Adi Parva: Chapter 16

ಆದಿ ಪರ್ವ: ಆಸ್ತೀಕ ಪರ್ವ

೧೬

ಅನಂತನು ಮಂದರವನ್ನು ಕಿತ್ತು ಸಮುದ್ರಮಥನಕ್ಕೆ ಕಡೆಗೋಲನ್ನಾಗಿಸಲು ಕೊಟ್ಟಿದ್ದುದು (೧-೧೦). ಕೂರ್ಮವು ಮಂದರವನ್ನು ಹೊತ್ತಿಕೊಂಡಿದುದು, ದೇವಾಸುರರಿಂದ ಸಮುದ್ರ ಮಥನ (೧೧-೧೫). ಸಮುದ್ರಮಥನದಿಂದುಂಟಾದ ಅಲ್ಲೋಲ ಕಲ್ಲೋಲಗಳು (೧೫-೨೫). ಬಳಲಿದ ದೇವತೆಗಳಿಗೆ ನಾರಾಯಣನು ಶಕ್ತಿಯನ್ನು ನೀಡುವುದು (೨೬-೩೦). ಸಮುದ್ರದಿಂದ ನಾನಾ ಜೀವ-ವಸ್ತುಗಳ ಉತ್ಪತ್ತಿ (೩೧-೩೭). ಅಮೃತದ ಉತ್ಪತ್ತಿ, ನಾರಾಯಣನ ಮೋಹಿನೀ ರೂಪ (೩೮-೪೦).

01016001 ಸೂತ ಉವಾಚ

01016001a ತತೋಽಭ್ರಶಿಖರಾಕಾರೈರ್ಗಿರಿಶೃಂಗೈರಲಂಕೃತಂ|

01016001c ಮಂದರಂ ಪರ್ವತವರಂ ಲತಾಜಾಲಸಮಾವೃತಂ||

ಸೂತನು ಹೇಳಿದನು: “ಮೋಡಗಳೇ ಶಿಖರಾಕಾರವಾಗಿರುವ, ಗಿರಿಶೃಂಗಗಳಿಂದ ಅಲಂಕೃತ, ಲತಾಜಾಲ ಸಮಾವೃತ, ಪರ್ವತಶ್ರೇಷ್ಠವೇ ಮಂದರ[1].

01016002a ನಾನಾವಿಹಗಸಂಘುಷ್ಟಂ ನಾನಾದಂಷ್ಟ್ರಿಸಮಾಕುಲಂ|

01016002c ಕಿನ್ನರೈರಪ್ಸರೋಭಿಶ್ಚ ದೇವೈರಪಿ ಚ ಸೇವಿತಂ||

ಅಲ್ಲಿ ನಾನಾಪಕ್ಷಿಗಳ ಸಂಕುಲಗಳು ನಿನಾದಗೈಯುತ್ತವೆ ಮತ್ತು ನಾನಾ ಕ್ರೂರ ಮೃಗಸಂಕುಲಗಳಿವೆ. ಅಲ್ಲಿ ಕಿನ್ನರ, ಅಪ್ಸರ ಮತ್ತು ದೇವತೆಗಳು ವಿಹರಿಸುತ್ತಿರುತ್ತಾರೆ.

01016003a ಏಕಾದಶ ಸಹಸ್ರಾಣಿ ಯೋಜನಾನಾಂ ಸಮುಚ್ಛ್ರಿತಂ|

01016003c ಅಧೋ ಭೂಮೇಃ ಸಹಸ್ರೇಷು ತಾವತ್ಸ್ವೇವ ಪ್ರತಿಷ್ಠಿತಂ||

ಅದು ಭೂಮಿಯಿಂದ ಮೇಲೆ ಹನ್ನೊಂದು ಸಾವಿರ ಯೋಜನ[2] ಮತ್ತು ಕೆಳಗೆ ಹನ್ನೊಂದು ಸಾವಿರ ಯೋಜನ ಆಳದಲ್ಲಿ ಇದೆ. 

01016004a ತಮುದ್ಧರ್ತುಂ ನ ಶಕ್ತಾ ವೈ ಸರ್ವೇ ದೇವಗಣಾಸ್ತದಾ|

01016004c ವಿಷ್ಣುಮಾಸೀನಮಭ್ಯೇತ್ಯ ಬ್ರಹ್ಮಾಣಂ ಚೇದಮಬ್ರುವನ್||

ಅದನ್ನು ಕೀಳಲು ಅಶಕ್ತರಾದ ಸರ್ವ ದೇವಗಣಗಳೂ ಬ್ರಹ್ಮನೊಂದಿಗೆ ಆಸೀನನಾಗಿದ್ದ ವಿಷ್ಣುವಿನ ಬಳಿ ಬಂದು ಹೇಳಿದರು:

01016005a ಭವಂತಾವತ್ರ ಕುರುತಾಂ ಬುದ್ಧಿಂ ನೈಃಶ್ರೇಯಸೀಂ ಪರಾಂ|

01016005c ಮಂದರೋದ್ಧರಣೇ ಯತ್ನಃ ಕ್ರಿಯತಾಂ ಚ ಹಿತಾಯ ನಃ||

01016006a ತಥೇತಿ ಚಾಬ್ರವೀದ್ವಿಷ್ಣುರ್ಬ್ರಹ್ಮಣಾ ಸಹ ಭಾರ್ಗವ|

“ಮಂದರವನ್ನು ಎತ್ತುವ ಕುರಿತು ಏನಾದರೂ ಉಪಾಯವನ್ನು ಯೋಚಿಸಿರಿ.” ಭಾರ್ಗವ! “ಹಾಗೆಯೇ ಆಗಲಿ” ಎಂದು ವಿಷ್ಣು-ಬ್ರಹ್ಮರು ಹೇಳಿದರು.

01016006c ತತೋಽನಂತಃ ಸಮುತ್ಥಾಯ ಬ್ರಹ್ಮಣಾ ಪರಿಚೋದಿತಃ|

01016006e ನಾರಾಯಣೇನ ಚಾಪ್ಯುಕ್ತಸ್ತಸ್ಮಿನ್ಕರ್ಮಣಿ ವೀರ್ಯವಾನ್||

ಬ್ರಹ್ಮ ಮತ್ತು ನಾರಾಯಣರಿಂದ ಪರಿಚೋದಿತ ಕರ್ಮವೀರ್ಯವಾನ್ ಅನಂತ[3]ನು ಅದನ್ನು ಎತ್ತಿ ಹಿಡಿದನು.

01016007a ಅಥ ಪರ್ವತರಾಜಾನಂ ತಮನಂತೋ ಮಹಾಬಲಃ|

01016007c ಉಜ್ಜಹಾರ ಬಲಾದ್ಬ್ರಹ್ಮನ್ಸವನಂ ಸವನೌಕಸಂ||

ಬ್ರಾಹ್ಮಣ! ಆ ಮಹಾಬಲ ಅನಂತನು ಬಲವನ್ನು ಉಪಯೋಗಿಸಿ ವನ ಮತ್ತು ವೃಕ್ಷಗಳ ಸಹಿತ ಆ ಪರ್ವತರಾಜನನ್ನು ಎಳೆದು ಕಿತ್ತನು.

01016008a ತತಸ್ತೇನ ಸುರಾಃ ಸಾರ್ಧಂ ಸಮುದ್ರಮುಪತಸ್ಥಿರೇ|

01016008c ತಮೂಚುರಮೃತಾರ್ಥಾಯ ನಿರ್ಮಥಿಷ್ಯಾಮಹೇ ಜಲಂ||

ನಂತರ ಸುರರೆಲ್ಲರೂ ಸಮುದ್ರತಟದಲ್ಲಿ ಸೇರಿ ಹೇಳಿದರು: “ಸಮುದ್ರ! ಅಮೃತಕ್ಕಾಗಿ ನಿನ್ನನ್ನು ಮಥಿಸಲು ನಾವೆಲ್ಲ ಇಲ್ಲಿ ಸೇರಿದ್ದೇವೆ.”

01016009a ಅಪಾಂಪತಿರಥೋವಾಚ ಮಮಾಪ್ಯಂಶೋ ಭವೇತ್ತತಃ|

01016009c ಸೋಡಾಸ್ಮಿ ವಿಪುಲಂ ಮರ್ದಂ ಮಂದರಭ್ರಮಣಾದಿತಿ||

ಆಗ ಅಪಾಂಪತಿ[4]ಯು ಉತ್ತರಿಸಿದನು: “ಅದರಲ್ಲಿ ಒಂದು ಭಾಗವನ್ನು ನನಗೂ ಕೊಡಿ. ಮಂದರವು ಕಡೆಯುವುದರಿಂದ ಉಂಟಾಗುವ ವಿಪುಲ ಅಲ್ಲೋಲ ಕಲ್ಲೋಲವನ್ನು ನಾನು ತಡೆಯಬಲ್ಲೆ.”

01016010a ಊಚುಶ್ಚ ಕೂರ್ಮರಾಜಾನಮಕೂಪಾರಂ ಸುರಾಸುರಾಃ|

01016010c ಗಿರೇರದಿಷ್ಟಾನಮಸ್ಯ ಭವಾನ್ಭವಿತುಮರ್ಹತಿ||

ಸುರಾಸುರರೆಲ್ಲರೂ ಕೂರ್ಮರಾಜ ಅಕೂಪಾರ[5]ನಲ್ಲಿಗೆ ಹೋಗಿ “ನಿನ್ನ ಬೆನ್ನ ಮೇಲೆ ಈ ಪರ್ವತವನ್ನು ಎತ್ತಿ ಹಿಡಿದುಕೊಳ್ಳಬೇಕು” ಎಂದು ಕೇಳಿಕೊಂಡರು.

01016011a ಕೂರ್ಮೇಣ ತು ತಥೇತ್ಯುಕ್ತ್ವಾ ಪೃಷ್ಟಮಸ್ಯ ಸಮರ್ಪಿತಂ|

01016011c ತಸ್ಯ ಶೈಲಸ್ಯ ಚಾಗ್ರಂ ವೈ ಯಂತ್ರೇಣೇಂದ್ರೋಽಭ್ಯಪೀಡಯತ್||

“ಹಾಗೆಯೇ ಆಗಲಿ” ಎಂದು ಆ ಆಮೆಯು ಹೇಳಲು ಅದರ ಬೆನ್ನ ಮೇಲೆ ಇಂದ್ರನು ಒಂದು ಯಂತ್ರದ ಸಹಾಯದಿಂದ ಆ ಪರ್ವತವನ್ನು ಎತ್ತಿ ನಿಲ್ಲಿಸಿದನು.

01016012a ಮಂಥಾನಂ ಮಂದರಂ ಕೃತ್ವಾ ತಥಾ ನೇತ್ರಂ ಚ ವಾಸುಕಿಂ|

01016012c ದೇವಾ ಮಥಿತುಮಾರಬ್ಧಾಃ ಸಮುದ್ರಂ ನಿಧಿಮಂಭಸಾಂ|

01016012e ಅಮೃತಾರ್ಥಿನಸ್ತತೋ ಬ್ರಹ್ಮನ್ಸಹಿತಾ ದೈತ್ಯದಾನವಾಃ||

ಬ್ರಾಹ್ಮಣ! ಮಂದರವನ್ನು ಕಡಗೋಲನ್ನಾಗಿ ಮತ್ತು ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ದೇವತೆಗಳು ದೈತ್ಯ ದಾನವರೊಡಗೂಡಿ ನೀರೇ ನಿಧಿಯಾಗಿದ್ದ ಸಮುದ್ರವನ್ನು ಅಮೃತಕ್ಕೋಸ್ಕರ ಕಡೆಯತೊಡಗಿದರು.

01016013a ಏಕಮಂತಮುಪಾಶ್ಲಿಷ್ಟಾ ನಾಗರಾಜ್ಞೋ ಮಹಾಸುರಾಃ|

01016013c ವಿಬುಧಾಃ ಸಹಿತಾಃ ಸರ್ವೇ ಯತಃ ಪುಚ್ಛಂ ತತಃ ಸ್ಥಿತಾಃ||

ಒಂದುಕಡೆ ನಾಗರಾಜನ ಹೆಡೆಯನ್ನು ಮಹಾ ಅಸುರರು ಹಿಡಿದು ಇನ್ನೊಂದೆಡೆ ಅದರ ಬಾಲವನ್ನು ಸರ್ವ ದೇವತೆಗಳು ಹಿಡಿದು ನಿಂತಿದ್ದರು.

01016014a ಅನಂತೋ ಭಗವಾನ್ದೇವೋ ಯತೋ ನಾರಾಯಣಸ್ತತಃ|

01016014c ಶಿರ ಉದ್ಯಮ್ಯ ನಾಗಸ್ಯ ಪುನಃ ಪುನರವಾಕ್ಷಿಪತ್||

ಭಗವಾನ್ ಅನಂತನು ನಾರಾಯಣ ದೇವನಿದ್ದಲ್ಲಿಯೇ ನಿಂತು ಇಬ್ಬರೂ ನಾಗ ವಾಸುಕಿಯ ಶಿರವನ್ನು ಪುನಃ ಪುನಃ ಮೇಲೆತ್ತಿ ಕೆಳಗಿಳಿಸುತ್ತಿದ್ದರು.

01016015a ವಾಸುಕೇರಥ ನಾಗಸ್ಯ ಸಹಸಾಕ್ಷಿಪ್ಯತಃ ಸುರೈಃ|

01016015c ಸಧೂಮಾಃ ಸಾರ್ಚಿಷೋ ವಾತಾ ನಿಷ್ಪೇತುರಸಕೃನ್ಮುಖಾತ್||

ಸುರರಿಂದ ಜೋರಾಗಿ ಎಳೆದಾಡಲ್ಪಟ್ಟ ನಾಗ ವಾಸುಕಿಯ ಬಾಯಿಯಿಂದ ಧೂಮ ಮತ್ತು ಜ್ವಾಲೆಯಿಂದೊಡಗೂಡಿದ ಹವೆಯು ಹೊರಹೊಮ್ಮಿತು.

01016016a ತೇ ಧೂಮಸಂಘಾಃ ಸಂಭೂತಾ ಮೇಘಸಂಘಾಃ ಸವಿದ್ಯುತಃ|

01016016c ಅಭ್ಯವರ್ಷನ್ಸುರಗಣಾನ್ ಶ್ರಮಸಂತಾಪಕರ್ಶಿತಾನ್||

ಆ ಹವೆಯು ವಿಂಚಿನಿಂದೊಡಗೂಡಿದ ಮೇಘಗಳಾಗಿ, ಶ್ರಮಸಂತಾಪದಿಂದ ಬಳಲಿದ ಸುರಗಣಗಳ ಮೇಲೆ ಮಳೆಯನ್ನು ಸುರಿಸಿತು.

01016017a ತಸ್ಮಾಚ್ಚ ಗಿರಿಕೂಟಾಗ್ರಾತ್ಪ್ರಚ್ಯುತಾಃ ಪುಷ್ಪವೃಷ್ಟಯಃ|

01016017c ಸುರಾಸುರಗಣಾನ್ಮಾಲ್ಯೈಃ ಸರ್ವತಃ ಸಮವಾಕಿರನ್||

ಆ ಗಿರಿಕೂಟದ ಕಣಿವೆಗಳಲ್ಲಿರುವ ಮರಗಳಿಂದ ಉದುರುತ್ತಿದ್ದ ಪುಷ್ಪ ಮಾಲೆಗಳು ಸರಾಸುರಗಣಗಳೆಲ್ಲರ ಆಯಾಸವನ್ನು ಪರಿಹರಿಸಿದವು.

01016018a ಬಭೂವಾತ್ರ ಮಹಾಘೋಷೋ ಮಹಾಮೇಘರವೋಪಮಃ|

01016018c ಉದಧೇರ್ಮಥ್ಯಮಾನಸ್ಯ ಮಂದರೇಣ ಸುರಾಸುರೈಃ||

ಸುರಾಸುರರಿಂದ ಕಡೆಯಲ್ಪಡುತ್ತಿದ್ದ ಮಂದರದಿಂದ ಮಹಾಮೇಘಘರ್ಜನೆಯಂಥಹ ಮಹಾ ಘೋಷವು ಕೇಳಿಬರುತ್ತಿತ್ತು.

01016019a ತತ್ರ ನಾನಾಜಲಚರಾ ವಿನಿಷ್ಪಿಷ್ಟಾ ಮಹಾದ್ರಿಣಾ|

01016019c ವಿಲಯಂ ಸಮುಪಾಜಗ್ಮುಃ ಶತಶೋ ಲವಣಾಂಭಸಿ||

ಅಲ್ಲಿದ್ದ ನಾನಾ ಜಲಚರಗಳು ಮಹಾದ್ರಿಯಿಂದ ಪುಡಿಯಾಗಿ ನೂರಾರು ಸಂಖ್ಯೆಯಲ್ಲಿ ಆ ಲವಣಾಂಭಸಿ[6]ಯಲ್ಲಿ ಲಯವಾದವು.

01016020a ವಾರುಣಾನಿ ಚ ಭೂತಾನಿ ವಿವಿಧಾನಿ ಮಹೀಧರಃ|

01016020c ಪಾತಾಲತಲವಾಸೀನಿ ವಿಲಯಂ ಸಮುಪಾನಯತ್||

ವರುಣ ಲೋಕದ ವಿವಿಧ ಜೀವಿಗಳು ಮತ್ತು ಪಾತಾಲತಲವಾಸಿಗಳು ಈ ಘರ್ಷಣೆಯಲ್ಲಿ ಲಯವನ್ನು ಹೊಂದಿದವು.

01016021a ತಸ್ಮಿಂಶ್ಚ ಭ್ರಾಮ್ಯಮಾಣೇಽದ್ರೌ ಸಂಘೃಷ್ಯಂತಃ ಪರಸ್ಪರಂ|

01016021c ನ್ಯಪತನ್ಪತಗೋಪೇತಾಃ ಪರ್ವತಾಗ್ರಾನ್ಮಹಾದ್ರುಮಾಃ||

ತಿರುಗುತ್ತಿರುವ ಪರ್ವತದ ಮೇಲಿರುವ ಮಹಾದ್ರುಮಗಳು[7] ಪರಸ್ಪರ ಸಂಘರ್ಷಿಸಿ ಗೂಡುಕಟ್ಟಿದ ಪಕ್ಷಿಗಳೊಂದಿಗೆ ಸಾಗರಕ್ಕೆ ಉರುಳಿದವು.

01016022a ತೇಷಾಂ ಸಂಘರ್ಷಜಶ್ಚಾಗ್ನಿರರ್ಚಿರ್ಭಿಃ ಪ್ರಜ್ವಲನ್ಮುಹುಃ|

01016022c ವಿದ್ಯುದ್ಭಿರಿವ ನೀಲಾಭ್ರಮಾವೃಣೋನ್ಮಂದರಂ ಗಿರಿಂ||

ಅವುಗಳ ಸಂಘರ್ಷದಿಂದಾಗಿ ಅನೇಕ ಬೆಂಕಿಗಳ ಭುಗಿಲೆದ್ದು ಆ ಮಂದರ ಗಿರಿಯು ಮಿಂಚಿನಿಂದೊಡಗೂಡಿದ ಕಪ್ಪು ಮೋಡದಂತೆ ಕಾಣುತ್ತಿತ್ತು.

01016023a ದದಾಹ ಕುಂಜರಾಂಶ್ಚೈವ ಸಿಂಹಾಂಶ್ಚೈವ ವಿನಿಃಸೃತಾನ್|

01016023c ವಿಗತಾಸೂನಿ ಸರ್ವಾಣಿ ಸತ್ತ್ವಾನಿ ವಿವಿಧಾನಿ ಚ||

ಅಲ್ಲಿ ವಾಸಿಸುತ್ತಿರುವ ವಿವಿಧ ಪಕ್ಷಿ-ಪ್ರಾಣಿಗಳು, ಆನೆಗಳು ಮತ್ತು ಸಿಂಹಗಳು ಎಲ್ಲವೂ ಅದರಲ್ಲಿ ಸುಟ್ಟು ಹೋದವು.

01016024a ತಮಗ್ನಿಮಮರಶ್ರೇಷ್ಠಃ ಪ್ರದಹಂತಂ ತತಸ್ತತಃ|

01016024c ವಾರಿಣಾ ಮೇಘಜೇನೇಂದ್ರಃ ಶಮಯಾಮಾಸ ಸರ್ವತಃ||

ಆಗ ಅಮರಶ್ರೇಷ್ಠ ಇಂದ್ರನು ಭಾರೀ ಮಳೆಯನ್ನು ಸುರಿಸಿ ಉರಿಯುತ್ತಿರುವ ಅಗ್ನಿಯನ್ನು ಶಾಂತಗೊಳಿಸಿದನು.

01016025a ತತೋ ನಾನಾವಿಧಾಸ್ತತ್ರ ಸುಸ್ರುವುಃ ಸಾಗರಾಂಭಸಿ|

01016025c ಮಹಾದ್ರುಮಾಣಾಂ ನಿರ್ಯಾಸಾ ಬಹವಶ್ಚೌಷಧೀರಸಾಃ||

ಆ ಮಹಾದ್ರುಮಗಳಲ್ಲಿರುವ ಅಂಟು, ಸ್ರಾವ ಮತ್ತು ಔಷಧಿ ರಸಗಳು ಸಾಗರದ ನೀರಿನೊಂದಿಗೆ ಕಲಸಿ ಕರಗಿದವು.

01016026a ತೇಷಾಮಮೃತವೀರ್ಯಾಣಾಂ ರಸಾನಾಂ ಪಯಸೈವ ಚ|

01016026c ಅಮರತ್ವಂ ಸುರಾ ಜಗ್ಮುಃ ಕಾಂಚನಸ್ಯ ಚ ನಿಃಸ್ರವಾತ್||

ಅಮೃತತ್ವವನ್ನು ಪಡೆದ ಆ ಮರಗಳ ಅಂಟು ಮತ್ತು ಕಾಂಚನದ ರಸವನ್ನು ಕುಡಿದು ಸುರರು ಅಮರತ್ವವನ್ನು ಪಡೆದರು.

01016027a ಅಥ ತಸ್ಯ ಸಮುದ್ರಸ್ಯ ತಜ್ಜಾತಮುದಕಂ ಪಯಃ|

01016027c ರಸೋತ್ತಮೈರ್ವಿಮಿಶ್ರಂ ಚ ತತಃ ಕ್ಷೀರಾದಭೂದ್ ಘೃತಂ||

ಹಾಲೇ ನೀರಾಗಿದ್ದ ಆ ಸಮುದ್ರದಿಂದ ಉತ್ತಮ ರಸಮಿಶ್ರಿತ ತುಪ್ಪವು ಉತ್ವನ್ನವಾಯಿತು.

01016028a ತತೋ ಬ್ರಹ್ಮಾಣಮಾಸೀನಂ ದೇವಾ ವರದಮಬ್ರುವನ್|

01016028c ಶ್ರಾಂತಾಃ ಸ್ಮ ಸುಭೃಶಂ ಬ್ರಹ್ಮನ್ನೋದ್ಭವತ್ಯಮೃತಂ ಚ ತತ್||

ಆಗ ದೇವತೆಗಳೆಲ್ಲರೂ ವರವನ್ನೀಯುವ ಬ್ರಹ್ಮನು ಉಪಸ್ಥಿತನಿದ್ದಲ್ಲಿಗೆ ಬಂದು ಹೇಳಿದರು: "ಬ್ರಹ್ಮ! ನಾವು ಅಯಾಸದಿಂದ ಬಳಲಿದ್ದೇವೆ. ಇನ್ನೂ ಅಮೃತವು ದೊರೆಯಲಿಲ್ಲ.

01016029a ಋತೇ ನಾರಾಯಣಂ ದೇವಂ ದೈತ್ಯಾ ನಾಗೋತ್ತಮಾಸ್ತಥಾ|

01016029c ಚಿರಾರಬ್ಧಮಿದಂ ಚಾಪಿ ಸಾಗರಸ್ಯಾಪಿ ಮಂಥನಂ||

ನಾರಾಯಣ ದೇವನನ್ನು ಬಿಟ್ಟು ಬೇರೆ ಯಾವ ದೈತ್ಯ-ನಾಗೋತ್ತಮರಿಂದಲೂ ಈ ಸಾಗರ ಮಂಥನವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ.”

01016030a ತತೋ ನಾರಾಯಣಂ ದೇವಂ ಬ್ರಹ್ಮಾ ವಚನಮಬ್ರವೀತ್|

01016030c ವಿಧತ್ಸ್ವೈಷಾಂ ಬಲಂ ವಿಷ್ಣೋ ಭವಾನತ್ರ ಪರಾಯಣಂ||

ಆಗ ಬ್ರಹ್ಮನು ನಾರಾಯಣ ದೇವನಲ್ಲಿ ಕೇಳಿಕೊಂಡನು: “ವಿಷ್ಣು! ನಿನ್ನ ಪರಾಯಣರಾದ ಇವರಿಗೆ ಬಲವನ್ನು ಕರುಣಿಸು.”

01016031 ವಿಷ್ಣುರುವಾಚ

01016031a ಬಲಂ ದದಾಮಿ ಸರ್ವೇಷಾಂ ಕರ್ಮೈತದ್ಯೇ ಸಮಾಸ್ಥಿತಾಃ|

01016031c ಕ್ಷೋಭ್ಯತಾಂ ಕಲಶಃ ಸರ್ವೈರ್ಮಂದರಃ ಪರಿವರ್ತ್ಯತಾಂ||

ವಿಷ್ಣುವು ಹೇಳಿದನು: “ಈ ಕರ್ಮದಲ್ಲಿ ತೊಡಗಿರುವ ಸರ್ವರಿಗೂ ಬಲವನ್ನು ಕೊಡುತ್ತಿದ್ದೇನೆ. ಮಂದರವನ್ನು ಮುಳುಗಿಸಿ ಸರ್ವರೂ ಕಡೆಯಲು ಪ್ರಾರಂಭಿಸಿ.””

01016032 ಸೂತ ಉವಾಚ

01016032a ನಾರಾಯಣವಚಃ ಶ್ರುತ್ವಾ ಬಲಿನಸ್ತೇ ಮಹೋದಧೇಃ|

01016032c ತತ್ಪಯಃ ಸಹಿತಾ ಭೂಯಶ್ಚಕ್ರಿರೇ ಭೃಶಮಾಕುಲಂ||

ಸೂತನು ಹೇಳಿದನು: “ನಾರಾಯಣನ ಮಾತುಗಳನ್ನು ಕೇಳಿ ಹೊಸ ಶಕ್ತಿಯನ್ನು ಪಡೆದ ಅವರು ಪರ್ವತವನ್ನು ಬಳಸಿ ಪುನಃ ಕಡೆಯಲು ಪ್ರಾರಂಭಿಸಿದರು.

01016033a ತತಃ ಶತಸಹಸ್ರಾಂಶುಃ ಸಮಾನ ಇವ ಸಾಗರಾತ್|

01016033c ಪ್ರಸನ್ನಭಾಃ ಸಮುತ್ಪನ್ನಃ ಸೋಮಃ ಶೀತಾಂಶುರುಜ್ಜ್ವಲಃ||

ನಂತರ, ಶತಸಹಸ್ರಾಂಶು ಸಮಾನ, ಪ್ರಸನ್ನ ಪ್ರಖರವನ್ನು ಹೊಂದಿದ, ಬೆಳಗುತ್ತಿದ್ದ ಶೀತಾಂಶು ಸೋಮ[8]ನು ಸಾಗರದಿಂದ ಉತ್ಪನ್ನನಾದನು.

01016034a ಶ್ರೀರನಂತರಮುತ್ಪನ್ನಾ ಘೃತಾತ್ ಪಾಂಡುರವಾಸಿನೀ|

01016034c ಸುರಾ ದೇವೀ ಸಮುತ್ಪನ್ನಾ ತುರಗಃ ಪಾಂಡುರಸ್ತಥಾ||

ನಂತರ ಘೃತದಿಂದ ಪಾಂಡುರವಾಸಿನೀ ಶ್ರೀ[9]ಯು ಉತ್ಪನ್ನಳಾದಳು. ನಂತರ ಸುರಾದೇವಿ ಮತ್ತು ಶ್ವೇತತುರಗ[10]ಗಳು ಉತ್ಪನ್ನರಾದರು.

01016035a ಕೌಸ್ತುಭಶ್ಚ ಮಣಿರ್ದಿವ್ಯ ಉತ್ಪನ್ನೋಽಮೃತಸಂಭವಃ|

01016035c ಮರೀಚಿವಿಕಚಃ ಶ್ರೀಮಾನ್ನಾರಾಯಣರೋಗತಃ||

ಶ್ರೀಮನ್ನಾರಾಯಣನ ಎದೆಯಮೇಲೆ ವಿರಾಜಿಸುವ ದಿವ್ಯ ಕೌಸ್ತುಭ ಮಣಿಯೂ ಕೂಡ ಅಮೃತದೊಂದಿಗೆ ಉತ್ಪನ್ನವಾಯಿತು.

[11]01016036a ಶ್ರೀಃ ಸುರಾ ಚೈವ ಸೋಮಶ್ಚ ತುರಗಶ್ಚ ಮನೋಜವಃ|

01016036c ಯತೋ ದೇವಾಸ್ತತೋ ಜಗ್ಮುರಾದಿತ್ಯಪಥಮಾಶ್ರಿತಾಃ||

ಆದಿತ್ಯನ ನಿರ್ದೇಶನದಂತೆ ಶ್ರೀ, ಸುರಾ, ಸೋಮ ಮತ್ತು ತುರಗಗಳು ಮನೋವೇಗದಲ್ಲಿ ದೇವತೆಗಳ ಬಳಿ ಸೇರಿದರು.

01016037a ಧನ್ವಂತರಿಸ್ತತೋ ದೇವೋ ವಪುಷ್ಮಾನುದತಿಷ್ಠತ|

01016037c ಶ್ವೇತಂ ಕಮಂಡಲುಂ ಬಿಭ್ರದಮೃತಂ ಯತ್ರ ತಿಷ್ಠತಿ||

ಅನಂತರ, ದೇವ ಧನ್ವಂತರಿಯು ಅಮೃತದಿಂದ ತುಂಬಿದ ಶ್ವೇತ ಕಮಂಡಲುವನ್ನು ಹಿಡಿದು ಎದ್ದು ನಿಂತನು.

01016038a ಏತದತ್ಯದ್ಭುತಂ ದೃಷ್ಟ್ವಾ ದಾನವಾನಾಂ ಸಮುತ್ಥಿತಃ|

01016038c ಅಮೃತಾರ್ಥೇ ಮಹಾನ್ನಾದೋ ಮಮೇದಮಿತಿ ಜಲ್ಪತಾಂ||

ಈ ಅತ್ಯದ್ಭುತವನ್ನು ನೋಡಿ ದಾನವರು ಅಮೃತಕ್ಕಾಗಿ “ಇದು ನಮ್ಮದು” ಎಂದು ಮಹಾ ನಾದಗೈದರು.

[12]01016039a ತತೋ ನಾರಾಯಣೋ ಮಾಯಾಮಾಸ್ಥಿತೋ ಮೋಹಿನೀಂ ಪ್ರಭುಃ|

01016039c ಸ್ತ್ರೀರೂಪಮದ್ಭುತಂ ಕೃತ್ವಾ ದಾನವಾನಭಿಸಂಶ್ರಿತಃ||

ಆಗ ಪ್ರಭು ನಾರಾಯಣನು ಮಾಯೆಯಿಂದ ಅದ್ಭುತ ಮೋಹಿನೀ ಸ್ತ್ರೀರೂಪವನ್ನು ಧರಿಸಿ ದಾನವರನ್ನು ಮರುಳುಮಾಡಿದನು.

01016040a ತತಸ್ತದಮೃತಂ ತಸ್ಯೈ ದದುಸ್ತೇ ಮೂಢಚೇತಸಃ|

01016040c ಸ್ತ್ರಿಯೈ ದಾನವದೈತೇಯಾಃ ಸರ್ವೇ ತದ್ಗತಮಾನಸಾಃ||

ಮೂಢಚೇತಸ ದಾನವ ದೆತ್ಯರೆಲ್ಲರೂ ಅವಳಲ್ಲಿಯೇ ಮನಸ್ಸನ್ನಿಟ್ಟುಕೊಂಡು, ಅಮೃತವನ್ನು ಆ ಸ್ತ್ರೀಯ ಕೈಗಳಲ್ಲಿಟ್ಟರು.”[13]

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಅಮೃತಮಂಥನೇ ಷೋಡಷೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಅಮೃತಮಂಥನದಲ್ಲಿ ಹದಿನಾರನೆಯ ಅಧ್ಯಾಯವು.

[1] ಮೇರು ಪರ್ವತದ ಐದು ಶಿಖರಗಳಲ್ಲಿ ಮಂದರಪರ್ವತವು ಪೂರ್ವದಿಕ್ಕಿನ ಶಿಖರ.

[2]ಯೋಜನೆಯು ವೇದಕಾಲದಲ್ಲಿ ಬಳಸುತ್ತಿದ್ದ ದೂರದ ಅಳತೆ. ಒಂದು ಯೋಜನೆಯು ೧೨-೧೫ ಕಿಲೋಮೀಟರುಗಳು ಎನ್ನಬಹುದು (೪ ಕೋಶಗಳು=೧ ಯೋಜನೆ; ೧ ಕೋಶ=೨-೩.೫ ಕಿಲೋ ಮೀಟರ್ ಗಳು).

[3]ಅನಂತನಿಗೆ ಶೇಷ, ಶೇಷನಾಗ ಮತ್ತು ಆದಿಶೇಷ ಎನ್ನುವ ಹೆಸರುಗಳೂ ಇವೆ. ಇವನು ಕದ್ರು ಮತ್ತು ಕಶ್ಯಪರ ಮಗ, ನಾಗ. ಅವನಿಗೆ ಸಹಸ್ರ ಹೆಡೆಗಳಿದ್ದು, ಅವನ ಪ್ರತಿ ಬಾಯಿಯಿಂದಲೂ ವಿಷ್ಣುವಿನ ನಾಮಸ್ಮರಣೆ ಮಾಡುತ್ತಾ ತನ್ನ ತಲೆಯ ಮೇಲೆ ಸೂರ್ಯ-ಗ್ರಹ-ನಕ್ಷತ್ರಗಳಿಂದ ಕೂಡಿದ ಭೂಮಂಡಲವನ್ನು ಹೊತ್ತಿರುವನು ಎಂದು ಪುರಾಣಗಳು ಹೇಳುತ್ತವೆ. ಆದಿಶೇಷನು ತನ್ನ ಸುರಳಿಯನ್ನು ಬಿಚ್ಚಿದಾಗ ಕಾಲವು ಮುಂದುವರೆದು ಸೃಷ್ಟಿಯಾಗುತ್ತದೆಯೆಂದೂ ಪುನಃ ಸುರಳಿಕೊಂಡಾಗ ಕಾಲ ಮತ್ತು ಸೃಷ್ಟಿಗಳು ಇಲ್ಲವಾಗುತ್ತದೆಯೆಂದೂ ಹೇಳುತ್ತಾರೆ. ವಿಷ್ಣುವು ತನ್ನ ಯೋಗನಿದ್ರೆಯಲ್ಲಿ ಶೇಷನ ಮೇಲೆ ಮಲಗಿರುತ್ತಾನೆ. ಶೇಷ ಅನಂತನ ಎರಡು ಅವತಾರಗಳು ಪ್ರಸಿದ್ಧವಾಗಿವೆ – ರಾಮನ ತಮ್ಮ ಲಕ್ಷ್ಮಣನಾಗಿ ಮತ್ತು ಕೃಷ್ಣನ ಅಣ್ಣ ಬಲರಾಮನಾಗಿ. 

[4]ಸಮುದ್ರರಾಜ

[5]ಪುರಾಣಗಳ ಪ್ರಕಾರ ಅಕೂಪಾರನು ವಿಷ್ಣುವಿನ ಅವತಾರ. ಈ ಆಮೆಯ ಮೇಲೆ ಇಡೀ ವಿಶ್ವವನ್ನೇ ಹೊತ್ತಿರುವ ದಿಗ್ಗಜಗಳು ಇವೆ.

[6] ಸಮುದ್ರ

[7] ದೊಡ್ದ ದೊಡ್ಡ ಮರಗಳು

[8] ಚಂದ್ರ. ಸಮುದ್ರಮಥನ ಕಾಲದಲ್ಲಿ ಹುಟ್ಟಿದ ಚಂದ್ರನನ್ನು ಶಿವನು ತನ್ನ ಶಿರದಲ್ಲಿ ಧರಿಸಿದನು [ವಿಷ್ಣುಪುರಾಣ, ಅಂಶ ೧, ಅಧ್ಯಾಯ ೯].

[9] ಶ್ರೀ ಅಥವಾ ಲಕ್ಷ್ಮಿಯು ಹುಟ್ಟಿದಾಗ ಋಷಿಗಳು “ಹಿರಣ್ಯವರ್ಣಾಂ ಹರಿಣೀಂ” ಎನ್ನುವ ಹದಿನೈದು ಮಂತ್ರಗಳಿಂದ ಕೂಡಿದ ಶ್ರೀ ಸೂಕ್ತದಿಂದ ಅವಳನ್ನು ಸ್ತುತಿಸಿದರು [ವಿಷ್ಣುಪುರಾಣ, ಅಂಶ ೧, ಅಧ್ಯಾಯ ೯]

[10] ಉಚ್ಛೈಶ್ರವ

[11] ಪಾರಿಜಾತಶ್ಚ ತತ್ರೈವ ಸುರಭಿಶ್ಚ ಮಹಾಮುನೇ| ಜಜ್ಞಾತೇ ತೌ ತದಾ ಬ್ರಹ್ಮನ್ಸರ್ವಕಾಮಫಲಪ್ರದೌ|| ಅರ್ಥಾತ್: ಮಹಾಮುನೇ! ಬ್ರಹ್ಮನ್! ಅಲ್ಲಿಯೇ ಸರ್ವಕಾಮಫಲಗಳನ್ನೂ ನೀಡುವ ಪಾರಿಜಾತ ಮತ್ತು ಸುರಭಿಗಳು ಹುಟ್ಟಿದವು ಎಂದು ದಕ್ಷಿಣಾತ್ಯ ಪಾಠ ಕುಂಭಕೋಣಪ್ರತಿಯಲ್ಲಿದೆ.

[12] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಶ್ವೇತೈರ್ದಂತೈಶ್ಚತುರ್ಭಿಸ್ತು ಮಹಾಕಾಯಸ್ತತಃ ಪರಂ| ಐರಾವತೋ ಮಹಾನಾಗೋಽಭವದ್ವಜ್ರಭೃತಾ ಧೃತಃ|| ಅತಿನಿರ್ಮಥನಾದೇವ ಕಾಲಕೂಟಸ್ತತಃ ಪರಃ| ಜಗದಾವೃತ್ಯ ಸಹಸಾ ಸಧೂಮೇಽಗ್ನಿರಿವ ಜ್ವಲನ್|| ತ್ರೈಲೋಕ್ಯಂ ಮೋಹಿತಂ ಯಸ್ಯ ಗಂಧಮಾಘ್ರಾಯ ತದ್ವಿಷಂ| ಪ್ರಾಗ್ರಸಲ್ಲೋಕರಕ್ಷಾರ್ಥಂ ಬ್ರಹ್ಮಣೋ ವಚನಾಶ್ಚಿವಃ|| ದಧಾರ ಭಗವಾನ್ಕಂಠೇ ಮಂತ್ರಮೂರ್ತಿರ್ಮಹೇಶ್ವರಃ| ತದಾಬ್ರಭೃತಿ ತೇವಂತು ನೀಲಕಂಠ ಇತಿ ಶೃತಃ|| ಏತತ್ತದದ್ಭುತಂ ದೃಷ್ಟ್ವಾ ನಿರಾಶಾ ದಾನವಾಃ ಸ್ಥಿತಾಃ| ಅಮೃತಾರ್ಥೇ ಚ ಲಕ್ಷ್ಮ್ಯರ್ಥೇ ಮಹಾಂತಂ ವೈರಮಾಶ್ರಿತಾಃ|| ಅರ್ಥಾತ್: ಅನಂತರ ನಾಲ್ಕು ಬಿಳಿಯ ದಂತಗಳಿದ್ದ, ಮಹಾಕಾಯ ಶ್ರೇಷ್ಠ ಐರಾವತವೆಂಬ ಆನೆಯು ಸಮುದ್ರದಿಂದ ಹುಟ್ಟಿತು. ಅದನ್ನು ವಜ್ರಪಾಣಿ ಇಂದ್ರನು ಪಡೆದುಕೊಂಡನು. ದೇವ-ದಾನವರು ಪುನಃ ಪುನಃ ಅತಿವೇಗದಿಂದ ಕಡೆಯುತ್ತಲೇ ಇದ್ದುದರಿಂದ ಕಾಲಕೂಟವೆಂಬ ವಿಷವು ಹುಟ್ಟಿತು. ಹುಟ್ಟಿದೊಡನೆಯೇ ಅದು ಹೊಗೆಯಿಂದ ಕೂಡಿದ ಅಗ್ನಿಯಂತೆ ಪ್ರಜ್ವಲಿಸುತ್ತಾ ಸರ್ವಜಗತ್ತನ್ನೂ ಕ್ಷಣಮಾತ್ರದಲ್ಲಿ ಆವರಿಸಿಬಿಟ್ಟಿತು. ಅದರ ವಾಸನೆಯನ್ನು ಆಘ್ರಾಣಿಸಿದುದರಿಂದಲೇ ಪ್ರಪಂಚದ ಎಲ್ಲ ಪ್ರಾಣಿಗಳೂ ಮೂರ್ಛೆಗೊಂಡವು. ಒಡನೆಯೇ ಬ್ರಹ್ಮನು ಲೋಕಕಲ್ಯಾಣಾರ್ಥವಾಗಿ ಕಾಲಕೂಟ ವಿಷವನ್ನು ಪ್ರಾಶನಮಾಡುವಂತೆ ಪರಶಿವನನ್ನು ಪ್ರಾರ್ಥಿಸಿದನು. ಅದರಂತೆ ಶಿವನು ವಿಷವನ್ನು ನುಂಗಿಬಿಟ್ಟನು. ಮಂತ್ರಮೂರ್ತಿ ಭಗವಾನ್ ಮಹೇಶ್ವರನು ಕಾಲಕೂಟವಿಷವನ್ನು ತನ್ನ ಕಂಠದಲ್ಲಿ ಧರಿಸಿಕೊಂಡನು. ಅದರಿಂದಲೇ ಅವನಿಗೆ ನೀಲಕಂಠನೆಂಬ ಹೆಸರಾಯಿತು. ಶಿವನು ಕುಡಿಯುವಾಗ ಚೆಲ್ಲಿದ ವಿಷವನ್ನು ನಾಗಗಳು ನೆಕ್ಕಿದುದರಿಂದ ಅವು ವಿಷಮಯವಾದವು [ವಿಷ್ಣುಪುರಾಣ, ಅಂಶ ೧, ಅಧ್ಯಾಯ ೯]. ಆ ಪರಮಾದ್ಭುತವನ್ನು ನೋಡಿ ದಾನವರು ನಿರಾಶೆಹೊಂದಿದರು. ಅಮೃತವನ್ನೂ ಲಕ್ಷ್ಮಿಯನ್ನೂ ಪಡೆದುಕೊಳ್ಳಬೇಕೆಂದು ಅವರು ತುಂಬಾ ಆಶಿಸಿದ್ದರು.

[13] ಇದರ ನಂತರ ದಾಕ್ಷಿಣಾತ್ಯ ಕುಂಭಕೋಣದ ಪ್ರತಿಯಲ್ಲಿ ಈ ಶ್ಲೋಕವಿದೆ: ಸಾ ತು ನಾರಾಯಣೀ ಮಾಯಾಧಾರಯಂತೀ ಕಮಂಡಲುಂ| ಆಸ್ಯಮಾನೇಷು ದೈತ್ಯೇಷು ಪಂಕ್ತ್ಯಾ ಚ ಪ್ರತಿ ದಾನವೈಃ| ದೇವಾನಪಾಯಯದ್ದೇವೀ ನ ದೈತ್ಯಾಂಸ್ತೇ ಚ ಚುಕ್ರುಷುಃ|| ಅರ್ಥಾತ್: ಮಾಯೆಯ ಆ ನಾರಾಯಣಿಯು ಕಮಂಡಲುವನ್ನು ಹಿಡಿದು ಪಂಕ್ತಿಗಳಲ್ಲಿ ಕುಳಿತಿದ್ದ ದೈತ್ಯ-ದಾನವ-ದೇವತೆಗಳಿಗೆ ಅಮೃತವನ್ನು ಬಡಿಸಲು ತೊಡಗಿದಳು. ಆದರೆ ದೈತ್ಯರಿಗೆ ವಂಚಿಸಿ ಅವಳು ದೇವತೆಗಳಿಗೆ ಮಾತ್ರ ಅಮೃತವನ್ನು ನೀಡಿದಳು. ಆಗ ದೈತ್ಯರು ಕೋಲಾಹಲವನ್ನುಂಟುಮಾಡಿದರು.

Leave a Reply

Your email address will not be published. Required fields are marked *