರಸ್ಪರರಲ್ಲಿಯೇ ಹೊಡೆದಾಡಲು ಪ್ರಾರಂಭಿಸಿದರು.

01028003a ತತ್ರ ಚಾಸೀದಮೇಯಾತ್ಮಾ ವಿದ್ಯುದಗ್ನಿಸಮಪ್ರಭಃ|

01028003c ಭೌವನಃ ಸುಮಹಾವೀರ್ಯಃ ಸೋಮಸ್ಯ ಪರಿರಕ್ಷಿತಾ||

ಸೋಮದ ಪರಿರಕ್ಷಕರಲ್ಲಿ ಅಮೇಯಾತ್ಮ, ವಿದ್ಯುದಗ್ನಿಸಮಪ್ರಭ, ಸುಮಹಾವೀರ್ಯ ಭೌವನನೂ ಇದ್ದನು.

01028004a ಸ ತೇನ ಪತಗೇಂದ್ರೇಣ ಪಕ್ಷತುಂಡನಖೈಃ ಕ್ಷತಃ|

01028004c ಮುಹೂರ್ತಮತುಲಂ ಯುದ್ಧಂ ಕೃತ್ವಾ ವಿನಿಹತೋ ಯುಧಿ||

ಅವನು ಒಂದೇ ಕ್ಷಣ ಯುದ್ಧ ಮಾಡಿ ಪತಗೇಂದ್ರನ ರೆಕ್ಕೆ, ಕೊಕ್ಕು ಮತ್ತು ಪಂಜುಗಳಿಗೆ ಸಿಲುಕಿ ರಣಭೂಮಿಯಲ್ಲಿ ಮಡಿದನು.

01028005a ರಜಶ್ಚೋದ್ಧೂಯ ಸುಮಹತ್ಪಕ್ಷವಾತೇನ ಖೇಚರಃ|

01028005c ಕೃತ್ವಾ ಲೋಕಾನ್ನಿರಾಲೋಕಾಂಸ್ತೇನ ದೇವಾನವಾಕಿರತ್||

ಆ ಖೇಚರನು ತನ್ನ ವಿಸ್ತಾರ ರೆಕ್ಕೆಗಳಿಂದ ಅತಿದೊಡ್ಡ ಧೂಳಿನ ಭಿರುಗಾಳಿಯನ್ನೇ ಎಬ್ಬಿಸಿ ಮೂರೂ ಲೋಕಗಳನ್ನು ಅಂಧಕಾರದಲ್ಲಿ ಮುಳುಗಿಸಿ, ದೇವತೆಗಳನ್ನು ಉದ್ವಿಗ್ನಗೊಳಿಸಿದನು.

01028006a ತೇನಾವಕೀರ್ಣಾ ರಜಸಾ ದೇವಾ ಮೋಹಮುಪಾಗಮನ್|

01028006c ನ ಚೈನಂ ದದೃಶುಶ್ಚನ್ನಾ ರಜಸಾಮೃತರಕ್ಷಿಣಃ||

ಧೂಳಿನಿಂದ ಆವರಿಸಲ್ಪಟ್ಟು ದೇವತೆಗಳು ಮೂರ್ಛೆ ಹೊಂದಿದರು. ಅಮೃತವನ್ನು ಕಾಯಲು ನಿಂತವರು ಆ ಧೂಳಿನಲ್ಲಿ ಅವನನ್ನು ನೋಡಲು ಅಸಮರ್ಥರಾದರು.

01028007a ಏವಂ ಸಂಲೋಡಯಾಮಾಸ ಗರುಡಸ್ತ್ರಿದಿವಾಲಯಂ|

01028007c ಪಕ್ಷತುಂಡಪ್ರಹಾರೈಶ್ಚ ದೇವಾನ್ಸ ವಿದದಾರ ಹ||

ಹೀಗೆ ಗರುಡನು ತನ್ನ ರೆಕ್ಕೆ ಕೊಕ್ಕುಗಳ ಪ್ರಹಾರದಿಂದ ಮೂರುಲೋಕಗಳ ಪಾಲಕರಾದ ದೇವತೆಗಳನ್ನು ಮುದ್ದೆ ಮಾಡಿದನು.

01028008a ತತೋ ದೇವಃ ಸಹಸ್ರಾಕ್ಷಸ್ತೂರ್ಣಂ ವಾಯುಮಚೋದಯತ್|

01028008c ವಿಕ್ಷಿಪೇಮಾಂ ರಜೋವೃಷ್ಟಿಂ ತವೈತತ್ಕರ್ಮ ಮಾರುತ||

ಆಗ ದೇವ ಸಹಸ್ರಾಕ್ಷನು ಗಾಬರಿಯಿಂದ ವಾಯುವಿಗೆ ಆಜ್ಞೆಯನ್ನಿತ್ತನು: “ಮಾರುತ! ಈ ಧೂಳಿನ ಮಳೆಯನ್ನು ನಿಲ್ಲಿಸುವುದು ನಿನ್ನ ಕೆಲಸ!”

01028009a ಅಥ ವಾಯುರಪೋವಾಹ ತದ್ರಜಸ್ತರಸಾ ಬಲೀ|

01028009c ತತೋ ವಿತಿಮಿರೇ ಜಾತೇ ದೇವಾಃ ಶಕುನಿಮಾರ್ದಯನ್||

ಬಲಶಾಲಿ ವಾಯುವು ಆ ಧೂಳಿನ ಮಳೆಯನ್ನು ಹೋಗಲಾಡಿಸಿದನು. ಕತ್ತಲೆಯು ನಾಶವಾದಾಗ ದೇವತೆಗಳು ಪಕ್ಷಿಯ ಮೇಲೆರಗಿದರು.

01028010a ನನಾದ ಚೋಚ್ಚೈರ್ಬಲವಾನ್ಮಹಾಮೇಘರವಃ ಖಗಃ|

01028010c ವಧ್ಯಮಾನಃ ಸುರಗಣೈಃ ಸರ್ವಭೂತಾನಿ ಭೀಷಯನ್|

01028010e ಉತ್ಪಪಾತ ಮಹಾವೀರ್ಯಃ ಪಕ್ಷಿರಾಟ್ಪರವೀರಹಾ||

ಈ ರೀತಿ ಸುರಗಣಗಳ ಹೊಡೆತಕ್ಕೆ ಸಿಲುಕಿದ ಆ ಬಲವಾನ್ ಪಕ್ಷಿಯು ಸರ್ವಭೂತಗಳಿಗೂ ಭಯವನ್ನುಂಟುಮಾಡುವ ಮಹಾಮೇಘದಂತೆ ಗರ್ಜಿಸಿದನು. ಮಹಾವೀರ್ಯ ಪಕ್ಷಿರಾಜನು ತನ್ನ ರೆಕ್ಕೆಗಳನ್ನೇರಿ ಹಾರಿದನು.

01028011a ತಮುತ್ಪತ್ಯಾಂತರಿಕ್ಷಸ್ಥಂ ದೇವಾನಾಮುಪರಿ ಸ್ಥಿತಂ|

01028011c ವರ್ಮಿಣೋ ವಿಬುಧಾಃ ಸರ್ವೇ ನಾನಾಶಸ್ತ್ರೈರವಾಕಿರನ್||

01028012a ಪಟ್ಟಿಶೈಃ ಪರಿಘೈಃ ಶೂಲೈರ್ಗದಾಭಿಶ್ಚ ಸವಾಸವಾಃ|

01028012c ಕ್ಷುರಾಂತೈರ್ಜ್ವಲಿತೈಶ್ಚಾಪಿ ಚಕ್ರೈರಾದಿತ್ಯರೂಪಿಭಿಃ||

ಮೇಲೆ ಹಾರಿದ ಅವನು ಅಂತರಿಕ್ಷದಲ್ಲಿ ದೇವತೆಗಳ ಮೇಲೆ ನಿಂತನು. ಆಗ ವಾಸವನೂ ಸೇರಿ ಎಲ್ಲ ದೇವತೆಗಳೂ ಅವನ ಮೇಲೆ ನಾನಾ ಶಸ್ತ್ರಗಳಿಂದ, ಪಟ್ಟಿಶ, ಪರಿಘ, ಶೂಲ, ಗದೆ, ಪ್ರಜ್ವಲಿಸುತ್ತಿರುವ ಬಾಣಗಳು ಮತ್ತು ಆದಿತ್ಯರೂಪೀ ಚಕ್ರಗಳಿಂದ ಪ್ರಹಾರಮಾಡಿದರು.

01028013a ನಾನಾಶಸ್ತ್ರವಿಸರ್ಗೈಶ್ಚ ವಧ್ಯಮಾನಃ ಸಮಂತತಃ|

01028013c ಕುರ್ವನ್ಸುತುಮುಲಂ ಯುದ್ಧಂ ಪಕ್ಷಿರಾಣ್ನ ವ್ಯಕಂಪತ||

01028014a ವಿನರ್ದನ್ನಿವ ಚಾಕಾಶೇ ವೈನತೇಯಃ ಪ್ರತಾಪವಾನ್|

01028014c ಪಕ್ಷಾಭ್ಯಾಮುರಸಾ ಚೈವ ಸಮಂತಾದ್ವ್ಯಾಕ್ಷಿಪತ್ಸುರಾನ್||

ಹೀಗೆ ಒಂದೇಸಮನೆ ನಾನಾ ಶಸ್ತ್ರಗಳ ಪ್ರಹಾರಕ್ಕೊಳಗಾದರೂ ಸರಿಸಾಟಿಯಾಗಿ ಯುದ್ಧ ಮಾಡುತ್ತಿದ್ದ ಪಕ್ಷಿರಾಜನು ಸ್ವಲ್ಪವೂ ಆಯಾಸಗೊಳ್ಳಲಿಲ್ಲ. ಆಕಾಶದಲ್ಲಿ ಉರಿಯುತ್ತಿದ್ದ ಪ್ರತಾಪವಾನ್ ವೈನತೇಯನು ಸುರರೆಲ್ಲರನ್ನೂ ತನ್ನ ರೆಕ್ಕೆ ಮತ್ತು ಛಾತಿಗಳಿಂದ ಧಾಳಿಮಾಡಿ ಎಲ್ಲ ಕಡೆಗೂ ಓಡಿಹೋಗುವಂತೆ ಮಾಡಿದನು.

01028015a ತೇ ವಿಕ್ಷಿಪ್ತಾಸ್ತತೋ ದೇವಾಃ ಪ್ರಜಗ್ಮುರ್ಗರುಡಾರ್ದಿತಾಃ|

01028015c ನಖತುಂಡಕ್ಷತಾಶ್ಚೈವ ಸುಸ್ರುವುಃ ಶೋಣಿತಂ ಬಹು||

ಗರುಡನ ಹೊಡೆತಕ್ಕೆ ಸಿಲುಕಿದ ದೇವತೆಗಳು ಸೋತು ಪಲಾಯನ ಮಾಡತೊಡಗಿದರು. ಅವನ ಉಗುರು ಪಂಜಗಳಿಂದ ಪೆಟ್ಟು ತಿಂದವರ ದೇಹಗಳಿಂದ ಬಹಳಷ್ಟು ರಕ್ತವು ಸೋರತೊಡಗಿತು.

01028016a ಸಾಧ್ಯಾಃ ಪ್ರಾಚೀಂ ಸಗಂಧರ್ವಾ ವಸವೋ ದಕ್ಷಿಣಾಂ ದಿಶಂ|

01028016c ಪ್ರಜಗ್ಮುಃ ಸಹಿತಾ ರುದ್ರೈಃ ಪತಗೇಂದ್ರಪ್ರಧರ್ಷಿತಾಃ||

01028017a ದಿಶಂ ಪ್ರತೀಚೀಮಾದಿತ್ಯಾ ನಾಸತ್ಯಉತ್ತರಾಂ ದಿಶಂ|

01028017c ಮುಹುರ್ಮುಹುಃ ಪ್ರೇಕ್ಷಮಾಣಾ ಯುಧ್ಯಮಾನಾ ಮಹೌಜಸಂ||

ಪತಗೇಂದ್ರನ ಹೊಡೆತ ತಿಂದ ಸಾಧ್ಯರು ಮತ್ತು ಗಂಧರ್ವರು ಪೂರ್ವದಿಕ್ಕಿಗೆ ಪಲಾಯನ ಗೈದರು. ವಸುಗಳು ಮತ್ತು ರುದ್ರರು ದಕ್ಷಿಣದ ಕಡೆ ಓಡಿದರು. ಆದಿತ್ಯರು ಪಶ್ಚಿಮಕ್ಕೆ, ನಾಸತ್ಯರು ಉತ್ತರಕ್ಕೆ, ಯುದ್ಧದಲ್ಲಿ ತೊಡಗಿರುವ ಮಹೋಜಸನನ್ನು ಪುನಃ ಪುನಃ ತಿರುಗಿ ನೋಡುತ್ತಾ ಪಲಾಯನಗೈದರು.

01028018a ಅಶ್ವಕ್ರಂದೇನ ವೀರೇಣ ರೇಣುಕೇನ ಚ ಪಕ್ಷಿಣಾ|

01028018c ಕ್ರಥನೇನ ಚ ಶೂರೇಣ ತಪನೇನ ಚ ಖೇಚರಃ||

01028019a ಉಲೂಕಶ್ವಸನಾಭ್ಯಾಂ ಚ ನಿಮೇಷೇಣ ಚ ಪಕ್ಷಿಣಾ|

01028019c ಪ್ರರುಜೇನ ಚ ಸಮ್ಯುದ್ಧಂ ಚಕಾರ ಪ್ರಲಿಹೇನ ಚ||

ಈ ರೀತಿ ಖೇಚರ ಪಕ್ಷಿಯು ವೀರ ಅಶ್ವಕ್ರಂದ ಮತ್ತು ರೇಣುಕ, ಶೂರ ಕ್ರಥನ ಮತ್ತು ತಪನ, ಉಲೂಕ, ಅಶ್ವಸನ, ನಿಮಿಷ, ಪ್ರರುಜ, ಪ್ರಲಿನ, ಮುಂತಾದವರೊಂದಿಗೆ ಯುದ್ಧ ಮಾಡಿದನು.

01028020a ತಾನ್ಪಕ್ಷನಖತುಂಢಾಗ್ರೈರಭಿನದ್ವಿನತಾಸುತಃ|

01028020c ಯುಗಾಂತಕಾಲೇ ಸಂಕ್ರುದ್ಧಃ ಪಿನಾಕೀವ ಮಹಾಬಲಃ||

ಆ ಮಹಾಬಲ ವಿನತಸುತನು ಯುಗಾಂತಕಾಲದಲ್ಲಿ ಸಂಕೃದ್ಧ ಪಿನಾಕಿಯ ಹಾಗೆ ತನ್ನ ರೆಕ್ಕೆ, ಉಗುರು ಮತ್ತು ಪಂಜಗಳ ತುದಿಯಿಂದ ಗಾಯಗೊಳಿಸಿದನು.

01028021a ಮಹಾವೀರ್ಯಾ ಮಹೋತ್ಸಾಹಾಸ್ತೇನ ತೇ ಬಹುಧಾ ಕ್ಷತಾಃ|

01028021c ರೇಜುರಭ್ರಘನಪ್ರಖ್ಯಾ ರುಧಿರೌಘಪ್ರವರ್ಷಿಣಃ||

ಮಹಾವೀರ್ಯ ಮಹೋತ್ಸಾಹೀ ದೇವತೆಗಳು ಅವನಿಂದ ಹೊಡೆತ ತಿಂದು ರಕ್ತದ ಮಳೆ ಸುರಿಸುತ್ತಿರುವ ಕಪ್ಪು ಮೋಡಗಳಂತೆ ಕಂಡುಬಂದರು.

01028022a ತಾನ್ಕೃತ್ವಾ ಪತಗಶ್ರೇಷ್ಠಃ ಸರ್ವಾನುತ್ಕ್ರಾಂತಜೀವಿತಾನ್|

01028022c ಅತಿಕ್ರಾಂತೋಽಮೃತಸ್ಯಾರ್ಥೇ ಸರ್ವತೋಽಗ್ನಿಮಪಶ್ಯತ||

ಈ ರೀತಿ ಸರ್ವ ದೇವತೆಗಳನ್ನು ನಿರ್ಜೀವರನ್ನಾಗಿ ಮಾಡಿ ಆ ಪತಗಶ್ರೇಷ್ಠನು ಅಮೃತದ ಕಡೆ ಮುಂದುವರೆದನು. ಅದರ ಎಲ್ಲ ಕಡೆಯಿಂದಲೂ ಅಗ್ನಿಯು ಆವರಿಸಿರುವುದನ್ನು ಕಂಡನು.

01028023a ಆವೃಣ್ವಾನಂ ಮಹಾಜ್ವಾಲಮರ್ಚಿರ್ಭಿಃ ಸರ್ವತೋಽಂಬರಂ|

01028023c ದಹಂತಮಿವ ತೀಕ್ಷ್ಣಾಂಶುಂ ಘೋರಂ ವಾಯುಸಮೀರಿತಂ||

ಆ ಬೆಂಕಿಯ ಮಹಾಜ್ವಾಲೆಗಳು ಇಡೀ ಆಕಾಶವನ್ನೇ ಆವರಿಸುವಂತಿದ್ದವು ಮತ್ತು ಘೋರ ಭಿರುಗಾಳಿಯಿಂದ ತತ್ತರಿಸುತ್ತಾ ಅವು ಸೂರ್ಯನನ್ನೇ ಸುಡುತ್ತಿವೆಯೋ ಎಂಬಂತೆ ತೋರುತ್ತಿದ್ದವು.

01028024a ತತೋ ನವತ್ಯಾ ನವತೀರ್ಮುಖಾನಾಂ

         ಕೃತ್ವಾ ತರಸ್ವೀ ಗರುಡೋ ಮಹಾತ್ಮಾ|

01028024c ನದೀಃ ಸಮಾಪೀಯ ಮುಖೈಸ್ತತಸ್ತೈಃ

         ಸುಶೀಘ್ರಮಾಗಮ್ಯ ಪುನರ್ಜವೇನ||

01028025a ಜ್ವಲಂತಮಗ್ನಿಂ ತಮಮಿತ್ರತಾಪನಃ

         ಸಮಾಸ್ತರತ್ಪತ್ರರಥೋ ನದೀಭಿಃ|

01028025c ತತಃ ಪ್ರಚಕ್ರೇ ವಪುರನ್ಯದಲ್ಪಂ

         ಪ್ರವೇಷ್ಟುಕಾಮೋಽಗ್ನಿಮಭಿಪ್ರಶಾಮ್ಯ||

ಆಗ ಮಹಾತ್ಮ ಗರುಡನು ಎಂಭತ್ತೊಂದು ಮುಖಗಳನ್ನು ಧರಿಸಿ ಆ ಬಾಯಿಗಳಿಂದ ಹಲವಾರು ನದಿಗಳನ್ನು ಕುಡಿದು ತನ್ನ ರೆಕ್ಕೆಗಳ ರಥವನ್ನೇರಿ ಸುಶೀಘ್ರವಾಗಿ ಮರಳಿ ಬಂದು ಉರಿಯುತ್ತಿರುವ ಅಗ್ನಿಯಲ್ಲಿ ಆ ನದಿಗಳನ್ನು ಸುರುವಿದನು. ಬೆಂಕಿಯನ್ನು ಆರಿಸಿದ ತಕ್ಷಣವೇ ಅಲ್ಪ ರೂಪವನ್ನು ತಾಳಿ ಅಮೃತವನ್ನಿಟ್ಟಿದ್ದ ಸ್ಥಳವನ್ನು ಪ್ರವೇಶಿಸಲು ಸಿದ್ಧನಾದನು.”

ಇತಿ ಶ್ರೀ ಮಹಾಭಾರತೇ ಆದಿಪರ್ಣಣಿ ಆಸ್ತೀಕಪರ್ವಣಿ ಸೌಪರ್ಣೇ ಅಷ್ಟವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೆಂಟನೆಯ ಅಧ್ಯಾಯವು.

Leave a Reply

Your email address will not be published. Required fields are marked *