Adi Parva: Chapter 8

ಆದಿ ಪರ್ವ: ಪೌಲೋಮ ಪರ್ವ

ರುರುವಿನ ಕಥೆ ಮತ್ತು ಪ್ರಮದ್ವತಿಯ ಜನನ ವೃತ್ತಾಂತ (೧-೧೦). ರುರುವು ಪ್ರಮದ್ವರೆಯನ್ನು ಪ್ರೀತಿಸಿ ವಿವಾಹಕ್ಕೆ ಸಿದ್ಧತೆಗಳನ್ನು ಮಾಡುತ್ತಿರಲು ಪ್ರಮದ್ವರೆಯ ಮರಣ (೧೦-೨೦).

 01008001 ಸೂತ ಉವಾಚ|

01008001a ಸ ಚಾಪಿ ಚ್ಯವನೋ ಬ್ರಹ್ಮನ್ಭಾರ್ಗವೋಽಜನಯತ್ಸುತಂ|

01008001c ಸುಕನ್ಯಾಯಾಂ ಮಹಾತ್ಮಾನಂ ಪ್ರಮತಿಂ ದೀಪ್ತತೇಜಸಂ||

ಸೂತನು ಹೇಳಿದನು: “ಬ್ರಾಹ್ಮಣ! ಭಾರ್ಗವ ಚ್ಯವನನು ಸುಕನ್ಯೆಯಿಂದ ಮಹಾತ್ಮ ದೀಪ್ತತೇಜಸ ಪ್ರಮತಿ ಎನ್ನುವ ಸುತನನ್ನು ಪಡೆದನು.

01008002a ಪ್ರಮತಿಸ್ತು ರುರುಂ ನಾಮ ಘೃತಾಚ್ಯಾಂ ಸಮಜೀಜನತ್|

01008002c ರುರುಃ ಪ್ರಮದ್ವರಾಯಾಂ ತು ಶುನಕಂ ಸಮಜೀಜನತ್||

ಪ್ರಮತಿಯು ಘೃತಾಚಿಯಲ್ಲಿ ರುರು ಎಂಬ ಹೆಸರಿನ ಮಗನನ್ನು ಪಡೆದನು. ರುರುವು ಪ್ರಮದ್ವರೆಯಲ್ಲಿ ಶುನಕನನ್ನು ಪಡೆದನು.

[1]01008003a ತಸ್ಯ ಬ್ರಹ್ಮನ್ರುರೋಃ ಸರ್ವಂ ಚರಿತಂ ಭೂರಿತೇಜಸಃ|

01008003c ವಿಸ್ತರೇಣ ಪ್ರವಕ್ಷ್ಯಾಮಿ ತತ್ಶ್ರುಣು ತ್ವಮಶೇಷತಃ||

ಬ್ರಾಹ್ಮಣ! ಈಗ ನಾನು ಆ ಭೂರಿತೇಜಸ ರುರುವಿನ ಸರ್ವ ಚರಿತವನ್ನು ವಿಸ್ತಾರವಾಗಿ ಹೇಳುತ್ತೇನೆ. ಏನನ್ನೂ ಬಿಡದೇ ಕೇಳು.

01008004a ಋಷಿರಾಸೀನ್ಮಹಾನ್ಪೂರ್ವಂ ತಪೋವಿದ್ಯಾಸಮನ್ವಿತಃ|

01008004c ಸ್ಥೂಲಕೇಶ ಇತಿ ಖ್ಯಾತಃ ಸರ್ವಭೂತಹಿತೇ ರತಃ||

ಹಿಂದೆ ಮಹಾ ತಪೋವಿದ್ಯಾಸಮನ್ವಿತ, ಸರ್ವ ಭೂತಹಿತರತ ಸ್ಥೂಲಕೇಶ ಎಂಬ ಖ್ಯಾತ ಋಷಿಯೋರ್ವನಿದ್ದನು.

01008005a ಏತಸ್ಮಿನ್ನೇವ ಕಾಲೇ ತು ಮೇನಕಾಯಾಂ ಪ್ರಜಜ್ಞಿವಾನ್|

01008005c ಗಂಧರ್ವರಾಜೋ ವಿಪ್ರರ್ಷೇ ವಿಶ್ವಾವಸುರಿತಿ ಶ್ರುತಃ||

ವಿಪ್ರರ್ಷಿ! ಅದೇ ಸಮಯದಲ್ಲಿ ಮೇನಕೆಯು ಗಂಧರ್ವರಾಜ ವಿಶ್ವಾವಸುವಿನಿಂದ ಗರ್ಭವತಿಯಾಗಿದ್ದಳು ಎಂದು ಕೇಳಿದ್ದೇವೆ.

01008006a ಅಥಾಪ್ಸರಾ ಮೇನಕಾ ಸಾ ತಂ ಗರ್ಭಂ ಭೃಗುನಂದನ|

01008006c ಉತ್ಸಸರ್ಜ ಯಥಾಕಾಲಂ ಸ್ಥೂಲಕೇಶಾಶ್ರಮಂ ಪ್ರತಿ||

ಭೃಗುನಂದನ! ಸಮಯಬಂದಾಗ ಅಪ್ಸರೆ ಮೇನಕೆಯು ಆ ಗರ್ಭವನ್ನು ಸ್ಥೂಲಕೇಶನ ಆಶ್ರಮದ ಬಳಿ ಬಿಟ್ಟಳು.

01008007a ಉತ್ಸೃಜ್ಯ ಚೈವ ತಂ ಗರ್ಭಂ ನದ್ಯಾಸ್ತೀರೇ ಜಗಾಮ ಹ|

01008007c ಕನ್ಯಾಮಮರಗರ್ಭಾಭಾಂ ಜ್ವಲಂತೀಮಿವ ಚ ಶ್ರಿಯಾ||

ರೂಪದಲ್ಲಿ ಅಮರರ ಮಗುವಿನಂತೆ ಪ್ರಜ್ವಲಿಸುತ್ತಿದ್ದ ಆ ಕನ್ಯೆಯನ್ನು ನದೀತೀರದಲ್ಲಿ ಬಿಟ್ಟು ಅವಳು ಹೊರಟು ಹೋದಳು.

01008008a ತಾಂ ದದರ್ಶ ಸಮುತ್ಸೃಷ್ಟಾಂ ನದೀತೀರೇ ಮಹಾನೃಷಿಃ|

01008008c ಸ್ಥೂಲಕೇಶಃ ಸ ತೇಜಸ್ವೀ ವಿಜನೇ ಬಂಧುವರ್ಜಿತಾಂ||

ಮಹಾನ್ ಋಷಿ ಸ್ಥೂಲಕೇಶನು ವಿಜನ ನದೀತೀರದಲ್ಲಿ ಬಂಧುವರ್ಜಿತಳಾದ ಆ ತೇಜಸ್ವಿನಿಯನ್ನು ನೋಡಿದನು.

01008009a ಸ ತಾಂ ದೃಷ್ಟ್ವಾ ತದಾ ಕನ್ಯಾಂ ಸ್ಥೂಲಕೇಶೋ ದ್ವಿಜೋತ್ತಮಃ|

01008009c ಜಗ್ರಾಹಾಥ ಮುನಿಶ್ರೇಷ್ಠಃ ಕೃಪಾವಿಷ್ಟಃ ಪುಪೋಷ ಚ|

01008009e ವವೃಧೇ ಸಾ ವರಾರೋಹಾ ತಸ್ಯಾಶ್ರಮಪದೇ ಶುಭಾ||

ದ್ವಿಜೋತ್ತಮ! ಮುನಿಶ್ರೇಷ್ಠ ಸ್ಥೂಲಕೇಶನು ಆ ಕನ್ಯೆಯನ್ನು ನೋಡಿ ಕೃಪಾವಿಷ್ಟನಾಗಿ ಅವಳನ್ನು ಕರೆದುಕೊಂಡು ಹೋಗಿ ಪೋಷಿಸಿದನು. ಅವನ ಆಶ್ರಮದಲ್ಲಿ ಆ ಶುಭೆ ವರಾರೋಹೆಯು ಬೆಳೆದಳು.

[2]01008010a ಪ್ರಮದಾಭ್ಯೋ ವರಾ ಸಾ ತು ಸರ್ವರೂಪಗುಣಾನ್ವಿತಾ|

01008010c ತತಃ ಪ್ರಮದ್ವರೇತ್ಯಸ್ಯಾ ನಾಮ ಚಕ್ರೇ ಮಹಾನೃಷಿಃ||

ಸರ್ವ ರೂಪಗುಣಗಳಲ್ಲಿ ಇತರರೆಲ್ಲರಿಗಿಂಥ ಶ್ರೇಷ್ಠಳಾಗಿದ್ದುದರಿಂದ ಆ ಮಹಾನ್ ಋಷಿಯು ಅವಳಿಗೆ ಪ್ರಮದ್ವರಾ ಎನ್ನುವ ಹೆಸರನ್ನಿತ್ತನು.

01008011a ತಾಮಾಶ್ರಮಪದೇ ತಸ್ಯ ರುರುರ್ದೃಷ್ಟ್ವಾ ಪ್ರಮದ್ವರಾಂ|

01008011c ಬಭೂವ ಕಿಲ ಧರ್ಮಾತ್ಮಾ ಮದನಾನುಗತಾತ್ಮವಾನ್||

ಆ ಆಶ್ರಮದ ಬಳಿಯಲ್ಲಿ ಪ್ರಮದ್ವರೆಯನ್ನು ನೋಡಿ ಧರ್ಮಾತ್ಮ ರುರುವು ಅವಳಲ್ಲಿ ಮದನಾನುಗತನಾದನು.

01008012a ಪಿತರಂ ಸಖಿಭಿಃ ಸೋಽಥ ವಾಚಯಾಮಾಸ ಭಾರ್ಗವಃ|

01008012c ಪ್ರಮತಿಶ್ಚಾಭ್ಯಯಾಃ ಶ್ರುತ್ವಾ ಸ್ಥೂಲಕೇಶಂ ಯಶಸ್ವಿನಂ||

ಮಿತ್ರರ ಮೂಲಕ ಈ ವಿಷಯವನ್ನು ತನ್ನ ತಂದೆ ಭಾರ್ಗವ ಪ್ರಮತಿಗೆ ತಿಳಿಸಿದನು ಮತ್ತು ಪ್ರಮತಿಯು ಸ್ಥೂಲಕೇಶನಲ್ಲಿ ಯಶಸ್ವಿನಿಯನ್ನು ಕೊಡುವಂತೆ ಕೇಳಿಕೊಂಡನು.

01008013a ತತಃ ಪ್ರಾದಾತ್ಪಿತಾ ಕನ್ಯಾಂ ರುರವೇ ತಾಂ ಪ್ರಮದ್ವರಾಂ|

01008013c ವಿವಾಹಂ ಸ್ಥಾಪಯಿತ್ವಾಗ್ರೇ ನಕ್ಷತ್ರೇ ಭಗದೈವತೇ||

ಕನ್ಯೆಯ ತಂದೆಯು ಪ್ರಮದ್ವರೆಯನ್ನು ರುರುವಿಗೆ ಕೊಡುವುದೆಂದು ನಿರ್ಧರಿಸಿದನು ಮತ್ತು ಭಗದೇವತ (ಪೂರ್ವ ಪಾಲ್ಗುಣೀ) ನಕ್ಷತ್ರದಲ್ಲಿ ವಿವಾಹ ನಿಶ್ಚಯವಾಯಿತು.

01008014a ತತಃ ಕತಿಪಯಾಹಸ್ಯ ವಿವಾಹೇ ಸಮುಪಸ್ಥಿತೇ|

01008014c ಸಖೀಭಿಃ ಕ್ರೀಡತೀ ಸಾರ್ಧಂ ಸಾ ಕನ್ಯಾ ವರವರ್ಣಿನೀ||

ವಿವಾಹಕ್ಕೆ ಇನ್ನೂ ಕೆಲವು ದಿನಗಳಿರುವಾಗ ಆ ಕನ್ಯೆ ವರವರ್ಣಿನಿಯು ತನ್ನ ಸಖಿಗಳೊಂದಿಗೆ ಆಡುತ್ತಿದ್ದಳು.

01008015a ನಾಪಶ್ಯತ ಪ್ರಸುಪ್ತಂ ವೈ ಭುಜಗಂ ತಿರ್ಯಗಾಯತಂ|

01008015c ಪದಾ ಚೈನಂ ಸಮಾಕ್ರಾಮನ್ಮುಮೂರ್ಷುಃ ಕಾಲಚೋದಿತಾ||

ಕಾಲಚೋದಿತಳಾದ ಅವಳು ಕಾಣದಹಾಗೆ ಸುರುಳಿಸುತ್ತಿ ಮಲಗಿದ್ದ ಹಾವೊಂದನ್ನು ಮೆಟ್ಟಿದಳು.

01008016a ಸ ತಸ್ಯಾಃ ಸಂಪ್ರಮತ್ತಾಯಾಶ್ಚೋದಿತಃ ಕಾಲಧರ್ಮಣಾ|

01008016c ವಿಷೋಪಲಿಪ್ತಾನ್ದಶನಾನ್ ಭೃಶಮಂಗೇ ನ್ಯಪಾತಯತ್||

ಕಾಲಧರ್ಮಕ್ಕೆ ತಕ್ಕಂತೆ ಅದು ತನ್ನ ವಿಷಭರಿತ ಹಲ್ಲುಗಳಿಂದ ಅವಳ ಕಾಲನ್ನು ಕಚ್ಚಿ ಕೆಳಗುರಿಳಿಸಿತು.

01008017a ಸಾ ದಷ್ಟಾ ಸಹಸಾ ಭೂಮೌ ಪತಿತಾ ಗತಚೇತನಾ|

[3]01008017c ವ್ಯಸುರಪ್ರೇಕ್ಷಣೀಯಾಪಿ ಪ್ರೇಕ್ಷಣೀಯತಮಾಕೃತಿಃ||

ಅದರಿಂದ ಕಚ್ಚಲ್ಪಟ್ಟ ಅವಳು ತಕ್ಷಣವೇ ಮೂರ್ಛಿತಳಾಗಿ ಭೂಮಿಯಮೇಲೆ ಬಿದ್ದಳು, ಪರಿಸ್ಥಿತಿಯು ಅಪ್ರೇಕ್ಷಣೀಯವಾಗಿದ್ದರೂ ಅವಳ ಸೌಂದರ್ಯವು ಪ್ರೇಕ್ಷಣೀಯವಾಗಿಯೇ ಇತ್ತು.

01008018a ಪ್ರಸುಪ್ತೇವಾಭವಶ್ಚಾಪಿ ಭುವಿ ಸರ್ಪವಿಷಾರ್ದಿತಾ|

01008018c ಭೂಯೋ ಮನೋಹರತರಾ ಬಭೂವ ತನುಮಧ್ಯಮಾ||

ಸರ್ಪವಿಷದಿಂದ ನೆಲದಮೇಲೆ ಮಲಗಿಕೊಂಡಿದ್ದ ಆ ತನುಮಧ್ಯಮೆಯು ಇನ್ನೂ ಹೆಚ್ಚು ಮನೋಹರೆಯಾಗಿ ಕಾಣುತ್ತಿದ್ದಳು.

01008019a ದದರ್ಶ ತಾಂ ಪಿತಾ ಚೈವ ತೇ ಚೈವಾನ್ಯೇ ತಪಸ್ವಿನಃ|

01008019c ವಿಚೇಷ್ಟಮಾನಾಂ ಪತಿತಾಂ ಭೂತಲೇ ಪದ್ಮವರ್ಚಸಂ||

ಪದ್ಮವರ್ಚಸಳಾದ ಅವಳು ಮೂರ್ಛಿತಳಾಗಿ ಭೂಮಿಯ ಮೇಲೆ ಬಿದ್ದುದನ್ನು ಅವಳ ತಂದೆ ಮತ್ತು ಅನ್ಯ ತಪಸ್ವಿಗಳು ನೋಡಿದರು.

01008020a ತತಃ ಸರ್ವೇ ದ್ವಿಜವರಾಃ ಸಮಾಜಗ್ಮುಃ ಕೃಪಾನ್ವಿತಾಃ|

01008020c ಸ್ವಸ್ತ್ಯಾತ್ರೇಯೋ ಮಹಾಜಾನುಃ ಕುಶಿಕಃ ಶಂಖಮೇಖಲಃ||

01008021a ಭಾರದ್ವಾಜಃ ಕೌಣಕುತ್ಸ ಆರ್ಷ್ಟಿಷೇಣೋಽಥ ಗೌತಮಃ|

01008021c ಪ್ರಮತಿಃ ಸಹ ಪುತ್ರೇಣ ತಥಾನ್ಯೇ ವನವಾಸಿನಃ||

ಅಲ್ಲಿಗೆ ಸ್ವಸ್ತ್ಯಾತ್ರೇಯ, ಮಹಾಜಾನು, ಕುಶಿಕ, ಶಂಖಮೇಖಲ, ಭಾರದ್ವಾಜ, ಕೌಣಕುತ್ಸ, ಆರ್ಷ್ಟಿಷೇಣ, ಗೌತಮ, ಪುತ್ರ ಸಮೇತ ಪ್ರಮತಿ ಮತ್ತು ಅನ್ಯ ವನವಾಸಿ ಕೃಪಾನ್ವಿತ ದ್ವಿಜವರರೆಲ್ಲರೂ ಬಂದರು.

01008022a ತಾಂ ತೇ ಕನ್ಯಾಂ ವ್ಯಸುಂ ದೃಷ್ಟ್ವಾ ಭುಜಗಸ್ಯ ವಿಷಾರ್ದಿತಾಂ|

01008022c ರುರುದುಃ ಕೃಪಯಾವಿಷ್ಟಾ ರುರುಸ್ತ್ವಾರ್ತೋ ಬಹಿರ್ಯಯೌ||

ಹಾವಿನ ವಿಷದಿಂದ ನೆಲದಮೇಲೆ ಮಲಗಿದ್ದ ಕನ್ಯೆಯನ್ನು ನೋಡಿ, ಕೃಪಾವಿಷ್ಟರಾಗಿ ಎಲ್ಲರೂ ರೋದಿಸಿದರು. ಬಹು ಆರ್ತನಾದ ರುರುವು ಅಲ್ಲಿಂದ ಹೊರಟು ಹೋದನು.”

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಪೌಲೋಮ ಪರ್ವಣಿ ಪ್ರಮದ್ವರಾಸರ್ಪದಂಶೋ ನಾಮ ಅಷ್ಟಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಪೌಲೋಮ ಪರ್ವದಲ್ಲಿ ಪ್ರಮದ್ವರಾಸರ್ಪದಂಶ ಎನ್ನುವ ಎಂಟನೆಯ ಅಧ್ಯಾಯವು.

[1]ನೀಲಕಂಠೀಯದಲ್ಲಿ ಇದರ ಮೊದಲು ಈ ಶ್ಲೋಕಗಳಿವೆ: ಶೌನಕಸ್ತು ಮಹಾಭಾಗ ಶುನಕಸ್ಯ ಸುತೋ ಭವಾನ್| ಶುನಕಸ್ತು ಮಹಾಸತ್ವಃ ಸರ್ವಭಾರ್ಗವನಂದನಃ| ಜಾತಸ್ತಪಸಿ ತೀವ್ರೇ ಚ ಸ್ಥಿತಃ ಸ್ಥಿರಯಶಾಸ್ತತಃ|| ಅರ್ಥಾತ್: ಮಹಾಭಾಗ ಶುನಕನ ಪುತ್ರನಾದ ನೀನು ಶೌನಕ. ಶುನಕನು ಮಹಾ ಸತ್ವಶಾಲಿಯಾಗಿದ್ದು ಸರ್ವ ಭಾರ್ಗವರಿಗೂ ಆನಂದದಾಯಕನಾಗಿದ್ದನು. ಹುಟ್ಟಿದೊಡನೆಯೇ ಅವನು ತೀವ್ರ ತಪಸ್ಸಿನಲ್ಲಿ ನಿರತನಾಗಿ, ಶಾಶ್ವತ ಕೀರ್ತಿಯನ್ನು ಪಡೆದನು.

[2]ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಜಾತಕಾದ್ಯಾಃ ಕ್ರಿಯಾಶ್ಚಾಸ್ಯಾ ವಿಧಿಪೂರ್ವಂ ಯಥಾಕ್ರಮಂ| ಸ್ಥೂಲಕೇಶೋ ಮಹಾಭಾಗಶ್ಚಕಾರ ಸುಮಹಾನೃಷಿಃ|| ಅರ್ಥಾತ್: ಮಹಾಭಾಗ ಮಹಾನೃಷಿ ಸ್ಥೂಲಕೇಶನು ಅವಳಿಗೆ ಜಾತಕಾದಿ ಕ್ರಿಯೆಗಳನ್ನು ವಿಧಿಪೂರ್ವಕವಾಗಿ ಮತ್ತು ಯಥಾಕ್ರಮವಾಗಿ ನೆರವೇರಿಸಿದನು.

[3]ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ವಿವರ್ಣಾ ವಿಗತಶ್ರೀಕಾ ಭ್ರಷ್ಟಾಭರಣಚೇತನಾ| ನಿರಾನಂದಕರೀ ತೇಷಾಂ ಬಂಧೂನಾಂ ಮುಕ್ತಮೂರ್ಧಜಾ|| ಅರ್ಥಾತ್: ಬಣ್ಣವನ್ನು ಕಳೆದುಕೊಂಡ ಅವಳ ಕಾಂತಿಯು ಕುಂದಿಹೋಗಿತ್ತು. ಅವಳು ಚೇತನವನ್ನು ಕಳೆದುಕೊಂಡು ಬಿದ್ದಾಗ ಆಭರಣಗಳು ಚದುರಿ ಬಿದ್ದವು. ತಲೆಗೂದಲು ಬಿಚ್ಚಿಹೋಗಿದ್ದ ಅವಳು ಬಂಧುಗಳಿಗೆ ದುಃಖವನ್ನು ತಂದಳು.

Leave a Reply

Your email address will not be published. Required fields are marked *