ಆದಿ ಪರ್ವ: ಆಸ್ತೀಕ ಪರ್ವ
೨೦
ಗರುಡೋತ್ಪತ್ತಿ; ಅಮೃತಹರಣ
ವಿನತೆಯು ಪಣವನ್ನು ಸೋತು ಕದ್ರುವಿನ ದಾಸಿಯಾದುದು (೧-೨). ಗರುಡನ ಉತ್ಪತ್ತಿ, ದೇವತೆಗಳಿಂದ ಅವನ ಸ್ತುತಿ (೩-೧೫).
01020001 ಸೂತ ಉವಾಚ|
01020001a ತಂ ಸಮುದ್ರಮತಿಕ್ರಮ್ಯ ಕದ್ರೂರ್ವಿನತಯಾ ಸಹ|
01020001c ನ್ಯಪತತ್ತುರಗಾಭ್ಯಾಶೇ ನಚಿರಾದಿವ ಶೀಘ್ರಗಾ||
ಸೂತನು ಹೇಳಿದನು: “ಶೀಘ್ರವಾಗಿ ಆ ಸಮುದ್ರವನ್ನು ಅತಿಕ್ರಮಿಸಿ ವಿನತೆಯ ಸಹಿತ ಕದ್ರುವು ತಕ್ಷಣವೇ ಆ ತುರಗದ ಬಳಿ ಬಂದಿಳಿದಳು.
01020002a ನಿಶಾಮ್ಯ ಚ ಬಹೂನ್ವಾಲಾನ್ಕೃಷ್ಣಾನ್ಪುಚ್ಛಂ ಸಮಾಶ್ರಿತಾನ್|
01020002c ವಿನತಾಂ ವಿಷಣ್ಣವದನಾಂ ಕದ್ರೂರ್ದಾಸ್ಯೇ ನ್ಯಯೋಜಯತ್||
ಬಾಲವು ಕಪ್ಪು ಕೂದಲುಗಳಿಂದ ಸುತ್ತಿಕೊಂಡಿದ್ದುದನ್ನು ನೋಡಿ ವಿಷಣ್ಣವದನಳಾದ ವಿನತೆಯು ಕದ್ರುವಿನ ದಾಸಿಯಾಗಿ ನಿಯೋಜಿತಳಾದಳು[1].
01020003a ತತಃ ಸಾ ವಿನತಾ ತಸ್ಮಿನ್ಪಣಿತೇನ ಪರಾಜಿತಾ|
01020003c ಅಭವದ್ದುಃಖಸಂತಪ್ತಾ ದಾಸೀಭಾವಂ ಸಮಾಸ್ಥಿತಾ||
ಆ ಪಣದಿಂದ ಪರಾಜಿತಗೊಂಡ ವಿನತೆಯು ತನಗೊದಗಿದ ದಾಸೀಭಾವದಿಂದ ಅತ್ಯಂತ ದುಃಖಸಂತಪ್ತಳಾದಳು.
01020004a ಏತಸ್ಮಿನ್ನಂತರೇ ಚೈವ ಗರುಡಃ ಕಾಲ ಆಗತೇ|
01020004c ವಿನಾ ಮಾತ್ರಾ ಮಹಾತೇಜಾ ವಿದಾರ್ಯಾಂಡಮಜಾಯತ||
ಈ ಮಧ್ಯೆ ಕಾಲ ಬಂದಂತೆ ಮಹಾತೇಜ ಗರುಡನು ಯಾರ ಸಹಾಯವೂ ಇಲ್ಲದೇ ಅಂಡವನ್ನು ಒಡೆದು ಹೊರಬಂದನು.
01020005a ಅಗ್ನಿರಾಶಿರಿವೋದ್ಭಾಸನ್ಸಮಿದ್ಧೋಽತಿಭಯಂಕರಃ|
01020005c ಪ್ರವೃದ್ಧಃ ಸಹಸಾ ಪಕ್ಷೀ ಮಹಾಕಾಯೋ ನಭೋಗತಃ||
ಅಗ್ನಿರಾಶಿಯಂತೆ ಬೆಳಗುತ್ತಾ ಅತಿಭಯಂಕರವಾಗಿ ಉರಿಯುತ್ತಿರುವ ಆ ಪಕ್ಷಿಯು ತಕ್ಷಣವೇ ಮಹಾಕಾಯನಾಗಿ ಬೆಳೆದು ಗಗನವನ್ನೇರಿದನು.
01020006a ತಂ ದೃಷ್ಟ್ವಾ ಶರಣಂ ಜಗ್ಮುಃ ಪ್ರಜಾಃ ಸರ್ವಾ ವಿಭಾವಸುಂ|
01020006c ಪ್ರಣಿಪತ್ಯಾಬ್ರುವಂಶ್ಚೈನಮಾಸೀನಂ ವಿಶ್ವರೂಪಿಣಂ||
ಅವನನ್ನು ನೋಡಿದ ಸರ್ವ ಪ್ರಜೆಗಳು ವಿಭಾವಸುವಿನ ಶರಣುಹೊಕ್ಕರು. ಕುಳಿತಿರುವ ವಿಶ್ವರೂಪಿಯನ್ನು ನಮಸ್ಕರಿಸಿ ವಿನಂತಿಸಿದರು:
01020007a ಅಗ್ನೇ ಮಾ ತ್ವಂ ಪ್ರವರ್ಧಿಷ್ಠಾಃ ಕಶ್ಚಿನ್ನೋ ನ ದಿಧಕ್ಷಸಿ|
01020007c ಅಸೌ ಹಿ ರಾಶಿಃ ಸುಮಹಾನ್ಸಮಿದ್ಧಸ್ತವ ಸರ್ಪತಿ||
“ಅಗ್ನಿಯೇ! ನಿನ್ನ ಕಾಯವನ್ನು ಇನ್ನೂ ಎಷ್ಟು ಬೆಳೆಸುತ್ತೀಯೆ? ಈ ನಿನ್ನ ದೊಡ್ಡ ರಾಶಿಯೇ ಎಲ್ಲ ಕಡೆಯಲ್ಲಿಯೂ ಹರಡಿಕೊಂಡಿದೆ.”
01020008 ಅಗ್ನಿರುವಾಚ|
01020008a ನೈತದೇವಂ ಯಥಾ ಯೂಯಂ ಮನ್ಯಧ್ವಮಸುರಾರ್ದನಾಃ|
01020008c ಗರುಡೋ ಬಲವಾನೇಷ ಮಮ ತುಲ್ಯಃ ಸ್ವತೇಜಸಾ||
ಅಗ್ನಿಯು ಹೇಳಿದನು: “ಅಸುರಾರ್ದನರೇ! ನೀವು ತಿಳಿದುಕೊಂಡಹಾಗೆ ಇಲ್ಲ. ಅವನು ನನ್ನ ಸರಿಸಮಾನ ತೇಜಸ್ಸನ್ನುಳ್ಳ ಬಲವಾನ್ ಗರುಡ.””
01020009 ಸೂತ ಉವಾಚ|
01020009a ಏವಮುಕ್ತಾಸ್ತತೋ ಗತ್ವಾ ಗರುಡಂ ವಾಗ್ಭಿರಸ್ತುವನ್|
01020009c ಅದೂರಾದಭ್ಯುಪೇತ್ಯೈನಂ ದೇವಾಃ ಸರ್ಷಿಗಣಾಸ್ತದಾ||
ಸೂತನು ಹೇಳಿದನು: “ಇದನ್ನು ಕೇಳಿದ ದೇವತೆಗಳು ಋಷಿಗಣಗಳಿಂದೊಡಗೂಡಿ ಗರುಡನಲ್ಲಿಗೆ ಹೋಗಿ ದೂರದಲ್ಲಿಯೇ ನಿಂತು ಅವನನ್ನು ಸ್ತುತಿಸುತ್ತಾ ಪ್ರಾರ್ಥಿಸಿದರು:
01020010a ತ್ವಂ ಋಷಿಸ್ತ್ವಂ ಮಹಾಭಾಗಸ್ತ್ವಂ ದೇವಃ ಪತಗೇಶ್ವರಃ|
01020010c ತ್ವಂ ಪ್ರಭುಸ್ತಪನಪ್ರಖ್ಯಸ್ತ್ವಂ ನಸ್ತ್ರಾಣಮನುತ್ತಮಂ||
01020011a ಬಲೋರ್ಮಿಮಾನ್ಸಾಧುರದೀನಸತ್ತ್ವಃ
ಸಮೃದ್ಧಿಮಾನ್ದುಷ್ಪ್ರಸಹಸ್ತ್ವಮೇವ|
01020011c ತಪಃ ಶ್ರುತಂ ಸರ್ವಮಹೀನಕೀರ್ತೇ
ಅನಾಗತಂ ಚೋಪಗತಂ ಚ ಸರ್ವಂ||
01020012a ತ್ವಮುತ್ತಮಃ ಸರ್ವಮಿದಂ ಚರಾಚರಂ
ಗಭಸ್ತಿಭಿರ್ಭಾನುರಿವಾವಭಾಸಸೇ|
01020012c ಸಮಾಕ್ಷಿಪನ್ಭಾನುಮತಃ ಪ್ರಭಾಂ ಮುಹುಃ
ತ್ವಮಂತಕಃ ಸರ್ವಮಿದಂ ಧ್ರುವಾಧ್ರುವಂ||
01020013a ದಿವಾಕರಃ ಪರಿಕುಪಿತೋ ಯಥಾ ದಹೇತ್
ಪ್ರಜಾಸ್ತಥಾ ದಹಸಿ ಹುತಾಶನಪ್ರಭ|
01020013c ಭಯಂಕರಃ ಪ್ರಲಯ ಇವಾಗ್ನಿರುತ್ಥಿತೋ
ವಿನಾಶಯನ್ಯುಗಪರಿವರ್ತನಾಂತಕೃತ್||
01020014a ಖಗೇಶ್ವರಂ ಶರಣಮುಪಸ್ಥಿತಾ ವಯಂ
ಮಹೌಜಸಂ ವಿತಿಮಿರಮಭ್ರಗೋಚರಂ|
01020014c ಮಹಾಬಲಂ ಗರುಡಮುಪೇತ್ಯ ಖೇಚರಂ
ಪರಾವರಂ ವರದಮಜಯ್ಯವಿಕ್ರಮಂ||
“ಪತಗೇಶ್ವರ! ನೀನು ಋಷಿ. ಮಹಾಭಾಗ. ನೀನು ದೇವ. ನೀನು ಪ್ರಭು ಸೂರ್ಯನ ಉರಿಯುತ್ತಿರುವ ಕಿರಣ. ನಿನ್ನ ಸರಿಸಾಟಿ ಯಾರೂ ಇಲ್ಲ. ಬಲಶಾಲಿಯಾದರೂ ಸಾಧು ನೀನು. ಸತ್ವವು ನಿನ್ನ ಅಧೀನ. ನೀನು ಸಮೃದ್ಧಿವಂತ ಮತ್ತು ದುಷ್ಪ್ರಸಹ. ನೀನು ತಪಸ್ಸು ಮತ್ತು ಕ್ಷೀಣವಾಗದ ಕೀರ್ತಿ. ಕೇಳಿದ್ದುದೆಲ್ಲವೂ, ನಡೆದುದೆಲ್ಲವೂ ಮತ್ತು ನಡೆಯುವಂತಹುದೆಲ್ಲವೂ ನೀನೇ. ಇಲ್ಲಿರುವ ಸರ್ವ ಚರಾಚರಗಳಲ್ಲಿ ಸೂರ್ಯನ ಪ್ರಕಾಶವನ್ನೇ ಗ್ರಹಣಗೊಳಿಸುವ ನೀನು ಉತ್ತಮ. ಸೂರ್ಯನ ಪ್ರಭೆಯನ್ನೂ ಮೀರಿದ ನೀನು ನಿಶ್ಚಿತ ಅನಿಶ್ಚಿತಗಳೆಲ್ಲವುದಕ್ಕೂ ಅಂತಕ. ಹೇಗೆ ಪರಿಕುಪಿತ ದಿವಾಕರನು ಸುಡುತ್ತಾನೋ ಹಾಗೆ ಪ್ರಜೆಗಳು ಹುತಾಶನಪ್ರಭೆಯಿಂದ ಸುಡುತ್ತಿದ್ದಾರೆ. ಯುಗವನ್ನು ವಿನಾಶಮಾಡಿ ಪರಿವರ್ತನೆಯನ್ನೇ ಅಂತ್ಯಗೊಳಿಸುವ ಭಯಂಕರ ಪ್ರಲಯಾಗ್ನಿಯಂತೆ ನಿಂತಿರುವೆ. ಖಗೇಶ್ವರ! ಮಹೌಜಸ! ಮೋಡಗಳನ್ನೇರಿ ಚಲಿಸುವವನೇ! ಮಹಾಬಲ! ವಿಕ್ರಮ! ವಿಜಯ! ವರದ! ಪರಾವರ! ಗರುಡ! ನಾವೆಲ್ಲ ನಿನ್ನ ಶರಣು ಬಂದಿದ್ದೇವೆ.”
01020015a ಏವಂ ಸ್ತುತಃ ಸುಪರ್ಣಸ್ತು ದೇವೈಃ ಸರ್ಷಿಗಣೈಸ್ತದಾ|
01020015c ತೇಜಸಃ ಪ್ರತಿಸಂಹಾರಮಾತ್ಮನಃ ಸ ಚಕಾರ ಹ||
ಋಷಿಗಣಗಳ ಸಹಿತ ದೇವತೆಗಳು ಈ ರೀತಿ ಸ್ತುತಿಸಲು ಸುಪರ್ಣನು ತನ್ನ ತೇಜಸ್ಸು-ಗಾತ್ರಗಳನ್ನು ಕಡಿಮೆಮಾಡಿಕೊಂಡನು.””
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕ ಪರ್ವಣಿ ಸೌಪರ್ಣೇ ವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತನೆಯ ಅಧ್ಯಾಯವು.
[1] ಮಗ ಅರುಣನು ತಾಯಿ ವಿನತೆಗಿತ್ತ ಶಾಪದ ಮೊದಲನೆಯ ಭಾಗವು ಈ ರೀತಿ ಸತ್ಯವಾಯಿತು.