ಆದಿ ಪರ್ವ: ಆಸ್ತೀಕ ಪರ್ವ
೨೭
ಇಂದ್ರನಿಂದ ಅಪಮಾನಿಸಲ್ಪಟ್ಟ ವಾಲಖಿಲ್ಯರು ಗರುಡೋತ್ಪತ್ತಿಗೆ ಯುಜ್ಞ ಮಾಡುವುದು (೧-೧೦). ಯಜ್ಞ-ಫಲವಾಗಿ ವಿನತೆಯಲ್ಲಿ ಅರುಣ-ಗರುಡರ ಜನನ (೧೧-೩೫).
01027001 ಶೌನಕ ಉವಾಚ
01027001a ಕೋಽಪರಾಧೋ ಮಹೇಂದ್ರಸ್ಯ ಕಃ ಪ್ರಮಾದಶ್ಚ ಸೂತಜ|
01027001c ತಪಸಾ ವಾಲಖಿಲ್ಯಾನಾಂ ಸಂಭೂತೋ ಗರುಡಃ ಕಥಂ||
ಶೌನಕನು ಹೇಳಿದನು: “ಸೂತಜ! ಮಹೇಂದ್ರನ ಅಪರಾಧ ಮತ್ತು ಪ್ರಮಾದವಾದರೂ ಏನಿತ್ತು? ವಾಲಖಿಲ್ಯರ ತಪಸ್ಸಿನಿಂದ ಗರುಡನ ಜನ್ಮವು ಹೇಗಾಯಿತು?
01027002a ಕಶ್ಯಪಸ್ಯ ದ್ವಿಜಾತೇಶ್ಚ ಕಥಂ ವೈ ಪಕ್ಷಿರಾಟ್ಸುತಃ|
01027002c ಅಧೃಷ್ಯಃ ಸರ್ವಭೂತಾನಾಮವಧ್ಯಶ್ಚಾಭವತ್ಕಥಂ||
ಬ್ರಾಹ್ಮಣ ಕಶ್ಯಪನಿಗೆ ಮಗನಾಗಿ ಪಕ್ಷಿಯೊಂದು ಹೇಗೆ ಜನಿಸಿದನು? ಅವನು ಹೇಗೆ ಸರ್ವಭೂತರಲ್ಲಿ ಅವಧ್ಯನೂ ಅಧೃಷ್ಯನೂ ಆದನು?
01027003a ಕಥಂ ಚ ಕಾಮಚಾರೀ ಸ ಕಾಮವೀರ್ಯಶ್ಚ ಖೇಚರಃ|
01027003c ಏತದಿಚ್ಛಾಮ್ಯಹಂ ಶ್ರೋತುಂ ಪುರಾಣೇ ಯದಿ ಪಥ್ಯತೇ||
ಆ ಖೇಚರನು ಹೇಗೆ ಕಾಮಚಾರಿ ಮತ್ತು ಕಾಮವೀರ್ಯನಾದನು? ಇದೆಲ್ಲವನ್ನೂ ಪುರಾಣಗಳಲ್ಲಿ ಹೇಳಿರುವಂತೆ ಕೇಳಲು ಬಯಸುತ್ತೇನೆ.”
01027004 ಸೂತ ಉವಾಚ
01027004a ವಿಷಯೋಽಯಂ ಪುರಾಣಸ್ಯ ಯನ್ಮಾಂ ತ್ವಂ ಪರಿಪೃಚ್ಛಸಿ|
01027004c ಶೃಣು ಮೇ ವದತಃ ಸರ್ವಮೇತತ್ಸಂಕ್ಷೇಪತೋ ದ್ವಿಜ||
ಸೂತನು ಹೇಳಿದನು: “ದ್ವಿಜ! ನೀನು ಕೇಳಿರುವ ವಿಷಯಗಳನ್ನೆಲ್ಲವನ್ನೂ ಪುರಾಣಗಳಲ್ಲಿ ವಿವರಿಸಲಾಗಿದೆ. ಅವೆಲ್ಲವನ್ನೂ ಸಂಕ್ಷಿಪ್ತವಾಗಿ ಹೇಳುತ್ತೇನೆ. ಕೇಳು.
01027005a ಯಜತಃ ಪುತ್ರಕಾಮಸ್ಯ ಕಶ್ಯಪಸ್ಯ ಪ್ರಜಾಪತೇಃ|
01027005c ಸಾಹಾಯ್ಯಂ ಋಷಯೋ ದೇವಾ ಗಂಧರ್ವಾಶ್ಚ ದದುಃ ಕಿಲ||
ಪ್ರಜಾಪತಿ ಕಶ್ಯಪನು ಸಂತಾನಕ್ಕೋಸ್ಕರ ಯಜ್ಞವನ್ನು ಕೈಗೊಂಡಾಗ ಋಷಿ, ದೇವತೆಗಳು ಮತ್ತು ಗಂಧರ್ವರೆಲ್ಲರೂ ಬಹಳಷ್ಟು ಸಹಾಯ ಮಾಡಿದರು.
01027006a ತತ್ರೇಧ್ಮಾನಯನೇ ಶಕ್ರೋ ನಿಯುಕ್ತಃ ಕಶ್ಯಪೇನ ಹ|
01027006c ಮುನಯೋ ವಾಲಖಿಲ್ಯಾಶ್ಚ ಯೇ ಚಾನ್ಯೇ ದೇವತಾಗಣಾಃ||
ಕಶ್ಯಪನು ಇಂದ್ರ, ವಾಲಖಿಲ್ಯ ಮುನಿವರ್ಯರು ಮತ್ತು ಇತರ ದೇವಗಣಗಳಿಗೆ ಸಮಿತ್ತುಗಳನ್ನು ತರುವ ಕಾರ್ಯವನ್ನು ವಹಿಸಿದ್ದನು.
01027007a ಶಕ್ರಸ್ತು ವೀರ್ಯಸದೃಶಮಿಧಂ ಭಾರಂ ಗಿರಿಪ್ರಭಂ|
01027007c ಸಮುದ್ಯಮ್ಯಾನಯಾಮಾಸ ನಾತಿಕೃಚ್ಛ್ರಾದಿವ ಪ್ರಭುಃ||
ಶಕ್ರನು ಸ್ವಲ್ಪವೂ ಆಯಾಸವಿಲ್ಲದೇ ತನ್ನ ಶಕ್ತಿಗನುಗುಣವಾದ ಒಂದು ಪರ್ವತದಷ್ಟು ಸಮಿತ್ತುಗಳನ್ನು ಹೊತ್ತು ತಂದನು.
01027008a ಅಥಾಪಶ್ಯದೃಷೀನ್ ಹ್ರಸ್ವಾನಂಗುಷ್ಟೋದರಪರ್ವಣಃ|
01027008c ಪಲಾಶವೃಂತಿಕಾಮೇಕಾಂ ಸಹಿತಾನ್ವಹತಃ ಪಥಿ||
ದಾರಿಯಲ್ಲಿ ಅವನು ಗಾತ್ರದಲ್ಲಿ ಅಂಗುಷ್ಠದಷ್ಟು ಸಣ್ಣವರಾಗಿದ್ದ ಋಷಿಗಳೆಲ್ಲರೂ ಸೇರಿ ಒಂದೇ ಒಂದು ಪಲಾಶದ ಕಡ್ಡಿಯನ್ನು ಹೊತ್ತು ತರುತ್ತಿರುವುದನ್ನು ನೋಡಿದನು.
01027009a ಪ್ರಲೀನಾನ್ಸ್ವೇಷ್ವಿವಾಂಗೇಷು ನಿರಾಹಾರಾಂಸ್ತಪೋಧನಾನ್|
01027009c ಕ್ಲಿಶ್ಯಮಾನಾನ್ಮಂದಬಲಾನ್ಗೋಷ್ಪದೇ ಸಂಪ್ಲುತೋದಕೇ||
ನಿರಾಹಾರದಿಂದ ಬಡಕಲಾಗಿದ್ದ ಆ ತಪೋಧನರು ಮಾರ್ಗದಲ್ಲಿ ಗೋವಿನ ಹೆಜ್ಜೆಯಿಂದ ಉಂಟಾಗಿದ್ದ ಕುಣಿಯೊಂದರಲ್ಲಿ ನೋಡದೇ ಬಿದ್ದು ಸಾಕಷ್ಟು ಹಿಂಸೆಗೊಳಗಾದರು.
01027010a ತಾಂಶ್ಚ ಸರ್ವಾನ್ಸ್ಮಯಾವಿಷ್ಟೋ ವೀರ್ಯೋನ್ಮತ್ತಃ ಪುರಂದರಃ|
01027010c ಅವಹಸ್ಯಾತ್ಯಗಾಶ್ಚೀಘ್ರಂ ಲಂಘಯಿತ್ವಾವಮನ್ಯ ಚ||
ಇದೆಲ್ಲವನ್ನೂ ನೋಡಿ ವೀರ್ಯಮತ್ತ ಪುರಂದರನು ಅವರನ್ನು ಅಪಹಾಸ್ಯಮಾಡಿ ನಗುತ್ತಾ ವೇಗದಿಂದ ಅವರನ್ನು ದಾಟಿ ಅಪಮಾನಗೊಳಿಸಿದನು.
01027011a ತೇಽಥ ರೋಷಸಮಾವಿಷ್ಟಾಃ ಸುಭೃಶಂ ಜಾತಮನ್ಯವಃ|
01027011c ಆರೇಭಿರೇ ಮಹತ್ಕರ್ಮ ತದಾ ಶಕ್ರಭಯಂಕರಂ||
ಇದರಿಂದ ಅವರಿಗೆ ಅತಿ ಕೋಪವುಂಟಾಯಿತು. ದುಃಖ ಮತ್ತು ರೋಷಸಮಾವಿಷ್ಠರಾದ ಅವರು ಶಕ್ರನಿಗೆ ಒಂದು ಭಯಂಕರ ಮಹಾ ಯಜ್ಞವನ್ನು ಆರಂಭಿಸಿದರು.
01027012a ಜುಹುವುಸ್ತೇ ಸುತಪಸೋ ವಿಧಿವಜ್ಜಾತವೇದಸಂ|
01027012c ಮಂತ್ರೈರುಚ್ಚಾವಚೈರ್ವಿಪ್ರಾ ಯೇನ ಕಾಮೇನ ತಚ್ಶೃಣು||
ಆ ಸುತಪಸ್ವಿಗಳು ವಿಧಿವತ್ತಾಗಿ ಯಜ್ಞೇಶ್ವರನಲ್ಲಿ ಮಂತ್ರೋಚ್ಛಾರಣೆಗಳೊಂದಿಗೆ ಹವಿಸ್ಸನ್ನು ಹಾಕಿದರು. ಇದರ ಉದ್ದೇಶವನ್ನು ಕೇಳು.
01027013a ಕಾಮವೀರ್ಯಃ ಕಾಮಗಮೋ ದೇವರಾಜಭಯಪ್ರದಃ|
01027013c ಇಂದ್ರೋಽನ್ಯಃ ಸರ್ವದೇವಾನಾಂ ಭವೇದಿತಿ ಯತವ್ರತಾಃ||
“ದೇವರಾಜನಿಗೆ ಭಯಪ್ರದ ಕಾಮವೀರ್ಯ ಮತ್ತು ಕಾಮಗಾಮಿಯಾದ ಬೇರೊಬ್ಬ ಸರ್ವ ದೇವತೆಗಳ ಇಂದ್ರನು ಬರಲಿ.
01027014a ಇಂದ್ರಾಚ್ಛತಗುಣಃ ಶೌರ್ಯೇ ವೀರ್ಯೇ ಚೈವ ಮನೋಜವಃ|
01027014c ತಪಸೋ ನಃ ಫಲೇನಾದ್ಯ ದಾರುಣಃ ಸಂಭವತ್ವಿತಿ||
ನಮ್ಮ ಈ ತಪಸ್ಸಿನಿಂದ ಇಂದ್ರನಿಗಿಂತಲೂ ನೂರುಪಟ್ಟು ವೀರ್ಯ-ಶೌರ್ಯಗಳಿರುವ ಮನೋವೇಗೀ ದಾರುಣನೋರ್ವನ ಉತ್ಪತ್ತಿಯಾಗಲಿ.”
01027015a ತದ್ಬುದ್ಧ್ವಾ ಭೃಶಸಂತಪ್ತೋ ದೇವರಾಜಃ ಶತಕ್ರತುಃ|
01027015c ಜಗಾಮ ಶರಣಂ ತತ್ರ ಕಶ್ಯಪಂ ಸಂಶಿತವ್ರತಂ||
ಇದನ್ನು ತಿಳಿದು ಭಯಸಂತಪ್ತನಾದ ಶತಕ್ರತು ದೇವರಾಜನು ಸಂಶಿತವ್ರತ ಕಶ್ಯಪನ ಶರಣು ಹೊಕ್ಕನು.
01027016a ತತ್ ಶ್ರುತ್ವಾ ದೇವರಾಜಸ್ಯ ಕಶ್ಯಪೋಽಥ ಪ್ರಜಾಪತಿಃ|
01027016c ವಾಲಖಿಲ್ಯಾನುಪಾಗಮ್ಯ ಕರ್ಮಸಿದ್ಧಿಮಪೃಚ್ಛತ||
ದೇವರಾಜನ ಮಾತುಗಳನ್ನು ಕೇಳಿದ ಪ್ರಜಾಪತಿ ಕಶ್ಯಪನು ವಾಲಖಿಲ್ಯರ ಬಳಿಬಂದು ಅವರ ಕರ್ಮಸಿದ್ಧಿಯ ಕುರಿತು ವಿಚಾರಿಸಿದನು.
01027017a ಏವಮಸ್ತ್ವಿತಿ ತಂ ಚಾಪಿ ಪ್ರತ್ಯೂಚುಃ ಸತ್ಯವಾದಿನಃ|
01027017c ತಾನ್ಕಶ್ಯಪ ಉವಾಚೇದಂ ಸಾಂತ್ವಪೂರ್ವಂ ಪ್ರಜಾಪತಿಃ||
ಹೀಗೆ ಕೇಳಲು ಆ ಸತ್ಯವಾದಿಗಳು “ಇದು ಹಾಗೆಯೇ ಆಗುತ್ತದೆ” ಎಂದರು. ಅವರನ್ನು ಸಾಂತ್ವನ ಗೊಳಿಸಲು ಪ್ರಜಾಪತಿ ಕಶ್ಯಪನು ಹೇಳಿದನು:
01027018a ಅಯಮಿಂದ್ರಸ್ತ್ರಿಭುವನೇ ನಿಯೋಗಾದ್ಬ್ರಹ್ಮಣಃ ಕೃತಃ|
01027018c ಇಂದ್ರಾರ್ಥಂ ಚ ಭವಂತೋಽಪಿ ಯತ್ನವಂತಸ್ತಪೋಧನಾಃ||
“ಈ ಇಂದ್ರನು ಮೂರು ಲೋಕಗಳ ಇಂದ್ರನೆಂದು ಬ್ರಹ್ಮನಿಂದಲೇ ನಿಯುಕ್ತಗೊಂಡಿದ್ದಾನೆ. ತಪೋಧನರಾದ ನೀವು ಇನ್ನೊಬ್ಬ ಇಂದ್ರನಿಗಾಗಿ ಪ್ರಯತ್ನಿಸುತ್ತಿದ್ದೀರಿ.
01027019a ನ ಮಿಥ್ಯಾ ಬ್ರಹ್ಮಣೋ ವಾಕ್ಯಂ ಕರ್ತುಮರ್ಹಥ ಸತ್ತಮಾಃ|
01027019c ಭವತಾಂ ಚ ನ ಮಿಥ್ಯಾಯಂ ಸಂಕಲ್ಪೋ ಮೇ ಚಿಕೀರ್ಷಿತಃ||
ಸತ್ತಮರೇ! ಬ್ರಹ್ಮವಾಕ್ಯವನ್ನು ಸುಳ್ಳುಮಾಡುವುದು ಸರಿಯಲ್ಲ. ನಿಮ್ಮ ಸಂಕಲ್ಪವನ್ನು ಸುಳ್ಳನ್ನಾಗಿ ಮಾಡುವುದೂ ನನಗೆ ಇಷ್ಟವಿಲ್ಲ.
01027020a ಭವತ್ವೇಷ ಪತತ್ರೀಣಾಂ ಇಂದ್ರೋಽತಿಬಲಸತ್ತ್ವವಾನ್|
01027020c ಪ್ರಸಾದಃ ಕ್ರಿಯತಾಂ ಚೈವ ದೇವರಾಜಸ್ಯ ಯಾಚತಃ||
ಅತಿಬಲನೂ ಸತ್ವವಂತನೂ ಆದ ಪಕ್ಷಿಗಳ ಇಂದ್ರನೊಬ್ಬನಾಗಲಿ. ಯಾಚಿಸುತ್ತಿರುವ ದೇವೇಂದ್ರನ ಮೇಲೆ ಪ್ರಸನ್ನರಾಗಿರಿ.”
01027021a ಏವಮುಕ್ತಾಃ ಕಶ್ಯಪೇನ ವಾಲಖಿಲ್ಯಾಸ್ತಪೋಧನಾಃ|
01027021c ಪ್ರತ್ಯೂಚುರಭಿಸಂಪೂಜ್ಯ ಮುನಿಶ್ರೇಷ್ಠಂ ಪ್ರಜಾಪತಿಂ||
ಕಶ್ಯಪನು ಈ ರೀತಿ ಹೇಳಲು ತಪೋಧನ ವಾಲಖಿಲ್ಯರು ಆ ಪ್ರಜಾಪತಿ ಮುನಿಶ್ರೇಷ್ಠನನ್ನು ನಮಸ್ಕರಿಸಿ ಉತ್ತರಿಸಿದರು:
01027022a ಇಂದ್ರಾರ್ಥೋಽಯಂ ಸಮಾರಂಭಃ ಸರ್ವೇಷಾಂ ನಃ ಪ್ರಜಾಪತೇ|
01027022c ಅಪತ್ಯಾರ್ಥಂ ಸಮಾರಂಭೋ ಭವತಶ್ಚಾಯಮೀಪ್ಸಿತಃ||
“ಪ್ರಜಾಪತೇ! ನಮ್ಮ ಈ ಕಾರ್ಯುಗಳೆಲ್ಲವೂ ಇಂದ್ರನನ್ನು ಸೃಷ್ಟಿಸುವುದಕ್ಕಾಗಿ. ನಿನಗಿಷ್ಟವಾದ ಮಗನು ನಿನಗೆ ಹುಟ್ಟಲೆಂದೇ ಈ ಕಾರ್ಯ ನಡೆಯುತ್ತಿದೆ.
01027023a ತದಿದಂ ಸಫಲಂ ಕರ್ಮ ತ್ವಯಾ ವೈ ಪ್ರತಿಗೃಹ್ಯತಾಂ|
01027023c ತಥಾ ಚೈವ ವಿಧತ್ಸ್ವಾತ್ರ ಯಥಾ ಶ್ರೇಯೋಽನುಪಶ್ಯಸಿ||
ಆದುದರಿಂದ ಈ ಸಫಲ ಕರ್ಮವನ್ನು ನೀನು ಪ್ರತಿಗ್ರಹಿಸಬೇಕು. ನೀನು ಹೇಗೆ ಶ್ರೇಯಸ್ಸನ್ನು ಕಾಣುತ್ತೀಯೋ ಹಾಗೆ ನಡೆಸಿಕೊಡು.”
01027024a ಏತಸ್ಮಿನ್ನೇವ ಕಾಲೇ ತು ದೇವೀ ದಾಕ್ಷಾಯಣೀ ಶುಭಾ|
01027024c ವಿನತಾ ನಾಮ ಕಲ್ಯಾಣೀ ಪುತ್ರಕಾಮಾ ಯಶಸ್ವಿನೀ||
01027025a ತಪಸ್ತಪ್ತ್ವಾ ವ್ರತಪರಾ ಸ್ನಾತಾ ಪುಂಸವನೇ ಶುಚಿಃ|
01027025c ಉಪಚಕ್ರಾಮ ಭರ್ತಾರಂ ತಾಮುವಾಚಾಥ ಕಶ್ಯಪಃ||
ಅದೇ ಸಮಯದಲ್ಲಿ ದೇವಿ, ಶುಭೆ, ಕಲ್ಯಾಣೀ, ಯಶಸ್ವಿನಿ, ತಪಸ್ವಿನಿ, ವ್ರತಪರ ವಿನತೆಯೆಂಬ ಹೆಸರಿನ ದಾಕ್ಷಾಯಣಿಯು ಪುತ್ರಕಾಮಿಯಾಗಿ ಪುಂಸವನ ಸ್ನಾನಮಾಡಿ ಶುಚಿಯಾಗಿ ಪತಿಯ ಬಳಿ ಬಂದಾಗ ಕಶ್ಯಪನು ಅವಳಿಗೆ ಹೇಳಿದನು:
01027026a ಆರಂಭಃ ಸಫಲೋ ದೇವಿ ಭವಿತಾಯಂ ತವೇಪ್ಸಿತಃ|
01027026c ಜನಯಿಷ್ಯಸಿ ಪುತ್ರೌ ದ್ವೌ ವೀರೌ ತ್ರಿಭುವನೇಶ್ವರೌ||
“ಆರಂಭಿಸಿದ ಯಜ್ಞವು ಸಫಲವಾಯಿತು ಮತ್ತು ದೇವೀ! ನಿನ್ನ ಇಚ್ಛೆಯುಂತೆ ನಿನಗೆ ಈರ್ವರು ವೀರ, ಮೂರೂ ಲೋಕಗಳ ಈಶ್ವರರಾಗಬಲ್ಲ ಮಕ್ಕಳು ಜನಿಸುತ್ತಾರೆ.
01027027a ತಪಸಾ ವಾಲಖಿಲ್ಯಾನಾಂ ಮಮ ಸಂಕಲ್ಪಜೌ ತಥಾ|
01027027c ಭವಿಷ್ಯತೋ ಮಹಾಭಾಗೌ ಪುತ್ರೌ ತೇ ಲೋಕಪೂಜಿತೌ||
ವಾಲಖಿಲ್ಯರ ತಪಸ್ಸಿನಿಂದ ಮತ್ತು ನನ್ನ ಸಂಕಲ್ಪದಿಂದ ಜನಿಸುವ ಈ ಪುತ್ರರು ಮಹಾಭಾಗರೂ ಲೋಕಪೂಜಿತರೂ ಆಗುತ್ತಾರೆ.”
01027028a ಉವಾಚ ಚೈನಾಂ ಭಗವಾನ್ಮಾರೀಚಃ ಪುನರೇವ ಹ|
01027028c ಧಾರ್ಯತಾಮಪ್ರಮಾದೇನ ಗರ್ಭೋಽಯಂ ಸುಮಹೋದಯಃ||
ಭಗವಾನ್ ಮಾರೀಚನು ಪುನಃ ಪುನಃ ಅವಳಿಗೆ “ಈ ಸುಮಹೋದಯ ಗರ್ಭಗಳನ್ನು ಜಾಗ್ರತೆಯಲ್ಲಿ ಧರಿಸಿಟ್ಟುಕೋ!” ಎಂದು ಹೇಳಿದನು.
01027029a ಏಕಃ ಸರ್ವಪತತ್ರೀಣಾಮಿಂದ್ರತ್ವಂ ಕಾರಯಿಷ್ಯತಿ|
01027029c ಲೋಕಸಂಭಾವಿತೋ ವೀರಃ ಕಾಮವೀರ್ಯೋ ವಿಹಂಗಮಃ||
“ಒಬ್ಬನು ಸರ್ವ ಪಕ್ಷಿಗಳ ಇಂದ್ರನಾಗುತ್ತಾನೆ. ವೀರನೂ ಕಾಮವೀರ್ಯನೂ ಆದ ಆ ಪಕ್ಷಿಯು ಲೋಕದಲ್ಲಿ ಎಲ್ಲರ ಗೌರವಾನ್ವಿತನಾಗುತ್ತಾನೆ.”
01027030a ಶತಕ್ರತುಮಥೋವಾಚ ಪ್ರೀಯಮಾಣಃ ಪ್ರಜಾಪತಿಃ|
01027030c ತ್ವತ್ಸಹಾಯೌ ಖಗಾವೇತೌ ಭ್ರಾತರೌ ತೇ ಭವಿಷ್ಯತಃ||
ಪ್ರಜಾಪತಿಯು ಶತಕ್ರತುವಿಗೆ ಪ್ರೀತಿಯಿಂದ ಹೇಳಿದನು: “ಈ ಈರ್ವರು ಪಕ್ಷಿ ಸಹೋದರರು ನಿನ್ನ ಸಹಾಯಕರಾಗುತ್ತಾರೆ.
01027031a ನೈತಾಭ್ಯಾಂ ಭವಿತಾ ದೋಷಃ ಸಕಾಶಾತ್ತೇ ಪುರಂದರ|
01027031c ವ್ಯೇತು ತೇ ಶಕ್ರ ಸಂತಾಪಸ್ತ್ವಮೇವೇಂದ್ರೋ ಭವಿಷ್ಯಸಿ||
ಪುರಂದರ! ಅವರಿಂದ ನಿನಗೆ ಯಾವುದೇ ರೀತಿಯ ಬಾಧೆಯೂ ಬರುವುದಿಲ್ಲ. ಶಕ್ರ! ಇಂದು ನಿನ್ನ ಸಂತಾಪವು ಕಳೆಯಿತು. ನೀನೇ ಇಂದ್ರನಾಗಿರುತ್ತೀಯೆ!
01027032a ನ ಚಾಪ್ಯೇವಂ ತ್ವಯಾ ಭೂಯಃ ಕ್ಷೇಪ್ತವ್ಯಾ ಬ್ರಹ್ಮವಾದಿನಃ|
01027032c ನ ಚಾವಮಾನ್ಯಾ ದರ್ಪಾತ್ತೇ ವಾಗ್ವಿಷಾ ಭೃಶಕೋಪನಾಃ||
ಆದರೆ ಇನ್ನು ಮುಂದೆ ನೀನು ಯಾವ ಬ್ರಹ್ಮವಾದಿಯನ್ನೂ ಕೀಳಾಗಿ ಕಾಣಬೇಡ. ಕೋಪವೇ ಪೆಟ್ಟು ಮತ್ತು ಮಾತೇ ವಿಷವಾಗಬಲ್ಲ ಅವರನ್ನು ದರ್ಪದಿಂದ ಎಂದೂ ಅವಮಾನಿಸಬೇಡ!”
01027033a ಏವಮುಕ್ತೋ ಜಗಾಮೇಂದ್ರೋ ನಿರ್ವಿಶಂಕಸ್ತ್ರಿವಿಷ್ಟಪಂ|
01027033c ವಿನತಾ ಚಾಪಿ ಸಿದ್ಧಾರ್ಥಾ ಬಭೂವ ಮುದಿತಾ ತದಾ||
ಈ ಮಾತುಗಳನ್ನು ಕೇಳಿದ ಇಂದ್ರನು ನಿರ್ವಿಶಂಕನಾಗಿ ತನ್ನ ಸ್ವರ್ಗಕ್ಕೆ ತೆರಳಿದನು. ವಿನತೆಯೂ ಕೂಡ ತನ್ನ ಬಯಕೆಯು ಸಿದ್ಧಿಯಾಯಿತೆಂದು ಸಂತೋಷಗೊಂಡಳು.
01027034a ಜನಯಾಮಾಸ ಪುತ್ರೌ ದ್ವಾವರುಣಂ ಗರುಡಂ ತಥಾ|
01027034c ಅರುಣಸ್ತಯೋಸ್ತು ವಿಕಲ ಆದಿತ್ಯಸ್ಯ ಪುರಃಸರಃ||
ಅವಳು ಅರುಣ ಮತ್ತು ಗರುಡರೆಂಬ ಈರ್ವರು ಪುತ್ರರಿಗೆ ಜನ್ಮವಿತ್ತಳು. ದೇಹದಲ್ಲಿ ವಿಕಲನಾಗಿದ್ದ ಅರುಣನು ಸೂರ್ಯನ ಮುಂದೆ ಕುಳಿತು ಸಾರಥಿಯಾದನು.
01027035a ಪತತ್ರೀಣಾಂ ತು ಗರುಡ ಇಂದ್ರತ್ವೇನಾಭ್ಯಷಿಚ್ಯತ|
01027035c ತಸ್ಯೈತತ್ಕರ್ಮ ಸುಮಹಶ್ರೂಯತಾಂ ಭೃಗುನಂದನ||
ಗರುಡನಾದರೋ ಪಕ್ಷಿಗಳ ಇಂದ್ರನೆಂದು ಅಭಿಷಿಕ್ತನಾದನು. ಭೃಗುನಂದನ! ಅವನದೇ ಸುಮಹತ್ತರ ಕಾರ್ಯಗಳನ್ನು ನಾನು ಈಗ ವರ್ಣಿಸುತ್ತಿದ್ದೇನೆ.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ಸಪ್ತವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೇಳನೇ ಅಧ್ಯಾಯವು.