ಆದಿ ಪರ್ವ: ಆಸ್ತೀಕ ಪರ್ವ
೧೪
ಕಶ್ಯಪನ ಪತ್ನಿಯರಾದ ವಿನತೆ ಮತ್ತು ಕದ್ರುವಿಗೆ ಸಂತಾನಪ್ರಾಪ್ತಿ (೧-೧೦). ಹುಟ್ಟಿದ ಅರುಣನು ತಾಯಿ ಕದ್ರುವಿಗೆ ಶಾಪವಿತ್ತುದು (೧೧-೨೦). ಗರುಡನ ಜನನ (೨೧-೨೩).
01014001 ಶೌನಕ ಉವಾಚ
01014001a ಸೌತೇ ಕಥಯ ತಾಮೇತಾಂ ವಿಸ್ತರೇಣ ಕಥಾಂ ಪುನಃ|
01014001c ಆಸ್ತೀಕಸ್ಯ ಕವೇಃ ಸಾಧೋಃ ಶುಶ್ರೂಷಾ ಪರಮಾ ಹಿ ನಃ||
ಶೌನಕನು ಹೇಳಿದನು: “ಸೌತಿ! ನೀನು ಹೇಳಿದ ಸಾಧು ಕವಿ ಆಸ್ತೀಕನ ಪರಮ ಕಥೆಯನ್ನು ಪುನಃ ವಿಸ್ತಾರವಾಗಿ ಹೇಳು.
01014002a ಮಧುರಂ ಕಥ್ಯತೇ ಸೌಮ್ಯ ಶ್ಲಕ್ಷ್ಣಾಕ್ಷರಪದಂ ತ್ವಯಾ|
01014002c ಪ್ರೀಯಾಮಹೇ ಭೃಶಂ ತಾತ ಪಿತೇವೇದಂ ಪ್ರಭಾಷಸೇ||
ಸೌಮ್ಯ! ನೀನು ಸರಿಯಾದ ಅಕ್ಷರಪದಗಳಿಂದೊಡಗೂಡಿ ಮಧುರವಾಗಿ ಕಥೆಯನ್ನು ಹೇಳುತ್ತೀಯೆ. ತಾತ! ನಿನ್ನ ತಂದೆಯ ಹಾಗೇ ಇರುವ ನಿನ್ನ ಮಾತುಗಳಿಂದ ನಾವು ಸುಪ್ರೀತರಾಗಿದ್ದೇವೆ.
01014003a ಅಸ್ಮಚ್ಛುಶ್ರೂಷಣೇ ನಿತ್ಯಂ ಪಿತಾ ಹಿ ನಿರತಸ್ತವ|
01014003c ಆಚಷ್ಟೈತದ್ಯಥಾಖ್ಯಾನಂ ಪಿತಾ ತೇ ತ್ವಂ ತಥಾ ವದ||
ನಿನ್ನ ತಂದೆಯು ನಿತ್ಯವೂ ನಮ್ಮ ಶುಶ್ರೂಷಣೆಯಲ್ಲಿ ನಿರತನಾಗಿರುತ್ತಿದ್ದನು. ಆದುದರಿಂದ ನೀನು ಹೇಳುವ ಆಖ್ಯಾನವನ್ನು ನಿನ್ನ ತಂದೆಯು ನಿನಗೆ ಹೇಳಿದ ಹಾಗೆಯೇ ಹೇಳು.”
01014004 ಸೂತ ಉವಾಚ
01014004a ಆಯುಷ್ಯಮಿದಮಾಖ್ಯಾನಮಾಸ್ತೀಕಂ ಕಥಯಾಮಿ ತೇ|
01014004c ಯಥಾ ಶ್ರುತಂ ಕಥಯತಃ ಸಕಾಶಾದ್ವೈ ಪಿತುರ್ಮಯಾ||
ಸೂತನು ಹೇಳಿದನು: “ಆಯುಷ್ಮಂತ! ನನ್ನ ತಂದೆಯು ಕಥೆ ಹೇಳುವುದನ್ನು ಹೇಗೆ ಕೇಳಿದ್ದೆನೋ ಹಾಗೆಯೇ ಈ ಆಸ್ತೀಕನ ಆಖ್ಯಾನವನ್ನು ಹೇಳುತ್ತೇನೆ.
01014005a ಪುರಾ ದೇವಯುಗೇ ಬ್ರಹ್ಮನ್ಪ್ರಜಾಪತಿಸುತೇ ಶುಭೇ|
01014005c ಆಸ್ತಾಂ ಭಗಿನ್ಯೌ ರೂಪೇಣ ಸಮುಪೇತೇಽದ್ಭುತೇಽನಘೇ||
ಬ್ರಾಹ್ಮಣ! ಹಿಂದೆ ದೇವಯುಗ[1]ದಲ್ಲಿ ಪ್ರಜಾಪತಿ ದಕ್ಷನಿಗೆ ಇಬ್ಬರು ಶುಭ ಸುತೆಯರಿದ್ದರು.
01014006a ತೇ ಭಾರ್ಯೇ ಕಶ್ಯಪಸ್ಯಾಸ್ತಾಂ ಕದ್ರೂಶ್ಚ ವಿನತಾ ಚ ಹ|
01014006c ಪ್ರಾದಾತ್ತಾಭ್ಯಾಂ ವರಂ ಪ್ರೀತಃ ಪ್ರಜಾಪತಿಸಮಃ ಪತಿಃ|
01014006e ಕಶ್ಯಪೋ ಧರ್ಮಪತ್ನೀಭ್ಯಾಂ ಮುದಾ ಪರಮಯಾ ಯುತಃ||
ಈ ತಂಗಿಯರಿಬ್ಬರೂ ಅದ್ಭುತ ಅನಘ ರೂಪವನ್ನು ಪಡೆದಿದ್ದರು. ಅವರು ಕಶ್ಯಪ[2]ನ ಪತ್ನಿಯರು: ಕದ್ರು ಮತ್ತು ವಿನತ. ಧರ್ಮಪತ್ನಿಗಳಿಂದ ಪರಮ ಸುಖವನ್ನು ಹೊಂದಿದ ಪ್ರಜಾಪತಿಸಮ ಪತಿ ಕಶ್ಯಪನು ಅವರೀರ್ವರಿಗೆ ಪ್ರೀತಿಯ ವರಗಳನ್ನಿತ್ತನು.
01014007a ವರಾತಿಸರ್ಗಂ ಶ್ರುತ್ವೈವ ಕಶ್ಯಪಾದುತ್ತಮಂ ಚ ತೇ|
01014007c ಹರ್ಷಾದಪ್ರತಿಮಾಂ ಪ್ರೀತಿಂ ಪ್ರಾಪತುಃ ಸ್ಮ ವರಸ್ತ್ರಿಯೌ||
ಕಶ್ಯಪನು ಉತ್ತಮ ವರಗಳನ್ನು ನೀಡಲಿದ್ದಾನೆ ಎಂದು ಕೇಳಿ ಆ ವರಸ್ತ್ರೀಯರಿಬ್ಬರಿಗೂ ಅಪ್ರತಿಮ ಹರ್ಷ ಮತ್ತು ಪ್ರೀತಿಯುಂಟಾಯಿತು.
01014008a ವವ್ರೇ ಕದ್ರೂಃ ಸುತಾನ್ನಾಗಾನ್ಸಹಸ್ರಂ ತುಲ್ಯತೇಜಸಃ|
01014008c ದ್ವೌ ಪುತ್ರೌ ವಿನತಾ ವವ್ರೇ ಕದ್ರೂಪುತ್ರಾಧಿಕೌ ಬಲೇ|
01014008e ಓಜಸಾ ತೇಜಸಾ ಚೈವ ವಿಕ್ರಮೇಣಾಧಿಕೌ ಸುತೌ||
ಕದ್ರುವು ತೇಜಸ್ಸಿನಲ್ಲಿ ಸರಿಸಮರಾದ ಸಹಸ್ರ ನಾಗಗಳನ್ನು ತನ್ನ ಪುತ್ರರನ್ನಾಗಿ ಕೇಳಿದಳು. ವಿನತೆಯು ಕದ್ರುವಿನ ಪುತ್ರರಿಗಿಂಥ ಅಧಿಕ ಬಲಾನ್ವಿತ, ಓಜಸ್ಸು ತೇಜಸ್ಸು ಮತ್ತು ವಿಕ್ರಮಗಳಲ್ಲಿ ಅಧಿಕರಾದ ಇಬ್ಬರು ಪುತ್ರರನ್ನು ಕೇಳಿಕೊಂಡಳು.
01014009a ತಸ್ಯೈ ಭರ್ತಾ ವರಂ ಪ್ರಾದಾದಧ್ಯರ್ಧಂ ಪುತ್ರಮೀಪ್ಸಿತಂ|
01014009c ಏವಮಸ್ತ್ವಿತಿ ತಂ ಚಾಹ ಕಶ್ಯಪಂ ವಿನತಾ ತದಾ||
ಅವರ ಪತಿ ಕಶ್ಯಪನು ಕದ್ರು ಮತ್ತು ವಿನತೆಯರಿಗೆ “ಹಾಗೆಯೇ ಆಗಲಿ” ಎಂದು ಬೇಡಿದ ಅಸಂಖ್ಯ ಪುತ್ರರ ವರವನ್ನಿತ್ತನು.
01014010a ಕೃತಕೃತ್ಯಾ ತು ವಿನತಾ ಲಬ್ಧ್ವಾ ವೀರ್ಯಾಧಿಕೌ ಸುತೌ|
01014010c ಕದ್ರೂಶ್ಚ ಲಬ್ಧ್ವಾ ಪುತ್ರಾಣಾಂ ಸಹಸ್ರಂ ತುಲ್ಯತೇಜಸಾಂ||
ಅಧಿಕವೀರ್ಯ ಸುತರನ್ನು ಪಡೆದ ವಿನತೆ ಮತ್ತು ಸರಿಸಮ ತೇಜೋವಂತ ಸಹಸ್ರ ಪುತ್ರರನ್ನು ಪಡೆದ ಕದ್ರು ಇಬ್ಬರೂ ಕೃತಕೃತ್ಯರಾದರು.
01014011a ಧಾರ್ಯೌ ಪ್ರಯತ್ನತೋ ಗರ್ಭಾವಿತ್ಯುಕ್ತ್ವಾ ಸ ಮಹಾತಪಾಃ|
01014011c ತೇ ಭಾರ್ಯೇ ವರಸಂಹೃಷ್ಠೇ ಕಶ್ಯಪೋ ವನಮಾವಿಶತ್||
“ಗರ್ಭವನ್ನು ಜಾಗೃತೆಯಲ್ಲಿ ಧರಿಸಿ” ಎಂದು ಹೇಳಿ, ಭಾರ್ಯೆಯರನ್ನು ವರಗಳಿಂದ ಸಂತುಷ್ಟಗೊಳಿಸಿ ಆ ಮಹಾತಪ ಕಶ್ಯಪನು ವನವನ್ನು ಸೇರಿದನು.
01014012a ಕಾಲೇನ ಮಹತಾ ಕದ್ರೂರಂಡಾನಾಂ ದಶತೀರ್ದಶ|
01014012c ಜನಯಾಮಾಸ ವಿಪ್ರೇಂದ್ರ ದ್ವೇ ಅಂಡೇ ವಿನತಾ ತದಾ||
ವಿಪ್ರೇಂದ್ರ! ಬಹಳ ಕಾಲದ ನಂತರ ಕದ್ರುವು ಒಂದು ಸಾವಿರ ಅಂಡಗಳಿಗೆ ಮತ್ತು ವಿನತೆಯು ಎರಡು ಅಂಡಗಳಿಗೆ ಜನ್ಮವಿತ್ತರು.
01014013a ತಯೋರಂಡಾನಿ ನಿದಧುಃ ಪ್ರಹೃಷ್ಟಾಃ ಪರಿಚಾರಿಕಾಃ|
01014013c ಸೋಪಸ್ವೇದೇಷು ಭಾಂಡೇಷು ಪಂಚ ವರ್ಷಶತಾನಿ ಚ||
ಸಂತೋಷಗೊಂಡ ಅವರ ಪರಿಚಾರಿಕೆಯರು ಆ ಅಂಡಗಳನ್ನು ಬೇರೆಬೇರೆಯಾದ ಬಿಸಿಬಿಸಿ ಪಾತ್ರೆಗಳಲ್ಲಿ ಇಟ್ಟರು. ಹೀಗೆ ಐದುನೂರು ವರ್ಷಗಳು[3] ಕಳೆದವು.
01014014a ತತಃ ಪಂಚಶತೇ ಕಾಲೇ ಕದ್ರೂಪುತ್ರಾ ವಿನಿಃಸೃತಾಃ|
01014014c ಅಂಡಾಭ್ಯಾಂ ವಿನತಾಯಾಸ್ತು ಮಿಥುನಂ ನ ವ್ಯದೃಶ್ಯತ||
ಐದುನೂರು ವರ್ಷಗಳ ನಂತರ ಕದ್ರುವಿನ ಮಕ್ಕಳು ಅಂಡದಿಂದ ಹರಿದುಬಂದರು. ಆದರೆ ವಿನತೆಯ ಎರಡು ಅಂಡಗಳು ಒಡೆಯಲೇ ಇಲ್ಲ.
01014015a ತತಃ ಪುತ್ರಾರ್ಥಿಣೀ ದೇವೀ ವ್ರೀಢಿತಾ ಸಾ ತಪಸ್ವಿನೀ|
01014015c ಅಂಡಂ ಬಿಭೇದ ವಿನತಾ ತತ್ರ ಪುತ್ರಮದೃಕ್ಷತ||
ಆಗ ನಾಚಿಕೊಂಡ ಪುತ್ರಾರ್ಥಿ ತಪಸ್ವಿನೀ ವಿನತಳು ತನ್ನ ಒಂದು ಅಂಡವನ್ನು ಒಡೆದಳು ಮತ್ತು ಅದರಲ್ಲಿ ಅವಳ ಪುತ್ರನನ್ನು ಕಂಡಳು.
01014016a ಪೂರ್ವಾರ್ಧಕಾಯಸಂಪನ್ನಮಿತರೇಣಾಪ್ರಕಾಶತಾ|
01014016c ಸ ಪುತ್ರೋ ರೋಷಸಂಪನ್ನಃ ಶಶಾಪೈನಾಮಿತಿ ಶ್ರುತಿಃ||
ಮೇಲಿನ ದೇಹ ಮಾತ್ರ ಬೆಳೆದು ಕೆಳಗಿನ ಭಾಗ ಇನ್ನೂ ಬೆಳೆಯದೇ ಇದ್ದ ಆ ಪುತ್ರನು ರೋಷಸಂಪನ್ನನಾಗಿ ತಾಯಿಗೆ ಈ ರೀತಿ ಶಾಪವನ್ನಿತ್ತನೆಂದು ಕೇಳಿದ್ದೇವೆ:
01014017a ಯೋಽಹಮೇವಂ ಕೃತೋ ಮಾತಸ್ತ್ವಯಾ ಲೋಭಪರೀತಯಾ|
01014017c ಶರೀರೇಣಾಸಮಗ್ರೋಽದ್ಯ ತಸ್ಮಾದ್ದಾಸೀ ಭವಿಷ್ಯಸಿ||
“ಮಾತಾ! ದುರಾಸೆಯಿಂದ ಅಸಮ ಶರೀರನಾದ ನನ್ನನ್ನು ಒಡೆದು ಹೊರತಂದೆ. ಆದುದರಿಂದ ನೀನು ದಾಸಿಯಾಗುತ್ತೀಯೆ.
01014018a ಪಂಚ ವರ್ಷಶತಾನ್ಯಸ್ಯಾ ಯಯಾ ವಿಸ್ಪರ್ಧಸೇ ಸಹ|
01014018c ಏಷ ಚ ತ್ವಾಂ ಸುತೋ ಮಾತರ್ದಾಸ್ಯತ್ವಾನ್ ಮೋಕ್ಷಯಿಷ್ಯತಿ||
ಮಾತಾ! ಇನ್ನು ಐದು ಸಾವಿರ ವರ್ಷಗಳು ತಾಳ್ಮೆಯಿಂದ ಈ ಇನ್ನೊಂದು ಅಂಡವನ್ನು ಒಡೆಯದೇ ಕಾದರೆ ಅದರಿಂದ ಹುಟ್ಟುವ ನಿನ್ನ ಸುತನು ನಿನ್ನನ್ನು ದಾಸತ್ವದಿಂದ ಮುಕ್ತಗೊಳಿಸುತ್ತಾನೆ.
01014019a ಯದ್ಯೇನಮಪಿ ಮಾತಸ್ತ್ವಂ ಮಾಮಿವಾಂಡವಿಭೇದನಾತ್|
01014019c ನ ಕರಿಷ್ಯಸ್ಯದೇಹಂ ವಾ ವ್ಯಂಗಂ ವಾಪಿ ತಪಸ್ವಿನಂ||
ಮಾತಾ! ನೀನು ಈ ಅಂಡವನ್ನು ಒಡೆದು ತಪಸ್ವಿಯ ಇನ್ನೊಬ್ಬ ಪುತ್ರನಾದ ಇವನನ್ನು ನನ್ನ ಹಾಗೆ ವ್ಯಂಗ ದೇಹವುಳ್ಳವನನ್ನಾಗಿ ಮಾಡದಿದ್ದರೆ ಮಾತ್ರ ಹೀಗಾಗಲು ಸಾಧ್ಯ.
01014020a ಪ್ರತಿಪಾಲಯಿತವ್ಯಸ್ತೇ ಜನ್ಮಕಾಲೋಽಸ್ಯ ಧೀರಯಾ|
01014020c ವಿಶಿಷ್ಟಬಲಮೀಪ್ಸಂತ್ಯಾ ಪಂಚವರ್ಷಶತಾತ್ಪರಃ||
ಅವನು ವಿಶಿಷ್ಟ ಬಲಶಾಲಿಯಾಗಿರಬೇಕೆಂದು ಬಯಸುವೆಯಾದರೆ ನೀನು ಐದುನೂರು ವರ್ಷಗಳ ಪರ್ಯಂತ ಅವನನ್ನು ವಿಶೇಷವಾಗಿ ಪ್ರತಿಪಾಲಿಸಿ ಕಾಯಬೇಕು[4]. "
01014021a ಏವಂ ಶಪ್ತ್ವಾ ತತಃ ಪುತ್ರೋ ವಿನತಾಮಂತರಿಕ್ಷಗಃ|
01014021c ಅರುಣೋ ದೃಶ್ಯತೇ ಬ್ರಹ್ಮನ್ಪ್ರಭಾತಸಮಯೇ ಸದಾ||[5]
ಈ ರೀತಿ ಶಾಪವನ್ನಿತ್ತು ವಿನತೆಯ ಪುತ್ರನು ಅಂತರಿಕ್ಷವನ್ನೇರಿದನು. ಬ್ರಾಹ್ಮಣ! ಸದಾ ಪ್ರಭಾತಸಮಯದಲ್ಲಿ ಕಾಣುವ ಅರುಣನೇ ಅವನು.
01014022a ಗರುಡೋಽಪಿ ಯಥಾಕಾಲಂ ಜಜ್ಞೇ ಪನ್ನಗಸೂದನಃ|
01014022c ಸ ಜಾತಮಾತ್ರೋ ವಿನತಾಂ ಪರಿತ್ಯಜ್ಯ ಖಮಾವಿಶತ್||
01014023a ಆದಾಸ್ಯನ್ನಾತ್ಮನೋ ಭೋಜ್ಯಮನ್ನಂ ವಿಹಿತಮಸ್ಯ ಯತ್|
01014023c ವಿಧಾತ್ರಾ ಭೃಗುಶಾರ್ದೂಲ ಕ್ಷುಧಿತಸ್ಯ ಬುಭುಕ್ಷತಃ||
ಭೃಗುಶಾರ್ದೂಲ! ಯಥಾಕಾಲದಲ್ಲಿ ಪನ್ನಗಸೂದನ[6] ಗರುಡನೂ ಹುಟ್ಟಿದನು. ಹುಟ್ಟಿದಾಕ್ಷಣ ಅವನು ವಿನತೆಯನ್ನು ಬಿಟ್ಟು ತನ್ನ ರೆಕ್ಕೆಗಳನ್ನೇರಿ ವಿಧಾತನು ಅವನಿಗೆ ನಿಯಮಿಸಿದ ಅಹಾರವನ್ನು ಹುಡುಕುತ್ತಾ ಹೊರಟನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸರ್ಪಾದೀನಾಮುತ್ಪನ್ನೋ ನಾಮ ಚತುರ್ದಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸರ್ಪಾದೀನಾಮುತ್ಪನ್ನ ಎಂಬ ಹದಿನಾಲ್ಕನೆಯ ಅಧ್ಯಾಯವು.
[1] ಕೃತಯುಗದ ಇನ್ನೊಂದು ಹೆಸರು ದೇವಯುಗ. ಒಟ್ಟು ನಾಲ್ಕು ಯುಗಗಳು – ಕೃತ (ಸತ್ಯ ಅಥವಾ ದೇವ) ಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿ ಯುಗ. ಕೃತಯುಗದ ಅವಧಿಯು ೪,೮೦೦ ದೇವವರ್ಷಗಳು ಅಥವಾ ೧೭,೨೮,೦೦೦ ಮನುಷ್ಯವರ್ಷಗಳು. ಇದರಲ್ಲಿ ತಲಾ ೪೦೦ ದೇವವರ್ಷಗಳ ಎರಡು ಸಂಧ್ಯೆಗಳೂ ಸೇರಿವೆ. ತ್ರೇತಾಯುಗದ ಅವಧಿಯು ೩,೬೦೦ ದೇವವರ್ಷಗಳು ಅಥವಾ ೧೨,೯೬,೦೦೦ ಮನುಷ್ಯವರ್ಷಗಳು. ಇದರಲ್ಲಿ ತಲಾ ೩೦೦ ದೇವವರ್ಷಗಳ ಎರಡು ಸಂಧ್ಯೆಗಳೂ ಸೇರಿವೆ. ದ್ವಾಪರಯುಗದ ಅವಧಿಯು ೨,೪೦೦ ದೇವವರ್ಷಗಳು ಅಥವಾ ೮,೬೪,೦೦೦ ಮನುಷ್ಯವರ್ಷಗಳು. ಇದರಲ್ಲಿ ತಲಾ ೨೦೦ ದೇವವರ್ಷಗಳ ಎರಡು ಸಂಧ್ಯೆಗಳೂ ಸೇರಿವೆ. ಕಲಿಯುಗದ ಅವಧಿಯು ೧,೨೦೦ ದೇವವರ್ಷಗಳು ಅಥವಾ ೪,೩೨,೦೦೦ ಮನುಷ್ಯವರ್ಷಗಳು. ಇದರಲ್ಲಿ ತಲಾ ೧೦೦ ದೇವವರ್ಷಗಳ ಎರಡು ಸಂಧ್ಯೆಗಳೂ ಸೇರಿವೆ. ಅವುಗಳ ಸಂಧ್ಯೆಗಳೊಡನೆ ಈ ನಾಲ್ಕು ಯುಗಗಳು ಸೇರಿ ಒಂದು ಮಹಾಯುಗವೆನಿಸುತ್ತದೆ (೧೨,೦೦೦ ದೇವವರ್ಷಗಳು ಅಥವಾ ೪೩,೨೦,೦೦೦ ಮನುಷ್ಯವರ್ಷಗಳು). ಅಂಥಹ ೧,೦೦೦ ಮಹಾಯುಗಗಳು ಸೇರಿ ಒಂದು ಕಲ್ಪ – ಬ್ರಹ್ಮನ ಹಗಲು ಅಥವಾ ರಾತ್ರಿ – ಎನಿಸುತ್ತದೆ. [ವಿಷ್ಣುಪುರಾಣ]
[2] ಮಹರ್ಷಿ ಕಶ್ಯಪನು ಬ್ರಹ್ಮನ ಮಾನಸಪುತ್ರ ಮತ್ತು ಈ ವೈವಸ್ವತ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬನು (ಸಪ್ತರ್ಷಿಗಳಲ್ಲಿ ಇತರರು ಅತ್ರಿ, ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ ಮತ್ತು ಗೌತಮ). ಮಹಾಭಾರತದಲ್ಲಿ ಕಶ್ಯಪನನ್ನು ಪ್ರಜಾಪತಿಯೆಂದೂ ಸಂಬೋಧಿಸಲಾಗಿದೆ. ಆಯುರ್ವೇದದ ಒಂದು ಮುಖ್ಯ ಗ್ರಂಥ ಕಶ್ಯಪ ಸಂಹಿತ ಅಥವಾ ಜೀವಕೀಯ ತಂತ್ರವು ಕಶ್ಯಪನ ಕೃತಿ. ದಕ್ಷನ ಹದಿಮೂರು ಕನ್ಯೆಯರು (ಅದಿತಿ – ಆದಿತ್ಯಾದಿ ದೇವತೆಗಳ ತಾಯಿ, ದಿತಿ-ದೈತ್ಯರ ತಾಯಿ, ಕದ್ರು-ನಾಗಗಳ ತಾಯಿ, ದನು-ದಾನವರ ತಾಯಿ, ಅರಿಷ್ಠಾ-ಗಂಧರ್ವರ ತಾಯಿ, ಸುರಸ, ಸುರಭಿ-ರುದ್ರರ ತಾಯಿ, ವಿನತ-ಅರುಣ ಮತ್ತು ಗರುಡರ ತಾಯಿ, ತಾಮ್ರ, ಕ್ರೋಧವಶಾ-ಪಿಶಾಚಿಗಳ ತಾಯಿ, ಇರಾ, ವಿಶ್ವಾ ಮತ್ತು ಮುನೀ) ಕಶ್ಯಪನ ಪತ್ನಿಯರು. ಕಶ್ಯಪನ ಇತರ ಪತ್ನಿಯರು ಶ್ಯೇನೀ (ಜಟಾಯುವಿನ ತಾಯಿ), ಉನ್ಮತಿ (ಸಂಪಾತಿಯ ತಾಯಿ), ಮತ್ತು ರೋಹಿಣಿ (ಗೋವುಗಳ ತಾಯಿ). ಪರಶುರಾಮನು ಗೆದ್ದ ಭೂಮಿಯನ್ನು ಕಶ್ಯಪನಿಗೆ ಧಾರೆಯೆರೆದಿತ್ತುದರಿಂದ ಭೂಮಿಗೆ ಕಾಶ್ಯಪೇಯ ಎನ್ನುವ ಹೆಸರು ಬಂದಿತು. ಕಶ್ಯಪನಿಂದಲೇ ಕಾಶ್ಮೀರವೆಂಬ ಹೆಸರಾಯಿತು.
[3] ಈ ರೀತಿಯ ಕಾಲಾವಧಿಗಳು ಪುರಾಣಗಳಲ್ಲಿ ಬಹಳಷ್ಟು ಬಾರಿ ಹೇಳಲ್ಪಟ್ಟಿವೆ. ಇವೇ ಪುರಾಣಗಳ ಪ್ರಕಾರ ಲೋಕದ ಬೇರೆ ಬೇರೆ ಜೀವಿಗಳಿಗೆ ಬೇರೆ ಬೇರೆ ಕಾಲ ಪರಿಮಾಣಗಳ ಅಳತೆಯಿದೆ. ಉದಾಹರಣೆಗೆ ಒಂದು ಮಾನವ ವರ್ಷವು ಪಿತೃಗಳಿಗೆ ಒಂದು ದಿನವೆಂದೂ, ಮಾನವರ ೩೬೦ ವರ್ಷಗಳು ಒಂದು ದೇವವರ್ಷವೆಂದೂ, ೩,೦೩೦ ಮನುಷ್ಯ ವರ್ಷಗಳು ಸಪ್ತರ್ಷಿಗಳ ಒಂದು ವರ್ಷವೆಂದೂ, ೯,೦೯೦ ಮನುಷ್ಯ ವರ್ಷಗಳು ಧೃವನ ಒಂದು ವರ್ಷವೆಂದೂ ಹೇಳಲ್ಪಟ್ಟಿದೆ.
[4]ಕದ್ರುವು ತನಗಿಂತ ಮೊದಲೇ ತಾಯಿಯಾದಳೆಂಬ ಅಸೂಯೆ ಮತ್ತು ತನ್ನ ಮೊಟ್ಟೆಗಳು ತಾವಾಗಿಯೇ ಒಡೆಯುವವರೆಗೆ ತಾಳ್ಮೆಯಿಂದ ಇಲ್ಲದೇ ಇರುವುದು ಇವೆರಡೂ ವಿನತೆಯನ್ನು ತನ್ನ ಮಗನಿಂದಲೇ ಶಾಪಗ್ರಸ್ಥನಾಗುವಂತೆ ಮಾಡಿದವು. ಈ ರೀತಿಯ ಅಸೂಯೆ ಮತ್ತು ತಾಳ್ಮೆಯನ್ನು ಕಳೆದುಕೊಂಡು ಗಾಂಧಾರಿಯೂ ಕೂಡ ತನ್ನ ಬಸಿರನ್ನು, ಹೆರಿಗೆಯಾಗುವ ಮೊದಲೇ, ಒಡೆದಳು.
[5]ಆದಿತ್ಯರಥಮಧ್ಯಾಸ್ತೇ ಸಾರಥ್ಯಂ ಸಮಕಲ್ಪಯತ್| ಅರ್ಥಾತ್ ಅರುಣನು ಆದಿತ್ಯನ ರಥದಲ್ಲಿ ಕುಳಿತು ಅವನ ಸಾರಥ್ಯವನ್ನು ವಹಿಸಿಕೊಂಡನು ಎನ್ನುವ ಈ ಶ್ಲೋಕವು ನೀಲಕಂಠೀಯದಲ್ಲಿದೆ.
[6]ಸರ್ಪಗಳನ್ನು ಕೊಲ್ಲುವವನು. ಗರುಡನಿಗೆ ಸರ್ಪಗಳೇ ಆಹಾರವೆಂದು ಬ್ರಹ್ಮನ ವರ.