ಬೃಹಸ್ಪತಿ-ಕೌಸಲ್ಯ ಸಂವಾದ
ವಸುಮನ ಮತ್ತು ಬೃಹಸ್ಪತಿಯರ ಸಂವಾದದಲ್ಲಿ ರಾಜನಿಲ್ಲದಿದ್ದರೆ ಪ್ರಜೆಗಳಿಗಾಗುವ ಹಾನಿ ಮತ್ತು ರಾಜನಿದ್ದರೆ ಆಗುವ ಲಾಭಗಳನ್ನು ವರ್ಣಿಸುವ ವಸುಮನ ಮತ್ತು ಬೃಹಸ್ಪತಿಯರ ಸಂವಾದವನ್ನೊಳಗೊಂಡ ಭೀಷ್ಮ-ಯುಧಿಷ್ಠಿರರ ಈ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 68ರಲ್ಲಿ ಬರುತ್ತದೆ.
***
ಯುಧಿಷ್ಠಿರನು ಹೇಳಿದನು:
“ಭರತರ್ಷಭ! ಪಿತಾಮಹ! ಮನುಷ್ಯರಿಗೆ ಅಧಿಪತಿಯಾದ ರಾಜನನ್ನು ವಿಪ್ರರು ದೇವನೆಂದು ಏಕೆ ಹೇಳುತ್ತಾರೆ? ಅದನ್ನು ನನಗೆ ಹೇಳು.”
ಭೀಷ್ಮನು ಹೇಳಿದನು:
“ಭಾರತ! ನೀನು ಕೇಳಿದುದಕ್ಕೆ ಸಂಬಂಧಿಸಿದಂತೆ ಬೃಹಸ್ಪತಿ-ವಸುಮನರ ಈ ಪುರಾತನ ಐತಿಹಾಸಿಕ ಸಂವಾದವನ್ನು ಉದಾಹರಿಸುತ್ತಾರೆ.
***
ಧೀಮತರಲ್ಲಿ ಶ್ರೇಷ್ಠ ವಸುಮನಾ ಎಂಬ ಹೆಸರಿನ ಕೋಸಲದ ರಾಜನು ಕೃತಪ್ರಜ್ಞನಾದ ಮಹರ್ಷಿ ಬೃಹಸ್ಪತಿಯಲ್ಲಿ ಪ್ರಶ್ನಿಸಿದನು. ಯಾರಲ್ಲಿ ಹೇಗೆ ವಿನಯದಿಂದ ನಡೆದುಕೊಳ್ಳಬೇಕೆಂದು ತಿಳಿದುಕೊಂಡಿದ್ದ ಮತ್ತು ಸರ್ವಭೂತಗಳ ಹಿತದಲ್ಲಿಯೇ ನಿರತನಾಗಿದ್ದ ಅವನು ಬೃಹಸ್ಪತಿಯನ್ನು ಸರ್ವ ವಿನಯದಿಂದ ಸ್ವಾಗತಿಸಿ, ಸತ್ಕರಿಸಿ, ವಿಧಿಪೂರ್ವಕವಾಗಿ ನಮಸ್ಕರಿಸಿ, ಪ್ರಜೆಗಳ ಹಿತವನ್ನು ಬಯಸಿ ಧರ್ಮಮೂಲದ ವಿಧಿಯನ್ನು ಕೇಳಿದನು.
“ಮಹಾಪ್ರಾಜ್ಞ! ಯಾವುದರಿಂದ ಪ್ರಜೆಗಳು ವರ್ಧಿಸುತ್ತಾರೆ? ಯಾವುದರಿಂದ ಪ್ರಜೆಗಳು ಕ್ಷಯವನ್ನು ಹೊಂದುತ್ತಾರೆ? ಯಾರನ್ನು ಅರ್ಚಿಸಿ ಅವರು ಅತ್ಯಂತ ಸುಖವನ್ನು ಪಡೆಯುತ್ತಾರೆ?”
ಮಹಾರಾಜ ಅಮಿತೌಜಸ ಕೌಸಲ್ಯನು ಹೀಗೆ ಕೇಳಲು ಅವ್ಯಗ್ರ ಬೃಹಸ್ಪತಿಯು ರಾಜಸತ್ಕಾರವನ್ನು ಪ್ರಶಂಸಿಸುತ್ತಾ ಹೇಳಿದನು:
“ಮಹಾರಾಜ! ಲೋಕದ ಧರ್ಮಕ್ಕೆ ರಾಜನೇ ಮೂಲವೆಂದು ಕಂಡುಬರುತ್ತದೆ. ರಾಜನ ಭಯದಿಂದಲೇ ಪ್ರಜೆಗಳು ಪರಸ್ಪರರನ್ನು ತಿಂದುಹಾಕುವುದಿಲ್ಲ. ಮರ್ಯಾದೆಯನ್ನು ಮೀರಿ ನಡೆಯುವ ಮತ್ತು ಅನುಚಿತ ಭೋಗಗಳಲ್ಲಿಯೇ ಆಸಕ್ತರಾಗಿರುವ ಅಖಿಲ ಲೋಕವನ್ನು ರಾಜನು ಧರ್ಮದಿಂದ ಪ್ರಸನ್ನಗೊಳಿಸುತ್ತಾನೆ. ಅದರ ಪ್ರಸಾದವಾಗಿ ತಾನೂ ವಿರಾಜಿಸುತ್ತಾನೆ. ರಾಜನ್! ಶಶಿ-ಸೂರ್ಯರು ಉದಯಿಸದೇ ಗಾಢಾಂಧಕಾರದಲ್ಲಿ ಮುಳುಗಿದ ಭೂತಗಳು ಪರಸ್ಪರರನ್ನು ಹೇಗೆ ನೋಡಲಿಕ್ಕಾಗುವುದಿಲ್ಲವೋ ಹಾಗೆ, ನೀರಿಲ್ಲದ ಕೊಳದಲ್ಲಿ ಮೀನುಗಳು ಹೇಗೋ ಹಾಗೆ, ಹಿಂಸಮೃಗಗಳ ಗರ್ಜನೆಯಿಲ್ಲದ ವನದಲ್ಲಿ ಪಕ್ಷಿಗಳು ಯಥೇಚ್ಛರಾಗಿ ವಿಹರಿಸುತ್ತಾ ಪುನಃ ಪುನಃ ಹಿಂಸಿಸುತ್ತಾ ಪರಸ್ಪರರ ಪ್ರದೇಶಗಳನ್ನು ಅತಿಕ್ರಮಿಸುತ್ತಾ ಕ್ಷಣಮಾತ್ರದಲ್ಲಿ ಹೇಗೆ ನಿಸ್ಸಂಶಯವಾಗಿ ನಾಶಹೊಂದುವವೋ ಹಾಗೆ, ರಾಜನಿಲ್ಲದೆಯೇ ಈ ಪ್ರಜೆಗಳು ರಕ್ಷಕರಿಲ್ಲದ ಪಶುಗಳಂತೆ ಗಾಢಾಂಧಕಾರದಲ್ಲಿ ಮುಳುಗಿ ವಿನಾಶಹೊಂದುತ್ತಾರೆ. ರಾಜನು ಒಂದುವೇಳೆ ಪಾಲಿಸದೇ ಇದ್ದರೆ ಬಲವಂತರು ದುರ್ಬಲರ ಸ್ವತ್ತುಗಳನ್ನು ಅಪಹರಿಸುವರು. ಬಯಸಿದರೆ ಸಂಹರಿಸಲೂ ಬಹುದು. ಒಂದುವೇಳೆ ರಾಜನು ಪಾಲಿಸದೇ ಇದ್ದರೆ ಪಾಪಿಗಳು ತಕ್ಷಣವೇ ವಾಹನ, ವಸ್ತ್ರ, ಅಲಂಕಾರಗಳು, ಮತ್ತು ವಿವಿಧ ರತ್ನಗಳನ್ನು ಅಪಹರಿಸುತ್ತಾರೆ. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಈ ಲೋಕದಲ್ಲಿ ನನ್ನದು ಎನ್ನುವುದರ ಸಂಗ್ರಹವೇ ಸಾಧ್ಯವಾಗುತ್ತಿರಲಿಲ್ಲ. ವಿಶ್ವದ ಎಲ್ಲವುಗಳ ಲೋಪವಾಗುತ್ತಿತ್ತು. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ವೃದ್ಧ ತಂದೆ-ತಾಯಿಗಳನ್ನು, ಆಚಾರ್ಯನನ್ನು, ಅತಿಥಿಯನ್ನು, ಮತ್ತು ಹಿರಿಯರನ್ನು ಹಿಂಸಿಸುತ್ತಿದ್ದರು ಅಥವಾ ಕಷ್ಟಕ್ಕೊಳಪಡಿಸುತ್ತಿದ್ದರು. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಧರ್ಮಚಾರಿಗಳ ಮೇಲೆ ಬಹುವಿಧದ ಅನೇಕ ಶಸ್ತ್ರಗಳು ಬೀಳುತ್ತಿದ್ದವು. ಅಧರ್ಮವೇ ವಿಶ್ವವನ್ನು ಆವರಿಸಿಬಿಡುತ್ತಿತ್ತು.
ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಧನವಂತರ ವಧೆ, ಬಂಧನ ಮತ್ತು ಹಿಂಸೆಗಳು ನಿತ್ಯವೂ ನಡೆಯುತ್ತಿದ್ದವು. ಯಾರೇ ಆಗಲೀ ಯಾವುದನ್ನೂ ತನ್ನದು ಎಂದು ಹೇಳಿಕೊಳ್ಳಲಾಗುತ್ತಿರಲಿಲ್ಲ. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಪ್ರಜೆಗಳು ಅಕಾಲದಲ್ಲಿಯೇ ಮೃತ್ಯುವಶರಾಗುತ್ತಿದ್ದರು. ಲೋಕವೆಲ್ಲವೂ ಕಳ್ಳಕಾಕರ ವಶವಾಗಿಬಿಡುತ್ತಿತ್ತು. ಎಲ್ಲರೂ ಘೋರ ನರಕದಲ್ಲಿ ಬೀಳುತ್ತಿದ್ದರು. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ವಿವಾಹವೆನ್ನುವುದು ಇರುತ್ತಿರಲಿಲ್ಲ. ಕೃಷಿಯಾಗಲೀ ವ್ಯಾಪಾರಗಳಾಗಲೀ ಇರುತ್ತಿರಲಿಲ್ಲ. ಧರ್ಮವು ಮುಳುಗಿಹೋಗಿ ಮೂರು ವೇದಗಳೂ ಇರುತ್ತಿರಲಿಲ್ಲ. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಆಪ್ತದಕ್ಷಿಣಾಯುಕ್ತ ಯಜ್ಞಗಳು ವಿಧಿವತ್ತಾಗಿ ನಡೆಯುತ್ತಿರಲಿಲ್ಲ. ವಿವಾಹಗಳಾಗುತ್ತಿರಲಿಲ್ಲ. ಸಾಮಾಜಿಕ ಕಾರ್ಯಕ್ರಮಗಳೂ ನಡೆಯುತ್ತಿರಲಿಲ್ಲ. ಒಂದು ವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಹೋರಿಗಳು ಹಸುಗಳಲ್ಲಿ ಗರ್ಭದಾನ ಮಾಡುತ್ತಿರಲಿಲ್ಲ. ಮೊಸರು ತುಂಬಿದ ಪಾತ್ರೆಗಳನ್ನು ಕಡೆಯುತ್ತಿರಲಿಲ್ಲ. ಗೋಶಾಲೆಗಳೆಲ್ಲವೂ ನಾಶಹೊಂದುತ್ತಿದ್ದವು. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಜಗತ್ತು ಭಯಭೀತವಾಗುತ್ತಿತ್ತು. ಉದ್ವಿಗ್ನಮನಸ್ಸಿನಿಂದ ಕೂಡಿರುತ್ತಿತ್ತು. ಹಾಹಾಕಾರಗಳೇ ಕೇಳಿಬರುತ್ತಿದ್ದವು. ಕ್ಷಣಮಾತ್ರದಲ್ಲಿ ಸರ್ವವಿನಾಶವಾಗುತ್ತಿತ್ತು. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಭಯದಿಂದಾಗಿ ವಿವಿಧ ದಕ್ಷಿಣಾಯುಕ್ತ ಸಂವತ್ಸರ ಸತ್ರಗಳು ನಿಂತುಹೋಗುತ್ತಿದ್ದವು. ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ವಿದ್ಯಾಭ್ಯಾಸಮಾಡಿ ಸ್ನಾತಕರಾಗಿ ಬ್ರಹ್ಮಚರ್ಯವನ್ನು ಪಾಲಿಸುವ ತಪಸ್ವಿ ಬ್ರಾಹ್ಮಣರು ನಾಲ್ಕು ವೇದಗಳ ಅಧ್ಯಯನ ಮಾಡುತ್ತಿರಲಿಲ್ಲ. ಒಂದುವೇಳೆ ರಾಜನು ಪಾಲನೇ ಮಾಡದೇ ಇದ್ದಿದ್ದರೆ ಕೈಯಲ್ಲಿರುವುದೇ ಕಳ್ಳತನವಾಗುತ್ತಿತ್ತು. ಸರ್ವಸೇತುವೆಗಳೂ ತುಂಡಾಗುತ್ತಿದ್ದವು. ಎಲ್ಲರೂ ಭಯಾರ್ತರಾಗಿ ಓಡುತ್ತಿದ್ದರು. ಒಂದು ವೇಳೆ ರಾಜನು ಪಾಲಿಸದೇ ಇದ್ದಿದ್ದರೆ ವಿಪ್ರರು ಹತರಾಗಿ ಮತ್ತು ಜನರು ಹತರಾಗಿ ಲೋಕವು ಧರ್ಮದ ಸಂಬಂಧವನ್ನೇ ಕಳೆದುಕೊಳ್ಳುತ್ತಿತ್ತು. ಜನರು ಸ್ವ-ಇಚ್ಛೆಯಿಂದ ಕೆಲಸ ಮಾಡುತ್ತಿದ್ದರು. ರಾಜನೇನಾದರೂ ಧರ್ಮದಿಂದ ರಾಜ್ಯವನ್ನು ಪರಿಪಾಲಿಸದಿದ್ದರೆ ಅನ್ಯಾಯ-ಅತ್ಯಾಚಾರಗಳು ಸರ್ವತ್ರ ವ್ಯಾಪ್ತವಾಗುತ್ತಿದ್ದವು. ವರ್ಣಸಂಕರವುಂಟಾಗಿ ಅದರಿಂದ ರಾಷ್ಟ್ರದಲ್ಲಿ ದುರ್ಭಿಕ್ಷವಾಗುತ್ತಿತ್ತು.
ರಾಜನಿಂದ ರಕ್ಷಿತರಾದ ಮನುಷ್ಯರು ಸುತ್ತಲೂ ಯಾವುದೇ ರೀತಿಯ ಭಯವೂ ಇಲ್ಲದೇ ಮನೆಯ ಬಾಗಿಲುಗಳನ್ನು ತೆರೆದುಕೊಂಡೇ ನಿರಾತಂಕರಾಗಿ ಮಲಗುತ್ತಾರೆ. ಒಂದು ವೇಳೆ ಧಾರ್ಮಿಕ ರಾಜನು ಮನುಷ್ಯರ ಪರಿಪಾಲನೆ ಮಾಡದೇ ಇದ್ದರೆ ಒಬ್ಬರು ನಿಂದಿಸುವುದನ್ನು ಮತ್ತೊಬ್ಬರು ಸಹಿಸಿಕೊಳ್ಳುತ್ತಿರಲಿಲ್ಲ. ಇನ್ನು ಪರಸ್ಪರರ ಪ್ರಹಾರಗಳನ್ನು ಹೇಗೆ ಸಹಿಸಿಕೊಳ್ಳುತ್ತಿದ್ದರು? ರಾಜನ ರಕ್ಷಣೆಯಿದ್ದರೆ ಸ್ತ್ರೀಯರು ಸರ್ವಾಲಂಕರ ಭೂಷಿತೆಯರಾಗಿ, ಜೊತೆಗೆ ಪುರುಷರಿಲ್ಲದಿದ್ದರೂ, ನಿರ್ಭಯರಾಗಿ ರಸ್ತೆಗಳಲ್ಲಿ ನಡೆಯುತ್ತಾರೆ. ರಾಜನ ರಕ್ಷಣೆಯಿದ್ದರೆ ಜನರು ಧರ್ಮವನ್ನೇ ಅನುಸರಿಸುತ್ತಾರೆ. ಪರಸ್ಪರರನ್ನು ಹಿಂಸಿಸುವುದಿಲ್ಲ. ಅನ್ಯೋನ್ಯರನ್ನು ಅನುಗ್ರಹಿಸುತ್ತಾರೆ. ರಾಜನ ರಕ್ಷಣೆಯಿದ್ದರೆ ಮೂರೂ ವರ್ಣದವರೂ ಪ್ರತ್ಯೇಕ ವಿಧಗಳ ಮಹಾಯಜ್ಞಗಳನ್ನು ಯಾಜಿಸುತ್ತಾರೆ. ಏಕಾಗ್ರರಾಗಿ ಶಾಸ್ತ್ರಗಳ ಅಧ್ಯಯನಗಳನ್ನೂ ಮಾಡುತ್ತಾರೆ. ರಾಜನ ರಕ್ಷಣೆಯಿದ್ದರೆ ಈ ಮೂರೂ ಲೋಕಗಳ ಮೂಲಸ್ಥಂಭಗಳೆನಿಸಿರುವ ಕೃಷಿ-ವಾಣಿಜ್ಯ-ಗೋರಕ್ಷಣೆಗಳೇ ಮೊದಲಾದ ಉದ್ಯೋಗಗಳೂ, ವೇದ ಧರ್ಮಗಳೂ ಸರಿಯಾಗಿ ನಡೆಯುತ್ತವೆ. ಯಾವಾಗ ರಾಜನು ಮಹಾಸೇನೆಯಿಂದ ಕೂಡಿದವನಾಗಿ ಪ್ರಜೆಗಳ ಶ್ರೇಷ್ಠ ಭಾರವನ್ನು ವಹಿಸಿಕೊಳ್ಳುತ್ತಾನೋ ಆಗ ಲೋಕವು ಪ್ರಸನ್ನವಾಗುತ್ತದೆ. ಯಾರ ಇಲ್ಲದಿರುವಿಕೆಯಿಂದ ಎಲ್ಲೆಲ್ಲಿಯೂ ಭೂತಗಳ ವಿನಾಶವಾಗುತ್ತದೆಯೋ ಮತ್ತು ಯಾರ ಇರುವಿಕೆಯಿಂದ ಎಲ್ಲವೂ ಉಳಿದುಕೊಳ್ಳುತ್ತವೆಯೋ ಅಂಥಹ ರಾಜನನ್ನು ಯಾರುತಾನೇ ಪೂಜಿಸುವುದಿಲ್ಲ? ಸರ್ವಲೋಕಗಳಿಗೂ ಹಿತವನ್ನುಂಟುಮಾಡುವ ಈ ಭಾರವನ್ನು ಯಾರು ಹೊರುತ್ತಾನೋ ಮತ್ತು ಪ್ರಜೆಗಳ ಪ್ರೀತಿ-ಹಿತಗಳಲ್ಲಿಯೇ ನಿರತನಾಗಿರುತ್ತಾನೋ ಅವನು ಇಹ-ಪರಗಳ ಎರಡೂ ಲೋಕಗಳನ್ನೂ ಜಯಿಸುತ್ತಾನೆ. ಅಂಥಹ ಪುರುಷನ ಕುರಿತು ಮನಸ್ಸಿನಲ್ಲಿ ಕೆಟ್ಟದ್ದನ್ನು ಯೋಚಿಸಿದವನೂ ಕೂಡ ಈ ಲೋಕದಲ್ಲಿ ಕಷ್ಟವನ್ನು ಹೊಂದುತ್ತಾನೆ ಮತ್ತು ಪರದಲ್ಲಿ ನರಕಕ್ಕೆ ಬೀಳುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಅವನೂ ಮನುಷ್ಯನೇ ಎಂದು ತಿಳಿದು ರಾಜನನ್ನು ಅವಹೇಳನ ಮಾಡಬಾರದು. ಏಕೆಂದರೆ ಅವನು ನರರೂಪದ ಮಹದೇವತೆಯೇ ಆಗಿರುತ್ತಾನೆ.
ರಾಜನು ಸದಾ ಕಾಲಕ್ಕೆ ತಕ್ಕಂತೆ ಐದು ರೂಪಗಳನ್ನು ಧರಿಸುತ್ತಾನೆ. ಅವನು ಅಗ್ನಿಯಾಗುತ್ತಾನೆ, ಆದಿತ್ಯನಾಗುತ್ತಾನೆ, ಮೃತ್ಯುವಾಗುತ್ತಾನೆ, ವೈಶ್ರವಣ ಕುಬೇರನಾಗುತ್ತಾನೆ ಮತ್ತು ಯಮಧರ್ಮನೂ ಆಗುತ್ತಾನೆ. ಮಿಥ್ಯಾವ್ಯವಹಾರಗಳಿಂದ ವಂಚಿತನಾದ ರಾಜನು ತನ್ನ ಬಳಿಸಾರುವ ಪಾಪಿಗಳನ್ನು ಉಗ್ರ ತೇಜಸ್ಸಿನಿಂದ ದಹಿಸುತ್ತಾನೆ. ಆಗ ಅವನು ಅಗ್ನಿಯಾಗುತ್ತಾನೆ. ಚಾರರಿಂದ ಎಲ್ಲವುಗಳ ಕುರಿತು ತಿಳಿದುಕೊಂಡು ಅವುಗಳ ಕ್ಷೇಮವನ್ನು ನೋಡಿಕೊಳ್ಳುವಾಗ ರಾಜನು ಭಾಸ್ಕರನಾಗುತ್ತಾನೆ. ಪುತ್ರ-ಪೌತ್ರ-ಅಮಾತ್ಯರೊಂದಿಗೆ ಅವನು ನೂರಾರು ಕ್ಷುದ್ರ ಅಶುಚಿ ಜನರನ್ನು ನಾಶಗೊಳಿಸುವಾಗ ಅವನು ಅಂತಕನಾಗುತ್ತಾನೆ. ಯಾವಾಗ ಅವನು ಅಧಾರ್ಮಿಕರೆಲ್ಲರನ್ನೂ ತೀಕ್ಷ್ಣ ಶಿಕ್ಷೆಗಳಿಂದ ನಿಯಂತ್ರಿಸುತ್ತಾನೋ ಮತ್ತು ಧಾರ್ಮಿಕರಿಗೆ ಅನುಗ್ರಹಿಸುತ್ತಾನೋ ಆಗ ರಾಜನು ಯಮನಾಗುತ್ತಾನೆ. ಯಾವಾಗ ಅವನು ಉಪಕಾರಿಗಳಿಗೆ ಧನದ ಮಳೆಯನ್ನೇ ಸುರಿಸುವನೋ, ಅಪಕಾರಿಗಳ ರತ್ನಗಳನ್ನು ಯಾವಾಗ ಅವನು ಅಪಹರಿಸುವನೋ, ರಾಜ್ಯದ ಹಿತಚಿಂತಕರಿಗೆ ಅವನು ಯಾವಾಗ ಐಶ್ವರ್ಯವನ್ನು ಕೊಡುವನೋ ಆಗ ರಾಜನು ಲೋಕದಲ್ಲಿ ವೈಶ್ರವಣ ಕುಬೇರನಂತಾಗುತ್ತಾನೆ. ದಕ್ಷನೂ, ಶ್ರಮಿಯೂ, ಧರ್ಮ-ಲಾಭಗಳನ್ನು ಬಯಸುವವನೂ ಮತ್ತು ಅಸೂಯೆಯಿಲ್ಲದವನೂ ಆದವನೂ ರಾಜನ ನಿಂದನೆಯನ್ನು ಮಾಡಬಾರದು. ರಾಜನಿಗೆ ವಿರುದ್ಧವಾಗಿ ನಡೆದುಕೊಳ್ಳುವವನು ಅವನ ಮಗನೇ ಆಗಿರಲಿ, ಸಹೋದರನಾಗಿರಲಿ ಅಥವಾ ಸಮವಯಸ್ಕನಾಗಿರಲಿ, ಅವನು ಸುಖವನ್ನು ಹೊಂದುವುದಿಲ್ಲ. ಅವರು ಪಾಪಾತ್ಮರ ಸಮನಾಗುತ್ತಾರೆ. ಗಾಳಿಯ ಸಹಾಯದಿಂದ ಜ್ವಲಿಸುವ ಧೂಮಕೇತು ಅಗ್ನಿಯು ಸ್ವಲ್ಪವಾದರೂ ಸ್ಥಳವನ್ನು ದಹಿಸದೇ ಬಿಡಬಹುದು. ಆದರೆ ರಾಜನಿಗೆ ಅಪರಾಧವನ್ನೆಸಗಿದವನ ಏನೂ ಉಳಿಯುವುದಿಲ್ಲ. ರಾಜನ ರಕ್ಷಣೆಯಲ್ಲಿರುವ ಎಲ್ಲವುಗಳನ್ನೂ ದೂರದಿಂದಲೇ ವರ್ಜಿಸಬೇಕು. ಮೃತ್ಯುವಿನಂತೆಯೇ ರಾಜನ ಸ್ವತ್ತನ್ನು ಅಪಹರಿಸುವುದನ್ನು ಜುಗುಪ್ಸೆಯಿಂದ ಕಾಣಬೇಕು. ಮೃಗವು ತನ್ನನ್ನು ಹಿಡಿಯಲು ಹಾಕಿದ ಸಂಚನ್ನು ಮುಟ್ಟಿದ ತಕ್ಷಣವೇ ನಾಶಹೊಂದುತ್ತದೆ. ಬುದ್ಧಿವಂತನಾದವನು ರಾಜನ ಸ್ವತ್ತನ್ನು ತನ್ನದೇ ಸ್ವತ್ತಿನಂತೆ ರಕ್ಷಿಸಬೇಕು. ರಾಜವಿತ್ತವನ್ನು ಅಪಹರಿಸುವವರು ಇಹದಲ್ಲಿ ನಾಶಹೊಂದುವುದು ಮಾತ್ರವಲ್ಲದೇ ಚೇತನವನ್ನೇ ವಿಹೀನಗೊಳಿಸುವ, ಚಿರರಾತ್ರಿಯ ಘೋರ ಮಹಾ ನರಕದಲ್ಲಿ ಬೀಳುತ್ತಾರೆ. ಭೋಜ, ವಿರಾಟ್, ಸಾಮ್ರಾಟ್, ಕ್ಷತ್ರಿಯ, ಭೂಪತಿ, ನೃಪ ಮೊದಲಾದ ಶಬ್ಧಗಳಿಂದ ಸ್ತುತಿಸಲ್ಪಡುವ ರಾಜನನ್ನು ಯಾರುತಾನೇ ಪೂಜಿಸಲು ಬಯಸುವುದಿಲ್ಲ?
ಆದುದರಿಂದ ತನ್ನ ಉನ್ನತಿಯನ್ನು ಬಯಸುವ ಮೇಧಾವಿ ಸ್ಮೃತಿವಂತನು ನಿಯತಾತ್ಮನಾಗಿ, ಜಿತಾತ್ಮನಾಗಿ, ಇಂದ್ರಿಯಸಂಯಮನಾಗಿ ದಕ್ಷ ರಾಜನನ್ನು ಆಶ್ರಯಿಸಬೇಕು. ರಾಜನು ಕೃತಜ್ಞನೂ, ಪ್ರಾಜ್ಞನೂ, ಕ್ಷುದ್ರನಲ್ಲದವನೂ, ದೃಢಭಕ್ತಿಯುಳ್ಳವನೂ, ಜಿತೇಂದ್ರಿಯನೂ, ನಿತ್ಯಧರ್ಮನಿಷ್ಠನೂ, ನೀತಿಜ್ಞನೂ ಆದ ಮಂತ್ರಿಯನ್ನು ಗೌರವಿಸಬೇಕು. ದೃಢಭಕ್ತಿಯುಳ್ಳವನೂ, ಕೃತಪ್ರಜ್ಞನೂ, ಧರ್ಮಜ್ಞನೂ, ಇಂದ್ರಿಯಸಂಯಮನೂ, ಕ್ಷುದ್ರಕರ್ಮಗಳನ್ನು ಮಾಡದವನೂ, ಬೇರೆಯಾರ ಸಹಾಯವೂ ಬೇಕಾಗಿಲ್ಲ ಎನ್ನುವ ಶೂರನನ್ನು ಸೇನಾಪತಿಯನ್ನಾಗಿ ಮಾಡಿಕೊಳ್ಳಬೇಕು. ರಾಜನು ಪುರುಷನನ್ನು ಬಲಿಷ್ಠನನ್ನಾಗಿ ಮಾಡುತ್ತಾನೆ. ರಾಜನು ಮನುಷ್ಯನನ್ನು ಕೃಶನನ್ನಾಗಿಯೂ ದಷ್ಟಪುಷ್ಟನನ್ನಾಗಿಯೂ ಮಾಡುತ್ತಾನೆ. ರಾಜನ ಎದುರಾಳಿಗಳಿಗೆ ಸುಖವೆಂಬುದೆಲ್ಲಿ? ಶರಣುಬಂದವರನ್ನು ರಾಜನು ಸುಖಿಗಳನ್ನಾಗಿ ಮಾಡುತ್ತಾನೆ. ರಾಜನು ಪ್ರಜೆಗಳ ದೊಡ್ಡ ಹೃದಯವಿದ್ದಂತೆ. ಪ್ರಜೆಗಳ ಗತಿ, ಪ್ರತಿಷ್ಠೆ ಮತ್ತು ಉತ್ತಮ ಸುಖಗಳು ಅವನಿಂದಲೇ ದೊರೆಯುತ್ತವೆ. ರಾಜನನ್ನು ಆಶ್ರಯಿಸಿದ ಪ್ರಜೆಗಳು ಈ ಲೋಕವನ್ನೂ ಪರಲೋಕವನ್ನೂ ಸಂಪೂರ್ಣವಾಗಿ ಜಯಿಸುತ್ತಾರೆ. ನರಾಧಿಪನೂ ಕೂಡ ಇಂದ್ರಿಯನಿಗ್ರಹ, ಸತ್ಯ, ಸೌಹಾರ್ದತೆಗಳಿಂದ ಮೇದಿನಿಯಲ್ಲಿ ಶಾಸನಮಾಡಿ ಮಹಾ ಇಷ್ಟಿ-ಕ್ರತುಗಳನ್ನು ನೆರವೇರಿಸಿ ಮಹಾಯಶಸ್ಸನ್ನು ಪಡೆದು ತ್ರಿವಿಷ್ಟಪದಲ್ಲಿ ಸತ್ಕೃತರಿಗೆ ಇರುವ ಸ್ಥಾನವನ್ನು ಪಡೆದುಕೊಳ್ಳುತ್ತಾನೆ.”
ಗುರು ಬೃಹಸ್ಪತಿಯು ಹೀಗೆ ಹೇಳಲು ರಾಜಸತ್ತಮ ವೀರ ಕೌಸಲ್ಯನು ಪ್ರಯತ್ನಪೂರ್ವಕವಾಗಿ ಪ್ರಜೆಗಳ ಪರಿಪಾಲನೆಯನ್ನು ಮಾಡಿದನು.
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ